Friday, 20th September 2024

ಇಂದಿಗೂ ಮಾತಾಡುವ, 33 ವರ್ಷಗಳ ಹಿಂದ ತಗದ ಆ ಫೋಟೋ !

ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್

ಗ್ರಹಾಂ ಮೋರಿಸ್ ಹೆಸರನ್ನು ಕೇಳಿದವರು ಅಪರೂಪ. ಆದರೆ ಆತ ತೆಗೆದ ಈ ಫೋಟೋ ನೋಡಿದರೆ, ಆತನ ಹೆಸರನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ಒಂದು ಫೋಟೋದಿಂದ ಆತ ಜನಮಾನಸದಲ್ಲಿ ಇನ್ನೂ ನೆಲೆಸಿದ್ದಾನೆ. ಮೂಲತಃ ಮೋರಿಸ್ ಫ್ರೀಲಾನ್‌ಸ್‌ ಫೋಟೋಗ್ರಾಫರ್. ಆತನಿಗೆ ಕ್ರಿಕೆಟ್ ಗೀಳು. 1987ರಲ್ಲಿ ಇಂಗ್ಲೆಂಡ್ – ಪಾಕಿಸ್ತಾನ ನಡುವೆ ಫೈಸಲಾಬಾದ್ ಕ್ರಿಕೆಟ್ ಪಂದ್ಯದ ಫೋಟೋ ತೆಗೆಯಲು ಆತ ಹೋಗಿದ್ದ.

ವೆಸ್‌ಟ್‌ ಇಂಡೀಸ್ ತಂಡದ ಮಾಲ್ಕಮ್ ಮಾರ್ಷಲ್ ಎಸೆತಕ್ಕೆ ಮೂಗು ಮುರಿದುಕೊಂಡ ನಂತರ, ಸಂಪೂರ್ಣ ಗುಣಮುಖನಾದ ಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್ ಮತ್ತು ಅಂಪೈರ್ ಶಕೂರ್ ರಾಣಾ ನಡುವೆ ನಡೆದ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ, ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ದುರದೃಷ್ಟಕರ ಎಂದೇ ಕುಖ್ಯಾತ.  ಈ ದೃಶ್ಯವನ್ನು ಸೆರೆ ಹಿಡಿದವನೇ ಗ್ರಹಾಂ ಮೋರಿಸ್. ಈ ದೃಶ್ಯವನ್ನು ಮೋರಿಸ್ ಬಿಟ್ಟರೆ ಬೇರೆ ಯಾವ ಫೋಟೋಗ್ರಾಫರ್ ಸಹ ಕ್ಲಿಕ್ಕಿಸಿರಲಿಲ್ಲ. ಒಂದು ರೀತಿಯಲ್ಲಿ, ಮೋರಿಸ್‌ಗಾಗಿ ಅವರಿಬ್ಬರೂ ಕಿತ್ತಾಡಿಕೊಂಡಿರಬಹುದಾ ಎಂದು ಸಂದೇಹ ಬರುವಂತಿತ್ತು ಆ ಫೋಟೋ.

ಇನ್ನೇನು ಕೆಲ ಕ್ಷಣಗಳಲ್ಲಿ ಆ ದಿನದ ಆಟ ಮುಗಿಯಬೇಕು ಎನ್ನುವಷ್ಟರಲ್ಲಿ ಎಲ್ಲಾ ಫೋಟೋಗ್ರಾಫರುಗಳು ತಮ್ಮ ಕೆಮರಾ ಕಿಟ್‌ನ್ನು ಪ್ಯಾಕ್ ಮಾಡುತ್ತಿದ್ದರು. ಮೋರಿಸ್ ಕಿವಿಗೆ ರೇಡಿಯೋ ರಿಸೀವರ್ ಹಾಕಿಕೊಂಡಿದ್ದ. ಗ್ಯಾಟಿಂಗ್ ಮತ್ತು ರಾಣಾ ನಡುವೆ
ಬಿಸಿ ಬಿಸಿ ಮಾತು ಕೇಳಿದ ಮೋರಿಸ್ ತಕ್ಷಣ ಜಾಗೃತನಾದ. ಸಾಯಂಕಾಲವಾದ್ದರಿಂದ ಸೂರ್ಯನ ಬೆಳಕು ತುಸು ಮಂದವಾಗಿತ್ತು. ಇಂಗ್ಲೆಂಡ್ ನಾಯಕ ಮತ್ತು ಅಂಪೈರ್ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಸ್ಪಷ್ಟವಾಗಿ
ಕಾಣುತ್ತಿತ್ತು. ಮೋರಿಸ್ ಆ ಕ್ಷಣಗಳನ್ನು ಪಟಪಟನೆ ಸೆರೆ ಹಿಡಿದ.

