Monday, 6th January 2025

ಕಾಡಾನೆ ದಾಳಿಗೆ ಕಡಿವಾಣ ಬೀಳಲಿ

ಮಲೆನಾಡು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ಕಾಡಂಚಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಸರಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ೭೪ ಜನರು ಬಲಿಯಾಗಿದ್ದಾರೆ.

ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಜನರು ಬೇಡಿಕೆ ಇಡುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರಕಾರ ಹಾಗೂ ಅರಣ್ಯ ಇಲಾಖೆ ವಿಫಲವಾ ಗುತ್ತಿದೆ. ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲೂ ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಶಾಸಕರು ಗಮನ ಸೆಳೆದು ವಿಶೇಷ ಚರ್ಚೆಗೆ ಅವಕಾಶ ಕೋರಿದರೂ ಸಮಯ ಅಭಾವದ ಹಿನ್ನಲೆಯಲ್ಲಿ ಚರ್ಚೆಯೂ ನಡೆದಿಲ್ಲ.

ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿಯಿಂದ ಹಾಸನ, ಚಿಕ್ಕಮಗ ಳೂರು ಭಾಗದ ಜನರು ಸದಾ ಆತಂಕದ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನರ ಆಕ್ರೋಶಕ್ಕೆ ಈ ಭಾಗದ ಶಾಸಕರೂ ತುತ್ತಾದ ಪ್ರಸಂಗಗಳೂ ನಡೆದಿವೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮೇಲೆ ರೊಚ್ಚಿಗೆದ್ದ ಜನ ಹಗೆ ಮುಂದಾಗಿದ್ದರೆ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ಧವೂ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಈಗಾಗಲೇ ಆದೇಶ
ಹೊರಡಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳ ಆಗಿರುವು ದರಿಂದ ಇದನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಹಾಗಿದ್ದರೂ ಸಮಸ್ಯೆಗೆ ಬ್ರೇಕ್ ಬಿದ್ದಿಲ್ಲ. ಕಾಡಾನೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಜಾಸ್ತಿಯಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಇದಕ್ಕಾಗಿ ರೈತರು ಜಮೀನು ಬಿಟ್ಟುಕೊಡಲು ಸಿದ್ದ ರಿದ್ದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ತಡೆ ಬೇಲಿ ನಿರ್ಮಾಣಕ್ಕೆ ೧೦೦ ಕೋಟಿ ರುಪಾಯಿ ನೀಡಲಾಗಿದೆಯಾದರೂ ಈವರೆಗೆ ಜಿಲ್ಲೆಯಲ್ಲಿ ೧೦ ರಿಂದ ೧೧ ಕಿಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂಬ ದೂರು ಕೇಳಿಬರುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆ ಹಿಡಿದು ಆನೆ ಶಿಬಿರಗಳಿಗೆ ಸ್ಥಳಾಂತರಿಸುವ ಕೆಲಸವಾಗಬೇಕಿದೆ