Friday, 12th July 2024

ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಯಲ್ಲೂ ಗ್ಯಾರಂಟಿ ಮುಂದುವರಿಸುತ್ತೇವೆ

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು  ಹೀಗಿತ್ತು.

ಶಿವಮೊಗ್ಗ ಹೋರಾಟಗಾರರು, ಚಿಂತಕರ ನಾಡು. ಶಿವಪ್ಪನಾಯಕ ಆಳಿದ ನಾಡು, ಕುವೆಂಪು ಅವರಿಗೆ ಜನ್ಮ ನೀಡಿದ ಬೀಡು.

ಶಿವಮೊಗ್ಗ ಚಿಕ್ಕ ಜಿಲ್ಲೆಯಾದರೂ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕಡಿದಾಳು ಮಂಜಪ್ಪ, ಜೆ.ಹೆಚ್ ಪಟೇಲ್, ಬಂಗಾರಪ್ಪ, ಯಡಿಯೂ ರಪ್ಪ ಅವರು ಈ ನಾಡಿನಲ್ಲಿ ಬೆಳೆದು ಮುಖ್ಯಮಂತ್ರಿಯಾಗಿದ್ದಾರೆ. ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ನಾನು ಬಂಗಾರಪ್ಪ ಅವರ ಶಿಷ್ಯ.

ಈ ಜಿಲ್ಲೆಗೆ ಅದರದೇ ಆದ ಇತಿಹಾಸವಿದೆ. ಇಲ್ಲಿ ವಿದ್ಯಾವಂತರು, ಪ್ರಜ್ಞಾವಂತರು ಇದ್ದೀರಿ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಮಹಿಳೆ ಯರು, ಯುವಕರು ಬಂದಿದ್ದೀರಿ. ನೀವೆಲ್ಲರೂ ಸೇರಿ ಈ ರಾಜ್ಯದಲ್ಲಿ ಬದಲಾವಣೆ ತಂದಿದ್ದೀರಿ.

ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಯಲ್ಲೂ ಗ್ಯಾರಂಟಿ ಮುಂದುವರಿಸುತ್ತೇವೆ

ಇಲ್ಲಿ ಬಂದಿರುವ ಯುವಕರು, ರೈತರು, ಮಹಿಳೆಯರಿಗೆ ಒಂದು ಮಾತು ನೀಡುತ್ತೇನೆ. ಬಲಿಷ್ಠ ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಬಿಜೆಪಿ ನಾಯಕರು ಏನೇ ಹೇಳಿದರೂ ಅದು ಸುಳ್ಳು. ಕೇವಲ ಮುಂದಿನ ನಾಲ್ಕು ವರ್ಷ ಮಾತ್ರವಲ್ಲ, ನಂತರದ ಐದು ವರ್ಷ ಸೇರಿ ಒಂಬತ್ತು ವರ್ಷಗಳ ಕಾಲ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಿಮಗೆ ಈ ಯೋಜನೆ ಮುಂದುವರಿಸಲಿದೆ.

ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಎಸೆದು ಹೋದಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧಿಯಾಯಿತು.

ನಾವು ನುಡಿದಂತೆ ನಡೆದಿದ್ದೇವೆ. ನಮಗೂ ಮುನ್ನ ಅಧಿಕಾರದಲ್ಲಿದ್ದ ಬಿಜೆಪಿ, ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿತ್ತು. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಇದೇ ನಮಗೂ ಬಿಜೆಪಿ ಅವರಿಗೂ ಇರುವ ವ್ಯತ್ಯಾಸ.

ದೇವಾಲಯ ಯಾರ ಆಸ್ತಿಯೂ ಅಲ್ಲ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಬಿಜೆಪಿಯವರು ರಾಮ ಮಂದಿರ ವಿಚಾರವಾಗಿ ಪ್ರಚಾರ ಪಡೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಮೊದಲು ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೇ ರಾಜೀವ್ ಗಾಂಧಿ ಅವರು. ರಾಜಕಾರಣ ದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕೀಯ ಇರಬಾರದು.

ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ ಆಧಾರದ ಮೇಲೆ ಕೊಟ್ಟಿಲ್ಲ, ನೀತಿ ಆಧಾರದ ಮೇಲೆ ಕೊಟ್ಟಿದ್ದೇವೆ. ಇವು ಒಂದು ವರ್ಗದ ಜನರಿಗೆ ಸೇರಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಎಲ್ಲಾ ವರ್ಗದ ಜನರ ಬಗ್ಗೆ ಕಾರ್ಯಕ್ರಮ ರೂಪಿಸಿದೆ.

“ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ. ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ!”

ಅದರಂತೆ ನಿಮ್ಮ ಮನೆ ಬೆಳಗಲಿ ಎಂದು ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಇಂದು ಒಂದೂವರೆ ಕೋಟಿ ಕುಟುಂಬ 200 ಯೂನಿಟ್ ವರೆಗೂ ವಿದ್ಯುತ್ ಉಚಿತವಾಗಿ ಬಳಸುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ 1500ರೂಪಾಯಿ ಉಳಿಯುತ್ತದೆ. ನಾವು ಅನ್ನಭಾಗ್ಯ ಯೋಜನೆ ಯಲ್ಲಿ 10 ಕೆ.ಜಿ ಅಕ್ಕಿ ನೀಡಲು ಘೋಷಣೆ ಮಾಡಿದೆವು. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದಾಗ ಅದರ ಹಣ ನಿಮ್ಮ ಖಾತೆಗೆ ಹಾಕಿದೆವು. ಇನ್ನು ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಕಾರ್ಯಕ್ರಮ ನೀಡಲಾಗಿದೆ. ಇದರಿಂದ ಪ್ರತಿ ಮಹಿಳೆಗೆ ಕನಿಷ್ಠ 2-3 ಸಾವಿರ ಉಳಿಯುತ್ತದೆ.

ಇನ್ನು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಮಹಿಳೆಯರ ನೆರವಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ. ಆ ಮೂಲಕ ನಿಮ್ಮ ಮನೆಯಿಂದ ದರಿದ್ರ ಹಾಗೂ ಸಂಕಟ ನಿವಾರಣೆಗೆ ಮುಂದಾಗಿದ್ದೇವೆ. ಈ ಯೋಜನೆಯಲ್ಲಿ ರಾಜ್ಯದ 1.10 ಕೋಟಿ ಜನ ಪ್ರಯೋಜನ ಪಡೆಯು ತ್ತಿದ್ದಾರೆ. ಇನ್ನು ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ಮೂಲಕ ಪದವೀಧರರಿಗೆ 3 ಸಾವಿರ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ಪ್ರತಿ ತಿಂಗಳು ನೀಡಲಾಗುತ್ತಿದೆ.

ಬೆಳಗಾವಿಯ ಮಹಿಳೆಯೊಬ್ಬರು ತನ್ನ ಮಗನನ್ನು ಕಳೆದುಕೊಂಡಾಗ ಶವಸಂಸ್ಕಾರ ಮಾಡುವಾಗ, ಇನ್ನು ಮುಂದೆ ಗೃಹಲಕ್ಷ್ಮೀ ಯೋಜನೆಯೇ ಆಧಾರ ಎಂದು ಹೇಳಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ.

ಜನರ ಬದುಕು ಬದಲಿಸುವ ಕಾರ್ಯಕ್ರಮ ಕೊಟ್ಟಿರುವುದು ಕಾಂಗ್ರೆಸ್

ನಮ್ಮ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಸಿಎಸ್ಆರ್ ನಿಧಿ ಮೂಲಕ ಪ್ರತಿ ಎರಡು ಮೂರು ಪಂಚಾಯತಿ ಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ತೀರ್ಮಾನಿಸಿದ್ದೇವೆ. ಪ್ರತಿ ಶಾಲೆಗೆ 5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಡ ರೈತ, ಕಾರ್ಮಿಕರ ಮಕ್ಕಳಿಗೆ ಅವರ ಹಳ್ಳಿಯಲ್ಲೇ ನಗರ ಪ್ರದೇಶದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ.

ಈ ಐದು ಗ್ಯಾರಂಟಿಗಳು ಜನರಿಗೆ ಶಕ್ತಿ ತುಂಬಿವೆ. ದೇವರಾಜ ಅರಸು ಅವರು ಉಳುವವನಿಗೆ ಭೂಮಿ ಕೊಟ್ಟರು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ವೇಳೆ ಚಿತ್ರದುರ್ಗದ ಬಳಿ ವೃದ್ಧೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇನೆ ಎಂದರು.

