ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ ಅವುಗಳನ್ನು ಪೂರ್ತಿ ಬರೆಯು ವಂತಿಲ್ಲ, ಹಿಂಜರಿಕೆ. ನಾನು ಪೂರ್ತಿ ಬರೆದೇಬಿಟ್ಟರೂ ಅದನ್ನು ಹಾಗೆಯೇ ಓದಿಕೊಳ್ಳಲಿಕ್ಕೆ ನಿಮ್ಮ ಓದಿನ ಏಕಾಂತದಲ್ಲಿಯೂ ಮುಜುಗರ ಹುಟ್ಟಬಹುದು. ಹಾಗಾಗಿ ಲೇಖನದುದ್ದಕ್ಕೂ ಕೆಟ್ಟ ಶಬ್ದಗಳು, ಹೊಲಸು ಶಬ್ದಗಳು ಇತ್ಯಾದಿಯೇ ಸಂಬೋಧಿಸಬೇಕು. ಲೆಕ್ಕದಂತೆ ಜಗತ್ತಿನಲ್ಲಿ ಸುಮಾರು ೭೦೦೦ ಮಾತನಾಡುವ ಭಾಷೆಗಳು ಈಗ ಬದುಕುಳಿದುಕೊಂಡಿವೆ. ಅವುಗಳಲ್ಲಿ ಮ್ಯಾಂಡರಿನ್, ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ ಈ ನಾಲ್ಕು ಭಾಷೆಗಳದ್ದೇ ಸಿಂಹಪಾಲು. ಈ ನಾಲ್ಕು ಭಾಷೆಗಳಲ್ಲಿ ಒಂದನ್ನು ಪ್ರಥಮ ಭಾಷೆಯಾಗಿಸಿಕೊಂಡವರು ಜಗತ್ತಿನ ಒಂದು ಮೂರಂಶದಷ್ಟು. ಕೆಲವು ಭಾಷೆಗಳನ್ನು ಕೆಲವೇ ಸಾವಿರ ಮಂದಿ ಮಾತನಾಡುವುದು ಕೂಡ ಇದೆ. ಕರ್ನಾಟಕವನ್ನೇ ತೆಗೆದು ಕೊಂಡರೆ ಕೊಂಕಣಿ, ತುಳು, ಕೊಡವ ಹೀಗೆ ಇನ್ನೊಂದಿಷ್ಟು ಭಾಷೆಗಳನ್ನು ಬಳಸುವವರ ಸಂಖ್ಯೆ ಲಕ್ಷಗಳಲ್ಲಿ. ಭಾರತದಲ್ಲಿ ಒಟ್ಟು ೭೮೦ ಭಾಷೆಗಳು ಜೀವಂತವಾಗಿವೆಯಂತೆ. ಇವು ಭಾಷೆ
ಗಳ ಸಂಖ್ಯೆ. ಡೈಲೆಕ್ಟ್- ಭಾಷಾ ಪ್ರಭೇದ ಅಥವಾ ಉಪಭಾಷೆಗಳಲ್ಲ. ಡೈಲೆಕ್ಟ್‌ಗಳ ಸಂಖ್ಯೆ ಹಿಡಿದರೆ ಲಕ್ಷ ದಾಟಬಹುದು. ಕನ್ನಡವನ್ನೇ ತೆಗೆದುಕೊಂಡರೆ ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಬಾರ್ಕೂರ್ ಕನ್ನಡ, ನಾಡವರ ಕನ್ನಡ, ಮಲೆನಾಡ ಕನ್ನಡ, ಶಿರಸಿ ಕನ್ನಡ, ಬಿಜಾಪುರ ಕನ್ನಡ, ಕಲ್ಬುರ್ಗಿ, ಧಾರವಾಡ, ಬೆಳಗಾವಿ ಕನ್ನಡ, ಅರೆಭಾಷೆ, ತಿಪಟೂರು ಕನ್ನಡ, ಮಂಡ್ಯ ಕನ್ನಡ ಹೀಗೆ. ರಬಕವಿಯ
ಕನ್ನಡವೇ ಬೇರೆ, ನಂಜನಗೂಡಿನ ಕನ್ನಡವೇ ಬೇರೆ. ಹವ್ಯಕ ಕನ್ನಡವನ್ನು ಬೆಂಗಳೂರಿನವರು ಕೇಳಿದರೆ ಅವರಿಗೆ ಏನು ಹೇಳುತ್ತಿದ್ದಾರೆ ಎಂದೇ ಅಂತ್ ಪಾರ್ ಹತ್ತದಷ್ಟು. ಕುಂದಾಪುರ ಕನ್ನಡವೂ ಹಾಗೆಯೇ, ಅನ್ಯರಿಗೆ ಇದು ಕನ್ನಡ ಹೌದೇ ಅಲ್ಲವೇ ಎಂದೆನಿಸಿಬಿಡುವಷ್ಟು. ಅದೆಷ್ಟೋ ಶಬ್ದಗಳು ಬೆಂಗಳೂರಿಗರಿಗೆ ಅರ್ಥವಾಗುವುದೇ ಇಲ್ಲ. ಕೆಲವೊಂದು ಡೈಲೆಕ್ಟ್‌ಗಳು ಬೇರೆ ಭಾಷೆಯೆಂದೇ ಪರಿಗಣಿಸಬೇಕೋ, ಬೇಡವೋ ಎಂಬುದೇ
ಗೊಂದಲ. ನಮ್ಮಲ್ಲಿ ಸಾಮಾನ್ಯವಾಗಿ ನಾಲ್ಕಾರು ಡೈಲೆಕ್ಟ್ ಕನ್ನಡ ಬರುವವರು ಬಹಳವಿದ್ದಾರೆ.
ಭಾರತದಂಥ ವಿಶಾಲ ಮತ್ತು ಜನಸಂದಣಿ ಇರುವ, ಅಷ್ಟು ಇತಿಹಾಸವಿರುವ ಇನ್ನೊಂದು ದೇಶವೇ ಇಲ್ಲ. ಹಾಗಾಗಿ ೭೮೦ ಭಾಷೆ ಜಾಸ್ತಿಯಾಯ್ತು ಅನ್ನಿಸುವುದಿಲ್ಲ. ಭಾಷೆಗಳ ಸಂಖ್ಯೆಯ ವಿಚಾರವಾಗಿ ನನ್ನಲ್ಲಿ ಆಶ್ಚರ್ಯವನ್ನು ಹುಟ್ಟುಹಾಕುವ ದೇಶ ಪಪುವಾ ನ್ಯೂಗಿನಿ. ಆಸ್ಟ್ರೇಲಿಯಾದಿಂದ ಉತ್ತರಕ್ಕೆ, ಕರ್ನಾಟಕದ ದುಪ್ಪಟ್ಟಿಗಿಂತ ಸ್ವಲ್ಪ ಜಾಸ್ತಿ ವಿಸ್ತಾರದ ದ್ವೀಪಗಳ ರಾಷ್ಟ್ರ. ಈ ದೇಶದಲ್ಲಿ ಇರುವ ಒಟ್ಟು ಭಾಷೆಗಳ ಸಂಖ್ಯೆ ಎಷ್ಟು ಗೊತ್ತೇ? ೮೫೧. ನಮ್ಮಲ್ಲಿಗಿಂತ ಜಾಸ್ತಿ ಭಾಷೆ ಅಲ್ಲಿದೆ. ಉಪಭಾಷೆಗಳಲ್ಲ, ಸಂಪೂರ್ಣ ಬೇರೆ ಭಾಷೆಗಳು. ಅವುಗಳಲ್ಲಿ ಬಹುತೇಕ ಭಾಷೆಗಳು ಹೇಗಿವೆಯೆಂದರೆ ಅವನ್ನು ಬಳಸುವುದು ಕೇವಲ ೨೦-೩೦ ಕುಟುಂಬಗಳು. ಇನ್ನು ಭಾಷೆಗಳಲ್ಲಿನ ಶಬ್ದಗಳ ಸಂಖ್ಯೆಯ ವಿಷಯಕ್ಕೆ ಬರೋಣ. ಆಡುಬಳಕೆಯಲ್ಲಿ ಅತ್ಯಂತ ಹೆಚ್ಚು ಶಬ್ದಗಳು ಇರುವುದು ಇಂಗ್ಲಿಷಿನಲ್ಲಿ. ಇದರಲ್ಲಿ ಜಗತ್ತಿನ ಅದೆಷ್ಟೋ ಭಾಷೆಯಿಂದ ಶಬ್ದಗಳು ಬಂದು ಸೇರುತ್ತವೆ. ಏಳು ಲಕ್ಷ ಶಬ್ದಗಳು. ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಿಗೆ ಶಬ್ದವಿರುವ ಭಾಷೆ ಸದ್ಯಕ್ಕೆ ತಮಿಳು. ಅಲ್ಲಿನ ಸರಕಾರ ೧೨ ಲಕ್ಷ ಶಬ್ದಗಳನ್ನು ಆನ್‌ಲೈನ್ ಶಬ್ದಕೋಶದಲ್ಲಿ ಶೇಖರಿಸಿದೆ. ಕನ್ನಡದ ಉಪ ಭಾಷೆಗಳ ಶಬ್ದವನ್ನೆಲ್ಲ ಸೇರಿಸಿದರೆ ಎರಡರಿಂದ ಮೂರು ಲಕ್ಷ ಶಬ್ದಗಳಾಗಬಹುದು. ಕಿಟ್ಟೆಲ್ ಡಿಕ್ಷ್‌ನರಿಯಲ್ಲಿದ್ದದ್ದು ೭೦ ಸಾವಿರ ಶಬ್ದ (ಭಾಷೆಯೆಂದರೆ ಕೇವಲ ಶಬ್ದಕೋಶದಲ್ಲಿರುವಷ್ಟೇ ಶಬ್ದ ಎಂದಲ್ಲ).
