Friday, 18th October 2024

ಅಂಗಳದ ಮಣ್ಣೂ ಕೊಳೆಯಾಗಿ ಕಂಡರೆ ?

ಸುಪ್ತ ಸಾಗರ

rkbhadti@gmail.com

ಅಂಗಳದ ಮಣ್ಣೂ ನಮಗೆ ಕೊಳೆಯಾಗಿ ಕಂಡರೆ ನಾವು ‘ಅನ್ನದ ದ್ವೇಷಿ’ಗಳೆಂದೇ ಅರ್ಥ. ಬರಿಗಾಲಿನಲ್ಲಿ ನಡೆವವರಿಗೆ ಮಣ್ಣು ಎಂದಿಗೂ ಕೊಳೆಯೆ ನಿಸುವುದಿಲ್ಲ; ಆದರೆ ಬೂಟುಧಾರಿಗಳ ಪಾಲಿಗೆ ಕೊಳೆಯೇ. ಗುಡಿಸಲಿನ ಸಗಣಿ ಸಾರಿಸಿದ ನೆಲದಲ್ಲಿ ಇರುವ ಮಣ್ಣು ಕೊಳಕಲ್ಲ. ಆದರೆ ಹೊಳಪಿನ ಮೊಝಾಯಿಕ್ ಜೋಡಿಸಿದ ಅಡುಗೆಮನೆ ನೆಲದ ಮೇಲೆ ಮಣ್ಣಿನ ಒಂದು ಕಣವೂ ಇರುವಂತಿಲ್ಲ.

ಎಷ್ಟು ವಿಚಿತ್ರ ಎಂದರೆ ‘ಮಣ್ಣು’ ಎಂದರೆ ಇಂದಿನ ತಲೆಮಾರಿಗೆ ‘ಕೊಳೆ’ (ಡರ್ಟ್) ಎಂಬಂತಾಗಿದೆ. ಮಕ್ಕಳು ಮಣ್ಣಿನಲ್ಲಿ ಆಡುತ್ತಿರುವುದನ್ನು ಕಂಡಾ ಕ್ಷಣವೇ ಅಮ್ಮಂದಿರು ಎರಡೇಟು ಕೊಟ್ಟು ‘ಮೈ ಕೈ ಎಲ್ಲ ಕೊಳೆ ಮಾಡ್ಕೋತಿಯಾ, ಛೀ ಮಣ್ಣಲ್ಲಿ ಆಟ ಆಡಬೇಡ, ಹೋಗು ಒಳಗೆ’ ಎಂದು ಗದರಿಸಿ ಕರೆದುಕೊಂಡು ಹೋಗುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಮಣ್ಣೆಂದರೆ ಅಸ್ಪೃಶ್ಯವೆಂಬ ಭಾವವನ್ನು ಬಾಲ್ಯದಿಂದಲೇ ಬಿತ್ತುತ್ತಿದ್ದೇವೆ. ಹೀಗೆ ಮಣ್ಣಿನ ಬಂಧುರ
ಕಳಚಿಕೊಂಡೇ ಬೆಳೆದು ದೊಡ್ಡವರಾಗುವ ಮಕ್ಕಳು ಮುಂದೆ ಮಣ್ಣಿನಲ್ಲಿ ಬೆರಳಾಡಿಸುವ ಮನಸ್ಸನ್ನು ಹೇಗೆ ಮಾಡಿಯಾರು? ಮಣ್ಣು ಮತ್ತು ಕೊಳಕುಗಳ ನಡುವೆ ಯಾವುದೇ ಮಹತ್ವದ ವ್ಯತ್ಯಾಸ ಕಾಣದ ಇಂಥ ಜನಾಂಗದ ಕೈ ಕೆಸರಾಗುವುದಾದರೂ ಹೇಗೆ? ಕೈ ಕೆಸರಾಗದೇ ಬಾಯಿಗೆ ಮೊಸರು ದಕ್ಕುವುದು
ಎಲ್ಲಿಂದ? ಮಣ್ಣಿನ ಸಾಂಗತ್ಯವನ್ನೇ ದ್ವೇಷಿಸುವ, ಅದನ್ನು ಕೊಳೆಯೆಂದು ಪರಿಭಾವಿಸುವ ಮಂದಿಗೆ ಕೃಷಿ ಹೇಗೆ ಒಗ್ಗೀತು? ಯುವ ಜನಾಂಗ ಕೃಷಿಯಿಂದ ದೂರವಾಗುತ್ತಿರುವುದೇ ಈ ಕಾರಣಕ್ಕೆ.

