Saturday, 23rd November 2024

ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಮೂಲಭೂತ ಹಕ್ಕುಗಳಿಗೆ ಚ್ಯುತಿತರುವಂಥ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ತುರ್ತುಸ್ಥಿತಿಯ ವೇಳೆಯಲ್ಲಿದ್ದಂತೆ ಕರ್ನಾಟಕದಲ್ಲೂ ಮಾಧ್ಯಮಗಳ ವಿರುದ್ಧ ಗದಾಪ್ರಹಾರ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ನಿಜವೆಂಬಂತೆ ಬಿಂಬಿತವಾಗಿ ಜನರು ನಂಬುತ್ತಾರೆಂಬ ವಾದವಿದೆ. ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳನ್ನು ಹೇಳಿದರೆ ಮತ್ತಷ್ಟು ಗಟ್ಟಿಯಾಗಿ, ಜನರ ತಲೆಯಲ್ಲಿ ಸುಳ್ಳೇ ಸತ್ಯವಾಗಿ ಕೂರುತ್ತದೆ. ಬ್ರಿಟಿಷರು ಸುದೀರ್ಘ ಕಾಲ ಭಾರತವನ್ನಾಳಿದ ಸಮಯದಲ್ಲಿ ಬಳಸಿದ್ದ ಬಹುದೊಡ್ಡ ಅಸವಿದು. ದೇಶದ ಮೂಲೆಮೂಲೆಗಳಲ್ಲಿ ಭಾರತೀಯರ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ನೂರಾರು ಬಾರಿ ಹೇಳಿ ಜನರನ್ನು ನಂಬಿಸುತ್ತಿದ್ದ ಅವರು, ೧೯೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆಯನ್ನು ಮನಗಂಡು, ಹೋರಾಟಗಾರರನ್ನು ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸಲೆಂದು ತಮ್ಮ ವಿರುದ್ಧದ ಆ ಸಂಗ್ರಾಮವನ್ನು ‘ಸಿಪಾಯಿದಂಗೆ’ ಎಂದು ವ್ಯಾಖ್ಯಾನಿಸಿ ಜನರ ಮುಂದಿಟ್ಟರು. ಲಂಡನ್ನಿನ ರಂಗ ಭೂಮಿಗಳಲ್ಲಿ ನಡೆಯುತ್ತಿದ್ದ ನಾಟಕಗಳಲ್ಲೂ ಇದನ್ನು ದಂಗೆಯೆಂದೇ ಬಿಂಬಿಸುತ್ತಿದ್ದರು. ಹೀಗಾಗಿ, ‘ಈಸ್ಟ್ ಇಂಡಿಯಾ ಕಂಪನಿಯು ಭಾರತೀಯರನ್ನು ಚೆನ್ನಾಗಿ ನೋಡಿಕೊಂಡರೂ, ಅಲ್ಲಿನ ಕೆಲವರು ಕಂಪನಿಯ ವಿರುದ್ಧ ದಂಗೆಯೆದ್ದಿದ್ದಾರೆ’ ಎಂದು ಬ್ರಿಟನ್ನಿನ ಜನರು ನಂಬಿದ್ದರು. ಸುಳ್ಳನ್ನೇ ನಿಜವೆಂದು ಬಿಂಬಿಸಿ ಜನರನ್ನು ಮರುಳು ಮಾಡುವ ಅಭ್ಯಾಸ ಪಾಶ್ಚಾತ್ಯರಿಗೆ ಹುಟ್ಟಿನಿಂದಲೇ ಬಂದಿರುವ ಬಳುವಳಿ. ಅಮೆರಿಕನ್ನರು ೧೯ನೇ ಶತಮಾನದಲ್ಲಿ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಹಬ್ಬಿಸಿದ್ದ ಸುಳ್ಳುಗಳಿಂದಾಗಿ ಇಂದಿಗೂ ಅಲ್ಲಿನ ದೇಶಗಳನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲಾಗುತ್ತಿಲ್ಲ.

