ಸ್ವಾಸ್ಥ್ಯ ಸಂಪದ
Yoganna55@gmail.com
ಜುಲೈ ೧ ಅನ್ನು ಕೇಂದ್ರ ಸರಕಾರ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲು ಕರೆನೀಡಿದ್ದು, ೧೯೯೧ರಿಂದಲೂ ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದೆ. ಅಂದಿನ ಪ್ರಧಾನಮಂತ್ರಿ ದಿ.ಪಿ.ವಿ.ನರಸಿಂಹರಾವ್ ರವರು ವೈದ್ಯರ ಸೇವೆಯನ್ನು ಸ್ಮರಿಸುವ ದೃಷ್ಟಿಯಿಂದ ಈ ದಿನಾಚರಣೆಗೆ ಬುನಾದಿ ಹಾಕಿದರು.
ದೇಶಾದ್ಯಂತ ಈ ಬಗ್ಗೆ ಚರ್ಚೆ ನಡೆದು ಡಾ.ಬಿದನ್‌ಚಂದ್‌ರಾಯ್ ಅವರು ಹುಟ್ಟಿದ ಜುಲೈ ೧ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನಾಗಿ ಆಯ್ದುಕೊಳ್ಳಲು ತೀರ್ಮಾನಿಸಲಾಯಿತು. ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಇಂದಿನ ಪೀಳಿಗೆಗೆ ಡಾ.ಬಿ.ಸಿ.ರಾಯ್ ಅವರ ಆದರ್ಶನೀಯ ವ್ಯಕ್ತಿತ್ವವನ್ನು ಪರಿಚಯಿಸುವುದಲ್ಲದೆ, ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಮೈಲು ಗಲ್ಲುಗಳು ಮತ್ತು ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.
ಡಾ|| ಬಿಧನ್‌ಚಂದ್‌ರಾಯ್ ರಾಷ್ಟ್ರ ಕಂಡ ಮಾನವೀಯತೆ, ಸಾಮಾಜಿಕ ಕಳಕಳಿ, ಅದ್ವಿತೀಯ ವೈದ್ಯಕೀಯ ಜ್ಞಾನದ ಅರಿವು, ಅದಮ್ಯ ರಾಷ್ಟ್ರಪ್ರೇಮ, ಸಂಘಟನಾ ಚತುರತೆ ಇತ್ಯಾದಿ ಬಹುಮುಖ ಪ್ರತಿಭೆಯುಳ್ಳ, ಅಂತರರಾಷ್ಟ್ರೀಯ ಖ್ಯಾತಿಯ ಶ್ರೇಷ್ಠ ವೈದ್ಯರು. ಇವರು ಹುಟ್ಟಿದ್ದು ಜುಲೈ ೧ ರಂದು ಪಾಟ್ನಾದಲ್ಲಿ, ಸಾವನ್ನಪ್ಪಿದ್ದು ಜುಲೈ೧ ರಲ್ಲಿ. (೧-೭-೧೮೮೨ರಿಂದ ೧-೭-೧೯೬೨) ಹುಟ್ಟು ಮತ್ತು ಸಾವುಗಳೆರಡನ್ನೂ ಒಂದೇ ದಿನಾಂಕವಾಗಿ ಪಡೆದುಕೊಂಡು ಬಂದ ವಿಶೇಷ ವ್ಯಕ್ತಿ ಯಾದ ಇವರು ವೈದ್ಯ ಲೋಕದ ಆದರ್ಶನೀಯ ಪ್ರಾತಃ ಸ್ಮರಣೀಯರು.
