Sunday, 21st April 2024

ಏಕಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ ಕೇಂದ್ರ ಸರ್ಕಾರ ಗಂಭೀರ ಪರಿಗಣನೆ

ರಾಜ್ಯದಲ್ಲಿಯೂ ವ್ಯಾಪಕ ಜನಜಾಗೃತಿಗೆ ಕ್ರಮ: ಡಾ.ಶಾಂತ್ ಎ ತಿಮ್ಮಯ್ಯ

ಹುಬ್ಬಳ್ಳಿ : ದೇಶದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಏಕ ಬಳಕೆಯ ಪ್ಲಾಸ್ಟಿಕ್ ಪರಿಸರ,ಮನುಕುಲ ಹಾಗೂ ಭೂಮಿಯ ಮಾಲಿನ್ಯಕ್ಕೆ ಕಾರಣವಾಗಿದೆ.ಮೂಲದಲ್ಲಿಯೇ ಇದರ ನಿಯಂತ್ರಣ ಅಗತ್ಯವಾಗಿದೆ. ಪರ್ಯಾಯ ಮಾರ್ಗಗಳಿಗಾಗಿ ತಾಂತ್ರಿಕ ಅನ್ವೇಷಣೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ವ್ಯಾಪಕ ಜನಜಾಗೃತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಶಾಂತ್ ಎ ತಿಮ್ಮಯ್ಯ ಹೇಳಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾಯ್ದೆಯ ಜಾರಿಯನ್ನು ಕೇಂದ್ರ ಸರ್ಕಾರ ಪ್ರತಿದಿನ ಗಂಭೀರ ವಾಗಿ ಗಮನಿಸುತ್ತಿದೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೋಡಲ್ ಕಚೇರಿಯಾಗಿದ್ದು ದೈನಂದಿನ ವರದಿಯನ್ನು ಕಳಿಸು ತ್ತಿದ್ದೇವೆ. ಪ್ಲಾಸ್ಟಿಕ್‌ನ ಅಧಿಕ ಹಾವಳಿಯ ಕಾಲದಲ್ಲಿ ಈ ಕಾಯ್ದೆ ಜಾರಿ ಸವಾಲಿನ ಕಾರ್ಯವಾಗಿದೆ. ರಾಜ್ಯದಲ್ಲಿ 2016 ರಲ್ಲಿಯೇ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಗೊಂಡಿದ್ದರೂ ಕೂಡ ಇಲ್ಲಿಯ ವರೆಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಸಾಧ್ಯವಾಗಿರಲಿಲ್ಲ. ನೆರೆಹೊರೆಯ ರಾಜ್ಯಗಳಿಂದ ಅಪಾರ ಪ್ರಮಾಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅವ್ಯಾಹತವಾಗಿ ಹರಿದು ಬರುತ್ತಿದೆ‌. ಸಾರ್ವಜನಿಕ ರಲ್ಲಿ,ರಾಜ್ಯದ ಹಳ್ಳಿ ಹಳ್ಳಿಗಳ,ಪ್ರತಿಯೊಂದು ಮೂಲೆಯಲ್ಲಿಯೂ ಈ ಕುರಿತು ಜನಜಾಗೃತಿ ಕಾರ್ಯಗಳ ಮೂಲಕ ಅರಿವು ಮೂಡಿಸಬೇಕು.

ಪರಿಸರ ನಾಶಪಡಿಸುವ ಹಕ್ಕು ಯಾರಿಗೂ ಇಲ್ಲ

ನಮಗಿರುವುದು ಒಂದೇ ಭೂಮಿ‌ ,ಅವಳೊಬ್ಬಳೆ ಸಮಸ್ತ ಜೀವ ಸಂಕುಲದ ತಾಯಿಯಾಗಿದ್ದಾಳೆ‌.ಭೂಮಿ ಹಾಗೂ ಪರಿಸರ ಮಾಲಿನ್ಯಗೊಳಿಸುವ, ನಾಶ ಮಾಡುವ ಹಕ್ಕು ಯಾರಿಗೂ ಇಲ್ಲ.ರಾಜ್ಯವು ಅಭಿವೃದ್ಧಿಶೀಲವಾಗಿ ಮುನ್ನಡೆಯುತ್ತಿದೆ. ಸ್ವ ಸಹಾಯ ಗುಂಪುಗಳು,ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳನ್ನು ಒಳಪಡಿಸಿಕೊಂಡು ಶಾಸನಬದ್ಧ ಪ್ರಾಧಿಕಾರಗಳು,ಕಾರ್ಯಾಂಗಗಳು ಜಂಟಿಯಾಗಿ ಈ ನಿಟ್ಟಿನಲ್ಲಿ ಆಂದೋಲನದ ರೀತಿಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಎಂದರು.

