ಮೈಸೂರು: ವಿಜಯದಶಮಿ ಪ್ರಯುಕ್ತ ಅರಮನೆ ಆವರಣದಲ್ಲಿ ಬೆಳಗ್ಗೆಯಿಂದಲೇ ಪೂಜೆ ಕೈಂಕರ್ಯಗಳು ಆರಂಭಗೊಂಡಿದೆ. 9 ಗಂಟೆಗೆ ಅಂಬಾ ವಿಲಾಸದಲ್ಲಿ ವಜ್ರಮುಷ್ಠಿ ಕಾಳಗ ಶುರುವಾಗಿದೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಖಾಸಗಿ ದರ್ಬಾರ್ ಶರನ್ನವರಾತ್ರಿಯ ಒಟ್ಟೂ 9 ದಿನಗಳ ಕಾಲ ನಡೆಯಲಿದೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ.
ಇಂದು ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದ್ದು, ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಬೆಳ್ಳಿರಥದಲ್ಲಿ ಜನಪದ ಕಲಾತಂಡಗಳ ಜೊತೆಗೆ ಅರಮನೆಯತ್ತ ಹೊರಟಿದೆ. ಮೆರವಣಿಗೆ ವೇಳೆ ಚಾಮುಂಡಿಗೆ ಜೈಕಾರ ಕೂಗಿ ಭಕ್ತರ ಹರ್ಷೋದ್ಗಾರ ಮೊಳಗಿದೆ.
11 ಗಂಟೆಗೆ ಯದುವೀರ್ ವಿಜಯ ಯಾತ್ರೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಭುವನೇಶ್ವರಿ ದೇಗುಲದಲ್ಲಿ ಪೂಜೆ ನಡೆಯಲಿದೆ. ನಂತರ ಯದುವೀರ್ ಒಡೆಯರ್‌ರಿಂದ ಬನ್ನಿ ಪೂಜೆ ನೆರವೇರಲಿದೆ.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.45 ರಿಂದ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4:40 ರಿಂದ 5ರ ಸಮಯದಲ್ಲಿ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಅಭಿಮನ್ಯು ಆನೆ ಈಗ 4ನೇ ಬಾರಿಗೆ ಅಂಬಾರಿ ಹೊರಲು ಸರ್ವ ಸನ್ನದ್ಧವಾಗಿದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ಮೈಸೂರಿನ ಬೀದಿ ಬೀದಿಗಳಲ್ಲಿ ಸಂಚರಿಸಲಿದ್ದಾನೆ. ಅಭಿಮನ್ಯುಗೆ 14 ಅನೆಗಳು ಸಾಥ್ ನೀಡಲಿವೆ.