ವರ್ತಮಾನ
maapala@gmail.com
ಬಿಜೆಪಿಯಂಥ ಕೋಮುವಾದಿ ಪಕ್ಷದ ಸಹವಾಸವೇ ಬೇಡ ಎಂದು ಅದರ ಬೆಂಬಲ ತಿರಸ್ಕರಿಸಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಬಂದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಅದೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದ ಜತೆಗೆ ಅಷ್ಟೇ ಪ್ರಬಲವಾದ ಕಾರಣ ಬೇರೆಯೂ ಇದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬದ ಸದಸ್ಯರು ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದು ವಿಶೇಷವೇನೂ ಅಲ್ಲ. ಅವರು ಬಯಸಿದಾಗೆಲ್ಲಾ ಪ್ರಧಾನಿ ಭೇಟಿಗೆ ಸಮಯ ನೀಡುತ್ತಿದ್ದರು. ಆದರೆ, ರಾಜಕೀಯ ಕಾರಣಗಳಿಗಾಗಿ ಇಬ್ಬರೂ ಭೇಟಿಯಾಗಿದ್ದು ಗುರುವಾರವೇ ಮೊದಲು. ಜೆಡಿಎಸ್-ಬಿಜೆಪಿ ಮೈತ್ರಿ ಬಳಿಕ ಈ ವಿಚಾರದಲ್ಲಿ ಪ್ರಧಾನಿಯವರೊಂದಿಗೆ ಸಮಾಲೋಚನೆ ನಡೆಸಲು ದೇವೇಗೌಡರು ತಮ್ಮ ಪುತ್ರರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದರಾಗಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಸಿ.ಎನ್ .ಬಾಲಕೃಷ್ಣ ಜತೆ ತೆರಳಿದ್ದರು. ಈ ವೇಳೆ ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಜತೆ ಜೆಡಿಎಸ್ ಮೈತ್ರಿ ಕುರಿತಂತೆ ಚರ್ಚಿಸಿದ್ದಾರೆ.
ಆದರೆ, ಈ ಚರ್ಚೆಯನ್ನು ದೇವೇಗೌಡರು ರಾಜಕೀಯಕ್ಕಷ್ಟೇ ಸೀಮಿತಗೊಳಿಸಲಿಲ್ಲ. ಕೊಬ್ಬರಿಗೆ ಬೆಂಬಲ ಬೆಲೆ, ಕಾಡುಗೊಲ್ಲ ಜಾತಿಗೆ ಮೀಸಲು ಸೌಲಭ್ಯ ಮತ್ತು ರಾಜ್ಯದ ನೀರಾವರಿ ಯೋಜನೆ ಗಳಿಗೆ ಕೇಂದ್ರದಿಂದ ನೆರವು ನೀಡುವ ವಿಚಾರವನ್ನೂ ಚರ್ಚಿಸಿದರು. ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತ್ತು ಕುಟುಂಬದವರ ಜತೆ ನಡೆದುಕೊಂಡ ರೀತಿ, ದೇವೇಗೌಡರಿಗೆ ನೀಡಿದ ಗೌರವ ಭೇಟಿಯ -ಟೋಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇವೇಗೌಡರನ್ನು ಆತ್ಮೀಯತೆ, ಪ್ರೀತಿ, ಗೌರವಾದರಗಳಿಂದ ಕಾಣುತ್ತಿರುವುದು ಇದು ಮೊದಲೇನೂ ಅಲ್ಲ.
ಆರಂಭದಿಂದಲೂ ವಿಶೇಷ ಕಾಳಜಿಯೊಂದಿಗೆ ದೇವೇಗೌಡರನ್ನು ಕಾಣುತ್ತಾರೆ. ಬಹುಷಃ ನರೇಂದ್ರ ಮೋದಿ ಪ್ರತಿಪಕ್ಷಗಳ ನಾಯಕರ ಪೈಕಿ ಅತಿ ಹೆಚ್ಚು
ಗೌರವ ನೀಡುವುದು ಎಂದರೆ ಅದು ದೇವೇಗೌಡರಿಗೆ ಎಂಬಂತೆ ನಡೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಎಂಬುದಕ್ಕಿಂತಲೂ ಹೆಚ್ಚಾಗಿ ಪ್ರೀತಿಯ ಅಣ್ಣನಂತೆ
ನೋಡುತ್ತಾರೆ. ಚುನಾವಣೆ ಪ್ರಚಾರದ ವೇಳೆ ಟೀಕೆ, ವ್ಯಂಗ್ಯ ಮಾಡಿದ್ದು ಬಿಟ್ಟರೆ ಇನ್ಯಾವತ್ತೂ ದೇವೇಗೌಡರ ಬಗ್ಗೆ ಒಂದು ಸಣ್ಣ ಟೀಕೆಯನ್ನೂ ಮಾಡಿಲ್ಲ. ಹಾಗೆಂದು
ಯಾವತ್ತೂ ಪ್ರಧಾನಿಯವರಿಗೆ ದೇವೇಗೌಡರಿಂದ ರಾಜಕೀಯ ಅನುಕೂಲ ಸಿಕ್ಕಿಲ್ಲ.
