Friday, 22nd November 2024

ಕಣ್ಣು ಮುಚ್ಚುತ್ತಿರುವ ಕನ್ನಡಶಾಲೆ

ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ ಅಡಗುದಾಣವಾಗಿದ್ದ ಈ ಊರಿನಲ್ಲಿ ಪೊಲೀಸರ ಬೂಟುಗಾಲಿನ ಸದ್ದು, ಎನ್‌ಕೌಂಟರ್ ಗುಂಡಿನ ಮೊರೆತ ಆಗಾಗ ಕೇಳಿಬರುತ್ತಿದ್ದವು. ಕ್ರಮೇಣ ಅವು ಕ್ಷೀಣವಾಗಿ ಈಗ ಅಡಗಿಹೋಗಿವೆ. ಈ ಹಳ್ಳಿಯಲ್ಲಿ ಮನೆಗಳೆಂದರೆ ಗುಡಿಸಲುಗಳೇ. ಹೆಚ್ಚೆಂದರೆ ಹೆಂಚಿನ ಮನೆಗಳಿವೆ. ಹಚ್ಚ ಹಸಿರಿನ ಗದ್ದೆಗಳು, ಜುಳುಜುಳು ಹರಿಯುವ ಹೊಳೆ, ಹೊಳೆಯುವ ಬಂಡೆ, ಶಿಲೆಗಳು, ಹಸಿರು ಹೊದ್ದ ಬೆಟ್ಟಗಳು ಇಲ್ಲಿನ ಸಂಪತ್ತು. ದಟ್ಟಕಾಡನ್ನು ಸೀಳುತ್ತಾ ಸಾಗುವ ಹಳೆಯ ಟಾರ್ ರಸ್ತೆ ಮಾತ್ರ ಇಲ್ಲಿ ನಾಗರಿಕತೆಯ ಸಂಕೇತ. ಇರೋದು ೭೭ ಮನೆಗಳು, ಜನಗಳೂ ೧೫೦ ಅಜಮಾಸು. ಬಹುತೇಕರು ಅರ್ಧ ಆಯುಷ್ಯ ಕಳೆದಿರುವ ಹಿರಿಯರು. ಅಜ್ಜ-ಅಜ್ಜಿಯರ ಸಂಖ್ಯೆಯೇ ಹೆಚ್ಚು. ಆದರೂ ಎಲ್ಲರೂ ಗಟ್ಟಿಮುಟ್ಟಾಗಿದ್ದು, ಕೊನೆಯುಸಿರು ಇರುವವರೆಗೂ ದುಡಿಯುತ್ತಲೇ ಇರುತ್ತಾರೆ. ಏಕೆಂದರೆ ಇವರು ಕೃಷಿಕರು ಮತ್ತು ಕೃಷಿ ಕಾರ್ಮಿಕರು. ಇಂಥ ಹಳ್ಳಿಗೆ ಒಂದು ಪುಟ್ಟ
ಸರಕಾರಿ ಕನ್ನಡಶಾಲೆ. ಶತಮಾನಗಳ ಕಾಲ ಬಾಳಿ ಹಳ್ಳಿಗರಿಗೆ ಬೆಳಕಾಗಬೇಕಿದ್ದ ಈ ಶಾಲೆ ಹುಟ್ಟಿ ೨೦ ವರ್ಷ ಕಳೆಯುವಷ್ಟರಲ್ಲೇ ಕಣ್ಣುಮುಚ್ಚುವ ಸ್ಥಿತಿಗೆ ತಲುಪಿದೆ.

