Wednesday, 27th November 2024

ಕಿರಿಯರಲ್ಲಿ ಹೃದಯಾಘಾತ: ಕಾರಣಗಳೇನು ?

ಸ್ವಾಸ್ಥ್ಯ ಸಂಪದ

Yoganna55@gmail.com

ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿವೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಸ್ತ್ರೀರಲ್ಲಿ ಅಪರೂಪವಾಗಿದ್ದ ಹೃದಯಾಘಾತ ಇಂದು ಅವರಲ್ಲೂ ಅಧಿಕ ವಾಗು ತ್ತಿದೆ. ಮುಟ್ಟಿನ ಅವಧಿಯಲ್ಲಿ ಸ್ತ್ರೀರಲ್ಲಿ ಇಲ್ಲವಾಗಿದ್ದ ಹೃದಯಾ ಘಾತ ಇಂದು ಹೆಚ್ಚಾಗುತ್ತಿದೆ. ಮುಟ್ಟಿನ ಅವಧಿಯಲ್ಲಿ ಹೆಚ್ಚಾಗಿ ಸುರಿಕೆಯಾಗುವ ಈಸ್ಟ್ರೋಜನ್ ಲೈಂಗಿಕ ಹಾರ್ಮೋನ್ ಹೃದಯಾಘಾತಕ್ಕೆ ಪ್ರತಿರೋಧವನ್ನೊಡ್ಡುತ್ತಿತ್ತು.

ಮುಟ್ಟಿನ ನಂತರ ಸ್ತ್ರೀರಲ್ಲಿ ಈಸ್ಟ್ರೋಜನ್ ಲೈಂಗಿಕ ಹಾರ್ಮೋನ್ ಕಡಿಮೆ ಅಥವಾ ಇಲ್ಲವಾಗುವುದರಿಂದ ಅವರುಗಳಲ್ಲಿ ಹೃದಯಾಘಾತ ಪುರುಷರಷ್ಟೇ ಪ್ರಮಾಣದಲ್ಲಿ ಕಂಡುಬರುತ್ತಿತ್ತು. ಈ ಹಿಂದೆ ಮಕ್ಕಳು ತಮ್ಮ ತಂದೆ ತಾಯಿಯರನ್ನು ಹೃದಯದ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಧುನಿಕ ಸಮಾಜ ದಲ್ಲಿ ಪರಿಸ್ಥಿತಿ ಬದಲಾಗಿದ್ದು, ತಂದೆ ತಾಯಿಗಳೇ ತಮ್ಮ ಕಿರಿಯ ಮಕ್ಕಳನ್ನು ಹೃದ್ರೋಗ ಗಳಿಗಾಗಿ ಆಸ್ಪತ್ರೆಗಳಿಗೆ ಕರೆತರುತ್ತಿರುವುದು ಸಮುದಾಯದ ಆರೋಗ್ಯ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಸವಾಲುಗಳಾಗಿವೆ.

ಇವಕ್ಕೆ ಉತ್ತರ ಕಂಡುಕೊಂಡು ಪರಿಹಾರ ಮಾರ್ಗೋಪಾಯಗಳನ್ನು ಅನುಸರಿಸದಿದ್ದಲ್ಲಿ ಈ ಪ್ರಸಂಗಗಳು ವ್ಯಾಪಕವಾಗುವು ದರಲ್ಲಿ ಅನುಮಾನವಿಲ್ಲ. ಹೃದಯಾಘಾತದ ಸಮಸ್ಯೆ ಎಷ್ಟು ಗಂಭೀರ ಸ್ವರೂಪ ತಾಳುತ್ತಿದೆ ಎಂದರೆ ಚಿಕಿತ್ಸೆಗೂ ಆಸ್ಪದ ನೀಡದೆ ಮಲಗಿರುವಾಗಲೇ ಸಾವಾಗುವಿಕೆ, ಕುಳಿತಲ್ಲೇ ಕುಸಿದು ಸಾವನ್ನಪ್ಪುವಿಕೆ ಇತ್ಯಾದಿ ಪ್ರಸಂಗಗಳು ಜರುಗುತ್ತಿವೆ. ಕಿರಿಯರಲ್ಲಿ ಆಗುತ್ತಿರುವ ಈ ಬಗೆಯ ದಿಢೀರ್ ಸಾವುಗಳಿಗೆ ಕಾರಣಗಳೇನು? ಇವನ್ನು ತಡೆಗಟ್ಟಬಹುದೇ? ಅದಕ್ಕೆ ಕ್ರಮಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳ ಮಾಹಿತಿಯುಳ್ಳ ಲೇಖನವಿದು.

