Friday, 13th December 2024

ಕುಮಾರಸ್ವಾಮಿ ಕನಸಿಗೆ ರೆಕ್ಕೆ ಬಂದಿದ್ದು ಹೇಗೆ ?

ಮೂರ್ತಿ ಪೂಜೆ

ಕೆಲದಿನಗಳ ಹಿಂದೆ ಪದ್ಮನಾಭನಗರದ ನಿವಾಸದಲ್ಲಿ ಪುತ್ರ ಎಚ್.ಡಿ. ಕುಮಾರಸ್ವಾಮಿಯವರ ಜತೆ ಚರ್ಚಿಸುತ್ತಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು, ‘ಬದುಕಿನಲ್ಲಿ ಯಾರು ಏನಾಗುತ್ತಾರೆ ಅಂತ ಹೇಳುವುದು ಕಷ್ಟ. ನಿನ್ನ ವಿಷಯವನ್ನೇ ತೆಗೆದುಕೋ, ನೀನು ರಾಜಕಾರಣಕ್ಕೆ ಬರಬಹುದೆಂದು ನಾನು ಊಹಿಸಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗುತ್ತೀ ಎಂಬ ಲೆಕ್ಕಾಚಾರ ದೂರವೇ ಇತ್ತು. ಆದರೆ ನಮ್ಮೆಲ್ಲರ ಊಹೆ ಮೀರಿ ೨ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ನಿನಗೆ ದೊರೆಯುತು.

ಇವತ್ತು ಬರೆದಿಟ್ಟುಕೋ, 2 ಸಲ ಸಿಎಂ ಆಗಿದ್ದು ಮಾತ್ರವಲ್ಲ, ಇನ್ನೂ 2 ಬಾರಿ ನೀನು ಕರ್ನಾಟಕದ ಮುಖ್ಯಮಂತ್ರಿ ಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದರಂತೆ. ತಂದೆಯ ಈ ಮಾತುಗಳಿಂದ ಕುಮಾರಸ್ವಾಮಿ ಮೂಕವಿಸ್ಮಿತರಾದರಂತೆ. ಅಂದಹಾಗೆ ಕುಮಾರಸ್ವಾಮಿ 2004ರಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಬಯಸಿದಾಗ ದೇವೇಗೌಡರು ತುಂಬ ಬೇಸರಿಸಿಕೊಂಡಿದ್ದರಂತೆ. ಆದರೆ ಇದನ್ನು ಮಗನಿಗೆ ಬಾಯಿಬಿಟ್ಟು ಹೇಳಲಾಗದೆ, ಇಂದು ಮುಖ್ಯಮಂತ್ರಿಯಾಗಿರುವ ಅಂದು ಕುಮಾರಸ್ವಾಮಿ ಯವರ ಪರಮಾಪ್ತರಾಗಿದ್ದ ಬಸವರಾಜ ಬೊಮ್ಮಾಯಿಯವರನ್ನು ಸುದೀರ್ಘ ಚರ್ಚೆಗೆಂದು ಪದ್ಮನಾಭನಗರದ ನಿವಾಸಕ್ಕೆ ಕರೆಸಿಕೊಂಡಿದ್ದರಂತೆ.

ಆಗ ಬೊಮ್ಮಾಯಿಯವರು, ‘ನನ್ನನ್ನು ಕರೆಸಿಕೊಂಡಿದ್ದೇಕೆ?’ ಎಂದು ಕೇಳಿದ್ದಕ್ಕೆ ದೇವೇಗೌಡರು ತುಂಬಹೊತ್ತು ಮಾತನಾಡಿರ ಲಿಲ್ಲವಂತೆ. ಕೊನೆಗೆ ಮೌನಮುರಿದು, ‘ಬಸವರಾಜ್, ನೀವು ನನಗೊಂದು ಉಪಕಾರ ಮಾಡಬೇಕು. ನಿಮ್ಮ ಗೆಳೆಯ ಕುಮಾರ ಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಹಠ ಹಿಡಿದಿದ್ದಾರೆ. ಯಾವ ಕಾರಣಕ್ಕೂ ಸ್ಪರ್ಧಿಸಬೇಡಿ ಅಂತ ನೀವೊಂದು ಮಾತು ಹೇಳಬೇಕಲ್ಲ?’ ಎಂದರಂತೆ. ಈ ಮಾತಿಗೆ ನಿಬ್ಬೆರಗಾದ ಬೊಮ್ಮಾಯಿ, ‘ಅದೇಕೆ ಸಾರ್ ನಾನು ಹಾಗೆನ್ನಬೇಕು?’ ಎಂದಿದ್ದಕ್ಕೆ ಚಿಂತಾಕ್ರಾಂತ ದೇವೇಗೌಡರು, ‘ಎಷ್ಟೆಂದರೂ ಮಕ್ಕಳು ನೋಡಿ, ತುಂಬ ಸೂಕ್ಷ್ಮವಿರುತ್ತಾರೆ. ನಾನು ಹೇಳಿದರೆ ಅವರದನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ.