ಬಾಲ್ಯದಿಂದಲೇ ಮಣ್ಣನ್ನು ದ್ವೇಷಿಸುವಂತೆ ಅವರ ಮನೋಭಾವ ರೂಪಿಸುತ್ತಿರುವ ನಾವುಗಳು ಒಮ್ಮೆ ಆತ್ಮಾವಲೋಕನಕ್ಕೆ ಇಳಿಯುವ ಅಗತ್ಯವಿದೆ.
ಒಪ್ಪೋಣ, ಮಣ್ಣು ಸಹ ಕೊಳೆಯೇ; ಆದರೆ ಅದು ಎಲ್ಲಿರ ಬೇಕೋ ಅಲ್ಲಿ ಇಲ್ಲದಿzಗ. ಅಥವಾ ಅದನ್ನು ಹೀಗೆ ಹೇಳ ಬಹುದು. ಮಣ್ಣು ಅಂಗಳವನ್ನು ಬಿಟ್ಟು ಮನೆಯೊಳಕ್ಕೆ ಬಂದರೆ ಅದು ಕೊಳಕು ಎನಿಸಿಕೊಳ್ಳುತ್ತದೆ. ಆದರೆ ಅಂಗಳದ ಮಣ್ಣೂ ನಮಗೆ ಕೊಳೆಯಾಗಿ ಕಂಡರೆ ನಾವು ‘ಅನ್ನದ ದ್ವೇಷಿ’ ಗಳೆಂದೇ ಅರ್ಥ.

ಮಣ್ಣು ಎಂಬುದು ಬರಿಗಾಲಿನಲ್ಲಿ ನಡೆವವರಿಗೆ ಎಂದಿಗೂ ಕೊಳೆಯೆನಿಸುವುದಿಲ್ಲ. ಆದರೆ ಬೂಟು ಧರಿಸುವವರ ಪಾಲಿಗೆ ಕೊಳೆಯೇ. ಗುಡಿಸಲಿನ
ಸಗಣಿ ಸಾರಿಸಿದ ನೆಲದಲ್ಲಿ ಇರುವ ಮಣ್ಣು ಕೊಳಕಲ್ಲ. ಆದರೆ ಹೊಳಪಿನ ಮೊಝಾಯಿಕ್ ಜೋಡಿಸಿದ ಅಡುಗೆಮನೆ ನೆಲದ ಮೇಲೆ ಮಣ್ಣಿನ ಒಂದು ಕಣವೂ ಇರುವಂತಿಲ್ಲ. ಗುಡ್ಡ- ಕೊರಕಲುಗಳ ಹಾದಿಯಲ್ಲಿ ಸಾಗುವ ಎತ್ತಿನ ಬಂಡಿಯ ಗಾಲಿಗೆ ಸಿಲುಕಿ ಎದ್ದು ಪುಟಿಯುವ ಧೂಳೆಂಬ ಮಣ್ಣು ಹಿತಕಾರಿ. ಆದರೆ, ನೈಸಾಗಿ ಜಾರುವ ಡಾಂಬರು ರಸ್ತೆಗಳಲ್ಲಿ ವಾತಾನುಕೂಲ ಕಾರಿನ ಚಕ್ರಕ್ಕೆ ಮೆತ್ತಿಕೊಂಡರೆ ಮಾರಕ.

ಸದಾ ಬಿಸಿಲಿಗೆ ನೆನೆಯುವ ಕಪ್ಪಾದ ಬೆರಳುಗಳ ಉಗುರಿನ ಸಂದು ಸೇರಿದರೆ ತೊಂದರೆ ಇಲ್ಲ. ಅದೇ ಬಣ್ಣಬಣ್ಣದ ನೈಲ್ ಪಾಲಿಶ್ ಹಚ್ಚಿದ ಬೆರಳಿನ ತುದಿಗೆ ತಾಗಿದರೆ ಇದ್ದಕ್ಕಿದ್ದಂತೆ ಕೊಳಕು ಆಗುತ್ತದೆ. ಪರಿಸರ ವ್ಯವಸ್ಥೆಯಿಂದ ದೂರಹೋಗಿ ಕುಳಿತುಕೊಳ್ಳುವ ಇಂಥ ‘ಕೊಳಕು ಮನಸ್ಸು’ ಎಂದಿಗೂ ಸಮಾಜದ ಉತ್ಪಾದಕ ಪ್ರಕ್ರಿಯೆಯ ಭಾಗವಾಗುವುದೇ ಇಲ್ಲ. ಆ ಮನಸ್ಸು ಎಂದಿಗೂ ಮಣ್ಣನ್ನು ಒಂದು ಉಪದ್ರ ಎಂದೇ ಭಾವಿಸಿ ಅದನ್ನು ತೊಡೆದುಹಾಕಲೇ ಯೋಚಿಸುತ್ತಿರುತ್ತದೆ. ಮಣ್ಣು ಮತ್ತು ಕೊಳೆ ಎಂಬೆರಡು ಪದಗಳ ನಡುವಿನ ವ್ಯತ್ಯಾಸವು ಅತ್ಯಂತ ಸೂಕ್ಷ್ಮತರವಾದುದು.

