Saturday, 27th July 2024

ಕ್ರಿಪ್ಟೋ ಮೈನಿಂಗ್ ಮೇನಿಯಾ: 15 ಕೋಟಿ ನಗದು ಜಪ್ತಿ, ನಾಲ್ವರ ಬಂಧನ

ಬೆಂಗಳೂರು: ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದ ಹೈ ಪ್ರೋಫೈಲ್ ಪ್ರಕರಣ ಬೇಧಿಸಿರುವ ಸೈಬರ್ ಕ್ರೈಮ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 15 ಕೋಟಿ ನಗದು ಸೇರಿದಂತೆ ಒಟ್ಟು 17 ಕೋಟಿ ಮೊತ್ತದ ವಿನಿಮಯವನ್ನು ಜಪ್ತಿ ಮಾಡಿದ್ದಾರೆ.

2021ನೇ ಸಾಲಿನಲ್ಲಿ ಕೋವಿಡ್-19 ಲಾಕ್‍ಡೌನ್ ವೇಳೆ ಸಾರ್ವಜನಿಕರ ವಾಟ್ಸಪ್ ಗ್ರೂಪ್‍ಗೆ ಹಾಗೂ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶಗಳನ್ನು ಕಳುಹಿಸಿ ಶೇ‌‌ರ್‌ಶಾಹ ಮೊಬೈಲ್ ಅಪ್ಲಿಕೇಷನ್‍ನ್ನು ಡೌನ್‍ಲೋಡ್ ಮಾಡಿ ಕೊಂಡರೆ ಎಚ್‍ಎನ್‍ಟಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಪಟ್ಟಂತೆ ಹೆಚ್ಚಿನ ಲಾಭಾಂಶ ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿದ್ದರು.

ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ನೊಂದಾವಣಿಯಾಗಿರುವ ಈ ಕಂಪನಿಗಳು ಕೋಟಿಗಟ್ಟಲೇ ಹಣ ಹೂಡಿಕೆ ಮಾಡಿಸಿಕೊಂಡ ಬಳಿಕ 2022ರ ಜನವರಿ 11ರಂದು ಅಪ್ಲಿಕೇಷನ್ ದೋಷಯುಕ್ತವಾಗಿದೆ ಅದನ್ನು ಸರಿಪಡಿಸಿ ಹೊಸ ವೈಶಿಷ್ಟ್ಯಗಳೊಂದಿಗೆ ಅಪ್‍ಗ್ರೇಡ್ ಮಾಡಲಾಗುವುದು ಎಂದು ಘೋಷಿಸಿವೆ.

ಜ.18 ಮತ್ತು 19ರಂದು ಶರೆಹಾಶ್ ಮೊಬೈಲ್ ಅಪ್ಲಿಕೇಷನ್-2.0 ಬಿಡುಗಡೆಯಾಗಲಿದೆ. ಬಳಿಕ ತಮ್ಮ ಹೂಡಿಕೆ ಹಾಗೂ ರಿಟರ್ನ್ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಅನುಕೂಲವಾಗುವಂತೆ ಸಕ್ರಿಯಗೊಳಿಸುವುದಾಗಿ ತಿಳಿಸಲಾಗಿತ್ತು.

ಜ.19ರಂದು ಖಾತೆದಾರರು ಲಾಗಿನ್ ಆಗಲು ಪ್ರಯತ್ನಿಸಿದರೆ ಅದು ಸಾಧ್ಯವಾಗಲಿಲ್ಲ. ಸಾರ್ವಜನಿಕರು ತಮಗೆ ವಂಚನೆಯಾಗುತ್ತಿರುವುದನ್ನು ಅರಿತು ಬೆಂಗಳೂರುನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದರು.

ಪ್ರಕರಣದ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ವಂಚಿಸಿದ್ದ ಹಣ 44 ವಿವಿಧ ಬ್ಯಾಂಕ್‍ಗಳಿಗೆ ವರ್ಗಾವಣೆಯಾಗಿದ್ದು, ಖಾತೆಯಲ್ಲಿ ಉಳಿದಿದ್ದ 15 ಕೋಟಿ ರೂ.ಗಳನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ಮಾರ್ಗದರ್ಶನದಲ್ಲಿ, ಡಿಸಿಪಿ ಡಾ.ಶರಣಪ್ಪ .ಎಸ್.ಡಿ ನೇತೃತ್ವದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಎಸ್.ಅಶೋಕ್ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದಾರೆ.

error: Content is protected !!