Thursday, 19th September 2024

ಕುರುಕು ತಿಂಡಿ ಡಬ್ಬಿಯಲ್ಲಿ ತುರುಕಿ ಕೈಯ ತೆಗೆದು ತಿಂದ್ರೆ ….ಥ್ರಿಲ್ !

ತಿಳಿರು ತೋರಣ
ಶ್ರೀವತ್ಸ ಜೋಶಿ

ಅನಂತ ಚತುರ್ದಶಿ ಮೊನ್ನೆೆ ಸಪ್ಟೆೆಂಬರ್ 1ರಂದು ಬಂದಿತ್ತಷ್ಟೆ? ಆವೊತ್ತು ಊರಲ್ಲಿ ನನ್ನ ಅಣ್ಣನ ಹುಟ್ಟುಹಬ್ಬ. ಅಣ್ಣ ಅಂದ್ರೆ ಬೇರೆ ಕೆಲವರೆಲ್ಲ ತಂದೆಯನ್ನು ಅಣ್ಣ ಎಂದು ಕರೆಯುವಂತೆ ಅಲ್ಲ, ಒಡಹುಟ್ಟಿದ ಅಣ್ಣ. ಸ್ವಾರಸ್ಯಕರ ವಿಷಯವೇನೆಂದರೆ ಈ ಬಾರಿ ಚಾಂದ್ರಮಾನ ಪಂಚಾಂಗ ಪ್ರಕಾರ ಮತ್ತು ಗ್ರೆಗೊರಿಯನ್(ಇಂಗ್ಲಿಷ್) ಕ್ಯಾಲೆಂಡರ್ ಪ್ರಕಾರವೂ ಒಂದೇದಿನ ಬಂದಿತ್ತು. ಇದು ಅಪರೂಪ. ಹತ್ತಿಪ್ಪತ್ತು ವರ್ಷಗಳಿಗೊಮ್ಮೆ ಮಾತ್ರ ಹಾಗೆ ಬರುವುದು. ಚಾಂದ್ರಮಾನ ಅಂತ ಸ್ಪೆಸಿಫಿಕ್ ಆಗಿ ಹೇಳಲು
ಕಾರಣ ಹಿಂದೆಲ್ಲ ನಮ್ಮಲ್ಲಿ ಕ್ಯಾಲೆಂಡರ್ ಡೇಟ್ ಪ್ರಕಾರ ಅಲ್ಲ, ಚಾಂದ್ರಮಾನ ಪಂಚಾಂಗ ಪ್ರಕಾರವೇ ಹುಟ್ಟುಹಬ್ಬ ಆಚರಣೆ.
ಅದೂ, ಚಿಕ್ಕ ಮಕ್ಕಳದು ಮಾತ್ರ. ಹಾಲು-ತುಪ್ಪ ಮಿಶ್ರಣವನ್ನು ದೇವರ ಮುಂದಿರಿಸಿ, ತುಪ್ಪದ ದೀಪ ಹಚ್ಚಿ, ‘ಮಾರ್ಕಂಡೇಯ
ಮಹಾಭಾಗ ಸಪ್ತಕಲ್ಪಾಾಂತಜೀವನ ಆಯುರಾರೋಗ್ಯ ಮೈಶ್ವರ್ಯಂ ದೇ ಮೇ ಮುನಿಪುಂಗವ’ ಶ್ಲೋಕ ಹೇಳಿ ದೇವರಿಗೆ
ನಮಸ್ಕರಿಸುವಂತೆ, ಆಮೇಲೆ ಹಾಲು – ತುಪ್ಪ ಮಿಶ್ರಣ ಕುಡಿಯುವಂತೆ ಅಮ್ಮ ಹೇಳುತ್ತಿದ್ದರು. ಹೆಚ್ಚೆೆಂದರೆ ಊಟಕ್ಕೆ ಸಬ್ಬಕ್ಕಿಯದೋ ಹೆಸರುಬೇಳೆಯದೋ ಪಾಯಸ ಮಾಡುತ್ತಿದ್ದರು. ದೊಡ್ಡವರಾದ ಮೇಲೆ ವಿದ್ಯಾಭ್ಯಾಸಕ್ಕೋ, ವೃತ್ತಿಗೋ, ಮದುವೆಯಾಗಿಯೋ ದೂರದೂರಿಗೆ ಹೋದಮೇಲೆ ಹುಟ್ಟುಹಬ್ಬ ಆಚರಣೆಯೆಲ್ಲ ಅಷ್ಟಕ್ಕಷ್ಟೇ. ಈಗ ಹಾಗಲ್ಲ.

ಕ್ಯಾಲೆಂಡರ್ ರೀತ್ಯಾ ಬರ್ತ್‌ಡೇಯನ್ನು ಫೇಸ್‌ಬುಕ್ ನೆನಪಿಸಿ ಕೊಡುತ್ತದೆ. ವಾಟ್ಸಪ್ ಗ್ರೂಪಿನಲ್ಲಿ ಯಾರಾದರೊಬ್ಬರು
ಶುಭಾಶಯದ ಬೋಣಿ ಮಾಡುತ್ತಾರೆ. ಉಳಿದೆಲ್ಲರಿಂದಲೂ ಹ್ಯಾಪಿ ಬರ್ತ್‌ಡೇ ಮೆಸೇಜುಗಳು ದಬದಬನೆ ಬರಲಾರಂಭಿಸುತ್ತವೆ. ಬೇರೆ ದಿನಗಳಲ್ಲಿ ನಿಶ್ಚೇಷ್ಟತೆ ವ್ರತಧಾರಿಗಳಾಗಿರುವ ದಸ್ಯರೂ ಆವತ್ತು ಗ್ರೂಪಲ್ಲಿ ತಮ್ಮ ಹಾಜರಿ ಸಾರುತ್ತಾರೆ. ನನ್ನ ಇನ್ನೊಬ್ಬ ಅಣ್ಣನ ಮಗಳು ಈಗೊಂದು ಹೊಸ ವಿಧಾನ ಆರಂಭಿಸಿದ್ದಾಳೆ. ವಾಟ್ಸಪ್‌ನಲ್ಲೇ ಆದರೂ, ಬರೀ ‘ಹ್ಯಾಪಿ ಬರ್ತ್ ಡೇ’ ಎಂದು ನಾಲ್ಕಾರು ಇಮೋಜಿಗಳೊಂದಿಗೆ ಕಳಿಸುವುದಕ್ಕಿಿಂತ, ಯಾರ ಹುಟ್ಟುಹಬ್ಬವೋ ಅವರ ಬಗ್ಗೆೆ ಒಂದೆರಡು ಪ್ಯಾರಗ್ರಾಫ್
ನಷ್ಟು ಮನದಾಳದ ಮೆಚ್ಚುಗೆಯ ಮಾತುಗಳನ್ನು ಬರೆಯುವುದು. ಅದರಲ್ಲಿ ತೋರಿಕೆಯ ಹೊಗಳಿಕೆಗಿಂತ ಪ್ರೀತಿ -ಆತ್ಮೀಯತೆಗ ಳಿಗೇ ಪ್ರಾಧಾನ್ಯ. ಒಳ್ಳೆಯ ಅನುಸರಣೀಯ ಕ್ರಮ.