ಆಪ್ತರಾಗಿರುವುದರಿಂದ ನಿಮ್ಮ ಮಾತನ್ನು ಅವರು ಕೇಳಬಹುದು’ ಎಂದರಂತೆ. ಮತ್ತಷ್ಟು ವಿಸ್ಮಿತರಾದ ಬೊಮ್ಮಾಯಿ,
‘ಅದೆಲ್ಲ ಸರಿ ಸರ್, ಆದರೆ ಕುಮಾರಸ್ವಾಮಿ ಸ್ಪರ್ಧಿಸಬಾರದೇಕೆ?’ ಎಂದು ಪ್ರಶ್ನಿಸಿದ್ದಕ್ಕೆ ಗೌಡರು, ‘ಇನ್ನೇತಕ್ಕೂ ಅಲ್ಲ. ನಾಳೆ ಅವರಣ್ಣ ರೇವಣ್ಣ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಕುಮಾರಸ್ವಾಮಿ ರಾಮನಗರದಿಂದ ಗೆದ್ದರು ಅಂದುಕೊಳ್ಳಿ, ಆಗ ಅಣ್ಣ-ತಮ್ಮಂದಿರ ಮಧ್ಯೆ ಬಿರುಕು ಮೂಡುತ್ತದೆ’ ಎಂದರಂತೆ. ಆಗ ಬೊಮ್ಮಾಯಿ, ‘ಅದ್ಹೇಗೆ ಸರ್? ರೇವಣ್ಣ ಹಾಸನ ಜಿಲ್ಲೆಯಿಂದ, ಕುಮಾರಸ್ವಾಮಿ ರಾಮನಗರ ಜಿಲ್ಲೆಯಿಂದ ಸ್ಪರ್ಧಿಸುವುದರಿಂದ ಬಿರುಕುಮೂಡುವ ಪ್ರಶ್ನೆಯೇ ಇಲ್ಲವಲ್ಲ?’ ಎಂದಿದ್ದಕ್ಕೆ ಗೌಡರು, ‘ಹಾಗಲ್ಲ, ಕುಮಾರಸ್ವಾಮಿ ಗೆದ್ದರೆ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ.

ಅದೇ ಕಾಲಕ್ಕೆ ರೇವಣ್ಣ ಅವರಿಗಿರುವ ಯೋಗವೊಂದು ತಪ್ಪುತ್ತದೆ’ ಎಂದರಂತೆ. ಬೊಮ್ಮಾಯಿ ಮುಖ ಒರೆಸಿಕೊಂಡು, ‘ನಿಮ್ಮ ಮನೆಬಾಗಿಲಿಗೇ ಸಿಎಂ ಪಟ್ಟ ಒಲಿದುಬರುತ್ತದೆ ಎಂದರೆ ಒಳ್ಳೆಯದೇ ಆಯಿತಲ್ಲ ಸರ್’ ಎಂದರೆ ಗೌಡರು, ‘ಸಮಸ್ಯೆಯ ಮೂಲ ಬೇರೆಯೇ ಇದೆ. ಕುಮಾರಸ್ವಾಮಿ ಸಿಎಂ ಆಗುವುದೇನೋ ಸರಿ, ಆದರೆ ನನ್ನ ಜಾತಕಕ್ಕೆ ರೇವಣ್ಣನವರ ಜಾತಕ ಹೊಂದಿ ಕೊಂಡಿದೆ. ನಾಳೆ ಕುಮಾರಸ್ವಾಮಿ ಸಿಎಂ ಆದರೆ ರೇವಣ್ಣನವರಿಗೆ ಉಪಮುಖ್ಯಮಂತ್ರಿಯಾಗುವ ಯೋಗ ತಪ್ಪುತ್ತದೆ. ಅದೇ ಕಾಲಕ್ಕೆ, ರಾಷ್ಟ್ರ ರಾಜಕಾರಣದಲ್ಲಿ ನನಗೆ ಸಿಗಬೇಕಿರುವ ಮಾನ್ಯತೆಯೂ ತಪ್ಪಿಹೋಗುತ್ತದೆ’ ಎಂದರಂತೆ.

