Wednesday, 27th November 2024

22 ಲಕ್ಷ ಸಾಲದ ಅಡ್ಕತ್ತಿಯಿಂದ ಭಟ್ಟರ ಉಳಿಸಿದ್ದೇ ಕೃಷಿ !

ಸುಪ್ತ ಸಾಗರ

rkbhadti@gmail.com

ಕೃಷಿ ಸಾಲದಿಂದ ಕಂಗೆಟ್ಟು ಜೀವಕಳೆದುಕೊಂಡ ರೈತರ ಬಗೆಗೆಗ ನೀವು ಕೇಳಿರುತ್ತೀರಿ. ಆದರೆ, ಹೊರಜಗತ್ತಿನಲ್ಲಿ ಮಾಡಿದ ಸಾಲ ತೀರಿಸಲಾಗದೇ ಜೀವ ಕಳೆದುಕೊಳ್ಳಲು ಹೊರಟಿದ್ದ ಕೃಷಿಕ, ಕೊನೆಗೆ ಕೃಷಿಯಿಂದಲೇ ಆ ಸಾಲ ತೀರಿಸಿದ್ದಲ್ಲದೇ, ಕೃಷಿಯ ಜೀವ-ಜೀವನ ಉಳಿಸಿಕೊಂಡ ಯಶೋಗಾಥೆಯಿದು.
ಇರುವುದು ಮನೆಯೆದುರಿನ ಕೇವಲ ೨೦ ಸೆಂಟ್ಸ ಜಾಗ.

ಆದರೆ ಅಲ್ಲಿ ಯಾವ್ಯಾವ ತರಕಾರಿ ಇದೆ ಎಂದು ಕೇಳುವುದಕ್ಕಿಂತ ಯಾವುದು ಇಲ್ಲ ಎಂಬುದನ್ನು ಹುಡುಕಬೇಕು. ಮಾರ್ಚ್- ಅಕ್ಟೋಬರ್ ನಡುವಿನ ಆರು ತಿಂಗಳಲ್ಲಿ ತರಕಾರಿಯಿಂದಲೇ ಇಡೀ ಕುಟುಂಬವನ್ನು ನಿರ್ವಹಣೆ ಮಾಡುವಷ್ಟು ಆದಾಯವನ್ನು ಗಳಿಸುತ್ತಾರೆ. ಉಳಿದ ಕೃಷಿ ಭೂಮಿಯ ಆದಾಯವನ್ನು ಜೀವನ ಭದ್ರತೆ ಹಾಗೂ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದ್ದಾರೆ. ಈಗ ಹೇಳಿ, ಕೃಷಿ ಅಂದರೆ ಯಾವ ರೀತಿಯಲ್ಲಿ ನಷ್ಟವಾಗಿ ಕಾಣುತ್ತದೆ? ಯೋಜಿತ ಪ್ರಯೋಗಶೀಲ ಕೃಷಿಯನ್ನು ಮಾಡಿದಲ್ಲಿ ಖಂಡಿತಾ ನಷ್ಟವಾಗಲು ಸಾಧ್ಯವೇ ಇಲ್ಲ.

ಕೃಷಿಯಲ್ಲಿ ಶ್ರಮವನ್ನಷ್ಟೇ ಅಲ್ಲ, ಜಾಣ್ಮೆಯನ್ನೂ ವಿನಿಯೋಗಿಸಬೇಕು. ಭೂಮಿಯ ವಿಸ್ತಾರ, ಬೆಳೆ, ಬೆಲೆ, ಸಮಸ್ಯೆಗಳಂಥ ಮಿತಿಗಳ ನಡುವೆಯೂ ಕೃಷಿಯಲ್ಲಿ ಗೆಲ್ಲಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಕಾಸರಗೋಡಿನ ಬಾಯಾರು ಸಮೀಪದ ಪ್ರಗತಿಪರ ಕೃಷಿಕ ಅಡ್ಕತ್ತಿಮಾರು ಗೋಪಾಲ ಕೃಷ್ಣ ಭಟ್ಟರು. ಒಂದು ಕಾಲದಲ್ಲಿ ಜೀವನದಲ್ಲಿ ಬೇಸತ್ತು, ಜಮೀನನ್ನು ಮಾರಿ ಜೀವವನ್ನೇ ಕೊನೆಗೊಳಿಸಿಕೊಳ್ಳಲು ಹೊರಟಿದ್ದ ಭಟ್ಟರು ಇಂದು ಎಷ್ಟು
ಜಮೀನಿದ್ದರೂ ಮಾಡುತ್ತೇನೆ. ಕೃಷಿಯಲ್ಲಿ ಸಿಗುವಷ್ಟು ನೆಮ್ಮದಿ-ಸುಖ ಬೇರಿನ್ನೆಲ್ಲೂ ಸಿಗಲು ಸಾಧ್ಯವೇ ಇಲ್ಲ ಎಂದು ನಗುತ್ತಾರೆ.

