ಚುನಾವಣೆ ಮುಗಿದಾಯಿತು. ಪತ್ರಿಕೆ ಓದುವಷ್ಟರಲ್ಲಿ ರಾಜ್ಯದ ಮುಂದಿನ ಐದು ವರ್ಷಗಳ ಆಡಳಿತದ ದಿಕ್ಸೂಚಿಯೂ ಬಹುತೇಕ
ಸಿಕ್ಕಿರುತ್ತದೆ. ಯಾರೋ ಒಬ್ಬರು ಆಡಳಿತಕ್ಕೆ ಬರುತ್ತಾರೆ ಬಿಡಿ, ಬಂದವರನ್ನು ಒಪ್ಪಿಕೊಳ್ಳಲೇ ಬೇಕು. ಏಕೆಂದರೆ ಜನಾದೇಶ. ಯಾರೇ ಬಂದರೂ ಇನ್ನೈದು ವರ್ಷ ರಾಜಕೀಯ ದೊಂದಬರಾಟ, ಅಧಿಕಾರದ ಮೇಲಾಟ ವನ್ನು ಬದಿಗಿಟ್ಟು ಸ್ಥಿರ ಸರಕಾರ, ಅಭಿವೃದ್ಧಿಪರ ಆಡಳಿತ ನೀಡುವತ್ತ ಗಮನ ಹರಿಸಬೇಕಿದೆ.
ಕಳೆದ ಒಂದು ತಿಂಗಳಿಂದ ರಾಜಕೀಯ ನಾಯಕರಷ್ಟೇ ಅಲ್ಲ, ರಾಜ್ಯದ ಉನ್ನತ ಅಧಿಕಾರಿ ಯಿಂದ ಹಿಡಿದು, ಸಾಮಾನ್ಯ ಕೂಲಿಯವನವರೆಗೆ ಎಲ್ಲರದ್ದೂ ಹೋದಲ್ಲಿ ಬಂದಲ್ಲಿ, ಕೂತಲ್ಲಿ ನಿಂತಲ್ಲಿ ರಾಜಕೀಯದ್ದೇ ಮಾತು. ಅರಿವಿದ್ದೋ, ಇಲ್ಲದೆಯೋ ಅಂತೂ ಏನೋ ಒಂದನ್ನು ನಮ್ಮನಮ್ಮ ಮೂಗಿನ ನೇರಕ್ಕೆ, ನಮ್ಮ ಆಶಯಕ್ಕೆ ತಕ್ಕಂತೆ ಎಲ್ಲರೂ ಮಾತ ನಾಡಿದ್ದೇವೆ; ಬಹುತೇಕ ರಾಜಕೀಯವನ್ನೇ ಉಸಿರಾಡುತ್ತಿದ್ದೇವೇನೋ ಎನ್ನವಷ್ಟರಮಟ್ಟಿಗೆ. ಬಹುಶಃ ಈ ದೇಶದಲ್ಲಿ ರಾಜಕೀಯ ಬಿಟ್ಟರೆ ಬೇರಾವುದೇ ಸಂಗತಿ ಇಷ್ಟೊಂದು ಚರ್ಚೆಗೆ ಈಡಾಗುವುದಿಲ್ಲ.
ರಾಜಕೀಯವೆಂದರೆ ಏನೆಂದು ಅರ್ಥವಾಗದವರಲ್ಲೂ ಮುಂದಿನ ನಮ್ಮ ಪ್ರತಿನಿಧಿ ಯಾರಾಗಬಹುದು, ಯಾವ ಸರಕಾರ ಅಧಿಕಾರಕ್ಕೆ ಬರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಕೆಲವರಂತೂ ಇದನ್ನು ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆ ಯೆಂಬಷ್ಟರಮಟ್ಟಿಗೆ ತೆಗೆದುಕೊಳ್ಳುವುದೂ ಇದೆ. ಪರಿಣಾಮ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು, ನೆರೆ ಹೊರೆ ಯವರು, ಕೊನೆಗೆ ಒಂದೇ ಕುಟುಂಬದ ಸದಸ್ಯರು-ಸೋದರರು ಎಂಬುದನ್ನೂ ನೋಡದೇ ವಾದಕ್ಕೆ ಬಿದ್ದಿದ್ದಿದೆ.