ಈ ಮಾತಿಗೆ ಏನನ್ನಬೇಕೋ ತೋಚದೆ ತುಂಬ ಹೊತ್ತು ಮೌನಿಯಾಗಿದ್ದ ಬೊಮ್ಮಾಯಿ, ‘ಅದೇನೋ ಸರ್. ಕುಮಾರಸ್ವಾಮಿ ಯವರಿಗೆ ನೀವು ಸ್ಪರ್ಧಿಸಬೇಡಿ ಎನ್ನಲು ನನ್ನ ಮನವೊಪ್ಪುತ್ತಿಲ್ಲ; ದಯವಿಟ್ಟು ಕ್ಷಮಿಸಿಬಿಡಿ’ ಎಂದು ಹೊರಟರಂತೆ. ಮುಂದೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಯಲ್ಲಿ ಕುಮಾರಸ್ವಾಮಿ ಸಿಎಂ ಆದರು; ಕಾಂಗ್ರೆಸ್‌ನಿಂದ ಬೇರ್ಪಟ್ಟು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಕಮ್ಯುನಿಸ್ಟರು ದೇವೇಗೌಡರ ಮೇಲೆ ಮುನಿಸಿಕೊಂಡರು. ಅಂದು ಹರಿದಾಡುತ್ತಿದ್ದ ಸುದ್ದಿಯಂತೆ, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಲು ಮುಖ್ಯಕಾರಣರಾಗಿದ್ದ ಕಮ್ಯುನಿಸ್ಟರಿಗೆ ಯುಪಿಎ ಸರಕಾರದ ಅವಧಿಯಲ್ಲಿ ದೇವೇಗೌಡರನ್ನು ರಾಷ್ಟ್ರಪತಿ ಹುದ್ದೆಯಲ್ಲಿ ಕೂರಿಸುವ ಕನಸಿತ್ತು. ಆದರೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಕುಮಾರಸ್ವಾಮಿ ಉರುಳಿಸಿ ಕೋಮುವಾದಿ ಬಿಜೆಪಿ ಜತೆಗೆ ಕೈಜೋಡಿಸಿದರೆಂದು ಕಮ್ಯುನಿಸ್ಟರು ಕೆರಳಿ, ಇದಕ್ಕೆ ದೇವೇಗೌಡರ ಕುಮ್ಮಕ್ಕಿದೆಯೆಂದು ಭಾವಿಸಿ ತಮ್ಮ ನಿಲುವಿನಿಂದ ಹಿಂದೆ ಸರಿದುಬಿಟ್ಟರು.

ಆದರೆ, ೨೦೦೪ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕುಮಾರಸ್ವಾಮಿಯವರಿಗೆ ಹೇಳಿ ಎಂದು ಬೊಮ್ಮಾಯಿಯವರಲ್ಲಿ ಕೇಳಿಕೊಂಡಿದ್ದ ದೇವೇಗೌಡರು ಇವತ್ತು, ‘ಇನ್ನೆರಡು ಬಾರಿ ಸಿಎಂ ಆಗುವ ನಿನ್ನ ಯೋಗವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ, ಧೈರ್ಯವಾಗಿ ಮುನ್ನುಗ್ಗು’ ಎಂದು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ! ರಾಜಕಾರಣದಲ್ಲಿ ಹೀಗೇ ಆಗುತ್ತದೆ ಅಂತ ಹೇಳುವುದು ಕಷ್ಟ. ಆದರೆ ತಂದೆಯ ಈ ಮಾತು ಕುಮಾರಸ್ವಾಮಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ೨೦೨೩ರಲ್ಲಿ ಮತ್ತೊಮ್ಮೆ ಸಿಎಂ ಆಗುವ ಕನಸಿನೊಂದಿಗೆ ಚಕ್ರವ್ಯೂಹ ಹೆಣೆಯತೊಡಗಿದ್ದಾರೆ.