ನಮ್ಮ ಫ್ಯಾಮಿಲಿ ವಾಟ್ಸಪ್ ಗ್ರೂಪಲ್ಲಿ ಅದಕ್ಕೆೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದಿನ ಬರ್ತ್‌ಡೇ ಯಾರದು, ಅವರ ಬಗ್ಗೆೆ ಈಕೆ
ಏನು ಬರೆಯಲಿದ್ದಾಳೆ – ಎಂದು ಕುತೂಹಲ! ಇರಲಿ, ಈ ಲೇಖನದಲ್ಲಿ ಇನ್ನುಮುಂದೆ ವ್ಯಾಖ್ಯಾನಿಸಲಿರುವ ವಿಚಾರಕ್ಕೂ ಮೇಲೆ ವಿವರಿಸಿದ ಹುಟ್ಟುಹಬ್ಬ ಆಚರಣಾ ವಿಧಾನಗಳಿಗೂ ಏನೇನೂ ಸಂಬಂಧವಿಲ್ಲ. ಅದು, ಫಸ್‌ಟ್‌‌ಗೇರ್/ ಸೆಕೆಂಡ್‌ಗೇರ್‌ನಲ್ಲಿ ಗಾಡಿ ಹೊರಡಲಿಕ್ಕೆೆ ಮಾತ್ರ. ಈಗಿನ್ನು ಟಾಪ್ ಗೇರ್‌ನಲ್ಲಿ, ರವಿಚಂದ್ರನ್ ಹೇಳುವಂತೆ, ‘ಕೊಡು ಎಕ್ಸಿಲ್ರೇಟರ್ ಈಗ…’

ಮೊನ್ನೆ ಅಣ್ಣನ ಹುಟ್ಟುಹಬ್ಬದ ದಿನ ನಮ್ಮ ಅತ್ತಿಗೆ ‘ಹಯಗ್ರೀವ’ ಮಾಡಿದ್ದರಂತೆ. ವಾಟ್ಸಪ್ ಗ್ರೂಪಲ್ಲಿ ಅದರದೊಂದು ಚಿತ್ರವನ್ನೂ ಹಾಕಿದ್ದರು. ಹಯಗ್ರೀವವೇನೂ ಹೊಸರುಚಿ ಅಲ್ಲ, ಎಲ್ಲರಿಗೂ ಗೊತ್ತಿರುವ ಪ್ರಾಚೀನ ಖಾದ್ಯ. ಆದ್ದರಿಂದ ‘ಹೇಗೆ ಮಾಡೋದು?  ರೆಸಿಪಿ ಕೊಡ್ತೀರಾ?’ ಅಂತೆಲ್ಲ ಗದ್ದಲವಿಲ್ಲ. ಒಂದಿಬ್ಬರಿಂದ ಜೊಲ್ಲು – ಸುರಿಸುವ ಇಮೋಜಿ, ಹೆಬ್ಬೆರಳು – ತೋರುಬೆರಳು – ಜೋಡಿಸಿದ ಇಮೋಜಿ ಬಂದಿರಬಹುದು ಅಷ್ಟೇ. ಅತ್ತಿಗೆ ನನ್ನ ತರ್ಲೆಗಳನ್ನು ಸಹಿಸಿಕೊಳ್ಳುತ್ತಾರೆಂದು ಗೊತ್ತಿರುವುದರಿಂದ ಹಯಗ್ರೀವ ಚಿತ್ರದ ಬಗ್ಗೆೆ ನಾನೊಂದು ತಕರಾರು ತೆಗೆದೆ.

‘ಇದರಲ್ಲಿ ಗೇರುಬೀಜ ದ್ರಾಕ್ಷಿ ಅಷ್ಟೇನೂ ಕಾಣುತ್ತಿಲ್ಲವಲ್ಲ!’ ಎಂದು ಬರೆದೆ. ಇನ್ನೊೊಂದು ಮೆಸೇಜನ್ನು ಅತ್ತಿಗೆಯ ಉತ್ತರವೋ
ಎಂಬಂತೆ ನಾನೇ ಬರೆದು ‘ಹೌದು, ತಂದದ್ದಿರಲಿಲ್ಲ. ಮೊನ್ನೆ ಹುಡುಗರಿಬ್ಬರೂ ವರ್ಕ್-ಫ್ರಂ-ಹೋಮ್ ಅಂತ ಒಂದೆರಡು
ವಾರ ಮನೆಯಲ್ಲಿದ್ದವರು ಅಡುಗೆಮನೆ ಡಬ್ಬಿಗಳ ಮೇಲೆ ಸಾಕಷ್ಟು ದಾಳಿ ನಡೆಸಿ ದ್ರಾಕ್ಷಿ ಗೋಡಂಬಿ ಡಬ್ಬಿಗಳನ್ನೆಲ್ಲ ಖಾಲಿ
ಮಾಡಿಟ್ಟಿದ್ದಾರೆ’ ಎಂದು ನಾಲಗೆ – ಹೊರಚಾಚಿದ – ಸ್ಮೆಲಿಗಳನ್ನೂ ಉದುರಿಸಿ ಕಳುಹಿಸಿದೆ. ಹಯಗ್ರೀವದ ಚಿತ್ರದಲ್ಲಿ
ನನಗೆ ದ್ರಾಕ್ಷಿ ಕಾಣದಿದ್ದದ್ದು ಹೌದು. ಅಲ್ಲದೇ ರಾಷ್ಟ್ರಗೀತೆಯಲ್ಲಿ ‘ದ್ರಾವಿಡ-ಉತ್ಕಲ-ವಂಗ’ ಇರುವಂತೆ ಅದಕ್ಕೆ ಪ್ರಾಸಬದ್ಧವಾಗಿ
ರವೆಉಂಡೆಯೇ ಮೊದಲಾದ ಭಕ್ಷ್ಯಗಳಲ್ಲಿ ‘ದ್ರಾಕ್ಷಿ-ಗೋಡಂಬಿ-ಲವಂಗ’ ಕಂಗೊಳಿಸಬೇಕು ಎಂದು ನನ್ನ ಸಿದ್ಧಾಾಂತ. ಅಣ್ಣನ ಮಕ್ಕಳು ಬೆಂಗಳೂರಿನಲ್ಲಿ ಕೋಡಾಯಣ ಎದುರಿಸುವ ಬದಲು ಕೆಲ ದಿನ ಊರಲ್ಲಿದ್ದು ವರ್ಕ್-ಫ್ರಂ-ಹೋಮ್ ಮಾಡಿದ್ದರೆಂಬ ವಿಚಾರ ನನಗೆ ಮೊದಲೇ ಗೊತ್ತಿತ್ತಾದ್ದರಿಂದ ನಾನು ಹಾಗೆ ಬರೆದುದಾಗಿತ್ತು.