ಅರಣ್ಯ ಭಾಗದಲ್ಲಿರುವ ಬಡವರನ್ನು ಒಕ್ಕಲೆಬ್ಬಿಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ.

ಇನ್ನು ಶರಾವತಿ ಮುಳುಗಡೆ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಬಡತನದ ವಿರುದ್ಧ ಹೋರಾಡುತ್ತಿದೆ. ಬಡವರ ರಕ್ಷಣೆಗೆ ಹೋರಾಡುತ್ತಿದೆ.

ಬಿಜೆಪಿ ಜನರಿಗಾಗಿ ಒಂದಾದರು ಯೋಜನೆ ಕೊಟ್ಟಿದೆಯೆ?

ಬಿಜೆಪಿ ಸ್ನೇಹಿತರೇ ನೀವು ನಾಲ್ಕು ವರ್ಷ ಅಧಿಕಾರ ನಡೆಸಿದ್ದೀರಿ. ಜನರ ಬದುಕು ಕಟ್ಟಿಕೊಡಲು ಯಾವುದಾದರೂ ಒಂದು ಯೋಜನೆ ನೀಡಿದ್ದೀರಾ? ಅದನ್ನು ಜನರಿಗೆ ತಿಳಿಸಿ. ಈ ಭಾಗದ ಶಾಸಕರಾದ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರು. ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗ ಜ್ಞಾನೇಂದ್ರ 420 ಗ್ಯಾರಂಟಿ ಎಂದಿದ್ದಾರೆ. ಅರಗ ಜ್ಞಾನೇಂದ್ರ ನಿನಗೆ ಜ್ಞಾನ ಇದೆಯಾ? ನಿನಗೆ ಇರೋದು ಅರ್ಧ ಜ್ಞಾನ ಮಾತ್ರ.

ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಎರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ, ಅಧಿಕಾರ ಕಳೆದುಕೊಂಡ ನಂತರ ಈಗ ಮೋದಿ ಗ್ಯಾರಂಟಿ ಎಂದು ಅರಿಯುತ್ತೇನೆ ಎಂದರೆ ಏನು ಪ್ರಯೋಜನ? ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಯೋಜನೆ ನೀಡಲಿಲ್ಲ.

ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್ ನೀಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ. ಆ ಸೈಕಲ್ ಎಲ್ಲಿ ಹೋಯ್ತು. ಅದನ್ನು ಯಾಕೆ ನಿಲ್ಲಿಸಿದಿರಿ?

ನೀವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದಿರಿ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದಿರಿ. ಹೇಳಿದಂತೆ ಮಾಡಿದಿರಾ? ಏನಿಲ್ಲ, ಏನಿಲ್ಲಾ. ಬಿಜೆಪಿ ನಾಯಕರು ಕೇವಲ ಖಾಲಿ ಮಾತಾಡುತ್ತಾರೆ.

ಕುವೆಂಪು ಅವರು ಒಂದು ಮಾತು ಹೇಳಿದ್ದಾರೆ. ಭರತ ಖಂಡದ ಹಿತವೇ ನಮ್ಮ ಹಿತ. ಭಾರತ ಮಾತೆಯ ಹಿತವೇ ನಮ್ಮ ಹಿತ. ಭಾರತಾಂಬೆ ಮಕ್ಕಳೆಲ್ಲಾ ಸಹೋದರರು ಎಂದು ಹೇಳಿದ್ದಾರೆ. ಅದರಂತೆ ನಾವು ಎಲ್ಲರನ್ನೂ ಸಹೋದರ ಸಹೋದರಿಯಂತೆ ಕಾಣುತ್ತೇವೆ.

ಅರ್ಚರ ರಕ್ಷಣೆ ಮಾಡುವ ಕಾಯ್ದೆಯನ್ನು ಬಿಜೆಪಿ- ಜೆಡಿಎಸ್ ಸೋಲಿಸಿದೆ:

ಅರ್ಚಕನ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣುತ್ತೇವೆ. ನಿನ್ನೆ ನಾವು ಒಂದು ಮಸೂದೆಯನ್ನು ಮಂಡಿಸಿದೆವು. ಅದರ ಮೂಲಕ ದೊಡ್ಡ ದೇವಾಲಯಗಳ ಆದಾಯದಲ್ಲಿ ಶೇ.10ರಷ್ಟು ಆದಾಯ ತೆಗೆದುಕೊಂಡು ಅದನ್ನು ಅರ್ಚಕರ ವೇತನ, ವಿಮೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗಿದ್ದೆವು. ದೇವಾಲಯ, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಜೆಡಿಎಸ್ ನವರು ಆ ಮಸೂದೆಯನ್ನು ಪರಿಷತ್ತಿನಲ್ಲಿ ಸೋಲಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ನಾವು ಮೇಲ್ಮನೆಯಲ್ಲಿ ಬಹುಮತ ಪಡೆಯುತ್ತೇವೆ. ಆಗ ನಮ್ಮ ಮಸೂದೆ ಜಾರಿಯಾಗುವಂತೆ ಮಾಡುತ್ತೇವೆ.