ಶಾಲೆಯ ಹುಟ್ಟು ಮತ್ತು ಸಾವಿನ ಹಿಂದೆಯೂ ಒಂದು ಕಥೆಯಿದೆ. ಶಿವಮೊಗ್ಗದ ತೀರಾ ಹಿಂದುಳಿದ ವರ್ಗದವರೊಬ್ಬರಿಗೆ ೩೬ನೇ ವಯಸ್ಸಿನಲ್ಲಿ ಸರಕಾರಿ ಶಿಕ್ಷಕ ಹುದ್ದೆ ಸಿಕ್ಕಿದಾಗ ಮೊಟ್ಟಮೊದಲ ಜಾಗವಾಗಿ ತೋರಿಸಿದ್ದು ಇದೇ ಮಲ್ಲಂದೂರು ಪ್ರಾಥಮಿಕ ಶಾಲೆಯನ್ನು. ಆಗಲೇ ಶಾಲೆ ಶುರುವಾಗಿದ್ದು ಕೂಡ. ಆರಂಭದಲ್ಲಿ ೧೬ ಮಕ್ಕಳಿದ್ದರು. ೪ ವರ್ಷ ಕಳೆಯುವಷ್ಟರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿ ಸರಕಾರದಿಂದ ಶಾಲೆಗೆ ಹೊಸ ಕಟ್ಟಡ ಕೂಡಾ ಮಂಜೂರಾಗಿತ್ತು. ಮಕ್ಕಳ ಸಂಖ್ಯೆ ೬೬ ತಲುಪಿದಾಗ ಪಕ್ಕದಲ್ಲೇ ಇದ್ದ ಅಂಗನವಾಡಿಯಲ್ಲೂ ತರಗತಿಗಳನ್ನು ನಡೆಸಲಾಗುತ್ತಿತ್ತು. ಪುಟ್ಟಹಳ್ಳಿಯ ಮನೆಗೊಬ್ಬರಂತೆ ಮಕ್ಕಳು ಶಾಲೆಗೆ ಬರುತ್ತಿದ್ದು ಅದು ಹಳ್ಳಿಗರ ಕಣ್ಮಣಿಯೇ ಆಗಿತ್ತು. ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ೨೦೧೭ರಲ್ಲಿ ಸರಕಾರವೇ ಆಗುಂಬೆಯಲ್ಲಿ ವಸತಿ, ಊಟ ಸಹಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿತು. ಆ ವರ್ಷ ಶಾಲೆಯಿಂದ ೧೫ ಮಂದಿ ಟಿ.ಸಿ. ಪಡೆದು ಆಗುಂಬೆಯ ವಸತಿ ಶಾಲೆಯಲ್ಲಿ ಕಲಿಯಲಾರಂಭಿಸಿದರು. ಬಳಿಕ ಆಗುಂಬೆ ಪರಿಸರದಲ್ಲಿ ಇಂಗ್ಲಿಷ್ ಶಾಲೆಗಳು ಶುರುವಾದವು. ಪ್ರತಿ ವರ್ಷವೂ ಮಕ್ಕಳು ಟಿ.ಸಿ. ಪಡೆಯುತ್ತಲೇ ಹೋಗಿ ಅವರ ಸಂಖ್ಯೆ ಕಡಿಮೆಯಾದ ಕಾರಣಕ್ಕೆ ಅಲ್ಲಿದ್ದ ಶಿಕ್ಷಕರನ್ನು ಸರಕಾರ ವರ್ಗ ಮಾಡಿತು. ಈಗ ಶಾಲೆಯ ೧ನೇ ತರಗತಿಯಲ್ಲಿ ಇಬ್ಬರು ಬಾಲಕಿಯರು, ೩ ಮತ್ತು ೪ನೇ ತರಗತಿಯಲ್ಲಿ ಒಬ್ಬೊಬ್ಬ ಬಾಲಕರಿದ್ದಾರೆ. ನಾಲ್ವರಿಗೂ ಒಬ್ಬರೇ ಶಿಕ್ಷಕರು, ಅವರು ಮುಖ್ಯೋಪಾಧ್ಯಾಯರು ಕೂಡ. ಶಾಲಾ ಕಟ್ಟಡದ ಮಾಡುಗಳು ಹಾರಿಹೋಗಿರುವುದರಿಂದ ಗಾಳಿ-ಬೆಳಕು- ಮಳೆಗೆ ಯಾವುದೇ ಅಡ್ಡಿಯಿಲ್ಲ! ಇನ್ನೆರಡು ವರ್ಷದಲ್ಲಿ ಶಿಕ್ಷಕರು ನಿವೃತ್ತರಾಗುತ್ತಿದ್ದಂತೆ ಮಲ್ಲಂದೂರಿನ ಈ ಶಾಲೆ ಇತಿಹಾಸಕ್ಕೆ ಸೇರಿಕೊಳ್ಳಲಿದೆ. ಈ ಶಾಲೆಯಲ್ಲಿ ಕಲಿತವರಲ್ಲಿ ಮೂವರು ಎಂಜಿನಿಯರ್‌ಗಳಾಗಿದ್ದರೆ, ಇಬ್ಬರು ಪೊಲೀಸರಾಗಿದ್ದಾರೆ ಎಂಬುದು ನಿಮ್ಮ ಗಮನಕ್ಕೆ!

