Saturday, 23rd November 2024

ಎಲ್ಲ ಬಗೆಯ ಚಿಂತನೆಗಳು ನಡೆಯಲಿ

ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಗೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ, ಗೊಂದಲಕ್ಕೆ ಕಾರಣರಾಗುವವರ ವಿರುದ್ಧ ಶಿಸುಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಎಚ್ಚರಿಸಿದ್ದಾರೆ. ವಿಶ್ವವಿದ್ಯಾಲಯ ಅಂದರೆ ಅಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ತರಗತಿ ಕೊಠಡಿಗಳು, ಗ್ರಂಥಾಲಯ, ಪಠ್ಯಕ್ರಮ ಮತ್ತು ಪಾಠ ಪ್ರವಚನಗಳು ಮಾತ್ರವಲ್ಲ. ಸಾಮಾಜಿಕತೆ, ರಾಜಕಾರಣ, ಆಡಳಿತ ವೈಖರಿ, ಜಾತೀಯತೆ, ಜಾತ್ಯತೀತತೆ ಸೇರಿದಂತೆ ಆಧುನಿಕ ಕಾಲದ ಹತ್ತು ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸುವ ಸ್ಥಳವೂ ಹೌದು. ಯುವಕರಲ್ಲಿ ಎಲ್ಲ ನಂಬಿಕೆಗಳು ವಿಮರ್ಶೆಗೆ ಒಳಗಾಗಬೇಕು, ಎಲ್ಲ ಸಿದ್ಧಾಂತಗಳ ಹಿನ್ನೆಲೆಯುಳ್ಳ ಚಿಂತಕರನ್ನು ವಿಶ್ವವಿದ್ಯಾಲಯವು ಒಳಗೊಳ್ಳುವ ಮೂಲಕ ಬೌದ್ಧಿಕ ವೈವಿಧ್ಯ ಮತ್ತು ತೀವ್ರವಾದ ಭಿನ್ನಾಭಿಪ್ರಾಯಗಳ ಜತೆಯೂ ಸಂವಾದಿಸುವ ಕೌಶಲವನ್ನು ವಿದ್ಯಾರ್ಥಿಗಳು ಕಲಿಯಬೇಕು. ನಮ್ಮ ಕಾಲಕ್ಕೆ ಸಲ್ಲದ ವಿಚಾರಗಳನ್ನು ತಿರಸ್ಕರಿಸಲು ಇರುವ ದಾರಿಗಳ ಕುರಿತು ಮುಕ್ತವಾಗಿ ಚರ್ಚಿಸಿ, ಅವುಗಳಲ್ಲಿನ ಮಿತಿಗಳನ್ನು ವಿದ್ಯಾರ್ಥಿ ಸಮುದಾಯ ಅರಿಯಬೇಕು. ವಾಸ್ತವವಾಗಿ, ತನ್ನ ನಂಬಿಕೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಕೇಳಿಸಿಕೊಂಡು ಚರ್ಚಿಸುವ ಕೌಶಲವನ್ನು ಕಲಿಸುವುದೇ ಉನ್ನತ ಶಿಕ್ಷಣದ ಮುಖ್ಯ ಧ್ಯೇಯ. ಆದರೆ ಉನ್ನತ ಶಿಕ್ಷಣ ಸಚಿವರ ಆದೇಶವು ಇದಕ್ಕೆ ವಿರುದ್ಧವಾಗಿದೆ. ವಿವಿ ಕ್ಯಾಂಪಸ್
ಗಳಲ್ಲಿ ಯಾವ ವಿಷಯಗಳ ಕುರಿತು ಚರ್ಚೆಯಾಗಬೇಕು, ಯಾರನ್ನುಆಹ್ವಾನಿಸಬೇಕು, ಯಾರನ್ನು ಆಹ್ವಾನಿಸಬಾರದು ಎಂಬುದನ್ನು ಅಧ್ಯಾಪಕರು, ವಿದ್ಯಾರ್ಥಿಗಳು ನಿರ್ಧರಿಸುವ ಬದಲು ಸರಕಾರವೇ ನಿರ್ಧರಿಸುತ್ತಿದೆ.
ನಿಜಕ್ಕೂ ಇದೊಂದು ಅಪಾಯಕಾರಿಯಾದ ಬೆಳವಣಿಗೆ. ವಿಶ್ವವಿದ್ಯಾಲಯಗಳಲ್ಲಿ ಇಂದು ಮುಕ್ತವಾದ ಚರ್ಚೆ, ಸಂವಾದಗಳು ಕೊರತೆಯಾಗಿದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಏಕಮುಖ ಸಂವಹನದ ಅಬ್ಬರದ ಭಾಷಣಗಳನ್ನು ನೋಡುವಂತಾಗಿದೆ. ಅವುಗಳು ಯುವಕರ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನೂ ನೋಡುವಂತಾಗಿದೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವರು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಬೇಕು. ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಪ್ರಯತ್ನದಲ್ಲಿರುವ ರಾಜ್ಯ ಸರಕಾರವು ತನ್ನ ವ್ಯಾಪ್ತಿಯಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ವಾತಾವರಣ ಹೆಚ್ಚಿಸುವ ಕಡೆಗೆ ಗಮನ ಕೊಡಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲ ಮಾದರಿಯ ಚಿಂತನೆಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಡಬೇಕು.