Sunday, 5th January 2025

ತಲೆನೋವು

ಡಾ.ಉಮಾಶಂಕರ್,
ನರರೋಗ ತಜ್ಞರು

ತಲೆನೋವು ಒಂದು ಮುಖ್ಯವಾದ ನರರೋಗ ತೊಂದರೆ. ಇದು ಅನೇಕ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮುಖ್ಯವಾಗಿ ಅರೆ ತಲೆನೋವು. ಯಾವುದೇ ಅತಿವ್ಯಾಯಾಮ, ಬೆಳಕಿನ ಪ್ರಖರತೆ, ಶಬ್ದ, ವಾಸನೆಗಳಿಂದ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರಿಗೆ ಇದು ಅರ್ಧಗಂಟೆಯಿಂದ ಒಂದು ದಿನದವರೆಗೂ ಕೂಡ ಮೈಗ್ರೇನ್ ಇರುವಂತಹದ್ದು ಕಾಡಿಸಬಹುದು.

ಮೈಗ್ರೇನ್ ಪತ್ತೆ ಹಚ್ಚಲಿಕ್ಕೆ ಹಲವಾರು ಮಾನದಂಡಗಳು ಇರಬೇಕು. ಪ್ರಮುಖವಾಗಿ ಕಳೆದ ಎರಡು ತಿಂಗಳಲ್ಲಿ ಐದು ಬಾರಿ ತಲೆ ನೋವು ಕಾಣಿಸಿಕೊಂಡಿರಬೇಕು. ಅರೆ ತಲೆನೋವು, ತಲೆ ಹೊಡೆದುಕೊಳ್ಳುವುದು, ತುಂಬಾ ಗಂಭೀರವಾದ ತಲೆನೋವು ಇರವಂತಹದ್ದು ಹಾಗೂ ದೈಹಿಕ ಚಟುವಟಿಕೆ ಗಳಿಂದ ತಲೆ ನೋವು ಜಾಸ್ತಿಯಾಗು ವಂತಹದ್ದು ಇದರ ಜೊತೆಗೆ ತಲೆನೋವು ಸಮಯದಲ್ಲಿ ವಾಂತಿ, ಬೆಳಕಿನ ಪ್ರಕರತೆ ಹಾಗೂ ಶಬ್ಧಗಳಿಂದ ತಲೆನೋವು ಹೆಚ್ಚಾಗುವಂತಹದ್ದು ಇವೆಲ್ಲ ಮಾನದಂಡಗಳನ್ನಿಟ್ಟುಕೊಂಡು ಮೈಗ್ರೇನ್ ಪತ್ತೆ ಹಚ್ಚಲಾಗುತ್ತದೆ.

ತಲೆನೋವನ್ನು ನಾವು ಪ್ರಾಥಮಿಕ ತಲೆನೋವು, ಇನ್ನಿತರೆ ಕಾರಣಗಳ ತಲೆನೋವು ಎಂಬ ಎರಡು ವಿಭಾಗ ಗಳಾಗಿ ವಿಂಗಡಿಸುತ್ತೇವೆ.

ಪ್ರಾಥಮಿಕ ತಲೆನೋವು 
ಪ್ರಾಥಮಿಕ ತಲೆನೋವು ಬೇರೆ ಯಾವುದೇ ರೀತಿಯ ಸ್ಕಾಂನಿಂಗ್ ಅವಶ್ಯಕತೆ ಇಲ್ಲದೆ ಲಕ್ಷಣಗಳ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಪ್ರಾಥಮಿಕ ತಲೆನೋವುಗಳಲ್ಲಿ ಮೈಗ್ರೇನ್ ಒಂದು ಮುಖ್ಯವಾದ ಕಾರಣ. ಶೇ.೫೦ ರಷ್ಟು ತಲೆನೋವು ಹೊಂದಿರುವ ಜನರಿಗೆ ತಲೆನೋವಿಗೆ ಮೈಗ್ರೇನ್ ಕಾರಣವಾಗಿರುತ್ತದೆ. ಮೈಗ್ರೇನ್ ಬರುವ ಮುಂಚೆ ಸೆಳೆವು ಕಾಣಿಸಿಕೊಳ್ಳಬಹುದು. ದೃಷ್ಟಿಯಲ್ಲಿ ತೊಂದರೆಯಾಗುವಂತಹದ್ದು, ಕೈಕಾಲುಗಳಲ್ಲಿ ಜೋಮು, ಮಾತನಾಡುವುದಕ್ಕೆ ತೊಂದರೆ ಸಾಮಾನ್ಯವಾಗಿ ೧೦ ರಿಂದ ೬೦ ನಿಮಿಷಗಳವರೆಗೂ ಈ ಮೇಲಿನ ಲಕ್ಷಣಗಳು ಇರಬಹುದು. ಇದಾದ ನಂತರ ತಲೆನೋವು ಕಾಣಿಸಿಕೊಳ್ಳತ್ತದೆ.

ಮೈಗ್ರೇನ್ ಎರಡು ವಿಭಾಗದಲ್ಲಿ ವಿಂಗಡಿಸಲಾಗುತ್ತದೆ. ಸೆಳೆವು ಸಹಿತ, ಸೆಳೆವು ರಹಿತವಾಗಿ ಮೈಗ್ರೇನ. ಸುಮಾರು ಶೇ.೮೦ರಷ್ಟು ಮೈಗ್ರೇನ್ ಸೆಳೆವು ರಹಿತ ಮೈಗ್ರೇನ್ ಆಗಿರುತ್ತದೆ. ಮೈಗ್ರೇನ್ನ್ನು ನಾವು ನಾಲ್ಕು ಹಂತಗಳಾಗಿ ಬೇರ್ಪಡಿಸಬಹುದು.