ದಿಢೀರ್ ಸಾವಿಗೆ ಕಾರಣಗಳೇನು?

ಪೂರ್ವಭಾವಿಯಾಗಿ ಯಾವ ಗಂಭೀರ ಸ್ವರೂಪದ ರೋಗತೊಂದರೆಗಳಿಲ್ಲದೆ ದಿಢೀರನೆ ಉಂಟಾಗುವ ಬಹುಪಾಲು ಸಾವುಗಳು ಹೃದಯದ ಸಮಸ್ಯೆಗಳಿಗೆ ಸಂಬಂಧಿಸಿದವುಗಳಾಗಿದ್ದು, ಹೃದಯದ ದಿಢೀರ್ ಕಾರ್ಯಸ್ಥಗಿತ (ಸಡನ್ ಕಾರ್ಡಿಯಾಕ್ ಅರೆಸ್ಟ್) ಇದಕ್ಕೆ ಪ್ರಮುಖ ಕಾರಣ. ಕೆಲವು ಹೃದಯದ ಕಾಯಿಲೆಗಳಲ್ಲಿ ಈ ಹಿಂದೆ ಯಾವ ರೋಗ ತೊಂದರೆಗಳೂ ಇಲ್ಲದೆ ದಿಢೀರ್ ಹೃದಯ ಸ್ಥಗಿತ ಉಂಟಾಗುತ್ತದೆ. ಅವುಗಳಲ್ಲಿ ಮುಖ್ಯವಾದವು ಗಳೆಂದರೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಅದರಲ್ಲೂ ಎಡಭಾಗದ ಹೃದಯಕ್ಕೆ ಶುದ್ಧರಕ್ತವನ್ನು ಸರಬರಾಜು ಮಾಡುವ ಎಡ ಪ್ರಧಾನ ಶುದ್ಧರಕ್ತನಾಳ (ಲೆಫ್ಟ್ ಮೇನ್ ಕರೋನರಿ ಆರ್ಟರಿ)ದಲ್ಲಿ ದಿಢೀರನೆ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತಸರಬರಾಜು ಸಂಪೂರ್ಣ ಸ್ಥಗಿತವಾಗಿ ಹೃದಯದ ಕಾರ್ಯ ತಕ್ಷಣ ನಿಲುಗಡೆಯಾಗುವುದು ದಿಢೀರ್ ಸಾವಿಗೆ ಪ್ರಮುಖ ಕಾರಣ.

ಜನ್ಮದತ್ತವಾಗಿ ಬರುವ ಹೃದಯದ ಶುದ್ಧರಕ್ತ ನಾಳಗಳ ಅಸಹಜತೆಗಳು ಮತ್ತು ಜನ್ಮದತ್ತ ಸೈನಾಟಿಕ್ ಹೃದ್ರೋಗಗಳು ಮಕ್ಕಳ ಲ್ಲಾಗುವ ಹೃದಯಾಧಾರಿತ ದಿಢೀರ್ ಸಾವಿಗೆ ಪ್ರಮುಖ ಕಾರಣಗಳು. ಹೃದಯದ ವಿದ್ಯುತ್ ಕ್ರಿಯಾವ್ಯವಸ್ಥೆಯಲ್ಲಿ ಅವ್ಯವಸ್ಥೆ ಯುಂಟಾಗಿ ಹೃದಯ ಅದರಲ್ಲೂ ಹೃತ್ಕುಕ್ಷಿ ಸ್ನಾಯು ಅತೀವ ಅದುರುವಿಕೆಗೀಡಾಗಿ ಶಕ್ತಿಯುತವಾಗಿ ಸಂಕುಚಿತವಾಗದೆ ಕಾರ್ಯಹೀನವಾಗಿ ತನ್ನೊಳಗಿನ ರಕ್ತವನ್ನು ಪಂಪ್ ಮಾಡಲಾಗದಿರುವಿಕೆಯ ‘ಹೃತ್ಕುಕ್ಷಿ ಅದುರುವಿಕೆ’ (ವೆಂಟ್ರಿಕ್ಯುಲಾರ್ ಫಿಬ್ರಿಲೇಷನ್) ಮತ್ತೊಂದು ಪ್ರಮುಖ ಕಾರಣ.