ಒಂದು ಮನೆಯಲ್ಲೇ ಎರಡು ಪಕ್ಷಗಳ, ಇಬ್ಬರು ವಿಭಿನ್ನ ಅಭ್ಯರ್ಥಿಗಳ ಬೆಂಬಲಿಗರು. ಪ್ರಜಾಪ್ರಭುತ್ವದ ಸೌಂದರ್ಯವೇ ಇದು. ತಪ್ಪೇನಿಲ್ಲ. ಅಂಥ ಸ್ವಾತಂತ್ರ್ಯವನ್ನು ಸಂವಿಧಾನವೇ ನಮಗೆ ಕೊಟ್ಟಿದೆ. ಆದರೆ ಬೆಂಬಲಿಸುವ ಭರದಲ್ಲಿ, ಆವೇಶದಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡಿರುವ ಮಾತು ಎಷ್ಟೋ ವೇಳೆ ಹದ್ದು ಮೀರಿದ್ದೂ ಇರಬಹುದು. ಆ ಕಹಿಗಳಿಗೆಗಳನ್ನು, ಅಂಥ ಅಹಿತ ಮಾತುಗಳನ್ನು ಮರೆಯುವ ಸನ್ನಿವೇಶ ಈಗ ಬಂದಿದೆ. ವಾಸ್ತವದಲ್ಲಿ ಮತಹಾಕಿದ ಕ್ಷಣದಲ್ಲೇ ಅದನ್ನು ಮರೆತುಬಿಡಬೇಕಿತ್ತು.
ಈಗಾದರೂ ಮರೆಯೋಣ. ಫಲಿತಾಂಶ ಯಾರ ಪರವಾಗಿಯೇ ಬರಲಿ. ನಾವು ಬೆಂಬಲಿಸಿದ ಅಭ್ಯರ್ಥಿ-ಪಕ್ಷಗಳಿಗೆ ಸೋಲು-ಗೆಲುವು ಯಾವುದೇ ಒಲಿಯಬಹುದು. ಅದನ್ನೇ ಮುಂದಿಟ್ಟುಕೊಂಡು ಸೋತವರ ಬೆಂಬಲಿಗರನ್ನು ಗೇಲಿ ಮಾಡುವ ಅಥವಾ ಗೆದ್ದವರ ಬೆಂಬಲಿಗನ ಮೇಲೆ ದ್ವೇಷ ಸಾಧಿಸುವ ಪ್ರಶ್ನೆಯೇ ಬರಬಾರದು. ರಾಜಕೀಯ ಎಂಬುದು ಇಂದಿಗೆ ಮುಗಿದ ಅಧ್ಯಾಯ. ಇದರ
ಹಿಂದೂ ನಾವು ಸುಂದರ-ಸೌಹಾರ್ದ ಬದುಕನ್ನು ಬಾಳಿದ್ದೆವು; ಮುಂದೂ ಬಾಳಬೇಕು.ಇನ್ನೂ ಸಾಕಷ್ಟು ಆಯ್ಕೆಗಳು ಜೀವನ ದಲ್ಲಿ ಎದುರಾಗುವುದಿವೆ. ಎಲ್ಲ ಸಂದರ್ಭದಲ್ಲೂ ನಮ್ಮ ಆಯ್ಕೆಯೇ ಸರಿಯಾಗಿರಬೇಕೆಂದೇನೂ ಇಲ್ಲ. ಸೋತರೆ ಸತ್ಯವನ್ನು ಒಪ್ಪಿಕೊಂಡು, ಗೆದ್ದರೆ ಸೋತವರನ್ನೂ ಜತೆಗೆ ಕರೆದುಕೊಂಡು ಹೋಗುವುದೇ ನಾಯಕತ್ವ ಹಾಗೂ ಬದುಕು.