ಸುಮಾರು ೧೦೦ ವರ್ಷ ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸಿದ ಅಮೆರಿಕನ್ನರಿಗೆ, ಆ ಒಂದಿಡೀ ಪ್ರದೇಶವನ್ನೇ ‘ಬನಾನಾ ರಿಪಬ್ಲಿಕ್’ ಎಂದು ಸಂಬೋಧಿಸುವಂತೆ ಮಾಡಿದ ಅಪಕೀರ್ತಿ ಸಲ್ಲಬೇಕು. ಗ್ವಾಟೆಮಾಲಾದಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಬಾಳೆಹಣ್ಣಿನ ಬೆಳೆಯನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳಲು ಅಮೆರಿಕನ್ನರು ಹೀಗೆ ಹಲವು ಸುಳ್ಳುಸುದ್ದಿ ಹಬ್ಬಿಸಿದರು. ಅರುಣ್ ಶೌರಿ ತಮ್ಮ ಪುಸ್ತಕದಲ್ಲಿ ಮೌಖಿಕ ಭಯೋತ್ಪಾದನೆಯ ಬಗ್ಗೆ ವಿವರಿಸುತ್ತಾರೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಬ್ರಿಟಿಷರಂತೆ ಸುಳ್ಳನ್ನು ನಿಜ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಂಥ ಎಡಚರರು, ತಮ್ಮ ಸುಳ್ಳನ್ನು ನಿಜವೆಂದು ಬಿಂಬಿಸಲು ಮಾತಿನ ನಡುವೆ ‘ಸಂವಿಧಾನ’, ‘ವಿಶ್ವಮಾನವ’, ‘ಕೋಮುವಾದ’, ‘ಜಾತ್ಯತೀತ’, ‘ಆಜಾದಿ’ ಇತ್ಯಾದಿ ಪದಗಳನ್ನು ಬಳಸುತ್ತಾರೆ. ಎಡಚರರ ಪಾಠದ ಪ್ರೀತಿಪಾತ್ರ ವಿದ್ಯಾರ್ಥಿಗಳಾದ ಕಾಂಗ್ರೆಸ್ಸಿಗರೂ ಸುಳ್ಳನ್ನೇ ನಿಜಮಾಡುವ ಬ್ರಿಟಿಷರ ಕಾಯಕವನ್ನು ಮಾಡುತ್ತಲೇ ಬಂದಿದ್ದಾರೆ. ಮಾತುಮಾತಿಗೂ ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ಮಾತಾಡುವವರು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ಕೆಲಸಗಳನ್ನೇ ಮಾಡುತ್ತಾ ಬಂದಿದ್ದಾರೆ. ‘ಟ್ರೋಲ್ ಸಚಿವ’ ಎಂದೇ ಖ್ಯಾತರಾಗಿರುವವರೊಬ್ಬರು, ಸರಕಾರದ ವಿರುದ್ಧ ಬಹಿರಂಗವಾಗಿ ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಧಮ್ಕಿ ಹಾಕುತ್ತಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಸರಕಾರದ ಗ್ಯಾರಂಟಿ ಯೋಜನೆಗಳಿಂದ ಉಂಟಾಗಬಹುದಾದ ಆರ್ಥಿಕ ನಷ್ಟದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಶಾಲಾ ಶಿಕ್ಷಕರೊಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸಲಾಯಿತು. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಒಕ್ಕೂಟದ ಸಭೆಯ ಸಂದರ್ಭದಲ್ಲಿ, ನಿತೀಶ್ ಕುಮಾರ್ ಸರಕಾರದ ಅವಧಿಯಲ್ಲಿ ಬಿಹಾರದಲ್ಲಿ ನಡೆದಿದ್ದ ಕಳಪೆ ಸೇತುವೆ ಕಾಮಗಾರಿಯ ಪೋಸ್ಟರ್ ಹಾಕಿದ್ದರೆಂದು ಕೆಲವರನ್ನು ಬಂಧಿಸಲಾಗಿತ್ತು.

