Monday, 25th November 2024

ಬಿಬಿಸಿ ಸಾಕ್ಷ್ಯಚಿತ್ರ ವಿವಾದ

ಒಂದು ಕಾಲದಲ್ಲಿ ಬಿಬಿಸಿ ಅಂದರೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನ ಸುದ್ದಿ ಪ್ರಸಾರಗಳು ಅತ್ಯಂತ ವಿಶ್ವಾಸಾರ್ಹ, ವೃತ್ತಿಪರ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಬಿಸಿಯೂ ಸೇರಿದಂತೆ ಜಗತ್ತಿನ ಯಾವ ಮಾಧ್ಯಮವೂ ಆ ಮಟ್ಟದ ವಿಶ್ವಾಸಾರ್ಹತೆಯನ್ನು ಈಗ ಉಳಿಸಿಕೊಂಡಿಲ್ಲ ಎಂಬುದು ವಾಸ್ತವ.

ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಪುರಾತನ ತಥಾಕಥಿತ ವಿಶ್ವಾಸಾರ್ಹ ಮಾಧ್ಯ ಮಗಳು ತಮ್ಮ ಹೆಗ್ಗಳಿಕೆಯನ್ನು ಕಳೆದುಕೊಂಡಿವೆ. ಸುದ್ದಿಗಳು, ಸಾಕ್ಷ್ಯಚಿತ್ರಗಳು ಈಗ ಬರೀ ವಾಸ್ತವ ಸಂಗತಿ ಗಳ ಚಿತ್ರಣವನ್ನು ಜನರಿಗೆ ಕಟ್ಟಿಕೊಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದನ್ನೊಂದು ಮನರಂಜನೆಯ ಮತ್ತು ವ್ಯಾಪಾರದ ಸರಕನ್ನಾಗಿ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಸುದ್ದಿಗಳು ಪ್ರಕಟವಾದ ಮಾಧ್ಯಮಗಳ ಧೋರಣೆಯನ್ನು ಬಿಂಬಿಸುತ್ತವೆಯೇ ಹೊರತು ಅದು ನಿರ್ಲಿಪ್ತ ವಾಸ್ತವ ಎನ್ನುವಂತಿಲ್ಲ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಪ್ರಸ್ತುತ ಜಾಗತಿಕ ರಂಗದಲ್ಲಿ ಮುಂಚೂಣಿ ಸ್ಥಾನಕ್ಕೆ ಬಂದಿರುವ ಭಾರತದ ಕುರಿತು, ಇಲ್ಲಿನ ಜನ ನಾಯಕರ ಕುರಿತು ತಮ್ಮ ಮೂಗಿನ ನೇರಕ್ಕೆ ಬರೆಯುವ ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರಸ್ತುತಪಡಿಸುವ ವಿದೇಶಿ ಮಾಧ್ಯಮಗಳು ಅಂತಹ ಪ್ರಚಾರದ ಸರಕುಗಳ ಹಿಂದೆ ಮೇಲ್ನೋಟಕ್ಕೆ ಕಾಣಿಸದ ಅಜೆಂಡಾಗಳನ್ನು ಹೊಂದಿರುತ್ತವೆ. ಗೋಧ್ರಾ ದುರಂತ ಮತ್ತು ನಂತರದ ಗುಜರಾತ್ ಹಿಂಸಾಚಾರ ಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೊರಿಸಲಾಗಿದ್ದ ಎಲ್ಲ ಆರೋಪಗಳು ನಿರಾಧಾರವೆಂದು ಸರ್ವೋಚ್ಚ ನ್ಯಾಯಾಲಯದಲ್ಲೇ ತೀರ್ಮಾನವಾಗಿದೆ.

ಜತೆಗೆ ಅವರು ಈ ದೇಶದ ಪ್ರಧಾನ ಮಂತ್ರಿಯಾಗಿ ಸತತ ಎರಡನೇ ಅವಧಿಯನ್ನು ಪೂರ್ಣಗೊಳಿಸುವುದರಲ್ಲಿದ್ದಾರೆ. ಅಂತಹ ಸರಿಹೊತ್ತಿನಲ್ಲಿ
ಅವರ ನಾಯಕತ್ವದ ಬಗ್ಗೆ ಇಡೀ ಜಗತ್ತೇ ಬಹಳಷ್ಟು ನಿರೀಕ್ಷೆಗಳಿಂದ ನೋಡುತ್ತಿರುವಾಗ, ಅವರ ವ್ಯಕಿತ್ವಕ್ಕೆ, ಘನತೆಗೆ ಮಸಿ ಬಳಿಯುವ ಪ್ರಯತ್ನ ಗಳೂ ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇರುವುದು ಸತ್ಯ. ಬಿಬಿಸಿ ಪ್ರಸಾರ ಮಾಡಿರುವ ಸಾಕ್ಷ್ಯಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು ಮತ್ತು ಅದನ್ನು ಸಾರ್ವಜನಿಕರಿಗೆ ನಾನಾ ವೇದಿಕೆಗಳಲ್ಲಿ ಪ್ರದರ್ಶಿಸಬೇಕೆಂದು ಹಂಬಲಿಸುವ ಮನಸ್ಸುಗಳು ಹೊಂದಿರುವ ಒಲವು-ನಿಲುವುಗಳು ಬಹಳಷ್ಟು ಸಲ ದೃಗ್ಗೋಚರವಾಗಿವೆ.

ಎಡಪಂಥೀಯ ಮತ್ತು ಭಾರತದ ಸ್ವಂತ ಶಕ್ತಿಯ ಏಳಿಗೆಯನ್ನು ಬಯಸದ ಕುತ್ಸಿತ ಬುದ್ಧಿಯ ಶಕ್ತಿಗಳು ಹಾಹಾಕಾರವೆಬ್ಬಿಸುತ್ತಿರುವುದು ಏಕೆ ಎಂಬುದು ಜನಸಾಮಾನ್ಯರಿಗೆ ತಿಳಿಯದ ಸಂಗತಿಯೇನಲ್ಲ.