“You are a fucking cheat’ ಎಂದು ರಾಣಾ ಜೋರಾಗಿ ಕಿರುಚಿದ. ಆಗ ಮತ್ತಷ್ಟು ಉದ್ರಿಕ್ತನಾದ ಗ್ಯಾಟಿಂಗ್, ಅಂಪೈರ್ ಬಳಿ ಬಂದು ಕಿರುಚಾಡಿದ. ಒಂದು ಅಡಿಯಷ್ಟು ಸನಿಹದಲ್ಲಿ ನಿಂತು ಇಬ್ಬರೂ ಪರಸ್ಪರ ಬೈದುಕೊಂಡರು. ಇಂಗ್ಲೆಂಡ್ ತಂಡದ ಬಿಲ್ ಆತೇ, ತನ್ನ ನಾಯಕನ ಕೈ ಹಿಡಿದು ಎಳೆದು ಕರೆದುಕೊಂಡು ಬರದಿದ್ದರೆ, ಗ್ಯಾಟಿಂಗ್ ಅಂಪೈರ್‌ಗೆ ಹೊಡೆಯುತ್ತಿದ್ದ. ಆಗಬಾರದ ಘಟನೆ ಆಗುತ್ತಿತ್ತು. ಬ್ಯಾಟ್‌ಸ್‌‌ಮನ್ ಪೊಸಿಷನ್ ತೆಗೆದುಕೊಂಡ ನಂತರ, ಗ್ಯಾಟಿಂಗ್ ಫೀಲ್ಡರುಗಳ ಸ್ಥಾನವನ್ನು ಬದಲಿಸುವ ತಂತ್ರವನ್ನು ಅಂಪೈರ್ ರಾಣಾ ಪತ್ತೆ ಮಾಡಿದ್ದು ಈ ಎಲ್ಲಾ ರಾದ್ಧಾಾಂತಕ್ಕೆ ಕಾರಣವಾಗಿತ್ತು.

‘ಕ್ರಿಕೆಟ್ ಜಂಟಲ್ಮನ್‌ಗಳ ಆಟ. ನೀವು ಮಾಡುತ್ತಿರುವುದು ಕುತಂತ್ರ. ಇದು ಆಟದ ನಿಯಮಕ್ಕೆ ವಿರುದ್ಧವಾದುದು’ ಎಂದು ರಾಣಾ ಮುಖಕ್ಕೆ ಹೊಡೆದಂತೆ ಹೇಳಿದಾಗ, ಕುಪಿತನಾದ ಗ್ಯಾಟಿಂಗ್, ‘ಆಟದ ನಿಯಮದ ಬಗ್ಗೆ ಮಾತಾಡಬೇಡಿ. ಆ ನಿಯಮವನ್ನು ಮಾಡುವವರು ನಾವೇ’ ಎಂದು ಹೇಳಿದ್ದು ಕೇಳಿ ರಾಣಾ ಮತ್ತಷ್ಟು ವ್ಯಗ್ರನಾದ. ಇದು ಅವರಿಬ್ಬರ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು. ಗ್ಯಾಟಿಂಗ್ ಲಿಖಿತ ಕ್ಷಮಾಪಣೆ ಕೋರುವ ತನಕ ತಾನು ಅಂಪೈರಿಂಗ್ ಮಾಡುವುದಿಲ್ಲ ಎಂದು ರಾಣಾ ಹಠ ಹಿಡಿದ.