ಮೂಲದಲ್ಲಿಯೇ ನಿಯಂತ್ರಿಸಿ

ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಯ ಮೂಲ,ಸಾಗಣೆ ಹಾಗೂ ಬಳಕೆಯಲ್ಲಿ ನಿಯಂತ್ರಿಸಬೇಕು. ಉತ್ಪಾದಕರ ಜವಾಬ್ದಾರಿ ಹೆಚ್ಚಿಸಿ (Extended Producer Responsibility) ಸರ್ಕಾರ ಫೆಬ್ರವರಿಯಲ್ಲಿ ಆದೇಶ ಹೊರಡಿಸಿದೆ. ಕಳೆದ ಜುಲೈ 1 ರಿಂದ ಸಂಪೂರ್ಣವಾಗಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಗೊಂಡಿದೆ, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಾರ್ಯ ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಿದೆ. ಕಾಯ್ದೆಯ ಜಾರಿಯ ನಂತರ ತಾಂತ್ರಿಕ ಅನ್ವೇಷಣೆಗಳ ಮೂಲಕ‌ ಅನೇಕ ಪರ್ಯಾಯಗಳು ದೊರೆಯುವ ಸಾಧ್ಯತೆಗಳಿವೆ, ಜಗತ್ತಿನಾದ್ಯಂತ ಇಂತಹ ಅನ್ವೇಷಣೆಗಳು ನಡೆಯುತ್ತಿವೆ.ಇಂದಲ್ಲ ನಾಳೆ ಪರ್ಯಾಯಕ್ಕೆ ಉತ್ತರ ಸಿಗಲಿವೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ,ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಏಕಾಏಕಿ ಜಾರಿಗೊಳಿ ಸಲು ಪ್ರಾರಂಭದಲ್ಲಿ ವರ್ತಕರು ,ಹೊಟೆಲ್ ಉದ್ಯಮಿಗಳು ಪ್ರಾರಂಭದಲ್ಲಿ ಅಪಸ್ವರ ವ್ಯಕ್ತಡಿಸಿದಾಗ, ಕಾರ್ಯಾಗಾರ ಹಾಗೂ ಪರ್ಯಾಯ ವಸ್ತುಗಳ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಗಿದೆ. ಹೋಟೆಲ್ ಪಾರ್ಸೆಲ್‌ಗಳಿಗೆ ಮನೆಯಿಂದಲೇ ಸ್ಟೀಲ್ ಡಬ್ಬಗಳನ್ನು ತೆಗೆದುಕೊಂಡು ಬರುವ ಗ್ರಾಹಕರಿಗೆ ಕನಿಷ್ಠ ರಿಯಾಯಿತಿ ನೀಡಿ ಪ್ರೋತ್ಸಾಹಿಸಲು ಕೋರಿದಾಗ,ಕೆಲವು ಹೋಟೆಲ್‌ ಗಳು ಅದನ್ನು ಪಾಲಿಸುತ್ತಿವೆ.ಮಂಡಳಿ ನೀಡುವ ನಿರ್ದೇಶನಗಳನ್ನು ಅವಳಿ ನಗರದಲ್ಲಿ ಜಾರಿ ಮಾಡಲಾಗುವುದು ಎಂದರು.

ಮಹಾನಗರಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು,ಸಂಘ ಸಂಸ್ಥೆಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಲು ಪ್ರಯತ್ನಿಸುತ್ತಿವೆ.ಆದರೆ ನೆರೆಯ ರಾಜ್ಯಗಳ ವಿವಿಧ ವಸ್ತುಗಳ ಉತ್ಪಾದಕರ ಮೂಲಕ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಈ ವಸ್ತುಗಳು ಅವಳಿ‌ನಗರಕ್ಕೆ ಪ್ರವೇಶಿಸುತ್ತಿವೆ.ಸಂಬಂಧಿಸಿದ ಅಧಿಕಾರಿಗಳು ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು ಎಂದರು.

ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ಮಾತನಾಡಿ, ಕಳೆದ ಜುಲೈ 1 ರಿಂದ ಅವಳಿನಗರದಲ್ಲಿ 6 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು ,20 ಲಕ್ಷ ರೂ.ದಂಡ ಸಂಗ್ರಹಿಸಲಾಗಿದೆ.ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 28 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು 2019 ರಿಂದಲೇ ನಿಯಮಾವಳಿ ರಚಿಸಿಕೊಂಡು ಕಾರ್ಯೋನ್ಮುಖವಾಗಿದೆ.ಅವಳಿ ನಗರದ ಎಲ್ಲಾ 12 ವಲಯಗಳಲ್ಲಿ ತಂಡಗಳು ನಿರಂತರವಾಗಿ ಗಸ್ತು ಕೈಗೊಂಡು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಹೆಚ್ಚಳ ಹಾಗೂ ಅವುಗಳ ಅಪಾಯದ ಕುರಿತು ಸಭೆಗೆ ಮಾಹಿತಿ ನೀಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಉಪಮೇಯರ್ ಉಮಾ ಮುಕುಂದ್,ವಿರೋಧ ಪಕ್ಷದ ನಾಯಕ ದೊರೈರಾಜು ಮನಗುಂಟ್ಲಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಕುಮಾರ್ ಕಡಕ್‌ಬಾವಿ , ಉಪವಿಭಾಗಾಧಿಕಾರಿ ಅಶೋಕ ತೇಲಿ,ಜಿಪಂ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ ,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಮಹಾನಗರಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಇದ್ದರು.

error: Content is protected !!