ಸುಪ್ತ ಸಾಗರ
rkbhadti@gmail.com
ಹಾಗೆ ನೋಡಿದರೆ, ಬೇರೆಯವರಿಗಿಂತ ಅವರಿಗೆ ಬಹಳ ದೊಡ್ಡ ಜಮೀನೇನೂ ಇಲ್ಲ. ಇರುವುದು ಹತ್ತೇ ಎಕರೆ, ಆದರೆ ಆ ಜಾಗದಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲವೆಂದು ಹುಡುಕಬೇಕು. ಬಹುತೇಕ ತೋಟಗಾರಿಕೆ ಬೆಳೆಗಳನ್ನೇ ಹೆಚ್ಚಾಗಿ ನಂಬಿರುವ, ಜನಾರ್ದನರದ್ದು ಕಾಡು ಕೃಷಿಯೂ ಹೌದು, ಸಹಜ ಕೃಷಿಯೂ ಹೌದು.
ಸುತ್ತಲಿನ ರೈತರೆಲ್ಲ ಇಡೀ ದಿನ ದುಡಿಯುತ್ತ, ಹೊಲದಲ್ಲಿ ಬೆವರು ಸುರಿಸುತ್ತ, ಕೀಟ, ರೋಗ ಬಾಧೆಗಳನ್ನು ನಿಯಂತ್ರಿಸಲಾಗದೇ ಪರಡಾಡುತ್ತ, ಗೊಬ್ಬರ – ಕೀಟ ನಾಶಕಕ್ಕಾಗಿ ಮೈತುಂಬ ಸಾಲ ಮಾಡಿಕೊಂಡು, ಹೊಟ್ಟೆ ತುಂಬ ಊಟ ಮಾಡಲಾರದೇ, ರಾತ್ರಿ ಕಣ್ಣುತುಂಬ ನಿದ್ದೇ ಮಾಡದೇ, ಮಡದಿ ಮಕ್ಕಳ
ಮೈಮೇಲೂ ವರ್ಷಗಟ್ಟಲೆ ಹೊಸ ಬಟ್ಟೆ ಕಾಣದೇ, ಯಾಕಾದರೂ ಈ ಕೃಷಿಯ ಸಹವಾಸ ಬೇಕಪ್ಪಾ ಎಂದು ಗೊಣಗುತ್ತಿದ್ದರೆ, ಈತ ಮಾತ್ರ ನೆಮ್ಮದಿ ಯಿಂದ ಹಾಲು- ಹೈನಿನ ಹೊಳೆಯಲ್ಲಿ ಮುಳುಗೇಳುತ್ತ ಹೆಂಡತಿ-ಮಕ್ಕಳೊಡನೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ.
ಅವತ್ತು ಮಧ್ಯಾಹ್ನ ಕರೆ ಮಾಡಿದಾಗಲೂ ಹೆಂಡತಿ ಬಡಿಸುತ್ತಿದ್ದ ಅವಳದೇ ಕೈಯಡುಗೆಯ ಸವಿಯುಣ್ಣುತ್ತಿದ್ದರು. ಹಾಗಂತ ಅವರು ಮಾಡುತ್ತಿದ್ದುದೂ ಕೃಷಿಯನ್ನೇ, ಕೃಷಿಯಲ್ಲಿ ನೆಮ್ಮದಿಯಾಗಿದ್ದೇನೆ. ನಮ್ಮ ತೋಟದಲ್ಲಿ ಯಾವತ್ತಿಗೂ ಗೆಯ್ಮೆಯೇ ಇಲ್ಲ. ಹೇಳಿಕೊಳ್ಳುವಂಥ ಕೆಲಸ ಇಲ್ಲ. ಇರುವ ಹತ್ತೆಕರೆ ಜಮೀನಿನಲ್ಲಿ ಹಸಿರು ತುಂಬಿ ತೊನೆದಾಡುತ್ತದೆ. ಸದಾ ಒಂದಲ್ಲ ಒಂದು ಬೆಳೆ ಇದ್ದೇ ಇರುತ್ತದೆ. ಐದು ಪೈಸೆ ಖರ್ಚು ಮಾಡದೇ, ಏನೂ ಕೆಲಸ ಮಾಡದೇ
ವರ್ಷಕ್ಕೆ ೮-೧೦ ಲಕ್ಷ ರು. ಆದಾಯ ಬರುತ್ತದೆ. ಖರ್ಚಿಲ್ಲ ಎಂದ ಮೇಲೆ ಬರುವುದೆಲ್ಲವೂ ಲಾಭವೇ. ಇದ್ದ ಒಂದು ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇನೆ.