ಆದರೂ ಯಾವತ್ತೂ ದೇವೇಗೌಡರನ್ನು ಹಗುರವಾಗಿ ಕಂಡವರಲ್ಲ ಮತ್ತು ಮಾತನಾಡಿದವರೂ ಅಲ್ಲ. ಕೋಮುವಾದಿ ಬಿಜೆಪಿಯ ಸಹವಾಸವೇ ಬೇಡ ಎಂದು ತಾವು ಹಲವು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಶಪಥವನ್ನು ಮುರಿದು ಜೆಡಿಎಸ್-ಬಿಜೆಪಿ ಮೈತ್ರಿಗೆ ಅಂಕಿತ ಹಾಕಿ ಆ ನಿಟ್ಟಿನಲ್ಲಿ ದೇವೇಗೌಡರು ಮುಂದುವರಿಯಲು ಈ ಒಂದು ಅಂಶವೂ ಪ್ರಮುಖ ಕಾರಣ ಎಂಬುದನ್ನು ದೇವೇಗೌಡರ ಆಪ್ತ ವಲಯದಲ್ಲಿದ್ದವರು ಹೇಳುತ್ತಾರೆ.
ಕೇವಲ ೪೬ ಸಂಸದರ ಸಂಖ್ಯಾಬಲದೊಂದಿಗೆ ಕಾಂಗ್ರೆಸ್ ಸೇರಿದಂತೆ ೧೩ ಪಕ್ಷಗಳ ಸಂಸದರನ್ನು ಒಟ್ಟು ಸೇರಿಸಿಕೊಂಡು ೧೯೯೬ರಲ್ಲಿ ಪ್ರಧಾನಿ ಹುದ್ದೆಗೇರಿದ
ಎಚ್.ಡಿ.ದೇವೇಗೌಡರು ೧೧ ತಿಂಗಳ ಅಡಳಿತದ ಬಳಿಕ ಅಂದರೆ ೧೯೯೭ರ ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಎದುರಾಯಿತು. ದೇಶವನ್ನು
ಕಾಡುತ್ತಿದ್ದ ನಾಗಾ ಸಮಸ್ಯೆ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದರಿಂದ ಕಾಂಗ್ರೆಸ್ ದೇವೇಗೌಡರ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದು ಕೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲ ನೀಡುವುದಾಗಿ ಹೇಳಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಂತೆ ದೇವೇಗೌಡರನ್ನು ಕೇಳಿಕೊಂಡಿತ್ತು.
ಆದರೆ, ಕೋಮುವಾದಿ ಪಕ್ಷದ ಸಹವಾಸವೇ ಬೇಡ ಎಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಬಿಜೆಪಿ ಮೇಲಿನ ಸಿಟ್ಟು ಅಷ್ಟಕ್ಕೇ
ಸಮೀತವಾಗಿರಲಿಲ್ಲ. ಕರ್ನಾಟಕ ವಿಧಾನಸಭೆಯಲ್ಲಿ ೨೦೦೪ರ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ
ದೂರವಿಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗುವಂತೆ ನೋಡಿಕೊಂಡರು. ೨೦೦೬ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರೊಂದಿಗೆ ಮೈತ್ರಿಯಿಂದ ಹೊರಬಂದು ಬಿಜೆಪಿ ಜತೆ ಸೇರಿ ಸರಕಾರ ರಚಿಸಿದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪುತ್ರನ ಜತೆ ಮಾತು ಬಿಟ್ಟಿದ್ದರು. ಆದರೆ, ಒಪ್ಪಂದದಂತೆ ೨೦೦೮ರಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪದೆ ಸರಕಾರ ಉರುಳುವಂತೆ ಮಾಡಿದರು. ಅಷ್ಟರ ಮಟ್ಟಿಗೆ ದೇವೇಗೌಡರು ಬಿಜೆಪಿ ವಿರುದ್ಧ ಇದ್ದರು. ಇನ್ನು ೨೦೧೮ರಲ್ಲಿ ಅತಂತ್ರ ವಿಧಾನಸಭೆ ಎದುರಾದರೆ ಬಿಜೆಪಿ-ಜೆಡಿಎಸ್ ಸೇರಿ ಸರಕಾರ ರಚಿಸಲಿದೆ ಎಂಬುದು ಬಹುತೇಕ ಖಚಿತವಾಗಿದ್ದರೂ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಪುತ್ರ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿದರು.