ಇವೆರಡು ಹೃದಯದ ಕಾರಣಗಳು ಸಾಮಾನ್ಯವಾಗಿ ಹೃದಯದ ಶುದ್ಧರಕ್ತ ನಾಳಗಳ ರಕ್ತಹೆಪ್ಪುಗಟ್ಟುವಿಕೆಯಿಂದಾಗುತ್ತವೆ. ವೈರಸ್ ಜ್ವರ ಮತ್ತು ಟೈಫಾಯಿಡ್ ಜ್ವರಗಳಲ್ಲುಂಟಾಗುವ ‘ಹೃದಯ ಸ್ನಾಯು ಊತುರಿ’ (ಮಯೋಕಾರ್ಡೈಟಿಸ್)ನಲ್ಲೂ ಹೃದಯ ದಿಢೀರನೆ ಸ್ಥಗಿತವಾಗಿ ದಿಢೀರ್ ಸಾವುಂಟಾಗಬಹುದು. ವಂಶವಾಹಿ ನ್ಯೂನತೆಯಿಂದಾಗುವ ಹೃದಯ ಸ್ನಾಯು ದಪ್ಪನಾಗುವ ‘ಹೃದಯ ಸ್ನಾಯಾಪತಿ’ (ಹೈಫರ್‌ಟ್ರೋಫಿಕ್ ಕಾರ್ಡಿಯೋಮಯೋಪತಿ) ಗಳಲ್ಲೂ ದಿಢೀರ್ ಸಾವುಂಟಾಗುತ್ತದೆ.

ಜನ್ಮದತ್ತ ನ್ಯೂನತೆಯಿಂದ ಕೆಲವರಲ್ಲಿ ವಿದ್ಯುತ್ ಅಸ್ಥಿರತೆಗಳಿದ್ದು, ನಲಯಮಿಡಿತಗಳುಂಟಾಗಿ (ಅರ‍್ಹಿತ್‌ಮಿಯಾ) ದಿಢೀರ್ ಸಾವುಂಟಾಗಬಹುದು. ಅನಿಯಂತ್ರಿತ ಸಕ್ಕರೆ ಕಾಯಿಲೆ, ಧೂಮಪಾನ, ಅನಿಯಂತ್ರಿತ ಏರುರಕ್ತ ಒತ್ತಡ ಮತ್ತು ಸ್ಥೂಲಕಾಯಿ ಗಳಲ್ಲಿ ದಿಢೀರ್ ಹೃದಯಸ್ಥಂಭನದ ಸಂಭವ ಹೆಚ್ಚು. ಇವರುಗಳಲ್ಲಿ ಪೂರ್ವಭಾವಿಯಾಗಿ ಹೃದಯದ ಕಾಯಿಲೆ ಇದ್ದರೂ ಯಾವುದೇ ಹೃದಯ ಸಂಬಂಧಿ ತೊಂದರೆಗಳೂ ಉಂಟಾಗದೆ ದಿಢೀರ್ ಸಾವೇ ಮೊದಲ ರೋಗತೊಂದರೆ ಯಾಗಬಹುದು. ಇವರು ಆಗಿಂದಾಗ್ಗೆ ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಪರೀಕ್ಷಿಸಿಕೊಂಡು ಗುಪ್ತಕಾಯಿಲೆಯನ್ನು ಗುರುತಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಈ ಗಂಡಾಂತರದಿಂದ ಪಾರಾಗಬಹುದು.

ಯುವಕರಲ್ಲಿನ ಹೃದಯಾಘಾತಕ್ಕೆ ಕಾರಣಗಳೇನು?
ಯುವಕರಲ್ಲಿ ಅಧಿಕವಾಗುತ್ತಿರುವ ಹೃದ್ರೋಗ ಗಳಿಗೆ ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ, ಸಕ್ಕರೆ ಕಾಯಿಲೆ, ಏರು ರಕ್ತ ಒತ್ತಡ ಮತ್ತು ಸ್ಥೂಲಕಾಯಗಳು ಪ್ರಮುಖ ಕಾರಣಗಳು. ಇವು ವಂಶವಾಹಿ ನ್ಯೂನತೆ ಗಳಿಂದ ಜನ್ಮದತ್ತವಾಗಿ ವಂಶಪಾರಂಪರ್ಯವಾಗಿ ಬರುವುದರಿಂದ, ತಂದೆತಾಯಿಗಳಲ್ಲಿ ಈ ಕಾಯಿಲೆ ಗಳಿದ್ದಲ್ಲಿ ಮಕ್ಕಳಲ್ಲಿ ಈ ಕಾಯಿಲೆಗಳು ಯೌವನಾವಸ್ಥೆಯಲ್ಲಿಯೇ ಕಂಡುಬರುವ ಸಂಭವ ಹೆಚ್ಚು. ಅದರಲ್ಲೂ ಹೃದ್ರೋಗದ ವಂಶಪಾರಂಪರ್ಯ ಮಾಹಿತಿ ಇರುವವರಲ್ಲಿ ಧೂಮಪಾನ, ಮದ್ಯಪಾನ, ಅತಿಯಾದ ಮಾನಸಿಕ ಒತ್ತಡ, ಸ್ಥೂಲಕಾಯ ಇತ್ಯಾದಿ ಪ್ರಚೋದಕ ಅಂಶಗಳು ಜತೆಗೂಡಿದಲ್ಲಿ ದಿಢೀರ್ ಸಾವಿನ ಹೃದ್ರೋಗಗಳ ಸಾಧ್ಯತೆ ಹೆಚ್ಚು.

ಆಧುನಿಕ ಸಮಾಜದ ಯುವಕರ ಜೀವನಶೈಲಿ ಈ ಮೇಲಿನ ಎಲ್ಲ ಕಾಯಿಲೆಗಳನ್ನು ಪ್ರಚೋದಿಸುವ ಅಂಶಗಳನ್ನೊಳಗೊಂಡಿರು ವುದು ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಮಾನಸಿಕ ಒತ್ತಡ ಬೀರುವ ಶಿಕ್ಷಣ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವ ಪ್ರಮಾಣದ ಪಠ್ಯ ಪುಸ್ತಕಗಳು, ಹೋಂವರ್ಕ್, ದೀರ್ಘಾವಧಿಯ ಬೋಧನಾ ಕ್ರಮಗಳಿಂದಾಗಿ ಮನಸ್ಸು ಮತ್ತು ದೇಹ ಗಳನ್ನು ಅತೀವ ಒತ್ತಡಕ್ಕೀಡುಮಾಡುವ ಪರಿಪಾಠ ಪ್ರಾರಂಭದಿಂದಲೇ ಶುರುವಾಗಿ ಬಾಲ್ಯದಿಂದಲೇ ಹೃದಯದ ಮೇಲೆ ದಿನೇ ದಿನೆ ಒತ್ತಡ ಹೆಚ್ಚಾಗುತ್ತಿದೆ.

ನಂತರ ಉಂಟಾಗುವ ವೃತ್ತಿ ಸ್ಪರ್ಧಾತ್ಮಕ ಪರಿಸರ, ರಾತ್ರಿ ಪಾಳಿಯ ನಿದ್ರಾಹೀನತೆಯ ವೃತ್ತಿ, ಇವುಗಳ ಜತೆಗೂಡಿದ ವ್ಯಸನಗಳು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿ ನಿರಂತರ ನೆಮ್ಮದಿ ನೀಡದ ಭೌತಿಕ ಆಸೆಗಳೆಡೆಗೆ ಯುವ ಸಮುದಾಯವನ್ನೆಳೆಯು ತ್ತಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಅತಿಯಾದ ಒತ್ತಡ ದೇಹದಲ್ಲಿ ಅಡ್ರಿನಲಿನ್, ನಾರ್ ಅಡ್ರಿನಲಿನ್ ಮತ್ತು ಕಾರ್ಟಿಕೋಸ್ಟೀರಾಯ್ಡ್ ಹಾರ್ಮೋನುಗಳ ಸುರಿಕೆಯನ್ನು ಹೆಚ್ಚು ಮಾಡಿ ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಆಹಾರ

ಸಮುದಾಯದಲ್ಲಿ ಹೆಚ್ಚಾಗುತ್ತಿರುವ ಸಕ್ಕರೆ ಕಾಯಿಲೆ, ಏರು ರಕ್ತ ಒತ್ತಡ ಮತ್ತು ಹೃದಯಾಘಾತಕ್ಕೆ ಬದಲಾಗಿರುವ ಅಸಮತೋಲನ ಆಹಾರ ನಿಯಮಗಳೂ ಕಾರಣಗಳಾಗಿವೆ. ಮಕ್ಕಳಿಗೆ ಪ್ರಾರಂಭದಿಂದಲೇ ಬೇಕರಿ ತಿಂಡಿಗಳು, ಐಸ್‌ಕ್ರೀಂ, ಅತಿಯಾದ ಮಾಂಸಾಹಾರಗಳನ್ನು ಅಭ್ಯಾಸ ಮಾಡಿಸುವುದರಿಂದ ಸ್ಥೂಲಕಾಯ ಮತ್ತು ರಕ್ತದ ಜಿಡ್ಡೇರಿಕೆ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ದಕ್ಷಿಣ ಭಾರತೀಯರಲ್ಲಿ ಶೇ.೯೦ರಷ್ಟು ದೈನಂದಿನ ಆಹಾರ ಅಕ್ಕಿಯನ್ನೊಳಗೊಂಡಿದ್ದು, ಅತಿಯಾಗಿ ಸೇವಿಸಿದ ಪಾಲಿಷ್ ಮಾಡಿದ ಅಕ್ಕಿ ದೇಹದಲ್ಲಿ ಜಿಡ್ಡಾಗಿ ಪರಿವರ್ತನೆ ಹೊಂದಿ ಸ್ಥೂಲಕಾಯಕ್ಕೆ ಎಡೆಮಾಡಿಕೊಡುತ್ತಿರುವುದೂ
ಹೃದಯಾಘಾತಕ್ಕೆ ಕಾರಣವಾಗಿದೆ. ಆಹಾರದಲ್ಲಿ ಅತಿಯಾಗಿ ಸೇವಿಸುತ್ತಿರುವ ಜಿಡ್ಡು ಮತ್ತು ಮಾಂಸಾಹಾರವೂ ಇದಕ್ಕೆ ಕಾರಣವಾಗಿದೆ.

