Thursday, 19th September 2024

ರಾಮ ಅಯೋಧ್ಯೆಯಲ್ಲೇ ಇದ್ದಾನೆ!

ದಾಸ್ ಕ್ಯಾಪಿಟಲ್
ಟಿ.ದೇವದಾಸ್ ಬರಹಗಾರ ಶಿಕ್ಷಕ

ಒಂದು ವರ್ಗದವರಿಗೆ, ಅಯೋಧ್ಯೆೆಯನ್ನು ಬಿಟ್ಟು ರಾಮನನ್ನು ಎಲ್ಲೆಲ್ಲೋ ಹುಡುಕುವ ಅತ್ಯಾತುರ.
ಹುಂಬು ಹುಚ್ಚುಹಠ. ತೀರಲಾರದ ದುರ್ವಾಂಛೆ. ಇನ್ನೊೊಂದು ವರ್ಗದವರಿಗೆ, ರಾಮ ಎಲ್ಲೆಲ್ಲೂ ಇಲ್ಲ ವೆನ್ನುವ ಹಪಹಪಿಯ ದುರ್ಬುದ್ಧಿ. ಯಾಕೆಂದರೆ ಅವರಿಗೆ ತಿಳಿದಿರುವ ಭರತಭೂಮಿಯ ಅಯೋಧ್ಯೆೆಯಲ್ಲಿ ರಾಮ ಜನಿಸಿದವ ಎಂಬುದನ್ನು ಉದ್ದೇಶವೋ, ದುರುದ್ದೇಶವೋ ದುರ್ಭಾವನೆಯೋ ಅತ್ಯವಸರವೋ ಅಲ್ಲಗಳೆಯುವ ತುಡಿತ. ವಿಕೃತ ದುರ್ವ್ಯಸನ. ಮತ್ತೊೊಂದು ವರ್ಗದವರಿಗೆ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ ಎಂದವನನ್ನು ಅವನ ಜನ್ಮಭೂಮಿಯಿಂದಲೇ ಓಡಿಸುವ ಅತೀಬುದ್ಧಿ!

ರಾಮ ಕುಡುಕ ಎಂದು ವಾಲ್ಮೀಕಿ ಬರೆದ ಎಂದವರಿದ್ದಾರೆ. ರಾಮಾಯಣ ಗೊತ್ತಿಲ್ಲದವರಿಗೆ ರಾಮ ಯಾರು ಎಂಬ ಪ್ರಶ್ನೆ ಹುಟ್ಟೀತೇ ಹೊರತು ಮತಿವಂತರಿಗಲ್ಲ! ಶತಶತಮಾನ ಗಳಿಂದಲೂ ರಾಮನ ಜನ್ಮಭೂಮಿ ಅಯೋಧ್ಯೆ ಎಂಬುದು ಈ ದೇಶವಾಸಿಗಳ ಬಲವಾದ ನಂಬಿಕೆ. ಜಗತ್ತು ನಂಬಿದ್ದೂ ಈ ಸತ್ಯವನ್ನೇ! ಪಾಷಂಡಿಗಳೂ ಇದನ್ನು ಒಪ್ಪಿಯೇ ರಾಮ ಎಂದಾಕ್ಷಣ ಅಯೋಧ್ಯೆ, ಅಯೋಧ್ಯೆ ಎಂದಾಕ್ಷಣ ರಾಮ
ಎನ್ನುವ ಅವಸರಕ್ಕೆ ಬೀಳುವುದು. ಇಂಥವರಿಗೆಲ್ಲ ಈಗ ಜ್ಞಾನೋದಯವಾಗಿದೆ: ರಾಮ ಅಯೋಧ್ಯೆೆಯಲ್ಲೇ
ಇದ್ದಾನೆ! ಅಲ್ಲಿಯೇ ಅವನ ಬೃಹತ್ ಮಂದಿರಕ್ಕೆ ಶಿಲಾನ್ಯಾಸವಾಗಿದೆ.