ಇವರ ವ್ಯಕ್ತಿತ್ವವನ್ನು ಮನಗಂಡ ಕೇಂದ್ರಸರಕಾರ ಇವರು ಹುಟ್ಟಿದ ಜುಲೈ ೧ನ್ನು ಪ್ರತಿ ವರ್ಷ ವೈದ್ಯರ ರಾಷ್ಟ್ರೀಯ ದಿನಾಚರಣೆ ದಿನವನ್ನಾಗಿ ಆಚರಿಸಲು ಆದೇಶಿಸಿದೆ. ೧೯೬೨ರಲ್ಲಿ ಅಂದಿನ ಇಂಡಿ ಯನ್ ಮೆಡಿಕಲ್ ಕೌನ್ಸಿಲ್, ಇಂದಿನ ನ್ಯಾಷನಲ್ ಮೆಡಿ ಕಲ್ ಕೌನ್ಸಿಲ್ ಡಾ|| ಬಿ.ಸಿ.ರಾಯ್ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು, ೧೯೭೩ ರಲ್ಲಿ ಮೊದಲ ಪ್ರಶಸ್ತಿಯನ್ನು ಡಾ|| ಸಂದೀಪ್ ಮುಖ
ರ್ಜಿಯವರಿಗೆ ನೀಡಲಾಯಿತು. ಪ್ರತಿ ವರ್ಷ ಪ್ರತಿ ಭಾವಂತ ವೈದ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಡಾ|| ಬಿ.ಸಿ.ರಾಯ್ ಅವರು ಪಾಟ್ನಾದಲ್ಲಿ ದೇಶ ಪ್ರೇಮದ ಹಿನ್ನೆಲೆಯುಳ್ಳ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿ, ಸ್ವಪ್ರತಿಭೆಯಿಂದ ಅವಕಾಶ ಗ ಳನ್ನು ಅನ್ವೇಷಿಸಿಕೊಂಡು, ಅವುಗಳನ್ನು ಗಿಟ್ಟಿಸಿ ಕೊಂಡು, ತಾವು ಅಲಂಕರಿಸಿದ ಪ್ರತಿಯೊಂದು ಹುದ್ದೆಗೂ ಹೊಸ ಛಾಪನ್ನು
ಮುದ್ರಿಸಿ, ಆ ಹುದ್ದೆಗಳಿಗೆ ಮತ್ತಷ್ಟು ಗೌರವ ತಂದವರು.
ಪಾಟ್ನಾದಲ್ಲಿ ಹುಟ್ಟಿದರೂ, ಪಶ್ಚಿಮ ಬಂಗಾಳವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ದೂರದ ಊರಿನಲ್ಲೂ ಪ್ರೀತಿಗಳಿಸಿದವರು. ಇಂಗ್ಲಿಷ್‌ನಲ್ಲಿ ವೈದ್ಯಶಾಸದ ಅತ್ಯು ನ್ನತ ಪದವಿಯಾದ ಎಂ.ಆರ್.ಸಿ.ಪಿ. ಮತ್ತು ಶಸ್ತ್ರಕ್ರಿಯಾ ಶಾಸ್ತ್ರದ ಅತ್ಯುನ್ನತ ಪದವಿಯಾದ ಎಫ್.ಆರ್.ಸಿ.ಪಿ ಗಳೆರಡೂ ಪದವಿಗಳನ್ನು ಎರಡೇ ವರ್ಷಗಳಲ್ಲಿ ಏಕಕಾಲಕ್ಕೆ ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಕಾಲೇಜಿನಲ್ಲಿ ಪಡೆದ ಅಪ್ರತಿಮ ಪ್ರತಿಭಾವಂತರು. ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ಕ್ಕೆ ಭಾಜನರಾದ (೧೯೬೧) ಏಕೈಕ ವೈದ್ಯ ರಾಜಕಾರಣಿಯಿವರು.
Read E-Paper click here
ದೇಶಸೇವೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ಡಾ.ಬಿ.ಸಿ.ರಾಯ್ ಅವರು ತಮ್ಮ ಕೊನೆ ದಿನಗಳಲ್ಲಿ ತಾವು ಸಂಪಾದಿಸಿದ ಆಸ್ತಿಪಾಸ್ತಿಗಳನ್ನು ಸಾರ್ವಜನಿಕ ಸಂಸ್ಥೆಗೆ ದಾನಮಾಡಿದ ಆದರ್ಶನೀಯರು. ಸಾಮಾಜಿಕ ರೋಗಗಳ ಚಿಕಿತ್ಸಕ: ವೈದ್ಯಶಿಕ್ಷಣದ
ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾನಿಲಯಗಳ ಕುಲಪತಿ ಗಳಾಗಿ, ಸಾವಿರಾರು ವೈದ್ಯರ ಪರಂಪರೆಯ ಸೃಷ್ಟಿಗೆ ನಾಂದಿಯಾದವರು. ತಮ್ಮ ವೈದ್ಯಕೀಯ ಸೇವೆಯ ಜನ ಪ್ರಿಯತೆಯಿಂದಲೆ ಸಾಮಾಜಿಕ ರೋಗಗಳಿಗೂ ವೈದ್ಯರಾಗುವ ಅವಕಾಶವನ್ನು ಗಳಿಸಿಕೊಂಡು ಕೋಲ್ಕತ್ತಾ ನಗರ ಸಭೆಯ ಮೇಯರ್ ಆಗಿ, ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ (೧೯೪೮-೧೯೬೨) ವೈದ್ಯನೊಬ್ಬ
ತನ್ನ ಸೇವೆಯ ಶ್ರದ್ಧೆಯಿಂದ ಗಳಿಸುವ ಪ್ರೀತಿಪಾತ್ರ ದಿಂದಲೇ ಯಾವ ಬಗೆಯ ಉನ್ನತ ಅಧಿಕಾರದ ಮನ್ನಣೆಯನ್ನು ಪಡೆಯಬಹುದು ಎಂಬುದಕ್ಕೆ ಡಾ|| ಬಿ.ಸಿ.ರಾಯ್ ಜ್ವಲಂತ ಉದಾಹರಣೆಯಾಗಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗಲೂ, ಪ್ರತಿನಿತ್ಯ ಒಂದು ಗಂಟೆ ಕೊಳೆಗೇರಿಗಳಲ್ಲಿ ರೋಗಿಗಳನ್ನು ಪರೀಕ್ಷಿಸಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ‘ಭಾರತೀಯ ವೈದ್ಯಕೀಯ ಸಂಘ’(೧೯೨೮) ಮತ್ತು ವೈದ್ಯಕೀಯ ಕ್ಷೇತ್ರದ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿಯಂತ್ರಿಸಲು ‘ಭಾರತೀಯ ವೈದ್ಯಕೀಯ ಪರಿಷತ್ತು’(೧೯೩೪) ಸಂಸ್ಥೆಗಳನ್ನು ಹುಟ್ಟು ಹಾಕಿ, ಆ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಭದ್ರವಾದ ಬುನಾದಿ ಹಾಕಿದ ವೈದ್ಯ ಸಂಘಟನೆಗಳ ಪಿತಾಮಹರು.
ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿ ಗಾಂಧೀಜಿಯವರೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ಅವರ ವೈಯಕ್ತಿಕ
ವೈದ್ಯರಾಗಿದ್ದ ಅಪ್ರತಿಮ ದೇಶಭಕ್ತರಿವರು. ಮಾನವೀಯ ಮೌಲ್ಯವುಳ್ಳ ಶ್ರೇಷ್ಠ ವೈದ್ಯರಾಗಿ, ಜ್ಞಾನದಾಹಿ ಶಿಕ್ಷಣತಜ್ಞರಾಗಿ, ಸಂಘಟನಾ ಚತುರರಾಗಿ, ರಾಷ್ಟ್ರಕಾರಣಿಯ ಗುಣವುಳ್ಳ ರಾಜಕಾರಣಿಯಾಗಿ, ಸರಳಜೀವಿಯಾಗಿ, ಮುಂದಿನ ಯುವಪೀಳಿಗೆಗೆ ಆದರ್ಶನೀಯರಾಗಿ ಬದುಕಿದ ವೈದ್ಯಕುಲದ ಧೀಮಂತ ವ್ಯಕ್ತಿಯಿವರು.
ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನೆನೆದು ಅವುಗಳನ್ನು ಮುಂದಿನ ಪೀಳಿಗೆ ಪಾಲನೆ ಮಾಡುವಂತೆ ಪ್ರೇರೇಪಿಸುವ ಉದ್ದೇಶ ವೈದ್ಯರ ದಿನಾಚರಣೆಯದ್ದಾಗಿದೆ. ಪಿ.ವಿ.ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಇನ್ನಿತರ ವೃತ್ತಿಗಳಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ದಿನಾಚರಣೆಗಳನ್ನು ಅನುಸರಿಸುವಂತೆ ವೈದ್ಯರ ವೃತ್ತಿಗೂ ಗೌರವ ಕೊಡುವ ಸಲುವಾಗಿ ೧೯೯೧ರಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸುವ ಸಂಪ್ರದಾಯಕ್ಕೆ ನಾಂದಿಹಾಕಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ
ಕ್ಷೇತ್ರದ ಏಳುಬೀಳುಗಳನ್ನು ಆತ್ಮಾವಲೋಕನ ಮಾಡಿಕೊಂಡು, ಸವಾಲುಗಳನ್ನು ಮೆಟ್ಟಿ ನಿಂತು ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಲು ಸಂಕಲ್ಪ ಮಾಡುವ ದಿನವಿದು.
ಡಾ|| ಬಿ.ಸಿ. ರಾಯ್ ಅವರ ಅಂದಿನ ಕಾಲ ಮತ್ತು ಆಧುನಿಕದ ಇಂದಿನ ಕಾಲದ ನಡುವೆ ಸಾಕಷ್ಟು ನೀರು ಹರಿದಿದೆ. ವೈದ್ಯಕೀಯ ವಿಜ್ಞಾನದ ಸೌಲಭ್ಯಗಳು ಅಂದು ಇಂದಿನಷ್ಟು ಬೆಳೆಯದೆ ಇದ್ದರೂ ಮತ್ತು ಆಧುನಿಕ ರೋಗಪತ್ತೆಯ, ತಂತ್ರಜ್ಞಾನದ (ಸಿ.ಟಿ,ಎಂ.ಆರ್.ಐ., ಪೆಟ್, ಕ್ಯಾಥ್‌ಲಾಬ್ ಇತ್ಯಾದಿ) ಸೌಲಭ್ಯಗಳು ಲಭ್ಯವಿಲ್ಲದಿದ್ದರೂ, ರೋಗಿ ನೀಡುವ ಮಾಹಿತಿ ಮತ್ತು ದೈಹಿಕ
ಪರೀಕ್ಷೆಗಳಾಧಾರಿತ ಕ್ಲಿನಿಕಲ್ ಜ್ಞಾನದಿಂದಲೇ ರೋಗ ಪತ್ತೆಯನ್ನು ಮಾಡಿ ಸಮರ್ಥವಾಗಿ ಚಿಕಿತ್ಸೆ ನೀಡುತ್ತಿದ್ದ ಕಾಲವದು.