ತಾನು ಯಾವ ತಪ್ಪನ್ನು ಮಾಡದ್ದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಗ್ಯಾಟಿಂಗ್ ಕೊಡ ಹಠ ಹಿಡಿದ. ಮರುದಿನ ಇಂಗ್ಲೆಂಡ್ ಆಟಗಾರರೆಲ್ಲ ಮೈದಾನಕ್ಕೆ ಬಂದರು. ಆದರೆ ಪಾಕಿಸ್ತಾನಿ ಅಂಪೈರುಗಳು ಬರಲೇ ಇಲ್ಲ. ಕೆಲ ಹೊತ್ತು
ಅಂಪೈರು ಗಳಿಗೆ ಕಾದು, ಆಟಗಾರರು ಪೆವಿಲಿಯನ್‌ಗೆ ಮರಳಿದರು. ಇಡೀ ದಿನವಾದರೂ ಆಟ ನಡೆಯಲೇ ಇಲ್ಲ.
ಒಂದು ದಿನದ ನಂತರ ಮೋರಿಸ್ ತೆಗೆದ, ಗ್ಯಾಟಿಂಗ್ ಮತ್ತು ರಾಣಾ ಕಿತ್ತಾಡುವ ಫೋಟೋ ಕ್ರಿಕೆಟ್ ಆಡುವ ದೇಶಗಳ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಜೋರಾಗಿ ಪ್ರಕಟವಾಗಿತ್ತು. ಆತ ಬಹಳ ದೊಡ್ಡ ಮೊತ್ತಕ್ಕೆ ಈ ಫೋಟೋವನ್ನು ಮಾರಾಟ ಮಾಡಿದ್ದ. ಬ್ರಿಟಿಷ್ ರಾಜತಾಂತ್ರಿಕರ ಸಲಹೆ ಮೇರೆಗೆ, ಎರಡೂ ದೇಶಗಳ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ತುರ್ತು ಸಭೆ ಮಾಡಿ, ಈ ವಿವಾದವನ್ನು ಇತ್ಯರ್ಥ ಪಡಿಸಲು ನಿರ್ಧರಿಸಿದರು. ಈ ವಿವಾದವನ್ನು ಬೆಳೆಯಲು ಬಿಟ್ಟರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಾಲ್ಕನೇ ದಿನದ ಆಟ ಆರಂಭವಾಗುವುದಕ್ಕೆೆ ಸ್ವಲ್ಪ ಹೊತ್ತಿನ ಮೊದಲು, ಗ್ಯಾಟಿಂಗ್ ತಪ್ಪಾಯಿತೆಂದು ಬರೆದುಕೊಟ್ಟರು. ಈ
ಪತ್ರವನ್ನು ನಾನು ಯಾವತ್ತೂ ನನ್ನ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುತ್ತೇನೆ ಮತ್ತು ಆಗಾಗ ನೋಡುತ್ತೇನೆ ಎಂದು
ಹೇಳಿದರು. ಈ ಘಟನೆಯಿಂದ ಮುಖ ಕಳೆದುಕೊಂಡ ಗ್ಯಾಟಿಂಗ್ ನಾಯಕ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಹೇಳಿದರು. ಆದರೆ ಇತರ ಆಟಗಾರರ ಸಲಹೆ ಮೇರೆಗೆ ಮುಂದುವರಿದರು.