ಇಂಥ ಕನಸಿನೊಂದಿಗೆ ಮುನ್ನುಗ್ಗಿರುವ ಅವರಿಗೆ ಶುರುವಿನಲ್ಲೇ ‘ಬೂಸ್ಟರ್ ಡೋಸ್’ ಕೊಟ್ಟವರು ತೆಲಂಗಾಣದ ಕೆ.ಸಿ.
ಚಂದ್ರಶೇಖರರಾವ್, ತಮಿಳುನಾಡಿನ ಎಂ.ಕೆ. ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಬಿಹಾರದ ನಿತೀಶ್ ಕುಮಾರ್ ಮತ್ತು ಕೇರಳದ ಪಿಣರಾಯಿ ವಿಜಯನ್. ಈ ಪೈಕಿ ನಿತೀಶರಿಗೆ ಕುಮಾರಸ್ವಾಮಿ ಇಲ್ಲವೇ ಸಿದ್ದರಾಮಯ್ಯ ಕರ್ನಾಟಕದ ಸಿಎಂ ಆಗಬೇಕು ಎಂಬ ನಿರೀಕ್ಷೆಯಿದ್ದರೆ, ಮಿಕ್ಕವರಿಗೆ ಕುಮಾರಸ್ವಾಮಿಯವರ ಮೇಲೆ ಒಲವಿದೆ. ಈ
ಪೈಕಿ ತೆಲಂಗಾಣದ ಸಿಎಂ ಚಂದ್ರಶೇಖರರಾವ್, ಕರ್ನಾಟಕ-ತೆಲಂಗಾಣ ಭಾಗದ ೨ ಡಜನ್‌ಗೂ ಅಧಿಕ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ‘ಸಕಲ ಶಸ್ತ್ರಾಸ್ತ್ರಗಳನ್ನು’ ಪೂರೈಸುವುದಾಗಿ ವಾಗ್ದಾನ ಮಾಡಿದ್ದಾರೆ.

ಇದರ ಭಾಗವಾಗಿ ಅವರು ನೀಡಿರುವ ಸಹಕಾರದಿಂದ ಕುಮಾರಸ್ವಾಮಿಯವರು ಸುಮಾರು ೧೦೦ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಾಗುವವರಿಗೆ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಿದರಂತೆ. ಟಿಕೆಟ್ ಆಕಾಂಕ್ಷಿಗಳ ಶಕ್ತಿ-ದೌರ್ಬಲ್ಯಗಳೇನು? ದೌರ್ಬಲ್ಯವಿದ್ದರೆ ಅದನ್ನು ಹೇಗೆ ಪರಿಹರಿಸಬಹುದು? ಎಷ್ಟೇ ಯತ್ನಿಸಿದರೂ ಯಾರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ?
ಎಂಬುದನ್ನು ದೇಶದ ಪ್ರಮುಖ ರಣತಂತ್ರ ನಿಪುಣರು ಕಳೆದ ವಾರ ಪರೀಕ್ಷಿಸಿದರಂತೆ.