೧. ಮೈಗ್ರೇನ್ ಪೂರ್ವ: ಇದರ ಲಕ್ಷಣಗಳೆಂದರೆ ಏಕಾಗ್ರತೆಯಲ್ಲಿ ತೊಂದರೆ, ಖಿನ್ನತೆ, ಮಾತನಾಡಲು ತೊಂದರೆ, ನಿದ್ರಾಹೀನತೆ, ಸುಸ್ತು ಪ್ರಮುಖ ವಾದವು.

೨. ಸೆಳೆವಿನ ಹಂತ; ಇದರ ಲಕ್ಷಣಗಳೆಂದರೆ ಕಣ್ಣಿನಲ್ಲಿ ಮಿಂಚುಗಳು, ಕಪ್ಪುಚುಕ್ಕೆಗಳು, ಜೋಮು ಹಿಡಿಯುವುದು, ತೊದಲುವಿಕೆ, ತಾತ್ಕಾಲಿಕ ದೃಷ್ಟಿಹೀನತೆ ಪ್ರಮುಖ ಲಕ್ಷಣ

೩. ತಲೆನೋವಿನ ಹಂತ ಇದರಲ್ಲಿ ಅತಿಯಾದ ತಲೆನೋವು,ವಾಂತಿ,ಮೈ ಬಿಸಿಯಾಗುವುದು ಸುಸ್ತು,ತಲೆಸುತ್ತು, ತಲೆ ಮುಟ್ಟಿದರೆ ನೋವು ಕಾಣಿಸಿಕೊಳ್ಳ ಬಹುದು.

೪. ಮೈಗ್ರೇನ್ ನಂತರ ತಲೆನೋವಿನ ಹಂತದಲ್ಲಿ ನಿರಂತರ ಸುಸ್ತು ಕೆಲ ದಿನಗಳ ಕಾಲ ಮುಂದುವರೆಯಬಹುದು. (ವೈದ್ಯರ ಸಂಪರ್ಕಕ್ಕಾಗಿ ೯೮೮೦೧ ೫೮೭೫೮)

ಮೈಗ್ರೇನ್ ಬರಲು ಮುಖ್ಯ ಕಾರಣ
ಅನುವಂಶೀಯ ಕಾರಣಗಳು, ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು, ಊಟದ ಸಮಯದಲ್ಲಿ ವ್ಯತ್ಯಾಸ, ಒತ್ತಡ, ನಿದ್ರಾಹೀನತೆ, ಅತಿಯಾದ
ಕಾಫೀ, ಚಾಕಲೇಟ್, ಚೀಸ್, ಚೈನೀಸ್ ತಿಂಡಿಗಳು, ಕುಡಿತ, ಧೂಮ್ರಪಾನ, ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆ ಪ್ರಮುಖ ಕಾರಣಗಳು.

ಮೈಗ್ರೇನ್ ಪತ್ತೆ ಹಚ್ಚುವುದು: ಸಾಮಾನ್ಯವಾಗಿ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಪ್ರಮುಖ ಮಾನದಂಡ. ತಲೆನೋವಿಗೆ ಬೇರೆ
ಕಾರಣ ಗಳನ್ನು ಪತ್ತೆಹಚ್ಚಲು ಸಿಟಿ ಸ್ಕ್ಯಾನ, ಎಂಆಐ ಅವಶ್ಯಕತೆ ಉಂಟಾಗುತ್ತದೆ.

ಮೈಗ್ರೇನ್ ಚಿಕಿತ್ಸೆ ಹೇಗೆ?
ಜೀವನ ಶೈಲಿಯ ಬದಲಾವಣೆ, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ,ವ್ಯಾಯಾಮ ಮಾಡುವುದು. ಒತ್ತಡ ಮುಕ್ತ ಜೀವನ, ಯಾವ ಕಾರಣಗಳಿಂದ ಮೈಗ್ರೇನ್ ಪ್ರಚೋದನೆ ಉಂಟಾಗುತ್ತದೆಯೋ(ಅಹಾರ ಪದಾರ್ಥ,ಕುಡಿತ,ದೂಮ್ರಪಾನ ಇನ್ನಿತರೆ) ಅವುಗಳನ್ನ ಪತ್ತೆ ಹೆಚ್ಚಿ ಚಿಕಿತ್ಸೆ ನೀಡುವುದು.
ಮೈಗ್ರೇನ್ ಬಂದಾಗ ಅದಕ್ಕೆ ಕೆಲ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮೈಗ್ರೇನ್ ತಿಂಗಳಿಗೆ ನಾಲ್ಕರಿಂದ ಐದು ಬಾರಿಗಿಂತ ಹೆಚ್ಚಿನದಾಗಿ ಕಾಣಿಸಿಕೊಂಡಾಗ ಅದು ಮತ್ತೆ ಬಾರದಿರುವ ರೀತಿಯಲ್ಲಿ ತಡೆಗಟ್ಟಲು ಕೆಲ ತಿಂಗಳವರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.