Wednesday, 27th November 2024

ಷೇರುಪೇಟೆ: ಸೂಚ್ಯಂಕ 900 ಅಂಶ ಏರಿಕೆ

ಮುಂಬೈ : ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಹಾಗೂ ವಿದೇಶಿ ಬಂಡವಾಳ ಒಳ ಹರಿವಿನ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 900 ಅಂಶ ಏರಿಕೆ ಕಂಡು 59,808 ಅಂಶಗಳಲ್ಲಿ ವಹಿವಾಟು ಅಂತ್ಯ ವಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 272 ಅಂಶ ಹೆಚ್ಚಾಗಿ 17,594 ಅಂಶಗಳಿಗೆ ತಲುಪಿತು.

3 ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹದ 10 ಕಂಪನಿಗಳ ಒಟ್ಟು ಬಂಡವಾಳ ಮೌಲ್ಯ ₹ 1.42 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಹಾದಿಯನ್ನು ಅನುಸರಿಸಿದ ದೇಶಿ ಷೇರುಪೇಟೆಗಳುಶೇ 1ಕ್ಕೂ ಹೆಚ್ಚಿನ ಗಳಿಕೆ ಕಂಡವು ಎಂದು ರೆಲಿಗೇರ್ ಬ್ರೋಕಿಂಗ್‌ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ.

ಅದಾನಿ ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರು ಬಂಡವಾಳ ತೊಡಗಿಸುವ ವರದಿಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರು ಗಳಿಕೆಗೆ ಕಾರಣ ವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಗೆ ಮುಂದಾಗಿದ್ದುದು ಸಹ ವಹಿವಾಟಿಗೆ ಬೆಂಬಲ ನೀಡಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ತಿಳಿಸಿದ್ದಾರೆ.