ನಂತರ ಅವರು ಕುಮಾರಸ್ವಾಮಿಯವರಿಗೆ ವರದಿಯೊಂದನ್ನು ನೀಡಿ, ಶಿಬಿರದಲ್ಲಿ ಭಾಗವಹಿಸಿದ ಟಿಕೆಟ್ ಆಕಾಂಕ್ಷಿಗಳ ಪೈಕಿ ಗೆಲ್ಲುವ ಶಕ್ತಿ ಯಾರಿಗಿದೆ? ಇನ್ನಷ್ಟು ಶಕ್ತಿ ತುಂಬಿದರೆ ಯಾರು ಗೆಲ್ಲಬಲ್ಲರು? ಏನೇ ಕಸರತ್ತು ಮಾಡಿದರೂ ಸೋಲುವವರು ಯಾರು? ಎಂದೆಲ್ಲ ವಿವರಿಸಿದ್ದಾರಂತೆ. ಅಂದಹಾಗೆ, ಮುಂದಿನ ಚುನಾವಣೆಯಲ್ಲಿ ತಾವು ಸ್ವಯಂಬಲದ ಮೇಲೆ ಅಽಕಾರಕ್ಕೆ ಬರಲು ಯತ್ನಿಸಬೇಕು, ಹಾಗಾದಲ್ಲಿ ಕನಿಷ್ಠ 60 ರಿಂದ 70 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬುದು ಕುಮಾರಸ್ವಾಮಿಯವರ ಲೆಕ್ಕಾಚಾರ. ಈ ಮಧ್ಯೆ ಅವರೊಂದು ಜಾಣನಡೆಗೆ ಮುಂದಾಗಿದ್ದಾರೆ.

ಅದೆಂದರೆ, ಈಗ ಜೆಡಿಎಸ್ ಪಕ್ಷದಲ್ಲಿದ್ದು ಹೊರಹೋಗಲು ತವಕಿರುತ್ತಿರುವವರ ಮನವೊಲಿಸುವಿಕೆ. ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ. ದೇವೇಗೌಡ, ಅರಸೀಕೆರೆಯ ಶಿವಲಿಂಗೇಗೌಡ, ಅರಕಲಗೂಡಿನ ಎ.ಟಿ. ರಾಮಸ್ವಾಮಿ, ಗುಬ್ಬಿಯ ಎಸ್.ಆರ್.
ಶ್ರೀನಿವಾಸ್, ಕಡೂರಿನ ವೈಎಸ್‌ವಿ ದತ್ತ ಅವರೆಲ್ಲ ಜೆಡಿಎಸ್ ನಲ್ಲಿನ ಬೆಳವಣಿಗೆಗಳಿಂದ ಬೇಸರಗೊಂಡು ಕೆಲವೇ ಕಾಲದ
ಹಿಂದೆ ಪಕ್ಷದಿಂದ ಹೊರನಡೆಯಲು ತಯಾರಿ ನಡೆಸಿದ್ದರು.

ಈ ಪೈಕಿ ದೇವೇಗೌಡ, ರಾಮಸ್ವಾಮಿ, ಶಿವಲಿಂಗೇಗೌಡರಿಗೆ ಆತ್ಮಾಭಿಮಾನದ ಪ್ರಶ್ನೆ ಕಾಡಿತ್ತು. ಪಕ್ಷದಲ್ಲಿ ತಮಗೆ ಗೌರವವಿಲ್ಲ, ಹೀಗಾಗಿ ಅಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂಬ ಲೆಕ್ಕಾಚಾರವಿತ್ತು. ಆದರೆ, ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಅತೃಪ್ತರ ಪೈಕಿ ಜಿ.ಟಿ. ದೇವೇಗೌಡರ ಮನೆಗೆ ಮಾಜಿ ಪ್ರಧಾನಿ ದೇವೇಗೌಡರೇ ಹೋದಾಗ ಪರಿಸ್ಥಿತಿ
ಉಲ್ಟಾ ಆಯಿತು. ‘ದೊಡ್ಡ’ ಗೌಡರನ್ನು ಕಂಡು ಕಣ್ಣೀರಿಟ್ಟ ‘ಚಿಕ್ಕ’ ಗೌಡರು, ‘ಯಾವ ಕಾರಣಕ್ಕೂ ನಾನು ಪಕ್ಷ ತೊರೆಯುವುದಿಲ್ಲ; ಕುಮಾರಸ್ವಾಮಿಯವರನ್ನು ಮರಳಿ ಸಿಎಂ ಮಾಡದೆ ವಿರಮಿಸುವ ಪ್ರಶ್ನೆಯೇ ಇಲ್ಲ’ ಎಂದರು!