ನಾನು ನನ್ನಂಥವರ ಪಾಲಿಗೆ ಮಣ್ಣು ಮೌಲ್ಯಯುತವೆನಿಸಿದರೆ, ಅದೇ ಬಹುತೇಕ ವ್ಯವಸ್ಥೆಯಲ್ಲಿ ಅತ್ಯಂತ ಕೀಳಾಗಿ ಪರಿಗಣಿತವಾಗಿರುತ್ತದೆ. ಹೀಗಾಗಿ
ಕೈಯಾಗಲಿ, ಮೈಯಾಗಲಿ, ಬಟ್ಟೆಯಾಗಲಿ ‘ಮಣ್ಣಾಗಿದೆ’ ಎಂಬುದಕ್ಕೂ ‘ಕೊಳಕಾಗಿದೆ’ ಎಂಬುದಕ್ಕೂ ಅಗಾಧ ವ್ಯತ್ಯಾಸ ಕಾಣುತ್ತದೆ. ಮಣ್ಣು ಮೆತ್ತಿದ ಕೈಗಳಲ್ಲಿ ಭವಿಷ್ಯದ ಆಹಾರ ಕಾಣುತ್ತಿದ್ದರೆ, ಕೊಳೆಯ ಕೈಗಳಲ್ಲಿ ಅದು ಕಮರುವುದು ಪ್ರತಿಫಲಿಸುತ್ತಿರುತ್ತದೆ.

ನಮ್ಮ ಪ್ರಮುಖ ನೈಸರ್ಗಿಕ ಸಂಪನ್ಮೂಲವೊಂದನ್ನು ಎರಡು ಮನಃಸ್ಥಿತಿಗಳು ನೋಡುವ ದೃಷ್ಟಿಕೋನವೇ ಹೀಗೆ ಭಿನ್ನವಾಗಿರುತ್ತದೆ. ಮಣ್ಣನ್ನು ರಕ್ಷಿಸುವ ಶಕ್ತಿ ನಿಮಗೆ ಇದೆ. ನಿಮ್ಮ ಕಾಲುಗಳ ಕೆಳಗೆ ವಿನಮ್ರವಾಗಿ ಮಲಗಿರುವ ಮಣ್ಣು ಪ್ರತಿಯೊಬ್ಬರ ಬದುಕಿನ ಮೊದಲ ಪ್ರೇಮವಾಗಿ ಪರಿಣಮಿಸಿದಾಗಲೇ ಆಹಾರ ಸಮೃದ್ಧಿ ಕಾಣಲು ಸಾಧ್ಯ. ಜೀವಪ್ರೀತಿಯ ಭಾಗವಾಗಿ ಮಣ್ಣು ಸಾಕಾರಗೊಳ್ಳುತ್ತದೆ. ನೀವು ಒಕ್ಕಲಿಗರೇ ಆಗಿದ್ದರೆ ಸಹಜವಾಗಿಯೇ ಈ ಪ್ರೇಮಪಾಶದಲ್ಲಿ ಬಿಗಿದುಕೊಂಡಿರುತ್ತೀರಿ. ಆದರೆ, ವಿಭಿನ್ನ ವೃತ್ತಿಯಲ್ಲಿದ್ದವರು ಆ ಪ್ರೀತಿಯನ್ನು ಅನುಭವಿಸುವುದು ಹೇಗೆ? ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ನೀವು ಬೇಸಾಯಗಾರರೇ ಆಗಿರ ಬೇಕೆಂದೇನೂ ಇಲ್ಲ. ಇದರಲ್ಲಿ ಇತರರ ಪಾಲೇ ಹೆಚ್ಚಿದೆ.

