Tuesday, 28th May 2024

ಅಧಿಕಾರಿಗಳ ನಿರ್ಲಕ್ಷ

ಹಿಂದುಳಿದ ವರ್ಗಗಳು ಸದಾ ಹಿಂದುಳಿಯಲು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿರುವ ಅಧಿಕಾರಿ-ಸಿಬ್ಬಂದಿಗಳೇ ಕಾರಣ ಎಂದರೇ ತಪ್ಪಾಗಲಾರದು.
ಸರಕಾರಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗಲಿ, ಅವರು ಸಹ ಸಮಾಜದ ಮುಖ್ಯವಾಹಿನಿಗೆ ಬರಲಿ ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ.

ಅದರಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಲಿ ಎಂಬ ಕಾರಣದಿಂದ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ಇಂತಹ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾದ ಕಾರಣ ಅವರು ಪುನಃ ಹಿಂದುಳಿಯುತ್ತಿದ್ದಾರೆ. ಅದೇನೋ ಅಂತಾರಲ್ಲ ‘ದೇವರು ವರ ಕೊಟ್ಟರು, ಪೂಜಾರಿ ಕೊಡಲಿಲ್ಲ’ ಅನ್ನುವ ಹಾಗಾಗಿದೆ ಸರಕಾರಿ ಯೋಜನೆಗಳ ಪರಿಸ್ಥಿತಿ. ಇಷ್ಟೇಲ್ಲಾ ಹೆಳಲು ಕಾರಣ, ವಿದ್ಯಾರ್ಥಿ ವೇತನಕ್ಕಾಗಿ ಖಖP ವೈಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಏನಾದರೂ ಗೊಂದಲ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ ಎಂದು ಕೆಲಸಕ್ಕೆ ಬಾರದ ಕೆಲವು ದೂರವಾಣಿ ಸಂಖ್ಯೆಗಳನ್ನು ಇಲಾಖೆ ನೀಡಿದೆ.

ಆದರೆ ಅವುಗಳಿಗೆ ೧ ಅಲ್ಲ ೨೦ ಸಲ ಕರೆ ಮಾಡಿದರೂ ಒಬ್ಬರೂ ಕರೆ ಸ್ವೀಕರಿಸುವುದಿಲ್ಲ. ಒಂದು ವೇಳೆ ಅಪ್ಪಿ-ತಪ್ಪಿ ಸ್ವೀಕರಿಸಿದರೆ ಅವರಿಂದ ಸರಿಯಾದ
ಪ್ರತಿಕ್ರಿಯೆಯೂ ಸಿಗುವುದಿಲ್ಲ ‘ಸಂಬಂಧಪಟ್ಟವರು ಊಟಕ್ಕೆ ಹೋಗಿದ್ದಾರೆ’ ‘ಮೀಟಿಂಗ್ ಇದೆ’ ‘ಫೋನ್ ಮಾಡಿದರೆ ಸಾಕಾಗಲ್ಲ ನೀವೇ ಕಚೇರಿಗೆ ಬನ್ನಿ’ ಎಂಬ ಹಾರೈಕೆಯ ಉತ್ತರಗಳು ಸಿಗುತ್ತವೆ. ಅಯ್ಯೋ ನಮ್ಮ ಕೆಲಸ ಆದರೆ ಸಾಕು ಎಂದು ಕಚೇರಿಗೆ ಹೋದರೆ ಅಲ್ಲಿಯೂ ಅದೇ ರಾಗ ಅದೇ ಹಾಡು ‘ಈಗ ಅವರಿಲ್ಲ, ನಾಳೆ ಬನ್ನಿ’ ಎಂಬ ಉತ್ತರ ಅವರ ಬಾಯಲ್ಲಿ ಸಿದ್ಧವಾಗಿರುತ್ತೆ. ಇದು ಸ್ವಂತ ಅನುಭವ.

ಈ ರೀತಿಯ ನೌಕರರ ಅಸಡ್ಡೆಯಿಂದ ಮನೆಯಲ್ಲಿನ ಬಡತನ ಕಾರಣದಿಂದ ವಿದ್ಯಾರ್ಥಿವೇತನವನ್ನೇ ನಂಬಿ ಸಾಲ ಮಾಡಿ ಶಾಲೆ-ಕಾಲೇಜ್ ಫೀ ಕಟ್ಟಿರುವ ವಿಧ್ಯಾರ್ಥಿಯ ಪರಿಸ್ಥಿತಿ ಅಧೋಗತಿ ಎಂಬಂತೆ ಆಗುತ್ತಿದೆ. ಜನರು ಕಷ್ಟಪಟ್ಟು ದುಡಿದ ತೆರಿಗೆ ಹಣದಿಂದ ಪ್ರತಿ ತಿಂಗಳು ಸಂಬಳ ಪಡೆಯುವ ಇವರಿಗೆ
ಕಿಂಚಿತ್ತೂ ಕೆಲಸದ ಕುರಿತು ಗೌರವವಿಲ್ಲ. ಹಾಳಾಗಿ ಹೋಗಲಿ ಜನರ ದುಡ್ಡು ತಿಂದ ಋಣ ತೀರಿಸುವ ಸೌಜನ್ಯವು ಇಲ್ಲದ ಇಂತಹ ಸಿಬ್ಬಂದಿಯನ್ನು ಹೊಂದಿರುವ ಹಿಂದುಳಿದ ವರ್ಗಗಳ ಇಲಾಖೆ ಯೋಜನೆಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲುಪಿ ಮುಂದೆ ಬರುವುದಾದರೂ ಹೇಗೆ? ಅಧಿಕಾರಿಗಳ
ಪಾಲಿಗೆ ಇದೊಂದು ಸಣ್ಣ ನಿರ್ಲಕ್ಷ್ಯ ಮಾತ್ರ, ಆದರೆ ಯೋಜನೆ ನಂಬಿಕೊಂಡವರಿಗೆ ಪರಿಹಾರವೇ ಜೀವಾಳವಾಗಿರುತ್ತದೆ.

ಇಷ್ಟಕ್ಕೆಲ್ಲಾ ಕಾರಣ ಸರಕಾರಿ ನೌಕರರಿಗೆ ಸರಿಯಾದ ಮೂಗುದಾರವಿಲ್ಲದೆ ಇರುವುದು. ‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಸಾಲು ವಿಧಾನಸಭೆ ಗೋಡೆಯ ಮೇಲೆ ಮಾತ್ರ ರಾರಾಜಿಸುತ್ತಿದೆ ಅಷ್ಟೇ. ಅದನ್ನು ಇಲಾಖೆ ಸಿಬ್ಬಂದಿ ಮಾತ್ರ ಪಾಲನೆ ಮಾಡುತ್ತಿಲ್ಲ.
– ರುದ್ರಯ್ಯ ಸೊಬರದಮಠ, ಧಾರವಾಡ

error: Content is protected !!