ಇದೇ ರೀತಿ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್‌ರನ್ನು ಕಳೆದ ವಾರ ಭೇಟಿಯಾದ ಕುಮಾರಸ್ವಾಮಿಯವರ ಪರಮಾಪ್ತ ಶಾಸಕ ಸಾ.ರಾ. ಮಹೇಶ್, ‘ಆಗಿದ್ದೆಲ್ಲ ಮರೆತುಬಿಡಿ. ಪಕ್ಷದಲ್ಲೇ ಉಳಿದು ಪುನಃ ಮಂತ್ರಿಯಾಗಲು ತಯಾರಾಗಿ’ ಎಂಬ ಕುಮಾರಸ್ವಾಮಿಯವರ ಸಂದೇಶವನ್ನು ತಲುಪಿಸಿದ್ದಾರೆ. ಫಲಿತಾಂಶ ಏನೇ ಆಗಲಿ, ಆದರೆ ಪ್ರಯತ್ನಿಸದೆ ಇರಬಾರದು ಎಂಬುದು ಕುಮಾರಸ್ವಾಮಿ ಯೋಚನೆ.

ಉಳಿದಂತೆ ಎ.ಟಿ. ರಾಮಸ್ವಾಮಿ ಮತ್ತು ಶಿವಲಿಂಗೇಗೌಡರ ಜತೆ ಖುದ್ದು ಮಾತನಾಡಿರುವ ಕುಮಾರಸ್ವಾಮಿ, ‘ಈ ಪಕ್ಷದಲ್ಲಿ ಹಿರಿಯರಾಗಿರುವ ನಿಮಗೆ ಅಗೌರವವಾಗುವಂಥದ್ದೇನೂ ಇಲ್ಲಿ ನಡೆಯುವುದಿಲ್ಲ. ಸರಕಾರ ಇದ್ದಾಗಲೂ ನಿಮಗೆ ಗೌರವ ನೀಡಿದ್ದೇವೆ, ಮುಂದೆಯೂ ನೀಡುತ್ತೇವೆ’ ಎಂದಿದ್ದಾರಂತೆ. ಶಿವಲಿಂಗೇಗೌಡರು ಒಂದು ಸಂದರ್ಭದಲ್ಲಿ, ‘ನಾನು 2018ರಲ್ಲಿ ಮರಳಿ ಗೆಲ್ಲಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ಕ್ಷೇತ್ರಕ್ಕೆ ಅವರು ನೂರಾರು ಕೋಟಿ ಅನುದಾನ ನೀಡಿದ ಪರಿಣಾಮವಾಗಿ ನನಗೆ ಅನುಕೂಲವಾಯಿತು’ ಎಂದು ತುಂಬಿದ ವಿಧಾನಸಭೆಯಲ್ಲಿ ಹೇಳಿದ್ದರು. ಈ ಮಾತು ಜೆಡಿಎಸ್ ನಾಯಕರನ್ನು ಕೆರಳಿಸಿದ್ದಲ್ಲದೆ, ಶಿವಲಿಂಗೇಗೌಡರು ಜೆಡಿಎಸ್ ನಿಂದ ಹೊರಹೋಗಲು ತಯಾರಿ ಮಾಡಿಕೊಳ್ಳಬೇಕಾದ ವಾತಾವರಣ ಕಾಲಕ್ರಮೇಣ ನಿರ್ಮಾಣವಾಗಿತ್ತು.

ಆದರೆ ಇತ್ತೀಚೆಗೆ ಈ ಕುರಿತೂ ಮಾತನಾಡಿದ ಕುಮಾರಸ್ವಾಮಿ, ‘ನೀವು ಸಿದ್ದರಾಮಯ್ಯರನ್ನು ಹೊಗಳಿದ್ದರಲ್ಲಿ ತಪ್ಪೇನಿಲ್ಲ. ಶಕ್ತಿ
ತುಂಬಿದವರಿಗೆ ನಾಲ್ಕು ಒಳ್ಳೆಯ ಮಾತು ಹೇಳಬೇಕು ಶಿವಲಿಂಗಣ್ಣ, ನೀವು ಹೇಳಿದ್ದೀರಿ. ಅದರಲ್ಲಿ ತಪ್ಪೇನಿದೆ?’ ಅಂದರಂತೆ. ಇದಾದ ನಂತರ ಶಿವಲಿಂಗೇಗೌಡರ ಧ್ವನಿ ಬದಲಾಗಿದೆ! ಮುಂಚೆಯೆಲ್ಲ ‘ಜೆಡಿಎಸ್ ಬಗ್ಗೆ ನನಗೆ ಅಸಮಾಧಾನವಿದೆ’ ಅಂತ ಹೇಳುತ್ತಿದ್ದವರು ಈಗ, ‘ಒಂದು ಪಕ್ಷದಲ್ಲಿದ್ದಾಗ ಅಸಮಾಧಾನ ಸಹಜ.

