Sunday, 5th January 2025

ಬಿಬಿಎಂಪಿ ಚುನಾವಣೆಗೆ ಇನ್ನೆಷ್ಟು ಕಾಲಾವಕಾಶ ಬೇಕು?

ರಾಜಧಾನಿ ನಗರದ ಆಡಳಿತವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಇರುವ ಸಂಸ್ಥೆಯೇ ಬೃಹತ್ ಬೆಂಗಳೂರು ಮಹಾನಗರಪಾಲಿಕೆ. ಆದರೆ ಬಿಬಿಎಂಪಿಗೆ ಚುನಾವಣೆಯೇ ನಡೆಯದೆ ಎರಡು ವರ್ಷಗಳೇ ಉರುಳಿಹೋಗಿವೆ.

2020ರ ಸೆಪ್ಟೆಂಬರ್‌ನಲ್ಲೇ ಬಿಬಿಎಂಪಿಯ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿದಿತ್ತು. ಆಗ ಕೋವಿಡ್ ಉತ್ತುಂಗ  ದಲ್ಲಿದ್ದ ಕಾಲ. ಹಾಗಾಗಿ ಏನೋ ನೆಪ ಹೇಳಿ ಸರಕಾರ ಬಿಬಿಎಂಪಿ ಚುನಾವಣೆ ನಡೆಸುವುದನ್ನು ಮುಂದಕ್ಕೆ ಹಾಕುತ್ತಲೇ ಬಂದಿದೆ. ಆದರೆ ಈಗ ಕೋವಿಡ್ ಕಾಟ ಕಡಿಮೆಯಾಗಿ ಜನಜೀವನ, ವ್ಯಾಪಾರ ವಹಿವಾಟು, ಆಡಳಿತ ಯಂತ್ರ ಎಲ್ಲವೂ ಸಹಜ ಸ್ಥಿತಿಗೆ ಮರಳಿವೆ. ಹಾಗಿದ್ದರೂ ಸರಕಾರಕ್ಕೆ ಬಿಬಿಎಂಪಿ ಚುನಾವಣೆ ನಡೆಸಲು ಮುಹೂರ್ತ ಕೂಡಿ ಬಂದಿಲ್ಲ.

ಅದಕ್ಕಿಂತಲೂ ಹೆಚ್ಚಾಗಿ ಮನಸ್ಸೇ ಇಲ್ಲ. ಇದಕ್ಕೆ ರಾಜಕೀಯ ಕಾರಣಗಳಿರಬಹುದು ಅಥವಾ ಆಯಕಟ್ಟಿನ ಸ್ಥಾನಗಳಲ್ಲಿ ಇರುವವರ ವೈಯಕ್ತಿಕ ಹಿತಾಸಕ್ತಿಗಳೇ ಇರಬಹುದು. ಏನೇ ಕಾರಣಗಳಿರಲಿ, ಸ್ಥಳೀಯಾಡಳಿತ ವ್ಯವಸ್ಥೆಯ ಸುಗಮ ಚಾಲನೆಗೆ ಚುನಾಯಿತ ಜನಪ್ರತಿನಿಧಿಗಳು ಇರಲೇಬೇಕು. ಆದರೆ ಚುನಾವಣೆ ಮಾತ್ರ ನಡೆಯುತ್ತಿಲ್ಲ.

ದೇಶದ ಅತ್ಯಂತ ಪ್ರಮುಖ ವಾಣಿಜ್ಯ ವಹಿವಾಟುಗಳನ್ನು ಹೊಂದಿರುವ, ಐಟಿ-ಬಿಟಿ ಉದ್ಯಮಗಳನ್ನು ಹೊಂದಿರುವ ಬೆಂಗಳೂರಿನ ಸ್ಥಳೀಯಾಡಳಿತ ಸಂಸ್ಥೆಗೆ ಅತಿ ಶೀಘ್ರ ಚುನಾವಣೆ ನಡೆಯಲೇಬೇಕಿದೆ. ಆ ಮೂಲಕ ಅಭಿವೃದ್ಧಿಯ ರಥಕ್ಕೆ ಸುಸ್ಥಿರ ವೇಗವನ್ನು ಕಲ್ಪಿಸಬೇಕಿದೆ. ಚುನಾವಣೆಯನ್ನು ವಿಳಂಬಿಸಲು ನೆಪ ಹುಡುಕುತ್ತಿರುವ ಸರಕಾರ, ರಾಜ್ಯ ಹೈಕೋರ್ಟಿನ ನಿರ್ದೇಶನ ಗಳನ್ನು ಜಾರಿಗೆ ತರಲು ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕು ಎನ್ನುತ್ತಿದೆ. ರಾಜ್ಯ ಸರಕಾರ ಹೊರಡಿಸಿದ್ದ ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಹೈಕೋರ್ಟಿನ ನ್ಯಾಯ ಮೂರ್ತಿ ಹೇಮಂತ್ ಚಂದನಗೌಡರ್ ಅವರ ನ್ಯಾಯಪೀಠ ರದ್ದುಗೊಳಿಸಿತ್ತು.

ರಾಜ್ಯ ಸರಕಾರ ನಿಗದಿಪಡಿಸಿದ ಮೀಸಲು ಪಟ್ಟಿಯು ಸುಪ್ರೀಂ ಕೋರ್ಟಿನ ನಿರ್ದೇಶನಗಳಿಗೆ ಅನುಗುಣವಾಗಿ ಇಲ್ಲ ಎಂದು ಹೈಕೋರ್ಟ್ ಆಗಲೇ ಹೇಳಿತ್ತು. ಮೀಸಲು ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನವೆಂಬರ್ ೩೦ರ ಮೊದಲು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು, ಮತ್ತು ಡಿಸೆಂಬರ್ ೩೧ರೊಳಗೆ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಸೂಚಿ ಸಿತ್ತು. ಆದರೆ ಆ ಕೆಲಸಗಳು ಯಾವುವೂ ಇದುವರೆಗೂ ಆಗಿರುವುದು ಗೋಚರಿಸುತ್ತಿಲ್ಲ.