ಇದು ರಾಮನ ಗೆಲುವೂ ಹೌದು, ಸಮಸ್ತ ರಾಮಾರಾಧಕರದ್ದೂ ಅಹುದು. ಅಷ್ಟೇ ಅಲ್ಲ ರಾಮವಿರೋಧಿ ಗಳದ್ದೂ ಅಲ್ಲ. ರಾಮನಿಲ್ಲದ ಬರಿಯ ಅಯೋಧ್ಯೆ, ಅಯೋಧ್ಯೆೆಯನ್ನು ಬಿಟ್ಟ ರಾಮನ ಅಸ್ಮಿತೆ, ಎರಡೂ ಇಲ್ಲದ ಇಡಿಯ ಭಾರತವೇ ಶೂನ್ಯ! ಪುಣ್ಯ ಹಾಗಾಗಲಿಲ್ಲ, ರಾಮನನ್ನು ಹುಡುಕಬೇಕಾಗಿದೆ ಎಂದವರು
ಅಯೋಧ್ಯೆೆಗೆ ಹೋಗಬಹುದು.

ರಾಮ ಜನ್ಮಭೂಮಿ ದೀರ್ಘ ಸಂಘರ್ಷದ ನೆಲೆಗಳ ವಿಚಾರಕ್ಕೆ ಬರೋಣ: ಹಿಂದೆ ರಾಮಜನ್ಮಭೂಮಿ ಇತ್ತು.
ಬಾಬರ್ ಅದನ್ನಾಕ್ರಮಿಸಿದ. ಮಸೀದಿ ಕಟ್ಟಿದ. ಅದು ಬಾಬರೀ ಮಸೀದಿ ಆಯಿತು. ಆದರೆ ಇತಿಹಾಸ ಅದನ್ನು
ರಾಮಜನ್ಮಭೂಮಿಯೆಂದೇ ಉಲ್ಲೇಖಿಸಿತು. ಅಲ್ಲಿಂದಲೇ ಸಂಘರ್ಷ ಹುಟ್ಟಿಕೊಂಡಿತು. ಆದರೆ, ಧರ್ಮ ಇರುವುದು ಸಂಘರ್ಷಕ್ಕಲ್ಲ; ಸಂವಾದಕ್ಕೆ. ರಾಮನ ಜನ್ಮ ಅಯೋಧ್ಯೆಯಲ್ಲೇ ಆಗಿತ್ತು – ಇದು ಐತಿಹಾಸಿಕ ಸತ್ಯ. ಇದನ್ನು ಮರೆಮಾಚಲು ಯಾರಿಗೆ ಹೇಗೆ ಸಾಧ್ಯ? ಕೇವಲ ವಿತಂಡವಾದಿಗಳಿಗಾದೀತು. ಆದರೆ ಐತಿಹಾಸಿಕ ಸತ್ಯವನ್ನು ವಾದಗಳಿಂದ ಸುಳ್ಳುಮಾಡಲು ಸಾಧ್ಯವಿಲ್ಲ. ಇದನ್ನು ಒಪ್ಪದವರು ಅಲ್ಲಿರುವುದು ಬಾಬರಿ ಮಸೀದಿಯೆಂದು ಹಠ ತೊಟ್ಟರು. ಅದಕ್ಕೆೆ ರಾಜಕೀಯವೂ ಸೇರಿತು. ಯಾಕೆಂದರೆ ಅವರಿಗೆ ಇತಿಹಾಸ ಗೊತ್ತಿಲ್ಲ. ಕಾಲಪ್ರಜ್ಞೆಯೂ ಇಲ್ಲ. ರಾಮ ಮೊದಲೋ ಬಾಬರ್ ಮೊದಲೋ – ಅವರಲ್ಲಿ ಉತ್ತರವಿಲ್ಲ.