ಇಲ್ಲಿಗೆ ಎಲ್ಲವೂ ಅಂತ್ಯವಾಯಿತು ಎಂದು ಅಂದುಕೊಳ್ಳುತ್ತಿರುವಾಗ, ಟೆಸ್‌ಟ್‌ ಸರಣಿ ಮುಗಿಯುತ್ತಿದ್ದಂತೆ, ಇಂಗ್ಲೆೆಂಡ್ ಕ್ರಿಕೆಟ್
ಮಂಡಳಿ ತೀವ್ರ ಒತ್ತಡದಲ್ಲಿ ಆಟವಾಡಿದ ಪ್ರತಿ ಆಟಗಾರರಿಗೆ ತಲಾ ಒಂದು ಸಾವಿರ ಪೌಂಡ್ ಬೋನಸ್ ಘೋಷಿಸಿತು.
ಇದನ್ನು ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ಖಂಡಿಸಿತು. ಇದಾಗಿ ಒಂದು ವರ್ಷದ ನಂತರ, ವೆಸ್‌ಟ್‌ ಇಂಡೀಸ್ ತಂಡ ಇಂಗ್ಲೆೆಂಡ್ ಪ್ರವಾಸದಲ್ಲಿದ್ದಾಗ, ಹೋಟೆಲ್ ರೂಮಿನಲ್ಲಿ ಬಾರ್ ಗರ್ಲ್ ಜತೆಗಿದ್ದ ಎಂಬ ಕಾರಣಕ್ಕೆೆ ಗ್ಯಾಟಿಂಗ್‌ನನ್ನು ತಂಡದಿಂದ
ವಜಾ ಮಾಡಲಾಯಿತು. ಆತ ಮುಯ್ಯಿ ತೀರಿಸಿಕೊಳ್ಳಲು ಬಂಡುಕೋರ ಆಟಗಾರರನ್ನೆೆಲ್ಲಾ ಸೇರಿಸಿ ದಕ್ಷಿಣ ಆಫ್ರಿಕಾ
ಪ್ರವಾಸ ಮಾಡಿ ಅಲ್ಲಿ ಕ್ರಿಕೆಟ್ ಆಡಿ ಬಂದ. ಕ್ರಿಕೆಟ್ ಲೇಖಕ ವೇದಂ ಜೈಶಂಕರ ಈ ಘಟನೆಯನ್ನು ತಮ್ಮ ಹೊಸ ಪುಸ್ತಕದಲ್ಲಿ
ಪ್ರಸ್ತಾಪಿಸಿದ್ದಾರೆ. ಆದರೆ ಮೋರಿಸ್ ತೆಗೆದ ಆ ಫೋಟೋ ನೋಡಿದರೆ, ಕ್ರಿಕೆಟ್ ಚರಿತ್ರೆೆಯ ಸುರುಳಿ ಬಿಚ್ಚಿಕೊಳ್ಳುತ್ತದೆ.
ಮೂವತ್ಮೂರು ವರ್ಷಗಳ ಹಿಂದೆ ತೆಗೆದ ಒಂದು ಫೋಟೋ ಇಂದಿಗೂ ಮಾತಾಡುತ್ತದೆ. ತರೂರೋಸಾರಸ್ !
ತಿರುವನಂತಪುರದ ಕಾಂಗ್ರೆೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಅವರಿಗೂ, ಪದಗಳಿಗೂ ಭಾರಿ ಭಾರಿ ಪ್ರೀತಿ. ಯಾರೂ
ಅಷ್ಟಾಗಿ ಬಳಸದ, ಪದಕೋಶದಲ್ಲಿಯೇ ಬೆಚ್ಚಗಿರುವ ಅಪರೂಪದ ಪದಗಳನ್ನು ಬಳಸಿ, ಅವರು ಅವುಗಳನ್ನು
ಚಲಾವಣೆಗೆ ತರುತ್ತಾರೆ. ಯಾವುದಾದರೂ ಪದವನ್ನು ತರೂರ್ ಬಳಸಿದರೆ ಸಾಕು, ಅದು ತಕ್ಷಣ ಹಠಾತ್ ಚಲಾವಣೆಗೂ ಬಂದು
ಬಿಡುತ್ತದೆ. ಹೀಗಾಗಿ ಶಶಿ ತರೂರ್‌ಗೆ ಪದ ಮಾಂತ್ರಿಕ (Wizard of Words) ಎಂಬ ಬಿರುದು ಬಂದಿದೆ.
ತರೂರ್ ಅವರ ತಂದೆಯವರಿಗೂ ಪದಗಳೆಂದರೆ ಇಷ್ಟವಾಗಿತ್ತಂತೆ. ಅವರೇ ಮಗನಲ್ಲಿ ಪದಪ್ರೀತಿಯನ್ನು ಬೆಳೆಸಿದವರು. ಯಾರಿಗೆ ಹೆಚ್ಚು ಹೆಚ್ಚು ಪದಗಳ ಅರ್ಥ ಮತ್ತು ಬಳಕೆ ಗೊತ್ತಿದೆಯೋ, ಅವರು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಲ್ಲರು ಎಂದು ಅವರ ತಂದೆ ಹೇಳುತ್ತಿದ್ದರಂತೆ. ಅಂದು ತಂದೆಯವರು ಹತ್ತಿಸಿದ ಪದ ಗೀಳು ಅವರಲ್ಲಿ ಈಗಲೂ ಮುಂದುವರಿದುಕೊಂಡು ಬಂದಿದೆ.

