Saturday, 27th July 2024

ನಕಲಿ ಅಂಕಪಟ್ಟಿ ನೀಡಿದ ವಿದ್ಯಾರ್ಥಿಗಳ ಪ್ರವೇಶ ತಿರಸ್ಕರಿಸಿದ ವಿಟಿಯು

ಬೆಳಗಾವಿ: ನಕಲಿ ಅಂಕಪಟ್ಟಿ ನೀಡಿದ ಹಿನ್ನೆಲೆಯಲ್ಲಿ 51 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಪ್ರವೇಶಾತಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಿರಸ್ಕರಿಸಿದೆ.

ಮೊದಲ ವರ್ಷದ ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಿಗೆ ಈ ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದರು. ಎಲ್ಲ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿ ಎಂದು ಸಾಬೀತಾಗಿದ್ದು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೀಡಿದ ಈ ಪ್ರಮಾಣ ಪತ್ರಗಳು ನಕಲಿ ಎಂದು ತಿಳಿದುಬಂದಿದೆ. ದಾಖಲೆ ಗಳ ಪರಿಶೀಲನೆಯಲ್ಲಿ ‌ಕ್ಯೂ‌ಆರ್ ಕೋಡ್ ಸ್ಕ್ಯಾನ್ ನಡೆಸಿದಾಗ ಅಕ್ರಮ ದೃಢಪಟ್ಟಿದೆ. ಇದಕ್ಕೂ ಮುನ್ನ ಎಲ್ಲ ಅಂಕಪಟ್ಟಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಮಾನ್ಯ ಮಾಡಿತ್ತು. ಆದರೆ ಕಾಲೇಜುವಾರು ಅನುಮೋದನೆ ‌ನೀಡುವಾಗ ವಿಟಿಯು ಅಮಾನ್ಯ ಮಾಡಿದೆ.

ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಬಗ್ಗೆ ವಿಟಿಯು ಶಂಕೆ ವ್ಯಕ್ತ ಪಡಿಸಿದೆ. ಅಕ್ರಮವೆಸಗಿದ ವಿದ್ಯಾರ್ಥಿಗಳು ಮ್ಯಾನೇಜ್‌ ಮೆಂಟ್‌ ‌ಕೋಟಾದಡಿ ಬೆಂಗಳೂರಿನ ಪ್ರತಿಷ್ಠಿತ ‌ಇಂಜಿನಿಯರಿಂಗ್‌ ಕಾಲೇಜಿಗೆ ಪ್ರವೇಶ ಪಡೆದಿದ್ದರು.

ಏ.28ರಂದು ರಂದು ದಾಖಲಾದ ಪ್ರಕರಣವೊಂದರಲ್ಲಿ ಸ್ಟಡಿ ಸೆಂಟರ್​ ಹೆಸರಲ್ಲಿ ಎಸ್‌ಎಸ್‌ಎಲ್​ಸಿ ಮತ್ತು ಪಿಯುಸಿಯ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿವಿ ಪೊಲೀಸರು ಬಂಧಿಸಿದ್ದರು. ಮೈಲಾರಿ, ಮೊಹಮ್ಮದ್ ತೈಹೀದ್, ಪ್ರಭುರಾಜ್ ಬಂಧಿತರು.

error: Content is protected !!