೬ ಬಿಳಿ ಆಹಾರ ಪದಾರ್ಥಗಳಾದ ಅಕ್ಕಿ, ಉಪ್ಪು, ಸಕ್ಕರೆ, ಹಾಲು (ಕೊಲೆಸ್ಟ್ರಾಲ್), ಮೈದಾ, ಬೆಣ್ಣೆ (ಜಿಡ್ಡು) ಇವುಗಳನ್ನು
ಅತಿಯಾಗಿ ಸೇವಿಸುವುದೂ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇವುಗಳನ್ನು ಮಿತಿಯಾಗಿ ಸೇವಿಸಬೇಕು. ಪ್ರತಿಯೊಬ್ಬರೂ ಅವರವರಿಗೆ ಅವಶ್ಯಕವಿರುವ ಪೌಷ್ಠಿಕಾಂಶಗಳನ್ನು ನಿರ್ಧರಿಸಿಕೊಂಡು ಎಲ್ಲ ಪೌಷ್ಠಿಕ ಗಳನ್ನುಳ್ಳ ಸಮತೋಲನ ಆಹಾರವನ್ನು ದಿನನಿತ್ಯ ಸೇವಿಸಬೇಕು. ‘ರುಚಿಗಾಗಿ ಆಹಾರವಲ್ಲ, ಬದುಕಿಗಾಗಿ ಆಹಾರ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಮಾದಕವಸ್ತುಗಳ ಸೇವನೆ
ಧೂಮಪಾನ, ಮದ್ಯಪಾನ, ಗಾಂಜಾ ಸೇರಿದಂತೆ ಮತ್ತಿತರ ಮಾದಕ ವಸ್ತುಗಳ ಸೇವನೆ ಯುವಕರಲ್ಲಿ ಇಂದು ಹೆಚ್ಚಾಗುತ್ತಿದ್ದು, ಇದೂ ಅವರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಈ ದುರಭ್ಯಾಸಗಳಿಗೆ ಮೊರೆ ಹೋಗುತ್ತಿದ್ದು, ಇವುಗಳಿಂದ ತಾತ್ಕಾಲಿವಾಗಿ ಮಾನಸಿಕ ಒತ್ತಡ ಕಡಿಮೆಯಾಗುವುದಾದರೂ ಅತಿಯಾದ ಮಾನಸಿಕ ಒತ್ತಡದಿಂದ ಹೃದಯದ ಮೇಲಾಗುವ ಮಾರಕ ಪರಿಣಾಮಗಳು ಇವುಗಳಿಂದಲೇ ಆಗುತ್ತವೆ. ಗಾಂಜಾ ಮತ್ತಿತರ
ಮಾದಕವಸ್ತುಗಳ ಸೇವನೆಯೂ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ದೇಹದ ತೂಕ
ದೇಹದ ತೂಕ ಹೆಚ್ಚಾದಂತೆಲ್ಲ ರಕ್ತನಾಳಗಳ ಪ್ರಮಾಣ ಹೆಚ್ಚಾಗಿ, ರಕ್ತ ಒತ್ತಡ ಅಧಿಕವಾಗಿ, ರಕ್ತದ ಜಿಡ್ಡು ಹೆಚ್ಚಾಗಿ ಹೃದಯಾಘಾತದ ಸಂಭವ ಹೆಚ್ಚಾಗುತ್ತದೆ. ಬಹುಪಾಲು ಯುವಕರು ತಮ್ಮ ಅವೈಜ್ಞಾನಿಕ ಆಹಾರ ಅಭ್ಯಾಸ ಮತ್ತು ಮದ್ಯಪಾನ ಹಾಗೂ ದೈಹಿಕ ಶ್ರಮರಹಿತ ಬದುಕಿನಿಂದಾಗಿ ಸ್ಥೂಲಕಾಯಿಗಳಾಗಿ ಹೃದಯಾಘಾತವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ತಮ್ಮ
ದೇಹದ ತೂಕವನ್ನು ತಮ್ಮ ಎತ್ತರಕ್ಕನುಗುಣವಾಗಿಟ್ಟುಕೊಂಡು, ಬಾಡಿ ಮಾಸ್ ಇಂಡೆಕ್ಸ್ = ಬಿಎಂಐ (ದೇಹ ತೂಕ ಮತ್ತು ಎತ್ತರಗಳ ಅನುಪಾತ) ಅನ್ನು ೨೫ರ ಗಡಿಯಲ್ಲಿಟ್ಟುಕೊಳ್ಳಬೇಕು.