ತಗೊಳ್ಳಿ, ಹುಟ್ಟುಹಬ್ಬ ಹಯಗ್ರೀವ ಎಲ್ಲವನ್ನೂ ಅಲ್ಲೇಬಿಟ್ಟು ‘ಅಡುಗೆಮನೆ ಡಬ್ಬಿಗಳ ಮೇಲೆ ದಾಳಿ’ ಬಗ್ಗೆೆಯೇ ಗ್ರೂಪಲ್ಲಿ
ದಿನಡೀ ಚರ್ಚೆ! ರಸವತ್ತಾದ ವಿಚಾರ ವಿನಿಮಯ. ನೆನಪುಗಳ ಮೆರವಣಿಗೆ. ಸ್ವಾನುಭವ ಮಂಡನೆ. ಏಕೆಂದರೆ ಒಬ್ಬರಿಗಿಂತ
ಒಬ್ಬರು ಅಪ್ರತಿಮ ದಾಳಿಕೋರರೇ! ಘಜನಿ ಮೊಹಮ್ಮದ ಭಾರತದ ಮೇಲೆ ಒಟ್ಟು 17 ಸಲ ದಾಳಿ ಮಾಡಿದ್ದಂತೆ. ಆದರೆ
ನಾವೆಲ್ಲ ಮಾಡುವ ಈ ‘ಅಡುಗೆಮನೆ ಡಬ್ಬಿಗಳ ಮೇಲೆ ದಾಳಿ’ಗೆ ಲೆಕ್ಕವೇ ಇಲ್ಲ. 1 ಅಣ್ಣನ ಮಕ್ಕಳ ಬಗ್ಗೆ ನಾನು ಹಾಗೆ ಬರೆದದ್ದು ಅವರಿಗೆ ಬೇಸರವಾಗದಿರಲಿ ಎಂಬಂತೆ ನಮ್ಮಕ್ಕ ‘ಇಲ್ಲಪ್ಪಾ, ಈಗ ಇಬ್ಬರೂ ದೊಡ್ಡವರಾಗಿದ್ದಾರೆ.

ಮದುವೆಯೂ ಆಗಿದೆ. ಅವರೆಲ್ಲಿ ಆ ರೀತಿ ದಾಳಿ ಮಾಡುತ್ತಾರೆ? ಅವರವರ ಹೆಂಡತಿಯರಿಗೂ ಇವರೇನಪ್ಪಾ ಹೀಗೆ ಅಂತ ಅನಿಸೋಲ್ವೇ?’ ಎಂದು ಬರೆದರು, ಇಂಗ್ಲಿಷ್‌ನಲ್ಲಿ ಟಂಗ್-ಇನ್-ಚೀಕ್ ಎನ್ನುತ್ತಾರಲ್ಲ, ಹಾಗೆ ತಮಾಷೆಗೆಂದೇ ಅವರೂ ಬರೆದದ್ದು. ಮೇಲ್ನೋಟಕ್ಕೆ ಸಹಾನುಭೂತಿಯದೊಂದು ಹೊದಿಕೆ. ಈಗೊಂದು ವೇಳೆ ನಮ್ಮ ಅಮ್ಮ ಇದ್ದು ಈ ಸಂಭಾಷಣೆಯನ್ನೆಲ್ಲ ಕೇಳಿದ್ದರೆ- ‘ಓಹೋ! ಹೆಂಡತಿಗೂ ಒಂದೆರಡು ದ್ರಾಕ್ಷಿ ಗೋಡಂಬಿಗಳನ್ನು ಲಂಚವಾಗಿ ಕೊಟ್ಟು ಬಾಯ್ಮುಚ್ಚಿಸಲಿಕ್ಕೆ ಗೊತ್ತಿರದಷ್ಟು ಮುಗ್ಧರೇ ನನ್ನ ಆ ತುಂಟ ಮೊಮ್ಮಕ್ಕಳು?’ ಎನ್ನುತ್ತಿದ್ದರು ಎಂದು ನಾನು ಸೇರಿಸಿದೆ.