ಹೆಂಡತಿ ಇಬ್ಬರು ಗಂಡುಮಕ್ಕಳೊಂದಿಗೆ ತಿಂದುಂಡುಕೊಂಡು ನೆಮ್ಮದಿಯಾಗಿ ಸಂತೃಪ್ತ ಜೀವನ ನಡೆಸುತ್ತಿದ್ದೇವೆ. ಇದಕ್ಕಿಂತ ಸುಖದ ನಮಗೆ ಇನ್ನೇನೂ ಬೇಕಿಲ್ಲ’ ಕೃಷಿಕ ಜನಾರ್ದನ್ ಆಡುವ ಮಾತುಗಳನ್ನು ಕೇಳಿದರೆ, ಎಂಥವರಿಗೂ ಹೊಟ್ಟೆ ಕಿಚ್ಚಾಗುತ್ತದೆ. ಅವರ ತೋಟದ ಸಮೃದ್ಧತೆಯನ್ನು ಕಂಡರೆ ಬೆರಗಿನೊಂದಿಗೆ ಅಸೂಯೆ ಹುಟ್ಟುತ್ತದೆ. ಹಾಗೆ ನೋಡಿದರೆ, ಬೇರೆಯವರಿಗಿಂತ ಅವರಿಗೆ ಬಹಳ ದೊಡ್ಡ ಜಮೀನೇನೂ ಇಲ್ಲ. ಇರುವುದು ಹತ್ತೇ ಎಕರೆ,
ಆದರೆ ಆ ಜಾಗದಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಏನಿಲ್ಲವೆಂದು ಹುಡುಕಬೇಕು.
ಬಹುತೇಕ ತೋಟಗಾರಿಕೆ ಬೆಳೆಗಳನ್ನೇ ಹೆಚ್ಚಾಗಿ ನಂಬಿರುವ, ಜನಾರ್ದನರದ್ದು ಕಾಡುಕೃಷಿಯೂ ಹೌದು, ಸಹಜ ಕೃಷಿಯೂ ಹೌದು. ತುಮಕೂರು ಜಿಲ್ಲೆಯ, ಮೂಲಿಕಾ ಅರಣ್ಯ ಸುಪ್ರಸಿದ್ಧ ಸಿದ್ಧರಬೆಟ್ಟದ ತಪ್ಪಲಿನ ಇರುವ ಜುಂಜರಾಮನಹಳ್ಳ ಎಂಬ ಕುಗ್ರಾಮದಲ್ಲಿರುವ ಅವರ ತೋಟಕ್ಕೆ ನೇಗಿಲನ್ನು
ತಾಗಿಸಿ ಇವತ್ತಿಗೆ ಬರೋಬ್ಬರಿ ಇಪ್ಪತ್ತು ವರ್ಷಗಳಾದವಂತೆ. ಶಾರದಾಮಠಕ್ಕೆ ಹೊಂದಿಕೊಂಡಂತೇ ಇರುವ ಜನಾರ್ದನರ ತೋಟಕ್ಕೆ ಅವರು ಕಡು ಬೇಸಿಗೆ ಯಲ್ಲೂ ನೀರು ಹಾಯಿಸುವುದು ತಿಂಗಳಿಗೆ ಒಮ್ಮೆಯೋ, ಎರಡು ಬಾರಿಯೋ ಅಷ್ಟೆ. ಅದೂ ಹನಿ ನಿರಾವರಿ ತಂತ್ರeನದ ಮೂಲಕ ತೀರಾ ಕಡಿಮೆ
ನೀರನ್ನು ಕಾಣಿಸುತ್ತಾರೆ.