ದೈಹಿಕ ಶ್ರಮರಹಿತ ಬದುಕು
ದೈಹಿಕ ಶ್ರಮವಿಲ್ಲದ ಒಂದೆಡೆ ಕುಳಿತು ಕೆಲಸಮಾಡುವ ಜೀವನಶೈಲಿ ಹೃದಯಕ್ಕೆ ಮಾರಕ.ದೈಹಿಕ ಮತ್ತು ಮಾನಸಿಕ ಕ್ರಿಯಾ ಶೀಲತೆ ಹೃದಯಾಘಾತವನ್ನು ದೂರಮಾಡುತ್ತದೆ. ಪ್ರತಿನಿತ್ಯ ದೈಹಿಕ ವ್ಯಾಯಾಮ ಅತ್ಯವಶ್ಯಕ.

ತಡೆಗಟ್ಟುವುದು ಹೇಗೆ?
ಬಾಲ್ಯದಿಂದಲೇ ಮಕ್ಕಳನ್ನು ಅತೀವ ಮಾನಸಿಕ ಮತ್ತು ದೈಹಿಕ ಶ್ರಮವಿಲ್ಲದ ಹಾಗೆ ಬೆಳೆಸಬೇಕು. ಆರೋಗ್ಯಕ್ಕೆ ಪೂರಕವಾದ ಆಹಾರ, ವಿಹಾರ, ವ್ಯಾಯಾಮ, ನೆಮ್ಮದಿಯುಳ್ಳ ಜೀವನಶೈಲಿಯನ್ನು ಪ್ರಾರಂಭದಿಂದಲೇ ರೂಢಿಸಿಕೊಂಡು ಪ್ರತಿನಿತ್ಯ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದನ್ನು ಪಾಲಿಸಿ ಮತ್ತೊಂದನ್ನು ಸಡಿಲಗೊಳಿಸಿದರೆ ಪ್ರಯೋಜನವಿಲ್ಲ. ವಂಶಪಾರಂಪರ್ಯದ ಹೃದಯಾಘಾತದ ಮಾಹಿತಿ ಇರುವವರು ಬಾಲ್ಯದಿಂದಲೇ ಈ ಜೀವನ ಶೈಲಿಯನ್ನು ಪಾಲಿಸಿ ಆಗಿಂದಾಗ್ಗೆ ಗುಪ್ತ ಹೃದ್ರೋಗದ
ಸಾಧ್ಯತೆಗಾಗಿ ಇಸಿಜಿ, ಇಕೊ, ರಕ್ತ ಗ್ಲುಕೋಸ್, ರಕ್ತ ಕೊಲೆಸ್ಟ್ರಾಲ್, ಬಿ.ಪಿ., ಬಿಎಂಐ ಅವಶ್ಯಕವಿದ್ದಲ್ಲಿ ಹೃದಯದ ಶುದ್ಧರಕ್ತ ನಾಳಗಳ ಚಿತ್ರಣ(ಕರೋನರಿ ಆಂಜಿಯೋಗ್ರಾಂ) ಈ ಪರೀಕ್ಷೆಗಳನ್ನು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಬೇಕು. ಶಾಲಾ ಮಕ್ಕಳನ್ನು ಶಾಲೆಗಳಲ್ಲಿ ಜನ್ಮದತ್ತ ಹೃದ್ರೋಗಗಳ ಪತ್ತೆಗಾಗಿ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸುವುದರಿಂದ ಜನ್ಮದತ್ತ ಹೃದ್ರೋಗಗಳನ್ನು ಪ್ರಾರಂಭ ದಲ್ಲಿಯೇ ಪತ್ತೆಮಾಡಿ ಸೂಕ್ತ ಚಿಕಿತ್ಸೆ ಮಾಡಲು ಸಹಾಯವಾಗುತ್ತದೆ. ಹೃದಯಾಘಾತ ಪ್ರಚೋದಕ
ಅಂಶಗಳಾದ ಧೂಮಪಾನ, ಮದ್ಯಪಾನ, ಸಕ್ಕರೆ ಕಾಯಿಲೆ, ಏರುರಕ್ತ ಒತ್ತಡ, ರಕ್ತ ಜಿಡ್ಡೇರಿಕೆ, ಸ್ಥೂಲಕಾಯ ಇವುಗಳಿದ್ದಲ್ಲಿ ಅವುಗಳನ್ನು ಸಮರ್ಥವಾಗಿ ನಿಯಂತ್ರಿಸಿಕೊಳ್ಳಬೇಕು.