ಮಣ್ಣಿನಲ್ಲಿ ನಾವು ಇಂಗಾಲದ ಹೆಜ್ಜೆಗಳನ್ನು ಹೇಗೆ ಮೂಡಿಸುತ್ತೇವೆ ಎಂಬುದರ ಮೇಲೆ ಅದರ ಗುಣಮಟ್ಟವನ್ನು ಗ್ರಹಿಸಲಾಗುತ್ತದೆ. ಕೊಳೆಯುವ ವಿವಿಧ ಹಂತಗಳಲ್ಲಿನ ಸಸ್ಯ ಮತ್ತು ಪ್ರಾಣಿಜನ್ಯ ತ್ಯಾಜ್ಯ ವಸ್ತುಗಳನ್ನು ನಾವು ಹೇಗೆ ನಿರ್ವಹಿಸಲು ಬದ್ಧರಾಗಿದ್ದೇವೆ ಎಂಬುದರ ಮೇಲೆ ನಮ್ಮ ಮಣ್ಣಿನ
ಪ್ರೀತಿ ನಿರೂಪಿತವಾಗುತ್ತದೆ. ನೈಸರ್ಗಿಕವಾಗಿ ಕಳಿಯುವ ವಸ್ತುಗಳಿಂದ ಹೊರತಾಗಿ ಬೇರೇನನ್ನು, ಯಾವ ಪ್ರಮಾಣದಲ್ಲಿ ದೈನಂದಿನ ಜೀವನದಲ್ಲಿ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಕಳಕಳಿ ವ್ಯಕ್ತವಾಗುತ್ತದೆ. ಪ್ರತಿ ಬಾರಿ ಬಳಸಿ ಮಣ್ಣಿಗೆ ಎಸೆಯುವ ವಸ್ತುಗಳನ್ನು ಪುನಃ ಹೇಗೆ ಮರುಬಳಸಬಹುದು ಎಂಬುದನ್ನು ಯೋಚಿಸುವುದರ ಮೇಲೆ ಕಾಳಜಿ ನಿಂತಿರುತ್ತದೆ.

ಮಣ್ಣಿನ ಸವೆತವು ಕೇವಲ ಬೇಸಾಯದಿಂದ ಬಿಡುಗಡೆಯಾಗುವ ಇಂಗಾಲವನ್ನಷ್ಟೇ ಅವಲಂಬಿಸಿಲ್ಲ. ನಗರ ಪ್ರದೇಶದಲ್ಲಿ ನಿರ್ಮಾಣವಾಗುವ ತಥಾಕಥಿತ ಆಧುನಿಕ ನಾಗರಿಕತೆಯ ಕೊಡುಗೆ ಇದಕ್ಕಿಂತಲೂ ಹೆಚ್ಚಿದೆ. ಇಂಗಾಲದ ಅಂಶವನ್ನು ಗಾಳಿಯಿಂದ ಹೊರಗೆಳೆದು ಭೂಗತಕ್ಕೆ ಸೇರದಂತೆ ಬೀಗ ಹಾಕುವುದು ಮಾತ್ರವಲ್ಲ, ನಮ್ಮಿಂದ ಅವನತಿಗೊಳಗಾದ ಮಣ್ಣನ್ನು ಪುನರ್‌ಸ್ಥಾಪಿಸುವಲ್ಲಿ ಆಧುನಿಕ ನಗರೀಕರಣದ ಮನಸ್ಸುಗಳ ಪಾತ್ರ ದೊಡ್ಡದಿದೆ.

‘ರೇನ್ ಫಾರೆಸ್ಟ್ ಅಲೈಯನ್ಸ್’ನ ವೆಬ್ ತಂಡದಲ್ಲಿ ಕೆಲಸ ಮಾಡುತ್ತಿರುವ, ಅಂತಾರಾಷ್ಟ್ರೀಯ ಕೃಷಿಯಲ್ಲಿ ಪರಿಣತಿ ಹೊಂದಿರುವ, ಮಣ್ಣು ವಿಜ್ಞಾನ ಪದವೀಧರೆ, ಡೇನಿಯಲ್ ಕ್ರಾನ್ಮರ್ ಹೇಳುವ ಪ್ರಕಾರ. ಮಣ್ಣು ಪ್ರತಿಯೊಬ್ಬರ ಜೀವನದ ಮೊದಲ ಪ್ರೇಮವಾಗಿರಬೇಕು. ಇದಕ್ಕಾಗಿ ಮಕ್ಕಳು ಮಣ್ಣಿ
ನಲ್ಲಿ ಆಡಲೇಬೇಕು. ಆಗಲೇ ನೈಜ ಜೀವಪ್ರೀತಿ ನಮ್ಮಲ್ಲಿ ಮೊಳೆಯಲು ಸಾಧ್ಯ. ನೆನಪಿಡಿ, ಅದು ಭೌತಿಕ ಅಥವಾಆಂತರಂಗಿಕ ಯಾವುದೇ ವಿಷಯವೇ ಇರಲಿ ಮೊಳಕೆಯೊಡೆದು, ಬೇರುಬಿಟ್ಟು, ಸದೃಢವಾಗಲು ಮಣ್ಣು ಬೇಕೇ ಬೇಕು!

‘ಮಣ್ಣಿಂದ ಕಾಯ’ ಎಂಬ ಪದ್ಯದಲ್ಲಿ ಮಣ್ಣಿನ ಮಹತ್ವ, ಮಣ್ಣು ಮತ್ತು ಮಾನವ ಸಂಬಂಧಗಳ ಬಗ್ಗೆ ತಿಳಿಸಿದ ನಮ್ಮ ಪುರಂದರದಾಸರು ‘ಮಣ್ಣು ಅಳಿದರೆ ಮಾನವ ಅಳಿದಂತೆ’ ಎಂದಿದ್ದಾರೆ. ಬೆಳೆಯ ಮೇಲ್ಭಾಗದಲ್ಲಿ ಸಿಗುವ ತೆನೆಯ ಕಾಳುಗಳು ನಮ್ಮ ಬದುಕಿಗೆ ಆಧಾರ. ತೆನೆಯ ಕೆಳಭಾಗದ
ಹುಲ್ಲುಕಡ್ಡಿಗಳು ಪಶುಗಳಿಗೆ ಆಹಾರ. ಇನ್ನು ಇವೆಲ್ಲದರ ಕೆಳಗಿರುವ ಮಣ್ಣಿನಲ್ಲಿ ಅಳಿದುಳಿದ ಕೂಳೆಗಳು ಹಾಗೂ ಜೈವಿಕ ತ್ಯಾಜ್ಯಗಳು ಕೋಟ್ಯಂತರ ಬ್ಯಾಕ್ಟೀರಿಯಾಗಳಿಗೆ, ಎರೆಹುಳುಗಳಂಥ ಜೀವಿಗಳಿಗೆ ಆಕರ. ಹುಲ್ಲು ತೆನೆ, ಕಾಳುಗಳನ್ನು ಉತ್ಪತ್ತಿ ಮಾಡುವ ಭೂಮಿಯು ಮಣ್ಣಾದರೂ, ಅಸಂಖ್ಯಾತ
ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ, ಎರೆಹುಳುಗಳಿಗೆ ಹಾಗೂ ಭೂಮಿಯ ಮೇಲೆ ವಾಸಿಸುವ ಸಕಲ ಜೀವರಾಶಿಗಳಿಗೆ ಮಣ್ಣು ಜೀವನಾಧಾರ.

ಇದು ವಿಸ್ಮೃತಿಗೆ ಸರಿದ ಸತ್ಯ. ಅನುಮಾನವಿಲ್ಲ, ಬದುಕು ನಿಂತಿರುವುದು ಮಣ್ಣಿನ ಮೇಲೆಯೇ; ಭೌತಿಕವಾಗಿಯೂ, ಆಂತರಂಗಿಕವಾಗಿಯೂ.
ಈ ಮಣ್ಣಿನ ಸಂಸ್ಕೃತಿ, ನೆಲ ಮೂಲದ ಜ್ಞಾನ, ನೆಲದ ಬದುಕು… ಹೀಗೆಲ್ಲ ಹುಟ್ಟಿಕೊಂಡಿರುವುದು ಇದೇ ಕಾರಣಕ್ಕೆ. ಪ್ರತಿ ಮನುಷ್ಯನ ಆಹಾರದ ಅಗತ್ಯ ನೀಗಿಸುತ್ತಿರುವುದೇ ಅದಲ್ಲವೇ. ಇಂಥದೊಂದು ಅಮೂಲ್ಯ ಸಂಪತ್ತಿಗೆ ಸಾಟಿಯೆಲ್ಲಿಯದು? ಇದು ನಾಶವಾದರೆ ಮತ್ತೆಲ್ಲಿಯ ಬದುಕು? ಅದನ್ನೇ ಹೇಳಿದ್ದಲ್ಲವೇ ಪುರಂದರರು. ಊರ್ಜಿತವಲ್ಲವೆಂಬು ದನ್ನು ನಾಶ ಮಾಡುವ ಹಕ್ಕೂ ನಮಗಿಲ್ಲ. ಜೇಬು ಖಾಲಿಯಾದಂತೆಲ್ಲ ಮತ್ತೆ ಮತ್ತೆ ಡ್ರಾ ಮಾಡಿ ತುಂಬಿಕೊಳ್ಳುತ್ತೇವಲ್ಲ, ಹಾಗೆ ಡ್ರಾ ಮಾಡಲು ಹಣ ಬ್ಯಾಂಕಿನ ನಮ್ಮ ಖಾತೆ ಯಲ್ಲಿರಬೇಕು.

ಹಾಗೆ ಖಾತೆ ತುಂಬಲು ದುಡಿಯಬೇಕು. ಎಲ್ಲಿಯವರೆಗೆ ಕ್ರೆಡಿಟ್, ಸಾಲ, ಓವರ್ ಡ್ರಾಫ್ಟ್ ಸೌಲಭ್ಯ ಕೊಡ ಬಲ್ಲುದು ಬ್ಯಾಂಕು? ಅದಾದರೂ ಸಿಕ್ಕುವುದು ನಮ್ಮ ಆದಾಯ ಮೂಲ, ದುಡಿಮೆಯ ಸಾಮರ್ಥ್ಯದ ಮೇಲೆಯೇ ಅಲ್ಲವೇ? ಅಜ್ಜನ ಆಸ್ತಿಯಿದೆಯೆಂದರೂ ‘ಕೂತುಂಡರೆ ಕುಡಿಕೆ ಹೊನ್ನೂ ಸಾಲದು’ ಎಂಬುದು ಗಾದೆಯಷ್ಟೇ ಅಲ್ಲ. ಹಾಗಿದ್ದ ಮೇಲೆ ಸಕಲ ಜೀವಿಗಳ ಬಳಕೆಯಿಂದ ಬರಿದಾಗುವ ಮಣ್ಣಿನ ಬ್ಯಾಂಕ್‌ನಲ್ಲಿ ಠೇವಣಿ ತುಂಬಿಸುವ ಹೊಣೆ ಯಾರದ್ದು? ಪೋಷಕಾಂಶಗಳು, ಸೂಕ್ಷ್ಮಾಣು ಜೀವಿಗಳು, ನೀರು ಹಾಗೂ ಗಾಳಿಯ ಅನುಬಂಧವನ್ನು ಪೊರೆದರೆ ಮಾತ್ರವೇ ನಮಗದನ್ನು ಬಳಸುವ ಹಕ್ಕು ದೊರೆತೀತು. ಅಂಥ ಮಣ್ಣು ಅನ್ನದ ಮೂಲ ನಮ್ಮನ್ನಷ್ಟೇ ಪೊರೆಯುತ್ತಿಲ್ಲ.

ಸಕಲ ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಇತ್ಯಾದಿಗಳೆಲ್ಲವನ್ನೂ ಒದಗಿಸುತ್ತಿದೆ. ಬಿದ್ದ ಮಳೆಯನ್ನು ಹಿಡಿದಿಟ್ಟು, ಶುದ್ಧ ಮಾಡಿಕೊಡುತ್ತಿದೆ. ಬದುಕಿಗೆ ಬೇಕಾದ ಸಾವಯವವನ್ನು ಪೋಷಕಾಂಶಗಳಾಗಿ ಬದಲಿಸಿ ನೀಡುತ್ತಿದೆ. ಬರ-ಪ್ರವಾಹಗಳನ್ನು ತಡೆದು ಜೀವನವನ್ನು ಭದ್ರಗೊಳಿಸಿದೆ. ಜೀವ ಜಂತುವನ್ನು ಕ್ಷಣಕ್ಷಣಕ್ಕೂ ಮೀಟುವ ಮೂಲಕ ಸುಮಧುರ ರಾಗವನ್ನು ಹೊಮ್ಮಿಸುತ್ತಲೇ ಇದೆ. ಅದೆಂದೂ ಸ್ಟ್ಯಾಗ್ನೆಂಟ್ ಆಗಿದ್ದನ್ನು ಕಂಡೇ ಇಲ್ಲ. ನಿತ್ಯ ನಿರಂತರ ಚಲನ ಶೀಲ, ಚೈತನ್ಯಶೀಲ ಮತ್ತು ಕ್ರಿಯಾಶೀಲ. ಮಣ್ಣಿನ ಅಸ್ತಿತ್ವದಿಂಂದಾಗಿಯೇ ನಾವಿಂದು ಜೀವಂತ. ಅದೊಮ್ಮೆ ಉಸಿರಾಟ ನಿಲ್ಲಿಸಿಬಿಟ್ಟರೆ? ಹೌದು, ಎಲ್ಲ ರೀತಿಯಿಂದಲೂ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸು
ತ್ತಿವೆ.