ನಮ್ಮ ಸರ್ಕಾರ ಎಪಿಎಂಸಿಗಳಿಗೆ, ಹಿಂದುಳಿದವರಿಗೆ ಶಕ್ತಿ ನೀಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

“ಜಾತಿ ವಿಚಾರ ಬಗ್ಗೆ ಯೋಚಿಸಬೇಡಿ” ಎಂದು ನಾರಾಯಣ ಗುರುಗಳು ನಮಗೆ ಸಂದೇಶ ನೀಡಿದರು. ಅದರಂತೆ ನಾವು ಜಾತಿಯನ್ನು ಬಿಟ್ಟು ನೀತಿ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅದಕ್ಕಾಗಿ ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಬಿಜೆಪಿಯವರು ಇಂತಹ ಒಂದು ಕಾರ್ಯಕ್ರಮ ಹೆಸರಲ್ಲಿ ಮತ ಕೇಳಲು ಆಗುತ್ತದೆಯೇ? ನಮ್ಮದು 420 ಕಾರ್ಯಕ್ರಮವಾದರೆ ನಮ್ಮ ಯೋಜನೆಯಿಂದ ಪ್ರಯೋಜನ ಪಡೆಯಬೇಡಿ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಜನರಿಗೆ ಕರೆ ನೀಡಲಿ ಎಂದು ಸವಾಲು ಹಾಕುತ್ತೇನೆ. ರಾಜ್ಯದ ಮಹಿಳೆಯರು ತಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ.

ನಾನು ಸಂತ ಸೇವಾಲಾಲ್ ಅವರ ಜನ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಒಂದು ಮಾತು ನನಗೆ ನೆನಪಾಯಿತು. ‘ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಾಯಿಸುತ್ತಾರೆ. ಬೆವರಿನಿಂದ ಸ್ನಾನ ಮಾಡುವವರು ಇತಿಹಾಸ ಬದಲಿಸುತ್ತಾರೆ.’

ಅಲ್ಲಮಪ್ರಭು ಅವರ ಪಾರ್ಕ್ ನಲ್ಲಿ ಅವರ ಒಂದು ವಚನ ಬರೆದಿದ್ದಾರೆ. ‘ದೇಹದೊಳಗೆ ದೇವಾಲಯವಿದ್ದು, ಬೇರೆ ದೇವಾಲಯ’ ಯಾಕೆ ಎಂದು ಬರೆಯಲಾಗಿತ್ತು.

ಮಾನವನ ಧರ್ಮ ಶ್ರೇಷ್ಠ ಧರ್ಮ. ನಮ್ಮ ಕಾಂಗ್ರೆಸ್ ಸರ್ಕಾರ ಈ ತತ್ವದ ಮೇಲೆ ಶೈಕ್ಷಣಿಕ ಹಕ್ಕು, ಆಹಾರಭದ್ರತೆ ಹಕ್ಕು, ಗ್ರಾಮೀಣ ಖಾತ್ರಿ ಯೋಜನೆ, ರೈತರಿಗೆ ಭೂಮಿ, ಮನೆ ನೀಡುವ ಯೋಜನೆ ತಂದಿದೆ. ಬಂಗಾರಪ್ಪ ಅವರು ಆರಾಧನಾ ಯೋಜನೆ ಮೂಲಕ ದೇವಾಲಯಗಳ ಅಭಿವೃದ್ಧಿ ಮಾಡಿದರು. ಎಲ್ಲಾ ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆ ತಂದಿದ್ದಾರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲರೂ ನಮಗೆ ಮತ್ತಷ್ಟು ಶಕ್ತಿ ತುಂಬಬೇಕು.

Leave a Reply

Your email address will not be published. Required fields are marked *

error: Content is protected !!