‘ಲಂಚ ಕೊಡದೆಯೇ ನಾವು ನಿಭಾಯಿಸಬಲ್ಲೆವು!’ ಎಂದು ಕಣ್ಣುಮಿಟುಕಿಸುವ ಇಮೋಜಿಯೊಂದಿಗೆ ಉವಾಚ – ಬೇರಾರದೂ ಅಲ್ಲ, ಅಣ್ಣನ ಮಕ್ಕಳದೇ! ಜೊತೆಯಲ್ಲೇ, ತಿಂಡಿ ಡಬ್ಬಿಗಳ ಮೇಲೆ ದಾಳಿ ಮಾಡಿದಾಗಿನ ಥ್ರಿಲ್ ಬಗ್ಗೆ ಮತ್ತೊೊಂದಿಷ್ಟು
ಮೆಲುಕು. ‘ಎಂಜಿನಿಯರಿಂಗ್ ಓದುತ್ತಿದ್ದಾಗ ಹಾಸ್ಟೆಲ್‌ನಿಂದ ತಿಂಗಳಿಗೊಮ್ಮೆ ಮನೆಗೆ ಹೋದರೆ ಮೊದಲು ಮಾಡುತ್ತಿದ್ದ
ಕೆಲಸವೇ ಅಡುಗೆಮನೆಗೆ ನುಗ್ಗಿ ತಿಂಡಿ ಡಬ್ಬಗಳ ಮೇಲೆ ದಾಳಿ!

ಅಮ್ಮ ಪ್ಲೇಟಲ್ಲಿ ತಂದುಕೊಟ್ಟರೂ ಅದಕ್ಕಿಿಂತ ಡಬ್ಬಿಗಳಿಂದ ನಾನೇ ತಗೊಂಡು ತಿಂದರೆ ಹೆಚ್ಚು ತೃಪ್ತಿ, ಹೆಚ್ಚು ಥ್ರಿಲ್!’ ಅಕ್ಕನ ಮಗ ದನಿಗೂಡಿಸಿದ. ಇಂಗ್ಲೆೆಂಡ್‌ನಲ್ಲಿರುವ ಇನ್ನೊೊಬ್ಬ ಅಣ್ಣನಿಗೂ ಈ ಚರ್ಚೆ ಬಾಯಿಯಲ್ಲಿ ನೀರೂರಿಸಿತು. ‘ಗೋಡಂಬಿ ಮತ್ತು ದ್ರಾಕ್ಷಿಗಳನ್ನು ಸಿಹಿ ಪದಾರ್ಥಗಳಿಗೆ ಹಾಕುತ್ತೇವಾದರೂ ಇವುಗಳ ನೈಜ ರುಚಿ ಸಿಗುವುದು ‘ಡಬ್ಬಿಯಿಂದ ಡೈರೆಕ್‌ಟ್‌’ ತಿಂದರೆ ಮಾತ್ರ. ಅದರಲ್ಲೂ ಮನೆಯಲ್ಲೇ ಸುಟ್ಟು ಮಾಡಿದ ಗೋಡಂಬಿ (ಅಮ್ಮ ಈ ವಿಧಾನದಲ್ಲಿ ಮಾಡಿ ಡಬ್ಬಿಯಲ್ಲಿ ಹಾಕಿಡುತ್ತಿದ್ದರು) ಆಹಾ ಅದೇನು ರುಚಿ, ಅದೇನು ಪರಿಮಳ! ಸಿಹಿತಿಂಡಿಗಳಿಗೆ ಸೇರಿಸಿದಾಗ ಅದೆಲ್ಲಾ ವ್ಯರ್ಥ. ಬೇಕಿದ್ದರೆ ಡಬ್ಬಿಯಿಂದ ಡೈರೆಕ್‌ಟ್‌ ತಿನ್ನುವವರ ಸಂಘದ ಸದಸ್ಯರಲ್ಲಿ ಕೇಳಿನೋಡಿ. ಈ ವಿಧಾನ ಬಳಸಿ ತಿಂದವರು ಧನ್ಯರು. ಅವರಿಗೇ ಗೊತ್ತು ಆ ರುಚಿ, ಆ ಪರಿಮಳ. ಮತ್ತೆ, ಅದಕ್ಕೇನೂ ವಯಸ್ಸಿನ ನಿರ್ಬಂಧ ಎಲ್ಲ ಏನಿಲ್ಲ!

ಆದರೆ ಡಬ್ಬಿಯಿಂದ ಡೈರೆಕ್‌ಟ್‌ ತಿನ್ನುವುದರಲ್ಲೂ ಒಂದು ಶಿಸ್ತುಕ್ರಮ ಇದೆ, ಅದರ ಕಡೆ ಗಮನ ಅಗತ್ಯ. ಡಬ್ಬಿಯಲ್ಲಿ ಸ್ಟಾಕ್ ಧಾರಾಳ ಇದ್ದರೆ ಕೆಲಸ ಸುಲಭ. ಸ್ಟಾಕ್ ಇಳಿಯುತ್ತ ಹೋದಂತೆ ಶಿಸ್ತು ಪಾಲಿಸಬೇಕಾಗುತ್ತದೆ. ಅದೇನೆಂದರೆ, ಡಬ್ಬಿ ಖಾಲಿ ಅಥವಾ ಸಂಪೂರ್ಣ ಖಾಲಿ ಆಗದಂತೆ ನೋಡುವ ಜವಾಬ್ದಾರಿ. ಬರೀ 10-12 ಗೇರುಬೀಜ ಉಳಿದಿದ್ದರೆ, ಒಂದು ಬಾರಿ ನಾಲ್ಕು ಅಥವಾ ಐದಕ್ಕಿಿಂತ ಜಾಸ್ತಿ ತಿನ್ನಲಿಕ್ಕಿಲ್ಲ. ಕೊನೆಗೆ ಡಬ್ಬಿಯಲ್ಲಿ ನಾಲ್ಕೆದು ಮಾತ್ರ ಉಳಿದರೆ, ಒಂದೋ ಎರಡೋ ಮಾತ್ರ ತಿನ್ನುವುದು. ಎರಡು ಉಳಿದರೆ ಒಂದು, ಮತ್ತು ಒಂದೇ ಉಳಿದರೆ ಅರ್ಧ. ಅಂತೂ ಡಬ್ಬಿ ಖಾಲಿ ಮಾಡಿದ (ಅಪ)ಕೀರ್ತಿ ಎಂದೆಂದೂ ಬರಬಾ ರದು. ಹೆಚ್ಚಾಗಿ ‘ಡಬ್ಬಿಯಿಂದ ಡೈರೆಕ್‌ಟ್‌’ ಗಿರಾಕಿಗಳೆಲ್ಲರೂ ಈ ಅಲಿಖಿತ ನಿಯಮದ ಪಾಲನೆ ಮಾಡುತ್ತಾರೆ.’ ಅಂತೊಂದು ಪ್ರೌಢಪ್ರಬಂಧವನ್ನೇ ಮಂಡಿಸಿದರು.