ಹಳ್ಳಿ ಎಂದರೆ ಬೇಸಾಯ ಇರಲೇಬೇಕು. ಕಾಡಿನ, ಬೆಟ್ಟದ ನಡುವಿನ ಈ ಹಳ್ಳಿಯಲ್ಲಿ ೨೦೦ ಎಕರೆ ಕೃಷಿಭೂಮಿಯಿದೆ. ಇದರಲ್ಲಿ ಬಹುಪಾಲು ಆಗುಂಬೆಯ ವೇಣುಗೋಪಾಲಕೃಷ್ಣ ದೇವಸ್ಥಾನಕ್ಕೆ ಸೇರಿದ್ದ ಉಂಬಳಿ ಭೂಮಿ. ಹೀಗಾಗಿ ಇದರ ಅಕ್ಕಪಕ್ಕ ಮನೆ ಕಟ್ಟಿಕೊಂಡವರಿಗೆ ಶತಮಾನ ಕಳೆದರೂ ಮನೆಯೂ, ಜಾಗವೂ, ಹೊಲ-ಗದ್ದೆಗಳೂ ಅವರ ಹೆಸರಲ್ಲಿಲ್ಲ. ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಂಡವರಿದ್ದರೂ ಅಂಥವರ ಸಂಖ್ಯೆ ವಿರಳ. ಅತಿಹೆಚ್ಚು ಮಳೆ ಬೀಳುವ ಆಗುಂಬೆ ಪರಿಸರದ ಈ ಹಳ್ಳಿಯಲ್ಲಿ ಭತ್ತದ ಬೇಸಾಯ ಕಠಿಣ. ವಿಪರೀತ ಮಳೆಯಿಂದಾಗಿ ನೀರು ತೊರೆಯಾಗಿ ಹರಿದು, ಮಣ್ಣಿನ ಫಲವತ್ತತೆಯೂ ಅದರ ಜತೆಗೇ ಸಾಗಿ ಘಟ್ಟದ ಕೆಳಗಿನ ಬೈಲು ಪ್ರದೇಶಗಳಿಗೆ ಮೆಕ್ಕಲುಮಣ್ಣು ಹರಡಿಕೊಳ್ಳುತ್ತದೆ. ಹೀಗಾಗಿ ಮಲ್ಲಂದೂರಿನ ಜನ ಕಾಡಿನ ಉತ್ಪನ್ನಗಳಿಗೆ ಅವಲಂಬಿತರಾಗಿದ್ದು, ಬೆತ್ತ, ಜೇನು, ದಾಲ್ಚಿನ್ನಿ, ಕಾಳುಮೆಣಸು, ಸಾಂಬಾರ ಎಲೆಗಳು, ಮರದ ಮೇಲೆ ಬೆಳೆಯುವ ಪಾಚಿ, ಧೂಪ ಇವೆಲ್ಲವನ್ನೂ ಸಂಸ್ಕರಿಸಿ ಮಾರಿ ಬದುಕುತ್ತಿದ್ದರು. ಕಾಡಿನ ಸಂಪತ್ತನ್ನು ಹಾಳುಮಾಡದೆ ಪೂರಕವಾಗಿ ಬಳಸಿಕೊಂಡು ನೆಮ್ಮದಿಯಿಂದಿದ್ದರು.