ಇಂದು ಕ್ಲಿನಿಕಲ್ ಜ್ಞಾನ ಕಡಿಮೆಯಾಗಿ, ಆಧುನಿಕ ತಂತ್ರಜ್ಞಾನದ ಸಲಕರಣೆಗಳಿಂದ ನಿರ್ದಿಷ್ಟವಾಗಿ ರೋಗ ಪತ್ತೆಮಾಡುವ ವಿಧಾನಗಳು ಮೇಲುಗೈ ಪಡೆದಿವೆ. ಉತ್ಕೃಷ್ಟ ಸೂಕ್ಷ್ಮ ಜೀವಿನಿರೋಧಕಗಳ, ರೋಬಾ ಟಿಕ್ ಶಸ್ತ್ರಕ್ರಿಯೆ, ಸೈಬರ್‌ನೈಫ್, ಲೆಪ್ರೊ ಸ್ಕೋಪಿ, ಒಳಾಂಗ ದರ್ಶನಶಸ್ತ್ರಕ್ರಿಯೆ, ಲೇಸರ್ ಚಿಕಿತ್ಸೆ ಮತ್ತು ಬ್ರೇಕಿಥೆರಪಿ, ರೆಡಿಯೇಷನ್‌ಥೆರಪಿ ಇತ್ಯಾದಿ ಹೊಸ ಹೊಸ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳ ಅನ್ವೇಷಣೆಯಿಂದ ರೋಗ ಗಳನ್ನು ನಿಯಂತ್ರಿಸಿ ಜೀವಾವಧಿಯನ್ನು ಮುಂದೂಡಲಾಗಿದೆ.
ಜೀವಾವಧಿ ಮುಂದೂಡಿಕೆ ಸಾಮಾಜಿಕ, ಆರ್ಥಿಕ, ಮುಪ್ಪಿನ ಕಾಯಿಲೆಗಳು ಇತ್ಯಾದಿ ಹಲವಾರು ಬಗೆಯ ಮುಪ್ಪಿನ ಸಮಸ್ಯೆಗಳಿಗೆ ನಾಂದಿಯಾಗಿದೆ.
ಬದಲಾದ ವೈದ್ಯರ ಮನೋವೃತ್ತಿ: ಬಡತನ ಮತ್ತು ಮೌಢ್ಯಗಳು ಅಂದಿನ ಸಮಾಜದಲ್ಲಿ ಪ್ರಧಾನವಾಗಿದ್ದರೂ ಮಾನವೀಯ ಮೌಲ್ಯಗಳಿಂದ ಶ್ರೀಮಂತವಾಗಿದ್ದ ಸಮಾಜವದು. ‘ವೈದ್ಯೋ ನಾರಾಯಣೋ ಹರಿಃ’ (ವೈದ್ಯ ದೇವರಿಗೆ ಸಮಾನ) ಎಂಬ ಪರಿಸ್ಥಿತಿ ಇದ್ದ ಕಾಲವದು. ಇಂದಿನ ಸಮಾಜ ಭೌತಿಕವಾಗಿ ಬೆಳವಣಿಗೆಯಾಗಿದ್ದರೂ ಮಾನವೀಯ ಮಾಲ್ಯಗಳು ಕುಸಿದಿರುವ ಕಾಲವಿದು. ವೈದ್ಯಕೀಯ ಕ್ಷೇತ್ರವೂ ಸಮಾಜದ ಒಂದು ಅಂಗವಾಗಿದ್ದು, ಆಯಾಯ ಕಾಲಘಟ್ಟದಲ್ಲಿ ಸಮಾಜದಲ್ಲಾಗುವ ಬದಲಾವಣೆಗಳು ವೈದ್ಯಕೀಯ ಕ್ಷೇತ್ರದ ಮೇಲೂ ಬೀರಿರುವ ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ.