ಇದೆಲ್ಲ ಪೀಠಿಕೆಯಿಡಲು ಕಾರಣವಿದೆ. ಇಷ್ಟೆಲ್ಲಾ ಸಂವಹನ ವೈವಿಧ್ಯ, ೭ ಸಾವಿರ ಭಾಷೆ, ಅಸಂಖ್ಯ ಉಪಭಾಷೆ. ಎಷ್ಟೊಂದು ಭಿನ್ನತೆ. ಆದರೆ ಇವೆಲ್ಲವುಗಳಲ್ಲಿ ಕೆಲವೊಂದು ಸಾಮ್ಯತೆಗಳಿವೆ. ಅದರಲ್ಲಿ ಇದು ಒಂದು. ಜಗತ್ತಿನ ಮಾತನಾಡುವ ಎಲ್ಲ ಭಾಷೆಗಳಲ್ಲಿಯೂ ಕೆಟ್ಟ- ಬೈಗುಳ ಶಬ್ದಗಳಿವೆ. ಅದು ಇಲ್ಲದ ಭಾಷೆಯಿಲ್ಲ ಎನ್ನುವುದಕ್ಕಿಂತ ಅದಿರದ ಭಾಷೆ ಭಾಷೆಯೇ ಅಲ್ಲ. ಇನ್ನು ಅವುಗಳ ಸಂಖ್ಯೆಯನ್ನು ಗಮನಿಸಿದರೆ, ಯಾವುದೇ ಭಾಷೆಯನ್ನು ತೆಗೆದುಕೊಳ್ಳಿ, ಅಲ್ಲಿ ಕೆಟ್ಟ ಶಬ್ದಗಳು ೧೮ರಿಂದ ೨೦ ಮಾತ್ರ. ಕರ್ನಾಟಕದಲ್ಲಿ ಇಷ್ಟೊಂದು ಕನ್ನಡದ ವೈವಿಧ್ಯಗಳಿವೆಯಲ್ಲ, ಅವೆಲ್ಲದರಲ್ಲಿ ಸುಮಾರು ಹತ್ತು ಶಬ್ದಗಳು ಎಲ್ಲ ಕಡೆ ಸಾಮಾನ್ಯ. ಉಳಿದ ಏಳೆಂಟಕ್ಕೆ ಸ್ಥಳೀಯ ವ್ಯಾಪ್ತಿ. ಹೆಚ್ಚೆಂದರೆ ಒಂದು ತಾಲೂಕು ಅಥವಾ ಹೋಬಳಿ ಅಥವಾ ಸೀಮೆಗೆ ಸೀಮಿತ. ಇಂಗ್ಲಿಷನ್ನೇ ತೆಗೆದುಕೊಂಡರೆ ಅಲ್ಲಿನ ಮೊದಲ ಹತ್ತು ಬೈಗುಳ ಶಬ್ದಗಳು ಜಗತ್ತಿನೆಲ್ಲೆಡೆ ಸಾಮಾನ್ಯ. ಇನ್ನು ಉಳಿದ ಏಳೆಂಟು ಸ್ಥಳೀಯ. ಇವು ಸಮಾಜ ನಿತ್ಯ ಬಳಸುವ ಆದರೆ ಒಪ್ಪದ ಶಬ್ದಗಳು.
ಅಸಭ್ಯ ಶಬ್ದಗಳು. ಕೆಲವು ಆಘಾತಕಾರಿ, ಆಕ್ರಮಣಕಾರಿ. ಯಾವುದೇ ಒಂದು ವಾಕ್ಯದಲ್ಲಿ ಇವುಗಳಲ್ಲಿ ಒಂದನ್ನು ಬಳಸಿ ಬಿಟ್ಟರೆ ಆ ವಾಕ್ಯದ ಭಾವಾರ್ಥವೇ ಬದಲಾಗಿ ಬಿಡುತ್ತದೆ. ಇವುಗಳಲ್ಲಿ ಬಹುತೇಕಕ್ಕೆ ಶಬ್ದಕೋಶದಲ್ಲಿಯೂ ಜಾಗ ಇಲ್ಲ. ಅಷ್ಟು ನಿಷಿದ್ಧ. ಹಾಗಂತ ಅವುಗಳು ಮುಖ್ಯವಲ್ಲ ವೆಂದೇ? ಖಂಡಿತ ಅಲ್ಲ, ಯಾವುದೇ ಭಾಷೆ ಕಲಿಯ ಬೇಕಾದರೆ ಮೊದಲು ಆ ಭಾಷೆಯ ಬೈಗುಳ ಶಬ್ದವನ್ನು ಕಲಿತುಕೊಳ್ಳ
ಬೇಕು, ಕೆಲವೊಮ್ಮೆ ಅದಷ್ಟೇ ಸಾಕಾಗುತ್ತದೆ ಎಂದು ತಮಾಷೆಗೆ ಹೇಳುವುದಿದೆ. ಮಡಿವಂತಿಕೆ ಪಕ್ಕಕ್ಕಿರಲಿ, ಒಟ್ಟಾರೆ ಆ ಶಬ್ದಗಳು ಕೂಡ ಅಷ್ಟೇ ಮುಖ್ಯ. ಮನುಷ್ಯನ ಅತ್ಯಂತ ಬಲವಾದ ಭಾವನೆಯನ್ನು ವ್ಯಕ್ತಪಡಿಸಲಿಕ್ಕೆ ಈ ಶಬ್ದಗಳೇ ಬೇಕು. ಹಾಗಂತ ಆ ಶಬ್ದಗಳನ್ನು ಬಳಸದೆಯೇ ಬದುಕಲಿಕ್ಕೆ ಸಾಧ್ಯವಿಲ್ಲವೇ, ಇದೆ. ಆದರೆ ಬಳಸಲೇಬೇಕಾದ ಅನಿವಾರ್ಯಗಳು ಕೂಡ ದಿನನಿತ್ಯ ಎದುರಾಗುವುದಿದೆ. ಸಿಟ್ಟಿನ ಪ್ರಮಾಣವನ್ನು ಬೇರೊ
ಬ್ಬರಿಗೆ ತಿಳಿಸಲು, ಹೆದರಿಕೆ ಅಥವಾ ಉತ್ಸಾಹದ ಪ್ರಮಾಣವನ್ನು ಎತ್ತರಿಸಿ ಹೇಳಲು ಆ ಶಬ್ದಗಳು ಮಾತ್ರ ಪರಿಹಾರ.
ಬಳಸದೇ ಭಾವನೆಯ ತೀವ್ರತೆಯನ್ನು ವ್ಯಕ್ತಪಡಿಸಲು ಕಷ್ಟವಾಗುತ್ತದೆ. ಈ ಶಬ್ದಗಳಿಗೆ ಅತ್ಯಂತ ನೋವು, ಉದ್ವೇಗವನ್ನು ಉಂಟುಮಾಡುವ, ತಕ್ಷಣ ಗಮನ ಸೆಳೆಯುವ ಶಕ್ತಿ ಇದೆ. ಇದಕ್ಕೆ ತದ್ವಿರುದ್ಧವಾಗಿ, ಸಂಭಾಷಣೆ ಆಪ್ತವೆನಿಸಲು ಕೂಡ ಈ ಶಬ್ದಗಳೇ ಬೇಕಾಗುತ್ತವೆ. ಈ ಶಬ್ದಗಳ ಬಳಕೆ ಎಲ್ಲ ಭಾಷೆಯಲ್ಲಿಯೂ ಒಂದಿಷ್ಟು ಸಲುಗೆಯ ದ್ಯೋತಕವಾಗಿರುವುದೂ ಹೌದು. ಬಹುತೇಕ ಈ ಶಬ್ದಗಳ ಶಬ್ದಾರ್ಥಕ್ಕೂ ಭಾವಾರ್ಥಕ್ಕೂ ಸಂಬಂಧವೇ ಇರುವುದಿಲ್ಲ. ಅದರ ಶಬ್ದಾರ್ಥ ತೀರಾ ಸರಳ. ಸಮಾಜದಲ್ಲಿ ಅರ್ಥಕ್ಕ ನುಗುಣವಾಗಿ ನೋಡದ ಶಬ್ದಗಳು ಇವು. ಕೆಲವೊಂದರ ಅರ್ಥ ಸರಿಯಾಗಿ ಗೊತ್ತಿರುವುದೇ ಇಲ್ಲ. ನಮ್ಮ ಕಡೆ ‘ಬಡ್ಡಿಮಗ’ ಎಂಬ ಶಬ್ದದ ಬಳಕೆ ಜಾಸ್ತಿ. ಅದರ ಸರಿಯಾದ ಅರ್ಥ ನನಗಂತೂ ಇಂದಿಗೂ ಬಗೆಹರಿದಿಲ್ಲ, ದ್ವಂದ್ವವಿದೆ. ಅಂಥ ಕೆಲವೊಂದು ಶಬ್ದಗಳ ಬಳಕೆ ವಿಚಿತ್ರ. ಉದಾಹರಣೆಗೆ ಇಂಗ್ಲಿಷಿನಲ್ಲಿ “nigger’ ಅಥವಾ “nigga’. ಇದನ್ನು
ಆಫ್ರಿಕನ್ ಅಮೆರಿಕನ್ನರಿಗೆ, ಕಪ್ಪು ವರ್ಣೀಯರಿಗೆ ಅವಾಚ್ಯವಾಗಿ ಬಳಸುವುದು. ಇದು ಅಮೆರಿಕದ ಮಟ್ಟಿಗೆ ಅತ್ಯಂತ ಅವಾಚ್ಯ. ಇದನ್ನು ತಮಾಷೆಗೂ ಪಿಸುಗುಡುವಂತಿಲ್ಲ. ಕಪ್ಪು ವರ್ಣೀಯರಿಗೆ ಇದನ್ನು ಹೇಳಿದ್ದು ಸಾಬೀತಾದರೆ ಸೀದಾ ಜೈಲು. ಹಾಗಂತ ಈ ಶಬ್ದ ಅವಾಚ್ಯವಾಗುವುದು, ನೀವು ಅನ್ಯವರ್ಣೀಯರಾಗಿ, ಕಪ್ಪು ವರ್ಣೀಯರಿಗೆ ಕರೆದಾಗ ಮಾತ್ರ. ಕಪ್ಪು ವರ್ಣೀಯರು ತಮ್ಮನ್ನು ತಾವೇ ಸಂಬೋಧಿಸುವಾಗ, ಒಬ್ಬ ಕಪ್ಪು ವರ್ಣೀಯ ಇನ್ನೊಬ್ಬನನ್ನು ಸ್ನೇಹಪೂರ್ವಕವಾಗಿ ಸಂಬೋಧಿಸುವಾಗ hey niggaಬಳಸುವುದು ಅತ್ಯಂತ ಸಾಮಾನ್ಯ. ಕಪ್ಪು ವರ್ಣೀಯರು ತಮಗೆ ತಾವೇ ಈ ಶಬ್ದವನ್ನು ಬಳಸಿದರೆ ಅದು ಅವಾಚ್ಯವಲ್ಲ. ಕಪ್ಪು ವರ್ಣೀಯರು ಹಾಡುಗಳಲ್ಲಿ, ರ‍್ಯಾಪ್‌ಗಳಲ್ಲಿ ವಾಕ್ಯಕ್ಕೊಮ್ಮೆ ಈ ಶಬ್ದವನ್ನು ಬಳಸುತ್ತಾರೆ.
ಅದನ್ನು ಅನ್ಯ ವರ್ಣೀಯರು ಗುನುಗುವಂತೆಯೂ ಇಲ್ಲ. ಈ ರೀತಿ ಹೇಳುವವರು ಯಾರು ಎನ್ನುವುದರ ಮೇಲೆ ಒಂದು ಶಬ್ದದ ಭಾವಾರ್ಥ ಬದಲಾಗುವುದನ್ನು ಇಲ್ಲಿ ಗ್ರಹಿಸಬಹುದು. ಇನ್ನೊಂದು ಏನೆಂದರೆ ಈ ಎಲ್ಲ ಶಬ್ದಗಳಿಗೆ ಒಂದು ಶ್ರೇಣಿಯಿದೆ ಮತ್ತು ಅವು ಸ್ಥಳಕ್ಕನುಗುಣವಾಗಿ ಬದಲಾಗುತ್ತವೆ. Nigga ಎಂಬ ಶಬ್ದ ಅಮೆರಿಕದಲ್ಲಿ ಅತ್ಯಂತ ಹೆಚ್ಚು ರೇಗಿಸುವ, ಮನನೋಯಿಸುವ ಶಬ್ದ. ಅದಕ್ಕೆ ಕಾರಣ ಅಮೆರಿಕದಲ್ಲಿ ಬಹುದೀರ್ಘಕಾಲ ನಡೆದ ಪೈಶಾಚಿಕ ದಬ್ಬಾಳಿಕೆ. ಆದರೆ ಯುರೋಪ್‌ನಲ್ಲಿ ಆ ಶಬ್ದ ಅಮೆರಿಕದಷ್ಟು ತೀವ್ರ ವಾದದ್ದಲ್ಲ. ಇಂಗ್ಲೆಂಡಿನಲ್ಲಿ fuck ಅತ್ಯಂತ ನೋವುಂಟು ಮಾಡುವ ಶಬ್ದ, ಅದಕ್ಕೇ ಮೊದಲ ಸ್ಥಾನ. ಅಮೆರಿಕದಲ್ಲಿ ಈ ಶಬ್ದದ ತೀರಾ ಸಹಜ ಬಳಕೆಯಿದೆ. ಅದೆಷ್ಟು ಸಹಜವೆಂದರೆ ಯಾವುದೇ ವಾಕ್ಯದಲ್ಲಿ ಇದನ್ನು ಬಳಸಬಹುದು. ಅವು ಬಳಸುವ ವಾಕ್ಯಕ್ಕನುಗುಣವಾಗಿ ಅರ್ಥವನ್ನು ಪಡೆಯುತ್ತವೆ. ಓಶೋ ಅವರು
‘ಫಕ್’ ಎಂಬ ಶಬ್ದದ ಅರ್ಥವನ್ನು ವಿವರಿಸಿದ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ನೋಡಬಹುದು. ಇದನ್ನು ತಮಾಷೆಗೂ ಹೇಳಬಹುದು, ಇಲ್ಲ ಅಸಮ್ಮತಿಯನ್ನು ಸೂಚಿಸಲಿಕ್ಕೆ ಕೂಡ ಬಳಸಬಹುದು. ಇದಕ್ಕೆ ಹದಿನೈದನೇ ಸ್ಥಾನ.
ಕೆಲವು ಕೆಟ್ಟ ಶಬ್ದಗಳನ್ನು ಬಳಸುವುದು ಉತ್ತರ ಕರ್ನಾಟಕ ದಲ್ಲಿ ಸಾಮಾನ್ಯ. ಆದರೆ ದಕ್ಷಿಣದಲ್ಲಿ, ಕರಾವಳಿಯಲ್ಲಿ ಅವುಗಳನ್ನು ಬಳಸುವವರನ್ನು ಸಮಾಜ ಬೇವಿನ ಸೊಪ್ಪಿನಂತೆ ಪಕ್ಕಕ್ಕಿಡುತ್ತದೆ. ಎಲ್ಲ ಕಡೆಯಲ್ಲಿ ನಮ್ಮ ಭಾವನೆಯ ತೀವ್ರತೆಯನ್ನು ಹೇಳಲು ಅದಕ್ಕನುಗುಣವಾಗಿ ಆಯಾ ಜಾಗದ ಶಬ್ದಗಳ ಶ್ರೇಣಿಯ, ಭಾವನಾ ತೀವ್ರತೆಯ ಅರಿವಿರಬೇಕಾಗುತ್ತದೆ. ನಾನು ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಹೋದಾಗ ಅಲ್ಲಿನ ಈ ಶಬ್ದಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹಾಗಂತ ಅಲ್ಲಿನ ಕನ್ನಡ ಮೇಲೆ, ಇಲ್ಲಿನ ಕನ್ನಡ ಕೆಳಗೆ, ಅಲ್ಲಿನವರು ಸೌಮ್ಯ, ಇಲ್ಲಿನವರ ಭಾಷೆ ತುಂಬಾ ನಾಜೂಕು, ಅಲ್ಲಿ ತೀರಾ ರಫ್, ಒರಟು ಎಂದು ಹೇಳುತ್ತಿಲ್ಲ. ಇಲ್ಲಿ ಹೇಳಲು ಹೊರಟಿದ್ದೇ ನೆಂದರೆ, ಭಾಷೆಯನ್ನು ಸರಿಯಾಗಿ ಅದು ಇರುವಂತೆಯೇ ತಿಳಿಯಬೇಕೆಂದರೆ ಇಂಥ ಎಲ್ಲ ಬಳಕೆಯಲ್ಲಿರುವ ಶಬ್ದಗಳ ಉತ್ಪತ್ತಿ, ಬಳಕೆ ಮತ್ತು ಶ್ರೇಣಿ ಯನ್ನು ಅಭ್ಯಸಿಸಲೇ ಬೇಕಾಗುತ್ತದೆ. ಆದರೆ ಸಮಸ್ಯೆಯೆಂದರೆ ಯಾವುದೇ ಭಾಷೆಯ ಬಗ್ಗೆ ಅದೆಷ್ಟೇ ಪುಸ್ತಕ, ಗ್ರಂಥಗಳಿರಲಿ, ಅಲ್ಲಿ ಇಂಥ ಶಬ್ದಗಳಿಗೆ ಜಾಗವೇ ಇಲ್ಲ. ನಮ್ಮ ಭಾವತೀವ್ರತೆಯನ್ನು ಹೊರಹಾಕಲಿಕ್ಕೆ ಮನುಷ್ಯನ ಜನನೇಂದ್ರಿಯಗಳ ಹೆಸರನ್ನು ಬಳಸುವುದು ಕೂಡ ಬಹುತೇಕ ಭಾಷೆಗಳಲ್ಲಿ ಸಾಮಾನ್ಯ. ಅದು ಇಂಗ್ಲಿಷಿನಲ್ಲಿಯೂ ಇದೆ, ಹಿಂದಿ, ಕನ್ನಡದಲ್ಲಿಯೂ ಇದೆ. ಇಲ್ಲಿ ಅಸಲಿಗೆ ಈ ವಾಕ್ಯಗಳಿಗೆ ಯಾವುದೇ ಅರ್ಥ ಇಲ್ಲ. ಒಬ್ಬ ವ್ಯಕ್ತಿಯನ್ನು ಅವನು ಈ ಗುಪ್ತಾಂಗ ಎಂದರೆ ಅದಕ್ಕೇನು ಅರ್ಥ? ಆದರೆ ಅವೆಲ್ಲವುದಕ್ಕೂ ಅಲಿಖಿತ ಅರ್ಥಗಳು ಆಯಾ ಜಾಗದಲ್ಲಿ, ಭಾಷೆಗಳಲ್ಲಿ ಇವೆ.
ಹಾಗಂತ ಕೇವಲ ಗುಪ್ತಾಂಗಗಳಷ್ಟೇ ಬೈಗುಳವಲ್ಲ. ಉದಾಹರಣೆಗೆ my foot ಎಂಬ ಬಳಕೆ ಇಂಗ್ಲಿಷಿನಲ್ಲಿದೆ. ಒಬ್ಬ ವ್ಯಕ್ತಿ ಅತ್ಯಂತ ಕೀಳು ಎನ್ನಲು ಬಳಸುವುದು. ಕಾಲು ಕೀಳು, ಈ ಅಂಗ ಕೀಳು, ತಲೆ, ಹಣೆ, ಕೈ ಇವುಗಳೆಲ್ಲ ಮೇಲೆ ಎಂಬ ಅಂಗದ ಶ್ರೇಣಿಯೂ ಬೈಗುಳಗಳ ಶ್ರೇಣಿಯ ಜತೆ ಹೊಂದಿ ಕೊಂಡಿರುವುದನ್ನು ಇಲ್ಲಿ ಗ್ರಹಿಸಬೇಕು. ಇನ್ನೊಂದು ಸಾಮಾನ್ಯವಾದ ಬೈಗುಳ ಶಬ್ಧ ವ್ಯಕ್ತಿಯ ತಂದೆ ತಾಯಿಯರಿಗೆ, ಅವರ ಗುಣ, ಕಸುಬಿಗೆ ಸಂಬಂಧಿಸಿದ್ದು. ಇದು ಕೂಡ ಎಲ್ಲ ಭಾಷೆಗಳಲ್ಲಿ ಸಾಮಾನ್ಯ. ಭಾಷೆಗಳ ನಡುವೆ ಯಾವುದೇ ಹೋಲಿಕೆಯಿಲ್ಲದಿದ್ದಲ್ಲಿಯೂ ಇಂಥ ಶಬ್ದಗಳ ಬಳಕೆಯಲ್ಲಿ ಸಾಮ್ಯತೆ ಕಾಣಬಹುದು. ಉದಾಹರಣೆಗೆ ಬಾಸ್ಟರ್ಡ್ ಎಂಬ
ಶಬ್ದ. ಅವಿವಾಹಿತರಿಗೆ ಹುಟ್ಟಿದ ಮಗು ಎಂಬ ಶಬ್ಧಾರ್ಥ. ಇದಕ್ಕೆ ಸಮಾನಾಂತರವಾದ ಶಬ್ದ ಕನ್ನಡ, ಜರ್ಮನ್, ಇಂಗ್ಲಿಷ್, ಸ್ಪ್ಯಾನಿಷ್, ಹಿಂದಿ, ಬೆಂಗಾಲಿ ಹೀಗೆ ಎಲ್ಲಾ ಭಾಷೆಗಳಲ್ಲಿವೆ. ಎಲ್ಲ ಭಾಷೆಯಲ್ಲಿಯೂ ಹತ್ತಿಪ್ಪತ್ತು ಇಂಥ ಶಬ್ದಗಳು ಸಾಮಾನ್ಯವಾಗಿ ಬಳಕೆಯಲ್ಲಿರುತ್ತವೆ ಎಂದೇನಲ್ಲ, ಬಹುತೇಕ ಶಬ್ದಗಳು ಕೂಡ ಸಮಾನ ಅರ್ಥದ್ದಿರುವುದು ಸೋಜಿಗದ ವಿಚಾರವೇ ಸರಿ. ವೇಶ್ಯೆಯ ಮಗ, ಅವಿವಾಹಿತರಿಗೆ ಹುಟ್ಟಿದವ, ವಿಧವೆಗೆ ಹುಟ್ಟಿದವ ಎಂಬಿತ್ಯಾದಿ ಶಬ್ದಗಳು ಜಗತ್ತಿನೆಲ್ಲೆಡೆ ಅವಾಚ್ಯವಾಗಿ ಬಳಕೆಯಾಗುವುದು ಸಾಮಾನ್ಯ. ಯಾವುದೇ ಶಬ್ದಕ್ಕೆ ಸಮಾನಾರ್ಥಕ ಶಬ್ದ ಇನ್ನೊಂದು ಭಾಷೆಯಲ್ಲಿ ಸಿಗದಿರಬಹುದು, ಆದರೆ ಈ ಎಲ್ಲ ಶಬ್ದಗಳಿಗೆ ಯಥಾವತ್ ಸಮಾನಾರ್ಥಕ ಶಬ್ದ ಸಿಗುತ್ತದೆ. ಮತ್ತು ಅದು ಎಲ್ಲ ಭಾಷೆಯಲ್ಲಿಯೂ ಬೈಗುಳ ಶಬ್ದವೇ ಆಗಿರುತ್ತದೆ. ಅಂದಹಾಗೆ ಇಂಗ್ಲೆಂಡಿನಲ್ಲಿ ‘ಪಾಕಿ’ ಎನ್ನುವ ಶಬ್ದ ಅವಾಚ್ಯ. ಇದು ‘ಫಕ್’ ಗಿಂತ ಹೆಚ್ಚಿನ ತೀವ್ರತೆಯುಳ್ಳ ಬೈಗುಳ ಶಬ್ದ. ಒಬ್ಬನನ್ನು ಪಾಕಿ (ಪಾಕಿಸ್ತಾನಿ) ಎಂದು ಕರೆಯುವುದು.