ಮುಂಬೈಯಲ್ಲಿರುವ ಅಣ್ಣನೂ ಬರೆದರು: ‘ಅಡುಗೆಮನೆಯಲ್ಲಿ ತಿಂಡಿಗಳ ಡಬ್ಬಿಗೆ ದಾಳಿಯಿಡುವುದು ಮಾನವ ಜಾತಿಯ
ಅನುವಂಶೀಯ ಗುಣವಿರಬೇಕು. ನಾನಂತೂ ಇದುವರೆಗೆ ಈ ಕ್ರಿಯೆಯಲ್ಲಿ ತೊಡಗದಿರುವವರನ್ನು ನೋಡಿಯೇ ಇಲ್ಲ. ನಾವು
ಚಿಕ್ಕವರಿದ್ದಾಗ ಮತ್ತು ಮುಂದೆ ಶಾಲಾದಿನಗಳಲ್ಲಿ ಸಂಜೆ ಶಾಲೆಯಿಂದ ಮನೆಗೆ ಬಂದಾಗ, ಅಮ್ಮ ಮನೆಯ/ತೋಟದ/ ಕೊಟ್ಟಿಗೆಯ ಕೆಲಸಗಳಲ್ಲಿ ತೊಡಗಿದ್ದಾಗ ನಾವೇ ಅಡುಗೆಮನೆಗೆ ನುಗ್ಗಿ ನಾಗಂದಿಗೆಯ ಮೇಲಿರುತ್ತಿದ್ದ ಡಬ್ಬಿಗಳಿಗೆ ಲಗ್ಗೆೆ ಇಟ್ಟದ್ದು
ಎಷ್ಟು ಬಾರಿಯೋ ಲೆಕ್ಕವಿಲ್ಲ. ಕಡೆಯುವ ಕಲ್ಲಿನಲ್ಲಿ ಕಡೆಯುವಾಗ ಕುಳಿತುಕೊಳ್ಳಲಿಕ್ಕೆ ಅಮ್ಮ ಬಳಸುತ್ತಿದ್ದ ಪುಟ್ಟದೊಂದು ಬೆಂಚನ್ನು ನಾವು ಎತ್ತರದಲ್ಲಿರುವ ತಿಂಡಿ ಡಬ್ಬಿ ಕೈಗೆಟುಕಲಿಕ್ಕೆ ಉಪಯೋಗಿಸಿದ್ದಿದೆ. ಇಲ್ಲಿ ಮುಂಬೈಯಲ್ಲಿ ನಮ್ಮನೇಲಿ ದ್ರಾಕ್ಷಿ,
ಗೋಡಂಬಿ, ಬಾದಾಮಿ, ಬಾಳೆಕಾಯಿ ಚಿಪ್‌ಸ್‌ ಡಬ್ಬಿಗಳ ಸ್ಥಳ ಎಷ್ಟು ಬದಲಾಯಿಸುತ್ತಿದ್ದರೂ ಮಕ್ಕಳ ಕಣ್ಣುತಪ್ಪಿಸಲು ಸಾಧ್ಯವಾಗದೆ ಹೋಗುತ್ತಿತ್ತು.

ಕಿಚನ್ ಕ್ಯಾಬಿನೆಟ್‌ನಲ್ಲಿ ಇನ್ನು ಅಡಗಿಸಿಡಲು ಜಾಗವೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬರುವಂತಾಯ್ತು’ ಎಂದು ಅವರ ಅನುಭವ. ಅವರ ಮಗ ಪುಟ್ಟ ಹುಡುಗನಾಗಿದ್ದಾಗ ಅಂಬೆಗಾಲಿಡುತ್ತ ಹೋಗಿ ಫ್ರಿಜ್ ತೆರೆಯುತ್ತಿದ್ದಾಗಿನ, ಆಮೇಲೆ ಸ್ವಲ್ಪ ದೊಡ್ಡವನಾದ ಮೇಲೂ ಅಡುಗೆಮನೆಯಲ್ಲಿ ದಾಳಿ ನಡೆಸುತ್ತಿದ್ದಾಗಿನ ಒಂದೆರಡು ಫೋಟೊಗಳನ್ನೂ ಸವಿನೆನಪಿಗೆಂದು ಇಟ್ಟುಕೊಂಡಿರುವುದನ್ನು ತೋರಿಸಿದರು. ಇದೆಲ್ಲದರ ನಡುವೆ, ಹಯಗ್ರೀವದ ಕ್ಲೋಸ್‌ಅಪ್ ಚಿತ್ರವೊಂದನ್ನು ಕ್ಲಿಿಕ್ಕಿಸಿ ‘ಇಲ್ಲಿ
ನೋಡಿ ದ್ರಾಕ್ಷಿ ಗೋಡಂಬಿ ಈಗಲಾದರೂ ಕಾಣಿಸುತ್ತಿದೆಯಾ?’ ಎಂದು ಅತ್ತಿಗೆ ಇನ್ನೊೊಂದು ಪಟವನ್ನೂ ಗ್ರೂಪಲ್ಲಿ ಹಾಕಿದರೆನ್ನಿ.

ಆದರೆ ರಂಗೇರಿಸಿದ್ದು ಹಯಗ್ರೀವವಲ್ಲ, ಅಡುಗೆಮನೆ ಡಬ್ಬಿಗಳ ಮೇಲೆ ದಾಳಿ. ಅದರಿಂದ ಸಿಗುವ ಥ್ರಿಲ್. ಬಹುಶಃ ಇದಿಷ್ಟನ್ನು ಓದುವ ಹೊತ್ತಿಗೆ, ನಿಮ್ಮೊೊಳಗಿನ ದಾಳಿಕೋರನೂ ಜಾಗೃತನಾಗಿರುತ್ತಾನೆ. ಅಥವಾ ನೀವು ಅಪರೂಪದಲ್ಲಿ ಅಪರೂಪದ ಸಾಧುಜೀ ಅಂತಾದರೆ ನಿಮ್ಮನೆಯಲ್ಲಿರುವ ಬೇರೆ ದಾಳಿಕೋರರ ಚಿತ್ರ ನಿಮ್ಮ ಕಣ್ಮುಂದೆ ಬಂದಿರುತ್ತದೆ! ಅದರಲ್ಲಿ ಲಿಂಗ – ವಯಸ್ಸು – ಅಂತಸ್ತಿನ ಭೇದ ಏನಿಲ್ಲ. ಊರಿಗೆ ಅರಸನಾದರೂ ತಾಯಿಗೆ ಮಗ ಗಾದೆಯಂತೆ ದೇಶಕ್ಕೆ ರಕ್ಷಣಾಸಚಿವನೋ ಗೃಹಮಂತ್ರಿಯೋ ಆಗಿದ್ದರೂ ಅಡುಗೆಮನೆಗೆ ಬಂದಾಗ ಆತನೂ ದಾಳಿಕೋರನೇ. ಆಬಾಲವೃದ್ಧರಾಗಿ ಎಲ್ಲರೂ ದಾಳಿಕೋರರೇ. ‘ಅವಳ ಹೆಸರು ಪದ್ದು…’ ಅಂತೊಂದು ಶಿಶುಗೀತೆ ನೀವು ಕೇಳಿರಬಹುದು. ಅದು ಹೀಗಿದೆ: ‘ಅವಳ ಹೆಸರು ಪದ್ದು ಬುದ್ಧಿಯಿಲ್ಲ ಪೆದ್ದು ಮನೆಯಲೆಲ್ಲ ಮುದ್ದು ತಿನ್ನೋೋದೆಲ್ಲ ಕದ್ದು ಒಮ್ಮೆ ಸಿಕ್ಕಿ ಬಿದ್ದು ಬಿತ್ತು ನಾಲ್ಕು ಗುದ್ದು!’ ಹಾಗಂತ, ದಾಳಿ
ಮಾಡುವುದನ್ನು ‘ಕದಿಯುವುದು’ ಎಂದು ಅಪರಾಧದಂತೆ ಬಿಂಬಿಸಬೇಕಿಲ್ಲ. ಅದು ದುರಭ್ಯಾಸ ಅಲ್ಲ. ದೈಹಿಕ/ಮಾನಸಿಕ
ರೋಗವಂತೂ ಅಲ್ಲವೇಅಲ್ಲ. ದಾಳಿಕೋರರೆಂದರೆ ತಿಂಡಿಪೋತರು ಎನ್ನಬೇಕಾಗಿಯೂ ಇಲ್ಲ. ಅದೊಂದು ಕ್ಷಣಿಕ ಥ್ರಿಲ್. ಸಣ್ಣ
ಸಂಭ್ರಮ. ಹಾಗೆ ದಾಳಿ ಮಾಡಿ ಡಬ್ಬಿಯಿಂದ ಡೈರೆಕ್‌ಟ್‌ ಆಗಿ ತಿಂದರೇನೇ ನಾಲಗೆಗೆ ಹೆಚ್ಚು ರುಚಿ, ಮನಸ್ಸಿಗೆ ಹೆಚ್ಚು ತೃಪ್ತಿ.
ಮಕ್ಕಳಷ್ಟೇ ಅಲ್ಲ ಮುದುಕರೂ ಈ ಮಾತನ್ನು ಅನುಮೋದಿಸುತ್ತಾರೆ.

ಹತ್ತು ವರ್ಷಗಳ ಹಿಂದೆ ಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣದಲ್ಲಿ ಒಮ್ಮೆ ಓದುಗರಿಂದ ಭೋಗ ಷಟ್ಪದಿ
ಛಂದಸ್ಸಿಿನಲ್ಲಿ ಸ್ವರಚಿತ ಷಟ್ಪದಿಗಳನ್ನು ಆಹ್ವಾನಿಸಿದ್ದೆೆ. ಆಗ ನ್ಯೂಯಾರ್ಕ್‌ನಲ್ಲಿದ್ದ, ಈಗ ಮೈಸೂರಿಗೆ ಮರಳಿರುವ, ಧರ್ಮ
ಶ್ರೀ ಐಯಂಗಾರ್ ಹೀಗೊಂದು ಭೋಗ ಷಟ್ಪದಿ ಹೊಸೆದು ಕಳುಹಿಸಿದ್ದರು: ‘ಬಿರುಕು ಹಲ್ಲು ತಾತನೊಬ್ಬ ಕುರುಕು ತಿಂಡಿ ಡಬ್ಬದೊಳಗೆ ತುರುಕಿ ಕೈಯ ತೆಗೆದು ತಿಂದ ಕರಿದ ತಿಂಡಿಯ॥ ಮುರುಕು ಮಣೆಯ ಕೆಳಗಿನಿಂದ ಹರಕು ಚಾಪೆ ಕೊಂಚಕೊಂಚ ಸರಿದು ಬಿದ್ದು ತರಚಿಕೊಂಡ ತನ್ನ ಮಂಡಿಯ॥’ ನೋಡಿ, ಜಿಹ್ವಾಚಾಪಲ್ಯದ ಆ ತಾತ ತಿಂಡಿ ಡಬ್ಬಿಯ ಮೇಲೆ ದಾಳಿಯಿಡಲು ಎಷ್ಟೆೆಲ್ಲ ಸರ್ಕಸ್ ಮಾಡಬೇಕಾಯ್ತು!