ಈ ಕಾರಣಗಳಿಂದಾಗಿ ಮಾನವೀಯತೆ ಮತ್ತು ಸೇವಾದೃಷ್ಟಿಗಳು ಮೇಲುಗೈ ಪಡೆದಿದ್ದ ಅಂದಿನ ವೈದ್ಯಕೀಯ ಕ್ಷೇತ್ರ ಇಂದು ವಾಣಿಜ್ಯಮಯವಾಗಿ, ವ್ಯಾವಹಾರಿಕವಾದ ಸೇವೆಯಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ‘ಯಮ ಹರತಿ ಪ್ರಾಣ ವೈದ್ಯ ಧನಾನಿಚ’ (ಯಮ ಪ್ರಾಣವನ್ನು ಮಾತ್ರ ಕಸಿದರೆ ವೈದ್ಯ ಪ್ರಾಣದ ಜೊತೆಗೆ ಹಣವನ್ನೂ ಕಸಿಯುತ್ತಾನೆ) ಎಂಬ ಅಭಿಪ್ರಾಯ
ಇಂದು ಮೇಲುಗೈ ಪಡೆಯುತ್ತಿದೆ. ಈ ಬದಲಾವಣೆಗೆ ಇಡೀ ಸಮಾಜ ಹೊಣೆಯೇ ವಿನಃ ಯಾರೊಬ್ಬರನ್ನು ಬೊಟ್ಟು ಮಾಡಿ ತೋರಿಸುವಂತಿಲ್ಲ. ಈ ಬದಲಾವಣೆಗೆ ಕಾರಣಗಳು ಹಲವಾರು. ಭೌತಿಕ ಸುಖಾಕರ್ಷಣೆಯ ಮನೋಸ್ಥಿತಿಯ ಸಮಾಜ ನಿರ್ಮಾಣವಾಗಿರುವುದು, ದುಬಾರಿಯಾದ ಆಧುನಿಕ ವೈದ್ಯ ತಂತ್ರಜ್ಞಾನದ ಸಲಕರಣೆಗಳು, ವ್ಯಾಪಾರೀಕರಣಗೊಂಡ ವೈದ್ಯಕೀಯ ಶಿಕ್ಷಣ, ವೈದ್ಯ-ರೋಗಿ ನಡುವಿನ ಆತ್ಮವಿಶ್ವಾಸದ ಕೊರತೆ, ವೈದ್ಯಕೀಯ ಜ್ಞಾನ, ಅಂಗಾಂಗಗಳ ವಿಶೇಷ ತಜ್ಞತೆಯ
ಜ್ಞಾನವಾಗಿ ವಿಂಗಡಣೆಗೊಂಡು ಅಂಗಾಂಗಕ್ಕೊಬ್ಬ ವಿಶೇಷ ತಜ್ಞರು ಹುಟ್ಟಿಕೊಂಡಿದ್ದು, ಸಮಗ್ರ ದೃಷ್ಟಿಯಿಂದ ರೋಗಿಯನ್ನು ನೋಡದಿರುವುದು ಇವು ದಾಖಲಿಸಬಹುದಾದ ಪ್ರಮುಖ ಕಾರಣಗಳು. ಇಂದಿನ ಈ ವಿಷಮ ಪರಿಸ್ಥಿತಿಗೆ ಯಾರು ಹೊಣೆ ಎಂಬುದರ ಬಗ್ಗೆ ಆತ್ಮಾವಲೋಕನ ಅತ್ಯಗತ್ಯ.
ವೈದ್ಯಕೀಯ ಕ್ಷೇತ್ರದ ಬೆಳವಣಿಗೆ: ವೈದ್ಯಕೀಯ ಕ್ಷೇತ್ರದ ಸೇವೆಯು ಮಾನವ ಸಂತತಿಯ ಪ್ರಾರಂಭದಿಂದಲೆ ಪ್ರಾರಂಭವಾಗಿದೆ. ಪ್ರಪಂಚಾದ್ಯಂತ ವ್ಯಾಪಕವಾಗಿ ಪ್ರಚಲಿತವಾಗಿರುವ ಪ್ರಸ್ತುತ ಆಧುನಿಕ ವೈದ್ಯವಿಜ್ಞಾನ (ಅಲೋಪತಿ) ವ್ಯಾಪಕವಾಗಿ ಪ್ರಾರಂಭವಾಗಿದ್ದು ೧೨-೧೩ನೇ ಶತಮಾನದಲ್ಲಿ, ಅಂದರೆ ಸುಮಾರು ೩೦೦ ರಿಂದ ೭೦೦ ವರ್ಷಗಳ ಹಿಂದೆ. ಇದಕ್ಕೂ ಮುನ್ನ
ವೈದ್ಯಕೀಯ ಸೇವೆಗಳು ಅಂದಿಗೂ ಇದ್ದು, ಅವು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರಿಂದಲೆ ಮಾನವ ಸಂತತಿ ಇಂದಿಗೂ ಅಭಿವೃದ್ಧಿಯಾಗಿ ಉಳಿದಿದೆ. ಇಲ್ಲದಿದ್ದಲ್ಲಿ ತದ್ವಿರುದ್ಧದ ಪರಿಸ್ಥಿತಿ ನಿರ್ಮಾಣವಾಗಬೇಕಿತ್ತು.