ಅಮೆರಿಕದಲ್ಲಿ dick ಎಂದರೆ ಭಾವಾರ್ಥದಲ್ಲಿ ಪುರುಷ ಜನನಾಂಗ. ಕೆಟ್ಟ ಕಿರಿಕಿರಿ ಮಾಡುವ ಬಾಸ್‌ಗೆ, ಅನವಶ್ಯಕ ಮೂಗು ತೂರಿಸುವ, ಅಸಡ್ಡಾಳ ಮಾತನಾಡುವ ಸ್ನೇಹಿತನಿಗೆ, ಇನ್ನೊಬ್ಬನಿಗೆ He is a dick ಎನ್ನುವುದಿದೆ. ಅಸಲಿಗೆ ಡಿಕ್ ಎಂಬ ಶಬ್ದಕ್ಕೆ ಯಾವುದೇ ಕೆಟ್ಟ ಅರ್ಥವಿರಲಿಲ್ಲ. ಅಮೆರಿಕದಲ್ಲಿ ರಾಬರ್ಟ್‌ನನ್ನು ರಾಬ್ ಅಥವಾ ಬಾಬ್ ಎಂದು ಕರೆಯುವುದು, ವಿಲಿಯಮ್‌ನನ್ನು ಬಿಲ್ ಎಂದು ಕರೆಯುವುದು ಹೀಗೆ
ರೂಢಿ. ಅಂತೆಯೇ ರಿಚರ್ಡ್‌ನನ್ನು ‘ಡಿಕ್’ ಎಂದು ಕರೆಯುವುದು. ಹುಬ್ಬಳ್ಳಿ ಧಾರವಾಡದ ಕಡೆ ಹೆಸರನ್ನು ಚಿಕ್ಕದಾಗಿಸಿ ‘ಯಾ’ ಸೇರಿಸುವುದಿದೆಯಲ್ಲ. ನಟರಾಜನಿಗೆ ‘ನಟ್ಯಾ’ ಎಂದು ಕರೆಯುವಂತೆ ರಿಚರ್ಡ್‌ಗೆ ಡಿಕ್. ಡಿಕ್ ಎಂದರೆ ರಿಚರ್ಡ್ ಹೆಸರಿನ ತದ್ಭವ. ಇನ್ನು ಕೆಲವರ ಹೆಸರೇ ಡಿಕ್ ಎಂದು ಇಡುವುದು ಕೂಡ ಇದೆ. ೧೯೫೦-೬೦ರ ಆಸುಪಾಸಿನಲ್ಲಿ ಅಮೆರಿಕದ ಸೈನ್ಯದಲ್ಲಿ ಈ ‘ಡಿಕ್’ ಎಂಬ ಶಬ್ದವನ್ನು ಅವಾಚ್ಯವಾಗಿ ಬಳಸುವ ಟ್ರೆಂಡ್ ಬಂತು. ಬಹುಶಃ ಯಾರೋ ಒಬ್ಬ ರಿಚರ್ಡ್ ಅಂಥವನಿದ್ದಿರಬೇಕು. ನಂತರದಲ್ಲಿ ಈ ಶಬ್ದಕ್ಕೆ ಪುರುಷ ಜನನಾಂಗ ಎಂಬ ಅರ್ಥ ಅದು ಹೇಗೋ ಅಂಟಿಕೊಂಡಿತು. ಈ ಕಾರಣಕ್ಕೆ ಅಮೆರಿಕದಾದ್ಯಂತ ಈ ‘ಡಿಕ್’ ಎಂಬ ಹೆಸರನ್ನು ಮಗುವಿಗೆ ಇಡುವುದು ೧೯೭೦ರ ನಂತರ ಸಂಪೂರ್ಣ ನಿಂತಿತು.