ಯಾಕೆಂದರೆ ಅವರಿಗೆ ಗೊತ್ತು: ಮಸೀದಿಯನ್ನು ಸ್ಥಳಾಂತರಿಸಬಹುದು, ಜನ್ಮಭೂಮಿಯನ್ನಲ್ಲ! ಜನ್ಮಭೂಮಿ
ಯನ್ನು ಬೇರೆಡೆ ಕಟ್ಟಿಿದರೆ ಅದು ಜನ್ಮಭೂಮಿಯೆನಿಸುವುದಿಲ್ಲ. ಅದು ಮಸೀದಿಯಾದೀತು, ಆಗುತ್ತದೆ. ಆದರೂ ಸಂಘರ್ಷ ತಾರಕಕ್ಕೇರಿ ನ್ಯಾಯಾಲಯದ ಮೆಟ್ಟಿಲೇರಿತು. ಸತ್ಯದ ಪರ ತೀರ್ಪು ಬಂತು. ರಾಮಭಕ್ತರಿಗೆ
ಜಯವಾಯಿತು. ದೇಶವಾಸಿಗಳ ನಂಬಿಕೆ ಗೆದ್ದಿತು. ಒಂದು ಸತ್ಯ ಅರಿವಾಯಿತು; ನಮ್ಮ ಐತಿಹಾಸಿಕ ನಂಬಿಕೆಯನ್ನು ಗಟ್ಟಿಗೊಳಿಸಬೇಕಾದವರು ನಾವೇ, ಅನ್ಯರಲ್ಲ. ಬಹುಕಾಲದ ಒಂದು ಸಂಘರ್ಷಕ್ಕೆ ಪೂರ್ಣವಿರಾಮ ಬಿತ್ತು. ಶ್ರೀರಾಮ ನಿರುಂಬಳನಾದ. ಇನ್ನು ತನ್ನ ಹೆಸರಿನಲ್ಲಿ ರಾಜಕೀಯ ಬೇಡ
ಎನ್ನಿಸಿತೇನೋ ಪಾಪ ಅವನಿಗೆ!

ಹಿನ್ನೋಟ: ರಾಮಮಂದಿರ ವಿಚಾರದಲ್ಲಿ ತಾನು ಬುಖಾರಿ ಚೀಲ ಎನ್ನುವಂತೆ ಪೋಸು ಕೊಟ್ಟವರು ವಿ.ಪಿ.ಸಿಂಗರು. ಮೊದಲೇ ಇದ್ದ ಹಿಂದೂ – ಮುಸ್ಲಿಂ ವೈರಸ್ಯಕ್ಕೆ ತುಪ್ಪ ಸುರಿದವರು ಅವರೇ! ರಾಮಮಂದಿರ ವಿವಾದ ಯಾವತ್ಕಾಲಕ್ಕೂ ಪರಿಹಾರವಾಗಲೇಬಾರದು ಎಂದು ತೀರ್ಮಾನಿಸಿ ರಾಜಕೀಯ ಮಾಡಿದ ಅಸಮತೋಲ ಪ್ರಜ್ಞೆಯ ಪ್ರಧಾನಿ ವಿ.ಪಿ.ಸಿಂಗರು ಎಂಬುದನ್ನು ವಿಶಾದದಿಂದ ಹೇಳಬೇಕಾಗುತ್ತದೆ. ದೇವೀಲಾಲರಿಗೆ ಬುದ್ಧಿ ಕಲಿಸುವ ವಿಪರೀತದ ಮಹತ್ವಾಕಾಂಕ್ಷೆಯ ವಿ.ಪಿ.ಸಿಂಗರು ಅನಗತ್ಯ ಗೊಂದಲ ನಿರ್ಮಿಸಿ ನೂರಾರು ಯುವಕ ಯುವತಿಯರ ಸಾವಿಗೆ ಕಾರಣರಾದರು. ದುಡುಕು ಅವರ ಅತೀ ಕೆಟ್ಟ ಸ್ವಭಾವ. ತನ್ನ ದುಡುಕಿನ ತೀರ್ಮಾನಗಳಿಂದ ಸತ್ತವರ ಬಗ್ಗೆೆ ನಯಾಪೈಸೆ ಅನುಕಂಪ ತೋರಿದ ಪ್ರಧಾನಿಯಲ್ಲ ಅವರು! ತಾನು ಬಡವರ, ದಲಿತರ ಪಕ್ಷಪಾತಿಯೆಂದ ಬಿಂಬಿಸಿಕೊಳ್ಳುವ ಅತೀ ಚಪಲ. ಮಂಡಲ ವರದಿ ಇವರಿಂದ ಹುಟ್ಟಿದ immoral, dishonourable ಅಚಾತುರ್ಯ. ವಿ.ಪಿ.ಸಿಂಗರಿಗೆ ರಾಷ್ಟ್ರೀಯ ದೃಷ್ಟಿಕೋನ
ಮತ್ತು ರಾಜಕಾರಣದ ತಂತ್ರಗಳ ನಿರೂಪಣೆ ಮತ್ತು ನಿರ್ವಹಣೆಯಲ್ಲಿ ದೂರದೃಷ್ಟಿ ಇಲ್ಲವಾಗಿತ್ತು. ಮಂಡಲ
ಆಯೋಗವನ್ನು ಜಾರಿಗೆ ತರಲೇಬೇಕೆಂಬ ಹಠದಲ್ಲಿ ಅವರ ನಿರ್ಧಾರಗಳು ಭಾರತದ ಸಂವಿಧಾನದ ಜಾತ್ಯತೀತ
ನಿಲುವನ್ನು ಅಣಕಿಸಿತ್ತು. (ಜಾತಿಯಾಧಾರಿತ ಮೀಸಲಾತಿಯನ್ನು ಯಾರೂ ಜಾರಿಗೆ ತಂದರೂ ಅದು ಜಾತ್ಯಾತೀತ ಭಾರತದ ನಿಲುವಿಗೆ ವ್ಯತಿರಿಕ್ತವಾಗಿರುತ್ತದೆಂಬುದನ್ನು ಮರೆಯಬಾರದು) ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ‘ಪೈಗಂಬರ ಜಯಂತಿ’ಗೆ ರಜೆ ಘೋಷಿಸಲಾಗುವುದು ಎಂದು ಪ್ರಧಾನಿಯಾಗಿ ಘೋಷಣೆ ಮಾಡಿದ್ದು ವಿ.ಪಿ.ಸಿಂಗರ ಹೇಡಿತನವಾಗಿ ಕಂಡಿತ್ತು. ಕೇವಲ ಒಂದು ಸಮುದಾಯದ ಓಲೈಕೆಗಾಗಿ ಮಾಡಿದ ಈ ಘೋಷಣೆ ಜಾತ್ಯತೀತ ಭಾರತಕ್ಕೆ ಉಚಿತವಲ್ಲ, ಒಗ್ಗುವಂಥದ್ಧಲ್ಲ ಮತ್ತು ಸಮರ್ಥನೀಯವೂ ಅಲ್ಲ ಎಂಬ ಸಾಮಾನ್ಯ ಅರಿವು ಅವರಲ್ಲಿ ಕಾಣದೇ ಹೋಯಿತು.