ಆದುದರಿಂದ ಪ್ರಸ್ತುತ ಆಧುನಿಕ ವೈದ್ಯ ವಿಜ್ಞಾನವೇ ಸರ್ವಶ್ರೇಷ್ಠ ಎನ್ನುವ ಹಾಗಿಲ್ಲ. ಪ್ರಾಚೀನ ವೈದ್ಯ ಪದ್ಧತಿಗಳಾದ ಆಯುರ್ವೇದ, ಚೈನೀಸ್, ಹೋಮಿಯೋಪತಿ ಇತ್ಯಾದಿ ಎಲ್ಲ ಪದ್ಧತಿಗಳೂ ಮಾನವ ಸಂತತಿಯ ಆರೋಗ್ಯವನ್ನು ಕಾಪಾಡುವಲ್ಲಿ ಪರಿಣಾಮಕಾರಿಯಾಗಿಯೇ ಕಾರ್ಯನಿರ್ವಹಿಸಿವೆ.
ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳೇ ಆಸ್ಪತ್ರೆಗಳಾಗಿ, ಪಜಾರಿಗಳೇ ವೈದ್ಯರಾಗಿ ಹಲವಾರು ಶತಮಾನಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿರುವುದನ್ನು ಇತಿಹಾಸದಲ್ಲಿ ಗುರುತಿಸಬಹುದಾಗಿದೆ. ಪ್ರಾಚೀನ ವೈದ್ಯ ಪದ್ಧತಿಗಳು ಅನಾರೋಗ್ಯ ನಿವಾರಣೆಗಿಂತ ರೋಗ ಬಾರದಂತೆ ದೇಹದ ಸಹಜ ರೋಗ ನಿರೋಧಕ ವ್ಯವಸ್ಥೆಯನ್ನು ವೃದ್ಧಿಸಿ ಆರೋಗ್ಯವನ್ನು ವೃದ್ಧಿಸುವ
ವಿಧಿವಿಧಾನಗಳನ್ನು ಪ್ರಧಾನವಾಗಿ ಒಳಗೊಂಡಿವೆ.
ಆರೋಗ್ಯ ವೃದ್ಧಿಗೆ ಆಯುರ್ವೇದ, ಯೋಗ, ನೈಸರ್ಗಿಕ ಚಿಕಿತ್ಸೆ ಮತ್ತು ರೋಗ ನಿವಾರಣೆಗೆ ಅಲೋಪತಿಗಳನ್ನೊಳಗೊಂಡ ಸಮಗ್ರ ಆರೋಗ್ಯ ಪದ್ಧತಿ ಸರ್ವಶ್ರೇಷ್ಠ. ಆಯುಷ್ ಮತ್ತು ಅಲೋಪತಿ ವೈದ್ಯಪದ್ಧತಿಗಳ ತಳಹದಿ ಮತ್ತು ದೃಷ್ಟಿಕೋನ ವಿಭಿನ್ನವಾಗಿದ್ದು, ಇವೆರಡನ್ನೂ ಸಮೀಕರಿಸಿ ಅಂತಿಮ ಸತ್ಯವನ್ನು ಸಂಶೋಧಿಸಿ ಸಮಗ್ರ ಆರೋಗ್ಯ ವೈದ್ಯ ಪದ್ಧತಿ ಜನ್ಮತಾಳಬೇಕಾಗಿದೆ. ಇಲ್ಲದಿದ್ದಲ್ಲಿ ಅವಘಡಗಳು ಖಂಡಿತ.