ಈಗ ಅಮೆರಿಕದ ‘ಡಿಕ್’ ಹೆಸರಿನವನೆಂದರೆ ಆತನ ವಯಸ್ಸು ಐವತ್ತು ದಾಟಿದೆ ಎಂದರ್ಥ. ಇದೇ ಕಾರಣಕ್ಕೆ ‘ಹಾರ್ದಿಕ್’ (Hardick) ಮೊದಲಾದ ಭಾರತೀಯ ಹೆಸರುಗಳು ಇಲ್ಲಿ ಅವಮಾನಕ್ಕೊಳಗಾಗುತ್ತವೆ. ಒಟ್ಟಿನಲ್ಲಿ ಒಂದು ಭಾಷೆಯನ್ನು ಕಲಿಯುವಾಗ, ಬಳಸುವಾಗ ಈ ಶಬ್ದಗಳ ಸ್ಥಾನಮಾನದ ಅರಿವಿಲ್ಲದಿದ್ದರೆ ಆ ಭಾಷಾ ಕಲಿಕೆ ಅಪೂರ್ಣ. ಭಾಷೆಯೊಂದನ್ನು ಕಲಿತು ಆ ಭಾಷೆಯವರಂತೆಯೇ ಮಾತನಾಡಬೇಕೆಂದರೆ ಈ ಶಬ್ದಗಳ ಸರಿಯಾದ ಬಳಕೆಯ ಅರಿವು ಇರಲೇಬೇಕು. ಇಂಗ್ಲಿಷ್, ಹಿಂದಿ, ಕನ್ನಡ ಹೀಗೆ ಯಾವುದೇ ಭಾಷೆಯಿರಲಿ. ಸರಿಯಾಗಿ ಕಲಿಯಬೇಕೆಂದರೆ ಯಾವ್ಯಾವ ಸಂದರ್ಭದಲ್ಲಿ ಯಾವ ಶಬ್ದವನ್ನು ಬಳಸುತ್ತಾರೆ ಎಂಬ ಅರಿವು ಬೇಕು. ಇಂಗ್ಲಿಷಿನ ವಿಷಯದಲ್ಲಿ ಅದರ ವ್ಯಾಪಕತೆಯಿಂದಾಗಿ ಅದೇ ಶಬ್ದ ಆ ಜಾಗದಲ್ಲಿ ಹುಟ್ಟು ಹಾಕುವ ಅರ್ಥದ ಪ್ರಮಾಣದ ಅರಿವು ಕೂಡ ಇರಬೇಕು. ವ್ಯಾಕರಣ ಮತ್ತು ಶಬ್ದ ಉಚ್ಚಾರದ ಅಭ್ಯಾಸ ಮೊದಲು
ನಡೆದದ್ದು ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಎನ್ನುವುದು ದಾಖಲೆ. ಬಹುಶಃ ಅದಕ್ಕಿಂತಲೂ ಮೊದಲೇ ನಮ್ಮ ನೆಲದಲ್ಲಿ ಈ ನಿಟ್ಟಿನ ದಾಖಲೆಗಳನ್ನು ನೋಡಬಹುದು.
ಒಟ್ಟಾರೆ ಪಾಣಿನಿಯ ನಂತರ ಬಂದ ಅದೆಷ್ಟೋ ಭಾಷಾ ತಜ್ಞರು, ಭಾಷಾ ಇತಿಹಾಸಕಾರರು, ಪುರಾತಜ್ಞರು, ಸಮಾಜ ಶಾಸಜ್ಞರು ಈ ಶಬ್ದಗಳನ್ನು ಅಧ್ಯಯನ ಮಾಡಿದ್ದಾರೆ. ಆದರೆ ಇವೆಲ್ಲದರೆಡೆಗಿನ ಮಡಿವಂತಿಕೆ ಅವರನ್ನೂ ಬಿಟ್ಟಂತಿಲ್ಲ. ಈ ಶಬ್ದಗಳ ಉತ್ಪತ್ತಿ ಇತಿಹಾಸವನ್ನು ಬಿಚ್ಚಿಡುವಲ್ಲಿ ಮಹತ್ವದ್ದಾದರೂ ಅವುಗಳು ಮಡಿವಂತಿಕೆ ಮೀರಿ ದಾಖಲೆಯಾದದ್ದು ಬಹಳ ವಿವರ. ಆದರೆ ಈಗೀಗ ಕಾಲ ಬದಲಾಗುತ್ತಿದೆ. ಹಲವು
ಭಾಷೆಗಳಲ್ಲಿ ಇಂಥ ಶಬ್ದ, ಅವುಗಳ ಇತಿಹಾಸ, ಬಳಕೆ ಇತ್ಯಾದಿಯನ್ನು ಶಾಸೀಯವಾಗಿ ಅಭ್ಯಾಸಮಾಡಿ ದಾಖಲಿಸುವ ಕೆಲಸ ನಡೆಯುತ್ತಿದೆ. ಇಂಗ್ಲಿಷಿನಲ್ಲಿ Benjamin Bergen ಬರೆದಿರುವ “What the F ಎಂಬ ೨೫೦ ಪೇಜಿನ ಪುಸ್ತಕ ಇಂಥ ಶಬ್ದಗಳ ಬಗ್ಗೆಯೇ ಇದೆ. ಭಾಷೆಯ ಮೇಲೆ ಆಸಕ್ತಿಯಿದೆಯೆಂದರೆ ಓದಲೇಬೇಕಾದ ಪುಸ್ತಕ ಇದು. ಇದನ್ನು ಓದಿದರೆ ಕನ್ನಡದಲ್ಲಿಯೂ ಇಂಥ ಪುಸ್ತಕದ ಅವಶ್ಯಕತೆಯಿದೆ ಎನಿಸದಿರದು.