Thursday, 19th September 2024

ಸಂಕಷ್ಟದಲ್ಲೂ ಕರುನಾಡಿನ ಸೌಹಾರ್ದ

‘ಹನುಮಂತರಾಯನೇ ಹಗ್ಗ ತಿನ್ನುತ್ತಿರುವಾಗ ಪೂಜಾರಿ ಶಾವಿಗೆ ಬೇಡಿದನಂತೆ’ ಎಂಬುದೊಂದು ಮಾತು ನಮ್ಮ ಜನಬಳಕೆಯಲ್ಲಿದೆ. ಕರ್ನಾಟಕ ಕಾಲಕಾಲಕ್ಕೆ ಎದುರಿಸುವ ‘ಕಾವೇರಿ ಸಂಕಷ್ಟ’ವನ್ನು ಕಂಡಾಗೆಲ್ಲ ಈ ಮಾತು ಅಪ್ರಯತ್ನವಾಗಿ ನೆನಪಾಗುತ್ತದೆ. ನಮ್ಮ ಮಣ್ಣಿನ ಮಕ್ಕಳ ಕೃಷಿಕಾರ್ಯಕ್ಕೇ ನೀರಿಲ್ಲ. ಆದರೂ, ಅವರ ಜಮೀನಿನ ಒಡಲು ಒಣಗಿಸಿಯಾದರೂ ತಮಿಳುನಾಡಿಗೆ ನೀರುಣಿಸಬೇಕಾಗುವ ಅನಿವಾರ್ಯದ ಬಲಿಪಶುವಾಗುತ್ತಿದೆ ಕರ್ನಾಟಕ. ಸರಿಯಾಗಿ ಮಳೆಯಾಗದೆ ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಕಂಡಿದ್ದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದನ್ವಯ ದಿನವಹಿ ೫೦೦೦ ಕ್ಯುಸೆಕ್ ಪ್ರಮಾಣದಂತೆ ೧೫ ದಿನಗಳ ಕಾಲ ನೆರೆರಾಜ್ಯಕ್ಕೆ ನೀರು ಹರಿಸಬೇಕಾಗಿ ಬಂತು. ಮಳೆರಾಯನ ಮುನಿಸಿನಿಂದಾಗಿ ಕುಡಿಯುವ ನೀರಿಗೂ ತತ್ವಾರ ಒದಗಿರುವ, ಕೃಷಿಕರ ಬೆಳೆಗಳು ಮುರುಟಿ ನಿಂತಿರುವ ಮತ್ತು ಸದ್ಯೋಭವಿಷ್ಯದಲ್ಲಿ ಮಳೆಯಾಗುವ ಲಕ್ಷಣವೂ ಇಲ್ಲದಂಥ ಭೀಕರತೆಗೆ ಸಾಕ್ಷಿಯಾಗಿದೆ ಕರ್ನಾಟಕ. ಈ ಕಹಿ ವಾಸ್ತವವನ್ನು ಪ್ರಾಧಿಕಾರದ ಅಧಿಕಾರಿಗಳು ಒಮ್ಮೆ ಕಣ್ತುಂಬಿಕೊಂಡರೆ ದುರ್ಭರ ಪರಿಸ್ಥಿತಿಯಲ್ಲೂ ಕರುನಾಡು ಮೆರೆಯುತ್ತಿರುವ ಸೌಹಾರ್ದದ ಅರಿವಾದೀತು. ನದಿನೀರು ಯಾವುದೇ ಒಂದು ರಾಜ್ಯದ ಸ್ವಂತ ಆಸ್ತಿಯಲ್ಲ ನಿಜ, ಸಹಜ ಹಕ್ಕುದಾರರೊಂದಿಗೆ ಅದನ್ನು ಹಂಚಿಕೊಂಡು ಬಾಳಬೇಕೆಂಬುದೂ ಅಷ್ಟೇ ನಿಜ. ಹಾಗಂತ, ‘ನಿಮ್ಮ ಬಾಯಲ್ಲಿಟ್ಟುಕೊಳ್ಳಬೇಕಾದ ತುತ್ತನ್ನು ಇನ್ನೊಬ್ಬರಿಗೆ ಕೊಡಲೇಬೇಕು, ಅದರಿಂದಾಗಿ ನೀವು ದಣಿದರೂ ಸೊರಗಿದರೂ ಬಾಧಕವಿಲ್ಲ’ ಎನ್ನುವುದು ಅದ್ಯಾವ ಖಾಜಿನ್ಯಾಯ? ಹಾಗೆ ನೋಡಿದರೆ, ಕಾಲಾನುಕಾಲಕ್ಕೆ ಇಂಥ -ರ್ಮಾನುಗಳು ಹೊಮ್ಮಿದಾಗೆಲ್ಲ ಕರ್ನಾಟಕ ಮರುಮಾತಾಡದೆ, ತನ್ನವರ ಹಿತದೃಷ್ಟಿಯನ್ನು ಬಲಿಕೊಟ್ಟಾದರೂ ನೀರು ಹರಿಸಿ ಬದ್ಧತೆ ಮೆರೆದಿದ್ದಿದೆ. ಆದರೆ ಇಂಥ ಒಳ್ಳೆಯತನವೇ ರಾಜ್ಯಕ್ಕೆ, ರಾಜ್ಯದ ಕೃಷಿಕರಿಗೆ ಮುಳುವಾಗಬಾರದಲ್ಲವೇ? ಈ ಸಮಸ್ಯೆಗೆ ಮೇಕೆದಾಟು ಅಣೆಕಟ್ಟು ಯೋಜನೆಯೊಂದೇ ಪರಿಹಾರ; ಅದಿದ್ದರೆ ಸಂಕಷ್ಟದ ವೇಳೆ ತಮಿಳುನಾಡಿಗೆ ನೀರುಹರಿಸಬಹುದು ಎಂದಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್. ಆದರೆ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೂ ತಮಿಳುನಾಡು ವರಾತ ತೆಗೆಯುತ್ತಿದೆಯಲ್ಲಾ, ಇದಕ್ಕೇನನ್ನುವುದು? ‘ಹಾವೂ ಸಾಯಬಾರರು, ಕೋಲೂ ಮುರಿಯಬಾರದು’ ಎಂದರೆ ಹೊಂದಾಣಿಕೆಯ ಬದುಕು ಸಾಧ್ಯವೇ, ಸಾಧುವೇ? ನೆರೆರಾಜ್ಯಕ್ಕೆ ಇದನ್ನು ಅರ್ಥಮಾಡಿಸುವುದೆಂತು?