ಕೊಪ್ಪಳ: ರಾಮ ಭಕ್ತ ಹನುಮಂತನ ಜನ್ಮಸ್ಥಳ, ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಮೇಲೆ ದೀಪಾವಳಿ ಆಚರಿಸಿಲ್ಲ ಎಂದು ವಿದೇಶಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ. ಹಿಂದೂ ಧರ್ಮದ ಅನುಯಾಯಿಗಳಾದ ರಷ್ಯಾದ ಮೀನಾಕ್ಷಿ ಗಿರಿ, ಸರಸ್ವತಿ ಹಾಗೂ ಗಂಗಾ ಅಂಜನಾದ್ರಿ ಬೆಟ್ಟದ ಮೇಲೆ ನಿಂತು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.
ಹರಿದ್ವಾರದ ಸನ್ಯಾಸಿ ಶ್ರೀದಾಸಪೋತ್ ಗಿರಿ ಅವರೊಂದಿಗೆ ಕರ್ನಾಟಕಕ್ಕೆ ಬಂದಿರೋ ವಿದೇಶಿಗರು ದೀಪಾವಳಿ ವೇಳೆಗೆ ಅಂಜನಾದ್ರಿ ಬಿಟ್ಟಕ್ಕೆ ಆಗಮಿ ಸಿದ್ದು, ಈ ವೇಳೆ ಬೆಟ್ಟದ ಮೇಲೆ ದೀಪಾವಳಿ ಆಚರಣೆ ಕಂಡು ಬಂದಿಲ್ಲ. ಅಂಜನಾದ್ರಿ ಬೆಟ್ಟ ದೀಪಾವಳಿ ಸಮಯದಲ್ಲಿ ಕತ್ತಲಿನಲ್ಲಿ ಮುಳುಗಿದ್ದನ್ನು ಕಂಡು, ಹನುಮ ಭಕ್ತರು ವಿಡಿಯೋ ಮಾಡಿದ್ದಾರೆ. ಹರಿದ್ವಾರದ ಸಂತ ಮತ್ತು ರಷ್ಯಾದ ಮೀನಾಕ್ಷಿ ಮಾತನಾಡಿ, ಅಂಜನಾದ್ರಿ ಬೆಟ್ಟದ ನಿರ್ವಹಣೆ ಹೊಣೆ ಹೊತ್ತಿರುವ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ರಾಮಾಯಣ ಮಹಾಪುರುಷ ಹನುಮಂತನ ಜನ್ಮ ಸ್ಥಳವನ್ನು ಸರಕಾರ ನಿರ್ವಹಣೆ ಮಾಡುತ್ತಿದೆ. ಆದರೆ, ಇಲ್ಲಿ ದೀಪಾವಳಿ ವೇಳೆಯೂ ಒಂದು ದೀಪ ಬೆಗಿಸಿಲ್ಲ. ದೇಶದೆಲ್ಲೆಡೆ ದೀಪಾವಳಿ ನಡೆಯುತ್ತಿದೆ. ಆದರೆ, ಇಂಥ ಪುಣ್ಯಭೂಮಿಯಲ್ಲಿ ಬೆಳಕಿಲ್ಲ. ಇಲ್ಲಿಗೆ ಲಕ್ಷಂತರ ಭಕ್ತರು ಬರುತ್ತಿದ್ದು, ಸಾಕಷ್ಟು ಆದಾಯವೂ ಇದೆ. ಆದರೆ, ಸರಕಾರ ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದೆ. ನಾನು ಆ ಪಕ್ಷ- ಈ ಪಕ್ಷ ಅಂತಾ ಹೇಳುವುದಿಲ್ಲ. ಎಲ್ಲ ಸರಕಾರಗಳು ಸನಾತನ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಬೇಕು ಎಂದಿದ್ದಾರೆ.