ತರೂರ್ ಆಗಾಗ ತಮ್ಮ ಪದಪ್ರೀತಿ ಅಥವಾ ಪಾಂಡಿತ್ಯವನ್ನು ಪ್ರದರ್ಶಿಸುತ್ತಾರೆ. ಅವರು ಯಾವ ಹೊಸ ಪದ ಉದುರಿಸಬಹುದು ಎಂದು ಆಸಕ್ತಿಯಿಂದ ಕಾತರಿಸುವ ದೊಡ್ಡ ಗುಂಪು ಇಂದು ಬೆಳೆದಿದೆ. ಅದು ಅವರನ್ನು ಹಿಂಬಾಲಿಸುತ್ತದೆ. ತರೂರ್ ಬಳಸಿದ ಪದ ಮತ್ತು ಅದರ ಬಳಕೆ ಬಗ್ಗೆೆ ಚರ್ಚೆಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತವೆ. ಸುಮಾರು ಹತ್ತು ವರ್ಷಗಳ ಹಿಂದೆ, ಅವರು ಬಳಸಿದ cattle class ಪದ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು.
ಕಾಂಗ್ರೆೆಸ್ಸಿನ ರಾಷ್ಟ್ರೀಯ ವಕ್ತಾರರು ಇದಕ್ಕಾಗಿ ಸ್ಪಷ್ಟನೆ ನೀಡಬೇಕಾಯಿತು. ಅದಾದ ನಂತರ, ಅವರು ಹೊಸ ಹೊಸ
ಪದ ಬಳಸಿದಾಗಲೆಲ್ಲ ಒಂದಷ್ಟು ಚರ್ಚೆಯಾಗದೇ ಹೋಗುವುದಿಲ್ಲ.
ಇತ್ತೀಚೆಗೆ ತರೂರ್, ತಾವು ಬಳಸಿದ ಐವತ್ತಮೂರು ಅಪರೂಪ ಪದಗಳು, ಅವುಗಳ ಬಳಕೆ ಮತ್ತು ಅರ್ಥಗಳ ವಿವರಣೆಗಳನ್ನೆೆಲ್ಲ ಸೇರಿಸಿ Tharoorosaurus ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇಂಗ್ಲಿಷ್ ವರ್ಣಮಾಲೆಯ ಎಲ್ಲಾ ಅಕ್ಷರಗಳ ಆರಂಭಿಕ ಪದವನ್ನು ಬಳಸಿ, 53 ಪದಗಳನ್ನು ಆರಿಸಲಾಗಿದೆ. ಆ ಪದಗಳ ಅರ್ಥ, ಬಳಕೆ, ವ್ಯುತ್ಪತ್ತಿ, ಇತಿಹಾಸ, ಮಹತ್ವ, ಖ್ಯಾತ ಲೇಖಕರು ಅವುಗಳನ್ನು ಬಳಸಿದ ರೀತಿಯನ್ನೆೆಲ್ಲ ವಿವರಿಸಿ, ಒಂದು ಪದವನ್ನು ಒಂದು ವ್ಯಕ್ತಿಯಂತೆ ಪರಿಚಯಿಸಿರುವ ರೀತಿ ಅನನ್ಯ.
ಉದಾಹರಣೆಗೆ, Claque ಎಂಬ ಪದ. ಇದರ ಅರ್ಥ ಭಟ್ಟಂಗಿಗಳ ಗುಂಪು ಎಂದರ್ಥ. ಅ A group of people hired to applaud.. ಈ ಪದದ ಬಗ್ಗೆೆ ತರೂರ್ ವಿವರಿಸುತ್ತಾರೆ – ಎಲ್ಲಾ ರಾಜಕೀಯ ಪಕ್ಷಗಳೂ ಈ ಗುಂಪನ್ನು ಹೊಂದಿರುತ್ತವೆ. ಇವರು ಬಾಡಿಗೆ  ಹೊಗಳುಭಟರು. ಇವರದು ‘ಕಾಸಿಗೆ ತಕ್ಕ ಕೇಕೆ’. ಈ ಪದ ಯಾವಾಗ ಹುಟ್ಟಿಕೊಂಡಿತು ಎಂದು ಹೇಳುವುದು ಕಷ್ಟ. ಆದರೆ ಹತ್ತೊೊಂಬತ್ತನೇ ಶತಮಾನದ  ಮಧ್ಯಭಾಗದಲ್ಲಿ ಈ ಪದದ ಬಳಕೆ ಹೆಚ್ಚಾಯಿತು.