ಹಾಗೆಂದು ಯಾವತ್ತಿಗೂ ಅವರ ಬೆಳೆಗಳು ಒಣಗಿರುವುದಿರಲಿ, ಚಂಡೆ ಕೆಂಪಾಗಿದ್ದೂ ಕಾಣಲಿಲ್ಲ. ‘ಕೃಷಿ ಎಂದರೆ, ಸಾಲ, ಸಂಕಷ್ಟ, ನಷ್ಟ, ಮೈ ತುಂಬಾ
ಕೆಲಸ- ಈ ಮಾತು ಎಲ್ಲೆಡೆ ಕೇಳಿ ಬರುತ್ತದೆಯ? ನೀವು ನೋಡಿದರೆ ಯಾವುದೇ ಟೆನ್ಷನ್ ಇಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದೀರ? ಕೃಷಿಯಲ್ಲಿ ಇಷ್ಟು ಆರಾಮಾಗಿ ಇರಲೂ ಸಾಧ್ಯವೇ?’ ಎಂದು ಕೇಳಿದರೆ ಜನಾರ್ದನ್ ನಗುತ್ತಾರೆ. ‘ಕೃಷಿ ಕಸುಬೆಂದರೆ ಒಂಥರಾ ಶುದ್ಧ ಹಾಲಿದ್ದಂತೆ. ಕಾಯಿಸಿ ಬೆಲ್ಲ ಬೆರೆಸಿ ನೆಮ್ಮದಿಯಾಗಿ ಕುಡಿಯುವ ಬದಲು ನಾವೇ ಹುಳಿ ಹಿಂಡಿಕೊಂಡು ಕೆಡಿಸಿಕೊಳ್ಳುತ್ತೇವೆ.
ಇಪ್ಪತ್ತು ವರ್ಷಗಳ ಹಿಂದೆ ನಾನೂ ಹೀಗೆಯೇ ಅನಗತ್ಯ ಒತ್ತಡದಲ್ಲಿ ಬಳಲುತ್ತಿದ್ದೆ. ಯಾವುದೋ ರೋಗ-ಕೀಟ ಬಂದು ಇಳುವರಿ ಹಾಳಾಯಿತು, ಯಾವುದೋ ಹಸು-ಮೇಕೆ ಬಂದು ಬೆಳೆಗಳನ್ನು ತಿಂದವು, ಇನ್ಯಾವುದೋ ಕಾಡು ಪ್ರಾಣಿ ನುಗ್ಗಿ ಹಾಳು ಮಾಡಿದವು, ಮತ್ಯಾರೋ ನುಗ್ಗಿ -ಸಲು ಕಳ್ಳತನ ಮಾಡಿ ದರು… ಹೀಗೆಯೇ ಹಗಲೂ ರಾತ್ರಿ ಪರದಾಡುತ್ತಲೇ ಇದ್ದೆ. ಇಷ್ಟು ಸಾಲದೆಂಬಂತೆ, ಮಳೆ ಬಿತ್ತು ಹೊಲವನ್ನು ಉಳಬೇಕು, ಕಳೆ ಹೆಚ್ಚಾಯಿತು ಕೀಳಬೇಕು, ಗೊಬ್ಬರ ತರಲು ಹಣವಿಲ್ಲ, ಸಾಲ ಕೇಳಬೇಕು. ಅಯ್ಯೋ ನೀರಿಲ್ಲದೇ ಬೆಳೆ ಒಣಗಿತು, ಮಳೆ ಹೆಚ್ಚಾಗಿ ಬೇರು ಕೊಳೆತು ಹೋಯಿತು, ಮಾರು ಕಟ್ಟೆ ಬಿದ್ದು ಹೋಗಿ ಆದಾಯವೇ ಇಲ್ಲ, ಒಂದು ವರ್ಷ ಹೊಟ್ಟೆಗೇನು ಮಾಡಬೇಕು … ಹೀಗೆಯೇ ಒಂದಲ್ಲ ಒಂದು ಚಿಂತೆಯಲ್ಲಿಯೇ ಮುಳುಗಿರುತ್ತಿದ್ದೆ.
ಆದರೆ ಅವತ್ತೊಂದು ದಿನ ಸಹಜ ಕೃಷಿಯ ಮೌಲ್ಯ ಅರಿವಾಯಿತು. ಅವತ್ತೇ ನಿಸರ್ಗದ ಜತೆ ಒಂದಾಗಿ ಬದುಕಲು ಕಲಿಯ ತೊಡಗಿದೆ. ನಾನು ಹುಡುಕುತ್ತಿದ್ದ ನೆಮ್ಮದಿ ತನ್ನಿಂದ ತಾನೇ ನನ್ನನ್ನು ಹುಡುಕಿಕೊಂಡು ಬಂತು’ ಹೌದು, ಅವರು ಸಹಜ ಕೃಷಿ (ತೋಟಗಾರಿಕೆಗೆ) ಪದ್ಧತಿ ಅಳವಡಿಸಿ ಕೊಂಡಿದ್ದಾರೆ.