ಅದನ್ನು ಹೇಳಿದರೆ ನೀವು ದೊಡ್ಡಮಟ್ಟಕ್ಕೆ ಬೆಳೆಸಿಬಿಟ್ಟಿರಿ’ ಎಂದು ಮಾಧ್ಯಮಗಳ ಮೇಲೇ ಪಿಷ್ಟೆ ಇಡತೊಡಗಿದ್ದಾರೆ. ಇದೇ ರೀತಿ, ದಶಕಗಳ ಕಾಲ ಎಚ್.ಡಿ. ದೇವೇಗೌಡರ ಬಲಗೈ ಬಂಟರಂತಿದ್ದ ಕಡೂರಿನ ವೈಎಸ್‌ವಿ ದತ್ತ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಕಡೆ ಹೋಗಲು ಇಂಡೆಂಟು ಹಾಕಿ ಕುಳಿತಿದ್ದರು. ಆದರೆ ಅಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ
ಭವಿಷ್ಯದ ಮುಖ್ಯಮಂತ್ರಿಗಿರಿಗಾಗಿ ನಡೆಯುತ್ತಿರುವ ಫೈಟು ದತ್ತ ಅವರಿಗೆ ತಲೆನೋವು ತಂದಿದೆ. ಅಂದಹಾಗೆ, ದತ್ತ ಅವರು ಸಿದ್ದರಾಮಯ್ಯರ ಮೂಲಕ ಕಾಂಗ್ರೆಸ್ ಪ್ರವೇಶ ಬಯಸುತ್ತಿದ್ದರು. ಇದನ್ನು ಗ್ರಹಿಸಿದ್ದ ಡಿಕೆಶಿ, ದತ್ತ ಅವರಿಗೆ ಅಡ್ಡಗಾಲು ಹಾಕುತ್ತಿದ್ದರು. ಕೈಪಾಳಯದಲ್ಲಿನ ಈ ಗೊಂದಲ ಮುಂದೆ ತಮ್ಮ ತಲೆಮೇಲೆ ಕಲ್ಲುಹಾಕಬಹುದು ಎಂಬ ಚಿಂತೆಯಲ್ಲಿರುವ ದತ್ತ ಅವರಲ್ಲಿ ‘ಗೌಡರ ಶಿಷ್ಯನಾಗಿರುವುದೇ ಬೆಟರ್’ ಎಂಬ ಭಾವನೆ ಮೂಡಿದೆಯಂತೆ.

ಒಟ್ಟಿನಲ್ಲಿ, ಕುಮಾರಸ್ವಾಮಿಯವರ ಟೆಕ್ನಿಕ್ಕು ಜೆಡಿಎಸ್ ಪಾಳಯದ ಬಿರುಕಿಗೆ ‘ಫೆವಿಕಾಲ್’ ಹಾಕುತ್ತಿರುವುದಂತೂ ನಿಜ ಮತ್ತು ಈ ‘ಅಂಟು’ ವರ್ಕ್ ಔಟ್ ಆಗುವಂತೆ ಕಾಣುತ್ತಿರುವುದೂ ನಿಜ. ಅಂತಿಮವಾಗಿ ಇದೆಷ್ಟು ಯಶಸ್ವಿಯಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆಯಾದರೂ, ಮರಳಿ ಸಿಎಂ ಆಗಲು ತವಕಿಸುತ್ತಿರುವ ಕುಮಾರಸ್ವಾಮಿ ಗಟ್ಟಿಹೆಜ್ಜೆ ಗಳನ್ನು ಇಡುತ್ತಿರುವುದು ಮಾತ್ರ ನಿಜ.