ಇದು ಮೂಲತಃ ಫ್ರೆೆಂಚ್ ಪದ. ಫ್ರೆೆಂಚ್ ನಾಟಕಗಳು ಜನಪ್ರಿಯವಾದಾಗ, ನಾಯಕ ಮತ್ತು ಪೋಷಕ ಪಾತ್ರಗಳ ನಂತರ ಮಧ್ಯೆೆ ಪೈಪೋಟಿ ಜಾಸ್ತಿಯಾದಾಗ, ಹಣ ಕೊಟ್ಟು  ಚಪ್ಪಾಳೆ ಹೊಡೆಯುವ ಪ್ರೇಕ್ಷಕರನ್ನು ಕರೆ ತರುವ ಸಂಪ್ರದಾಯ ಹೆಚ್ಚಾಯಿತು. ತಮಗೆ ಹಣ ಕೊಟ್ಟ ನಟರು ರಂಗಸ್ಥಳಕ್ಕೆೆ ಬರುತ್ತಿರುವಂತೆ ಅವರು ಜೋರಾಗಿ ಚಪ್ಪಾಳೆ ಹೊಡೆಯುತ್ತಿದ್ದರು.

ರೋಮನ್ ರಾಜ ನೀರೋ ಈ ಬಾಡಿಗೆ ಕರತಾಡತನ ಪ್ರಿಯರನ್ನು ಪೂರ್ಣಾವಧಿ ಕೆಲಸಕ್ಕೆೆ ತೊಡಗಿಸಿಕೊಂಡ. ಒಂದು
ಕಾಲಕ್ಕೆೆ ಅವನ ಆಸ್ಥಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ಈ ಭಟ್ಟಂಗಿಗಳಿದ್ದರು. ಪ್ಯಾರಿಸ್‌ನಲ್ಲಿ ಈ ಭಟ್ಟಂಗಿಗಳನ್ನು
ಪೂರೈಸುವ ಏಜೆನ್ಸಿಗಳು ಹುಟ್ಟಿಕೊಂಡವು. ನಾಟಕ ಮತ್ತು ಒಪೆರಾಗಳಿಗೆ ಪುಕ್ಕಟೆ ಟಿಕೆಟ್ ಸಿಗುತ್ತಿದ್ದುದರಿಂದ ಈ ಭಟ್ಟಂಗಿಗಳ
ಸಂಖ್ಯೆೆ ಜಾಸ್ತಿಯಾಯಿತು. ಈ ಬಾಡಿಗೆ ಪ್ರೇಕ್ಷಕರು ರಂಗಸ್ಥಳದಲ್ಲಿನ ಪಾತ್ರಗಳ ಭಾವನೆಗಳಿಗೆ ಪೂರಕವಾಗಿ ಪ್ರತಿಕ್ರಿಯಿಸುತ್ತಿದುದರಿಂದ, ಇಡೀ ಸಭಾಂಗಣದಲ್ಲಿ ಒಂದು ಮೂಡನ್ನು ಸೃಷ್ಟಿಸುತ್ತಿದ್ದರು. ಇವರು ಇತರ ಪ್ರೇಕ್ಷಕರ ಮೇಲೆ
ಪ್ರಭಾವ ಬೀರುತ್ತಿದ್ದರು.  clap ಪದದಿಂದ claque ಪದ ಹುಟ್ಟುಕೊಂಡಿರಬಹುದು. ಇಪ್ಪತ್ತನೇ ಶತಮಾನದ ಆರಂಭದಲ್ಲಿ
ಈ ಭಟ್ಟಂಗಿಗಳ ಪ್ರಭಾವ ಕಡಿಮೆಯಾಯಿತು. ಹಾಗಂತ ಇವರು ನಶಿಸಿ ಹೋಗುವಂಥವರಲ್ಲ. ಈ ಸಂತತಿ ಯಾವತ್ತೂ ಇರುತ್ತದೆ.
ಇವರು ಎಲ್ಲರಿಗೂ ಬೇಕು.