ಎರಡು ದಶಕಗಳಿಂದ ತೋಟದಲ್ಲಿ ಉಳುಮೆ ನಿಲ್ಲಿಸಿದ್ದಾರೆ. ಆ ಕೆಲಸವನ್ನು ನೆಲದಲ್ಲಿ ಜೀವಿಸುವ ಕೋಟ್ಯಂತರ ಸೂಕ್ಷ್ಮಾಣುಗಳಿಗೆ ವಹಿಸಿzರೆ. ಅಂಥ ಜೀವಿಗಳ ಸಂಖ್ಯೆ ಕಡಿಮೆಯಾಗದಂತೆ ಜೋಪಾನವಾಗಿ ಮುಚ್ಚಿಗೆ ಮಾಡಿ ಕಾಪಾಡುವುದಷ್ಟೇ ಇವರ ಕೆಲಸ. ಉಳುಮೆಗೆಂದೇ ವರ್ಷಕ್ಕೆ ಖರ್ಚು ಮಾಡುತ್ತಿದ್ದ ೫೦ ಸಾವಿರ ರು. ಇದರಿಂದ ಉಳಿತಾಯವಾಗಿದೆ. ತೋಟದಲ್ಲಿ ಬೆಳೆದ ಕಳೆಯನ್ನು ಎರಡು ದಶಕಗಳಲ್ಲಿ ಎಂದೂ ಕಿತ್ತಿಲ್ಲ. ಹೆಚ್ಚೆಂದರೆ ತೀರಾ ಎತ್ತರ ಬೆಳೆದಾಗ ಕತ್ತರಿಸಿ ತೋಟಕ್ಕೇ ಮುಚ್ಚುತ್ತಾರೆ. ಮಣ್ಣಿನೊಂದಿಗೆ ಮಲ್ಚಿಂಗ್ ಮಾಡುತ್ತಾರೆ. ಇಂದು ಅವರ ತೋಟದಲ್ಲಿ ಓಡಾಡುತ್ತಿದ್ದರೆ ಮೆತ್ತನೆಯ ಸ್ಪಂಜಿನಂಥ ಅನುಭವ. ಮೂರರಿಂದ ನಾಲ್ಕು ಅಡಿ, ಕಳೆ-ತ್ಯಾಜ್ಯದ ಹಾಸಿದೆ. ಅದರ ಮೇಲೆ ಹಟ್ಟಿಯ ಸಗಣಿ-ಗೋಮೂತ್ರ ಚೆಲ್ಲುತ್ತಾರೆ.
ಹೀಗಾಗಿ ಬೇರೆ ಗೊಬ್ಬರವೇ ಬೇಕಿಲ್ಲ. ತೋಟದ ಮಣ್ಣಿನಲ್ಲಿ ಎರೆಹುಳು ಸೇರಿದಂತೆ ಸಮೃದ್ಧ ಜೀವಿಗಳು ಲಾಸ್ಯವಾಡುತ್ತಿವೆ. ನೆಲದ ಮಣ್ಣನ್ನು ಹಿಡಿದು ಅದರಲ್ಲಿರುವ ಜೀವಿಗಳನ್ನು ತೋರಿಸುತ್ತಾರೆ ಜನಾರ್ದನ್. ಜನಾರ್ದನರ ತೋಟದಲ್ಲಿ ಸಾವಿರ ಅಡಕೆ ಮರಗಳಿವೆ. ಇನ್ನೂರು ತೆಂಗಿನ ಮರಗಳಿವೆ. ನಡು ನಡುವೆ ಬಾಳೆ ಬೆಳೆದಿದೆ. ನೂರಕ್ಕೂ ಹೆಚ್ಚು ಹುಣಸೆ ಮರಗಳಿವೆ. ಹಲಸು, ನುಗ್ಗೆ, ಮಾವು, ಪೇರಲೆ, ಚಿಕ್ಕೂ, ಲಿಂಬೆ, ಹೇರಳೆ, ಸೀತಾಫಲ ಹೀಗೆ ಬೆಳೆ ವೈವಿಧ್ಯದ ಶ್ರೀಮಂತಿಕೆ ಹತ್ತಕೆರೆಯಲ್ಲೂ ತುಂಬಿ ನಿಂತಿದೆ. ಯಾವುದಕ್ಕೂ ಗೊಬ್ಬರ-ನೀರಿನ ಶಿಸ್ತು ಕಲಿಸಿಲ್ಲ.
