Friday, 20th September 2024

ಕೊಡಗಿನ ಮನೆ ಮಕ್ಕಳು ಹಿಂದೂ ಧರ್ಮಾಚರಣೆ ಬಿಟ್ಟಿಲ್ಲ

ಅಭಿಮತ
ಜಯಪ್ರಕಾಶ ರಾವ್ ಕೆ

ಕೆಲವು ಮಾಧ್ಯಮಗಳಲ್ಲಿ ಯಾವುದೇ ಪೂರ್ವಾಪರ ಅಧ್ಯಯನ ಹಾಗೂ ಹೆಣ್ಣು ಮಕ್ಕಳೆಂಬ ಎಚ್ಚರವಹಿಸದೆ ಕೆಲವು ಸುದ್ದಿ
ಮಾಧ್ಯಮಗಳಲ್ಲಿ ವಿವೇಚನೆ ಇಲ್ಲದೆ ತೀರಾ ಅವಮಾನ ಮಾಡಿದ್ದಾರೆ.

ನಾಡಿನಾದ್ಯಂತ ದಿ.ನಾರಾಯಣ ಆಚಾರ್ ದಂಪತಿಗಳನ್ನು ಬಲ್ಲವರು ಹಾಗೂ ಎಲ್ಲಾ ಸಜ್ಜನರು ಈ ಬಗ್ಗೆೆ ತೀವ್ರ ನೋವು ಅನುಭಸಿದ್ದಾರೆ. ಸತ್ಯವನ್ನು ಮರೆಮಾಚಿ ಕೇವಲ ಅನ್ಯಧರ್ಮಿಯರನ್ನು ವಿವಾಹವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೆಲವು ಆಸಕ್ತರು ಗಣನೀಯವಾದ ಚಾರಿತ್ರ್ಯಹರಣ ಹಾಗೂ ಶೋಕದ ದಿನಗಳಲ್ಲಿ ಅನುಕಂಪ ತೋರಿಕೆಯ ಹೊರತಾದ ಅತೀವ ದುಃಖವುಂಟು ಮಾಡಿದ್ದಾರೆ. ನಾವು ಕುಟುಂಬಸ್ಥರು ಸಂಘಟಿತರಾಗಿ ಕೆಳಗಿನ ಸ್ಪಷ್ಟೀಕರಣವನ್ನು ನೀಡುತ್ತಿದ್ದೇವೆ.

1.ಬೇರೆ ಜಾತಿ ಹಾಗೂ ಧರ್ಮಿಯರು ಸ್ವಇಚ್ಛೆೆಯಿಂದ ಪರಧರ್ಮಿಯರನ್ನು ವಿವಾಹವಾಗಿ ಸಹಬಾಳ್ವೆ ಮಾಡುತ್ತಿರುವ ಹಲವು ನಿದರ್ಶನಗಳಿವೆ. ವಯಸ್ಸಿಗೆ ಬಂದ ಯುವತಿಯರಿಗೆ ತಮ್ಮ ಇಚ್ಛೆಯಂತೆ ವಿವಾಹವಾಗುವ ಎಲ್ಲಾ ಹಕ್ಕು ಹಾಗೂ ಸ್ವಾತಂತ್ರ್ಯ ನಮ್ಮ ಸಂವಿಧಾನ ದಯಪಾಲಿಸಿದೆ. ಯಾವ ಧರ್ಮಿಯರನ್ನು ವಿವಾಹವಾದರೂ ಅವರು ದಿವಂಗತ ಆಚಾರ್ ಅವರ ಸ್ವಂತ ಮಕ್ಕಳೇ ಆದ ಕಾರಣ ಸರಕಾರ ಕೊಡ ಮಾಡುವ ಪರಿಹಾರಕ್ಕೆ ಎಲ್ಲಾ ಹಕ್ಕನ್ನು ಭೇಷರತ್ತಾಗಿ ಹೊಂದಿದ್ದಾರೆ.