ಈ ಪುಸ್ತಕದಲ್ಲಿ ತಮ್ಮ ಜನಪ್ರಿಯ ಪದವಾದ Agathokakological, Farrago,Floccinaucini hilipilification, Kerfuffle  ಮುಂತಾದ ಪದಗಳ ಬಗ್ಗೆೆಯೂ ತರೂರ್ ವಿವರಿಸಿದ್ದಾರೆ. ದೀರ್ಘವಾದ ಪದಗಳ ಬಗ್ಗೆೆ ಕೆಲವರಿಗೆ ಒಂಥರಾ ಭಯ ಇರುತ್ತದಂತೆ. ಸರಿಯಾಗಿ ಉಚ್ಚಾರ ಮಾಡಲು ಆಗದಿದ್ದರೆ ಕೇಳಿಸಿಕೊಂಡವರು ನಗಬಹುದು ಎಂದು ಒಳಗೊಳಗೇ ಹಿಂಜರಿಕೆ ಅನುಭವಿಸುತ್ತಿರುತ್ತಾರಂತೆ. ಅಂಥ ಮನಸ್ಥಿತಿಗೆ ಅಥವಾ ಭಯಕ್ಕೆೆ Hippopotomonstroses quipedaliophobia ಅಂತಾರಂತೆ. ಪದಗಳ ಬಗ್ಗೆೆ ಪ್ರೀತಿ,  ಹುಚ್ಚು ಹತ್ತಿಸಿಕೊಂಡವರು ಈ ಪುಸ್ತಕವನ್ನು ಇಷ್ಟಪಡುತ್ತಾರೆ.
ಮುತ್ತು ಕೊಡುವುದು ತಪ್ಪಾ? ಇದೆಂಥ ಪ್ರಶ್ನೆೆ ಎಂದು ಕೇಳಬಹುದು. ಈ ಕರೋನಾ ಕಾಲದಲ್ಲಿ ಮುತ್ತು ಕೊಡುವ ಮುನ್ನ ಯೋಚಿಸಬೇಕಿದೆ. ಗಂಡ ಅಸ್ವಸ್ಥನಾದ. ಹೆಂಡತಿ ಕಾರ್ಪೊರೇಷನ್ ಅಧಿಕಾರಿಗಳಿಗೆ ಫೋನ್ ಮಾಡಿದಳು. ಕರೋನಾ ವಾರಿಯರ್ಸ್ ತಕ್ಷಣ ಧಾವಿಸಿದರು.

ಗಂಡನನ್ನು ಕೋವಿಡ್ ಸೆಂಟರ್‌ಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದರು. ಪಾಸಿಟಿವ್ ಇರುವುದು ಸಾಬೀತಾಯಿತು.
ತನಿಖೆ ಆರಂಭಿಸಿದರು. ‘ಕಳೆದ ಹತ್ತು ದಿನಗಳ ಅವಧಿಯಲ್ಲಿ ಯಾರನ್ನೆೆಲ್ಲಾ ಭೇಟಿಯಾಗಿದ್ದೀಯ, ಯಾರ ಸಂಪರ್ಕಕ್ಕೆೆ
ಬಂದಿದ್ದೀಯ’ ಎಂದೆಲ್ಲಾ ಪ್ರಶ್ನೆೆಗಳ ಸುರಿಮಳೆಗೈದರು. ಆತ ತಾನು ಮನೆಯಿಂದ ಹೊರಗೇ ಬಿದ್ದಿಲ್ಲ ಎಂದರೂ ಕೇಳಲಿಲ್ಲ.

ಬೇರೆಯವರ ಸಂಪರ್ಕಕ್ಕೆೆ ಬರದೇ ಕರೋನಾ ಬರಲು ಸಾಧ್ಯವೇ ಇಲ್ಲ ಎಂದು ವೈದ್ಯರು ವಾದಿಸಿದರು. ತನಿಖೆ ಮುಂದುವರಿ ಯಿತು. ಕೊನೆಗೆ ಗಂಡ ಬಾಯಿಬಿಟ್ಟ. ‘ಎರಡು ದಿನಗಳ ಹಿಂದೆ, ಹೆಂಡತಿಗೆ ಮುತ್ತುಕೊಟ್ಟಿದ್ದೆ.’ ಎಂದ. ವೈದ್ಯರು ಮತ್ತಷ್ಟು ಪ್ರಶ್ನೆೆಗಳನ್ನು ಹಾಕಿದರು. ಆಗ ಆತ, ‘ಹತ್ತು ದಿನಗಳ ಹಿಂದೆ, ಮನೆಯ ಕೆಲಸದವಳಿಗೆ ಮುತ್ತು ಕೊಟ್ಟಿದ್ದೆ’ ಎಂದ.