ವೈದ್ಯ-ರೋಗಿಯ ಸಂಬಂಧ : ರೋಗ ಬಾರದಂತೆ ಆರೋಗ್ಯವನ್ನು ವೃದ್ಧಿಸಿ, ರೋಗವನ್ನು ವಾಸಿಮಾಡುವಲ್ಲಿ ವೈದ್ಯ-ರೋಗಿಯ ನಡುವಿನ ವಿಶ್ವಾಸಾರ್ಹತೆ ಪ್ರಮುಖ ಪಾತ್ರವಹಿಸುತ್ತದೆ. ವೈದ್ಯ-ರೋಗಿಗೆ ತೋರುವ ಬದ್ಧತೆ, ಪ್ರೀತಿ ಮತ್ತು ಮಾನವೀ ಯತೆಗಳು ಅವರಿಬ್ಬರ ನಡುವಿನ ವಿಶ್ವಾಸಾರ್ಹತೆಯನ್ನು ವೃದ್ಧಿಸುತ್ತವೆ. ಇವಿಲ್ಲದೆ ವೈದ್ಯ ಪರಿಣಾಮಕಾರಿಯಾದ ಚಿಕಿತ್ಸೆ ನೀಡಿದರೂ ಅಪೇಕ್ಷಿತ ಫಲ ಲಭಿಸದಿರಬಹುದು. ಈ ಕಾರಣದಿಂದಾಗಿ ರೋಗಿಗಳು ತಮಗೆ ವಿಶ್ವಾಸವಿರುವ ವೈದ್ಯರನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಭದ್ರವಾಗಿದ್ದ ರೋಗ-ವೈದ್ಯರ ನಡುವಿನ ವಿಶ್ವಾಸಾರ್ಹತೆ ಇಂದು ಸಡಿಲಗೊಳ್ಳುತ್ತಿದೆ. ಇದಕ್ಕೆ ಕಾರಣಗಳು ಹಲವಾರು.
ನುರಿತ ವೈದ್ಯರುಗಳ ಕೊರತೆ, ವಾಣಿಜ್ಯಮಯವಾದ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ, ವೈದ್ಯಕೀಯ ವೃತ್ತಿಯ ಸೇವಾ ಗುಣಮಟ್ಟ ಮತ್ತು ಲೋಪದೋಷಗಳನ್ನು ಕಾನೂನಿನಡಿ ತಂದು ಪರಿಹಾರ ನೀಡುವ ಮತ್ತು ಶಿಕ್ಷಿಸುವ ಕಾನೂನುಗಳ ಸಬಲ ಗೊಂಡಿರುವುದು ಪ್ರಮುಖ ಕಾರಣಗಳಾಗಿವೆ.
ಕಾನೂನುಗಳ ಸಂಕೋಲೆಯಲ್ಲಿ ವೈದ್ಯ: ವ್ಯಾಪಾರೀಕರಣಗೊಂಡ ವೈದ್ಯಕೀಯ ಕ್ಷೇತ್ರದ ಪಲದಿಂದ ಹೊರ ಬಂದಿರುವ ವೈದ್ಯರ ಮನೋವೃತ್ತಿಯಲ್ಲೂ ಬದಲಾವಣೆ ಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಬಂಡವಾಳ ಹೂಡಿ ವೈದ್ಯರಾದವರು ಬಡ್ಡಿ ಸಮೇತ ಬಂಡವಾಳವನ್ನು ಹಿಂತೆಗೆಯಬೇಕಲ್ಲವೇ? ಜನಸಂಖ್ಯೆಗನುಗುಣವಾದ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಉದ್ದೇಶದ ಭರದಲ್ಲಿ ಮೂಲಭೂತ ವೈದ್ಯಕೀಯ ಶಿಕ್ಷಣದ ಸೌಲಭ್ಯವಿಲ್ಲದ ವೈದ್ಯಕೀಯ ಕಾಲೇಜುಗಳು ಖಾಸಗಿಯವರಿಂದ
ಪ್ರಾರಂಭದಿಂದಾಗಿ ಅದಕ್ಷ ವೈದ್ಯರು ಹೊರಬರುತ್ತಿರುವುದನ್ನು ತಳ್ಳಿಹಾಕುವಂತಿಲ್ಲ.
ಇವುಗಳ ಪರಿಣಾಮದಿಂದಾಗಿ ವೃತ್ತಿ ಸೇವೆಯಲ್ಲಿ ಉದಾಸೀನತೆ, ಅಪಕ್ವತೆ ಇತ್ಯಾದಿ ಲೋಪದೋಷಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಸರಕಾರ ವೈದ್ಯರ ಮೇಲೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ. ವೈದ್ಯಕೀಯ ಸೇವೆಯ ವಿತರಣೆಯ ಲೋಪದೋಷಗಳಿಗೆ ವೈದ್ಯರನ್ನು ಶಿಕ್ಷಿಸಲು ಹಲವಾರು ಕಾನೂನುಗಳನ್ನು ಮಾಡಲಾಗಿದ್ದು, ವೈದ್ಯ ಚಿಕಿತ್ಸೆ ನೀಡುವ ಮೊದಲು ಕಾನೂನಿನ ಪರಿಧಿಯಲ್ಲಿ ಯೋಚಿಸುವ ಅಗತ್ಯದಿಂದಾಗಿ ಅವನು ಕೈಗೊಳ್ಳುವ ಮುಂಜಾಗ್ರತಾ ಸ್ವಯಂ ರಕ್ಷಣೆ ಪರೀಕ್ಷೆಗಳು ಮತ್ತು ಕೈಗೊಳ್ಳಬೇಕಾದ ವಿಮೆಗಳೂ ಸಹ ದುಬಾರಿ ವೈದ್ಯಕೀಯ ವೆಚ್ಚಕ್ಕೆ ನಾಂದಿಯಾಗಿವೆ.