ಇವರು ಹಾಕಿದಾಗ ಅವು ಪಡೆಯಬೇಕು. ಹಾಗೆಂದು ಯಾವತ್ತಿಗೂ ತೋಟವನ್ನು ಒಣಗಲು, ಬರಡಾಗಲು ಬಿಟ್ಟಿಲ್ಲ. ನಿಸರ್ಗ ಸಹಜವಾಗಿಯೇ ಅವೆಲ್ಲವೂ ಬೆಳೆಗಳಿಗೆ ದಕ್ಕುವಂತೆ ಮಾಡಿದ್ದಾರೆ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಕೈ ಹಿಡಿಯುತ್ತದೆ. ಒಂದಕ್ಕೆ ದರ ಕುಸಿದರೆ ಇನ್ನೊಂದರಲ್ಲಿ ಲಾಭ ಬರುತ್ತದೆ. ಹೀಗಾಗಿ ಬದುಕಿಗೇನು ಎಂಬ ಚಿಂತೆಯೇ ಇಲ್ಲ- ಮುಗುಳು ನಗುತ್ತಾರೆ ಅವರು. ತೋಟದ ಸುತ್ತಲಿನ ಬೆಟ್ಟದ ನೀರು ಬಸಿದು ಹೋಗದಂತೆ ತಡೆದು, ಎರಡು ಬಾವಿಯಲ್ಲಿ ಇಂಗಿಸುತ್ತಾರೆ. ದೊಡ್ಡ ಬಾವಿ ತುಂಬಿದ ಬಳಿಕ ಸಣ್ಣದಕ್ಕೆ ಹೋಗಿ ಸೇರುತ್ತದೆ. ಜಮೀನಿನಲ್ಲಿ ಒಂದು ಬೋರ್ವೆಲ್ ಇದೆ. ಅದಕ್ಕೂ ಮಳೆ ನೀರು ಕುಡಿಸುತ್ತಾರೆ.
ಹೀಗಾಗಿ ಪಕ್ಕದ ಜಮೀನುಗಳಲ್ಲಿ ೮೦೦-೧೦೦೦ ಅಡಿ ಕೊರೆದರೂ ಸಿಗದ ನೀರು, ಇವರಿಗೆ ೮೦ ಅಡಿಗೇ ದಕ್ಕುತ್ತದೆ. ‘ನಮ್ಮ ತೋಟಕ್ಕೆ ನೀರು ಕೊಡುವ ಬಾವಿ ಎಂದೂ ಬತ್ತುವುದಿಲ್ಲ. ಮೇ ಜೂನ್ ತಿಂಗಳಲ್ಲಿ ನೀರು ಸ್ವಲ್ಪ ಕಡಿಮೆಯಾಗುತ್ತದೆ, ಅಷ್ಟೇ. ಸರಾಸರಿ ಮಳೆಯಾದರೆ ಸಾಕು ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಬಾವಿ ತುಂಬುತ್ತದೆ. ಒಮ್ಮೆ ತುಂಬಿದರೆ ಶಿವರಾತ್ರಿವರೆಗೆ ಈ ಬಾವಿಯಿಂದಲೇ ತೋಟಕ್ಕೆ ನೀರುಣಿಸುತ್ತೇವೆ. ಇದು ನಮ್ಮ ಪೂರ್ವಿಕರು ಕಟ್ಟಿಸಿದ ಬಾವಿ. ತೆರೆದ ಬಾವಿಗೂ – ಕೊಳವೆ ಬಾವಿಗೂ ಭೂಮಿಯಡಿ ಸಂಪರ್ಕವಿದೆ. ಇಡೀ ತೋಟಕ್ಕೆ ಡ್ರಿಪ್ ಮೂಲಕ ನೀರು
ಪೂರೈಸುತ್ತೇವೆ. ದಿನಕ್ಕೆ ನಾಲ್ಕೈದು ಗಂಟೆ ಕರೆಂಟ್ ಇರುತ್ತದೆ.
