Saturday, 23rd November 2024

ಒಂದೇ ಚುನಾವಣೆ ಚಿಂತನೆ ಸ್ವಾಗತಾರ್ಹ

‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಎಂಟು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ. ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ. ಇದರಿಂದ ಅತ್ತ ಕೇಂದ್ರದಲ್ಲಿ ಆಡಳಿತದಲ್ಲಿರುವವರೂ ತಮ್ಮ ಗಮನವನ್ನು ರಾಜ್ಯಗಳ ಚುನಾವಣೆ ಕಡೆ ನೆಟ್ಟಿರುತ್ತಾರೆ. ಪದೇ ಪದೆ ಚುನಾವಣೆಗಳಿಂದ ಸರಕಾರಕ್ಕೂ ಕೋಟ್ಯಂತರ ರು. ಖರ್ಚಾಗುತ್ತದೆ. ರಾಜಕೀಯ ಪಕ್ಷಗಳೂ ನಿರಂತರ ಪ್ರಚಾರ, ಅದಕ್ಕೆ ಹೊಸೆಯುವ ಪ್ರಣಾಳಿಕೆಗಳು, ಮತದಾರರ ಓಲೈಕೆ, ಪ್ರಚಾರಕ್ಕೆ ಕೋಟಿಗಟ್ಟಲೇ ಹಣ ಹೀಗೆ ಸುರಿಯುತ್ತ ಇರುತ್ತವೆ. ಸರಕಾರಗಳು ಕೂಡ ಮತ ಬ್ಯಾಂಕ್‌ಗಳ ಓಲೈಕೆಗಾಗಿಯೇ ಕೆಲಸ ಮಾಡಬೇಕಾದ ಸನ್ನಿವೇಶವಿರುತ್ತದೆ. ತಿಂಗಳುಗಟ್ಟಲೇ ಮಾದರಿ ನೀತಿ ಸಂಹಿತೆ ಅನ್ವಯಿಸುವ ಕಾರಣ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಾಗದ ಪರಿಸ್ಥಿತಿಯಿದ್ದು, ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆಯುಂಟಾಗುತ್ತದೆ. ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ, ಮತ ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಯುವ ಸಂದರ್ಭದಲ್ಲಿ, ಪ್ರಾದೇಶಿಕವಾಗಿಯೂ ರಾಷ್ಟ್ರೀಯ ನೆಲೆಯಲ್ಲೂ ಮತದಾರನ ಒಲವನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ರಾಜಕೀಯ ಪಕ್ಷಗಳಿಗೆ ಏಕಕಾಲದಲ್ಲಿ ಬರುವುದರಿಂದ, ತಮ್ಮ ನಿಲುವು ಹಾಗೂ ಸಮೀಕರಣಗಳಲ್ಲಿ ಮೂಲಭೂತವಾಗಿ ಜನಸ್ನೆಹಿಯಾದ ಸ್ವರೂಪವನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಇದು ಅಷ್ಟೊಂದು ಸುಲಭ ಸಾಧ್ಯವೇ? ಹೀಗೆ ಮಾಡುವುದಾದರೆ, ಇತ್ತೀಚೆಗೆ ತಾನೆ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ರಾಜ್ಯಗಳ ಕತೆಯೇನು? ಮಧ್ಯಂತರ ಚುನಾವಣೆಗಳ ನಿರ್ಣಯ ಹೇಗೆ? ಈ ಭಾರೀ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಅದನ್ನು ನಡೆಸುವಷ್ಟು ಸಿಬ್ಬಂದಿ ಚುನಾವಣೆ ಆಯೋಗದ ಬಳಿ ಇದೆಯೇ? ಇದನ್ನು ಬಲಪಡಿಸುವುದು ಹೇಗೆ? ಇಂಥ ನೂರಾರು ಪ್ರಶ್ನೆಗಳಿದ್ದು, ಅವೆಲ್ಲಕ್ಕೂ ಇವೆಲ್ಲದಕ್ಕೂ ನಿಖರವಾದ ಉತ್ತರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.