ಮಣ್ಣಿನ ವರ್ಮ್‌ಗಳು ಕಾಣೆಯಾಗಿ ವರ್ದಿನೆಸ್ ಕಳೆದುಕೊಳ್ಳುತ್ತಿದೆ. ನಮ್ಮ ಅನ್ ಹ್ಯೂಮನ್ ವರ್ತನೆಗಳಿಂದಲಾಗಿ ಹ್ಯೂಮಸ್ ಇಲ್ಲದೇ ಉತ್ಪಾದಕತೆ ಕುಂಠಿತಗೊಳ್ಳುತ್ತಿದೆ. ನೆಲ ದಮ್ಮ ರೋಗಪೀಡಿತಳಾಗಿದ್ದಾಳೆ. ಚಿಕಿತ್ಸೆಯ ಹೆಸರಲ್ಲಿ ಕಾಂಪೋಸ್ಟ್ ಬದಲಿಗೆ ರಾಸಾಯನಿಕಗಳನ್ನು ಮೇಲಿಂದ ಮೇಲೆ ಚುಚ್ಚಿ ಆಕೆಯ ದೇಹವನ್ನೇ ಇನ್ನಷ್ಟು ನಿರ್ಬಲಗೊಳಿಸಿದ್ದೇವೆ. ಮಣ್ಣಿನ ಜತೆಗಾರರಾದ ಬ್ಯಾಕ್ಟೀರಿಯಾ, ಪ್ರೋಟೋಜೋವ, ಆಕ್ಟಿನೊಮೈಸಿಟಸ್, ಟ್ರೈಕೋಡರ್ಮ ದಂಥ ಶಿಲೀಂಧ್ರ, ಪಾಚಿಗಳು ನೆಲ ತೊರೆದು ಯಾವುದೋ ಕಾಲವಾಗಿದೆ. ಮಣ್ಣಿನ ಮೇಲೆ ಬರಿಗಣ್ಣಿಗೆ ಕಾಣುತ್ತಿದ್ದ ಇರುವೆ, ಗೆದ್ದಲು, ಜೀರುಂಡೆಗಳಾಗಲೀ, ಬಹುಪದಿಗಳು, ಸಹಸ್ರಪದಿಗಳು, ಜಂತುಹುಳು, ಎರೆಹುಳುಗಳಾಗಲೀ ಅಪರೂಪದ ಅತಿಥಿಗಳಾಗಿವೆ.

ಇಲಿ, ಹಾವು, ಚೇಳುಗಳು ನಮಗೆ ವೈರಿಗಳೆನಿಸಿವೆ. ಮತ್ತೆಲ್ಲಿಂದ ಬರಬೇಕು ಒಂಟಿ ಮಣ್ಣಿಗೆ ಉತ್ಪಾದಕ ಶಕ್ತಿ? ಹಾರ್ಮೋನ್ ಮತ್ತು ಕಿಣ್ವ (ಎನ್ ಜೈಮ) ಗಳಿಲ್ಲದ ಮಣ್ಣು ತನ್ನ ಸ್ವಭಾವವನ್ನೇ ಬದಲಿಸಿಕೊಂಡು ಹೇಗೆ ಹೇಗೋ ಆಡುತ್ತಿರುವುದು ಸಹಜ. ಇನ್ನಾದರೂ ಮಣ್ಣಿನ ಒಳಮರ್ಮ ಅರಿತು ಅದನ್ನು
ಬದುಕಲು ಬಿಡೋಣ, ನಾವೂ ಬದುಕೋಣ.