Sunday, 5th January 2025

ಮತದಾರರ ಪಟ್ಟಿ ಪರಿಷ್ಕರಣೆ: ಶಾಶ್ವತ ಸಿಬ್ಬಂದಿ ನೇಮಿಸಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಮಾತೃ ಇಲಾಖೆಯ ಕರ್ತವ್ಯ ಹಾಗೂ ಮತಗಟ್ಟೆ ಅಧಿಕಾರಿ ಕರ್ತವ್ಯದ ನಡುವೆ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ.

ವರ್ಷಕ್ಕೆ ನಾಲ್ಕು ತಿಂಗಳುಗಳ ಕಾಲ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆ ಯುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ದೋಷಮುಕ್ತ ಮತದಾರರ ಪಟ್ಟಿಯ ನಿರ್ವಹಣೆಯನ್ನು ಏಕಕಾಲದಲ್ಲಿ ಶಿಕ್ಷಕರು ಹೇಗೆ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಈಗಂತೂ ಶಿಕ್ಷಣ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳನ್ನೂ ಚುನಾವಣಾ ಕಾರ್ಯಕ್ಕೆ ನೇಮಿಸಲಾಗು ತ್ತಿದೆ.

ಇದರಿಂದ ಕೆಲವು ಶಾಲೆಗಳಲ್ಲಿ ಶಿಕ್ಷಕರು ಮತ್ತು ಮುಖ್ಯಸ್ಥರ ನಡುವಿನ ಮನಸ್ತಾಪಗಳೂ ಉಂಟಾಗುತ್ತಿವೆ. ಇದರಿಂದ ಶಾಲೆಯಲ್ಲಿ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಲ್ಲದೆ ಶಾಲಾ ವಾತಾವರಣವೂ ಹಾಳಾಗುತ್ತಿದೆ. ಇನ್ನು ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದ ಮೇಲ್ವಿಚಾರಕರನ್ನಾಗಿ ನಗರ ಸ್ಥಳೀಯ ಸಂಸ್ಥೆ ಹಾಗೂ ಕಂದಾಯ ಇಲಾಖೆಯ ನೌಕರರನ್ನು ನೇಮಿಸಲಾಗಿದೆ. ಸಾರ್ವಜನಿಕ ಸೇವೆಗಳು ಇವುಗಳ ವ್ಯಾಪ್ತಿಗೆ ಹೆಚ್ಚಾಗಿ ಒಳಪಡುತ್ತವೆ. ಇಲ್ಲಿಯ ಸಿಬ್ಬಂದಿಗೆ ಕಾರ್ಯದ ಒತ್ತಡ ಹೆಚ್ಚಾಗಿರು ತ್ತದೆ.

ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ ಎಂಬ ಕಾರಣಕ್ಕಾಗಿ ಈಗಾಗಲೇ ಜನರು ಸಾಕಷ್ಟು ಕಚೇರಿಗಳಿಗೆ ಅಲೆಯುವಂತಾಗಿದೆ.
ಚುನಾವಣೆ ಸಮೀಪಿಸಿದರೆ ಸಾಕು, ಯಾವೊಬ್ಬ ಅಧಿಕಾರಿಗಳೂ ಕಚೇರಿಯಲ್ಲಿ ಜನರಿಗೆ ಸಿಗುವುದಿಲ್ಲ ಎಂಬ ದೂರುಗಳು ಹೆಚ್ಚಾಗಿವೆ.

ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿಯಾಗುತ್ತದೆ. ‘ಜನರ ಮನೆ ಬಾಗಿಲಿಗೆ ಸರಕಾರ’ ಎಂಬುದೇ ಬೊಮ್ಮಾಯಿ ಸರ ಕಾರದ ಟ್ಯಾಗ್‌ಲೈನ್ ಆಗಿರುವುದರಿಂದ, ಸರಕಾರದ ಮೂಲ ಆಶಯಕ್ಕೇ ಧಕ್ಕೆಯಾಗುತ್ತದೆ. ಆದ್ದರಿಂದ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಶಾಶ್ವತವಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು  ಪ್ರತ್ಯೇಕ ವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ನಿರುದ್ಯೋಗದ ಸಮಸ್ಯೆಗೂ ಪರಿಹಾರ ಸಿಗುತ್ತದೆ, ಅಸಲಿ ಮತದಾರರ ಪಟ್ಟಿಯೂ ದೊರೆಯುತ್ತದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೂಡ ಸಾಧ್ಯವಾಗುತ್ತದೆ.