‘ಹಾಗಾದರೆ ಮನೆಗೆಲಸದವಳು ಮತ್ತು ಇವರ ಹೆಂಡತಿಯನ್ನು ಕರೆದುಕೊಂಡು ಬನ್ನಿ’ ಎಂದು ವೈದ್ಯರು ಸೂಚಿಸಿದರು. ಮನೆಗೆಲಸದವಳ ಹೆಸರನ್ನು ಕೇಳುತ್ತಿದ್ದಂತೆ, ಅವಳು ಈಗಾಗಲೇ ಅದೇ ಸೆಂಟರ್‌ನಲ್ಲಿ ಅಡ್ಮಿಟ್ ಆಗಿರುವುದು ಗೊತ್ತಾಯಿತು. ಹೆಂಡತಿಯನ್ನು ಕರೆ ತರಲು ಆಂಬುಲೆನ್‌ಸ್‌ ಹೋಯಿತು. ಆಗ ಗಂಡ ಹೇಳಿದ -‘ಅವಳಿಗೆ ಕರೋನಾ ಸೋಂಕಲು ಕಾರಣವೇನು ಎಂಬುದು ಈಗ ನಿಮಗೆ ಗೊತ್ತಾಗಿದೆಯಲ್ಲ. ದಯವಿಟ್ಟು ಅವಳಿಗೂ ನನಗೆ ಕೇಳಿದಂತೆ ಪ್ರಶ್ನೆೆಗಳನ್ನು ಹಾಕಿ ನನ್ನ ಮಾನ ಹರಾಜು ಹಾಕಬೇಡಿ’ ಮುತ್ತು ಕೊಡುವುದು ತಪ್ಪಲ್ಲ, ಆದರೆ ಯಾರಿಗೆ ಅನ್ನೋದು ಮುಖ್ಯ !

ಆಮೆ ಪರ್ಸ್ ಕಳೆದುಕೊಂಡಾಗ… ಆಮೆ ಅದರ ಪಾಡಿಗೆ ರಸ್ತೆೆ ದಾಟುತ್ತಿತ್ತು. ಅದನ್ನು ಹಿಂಬಾಲಿಸಿದ ಎರಡು ಬಸವನಹುಳುಗಳು (snail) ಆಮೆಯ ಪರ್ಸನ್ನು ಎಗರಿಸಿ ಪರಾರಿಯಾದವು. ಆಮೆ ‘ಕಳ್ಳ..ಕಳ್ಳ..’ ಎಂದು ಜೋರಾಗಿ ಕಿರುಚಿಕೊಂಡಿತು. ಇದನ್ನು ಕೇಳಿದ ಪೊಲೀಸರು ಸ್ಥಳಕ್ಕೆೆ ದೌಡಾಯಿಸಿದರು. ‘ಏನಾಯಿತು? ಯಾಕೆ ಕಿರುಚಿಕೊಂಡೆ?’ ಎಂದು ಪೊಲೀಸರು ಆಮೆಯನ್ನು ಕೇಳಿದರು. ಆಗ ಆಮೆ, ‘ಒಟ್ಟಾರೆ ಏನಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ಜೋರಾಗಿ ಓಡುತ್ತಾ ಬಂದ ಎರಡು ಬಸವನಹುಳುಗಳು ನನ್ನ ಪರ್ಸನ್ನು ಎಗರಿಸಿಕೊಂಡು ಓಡಿಹೋದವು. ಎಲ್ಲವೂ ಅರೆಕ್ಷಣದಲ್ಲಿ ನಡೆದು ಹೋಯಿತು’ ಎಂದು ನಡುಗುತ್ತಾ ಹೇಳಿತು.

ಆದರೆ ಪೊಲೀಸರು ಆಮೆಯನ್ನು ಬಂಧಿಸಿದರು. ಮರುದಿನ ಪತ್ರಿಕೆಯನ್ನು ನೋಡಿದಾಗಲೇ ಆಮೆಗೆ ತನ್ನನ್ನು ಬಂಧಿಸಿದ
ಕಾರಣ ಗೊತ್ತಾಗಿದ್ದು. ಪತ್ರಿಕೆಯಲ್ಲಿ ‘ಪೊಲೀಸರ ದಾರಿ ತಪ್ಪಿಸಿದ ಆಮೆ’ ಎಂಬ ಈ ಸುದ್ದಿ ಪ್ರಕಟವಾಗಿತ್ತು.