ಹಾಗಾಗಿ ಅಷ್ಟು ಅವಽಯ ಹತ್ತು ಎಕರೆ ನೀರು ಹಂಚುತ್ತೇವೆ.’ ಎಂದು ವಿವರಿಸುತ್ತಾರೆ. ಮನೆಯ ನಾಟಿ ಹಸುಗಳ ಅವರ ತೋಟದ ಮೇಯ್ದು ಸಮೃದ್ಧವಾಗಿವೆ. ಸಾಲದಕ್ಕೆ ಹಾವು-ಮುಂಗುಸಿ-ಗಿಣಿ- ನವಿಲು ಹೀಗೆ ಪುಟ್ಟ ಪ್ರಾಣಿ ಸಂಗ್ರಹಾಲಯವೇ ನಿರ್ಮಾಣ ವಾಗಿದೆ. ಪರಸ್ಪರ ಅವುಗಳ ಸಂಖ್ಯೆಯನ್ನೇ ಅವು ನಿಯಂತ್ರಿಸಿಕೊಂಡು ಸಮತೋಲನ ಕಾಪಾಡುತ್ತವೆ. ತೋಟದ ಬದುವಿನಲ್ಲಿ ‘ಮರ ಆಧಾರಿತ’ ಕೃಷಿಗೆ ಚಟುವಟಿಕೆಗೆ ಪೂರಕ
ವಾಗಿ ಹೆಬ್ಬೇವು, ಸಿಲ್ವರ್ ಓಕ್, ತೇಗ, ಸೀಗೆ, ಬೆಟ್ಟತಂಗಡಿ (ಕರಿಮರ), ಬಿಲ್ವಾರದಂಥ ಕಾಡು ಮರಗಳೂ ಇವೆ. ಇವೆಲ್ಲದರಿಂದ ಫಕ್ಕನೆ ನೋಡುವವರಿಗೆ ಅದು ಪುಟ್ಟ ಕಾಡಿನಂತೆಯೇ ಕಾಣುತ್ತದೆ. ಆದರೆ ಆ ಕಾಡು ಯಾವತ್ತಿಗೂ ಜನಾರ್ದನರನ್ನು ಕಾಡಿಸಿಲ್ಲ.
‘ತೋಟದ ಅರ್ಧ ಭಾಗದಲ್ಲಿರುವ ಅಡಕೆ, ತೆಂಗು, ಬಾಳೆಗೆ ಸದಾ ನೀರು ಬೇಕು. ಹೀಗಾಗಿ ಆ ಭಾಗದಲ್ಲಿ ತೇವಾಂಶ ಹಿಡಿದಿಡುವ ಕ್ರಮಗಳನ್ನು ಹೆಚ್ಚಾಗಿ ಕೈಗೊಂಡಿದ್ದೇನೆ. ಕಳೆಗಳೇ ತೇವ ಹಿಡಿದಿಡುತ್ತವೆ. ಸುತ್ತಲಿನ ಮರಗಳೂ ತೋಟವನ್ನು ತಂಪಾಗಿಡುತ್ತವೆ’ ಸಹಜ ಕೃಷಿಯ ಲಾಭಗಳನ್ನು ವಿವರಿಸುತ್ತಾರೆ ಜನಾರ್ದನ. ಸಹಜ ಕೃಷಿಯ ವಿಚಾರಕ್ಕೆ ಬಂದರೆ ಲಾಭ-ಆದಾಯ- ನಷ್ಟಗಳ ಲೆಕ್ಕಾಚಾರಕ್ಕೆ ಇಳಿಯಬಾರದು. ಸಾಂಪ್ರದಾಯಿಕ ಕೃಷಿಯಿಂದ ಹೊರಬರುವ ಧೈರ್ಯ ತೋರಬೇಕು. ಆರಂಭಿಕ ವರ್ಷಗಳಲ್ಲಿ ಖಂಡಿತಾ ಇಳುವರಿ ಕುಸಿಯುತ್ತದೆ. ರಾಸಾಯನಿಕಗಳಿಂದ, ಉಳುಮೆ ಮಾಡಿ ಕಳೆಕಿತ್ತು ಬೆತ್ತಲೆಯಾಗಿಸಿ ಹಾಳು ಮಾಡಿದ ಭೂಮಿ ಸರಿಯಾಗಲು ಕೆಲವು ವರ್ಷಗಳು ಹಿಡಿಯುತ್ತವೆ. ಆದರೆ ಅಂಥವುಗಳಲ್ಲಿ ಸುಸ್ಥಿರತೆ ಕಾಣುವುದು ಅಸಾಧ್ಯ. ಅದನ್ನೂ ಮೀರಿ ಮುನ್ನುಗ್ಗಬೇಕು.
ಮಣ್ಣನ್ನು ಆರೋಗ್ಯಕರವಾಗಿಸಲು ಆದ್ಯತೆ ನೀಡಬೇಕು. ಇದ್ದುದರಲ್ಲಿ ಬದುಕಲು ಕಲಿಯಬೇಕು. ಆದಾಯಕ್ಕೆ ಪೂರಕವಾಗುವ ಸುಸ್ಥಿರ ವಾತಾ ವರಣವನ್ನು ಪುರ್ನ ಸ್ಥಾಪಿಸ ಬೇಕು. ಅನಗತ್ಯ ಹೂಡಿಕೆಯನ್ನು ನಿಲ್ಲಿಸಿ, ಖರ್ಚು ಕಡಿಮೆ ಮಾಡಬೇಕು. ಆಗ ಮಾತ್ರ ನೆಮ್ಮದಿ ಕಂಡುಕೊಳ್ಳಲು ಸಾಧ್ಯ
ದೃಢವಾಗಿ ಹೇಳುತ್ತಾರೆ ಜನಾರ್ದನ್. ಕೊಯ್ಲಿನ ವೇಳೆ, ಕಳೆ ಕಟಾವು ಇಂಥ ಸಂದರ್ಭದಲ್ಲಿ ಮಾತ್ರ ಕೂಲಿ ಆಳುಗಳನ್ನು ಬಳಸಿಕೊಳ್ಳುತ್ತಾರೆ. ಉಳಿದಂತೆ
ಜನಾರ್ದನ ಜತೆ ಪತ್ನಿ ಜಯಂತಿ ಮತ್ತು ಪುತ್ರರಾದ ವಿನಯ – ಶರತ್ ಜತೆಗೂಡಿ ದುಡಿಯುತ್ತಾರೆ. ಹೀಗಾಗಿ ಕೂಲಿಯ ಖರ್ಚೂ ಇಲ್ಲ. ತೋಟದ ರಕ್ಷಣೆಗೆ ಮೂರೂವರೆ ವರ್ಷಗಳ ಹಿಂದೆಯೇ ಸೋಲಾರ್ ಬೇಲಿ ಹಾಕಿಸಿzರೆ. ಇದರಿಂದ ಕರಡಿ, ಕಾಡು ಹಂದಿ ಹಾವಳಿಯ ಭಯವಿಲ್ಲ.
ಅವು ಬಂದರೂ ಬೆಳೆಗಳಿಗೆ ಮುಚ್ಚಿದ ತ್ಯಾಜ್ಯಗಳನ್ನು ಕಾಡು ಹಣ್ಣುಗಳನ್ನು ತಿಂದು ಹೋಗುತ್ತವೆಯೇ ಹೊರತು ಬೆಳೆಗಳನ್ನು ನಾಶ ಮಾಡುವುದಿಲ್ಲ. ಸೋಲಾರ್ ಬೇಲಿ ಹಾಕಿದ ನಂತರ ಕಳ್ಳತನದ ಹಾವಳಿಯೂ ನಿಯಂತ್ರಣವಾಗಿದೆ ಎನ್ನುತ್ತಾರೆ ಜನಾರ್ದನ್. ಒಟ್ಟಿನಲ್ಲಿ, ಶೂನ್ಯ ಬಂಡವಾಳದಲ್ಲಿ
ಸಹಜವಾಗಿ ಕೃಷಿ ಮಾಡುತ್ತ, ಸಹಜವಾಗಿ ಬದುಕುತ್ತ ನೆಮ್ಮದಿಯಾಗಿದೆ ಜನಾರ್ದನ್ ಕುಟುಂಬ. ಜನಾರ್ದನ ಸಂಪರ್ಕಕ್ಕಾಗಿ: ೯೭೪೩೪೭೦೬೭೫, ೮೨೭೭೨೭೬೩೮೬ (ಸಮಯ ಸಂಜೆ ೫ ರಿಂದ ೭ ಗಂಟೆ.