ಹೃದಯಾಘಾತದಲ್ಲಿ ಹೃದಯದ ಶುದ್ಧ ರಕ್ತನಾ ಳಗಳಲ್ಲಿ ಜಿಡ್ಡು ಶೇಖರಣೆಯಾಗಿ ಕ್ರಮೇಣ ಜಿಡ್ಡಿನ ಗೆಡ್ಡೆಯಾಗಿ ಒಡೆದು ರಕ್ತ ಹೆಪ್ಪುಗಟ್ಟಿ ರಕ್ತನಾಳವನ್ನು ಪೂರ್ಣವಾಗಿ ಅಡಚಣೆಗೊಳಿಸಿ ಹೃದಯಕ್ಕೆ ರಕ್ತ ಸರಬರಾಜು ಸ್ಥಗಿತವಾಗಿ ಆ ಭಾಗ ಸಾವಿಗೀಡಾಗಿ ನಿಷ್ಕ್ರಿಯವಾಗುತ್ತದೆ. ಈ ಕ್ರಿಯೆ ಮೂಲತಃ ವಂಶವಾಹಿ ನ್ಯೂನತೆ ಯಿಂದಾದರೂ, ಜೀವನಶೈಲಿ, ಆಹಾರ ನಿಯಮಗಳು, ವ್ಯಾಯಾಮ, ಸಕ್ಕರೆ ಕಾಯಿಲೆ, ಏರುರಕ್ತ ಒತ್ತಡ, ಮಾನಸಿಕ ಒತ್ತಡ, ರಕ್ತದ ಜಿಡ್ಡಿನ ಪ್ರಮಾಣ, ಧೂಮಪಾನ, ಮದ್ಯಪಾನ ಇವು ವಂಶವಾಹಿ ನ್ಯೂನತೆಯನ್ನು ಮತ್ತಷ್ಟು ಪ್ರಚೋದಿಸಿ ಕಾಯಿಲೆಯನ್ನು ತೀವ್ರಗೊಳಿಸುವುದರಿಂದ ಈ ಪ್ರಚೋದಕ ಅಂಶಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಲ್ಲಿ ಸಂಭವನೀಯ ಹೃದಯಾಘಾತವನ್ನು ತಡೆಗಟ್ಟಬಹುದು. ಒಬ್ಬೊಬ್ಬರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳಿರಬಹುದಾಗಿದ್ದು, ಅವೆಲ್ಲವುಗಳನ್ನು ನಿರಂತರ ನಿಯಂತ್ರಿಸುವುದರಿಂದ ಮಾತ್ರ ಹೃದಯಾಘಾತವನ್ನು ತಡೆಗಟ್ಟ ಬಹುದು.

ಹೃದಯಾಘಾತವು ವೈದ್ಯರ ಚಿಕಿತ್ಸೆಗೆ ಅವಕಾಶವನ್ನೂ ನೀಡದೆ ಜೀವವನ್ನು ಕಸಿಯುವ ಸಾಧ್ಯತೆ ಇರುವುದರಿಂದ ಇದನ್ನು ತಡೆಗಟ್ಟುವ ದಿಕ್ಕಿನ ಮುಂಜಾಗ್ರತಾ ಕ್ರಮಗಳು ಮೊದಲ ಆದ್ಯತೆಯಾಗಬೇಕು. ಹೃದಯಾಘಾತ ತಡೆಗಟ್ಟಬಹುದಾದ ಕಾಯಿಲೆ ಯಾದುದರಿಂದ ಆಯ್ಕೆ ನಿಮ್ಮ ಕೈಯಲ್ಲಿದೆ.