ಜಾತ್ಯತೀತ ರಾಷ್ಟ್ರವೊಂದರಲ್ಲಿ ಪೈಗಂಬರ ಜಯಂತಿಯಂತೆ ಇನ್ನುಳಿದ ಮತಗಳಲ್ಲಿಯೂ ಇರುವ ಜಯಂತಿಗಳಿಗೆ ರಜೆ ಘೋಷಿಸಲೇಬೇಕಾದುದು ಪ್ರಧಾನಿಗಳ ಧರ್ಮ ಮತ್ತು ಕರ್ತವ್ಯವಾಗಿ ಬಿಡುತ್ತದೆ. ಹಾಗೆ ಎಲ್ಲ ಮತ – ಧರ್ಮಗಳಲ್ಲಿಯೂ ಇರುವ ಜಯಂತಿಗೆ ರಜೆ ಘೋಷಣೆ ಮಾಡಲು ಸಾಧ್ಯವೇ? ಮಾಡುವುದು ಸಾಧುವೆ? ಪೈಗಂಬರ ಜಯಂತಿಗೆ ಮಾತ್ರ ರಜೆ ಘೋಷಣೆ ಮಾಡಿದ್ದು ಬಹುಸಂಖ್ಯಾತರಿಗೆ, ಇತರ ಸಣ್ಣಸಣ್ಣ ಮತ – ಧರ್ಮಗಳ ಸಮುದಾಯಗಳಿಗೆ ನೋವಾಗುತ್ತದೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇದರಿಂದ ಇನ್ನಷ್ಟು ಅದ್ವಾನಗಳು ಗೊಂದಲಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಆಗ ಸಂಭವಿಸಬಹುದಾದ ಅಚಾತುರ್ಯ ಅನಾಹುತಗಳಿಗೆ ಯಾರು ಹೊಣೆಯಾಗುತ್ತಾರೆ? ಘೋಷಣೆ ಮಾಡಿದವರು ತಾನೆ? ಆದರೆ ಇದ್ಯಾವುದರ ಚಿಂತೆಯೇ ಇಲ್ಲದೆ ರಜೆ ಘೋಷಣೆ ಮಾಡಿಬಿಡುವ ಹಪಹಪಿ ಅವರಿಗೆ. ಇಂಥ ಸಂದರ್ಭ ಸನ್ನಿವೇಶದಲ್ಲಿದ್ದ ಭಾರತಕ್ಕೆ, ಸ್ವಾತಂತ್ರ್ಯಪೂರ್ವ ಜೀವನಮೌಲ್ಯಗಳನ್ನು ರೂಢಿಸಿಕೊಂಡ ಸಜ್ಜನ ಎಂದು ವಿಪಕ್ಷ ನಾಯಕರಾದ ಅಡ್ವಾಣಿಯವರಿಂದ ಪ್ರಶಂಸಿಸಲ್ಪಟ್ಟ ನರಸಿಂಹರಾವ್ ಅವರು ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬಂದರು. ಈ ಮಧ್ಯೆ ಸ್ವಲ್ಪಾವಧಿಗೆ ಅಂದರೆ ಏಳು ಕಾಲು ತಿಂಗಳು ಚಂದ್ರಶೇಖರ ಪ್ರಧಾನಿಯಾಗಿದ್ದರು.

