Tuesday, 30th May 2023

ಐಪಿಎಲ್‌ ಗಾಗಿ ಭಾರತಕ್ಕೆ ತೆರಳಲಿದ್ದಾರೆ ಈ ನಾಲ್ವರು ಆಟಗಾರರು..!

ವೆಲ್ಲಿಂಗ್ಟನ್‌: ಮಾರ್ಚ್ 31ರಂದು ಪ್ರಾರಂಭವಾಗುವ 16ನೇ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿಗೆ ಮುಂಚಿತವಾಗಿ ಭಾರತಕ್ಕೆ ಪ್ರಯಾಣಿಸಲು ತನ್ನ ನಾಲ್ವರು ಆಟಗಾರರಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ನಾಲ್ವರು ಆಟಗಾರರು ಮಾ.25ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಭಾಗವಹಿಸದೆ, ಭಾರತಕ್ಕೆ ಬಂದಿಳಿಯಲಿದ್ದಾರೆ.

ನಾಲ್ವರು ಆಟಗಾರರಾದ ಕೇನ್ ವಿಲಿಯಮ್ಸನ್ (ಗುಜರಾತ್ ಟೈಟನ್ಸ್), ಟಿಮ್ ಸೌಥಿ (ಕೋಲ್ಕತ್ತಾ ನೈಟ್ ರೈಡರ್ಸ್), ಡೆವೊನ್ ಕಾನ್ವೆ ಮತ್ತು ಮಿಚೆಲ್ ಸ್ಯಾಂಟ್ನರ್ (ಚೆನ್ನೈ ಸೂಪರ್ ಕಿಂಗ್ಸ್) ತಂಡದ ಶಿಬಿರವನ್ನು ಕೂಡಿಕೊಳ್ಳಲಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಂತರ ನಾಲ್ವರು ಆಟಗಾರರು ಭಾರತಕ್ಕೆ ಪ್ರಯಾಣಿಸಲಿದ್ದಾರೆ.

ಆಕ್ಲೆಂಡ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ನಂತರ ಮತ್ತೆ ಮೂವರು ನ್ಯೂಜಿಲೆಂಡ್ ಆಟಗಾರ ರಾದ ಫಿನ್ ಅಲೆನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಲಾಕಿ ಫರ್ಗುಸನ್ (ಕೆಕೆಆರ್) ಮತ್ತು ಗ್ಲೆನ್ ಫಿಲಿಪ್ಸ್ (ಸನ್‌ರೈಸರ್ಸ್ ಹೈದರಾಬಾದ್) ಸಹ ಏಕದಿನ ತಂಡದಿಂದ ಬಿಡುಗಡೆಯಾಗಿ, ತಮ್ಮ ಐಪಿಎಲ್ ಫ್ರಾಂಚೈಸಿ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.

ಮಾ.28ರಂದು ಓವಲ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದ ಮೊದಲು ಫಿನ್ ಅಲೆನ್, ಲಾಕಿ ಫರ್ಗುಸನ್ ಮತ್ತು ಗ್ಲೆನ್ ಫಿಲಿಪ್ಸ್ ಆಟಗಾರ ರಿಗೆ ಬದಲಿಯಾಗಿ ಮಾರ್ಕ್ ಚಾಪ್‌ಮನ್, ಬೆನ್ ಲಿಸ್ಟರ್ ಮತ್ತು ಹೆನ್ರಿ ನಿಕೋಲ್ಸ್ ನ್ಯೂಜಿಲೆಂಡ್ ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ.

2023ರ 16ನೇ ಐಪಿಎಲ್ ಪಂದ್ಯಾವಳಿ ಮಾ. 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಚಾಲನೆ ದೊರೆಯಲಿದೆ.

 

Read E-Paper click here

error: Content is protected !!