ಆದರೆ ಅಭಯಾರಣ್ಯ ಕಾಯ್ದೆ ಬಿಗುವಾದ ಹೊತ್ತಲ್ಲಿ ಕಾಡಿನ ಉತ್ಪನ್ನಗಳನ್ನು ತರಲು ನಿಷೇಧ ಹೇರಲಾಯಿತು. ಹುಲಿ ಯೋಜನೆ ಮತ್ತು ಅಭಯಾರಣ್ಯ ಪ್ರವೇಶ ನಿಷೇಧ ಕಾಯ್ದೆ ಬಿಗುವಾದಾಗ ಅರಣ್ಯ ಇಲಾಖೆ ಮತ್ತು ಹಳ್ಳಿಗರ ನಡುವೆ ಸಣ್ಣಗಿನ ಸಂಘರ್ಷಗಳು ಶುರುವಾದವು. ನಕ್ಸಲರು ಇದರ ಲಾಭ ಪಡೆದು ಹಳ್ಳಿಗರ ನಡುವೆ ಬಂದು, ಕೋವಿ ಹಿಡಿದು ಸುತ್ತಾಡಿ ಜನರ ಮನಗೆಲ್ಲಲು ಯತ್ನಿಸಿದ್ದರು. ನಕ್ಸಲರು ಬಂದು ಸಭೆ ನಡೆಸಿ, ಜನರ ಮನೆಗಳಿಂದ ಊಟ ಕಟ್ಟಿಸಿಕೊಂಡು ಹೋಗಿದ್ದು ಬಿಟ್ಟರೆ ಅವರಾಗೇ ಯಾವ ಸುಧಾರಣೆಯನ್ನೂ ಮಾಡಿರಲಿಲ್ಲ. ಬದಲಿಗೆ ಪೊಲೀಸರ ತಪಾಸಣೆ ಕಿರಿಕಿರಿ, ಇತ್ತ ನಕ್ಸಲರ ಪಿರಿಪಿರಿ! ಹಳ್ಳಿಯ ಪಕ್ಕದ ಬರ್ಕಣದಲ್ಲಿ ಎನ್‌ಕೌಂಟರ್ ನಡೆದ ವೇಳೆ ನಾನೂ ಪತ್ರಕರ್ತನಾಗಿ ಸ್ಪಾಟ್‌ಗೆ ಮೊದಲಿಗೆ ಹೋಗಿದ್ದಾಗ, ಜಲಪಾತದ ಮೇಲ್ಭಾಗದಲ್ಲಿ ಕೂಂಬಿಂಗ್ ಪಡೆಯ ನಡುವೆ ನಿಂತಿದ್ದ ಐಪಿಎಸ್ ಅಧಿಕಾರಿಯೊಬ್ಬರು, ‘ಬಾಸ್ಟರ್ಡ್ಸ್… ಇಲ್ಲೇ ಕೆಳಭಾಗದಲ್ಲಿ ಅಡಗಿ ಕುಳಿತಿದ್ದಾರೆ… ಹುಡುಕಿ ಹೊಡೆಯಿರಿ’ ಎಂದು ಗರ್ಜಿಸಿದ್ದು ಈಗಲೂ ನೆನಪಿದೆ. ಸಂಘರ್ಷಗಳಾದಾಗ ಪೇಜಾವರ ಹಿರಿಯ ಶ್ರೀಗಳು ತಮ್ಮ ಮಠದಿಂದ ಇಲ್ಲಿನ ಮನೆಗಳಿಗೆ ಸೌರವಿದ್ಯುತ್ ಉಪಕರಣ ಒದಗಿಸಿದರು. ವೈದ್ಯಕೀಯ ವ್ಯವಸ್ಥೆ, ಶಿಕ್ಷಣಕ್ಕಾಗಿ ಪ್ರತಿ ವರ್ಷಕ್ಕೆ ೩೦ ಲಕ್ಷದವರೆಗೂ ಖರ್ಚು ಮಾಡುತ್ತಿದ್ದರು. ವನದುರ್ಗಾ ದೇವಸ್ಥಾನದಲ್ಲಿ ಸಮಾರಂಭ ನಡೆಸಿ ಸೌಲಭ್ಯಗಳನ್ನು ನೀಡುತ್ತಿದ್ದರು ಎಂದು ಹಳ್ಳಿಗರು ಈಗಲೂ ನೆನಪಿಸಿಕೊಳ್ಳುತ್ತಾರೆ. ಬಳಿಕ ಈ ಊರಿಗೆ ಕರೆಂಟ್ ಬಂದರೂ, ತುಕ್ಕುಹಿಡಿದ ಸೌರದೀಪಗಳು ಈಗಲೂ ಸ್ಥಿರವಾಗಿ ನಿಂತಿವೆ.