ವೈದ್ಯ ತನ್ನನ್ನು ಎಲ್ಲಿ ಶೋಷಿಸುತ್ತಾನೋ ಎಂಬ ಅನುಮಾನ ರೋಗಿಗೆ ಮತ್ತು ರೋಗಿ ತನ್ನನ್ನು ಯಾವ ಕಾನೂನು ಕಟ್ಟಳೆಗೆ ಎಳೆಯತ್ತಾನೋ ಎಂಬ ಅನುಮಾನ ವೈದ್ಯನಿಗೆ ಉಂಟಾಗಿ ಪವಿತ್ರವಾದ ಪ್ರೀತಿಯ ವೈದ್ಯ-ರೋಗಿಯ ಸಂಬಂಧ ಇಂದು ಅನುಮಾನದ ಸುರುಳಿಗೆ ಸಿಲುಕಿರು ವುದು ವೈದ್ಯಕೀಯ ಕ್ಷೇತ್ರದ ಅತ್ಯಂತ ದುರಂತದ ಸಂಗತಿ. ಅನುಮಾನದ ಸುರುಳಿಯಿಂದ ಬಿಡುಗಡೆಯಾಗದ ಹೊರತು ವೈದ್ಯ-ರೋಗಿಯ ಸಂಬಂಧ ಸುಧಾರಣೆಯಾಗದು.
ವೈದ್ಯಕೀಯ ಸೇವೆಯ ಕೊರತೆಗಳನ್ನು ಪ್ರಶ್ನಿಸಿ ವೈದ್ಯರಿಂದ ಪರಿಹಾರ ಪಡೆಯುವ ಗ್ರಾಹಕರ ಕಾಯ್ದೆ, ವೈದ್ಯಕೀಯ ಸೇವೆಯ ಉದಾಸೀನತೆಯಿಂದುಂಟಾಗುವ ಅವಘಡಗಳನ್ನು ಶಿಕ್ಷಿಸುವ ಕ್ರಿಮಿನಲ್ ಕಾಯ್ದೆ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕೆ.ಪಿ.ಎಂ.ಇ. ಕಾಯ್ದೆ, ಔಷಧಗಳ ನೀಡಿಕೆಯನ್ನು ನಿಯಂತ್ರಿಸುವ ಔಷಧ ಮತ್ತು ಸೌಂದರ್ಯವರ್ಧಕಗಳ ನಿಯಂತ್ರಕ ಕಾಯ್ದೆ,
ಗರ್ಭಪಾತವನ್ನು ನಿಯಂತ್ರಿಸುವ ಗರ್ಭಪಾತ ಕಾಯ್ದೆ, ಲಿಂಗ ನಿರ್ಧಾರ ನಿಯಂತ್ರಕ ಕಾಯ್ದೆ ಹೀಗೆ ಹಲವಾರು ಕಾನೂನುಗಳ ಸಂಕೋಲೆಗೆ ವೈದ್ಯರು ಸಿಲುಕುವ ಸಾಧ್ಯತೆ ಇದ್ದು, ವೈದ್ಯ ಇಂದು ಅತಿ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕಾಗಿದೆ.
ವೈದ್ಯ ತಾನು ನೀಡುವ ಸೌಲಭ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದ್ದು ಇವೆಲ್ಲವೂ ಶುಲ್ಕ ದುಬಾರಿಗೆ ಕಾರಣವಾಗಿವೆ.
ಇವೆಲ್ಲವುಗಳ ರಕ್ಷಣೆಗಾಗಿ ವೈದ್ಯ ತನ್ನ ವೃತ್ತಿ ಸೇವೆಗೂ ವಿಮೆ ಮಾಡಿಸಬೇಕಾಗಿದೆ. ಈ ಎಲ್ಲ ಸವಾಲುಗಳ ಹಿನ್ನೆಲೆಯಲ್ಲೂ ವೈದ್ಯರುಗಳು ಡಾ.ಬಿ.ಸಿ.ರಾಯ್ ಅವರ ಆದರ್ಶಗಳನ್ನು ಪರಿಪಾಲಿಸುವ ಪ್ರತಿಜ್ಞೆ ಮಾಡಬೇಕಲ್ಲವೇ?