Saturday, 28th September 2024

ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ಶೂಟರ್​ ಶ್ರೇಯಸಿ ಸಿಂಗ್ ಭಾರತ ತಂಡಕ್ಕೆ ಸೇರ್ಪಡೆ

ವದೆಹಲಿ: ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಷ್ಯಾಡ್‌ನ‌ಲ್ಲಿ ಪದಕ ಜಯಿಸಿರುವ ಶೂಟರ್​ ಶ್ರೇಯಸಿ ಸಿಂಗ್  ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅಚ್ಚರಿ ಎಂದರೆ ಇವರು ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಎಂಬುದು.

32 ವರ್ಷದ ಶ್ರೇಯಸಿ ಸಿಂಗ್‌, ಮಾಜಿ ಸಚಿವ ದಿವಂಗತ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ.

ಒಲಿಂಪಿಕ್ಸ್‌ ಆಯ್ಕೆಯ ಮೊದಲ ಪಟ್ಟಿಯಲ್ಲಿ ಶ್ರೇಯಸಿ ಹೆಸರಿರಲಿಲ್ಲ. ಆದರೆ ಟೋಕಿಯೊ ಒಲಿಂಪಿಯನ್‌ ಮನು ಭಾಕರ್‌ ಮಹಿಳೆಯರ 10 ಮೀ. ಪಿಸ್ತೂಲ್‌ ಮತ್ತು 25 ಮೀ. ಪಿಸ್ತೂಲ್‌ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಹೀಗಾಗಿ ಒಂದು ಕೋಟಾವನ್ನು ಮರುಹಂಚಿಕೆ ಮಾಡಬಹುದಾಗಿತ್ತು. ಇದನ್ನು ಟ್ರ್ಯಾಪ್‌ ಶೂಟರ್‌ಗಾಗಿ ಬದಲಾಯಿಸಲಾಯಿತು. ಹೀಗಾಗಿ ಈ ಕೋಟಾದಲ್ಲಿ ಶ್ರೇಯಸಿ ಅವರನ್ನು ಆಯ್ಕೆ ಮಾಡಲಾಯಿತು. ಶ್ರೇಯಸಿ 2014ರ ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯಾಡ್‌ನ‌ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು. 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ದೇಶಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮತ್ತು ಬಿಹಾರಕ್ಕೆ ಕೀರ್ತಿ ತಂದಿದ್ದರು.

ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭ ಜುಲೈ 26ರಂದು ಸೀನ್ ನದಿಯಲ್ಲಿ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ.