Sunday, 5th January 2025

ವಿಳಾಸವಿಲ್ಲದ ಪ್ರೇಮ ಪತ್ರ

ಬೀರೇಶ್ ಎನ್.ಗುಂಡೂರ್‌

ಸಾಗಿಸುತ್ತಿದ್ದೆ ದಿನಗಳ ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ! ಆದರೆ ಅವೆಲ್ಲವೂ ಹುಸಿಯಾದವು. ಆದರೆ ಬದುಕು ಎಂದಿನಂತೆ ಸಾಗಿದೆ ಗೆಳತಿ!

ನೋಡುನೋಡುತಿದ್ದಂತೆ ಈ ಬದುಕು ಅರ್ಧ ಮುಗಿದು ಹೋಯಿತು. ಉಳಿದಿರುವುದು ಇನ್ನರ್ಧ ಮಾತ್ರ. ಅದು ಕೂಡ ಯಾವ ಗ್ಯಾರಂಟಿ ಹೇಳು! ಅಂಗೈ ಗೆರೆಗಳು ಎಷ್ಟು ಆಯಸ್ಸು ಬರೆದುಕೊಂಡಿವೆಯೋ ಏನೋ, ನಾನಂತು ಈವರೆಗೂ ನೋಡಿಕೊಂಡಿಲ್ಲ. ಕಾಣದ ಹಣೆಯ ಗೆರೆಗಳು ಏನು ಹೆಳುತ್ತವೆಯೋ ಕಂಡವರಾರು? ಈ ಗೆರೆಗಳ ಉಸಾಬರಿಗೆ ನಾನು ಹೋಗುವುದಿಲ್ಲ ಅಂತ ನಿನಗೆ ಗೊತ್ತು. ಅಂತದ್ದೊಂದು ದರ್ದು ಅದುವರೆಗೂ ನನಗೆ ಬಂದಿದ್ದಿಲ್ಲ.

ಆವತ್ತು, ನನ್ನ ಗಟ್ಟಿತನವನ್ನು ಅಲುಗಾಡಿಸುವ ಘಳಿಗೆಯೊಂದು ಬಂದೇ ಬಿಟ್ಟಿತ್ತು. ತಿರುಗಿ ಏನೊಂದು ಹೇಳಲು ಅವಕಾಶ ವಿಲ್ಲದಂತೆ ವಿಳಾಸವಿಲ್ಲದ ಪತ್ರವೊಂದು ಸೀದಾ ಎದೆಗೆ ಚೂರಿ ಹಾಕಿತ್ತು. ಜತನ ಮಾಡಿಕೊಂಡಿದ್ದ ಹತ್ತು ವರ್ಷಗಳ ನೆನಪುಗಳಿಗೆ, ನಿರ್ಮಲ ಭಾವಗಳಿಗೆ, ನಾಳೆಯ ಕನಸುಗಳಿಗೆ ಮುಲಾಜಿಲ್ಲದೆ ಅಂತ್ಯಗೀತೆಯೊಂದರ ಸಾಹಿತ್ಯವನ್ನು ಅದು ಹೊತ್ತು ತಂದಿತ್ತು. ಪತ್ರ ಓದುವ ಶುರುವಿನ ನಾನು ಅರ್ಧ ಕುಸಿದು ಬಿದ್ದಿದೆ.

ಮೂಡಿದ ಒಂದೊಂದು ಪದಗಳು ನಮ್ಮಿಬ್ಬರ ಬಂಧನವನ್ನು ಸಲೀಸಾಗಿ ಬಿಡಿಸಿಕೊಂಡು, ಅಂತ್ಯಕ್ಕೆ ಸಹಜ ದಾರಿ ಮಾಡಿ ಕೊಂಡಿದ್ದವು. ಕೈ ನಡುಗುತ್ತಿತ್ತು; ಹಣೆ ಬೆವರುತಿತ್ತು. ಓದಿನ ಕೊನೆಗೆ ನಾನು ಕೆಂಡದಲ್ಲಿಟ್ಟ ಹೂವಿನಂತಾಗಿದೆ. ಹಾಡುಹಗಲೇ ನೀನಿಟ್ಟ ಕೊಳ್ಳಿಗೆ ತಾಳಲಾಗದೇ ಹೃದಯದ ಧಮನಿಗಳು ಒzಡಿ ಬಿಟ್ಟವು. ಆವತ್ತು, ಒಂದು ಚೂರು ಕಾಗದ ಮತ್ತು ಶಾಲೆಯಲ್ಲಿ ಓದಿದ ಅದೇ ಅಕ್ಷರಗಳು ಈ ಪ್ರಾಣಪಕ್ಷಿಯನ್ನು ನಡುಗಿಸುವಷ್ಟು ತಾಕತ್ತು ಪಡೆದುಕೊಂಡಿದ್ದವು.

ನಾನೊಬ್ಬ ಪೆದ್ದನೆ?
ಈ ಕಾಲದಲ್ಲೂ ಪತ್ರ ಬರೆಯುವ ಹುಡುಗಿಯನ್ನು ಮೆಚ್ಚಿಕೊಳ್ಳಬೇಕೊ! ಅಥವಾ ಹೊಸ ನಂಬರ್ ಸಿಗಬಾರದು ಎನ್ನುವ ನಿನ್ನ
ಜಾಣ್ಮೆಯನ್ನು ಮೆಚ್ಚಿಕೊಳ್ಳಬೇಕೊ! ಅಥವಾ ಈ ಪೆದ್ದನಿಗೆ ಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ, ಅಕ್ಷರಗಳು ಮಾತ್ರ ಇವನನ್ನು ಗಾಢವಾಗಿ ತಟ್ಟಬಲ್ಲವು ಎನ್ನುವ ನಿನ್ನ ಒಣ ಲೆಕ್ಕಾಚಾರವನ್ನು ನೆಚ್ಚಿಕೊಳ್ಳಬೇಕೊ! ನನಗೆ ಅರ್ಥವಾಗಲಿಲ್ಲ.

ಈ ಯುಗಕ್ಕೆ ಅಪರೂಪಕ್ಕೆ ಸಿಗುವ ಅಪ್ಸರೆಯಂತವಳು ನೀನು. ಮನಸ್ಸಿನ ಮೂಲೆಯೊಳಗೆ ಇನ್ನೊಬ್ಬಳ ಬಗ್ಗೆ ಒಂದು ಕ್ಷಣ ಮೋಹಿಸಿಕೊಂಡರೂ ನಮ್ಮ ಪ್ರೇಮಕ್ಕೆ ಮೈಲಿಗೆಯಾದೀತು ಎನ್ನುವಂತವನು ನಾನು. ನಿನ್ನನ್ನು ಪಿಯುನಿಂದಲೂ ನನ್ನ ಜೀವದಷ್ಟು ಒಲವಿನಿಂದ ಜೋಪಾನ ಮಾಡಿಟ್ಟುಕೊಂಡು ಬಂದಿzನೆ. ನನ್ನ ಮಾಸ್ಟರ್ಸ್ ದಿನಗಳಲ್ಲೂ ಕೂಡ ನಿನ್ನೊಂದಿಗೆ ಒಂದು ದಿನವೂ ತಪ್ಪದೇ ಮಾತಾಡಿದ್ದಾನೆ.

ನಿನ್ನ ಪಡೆದ ಧನ್ಯತೆಯಲ್ಲಿ ಓದಿನ ಬಗ್ಗೆ ನಿಯತ್ತು ಇಟ್ಟುಕೊಂಡೆ. ಓದು ಮುಗಿದ ಮೇಲೆ ಒಂದು ಒಳ್ಳೆ ಕೆಲಸವೂ ಸಿಕ್ಕಿತು. ಚಂದದ ಬದುಕು ಕಟ್ಟಿಕೊಂಡೆ. ಆಗಲೇ, ‘ನಿನ್ನ ಮನೆಗೆ ಬಂದು ಈ ಜನುಮಕ್ಕೆ ನಾವಿಬ್ಬರಷ್ಟೆ ಜೊತೆಯಾಗಬೇಕು’ ಅಂತ ನಿನ್ನಪ್ಪ ನೊಂದಿಗೆ ಮಾತು ಮಾಡಿದ್ದೆ. ‘ಅವಳು ಓದಿನಲ್ಲಿ ಹುಷಾರಿzಳೆ. ಅವಳಿಗೀಗ ಡಿಗ್ರಿ. ಅವಳಿಗೆ ಈಗಲೇ ತೊಂದರೆ ಕೊಡಲಾರೆ. ಅವಳ ಅಭ್ಯಾಸ ಮುಗಿದ ಮೇಲೆ ನಾವಿಬ್ಬರೂ ಮದುವೆಯಾಗುತ್ತ್ತೇವೆ’ ಅಂತ ನಿನ್ನ ಮನೆಯವರಿಗೆ ಅಭಯ ಕೊಟ್ಟು ಬಂದಿದ್ದೆ. ಆವತ್ತು ಅದೆಷ್ಟು ಇಷ್ಟಪಟ್ಟಿದ್ದರು ನಿಮ್ಮವರೆ ನನ್ನನ್ನು. ನಿನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದಾದ ಮೇಲೆ ನೀನು, ನಾ ದೇವರ ಮುಂದೆ ನಿಂತು ಬೇಡುವ ದಿನನಿತ್ಯದ ಪ್ರಾರ್ಥನೆಯಾಗಿಬಿಟ್ಟೆ.

ನಿನ್ನ ಕೊನೆಯ ಪರಿಕ್ಷೆ ಮತ್ತು ಕ್ಯಾಂಪಸ್ ಸೆಲೆಕ್ಷನ್ ಅಂತ ಸ್ವಲ್ಪ ಬಿಡುವು ಮಾಡಿಕೊಂಡವಳು, ಅದಾದ ಮೇಲೆ ನನ್ನ ಯೊಚನೆ ಯೇ ಮರೆತುಹೊಯಿತೇನೊ! ದಿನದಿನಕ್ಕೂ ಅಷ್ಟೊಂದು ಬದಲಾವಣೆ ನಿನ್ನಲ್ಲಿ. ದಿನದಲ್ಲಿ ಒಮ್ಮೆಯಾದರೂ ನಿನಗೆ ಕಿವಿಯಾ ಗುವ ನನಗೆ ಹುಚ್ಚು ಹಿಡಿದಂತಾಗಿತ್ತು. ಕಾದು ಸಾಕಾಗಿತ್ತು. ಸೀದಾ ನಿನ್ನ ಮನೆಗೆ ಬಂದಾಗ ನಿನ್ನಗಲಿ, ನಿಮ್ಮ ಮನೆಯವರಗಲಿ ಆ ಹುಮ್ಮಸ್ಸು ಉಳಿದಿರಲಿಲ್ಲ; ಗಮನಿಸಿದೆ. ಆಗ ನಿನ್ನ ಕೈಯಂದು ಉತ್ತಮ ಉದ್ಯೋಗವಿತ್ತು. ನಿನ್ನ ಅಪ್ಪನ ಮಾತಿನಲ್ಲಿ ನಾನಲ್ಲ ದಿದ್ದರೆ ಇನ್ನೊಬ್ಬ ಎನ್ನುವ ಗತ್ತಿತ್ತು. ಯಾರು ಏನೇ ಹೇಳಲಿ, ನೀನು ಮಾತ್ರ ಈ ಬಂಧವನ್ನು ತಿರಸ್ಕರಿಸಲಾರೆ.

ಈ ಒಲವಿನಲ್ಲಿ ನಂಜು ಹುಡುಕಿಕೊಳ್ಳಲಾರೆ ಎಂದುಕೊಂಡಿದ್ದೆ. ಆದರೆ, ಆವತ್ತಿನ ನಿನ್ನ ಬಿರುಸು ನಾನು ಈ ಹೊತ್ತಿಗೂ ಊಹಿಸಿ ಕೊಳ್ಳಲಾರೆ. ಇರಲಿ, ಅದೆ ಬದಲಾದ ನಿನ್ನ ಮನೆಯವರ ಮುಂದೆ ಎಂದುಕೊಂಡಿದ್ದೆ. ಆದರೆ, ನಾನು ಮೊದಲ ಬಾರಿ ನಂಬಿಕೆ ಎಂಬ ದೋಣಿಯಲ್ಲಿ ಹುಟ್ಟಿಲ್ಲದೆ ಇಷ್ಟು ದಿನಗಳು ಪಯಣಿಸುತ್ತಿದ್ದೆ ಅಂತ ನಿನ್ನ ಪತ್ರ ಓದಿಕೊಂಡಾಗಲೇ ಗೊತ್ತಾಗಿದ್ದು. ಇರಲಿ, ಇಷ್ಟಾದ ಮೇಲೂ ನಿನ್ನ ಬದಲಾದ ವಿಳಾಸವನ್ನು ಹುಡುಕಿ ಬಂದು ತೊಂದರೆ ಕೊಡುವಷ್ಟು ಅಯೋಗ್ಯ ನಾನಾಗಿರಲಿಲ್ಲ. ಸೂಚನೆ ಕೊಡದೆ ಅಪ್ಪಳಿಸಿದ ಆ ಸುನಾಮಿಗೆ ಕುಗ್ಗಿ ಹೋಗಿದ್ದೆ ಅಷ್ಟೆ.

ಉಚಿತ ಸಲಹೆಗಳು!
ನಿನ್ನನ್ನು ಓದಿಕೊಂಡ ಮೇಲೆ ನಿಂತಲ್ಲಿ ನಿಲ್ಲದವನಾದೆ. ಏನೋ ಗರಬಡಿದವನಂತೆ ಗುಂಗು. ಮನೆಯವರಿಗೆ ನನ್ನ ಮುಖದಂದು
ಸಿಗದ ಉತ್ತರ. ಈ ಬದುಕಿನ ಬಗ್ಗೆ ಹಿಮಾಲಯದಲ್ಲಿ ಕೂತ ಸನ್ಯಾಸಿಯ ವೈರಾಗ್ಯ. ದಿನಗಳು ಮುಳುಗಿದವು; ಕತ್ತಲು, ಬೆಳಕು. ಬೆಳಕಿನೊಂದಿಗೆ ಕತ್ತಲು ಗೆಳೆಯ ಅನಿಸಿತು. ಅವೆರಡು ಸಮ-ಸಮ ಎನಿಸಿಬಿಟ್ಟವು. ಕಂಡಿದ್ದು ಮಾತ್ರ ದೊಡ್ಡ ಶೂನ್ಯ. ಖಾಸಾ ಇಬ್ಬರಿಗೂ ಗೊತ್ತಿರುವವರು, ದೊಡ್ಡವರೆನಿಸಿಕೊಂಡವರು, ಪ್ರೀತಿಯ ಬಗ್ಗೆ ಪುಸ್ತಕ ಬರೆದವರು, ನಿಯತ್ತಿನ ಪಾಠ ಹೇಳುವವರು ಎಲ್ಲರನ್ನೂ ಈ ಎರಡು ವರ್ಷಗಳಲ್ಲಿ ಭೇಟಿ ಮಾಡಿದ್ದೇನೆ. ಎಲ್ಲರದ್ದೂ ಹೆಚ್ಚು ಕಮ್ಮಿ ಕೊನೆಯ ಉತ್ತರ ಒಂದೇ.

‘ಅವಳಿಗೊಂದು ಬದುಕು ಸಿಕ್ಕಿದೆ ಎಂದರೆ ನಿನಗೂ ಕೂಡ ಚಂದದ ಬದುಕು ಇದೆ. ಚಿಂತೆ ಬೇಡ’ ಅಂದರು. ‘ಅವಳಿದ್ದಷ್ಟು
ಚಂದವಾಗುತ್ತದಾ?’ ಎನ್ನುವ ನನ್ನ ಮರುಪ್ರಶ್ನೆಗೆ ಅವರು ಅದೆಕೋ ನಸುನಕ್ಕು, ಸುಮ್ಮನೆ ಬೆನ್ನು ಸವರಿ ಹೊರಟುಬಿಟ್ಟರು. ಇಷ್ಟು ದಿನಗಳಲ್ಲಿ ನಿನ್ನ ಬಗ್ಗೆ ನನಗೆ ಏನೇನೋ ಸಂಗತಿಗಳು ಕಿವಿ ಮುಟ್ಟಿದವು. ಆದರೆ ನೀನಂತವಳಲ್ಲ; ಅಪ್ಪಿಕೊಂಡ ಒಲ ವನ್ನು ಒದೆಯುವುದಿಲ್ಲ ಎಂದುಕೊಂಡಿದ್ದೆ. ನಿನ್ನ ಬರುವಿಕೆಯಲ್ಲಿ ದಿನಗಳು ಸಾಗಿಸುತ್ತಿದ್ದೆ. ಆದರೆ, ನೀನು ಬರಲೇ ಇಲ್ಲ. ಮೇಲಾಗಿ, ಕಾಲ ನನ್ನನ್ನು ಗಟ್ಟಿ ಮಾಡಿತು.