ರಾಮಮಂದಿರದ ವಿವಾದ ವಿ.ಪಿ.ಸಿಂಗರ ಕಾಲದಲ್ಲಿ ಚರ್ಚೆ, ವಿಚರ್ಚೆ, ಜನಪ್ರಿಯತೆ ಚಲಾವಣೆಗೆ ಬಂದಷ್ಟು
ಚಂದ್ರಶೇಖರರ ಕಾಲದಲ್ಲಿ ಬರಲಿಲ್ಲವೆಂದೇ ಹೇಳಬಹುದು. ಆದರೆ ಅಷ್ಟೊತ್ತಿಗಾಗಲೇ ವಿ.ಪಿ.ಸಿಂಗರು ಮಾಡಬಾರದ ಅನ್ಯಾಯಗಳನ್ನು ರಾಷ್ಟ್ರಕ್ಕೆ ಮಾಡಿಬಿಟ್ಟಿದ್ದರು. ಅದೇನೆಂದರೆ, ಡಿಎಂಕೆ ಜೊತೆ ಸೇರಿದ್ದು, ತನ್ಮೂಲಕ ಎಲ್ ಟಿಟಿಐ ಬೆಳೆಯಲು ಕಾರಣವಾದದ್ದು, ಅದನ್ನು ಬೆಂಬಲಿಸಿದ್ದು, ಡಿಎಂಕೆ ತಾಳಕ್ಕೆ
ಕುಣಿದದ್ದು, ಕಾವೇರಿ ವಿವಾದ ಪ್ರಕರಣವನ್ನು ನ್ಯಾಯಮಂಡಳಿಗೊಪ್ಪಿಸಿ ಕರ್ನಾಟಕಕ್ಕೆ ಅನ್ಯಾಯ
ಮಾಡಿದ್ದು, ಮುಸ್ಲಿಂ ಹಬ್ಬಕ್ಕೆೆ ರಜೆ ಘೋಷಿಸಿದ್ದು ಎಡವಟ್ಟುಗಳು ಒಂದೇ ಎರಡೇ! ಇನ್ನು ಕರುಣಾನಿಧಿಯವರ ಅಪಲಾಪವಂತೂ ಹೇಳಿ ಮುಗಿಯದು! ಸಂದರ್ಭ ಸಿಕ್ಕಿದಾಗಲೆಲ್ಲ ಅವರು ರಾಮನನ್ನು, ರಾಮಾಯಣವನ್ನು, ರಾಮಮಂದಿರವನ್ನು ಅವಹೇಳನ ಮಾಡಿದವರು!

ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದು ಸಾಧ್ಯವಿಲ್ಲ! ಆದರೆ ರಾಜಕೀಯವು ಅಧರ್ಮ  ಮಾರ್ಗದಲ್ಲಿ ಸಾಗಲು ಸಾಧ್ಯವಾಗುವಂಥ ಧರ್ಮ ಅದಕ್ಕೆ ಬೇಕೇ ಬೇಕು.  ಅಂದರೆ ರಾಜಕೀಯದಲ್ಲಿ ಅಂಥ ಒಂದು ಧರ್ಮ ಇರಬಹುದು, ಇರಬೇಕು. ಆದರೆ ಧರ್ಮದಲ್ಲಿ ರಾಜಕೀಯ ನಡೆಯಬಾರದು. ಮಜಾ ಏನೆಂದರೆ ನಮ್ಮ ರಾಜಕೀಯ ಮುಖಂಡರನೇಕರಿಗೆ ಧರ್ಮದ ಸರಿಯಾದ ಪ್ರಜ್ಞೆಯಿಲ್ಲ.

ಧಾರ್ಮಿಕ ಮುಖಂಡರಿಗೆ ರಾಜಕೀಯದ ಪ್ರಜ್ಞೆಯಿಲ್ಲ. ರಾಮಮಂದಿರ ವಿಚಾರದಲ್ಲಿ ಈವರೆಗೂ ಆದದ್ದು ಇದೇ ದುರಂತ! ಹಾಗೆ ನೋಡಿದರೆ ನರಸಿಂಹರಾಯರ ನಿಲುವು ರಾಮಮಂದಿರ ವಿಚಾರದಲ್ಲಿ ತಕ್ಕಮಟ್ಟಿ ಗಾದರೂ ಸ್ಪಷ್ಟ ಮತ್ತು ನೇರವಾಗಿತ್ತು ಎನ್ನಬಹುದು. ಅವರ ಸಾಂದರ್ಭಿಕ ವಿಚಾರಗಳೂ ಏನೇ ಇರಲಿ. ಆದರೆ ಯಾವ ಕಾಂಗ್ರೆಸ್ಸಿಗರಿಗೂ ಇಂಥ ನಿಲುವು ಅಂದಿನ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ಇದ್ದುದರಲ್ಲಿ ರಾಜೀವ್ ಗಾಂಧಿ ಮತ್ತು ಪ್ರಣವ್ ಮುಖರ್ಜಿಯವರೇ ಈ ವಿಚಾರದಲ್ಲಿ ಉತ್ತಮರೆನಿಸುತ್ತದೆ.

ಸ್ವಾತಂತ್ರ್ಯಾನಂತರದಿಂದ ವರ್ತಮಾನದವರೆಗೂ ರಾಷ್ಟ್ರೀಯತೆಯ ಬಗ್ಗೆ ಚಿಂತಿಸುವುದೇ ಬಹುದೊಡ್ಡ ಅಪರಾಧವೆಂದೂ ಅಂಥವರನ್ನು ಸಂಪ್ರದಾಯ ವಾದಿಗಳೆಂದೂ ಕೋಮುವಾದಿಗಳೆಂದೂ ನಿಂದನೆಗಳು
ತೊಡಗುತ್ತವೆ. ಅತಿರೇಕವೆನ್ನಿಸುವ ಹುಯಿಲುಗಳು ಟ್ಟಿಕೊಳ್ಳುತ್ತವೆ. ಆದರೆ ಹಿಂದೂಗಳ ಬಗ್ಗೆ ಯಾರೇನೂ
ಮಾತಾಡಬಹುದು, ನಿಂದಿಸಬಹುದು, ಅವಹೇಳನ ಮಾಡಬಹುದು. ಆದರೆ ಹಿಂದೂಗಳು ಮಾತ್ರ ಧಾರ್ಮಿಕ
ಸೌಹಾರ್ದತೆ ಸಾಮರಸ್ಯವನ್ನು ಕಾಪಾಡಬೇಕು. ಇಂಥವಕ್ಕೆ ಮದ್ದಿಲ್ಲ, ಕೊಟ್ಟರೂ ತಾಗುವುದಿಲ್ಲ. ಸತ್ಯ ಹೇಳಬೇಕೆಂದರೆ, ಮದ್ದು ಕೊಡಲೂ ಬಾರದು.

Leave a Reply

Your email address will not be published. Required fields are marked *