ಚಾಪೆಯ ಮೇಲೆ ಮಣೆಯನ್ನಿಟ್ಟು ಅದರ ಮೇಲೆ ಏರಿದನಾ, ಚಾಪೆ ಸ್ವಲ್ಪಸ್ವಲ್ಪವೇ ಜಾರಿದಾಗ ತಾತ ಬ್ಯಾಲೆನ್‌ಸ್‌ ತಪ್ಪಿ ಧೊಪ್ಪನೆ
ಕೆಳಗೆ. ಅತ್ತ ತಿಂಡಿಯೂ ಸಿಗಲಿಲ್ಲ, ಇತ್ತ ಮನೆಯವರೆಲ್ಲರಿಗೆ ಗೊತ್ತಾಯ್ತು! ದಾಳಿಯಿಡುವಾಗ ತೆಗೆದುಕೊಳ್ಳಬೇಕಾದ ಇನ್ನೊೊಂದು ಜಾಗ್ರತೆಯೆಂದರೆ ಡಬ್ಬಿಯ ಮುಚ್ಚಳ ತೆರೆಯುವ/ ಹಾಕುವ ಸದ್ದಾಗಬಾರದು. ದಾಳಿಗೆ ತುತ್ತಾದದ್ದು ದ್ರಾಕ್ಷಿ,
ಗೋಡಂಬಿ, ಅಥವಾ ಬೇಸನ್‌ಲಡ್ಡು ಮೈಸೂರುಪಾಕ್ ಕೊಬ್ರಿಮಿಠಾಯಿ ಅತಿರಸದಂಥ ತಿಂಡಿಯಾದರೆ ತೊಂದರೆಯಿಲ್ಲ,
ಚಕ್ಕುಲಿ ಕೋಡುಬಳೆ ನಿಪ್ಪಟ್ಟು ಶಂಕರಪೋಳೆ ಹಲಸಿನಕಾಯಿ ಚಿಪ್‌ಸ್‌‌ನಂಥ ಕುರುಕಲು ತಿಂಡಿ ಅಂತಾದರೆ ಕರುಂಕುರುಂ ಶಬ್ದ
ಮನೆಮಂದಿಗೆ ಕೇಳಬಾರದು. ಆ ಚಾಕಚಕ್ಯತೆ ಯಾವತ್ತಿಗೂ ಅವಶ್ಯ.

ಅಂಥವುಗಳನ್ನು ಬಾಯಲ್ಲೇ ಸ್ವಲ್ಪ ಹೊತ್ತು ಲಾಲಾರಸದಲ್ಲಿ ನೆನೆಸಿ ನುಂಗುವ ಜಾಣ್ಮೆೆಯೂ ಬೇಕು. ಯಾರಾದರೂ ಕೇಳಿದರೆ
ಬಾಯ್ತೆರೆದು ತೋರಿಸಿ ಏನೂ ತಿಂದಿಲ್ಲ ಎಂದರಾಯ್ತು. ಬೆಣ್ಣೆ ತಿಂದಿಲ್ಲ ಮಣ್ಣು ತಿಂದಿಲ್ಲ ಎನ್ನುತ್ತ ಬಾಲಕೃಷ್ಣ ಯಶೋದೆ
ಯೆದುರು ಬಾಯ್ತೆರೆದಿರಲಿಲ್ಲವೇ? ಕೆಲವೊಮ್ಮೆ ಅಡುಗೆಮನೆ ಡಬ್ಬಿಗಳಲ್ಲಿ ತಿಂಡಿಪದಾರ್ಥ ಏನೂ ಇಲ್ಲವೆಂಬ ಪರಿಸ್ಥಿಿತಿ ಬರುತ್ತದೆ. ಏನೂ ಸಿಗದಿದ್ದರೆ ಕಲ್ಲುಸಕ್ಕರೆ ಅಥವಾ ಒಂದು ತುಂಡು ಬೆಲ್ಲವೇ ಗತಿ. ಹಾಂ! ಬೆಲ್ಲವೆಂದಾಗ ನೆನಪಾಯಿತು. ರಾಮಕೃಷ್ಣ ಪರಮಹಂಸರು ಬಹುಶಃ ಅದನ್ನೇ ಮಾಡುತ್ತಿದ್ದರು. ಬೆಲ್ಲ ತಿನ್ನುವ ಅಭ್ಯಾಾಸ ಬಿಡಿಸುವಂತೆ ಅವರಿಂದ ಹೇಳಿಸಲು ತಾಯಿ ಯೊಬ್ಬಳು ತನ್ನ ಮಗನನ್ನು ಕರೆದುಕೊಂಡು ಅವರ ಬಳಿಗೆ ಹೋದದ್ದು, ಒಂದು ವಾರ ಬಿಟ್ಟು ಬಾರಮ್ಮಾ ಆಗ ಹೇಳುವೆ ಎಂದು ಪರಮಹಂಸರು ಹೇಳಿದ್ದು, ಒಂದು ವಾರ ಬಿಟ್ಟು ಹೋದಾಗ ‘ಮಗೂ, ಬೆಲ್ಲ ತಿನ್ನುವುದು ಒಳ್ಳೆಯದಲ್ಲ, ಬಿಟ್ಟುಬಿಡು’ ಎಂದಷ್ಟೇ ಬೋಧನೆ ಮಾಡಿದ್ದು, ‘ಇದನ್ನು ಆವತ್ತೇ ಹೇಳಬಹುದಿತ್ತಲ್ಲ?’ ಎಂದು ಆ ತಾಯಿಯು ಆಕ್ಷೇಪಿಸಿದ್ದು, ‘ಹೇಳಬಹುದಿತ್ತು ತಾಯಿ, ಆದರೆ ನನಗೇ ಆ ಅಭ್ಯಾಸ ಇತ್ತು, ಅದನ್ನು ಬಿಟ್ಟಮೇಲಷ್ಟೇ ಉಪದೇಶ ಮಾಡಿದ್ದೇನೆ’ ಎಂದು ಪರಮಹಂಸರು ಹೇಳಿದ್ದು… ಈ ಕತೆ ನಿಮಗೆ ಗೊತ್ತಿದೆ. ರಾಮಕೃಷ್ಣ ಪರಮಹಂಸರೂ ‘ಅಡುಗೆಮನೆಯಲ್ಲಿ ಡಬ್ಬಿಗೆ ದಾಳಿಯಿಟ್ಟವರೇ’ ಅಡಿಗೆರೆ ಹಾಕಿ ದಪ್ಪ ಅಕ್ಷರಗಳಲ್ಲಿ ಬರೆಯಬೇಕಾದ ಸಂಗತಿ.

