Thursday, 19th September 2024

ನಿಜಕ್ಕೂ ಇದು ಸುವರ್ಣಕಾಲ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರತಿಪಕ್ಷಗಳು, ಮಾಧ್ಯಮಗಳು ಸೇರಿದಂತೆ ರಾಜ್ಯದ ಬಹುತೇಕ ಜನರು ‘ಇವೆಲ್ಲ ಜಾರಿಯಾಗುವುದು ಅಸಾಧ್ಯ’ ಎಂದೇ ಮೂದಲಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ೧೦೦ ದಿನಗಳಲ್ಲೇ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಮಹಿಳೆಯರು ಉಚಿತವಾಗಿ ಬಸ್
ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿ ಮನೆಗೂ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ ೧೦ ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಬುಧವಾರ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದು, ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ೨೦೦೦ ರು. ಪಾವತಿಯಾಗಲಿದೆ. ಶೀಘ್ರದ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವೂ ಅನುಷ್ಠಾನಕ್ಕೆ ಬರಲಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗೆ ತಕ್ಕಂತೆ ಕಾಂಗ್ರೆಸ್ ನಡೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

ಪೆಟ್ರೋಲ, ಡೀಸೆಲ, ಗ್ಯಾಸ್‌ಗಳ ಬೆಲೆ ಏರಿಕೆ, ತರಕಾರಿ-ದಿನಸಿ ತುಟ್ಟಿ, ಹಣದುಬ್ಬರ ಮಧ್ಯೆ ಈ ಜನಪರ ಯೋಜನೆಗಳು ಜನಸಾಮಾನ್ಯರ, ಮಹಿಳೆಯರ, ಲಿಂಗತ್ವ ಅಲ್ಪಸಂಖ್ಯಾತರ, ಯವಕ-ಯುವತಿಯರ ಬದುಕಿ ನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ದುರ್ಬಲರನ್ನು ಮೇಲೆತ್ತುವ ಮತ್ತು ಮಧ್ಯಮ ವರ್ಗಕ್ಕೆ ಬೂ ನೀಡುವ ಈ ಯೋಜನೆಗಳಿಂದ ಒಂದು ಅಂದಾಜಿನ ಪ್ರಕಾರ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು ೧ ಲಕ್ಷ ರು. ವರೆಗೆ ಲಾಭ ಸಿಗಲಿದೆ. ಇಡೀ ದೇಶದಲ್ಲಿಯೇ ಗ್ಯಾರಂಟಿ ಯೋಜನೆಗಳು ಸದ್ದು ಮಾಡುತ್ತಿದ್ದು, ಕರ್ನಾಟಕ ಮಾದರಿ ಆಡಳಿತಕ್ಕೆ ಮುನ್ನುಡಿ ಬರೆದಂತಾಗಿದೆ. ಗ್ಯಾರಂಟಿಗಳಿಗೆ ಹಣ ಖರ್ಚು ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಕಳೆದ ನೂರು ದಿನಗಳಲ್ಲಿ ನೀರಾವರಿ, ಲೋಕೋಪಯೋಗಿ, ವಸತಿ, ಗ್ರಾಮಿಣಾಭಿವೃದ್ಧಿಗೆ ಅನುದಾನ ಮೀಸಲಿಟ್ಟೇ ೫ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ ಎಂಬುದು ಗಮನಾರ್ಹ. ಆ ಮೂಲಕ ಬಡವರ , ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ರೈತರ, ಕಾರ್ಮಿಕರ, ಯುವಕರ ಪರವಾದ ಸರಕಾರ ಎಂಬುದನ್ನು ಸಾಬೀತು ಮಾಡಿದೆ. ಐದು ವರ್ಷವೂ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದರೆ ನಿಜಕ್ಕೂ ಸಿದ್ದರಾಮಯ್ಯ ಸರಕಾರದ ಅವಧಿಯು ಸುವರ್ಣಕಾಲವೇಂದೇ ಕರೆಯಬೇಕಾಗುತ್ತದೆ.