2. ಈ ಚೆಕ್ ಪಡೆಯುವ ಸಲುವಾಗಿ ತಮ್ಮ ಪಾಸ್ ಪೋರ್ಟ್‌ನಲ್ಲಿ ದಾಖಲಾಗಿರುವ ಹೆಸರನ್ನು ನೀಡಿದರೆ ತಪ್ಪೇನು? ದೇಶದಲ್ಲಿ ಬಹಳ ವರ್ಷಗಳಿಂದ ನೆಲೆಸಿರುವವರಿಗೆ ಬೇರೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಹೀಗಾಗಿ ಬೇರೆ ಯಾವ ಹುನ್ನಾರದ
ಅಗತ್ಯ ಇಲ್ಲ. ಅವರಿಬ್ಬರ ಆರ್ಥಿಕ ಪರಿಸ್ಥಿತಿ ಕಾವೇರಮ್ಮಳ ದಯೆಯಿಂದ ಚೆನ್ನಾಗಿರುವ ಕಾರಣ ಈ ಮೊತ್ತ ಕೇವಲ ಆಶೀರ್ವಾದ ರೂಪವಾಗಿತ್ತೆ ಹೊರತು, ದುರಾಸೆಯ ವಿಚಾರವೇ ಇಲ್ಲ. ಭಾರತೀಯ ವಿದೇಶಿ ವಿನಿಮಯ ಕಾಯಿದೆ ಪ್ರಕಾರ ಅವರು ನಮ್ಮ
ದೇಶದಿಂದ ಹೊರಗೆ ಹಣವನ್ನು ಕೊಂಡೊಯ್ಯಲಾರರು ಎಂಬ ಸತ್ಯವನ್ನು ಅಪಪ್ರಚಾರ ಮಾಡಿದವರು ತಿಳಿದಿಲ್ಲ ಎಂಬುದು ಶೋಚನಿಯ. ಈ ಮೊತ್ತವನ್ನು ಅಧಿಕೃತವಾಗಿ ಸ್ವೀಕರಿಸಿ ಅದಕ್ಕೆ ತಮ್ಮ ಪಾಲಿನ ದೇಣಿಗೆ ಸೇರಿಸಿ ಮೃತ ಇಬ್ಬರು ಯುವಕರ ಬಂಧುಗಳಿಗೆ ನೀಡುವ ಉತ್ತಮ ಉದ್ದೇಶ ಹೊಂದಿದ್ದಾರೆ. ಈ ಸತ್ಯವನ್ನು ಯಾರು ಕೇಳಲು ಹೋಗಿದ್ದಾರೆ.

3.ಸುಶೀಲಕ್ಕ ಅವರ ಪರಿಹಾರ ಧನ ನೀಡುವ ಬಗ್ಗೆ ಕೂಡಾ ಕುಟುಂಬ ಚರ್ಚಿಸಿದೆ. ಎಲ್ಲಾ ಕುಟುಂಬದಲ್ಲಿರುವಂತೆ ಇಲ್ಲಿ ಕಂಡು ಬಂದ ಆಂತರಿಕ ಭಿನ್ನಾಭಿಪ್ರಾಯ ದೂರವಾಗಿ ಒಮ್ಮತ ಲಭಿಸಿದೆ. ಉಳಿದದ್ದು ಜಿಲ್ಲಾಡಳಿತಕ್ಕೆ ಬಿಟ್ಟದ್ದುದಾಗಿದೆ.

4.ಇಬ್ಬರೂ ತಮ್ಮ ಸ್ವಂತ ನಿರ್ಧಾರದಿಂದ ಹೆತ್ತವರ ಅನುಮತಿಯಂತೆ ಹಿಂದೂ ಧರ್ಮದ ಅನ್ವಯ ವಿವಾಹವಾಗಿದ್ದಾರೆ. ಅವರಲ್ಲಿ ಓರ್ವ ಅಳಿಯ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.

5. ಅನ್ಯ ಧರ್ಮಿಯರನ್ನು ವಿವಾಹವಾದರೂ ಹಲವು ವರ್ಷಗಳಿಂದ ನಮ್ಮ ಆಚಾರ ಹಾಗೂ ನಡವಳಿಕೆಗಳಂತೆ ಹಿಂದೂ ಧರ್ಮದ ಅನ್ವಯ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಏಕೆಂದರೆ ಇವರನ್ನು ವಿವಾಹವಾಗಿರುವ ಪುರುಷರಿಬ್ಬರೂ
ಕರ್ನಾಟಕದ ಕ್ರಿಶ್ಚಿಯನ್ ಧರ್ಮದವರೆ ಆಗಿದ್ದು, ಪತ್ನಿಯರಿಗೆ ವಿಫುಲವಾದ ಸ್ವಾತಂತ್ರ್ಯ ನೀಡಿ ಆದರ್ಶಪ್ರಾಯರಾಗಿದ್ದಾರೆ. ಎಂದೂ ಚರ್ಚ್‌ಗಳಿಗೆ ಬರಲು ಒತ್ತಾಯ ಮಾಡಿದವರಲ್ಲ. ಇಂತಹ ನೀತಿದಾಯಕವಾದ ವಿಚಾರಧಾರೆಯಿಂದಾಗಿ ಆಚಾರ್ ದಂಪತಿಗಳು ಸಂತೋಷಪಟ್ಟಿದ್ದಾರೆ. ವಿದೇಶಕ್ಕೂ ಪ್ರವಾಸ ಮಾಡಿ ಮಗಳಂದಿರಲ್ಲಿ ನೆಲೆಸಿ ಸುಖ ಕಂಡುಕೊಂಡಿದ್ದಾರೆ. ಹೀಗಾಗಿ
ಮಹಿಳೆಯರ ಸ್ವಾತಂತ್ರ್ಯ, ಸರ್ವ ಧರ್ಮದ ಸಾರ ಒಂದೇ ಹಾಗೂ ದೇವರೊಬ್ಬನೆ ಎಂದು ಹೇಳುವವರೆಲ್ಲಾ ಇವೆಲ್ಲಾ ಗಮನಿಸಿ. ಈಗ ಹೇಳಿ, ಯಾವ ಧರ್ಮ, ಜಾತಿ ಅಥವಾ ವ್ಯಕ್ತಿಗಳನ್ನು ವಿವಾಹವಾಗಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಹೇಗೆ
ಬಾಳುತ್ತಿದ್ದೇವೆ ಎಂಬುದು ಸತ್ಯ.

6.ಈ ಮಕ್ಕಳು ಬಹಳ ಪ್ರೀತಿಯಿಂದ ಮನೆಯ ನವೀಕರಣ ಹಾಗೂ ಸೌಲಭ್ಯಗಳನ್ನು ಒದಗಿಸಿ ಹಳೆಯ ಓಮ್ನಿ ಕಾರ್ ಇದ್ದರೂ ಬೆಟ್ಟ ಹತ್ತಲು ಸುಲಭವಾಗಲು ಡಸ್ಟರ್ ವಾಹನ ಒದಗಿಸಿದ್ದಾರೆ. ಕಾಲಕಾಲಕ್ಕೆ ಅವರ ದೇಶದ ತೀರ್ಥಯಾತ್ರೆ ಹಾಗೂ ಹಲವಾರು ದೇಶ ಪ್ರವಾಸಗಳನ್ನು ಏರ್ಪಡಿಸಿ ಪ್ರೀತಿಯ ಧಾರೆ ಎರೆದಿದ್ದಾರೆ.

7.ಇಬ್ಬರೂ ಯುವತಿಯರು ಕನ್ನಡ ಹಾಗೂ ಮಾತೃ ಭಾಷೆಯಾದ ತುಳುವನ್ನು ಈಗಲೂ ಮಾತಾಡುತ್ತಿದ್ದಾರೆ ಹಾಗೂ ಇವರ ಮಕ್ಕಳು ಸಹ ಕನ್ನಡ ಭಾಷೆಯನ್ನು ಕಲಿತಿದ್ದಾರೆ.

8.ತಾವಿರುವ ವಿದೇಶಿ ನೆಲ ಬ್ರಿಸ್ಬೇನ್ ಹಾಗೂ ಗೋಲ್ಡ್ ಕೋಸ್ಟ್‌ ನಗರದಲ್ಲಿನ ಗಣೇಶ ದೇವಾಲಯ ಹಾಗೂ ಇಸ್ಕಾನ್ ಸಂಸ್ಥೆಯ ಕೃಷ್ಣ ದೇಗುಲಗಳಿಗೆ ಸದಾ ಸಂದರ್ಶಿಸುವುದಲ್ಲದೆ, ಉತ್ಸವಗಳಲ್ಲಿ ಯಾವತ್ತೂ ಸಹ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೆಚ್ಚಿನ ಹಿಂದೂ ಉತ್ಸವ ದಿನಗಳ ಆಚರಣೆಯಲ್ಲಿ ಸ್ವತಃ ಪೂಜೆ ನಡೆಸುವುದಲ್ಲದೆ ಭಾರತೀಯ ಖಾದ್ಯ ಗಳನ್ನು ತಯಾರಿಸಿ ವಿದೇಶಿ ಮಿತ್ರರುಗಳನ್ನು ಆಮಂತ್ರಿಸಿ ನೆಲದಲ್ಲಿ ಎಲೆ ಹಾಕಿ ಊಟ ಬಡಿಸಿ ಸಂಭ್ರಮಿಸುತ್ತಾರೆ.

9.ಇಬ್ಬರಿಗೂ ದೇವರ ಸ್ತೋತ್ರ ಹಾಗೂ ಭಜನೆ ಮತ್ತು ಪ್ರಾರ್ಥನೆಗಳಲ್ಲಿ ಅಪರಿಮಿತ ವಿಶ್ವಾಸ ಹಾಗೂ ನಂಬಿಕೆ ಇದೆ. ಅದರಲ್ಲಿಯೂ ಹಿರಿಯರಾದ ವಿನುತಾ ದೇವಸ್ಥಾನದ ಸಂದರ್ಶನದ ವೇಳೆ ಸ್ವತಃ ಭಕ್ತಿಗೀತೆ ಹಾಗೂ ಸ್ತೋತ್ರಗಳ ಪಠನ ನಡೆಸಿ ಅಲ್ಲಿಯೂ ಹಾಡುಗಾರ್ತಿಯಾಗಿ ಹೆಸರು ಪಡೆದಿದ್ದಾರೆ. ಆಗಸ್ಟ್ 31ರಂದು ನಡೆದ ಪತ್ರಿಕಾ ಗೋಷ್ಠಿಯಂದು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ಹಾಡಿದ್ದನ್ನು ಅಲ್ಲಿ ಭಕ್ತಾದಿಗಳು ಕಂಡಿದ್ದಾರೆ. ನಾವು ಮೇಲೆ ತಿಳಿಸಿದ ವಿಚಾರಗಳನ್ನು ಇಲ್ಲಿ ನೀಡಿರುವ ಫೋಟೋಗಳು ಸಾಕ್ಷೀಕರಿಸಿವೆ.