ಕನ್ನಡನಾಡು ಕಂಡ ಮಹಾನ್ ದಾರ್ಶನಿಕ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಏನು ಕಡಿಮೆಯೇ? ‘ಬ್ರಹ್ಮಪುರಿಯ ಭಿಕ್ಷುಕ: ಡಿಜಿಯವರ ಜೀವನದ ನೂರಾರು ರಸಪ್ರಸಂಗಗಳು’ ಪುಸ್ತಕದಲ್ಲಿ ಶತಾವಧಾನಿ ಡಾ.ಆರ್.ಗಣೇಶ್
ಬಣ್ಣಿಸಿರುವ ಕೆಲವು ರಸಪ್ರಸಂಗಗಳು ‘ರಸನಾ’ಪ್ರಸಂಗಗಳೂ ಹೌದು. ಡಿಜಿಯವರಿಗೆ ಲಾಗಾಯ್ತಿನಿಂದಲೂ ಅನ್ನಕೋಶದಲ್ಲಿ
ಆನಂದಕೋಶವನ್ನು ಕಾಣುವ ಬಯಕೆ. ಈ ಚಪಲದಲ್ಲಿ ಓದು ಸದಾ ಹಿಂದಾಗುತ್ತಿತ್ತು. ಗಣಿತ – ಸಂಸ್ಕೃತ ವ್ಯಾಕರಣದಂಥ ಬುದ್ಧಿಗೆ ಕಸರತ್ತಾಗುವ, ತರ್ಕ – ಕಂಠಪಾಠಗಳ ಶಿಸ್ತನ್ನು ಬಯಸುವ ವಿಷಯಗಳೆಂದರೆ ಅವರಿಗೆ ಎಳೆವೆಯಲ್ಲಿ ಅನಿಚ್ಛೆ. ಹೀಗಾಗಿಯೇ,  ಅವರ ಸೋದರತ್ತೆೆ ‘ಗುಂಡ ಭಂಡಂ ತಿಂಡಿಕಿ ಶೂರಂ ಚಂಡಾಲ ಮುಂಡೇಗಂಡಂ ಪುಸ್ತಕಮು ಚೇತಕಿಸ್ತೇ ತೂಕಡಿಂಚುನೇ ಮುಚ್ಚೋರಲು ಮುಂದ್ರ ಪೆಟ್ತೇ ಕಂಡ್ಲು ತೆರೆಚೆನೇ’ (ಪುಸ್ತಕ ಕೈಗಿಟ್ಟರೆ ತೂಕಡಿಸುವನು ಮುಚ್ಚೋರೆಯನ್ನು ಮುಂದಿಟ್ಟರೆ ಕಣ್ಣು ತೆರೆವನು) ಎಂದು ಗೇಲಿ ಮಾಡುತ್ತಿದ್ದರಂತೆ. ಚಕ್ಕುಲಿ, ಕೋಡುಬಳೆ, ವಡೆ, ಪಕೋಡಾ, ಉಂಡೆ, ಹಲ್ವಾ, ಚಿರೋಟಿ ಮುಂತಾದ  ಖಾದ್ಯಗಳನ್ನು ಬಯಸಿಬಯಸಿ ಮನದಣಿಯೆ ತಿಂದು ತೇಗಿ ನಲಿದವರು ಡಿಜಿ. ‘ಬೇಟಕಾರ ಮಾದ ಬಂದ ಹಹ್ಹ! ಏನು ಬೇಟವೋ!’ ಎಂದು ಬಿಎಂಶ್ರೀಯವರು ಕತೆ ವಾಚಿಸುತ್ತಿದ್ದರೆ ‘ಊಟಕಾರ ಗುಂಡ ಬಂದ ಹಹ್ಹ! ಏನು ಊಟವೋ!’ ಎಂದವರು ಡಿವಿಜಿ.

ಮನೆಗೆ ಬಂದಿದ್ದ ವಿದ್ವಾನ್ ರಂಗನಾಥ ಶರ್ಮರಿಗೆ ಒಂದು ತಟ್ಟೆೆಯಲ್ಲಿ ಮತ್ತು ಗುಂಡಪ್ಪನವರಿಗೆ ಒಂದು ತಟ್ಟೆಯಲ್ಲಿ ಬಿಸಿಬಿಸಿ
ಹೀರೇಕಾಯಿ ಬೋಂಡ ಕೊಡಲು, ಮಿತಾಹಾರಿ ಶರ್ಮರು ಒಂದೇ ಬೋಂಡ ಸ್ವೀಕರಿಸಿ ತಟ್ಟೆ ಬದಿಗೆ ಸರಿಸಲು, ಗುಂಡಪ್ಪನವರು
ಅದನ್ನೂ ತಮ್ಮ ಪಾಲಿಗೆ ಬಳಸಿಕೊಳ್ಳುತ್ತ ನುಡಿದರಂತೆ: ‘ಪಂಡಿತರೇ ನಿಮ್ಮ ಹೊಟ್ಟೆೆ ಲೇಡಿಸ್ ರಿಸ್‌ಟ್‌‌ವಾಚ್… ಪ್ರಯೋಜನವಿಲ್ಲ. ನನ್ನ ಹೊಟ್ಟೆ ನೋಡಿ. ಬಿಗ್ ಬೆನ್ ಗಡಿಯಾರ!’ ಹಾಸ್ಯಸಾಹಿತಿ ದಾಶರಥಿ ದೀಕ್ಷಿತ್ ‘ಪಕೋಡಪ್ರಿಯ ಡಿವಿಜಿಯವರಿಗೆ’ ಎಂದೇ ತಮ್ಮೊೊಂದು ಕೃತಿಯನ್ನು ಅರ್ಪಿಸಿ ದ್ದಾರಂತೆ. ಅಂದಮೇಲೆ, ಡಿವಿಜಿಯವರು ಅಡುಗೆಮನೆ ಡಬ್ಬಿಗಳ ಮೇಲೆ ದಾಳಿ ಇಟ್ಟಿಲ್ಲವೇ? ಈಗ ಹೇಳಿ. ದಾಳಿಕೋರರಾಗಿ ಅಥವಾ ಒಟ್ಟಾರೆ ಇಂಥ ದಾಳಿಗಳ ಅರಿವು ಇರುವವರಾಗಿ ನಿಮ್ಮ ಅನುಭವಗಳೇನು? ಕಿಚನ್‌ನಲ್ಲಿ ಒಂದು ಕ್ಯಾಬಿನೆಟ್‌ಗಾದರೂ ಬೀಗದ ವ್ಯವಸ್ಥೆೆಮಾಡಿಸ ಬೇಕಾಗಿ ಬಂದಿರುವವರು ನಿಮ್ಮಲ್ಲಿ ಯಾರೆಲ್ಲ ಇದ್ದೀರಿ?

Leave a Reply

Your email address will not be published. Required fields are marked *