ಉಡುಪಿಯ ಶಾಲೆಯ ಶೌಚಾಲಯದಲ್ಲಿ ನಡೆದಿದ್ದ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಚಿತ್ರೀಕರಣದ ಪ್ರಕರಣವನ್ನು ಬೆಳಕಿಗೆ ತಂದ ರಶ್ಮಿ ಆಳ್ವ ಎಂಬಾಕೆಯ ಮನೆಗೆ ಪೊಲೀಸರನ್ನು ರಾತ್ರೋರಾತ್ರಿ ಕಳುಹಿಸಿ ವಿಚಾರಣೆ ನಡೆಸಲಾಗಿತ್ತು. ಸುಳ್ಳುಗಾರ ಮೊಹಮ್ಮದ್ ಜುಬೈರ್ ಉಡುಪಿ ಪ್ರಕರಣವನ್ನು ಸುಳ್ಳೆಂದು ಹೇಳಿ ಟ್ವೀಟ್ ಮಾಡಿ ದಾರಿತಪ್ಪಿಸುವ ಕೆಲಸ ಮಾಡಿದ್ದ. ಈತನ ಸಲಹೆಯ ಮೇರೆಗೆ, ಪ್ರಕರಣವನ್ನು ಬೆಳಕಿಗೆ ತಂದ ಹೆಣ್ಣುಮಗಳ ಬಾಯಿ ಮುಚ್ಚಿಸುವ ಹುನ್ನಾರ ನಡೆದಿತ್ತು. ಅಪ್ರಾಪ್ತ ಬಾಲಕಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ ಈತನ ವಿರುದ್ಧ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಉಡುಪಿ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದ ಬಿಜೆಪಿ ಕಾರ್ಯಕರ್ತೆಯೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನರೇಂದ್ರ ಮೋದಿಯವರನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುವವರ ವಿರುದ್ಧ ಒಂದೇ ಒಂದು ಕ್ರಮ ಕೈಗೊಳ್ಳದೆ, ತಮ್ಮ ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುವವರ ವಿರುದ್ಧ ಮನಬಂದಂತೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.

ಹೋರಾಟವನ್ನೇ ಮಾಡದೆ ಸುಳ್ಳುಗಳ ಮೂಲಕವೇ ಅಧಿಕಾರಕ್ಕೆ ಬಂದವರು ಅದನ್ನೇ ಶಾಶ್ವತ ಎಂದುಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯವರ ‘ಯುವ ಬ್ರಿಗೇಡ್’ ತಂಡದವರು ನರೇಂದ್ರ ಮೋದಿಯವರ ಸಾಧನೆಗಳನ್ನು ಜನರಿಗೆ ತಲುಪಿಸುತ್ತಾರೆಂಬ ಭಯ ಕೆಲ ಸಚಿವರಿಗೆ ಕಾಡತೊಡಗಿದೆ. ಸೈದ್ಧಾಂತಿಕವಾಗಿ ಎದುರಿಸಲು ಧೈರ್ಯವಿಲ್ಲದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹೆದರಿಸುವ ತಂತ್ರಕ್ಕೆ ಕೈಹಾಕಿದೆ. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿ ರಾವಣ ಲಂಕೆಯನ್ನೇ ಕಳೆದುಕೊಂಡ; ಕರ್ನಾಟಕದಲ್ಲೂ ಇಂಥದೇ ಕೆಲಸಕ್ಕೆ ಕೈಹಾಕಿದರೆ ಇಡೀ ಕಾಂಗ್ರೆಸ್ ಪಕ್ಷವೇ ನಾಮಾವಶೇಷವಾಗುವುದರಲ್ಲಿ ಅನುಮಾನವಿಲ್ಲ.
ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಮೂಲಭೂತ ಹಕ್ಕುಗಳಿಗೆ ಚ್ಯುತಿತರುವಂಥ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ವಿಷಯಾಧಾರಿತ ಚರ್ಚೆಗೆ ಬಂದು ಮಾತನಾಡುವ ಧೈರ್ಯ ಇವರಿಗಿಲ್ಲ. ತುರ್ತು ಪರಿಸ್ಥಿತಿಯ ವೇಳೆ ಮಾಧ್ಯಮದವರ ಮೇಲೆ ಇಂದಿರಾ ಗಾಂಧಿಯವರು ನಿರ್ಬಂಧ ಹೇರಿದ್ದ ಮಾದರಿಯಲ್ಲೇ, ಕರ್ನಾಟಕದಲ್ಲೂ ಮಾಧ್ಯಮಗಳ ವಿರುದ್ಧ ಗದಾಪ್ರಹಾರ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸುಳ್ಳೆಂದು ಬಿಂಬಿಸಲು ಹೊರಟಿರುವ ಕಾಂಗ್ರೆಸ್ ಪಕ್ಷ, ಅವರ ಪತ್ರದ ಬಗೆಗಿನ ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳಿಗೆ ನೋಟಿಸ್ ನೀಡಿರುವ ವಿಷಯ ಚರ್ಚೆಗೆ ಬರುತ್ತಿದೆ. ಕರ್ನಾಟಕ ಕಾಂಗ್ರೆಸ್ ಸ್ಥಾಪಿಸಲು ಹೊರಟಿರುವ ‘ಸತ್ಯಶೋಧನಾ ತಂಡ’ದ ಬಗ್ಗೆ ‘ಭಾರತೀಯ ಎಡಿಟರ‍್ಸ್ ಗಿಲ್ಡ್’ ಕಳವಳ ವ್ಯಕ್ತಪಡಿಸಿದೆ. ಸತ್ಯಶೋಧನೆಯ ಹೆಸರಿನಲ್ಲಿ
ಮಾಧ್ಯಮಗಳ ಪತ್ರಿಕಾ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ.

ಆದರೆ, ಕಾಂಗ್ರೆಸ್ಸಿಗರು ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂಬ ದೊಡ್ಡ ಸುಳ್ಳಿನ ಸತ್ಯಶೋಧನೆಯಾಗಬೇಕಿದೆ. ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆಯೆಂಬ ಸುಳ್ಳುಹೇಳುವ ಕಾಂಗ್ರೆಸ್ಸಿನ ಸತ್ಯಶೋಧನೆಯಾಗಬೇಕಿದೆ. ಮಾತ್ರವಲ್ಲ, ಹಿಂದಿ ಭಾಷೆಯನ್ನು ನಮ್ಮ ಶಾಲಾ ದಿನಗಳಲ್ಲಿ ಪಠ್ಯಪುಸ್ತಕಗಳ ಮೂಲಕ ಕಲಿಸಿ, ಇಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ‘ಹಿಂದಿ ಹೇರಿಕೆ’ ಎಂದು ಸುಳ್ಳು ಹೇಳುವ ಕಾಂಗ್ರೆಸ್ಸಿನ ಸತ್ಯಶೋಧನೆಯಾಗಬೇಕಿದೆ. ನೆಹರು ಅವಧಿಯಲ್ಲಿ ಚೀನಾ ದೇಶಕ್ಕೆ ೨೬,೦೦೦ ಚ.ಕಿ.ಮೀ. ಭೂಭಾಗವನ್ನು ಬಿಟ್ಟುಕೊಟ್ಟ ಕಾಂಗ್ರೆಸ್ ಪಕ್ಷ, ಲಡಾಖ್ ವಿಷಯದಲ್ಲಿ ಸುಳ್ಳು ಹೇಳುವ ರಾಹುಲ್ ಗಾಂಧಿಯವರನ್ನು ಸತ್ಯಶೋಧನೆಗೆ ಒಳಪಡಿಸಬೇಕಿದೆ. ಡಿಜಿಟಲ್ ವ್ಯವಹಾರವು ಭಾರತದಲ್ಲಿ ಕಷ್ಟಸಾಧ್ಯವೆಂದು ಸಂಸತ್ತಿನಲ್ಲಿ ಪುಂಖಾನುಪುಂಖವಾಗಿ ಸುಳ್ಳು ಹೇಳಿದ್ದ ಚಿದಂಬರಂರನ್ನು, ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರು. ಹಾಕುವುದಾಗಿ ಹೇಳಿದ್ದಾರೆಂದು ಸುಳ್ಳು ಹೇಳಿದ್ದ ಕಾಂಗ್ರೆಸ್ ಅನ್ನು ಸತ್ಯಶೋಧನೆಗೆ ಒಳಪಡಿಸಬೇಕಿದೆ. ತಮ್ಮ ತಟ್ಟೆಯಲ್ಲಿ ದೊಡ್ಡ ಹೆಗ್ಗಣವೇ ಸತ್ತುಬಿದ್ದಿರುವುದನ್ನು ಮರೆತು, ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕುವಂತಾಗಿದೆ.  ಕರ್ನಾಟಕ ಕಾಂಗ್ರೆಸ್ಸಿನ ಪರಿಸ್ಥಿತಿ. ಬಾಬಾ ಸಾಹೇಬರು ರಚಿಸಿದ್ದ ಸಂವಿಧಾನವನ್ನು ಅತಿಹೆಚ್ಚು ತಿದ್ದುಪಡಿಗೊಳಿಸಿದ ಅಪಖ್ಯಾತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ತಾನು ಅಧಿಕಾರದಲ್ಲಿದ್ದಾಗ ಒಂದು ಕುಟುಂಬದ ಸ್ವಾರ್ಥಕ್ಕೆ ಜೋತುಬಿದ್ದು ಹತ್ತಾರು ರಾಜ್ಯ ಸರಕಾರಗಳನ್ನು ಉರುಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು.

ನ್ಯಾಯಾಲಯ ನೀಡಿದ್ದ ಹಲವು ತೀರ್ಪುಗಳ ವಿರುದ್ಧ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಸರ್ವಾಧಿಕಾರಿ ಧೋರಣೆ ಅನುಸರಿಸಿರುವ ಕಾಂಗ್ರೆಸ್ ಪಕ್ಷ, ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕಸಿಯುವ ಯತ್ನಕ್ಕೆ ಕೈಹಾಕಿದೆ. ಹಿಂದೂಪರ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ರೌಡಿ ಶೀಟರ್ ಪಟ್ಟಕಟ್ಟುವ ಕೆಲಸವೂ ನಡೆಯುತ್ತಿದೆ. ಕೆ.ಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಗಲಭೆಕೋರರ ಬಿಡುಗಡೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರೊಬ್ಬರು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಸಾಮಾಜಿಕ ಜಾಲತಾಣದ ಒಂದು ಪೋಸ್ಟಿನ ವಿಚಾರಕ್ಕಾಗಿ ನಡೆದ ಗಲಭೆಯಲ್ಲಿ ಗಲಭೆಕೋರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು, ಕಾಂಗ್ರೆಸ್‌ನ ದಲಿತ ಶಾಸಕರೊಬ್ಬರ ಮನೆಗೆ ಬೆಂಕಿ ಹಚ್ಚಿದ್ದರು. ಈ ಗಲಭೆಯ ಹಿಂದೆ ನಿಷೇಧಿತ ಪಿಎಫ್ಐ ಸಂಘಟನೆಯ ಕೈವಾಡವಿದೆಯಂಬ ಅಂಶ ತಿಳಿದಿದ್ದರೂ, ಗಲಭೆಕೋರರಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ಶಿಫಾರಸು, ಆದರೆ ಸರಕಾರದ ವೈಫಲ್ಯಗಳ ವಿರುದ್ಧ ದನಿಯೆತ್ತುವವರನ್ನು ಬಂಧಿಸಲು ಶಿಫಾರಸು! ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆ ತೂರಿರುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೇ?