Tuesday, 3rd December 2024

ವಿಷಯವಿಲ್ಲದ ಚುನಾವಣೆಯ ಗೆಲ್ಲುವವರಾರು ?

ವರ್ತಮಾನ

maapala@gmail.com

ಚುನಾವಣೆಗಳು ವಿಷಯಾಧಾರಿತವಾಗಿದ್ದರೆ ಆಗ ಹೆಚ್ಚು ಮೌಲ್ಯಯುತವಾಗಿರುತ್ತದೆ. ಆದರೆ, ಈ ಬಾರಿಯ ಚುನಾವಣೆ ವಿಷಯಾಧಾರಿತ ಎಂಬುದಕ್ಕಿಂತ ಆರೋಪ-ಪ್ರತ್ಯಾರೋಪದ ರಾಜಕೀಯ ನಾಯಕರ ಶಕ್ತಿಯ ಮೇಲೆ ಅವಲಂಬಿತವಾಗಿದೆ.

ಚುನಾವಣೆಗಳು ವಿಷಯಾಧಾರಿತವಾಗಿದ್ದರೆ ಆಗ ಹೆಚ್ಚು ಮೌಲ್ಯಯುತವಾಗಿರುತ್ತದೆ. ಆದರೆ, ಈ ಬಾರಿಯ ಚುನಾವಣೆ ವಿಷಯಾಧಾರಿತ ಎಂಬುದಕ್ಕಿಂತ ಆರೋಪ-ಪ್ರತ್ಯಾರೋಪದ ರಾಜಕೀಯ ನಾಯಕರ ಶಕ್ತಿಯ ಮೇಲೆ ಅವಲಂಬಿತವಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಚುರುಕಾಗಿವೆ. ಪಕ್ಷಾಂತರ, ಯೋಜನೆಗಳಿಗೆ ಸಂಬಂಧಿಸಿದಂತೆ ಮನ್ನಣೆಯ ಸಮರ, ಭ್ರಷ್ಟಾಚಾರ, ಧಾರ್ಮಿಕ ವಿಷಯಗಳ ಕುರಿತಂತೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೊಂದಿಗೆ ‘ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಮೂರೂ ಪಕ್ಷಗಳು ಎದೆ ಉಬ್ಬಿಸಿಕೊಂಡು, ತೊಡೆ ತಟ್ಟಿಕೊಂಡು ಸವಾಲು-ಪ್ರತಿ ಸವಾಲುಗಳನ್ನು ಹಾಕಿಕೊಳ್ಳತೊಡಗಿವೆ. ಸರಕಾರದಲ್ಲಿ ಇಲಿ ಹೋದರೂ ಹುಲಿ ಹೋಯಿತು ಎಂಬಂತೆ ಬಿಂಬಿ ಸುತ್ತಿರುವ ಪ್ರತಿಪಕ್ಷಗಳು ಸಣ್ಣ ಪುಟ್ಟ ವಿಚಾರಗಳನ್ನೂ ಬೃಹದಾಕಾರವಾಗಿ ನಿರೂಪಿಸಲು ಪ್ರಯತ್ನ ಮಾಡುತ್ತ ಆಡಳಿತ ಪಕ್ಷದ ಮೇಲೆ ಮುಗಿಬೀಳುತ್ತಿವೆ.

ಐದು ವರ್ಷ ಸುಮ್ಮನಿದ್ದ ಆಡಳಿತ ಪಕ್ಷವೂ ಈಗ ಅವರೇನು ಅಧಿಕಾರದಲ್ಲಿದ್ದಾಗ ಸಾಚಾಗಳಾಗಿದ್ದರೇ? ಅವರ ಅಕ್ರಮ, ಭ್ರಷ್ಟಾಚಾರಗಳನ್ನೂ ತನಿಖೆ ನಡೆಸುತ್ತೇವೆ ಎಂದು ಹೇಳುತ್ತಾ ತಿರುಗೇಟು ನೀಡುತ್ತಿವೆ. ಇಷ್ಟೆಲ್ಲಾ ಇದ್ದರೂ ಯಾವುದೇ ಪಕ್ಷಗಳಿಗೆ ಈ ಚುನಾವಣೆಗೆ ಗಟ್ಟಿಯಾದ, ಜನರನ್ನು ಸಂಘಟಿಸುವ ಅಥವಾ ಆಡಳಿತ ಪಕ್ಷ ಇಲ್ಲವೇ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ, ಅಧಿಕಾರ ಸಿಕ್ಕಿದರೆ ಬದಲಾವಣೆ ತರುತ್ತೇವೆ ಎಂಬ ಪ್ರಬಲ ವಿಷಯವೇ ಇಲ್ಲ ಎನ್ನುವಂತಾಗಿದೆ.

ಆ ಮೂಲಕ ವಿಷಯರಹಿತ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕ ಬರುತ್ತೇವೆ ಎಂಬ ಘೋಷಣೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಜ್ಜಾಗುತ್ತಿವೆ. ಹೌದು, ಕಳೆದ ಮೂರು ಚುನಾವಣೆಗಳನ್ನೇ ಗಮನಿಸುವುದಾದರೆ, ೨೦೦೮ರಲ್ಲಿ ಮೈತ್ರಿ ಸರಕಾರದ ಅವಧಿಯಲ್ಲಿ ಜೆಡಿಎಸ್‌ನ ವಿಶ್ವಾಸ ದ್ರೋಹ ಎಂಬ ವಿಷಯದೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಬಳಿಕ ಪಕ್ಷೇತರರ ನೆರವಿನೊಂದಿಗೆ ಸರಕಾರ ರಚಿಸಿತು. ಅದೇ ರೀತಿ 2013ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ತೊಡೆತಟ್ಟಿ ಹೊರಟ ಕಾಂಗ್ರೆಸ್ ಅಧಿಕಾರಕ್ಕೇರಿತು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ, ಪಿಎಫ್ ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಸ್ ಪಡೆದ ವಿಚಾರಗಳನ್ನು ಮುಂದಿಟ್ಟುಕೊಂಡು ಮತ್ತೆ ಮೇಲೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಜೆಡಿಎಸ್-ಕಾಂಗ್ರೆಸ್ ಸೇರಿ ಸರಕಾರ ರಚಿಸಿತು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ೮೦ ಸ್ಥಾನಗಳನ್ನು ಹೊಂದಿದ್ದರೂ ೩೭ ಸ್ಥಾನ ಗಳಿಸಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತು. ನಂತರ ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಅಡಳಿತ ಪಕ್ಷದ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅಂತಹ ಯಾವುದೇ ನಿರ್ದಿಷ್ಟ ವಿಷಯಗಳು ಮೂರೂ ಪಕ್ಷದವರಿಗೆ ಇಲ್ಲ.

ಅಷ್ಟೇ ಅಲ್ಲ, ಬಿಜೆಪಿ ಸರಕಾರವನ್ನು ಕಿತ್ತೊಗೆಯಲೇಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿಯುವಂತಹ ಆಡಳಿತ ವೈಫಲ್ಯವೆಂಬ ಗಂಭೀರ ಪರಿಸ್ಥಿತಿಯೂ ಉದ್ಭವವಾಗಿಲ್ಲ. ಅದೇ ರೀತಿ ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂದು ಧೈರ್ಯದಿಂದ ಹೇಳಿಕೊಳ್ಳಲು ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಕೆಲಸಗಳೂ ಬೆಂಬಲವಾಗಿ ನಿಂತಿಲ್ಲ. ಅತ್ತ ಆಡಳಿತ ವಿರೋಧಿ ಅಲೆಯೂ ತೀವ್ರವಾಗಿಲ್ಲ, ಇತ್ತ ಆಡಳಿತ ಪರ ವಾತಾವರಣವೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತದೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಪಕ್ಷದ ಕಾರ್ಯಕರ್ತರನ್ನು ಪ್ರೋತ್ಸಾಹಿಸಲು, ಕೊನೇ ಕ್ಷಣದವರೆಗೆ ತಟಸ್ಥಗಿರುವ ಮತದಾರರನ್ನು ಸೆಳೆಯಲು ನಾವೇ ಅಧಿಕಾರಕ್ಕೆ ಬರುವುದು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆಯಾದರೂ ಪಕ್ಷಗಳ ನಾಯಕರಿಗೇ ಆ ಬಗ್ಗೆ ಸಂಪೂರ್ಣ ವಿಶ್ವಾಸ ಇಲ್ಲ. ರಾಜಕೀಯ ಪಕ್ಷಗಳನ್ನು ಹೊರತುಪಡಿಸಿದ ಸಮೀಕ್ಷೆಗಳೂ ಮತ್ತೆ ಅತಂತ್ರ ಪರಿಸ್ಥಿತಿ ಉದ್ಭವವಾಗುತ್ತದೆ ಎಂದೇ ಹೇಳುತ್ತಿವೆ.

ಈ ಕಾರಣಕ್ಕಾಗಿಯೇ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿಯ ವಿರುದ್ಧ ಭ್ರಷ್ಟಾಚಾರದ ವಿಷಯವನ್ನೇ ದೊಡ್ಡದು ಮಾಡಿಕೊಂಡು ಚುನಾವಣಾ ಹೋರಾಟದ ಕಣಕ್ಕಿಳಿದಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಬಹುತೇಕ ಯೋಜನೆಗಳ ಕ್ರೆಡಿಟ್ ತನ್ನದೇ ಎಂದು ಹೇಳಿಕೊಳ್ಳುತ್ತಿದೆ. 200 ಯೂನಿಟ್‌ವರೆಗೆ ಉಚಿತ ಗೃಹ ಬಳಕೆ ವಿದ್ಯುತ್, ಮನೆ ಯಜಮಾನಿಗೆ ಮಾಸಿಕ ೨ ಸಾವಿರ ರು. ನೆರವು, ಪಡಿತರ ವ್ಯವಸ್ಥೆಯಲ್ಲಿ ೧೦ ಕೆ.ಜಿ.ವರೆಗೆ ಉಚಿತ ಆಹಾರಧಾನ್ಯ ಮುಂತಾದ ಉಚಿತ ಘೋಷಣೆಗಳ ಮೂಲಕ ಮತದಾರರನ್ನು ಸೆಳೆ ಯುವ ತಂತ್ರ ಮಾಡುತ್ತಿದೆ. ಏಕೆಂದರೆ, ಕೇವಲ ಭ್ರಷ್ಟಾಚಾರದ ವಿಚಾರವೊಂದೇ ವೋಟ್‌ಬ್ಯಾಂಕ್ ಸೃಷ್ಟಿಸುವುದಿಲ್ಲ ಎನ್ನುವ ಸತ್ಯ ಕಾಂಗ್ರೆಸಿಗರಿಗೂ ಗೊತ್ತು.

ಏಕೆಂದರೆ, ಕೇಂದ್ರದಲ್ಲಿ 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರ ಕಳೆದುಕೊಂಡು, ದೇಶದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಹೀನಾಯ ಸ್ಥಿತಿ ತಲುಪಲು ಆ ಪಕ್ಷದ ಅಧಿಕಾರಾವಧಿಯಲ್ಲಿ ನಡೆದ ಲಕ್ಷಾಂತರ ಕೋಟಿ ರು. ಮೊತ್ತದ ಭ್ರಷ್ಟಾಚಾರ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಅದಷ್ಟೇ ಅಲ್ಲ, 2013ರಿಂದ 2018ರವರೆಗೆ ಕಾಂಗ್ರೆಸ್ ಅಧಿಕಾರ ನಡೆಸಿದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಾಗಲಿಲ್ಲ.

ಮತ್ತೆ ಅಧಿಕಾರಕ್ಕೆ ಬಂದರೂ ಶೂನ್ಯ ಭ್ರಷ್ಟಾಚಾರದ ಆಡಳಿತ ನೀಡುತ್ತೇವೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವ ಧೈರ್ಯ ವೂ ಕಾಂಗ್ರೆಸ್ ನಾಯಕರಿಗೆ ಇಲ್ಲ. ಏಕೆಂದರೆ, ೨೦೧೩-೧೮ರ ಅವಧಿಯಲ್ಲೂ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಹ್ಯೂಬ್ಲೋಟ್ ವಾಚ್ ಹಗರಣ, ಅರ್ಕಾವತಿ ರಿ ಡೂ ಅಕ್ರಮಗಳು ಸುತ್ತಿಕೊಂಡಿದ್ದವು. ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ-ದಿಂಬು ಖರೀದಿ ಹಗರಣ, ಸೋಲಾರ್ ಪ್ಯಾನಲ್ ಹಗರಣದಿಂದ ಹಿಡಿದು ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಅದೆಲ್ಲಕ್ಕಿಂತ ಮುಖ್ಯ ವಾಗಿ ಭ್ರಷ್ಟರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲ್ಲದ ಹಾವಾಗಿ ಮಾಡಿದ ಆರೋಪ ಕಾಂಗ್ರೆಸ್ ಮೇಲಿದೆ. ಆಡಳಿತಾ ರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ತೀವ್ರಗೊಳಿಸಿದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಮೇಲೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸಾಕಷ್ಟು ಹೋರಾಟ ನಡೆಸಿತು.

ಕ್ಯೂಆರ್ ಕೋಡ್, ಪೋಸ್ಟರ್ ಸಮರ ನಡೆಸಿತು. ಅದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿತ್ತು. ಈ ಮಧ್ಯೆ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಮೇಲೆ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ನೀಡುವ ತೀರ್ಮಾನ ಕೈಗೊಳ್ಳುವ ಮೂಲಕ ಬಿಜೆಪಿ ಸರಕಾರ ಭ್ರಷ್ಟಾಚಾರದ ವಿಷಯದಲ್ಲಿ ಜನರ ಮುಂದೆ ತಲೆ ಎತ್ತಿ ನಿಂತಿತು. ಈ ಕಾರಣ ದಿಂದಾಗಿ ಕಾಂಗ್ರೆಸ್ ಸರಕಾರದ ವಿರುದ್ಧ ಭ್ರಷ್ಟಾಚಾರದ ವಿಷಯವನ್ನು ಎಷ್ಟೇ ತೀವ್ರವಾಗಿ ಪ್ರತಿಪಾದಿಸಿದರೂ ಅದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಬೆಂಬಲ ವ್ಯಕ್ತವಾಗುತ್ತಿಲ್ಲ.

ಇದಕ್ಕೆ ಕಾರಣ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ರಹಿತ ಸರಕಾರ ನೀಡಿಲ್ಲ ಎಂಬುದು ಆಗಿತ್ತೇ ಹೊರತು ಜನರಿಗೆ ಬಿಜೆಪಿಯ ಕುರಿತ ಪ್ರೀತಿಯಿಂದ ಅಲ್ಲ. ಇನ್ನು ಆಡಳಿತ ಪಕ್ಷದ ಬಗ್ಗೆಯೂ ಜನರಿಗೆ ಒಲವು ಇದೆ ಎಂಬ ಪರಿಸ್ಥಿತಿ ಇಲ್ಲ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯುಪಿಎ ಸರಕಾರದ ಭ್ರಷ್ಟಾಚಾರ. ಹೀಗಾಗಿ ಭ್ರಷ್ಟಾಚಾರ ರಹಿತ ಮತ್ತು ಉತ್ತಮ ಆಡಳಿತದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮುಂದಿನ ಐದು ವರ್ಷದಲ್ಲಿ ಇವೆರಡನ್ನೂ ಸಾಧಿಸಿ ತೋರಿಸಿತು.

ಇದರಿಂದಾಗಿ 2019ಕ್ಕೆ ಹಿಂದಿಗಿಂತಲೂ ಹೆಚ್ಚು ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರ ಹಿಡಿಯಿತು. ಆದರೆ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಂತಹ ಪರಿಸ್ಥಿತಿಯಲ್ಲಿ ಇಲ್ಲ. ಒಂದೆಡೆ ಉತ್ತಮ ಆಡಳಿತ ನೀಡಿ ಆಡಳಿತ ಪರ ಅಲೆ ರೂಪಿಸುವಲ್ಲಿ ಸರಕಾರ ಎಡವಿದೆ. ಭ್ರಷ್ಟಾಚಾರ ರಹಿತ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರರಹಿತ ಉತ್ತಮ ಆಡಳಿತ ನೀಡುತ್ತದೆ ಎಂಬ ವಿಶ್ವಾಸ ಜನರಿಗೂ ಇಲ್ಲ. ಇದರಿಂದಾಗಿಯೇ ಈ
ಬಾರಿಯ ವಿಧಾನಸಭಾ ಚುನಾವಣೆ ವಿಷಯಾಧಾರಿತ ಆಗುವ ಬದಲು ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನ ಎನ್ನುವಂತಾಗಿದೆ.

ಲಾಸ್ಟ್ ಸಿಪ್: ಕೆಲಸದಲ್ಲಿ ತಪ್ಪಾದರೆ ಪ್ರತಿಪಕ್ಷದ ಹೊಣೆ. ಸರಿಯಾದರೆ ಅದು ನಮ್ಮ ಸಾಧನೆ ಎಂಬುದೇ ರಾಜಕೀಯ ಪಕ್ಷದ ಧ್ಯೇಯ.