ಎಲ್ಲಾ ಮರೆತಿದ್ದಾಳೆ!
ಮೊನ್ನೆ ಗೆಳೆಯ ಸಿಕ್ಕಾಗ, ‘ಅವಳು ಸಿಕ್ಕಿದ್ದಳು ಕಣೋ. ಎಲ್ಲವನ್ನು ಮರೆತಿದ್ದಾಳೆ’ ಅಂತ ದೈನ್ಯದಿಂದ ನನ್ನ ನೋಡಿ, ಏನೋ
ಹೇಳುವವನಿದ್ದ. ಅವಸರದಲ್ಲಿ ಅವನನ್ನು ತಡೆದು ನಾನೇ ಹೇಳಿದೆ. ‘ಇರಲಿ ಬಿಡು, ಅವಳು ಮರೆತಿರಬಹುದು, ಆದರೆ ಅವಳು ನನ್ನಲ್ಲಿ ಇನ್ನೂ ಜೀವಂತ. ನಿನಗೆ ಗೊತ್ತಾ.. ಅವಳು ನನ್ನನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋದ ಮೇಲೆಯೇ ನಾನು ಅವ ಳೊಂದಿಗೆ ಹೆಚ್ಚು ಜೀವಿಸುತಿದ್ದೇನೆ. ಎಷ್ಟೆಂದರೆ, ಅವಳು ಸಿಕ್ಕಿದ್ದರೂ ಕೂಡ ನಾನು ಇಷ್ಟೊಂದು ಭಾವದಲ್ಲಿ ನನ್ನ ಪ್ರೇಮವನ್ನು ಆರಾಧಿಸುತಿದ್ದಾನೋ ಇಲ್ಲವೊ!

ಈಗ ನನ್ನ ಪಾಲಿಗೆ ಆ ಹತ್ತು ವರುಷಗಳ ನೆನಪುಗಳಷ್ಟೆ ಆಸ್ತಿ. ನಾವಿಬ್ಬರು ಒಟ್ಟಾಗಿ ಹೆಜ್ಜೆ ಹಾಕಿದ ದಾರಿ, ಕೂತು ಹರಟೆ ಹೊಡೆದ
ಪಾರ್ಕುಗಳು, ತುಂತುರು ಮಳೆಯಲ್ಲಿ ಅವಳು ನನ್ನ ಬೆನ್ನು ಹಿಡಿದು ಕೂತ ಹಿಂದಿನ ಸೀಟು, ಆ ಮೊದಲ ಮುತ್ತು, ಜಾತ್ರೆ ಉತ್ಸವ ಗಳಲ್ಲಿ ಕೈ ಕೈ ಹಿಡಿದು ನಡೆದ ದಿನಗಳು, ಅವಳು ಕೊಟ್ಟ ಮೊದಲ ನವಿಲುಗರಿ, ಹೀಗೆ ಆ ಎಲ್ಲ ನೆನಪುಗಳೇ ನನಗೆ ಈ ಜನುಮಕ್ಕೆ ಸಾಕು. ಈ ಬದುಕಿನ ಇನ್ನರ್ಧ ಮೈಲಿಯಲ್ಲಿ ಅವಳೇ ನನ್ನ ಸಂಗಾತಿ’ ಅಂದೆ.

‘ನೀನು ಉದ್ಧಾರವಾಗುವುದಿಲ್ಲ ಮಾರಾಯ’ ಅಂದು ಹೋದ. ಹೌದು, ಈಗ ಹೇಳುತಿದ್ದೇನೆ ಕೇಳು, ನೀನು ನನ್ನನ್ನು ತಿರಸ್ಕರಿಸಿದ್ದೇ
ಒಳ್ಳೆದಾಯಿತು. ಸಿಕ್ಕಿದ್ದರೆ, ನಿಷ್ಕಲ್ಮಷವಾಗಿ ಹಚ್ಚಿಕೊಂಡಿದ್ದ ಒಲವಿನ ದೀಪಕ್ಕೆ ಬಿರುಗಾಳಿಯ ಭಯದಲ್ಲಿ ದಿನವೂ ಸೋಲುತಿ ದ್ದಾನೋ ಏನೋ!

ಈಗ ನೋಡು, ಅಂತಹದ್ದೊಂದು ಭಯವೇ ಇಲ್ಲ. ಮಿಗಿಲಾಗಿ, ಈ ಜನುಮಕ್ಕೆ ಸಾಕಾಗುವಷ್ಟು ಪ್ರೀತಿ ಕೊಟ್ಟ ನಿನಗೆ, ಮತ್ತೆ ಮತ್ತೆ ನೆನೆದಷ್ಟು ಮಧುರವೆನಿಸುವ ಆ ಒಲವಿಗೆ ಶರಣಾಗಿದ್ದೇನೆ.