ಹಳ್ಳಿಯ ಇದೇ ಶಾಲೆಯ ಮುಂದೆ ನಕ್ಸಲ್ ನಿಗ್ರಹಪಡೆಯ ವ್ಯಾನ್ ಯಾವಾಗಲೂ ನಿಂತುಕೊಳ್ಳುತ್ತಿತ್ತು. ಆಗಾಗ ಮೀಟಿಂಗ್ ಮಾಡುತ್ತಿದ್ದ ನಕ್ಸಲರು ಒಮ್ಮೆ ಶಾಲೆಯ ಗೋಡೆಗೆ ಸರಕಾರದ ವಿರುದ್ಧದ ಭಿತ್ತಿಪತ್ರವನ್ನೂ ಅಂಟಿಸಿದ್ದರು. ಪೊಲೀಸರು ಶಾಲೆಗೆ ಬಂದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು. ಈಗ ನಕ್ಸಲರ ಸುಳಿವಿಲ್ಲದಿದ್ದರೂ ಈಗಲೂ ಕೂಂಬಿಂಗ್ ಪಡೆ ಇದೆ. ಅದು ಅಪರೂಪಕ್ಕೊಮ್ಮೆ ಮಲ್ಲಂದೂರಿಗೆ ಬಂದು ಕಿಗ್ಗದವರೆಗೆ ನಡೆದುಹೋಗುತ್ತದೆ. ಇದೇ ದಾರಿಯಲ್ಲಿ ಈಗ ಚಾರಣಿಗರು ಆಗಾಗ ಟ್ರೆಕಿಂಗ್ ಮಾಡುತ್ತಾರೆ, ಅಷ್ಟೇ ಬದಲಾವಣೆ. ಕಾಡಿನ ಉತ್ಪನ್ನಗಳು ಸಿಗದೇ ಇದ್ದಾಗ ಬಹುತೇಕ ಯುವಕರು ಆಗುಂಬೆ, ಬೆಂಗಳೂರಿನತ್ತ ಮುಖ ಮಾಡಿದರು. ಪ್ರವಾಸಿಗರಿಗೆಂದು ಬಾಡಿಗೆ ಕಾರು ಇನ್ನಿತರ ವ್ಯವಸ್ಥೆಗಾಗಿ ಅಲ್ಲೇ ಮನೆ ಮಾಡಿಕೊಂಡು ಇರತೊಡಗಿದರು. ಅಲ್ಲಿನ ಶಾಲೆಗೇ ತಮ್ಮ ಮಕ್ಕಳನ್ನು ಕಳಿಸತೊಡಗಿದರು. ಹೀಗಾಗಿ ಮಲ್ಲಂದೂರು ಶಾಲೆಗೆ ಮಕ್ಕಳ ಸಂಖ್ಯೆ ನಾಲ್ಕೇ ವರ್ಷಗಳಲ್ಲಿ ನಾಲ್ಕಕ್ಕೆ ಇಳಿಯಿತು! ರಾಜ್ಯದಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳಿಗೆ ಈ ಕಥನ ಎಷ್ಟು ಜೀವತುಂಬಬಲ್ಲದೋ ಗೊತ್ತಿಲ್ಲ. ಆದರೆ ಕನ್ನಡ ಮನಸ್ಸುಗಳಿಗೆ ಜಾಗೃತಿಯನ್ನಂತೂ ನೀಡಬಹುದು. ಆದರೆ ಕನ್ನಡ ಶಾಲೆಗಳ ವಿಚಾರದಲ್ಲಿ ಹಲವು ವರ್ಷಗಳಿಂದ ಕುಂಭಕರ್ಣ ನಿದ್ರೆಯಲ್ಲಿರುವ ಆಳುಗರನ್ನು ಇದು ಎಚ್ಚರಿಸುವ ಸಾಧ್ಯತೆ ಬಹುತೇಕ ಶೂನ್ಯ!
(ಲೇಖಕರು ಪತಕರ್ತರು)