ದೇವೇಗೌಡರು ಮನಸ್ಸು ಮಾಡಿದರೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡೇ ಪುತ್ರನನ್ನು ಮುಖ್ಯಮಂತ್ರಿ ಮಾಡಬಹುದಿತ್ತು ಇಲ್ಲವೇ ೨೦೧೯ರ ಲೋಕಸಭೆ
ಚುನಾವಣೆ ಬಳಿಕ ಕೇಂದ್ರದಲ್ಲಿ ಮಂತ್ರಿ ಮಾಡಬಹುದಿತ್ತು. ಆದರೆ, ಬಿಜೆಪಿಯ ಸಹವಾಸ ಬೇಡ ಎಂಬ ಕಾರಣಕ್ಕೆ ದೂರ ಉಳಿದರು. ಇಷ್ಟೆಲ್ಲಾ ಆದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೇಗೌಡರ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ೨೦೧೯ರಲ್ಲಿ ಮೋದಿ ಪ್ರಧಾನಿಯಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೇವೇಗೌಡರು ಘೋಷಿಸಿದ್ದರು. ಆದರೆ ಮತ್ತೆ ಪ್ರಧಾನಿಯಾಗುವ ಅವಕಾಶ ಮೋದಿಗೆ ಸಿಕ್ಕಿತ್ತು.
ಗೌಡರೂ ಕೊಟ್ಟ ವಗ್ದಾನದಂತೆ ನಡೆದುಕೊಳ್ಳಲು ಮುಂದಾಗಿದ್ದರು. ಆದರೆ, ನಿಮ್ಮಂಥ ಹಿರಿಯರ ಮಾರ್ಗದರ್ಶನ ಬೇಕು. ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡಬಾರದು ಎಂದು ನರೇಂದ್ರ ಮೋದಿಯವರೇ ಸುಮಾರು ೧೫ ನಿಮಿಷ ಮನವೊಲಿಸಿ ರಾಜೀನಾಮೆ ನೀಡದಂತೆ ಮನವೊಲಿಸಿದ್ದರು. ಇವರಿಬ್ಬರ ಬಾಂಧವ್ಯ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಪ್ರಧಾನಿಯವರನ್ನು ಕಾಣಲು ಅವರ ಕಾರ್ಯಾಲಯಕ್ಕೆ ಹೋದಾಗ ಸ್ವತಃ ಬಾಗಿಲಿಗೆ ಬಂದ ನರೇಂದ್ರ
ಮೋದಿ, ದೇವೇಗೌಡರನ್ನು ಕೈಹಿಡಿದು ಒಳಗೆ ಕರೆದೊಯ್ದು ಅವರ ಆಸನದಲ್ಲಿ ಕೂರಿಸಿ ಬಳಿಕ ತಾವು ಆಸೀನರಾಗಿದ್ದರು. ಇಂತಹ ಅದೆಷ್ಟೋ ಅನುಭವಗಳು
ದೇವೇಗೌಡರಿಗೆ ಆಗಿದೆ. ಈ ಅಂಶಗಳೇ ಬಿಜೆಪಿ ಜತೆ ಮೈತ್ರಿ ವಿಚಾರದಲ್ಲಿ ದೇವೇಗೌಡರ ಮನಃಪರಿವರ್ತನೆಗೆ ಕಾರಣವಾಗಿದೆ ಎಂಬುದು ಅತಿಶಯೋಕ್ತಿಯಲ್ಲ.
ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಯೋಚನೆಯನ್ನು ದೇವೇಗೌಡರ ಮನಸ್ಸಿನಲ್ಲಿ ಮೂಡುವಂತೆ ಮಾಡಿದ್ದು ೨೦೨೩ರ ವಿಧಾನಸಭೆ
ಚುನಾವಣೆ ಫಲಿತಾಂಶ.
ಕೇವಲ ೧೯ ಸ್ಥಾನಗಳನ್ನು ಪಡೆದು ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದ ಜೆಡಿಎಸ್‌ಅನ್ನು ಉಳಿಸಿಕೊಳ್ಳಲು ದೇವೇಗೌಡರಿಗೆ ಒಂದು ಆಸರೆ ಬೇಕಿತ್ತು. ಕಾಂಗ್ರೆಸ್ ಜತೆ ಮೃದುವಾಗಿದ್ದು ರಾಜಕಾರಣ ಮಾಡೋಣ ಎಂದರೆ ಅಂತಹ ಪರಿಸ್ಥಿತಿ ಇರಲಿಲ್ಲ. ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಾಗಲೆಲ್ಲಾ ಜೆಡಿಎಸ್ ಸಾಕಷ್ಟು ಸಮಸ್ಯೆ ಎದುರಿಸಿದ್ದು ಮಾತ್ರವಲ್ಲ, ತನ್ನ ಶಕ್ತಿಯನ್ನೂ ಕಳೆದುಕೊಂಡಿತ್ತು. ಸರಿಸುಮಾರು ೨ ದಶಕದಿಂದ ಇದು ಪದೇಪದೆ ಸಾಬೀತಾದರೂ
ಬಿಜೆಪಿಯ ಸಹವಾಸ ಮಾಡಬಾರದು, ಅದನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ದೇವೇಗೌಡರು ಮತ್ತೆ ಮತ್ತೆ ಕಾಂಗ್ರೆಸ್ ಜತೆ
ಹೋಗುತ್ತಿದ್ದರು. ಒಮ್ಮೆ ಅವಮಾನವಾದರೂ, ಮಾಜಿ ಪ್ರಧಾನಿ ಎಂಬ ಗೌರವ ಸಿಗದಿದ್ದರೂ ಅದನ್ನು ಮರೆತು ಮತ್ತೊಮ್ಮೆ ಕೈಜೋಡಿಸಿದರು.
ಆಗ ನೆನಪಾಗಿದ್ದು ಬಿಜೆಪಿ. ಯಾವ ಅಲ್ಪಸಂಖ್ಯಾತರ ಮತ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿಯನ್ನು ದೂರವಿಟ್ಟು ತಮ್ಮ ಜಾತ್ಯತೀತ ಸಿದ್ಧಾಂತವನ್ನು ಉಳಿಸಿಕೊಂಡರೋ, ಅದೇ ಅಲ್ಪಸಂಖ್ಯಾತರು ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಕೈಕೊಟ್ಟರು. ಆದರೆ, ಈ ಅಲ್ಪಸಂಖ್ಯಾತರ ಮತ ಇಲ್ಲದಿದ್ದರೂ ಪರವಾಗಿಲ್ಲ ಎನ್ನುತ್ತಿರುವ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ತನ್ನ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಅವರಿಗೆ ಸ್ಪಷ್ಟವಾಗಿತ್ತು. ಹಾಗೆಂದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಹಿಂದುತ್ವವನ್ನು ಪ್ರತಿಪಾದಿಸುತ್ತಲೇ ಬೆಳೆಯುತ್ತಾ
ಬಂದಿತ್ತು. ಹೀಗಿರುವಾಗ ಜಾತ್ಯತೀತ ಎಂಬ ಹಣೆಪಟ್ಟಿಯೊಂದಿಗೆ ಒಂದು ಸಮುದಾಯವನ್ನು ಓಲೈಸುವ ರಾಜಕಾರಣದಿಂದ ಗೆಲುವು ಸಾಧ್ಯವಿಲ್ಲ ಎಂಬುದು ದೇವೇಗೌಡರಿಗೆ ಸ್ಪಷ್ಟವಾಗಿತ್ತು. ಏಕೆಂದರೆ, ಜೆಡಿಎಸ್‌ನ ಮತಬ್ಯಾಂಕ್ ಆಗಿದ್ದುದು ಒಕ್ಕಲಿಗರು ಮತ್ತು ಅಲ್ಪಸಂಖ್ಯಾತರು ಮಾತ್ರ. ಈ ಪೈಕಿ ಅಲ್ಪಸಂಖ್ಯಾತರ ಮತಗಳು ಸಂಪೂರ್ಣ ಕೈತಪ್ಪಿದ್ದರಿಂದ ಇನ್ನು ತಮ್ಮ ಜಾತ್ಯತೀತ ಸಿದ್ಧಾಂತ ಪಕ್ಷಕ್ಕೆ ಲಾಭ ತಂದುಕೊಡುವುದಿಲ್ಲ ಎಂಬುದು ಗೊತ್ತಾಗಿತ್ತು.
ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಪರ ವಕಾಲತ್ತು ವಹಿಸುವ ಪಕ್ಷಗಳೆಲ್ಲವೂ ಒಟ್ಟಾಗಿ ಐಎನ್ ಡಿಐಎ ಕೂಟ ರಚಿಸಿಕೊಂಡರೂ ಪ್ರಧಾನಿ ನರೇಂದ್ರ
ಮೋದಿ ಜನಪ್ರಿಯತೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಹಣಿಯಲು ಬಿಜೆಪಿಗೂ ಒಬ್ಬ ಜತೆಗಾರಬೇಕಿತ್ತು. ಬಿಜೆಪಿ ಜತೆ ಸೇರಿದರೆ ತನಗೆ ಗೌರವ ಸಿಗುತ್ತದೆ ಎಂಬುದು ನರೇಂದ್ರ ಮೋದಿ ಅವರಿಂದಾಗಿ ದೇವೇಗೌಡರಿಗೆ ಖಚಿತವಾಗಿತ್ತು. ಹೀಗಾಗಿ ಮೈತ್ರಿಗೆ ಒಪ್ಪಿಕೊಂಡು ತಾವೇ ಪೌರೋಹಿತ್ಯ ವಹಿಸಿ ಮೊದಲು ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು.
ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಬಳಿಕ ಜೆಡಿಎಸ್ ಬೆಳೆಸಲು ಮಕ್ಕಳಿಗೆ ಬಿಜೆಪಿಯಾದರೂ ನೆರವಾಗುತ್ತದೆ ಎಂಬ
ಉದ್ದೇಶ ಇದರ ಹಿಂದಿದೆ. ಈ ಭೇಟಿಯಿಂದ ದೇವೇಗೌಡರು ಮತ್ತು ಅವರ ಮಕ್ಕಳು ಎಷ್ಟು ಖುಷಿಯಾಗಿದ್ದಾರೆ ಎಂದರೆ, ಮೈತ್ರಿ ಬಳಿಕ ಸ್ಥಾನ ಹೊಂದಾಣಿಕೆ ದೊಡ್ಡ ವಿಷಯವೇ ಅಲ್ಲ ಎನ್ನುವಷ್ಟು. ಪ್ರಧಾನಿಯನ್ನು ಭೇಟಿಯಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ.
ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು, ಅದನ್ನು ನಾವು ಉಳಿಸಿಕೊಳ್ಳಬೇಕು. ಮೂರನೇ ಅವಧಿಗೆ ನರೇಂದ್ರ
ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ದೇವೇಗೌಡರ ಸಹಮತ ಇಲ್ಲದೆ ಕುಮಾರಸ್ವಾಮಿ ಅಂತಹ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ಬಿಜೆಪಿಯ ಸಹವಾಸ ಬೇಡ ಎಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದವರು, ನರೇಂದ್ರ
ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದವರು, ಇದೀಗ ಅವರನ್ನು ಮತ್ತೊಮ್ಮೆ ಪ್ರಧಾನಿ
ಮಾಡಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದಾದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೋದಿ ಫ್ಯಾಕ್ಟರ್ ಎಷ್ಟು ಕೆಲಸ ಮಾಡಿದೆ ಎಂಬುದು ಅರ್ಥವಾಗುತ್ತದೆ.
ಲಾಸ್ಟ್ ಸಿಪ್: ಅಧಿಕಾರಕ್ಕಾಗಿ ಅಲ್ಪಸಂಖ್ಯಾತರ ತುಷ್ಠೀಕರಣದ ಜಾತ್ಯತೀತ ರಾಜಕಾರಣಕ್ಕಿಂತ ಬಹುಸಂಖ್ಯಾತರ ಪರ ಎಂಬ ಕೋಮುವಾದಿ ರಾಜಕಾರಣವೇ ಮೇಲು!