ಶೇರು ವಹಿವಾಟಿನಲ್ಲಿ ಕಳೆದುಕೊಂಡಿದ್ದ ೨೨ ಲಕ್ಷ ರು. ಗಳನ್ನು ನಾಲ್ಕೇ ವರ್ಷದಲ್ಲಿ ಕೃಷಿಯಿಂದ ಗಳಿಸಿದ ಭಟ್ಟರು, ನಿರಂತರ ಕೃಷಿ ಪ್ರಯೋಗಗಳ, ವಿವಿಧ ಕೃಷಿ ಉದ್ಯಮಗಳ ಮೂಲಕ ಇಂದು ಕರಾವಳಿ -ಮಲೆನಾಡಿನ ಮನೆ- ಮಾತಾಗಿದ್ದಾರೆ. ಭಟ್ಟರ ಕೃಷಿ ಕಥನಯಾನವನ್ನು ತರಕಾರಿಯಿಂದಲೇ
ಆರಂಭಿಸೋಣ. ತಮ್ಮ ಮನೆಯಂಗಳದ ೨೦ ಸೇಂಟ್ಸ್ ಜಾಗದ ಸಮೃದ್ಧ ತರಕಾರಿ ಬೆಳೆಗಳ ಮೂಲಕ ಕ್ರಮಬದ್ಧವಾಗಿ ಆದಾಯವನ್ನು ಗಳಿಸಿಕೊಳ್ಳು ತ್ತಿದ್ದಾರೆ. ತರಕಾರಿ ಅಲ್ಪಾವಧಿಯ ಬೆಳೆ ಆಗುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬೇರೆ ಬೇರೆ ತರಕಾರಿ ವೈವಿಧ್ಯಗಳನ್ನು ಯೋಜಿಸಿಕೊಂಡು ಎಲ್ಲ
ರೀತಿಯ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ.

ಇದರಿಂದ ಮನೆಯ ದೈನಂದಿನ ಅಗತ್ಯಕ್ಕೆ ಪೇಟೆಯ ಅವಲಂಬನೆ ತಪ್ಪುತ್ತದೆಯಲ್ಲದೇ, ಪ್ರತಿದಿನ ಮನೆಯ ಎಲ್ಲರಿಗೂ ಪುಷ್ಕಳ ಪೋಷಕಾಂಶಗಳು ಸಿಗುತ್ತವೆ. ಇದರೊಂದಿಗೆ ದೈನಂದಿನ ಖರ್ಚಿಗೆ(ಎದುರು ಖರ್ಚು) ಕೃಷಿಕ ಪರದಾಡುವ ಪ್ರಮೇಯವೇ ಇರುವುದಿಲ್ಲ ಎಂಬುದು ಭಟ್ಟರ ಅನುಭವದ
ಮಾತು.ಭಟ್ಟರ ಅಂಗಳದಲ್ಲಿ ಈಗಾಗಲೇ ಹೇಳಿದಂತೆ ಪುಟ್ಟ ದೊಂದು ತರಕಾರಿ ಪ್ರಪಂಚವೇ ತೆರೆದುಕೊಳ್ಳುತ್ತದೆ. ಬಸಳೆ, ಹರಿವೆ ಸೇರಿದಂತೆ. ಹತ್ತಕ್ಕೂ ಹೆಚ್ಚು ಬಗೆಯ ಸೊಪ್ಪುಗಳು ಹಸಿರಾಗಿವೆ. ಹಾಗಲ, ಮಾಡಹಾಗಲ, ಪಡುವಲ, ಸೌತೆಕಾಯಿ, ಸೊರೆಕಾಯಿ, ಕುಂಬಳಕಾಯಿಗಳಂಥ ಬಳ್ಳಿಯ ಬಗೆಗಳಿವೆ. ಸುವರ್ಣಗಡ್ಡೆ, ಗೆಣಸು, ಮೂಲಂಗಿ, ಕೋಸು ಹೀಗೆ ಗಡ್ಡೆ ತರಕಾರಿಗಳಿವೆ. ಇವಿಷ್ಟೇ ಅಲ್ಲ, ಬದನೆ, ಬೆಂಡೆ, ಬೀ, ಟೊಮೇಟೊಗಳಂಥ ಗಿಡ ತರಕಾರಿಗಳಿಗೂ ಅಲ್ಲಿ ತಾಣವಿದೆ.

ಇನ್ನು ದಕ್ಷಿಣ ಕನ್ನಡದ ಸಾಂಪ್ರದಾಯಿಕ ತೊಂಡೆ, ಕೆಸುವು, ಬಾಳೆ, ಜೀಗುಜ್ಜಿಯಂಥವೂಗಳಿಗೂ ಕೊರತೆ ಇಲ್ಲ. – ಹೀಗೆ ಭಟ್ಟರ ತರಕಾರಿ ತೋಟದಲ್ಲಿ ಲೆಕ್ಕ ಹಾಕಲಾಗದಷ್ಟು ವೈವಿಧ್ಯಗಳು ಶ್ರೀಮಂತವಾಗಿ ನಿಂತಿವೆ. ‘ಈ ವರ್ಷ ವಿಪರೀತ ಮಳೆಯಿಂದಾಗಿ ಒಂದಷ್ಟು ನಷ್ಟವಾಗಿದ್ದು ಬಿಟ್ಟರೆ, ಪ್ರತಿ ವರ್ಷ ಅಡಕೆ ಕೊಯ್ಲಿನ ನಂತರದತಿಂಗಳುಗಳಲ್ಲಿ ಉದ್ದಕ್ಕೂ ತರಕಾರಿಗಳು ಅಂಗಳದಲ್ಲಿ ನಲಿದಾಡುತ್ತಿರುತ್ತವೆ. ಅದನ್ನು ಕಾಣುವುದೇ ಸಂಭ್ರಮದ ಸಂಗತಿ. ಬೆಳಗ್ಗೆ ಹಾಗೂ ಸಂಜೆಯ ಬಿಡುವಿನ ವೇಳೆಯ ಮನೆ ಮಂದಿಯೆಲ್ಲ ಕೂಡಿ ಗಿಡಗಳ ನಿರ್ವಹಣೆಯನ್ನು ಮಾಡಿಕೊಳ್ಳುತ್ತೇವೆ.

ಅಡಕೆ ಸಿಪ್ಪೆ, ಒಣಗಿದ ಎಲೆ, ಹುಲ್ಲು, ಕೊಟ್ಟಿಗೆ ತ್ಯಾಜ್ಯವನ್ನು ಬುಡಕ್ಕೆ ಹಾಕುವುದು ಬಿಟ್ಟು ಬೇರೇನನ್ನೂ ಹೊರಗಿನಿಂದ ಕೊಡುವುದಿಲ್ಲ. ಸಗಣಿ ಸ್ಲರಿ
ಗೊಬ್ಬರ, ಗೋಮೂತ್ರವನ್ನು ತಿಂಗಳಿಗೊಮ್ಮೆ ಹಾಕುತ್ತೇವೆ. ಕೀಟಗಳು ಬಾರದಂತೆ ಬೂದಿ, ಗೋಮೂತ್ರಗಳೇ ಔಷಧದಂತೆ ಬಳಕೆಯಾಗುತ್ತದೆ. ಹಳೆಯ ಗಿಡದ ಬೆಳೆದ ಕಾಯಿಗಳನ್ನು ಗಿಡದ ಬಿಟ್ಟು ಬೀಜ ಮಾಡಿಕೊಳ್ಳುತ್ತೇವೆ. ನಂತರದ ವರ್ಷ ದನ್ನೇ ಬಿತ್ತುವುದು. ಹೀಗಾಗಿ ಹೆಚ್ಚಿನ ಖರ್ಚೇನೂ ಇಲ್ಲ. ಬರುವುದೆಲ್ಲವೂ ಲಾಭವೇ. ಸುತ್ತಮುತ್ತಲಿನವರು ತಾಜಾ ಸಾವಯವ ಉತ್ಪನ್ನ ಸಿಗುತ್ತದೆ ಎಂಬ ಕಾರಣಕ್ಕೆ ಅವರೇ ಸ್ವತಃ ಬಂದು ಮನೆ ಬಾಗಿಲ
ಹಣ ಕೊಟ್ಟು ಖರೀದಿಸಿ ಹೋಗುತ್ತಾರೆ.

ಇದಿರಿಂದ ಸಾಗಾಟದ ಖರ್ಚೂ ಇಲ್ಲ’ ಎಂಬುದು ಭಟ್ಟರ ಅಂಬೋಣ. ಭಟ್ಟರ ಸಾಹಸ ಕೇವಲ ತರಕಾರಿ ಕೃಷಿಗೆ ಸೀಮಿತವಲ್ಲ. ಅಡಕೆ, ರಬ್ಬರ್, ಪಪ್ಪಾಯ, ಕಾಳು ಮೆಣಸು, ಬಾಳೆ ಹೀಗೆ ಹಲವು ಮಜಲುಗಳು ತೆರೆದುಕೊಳ್ಳುತ್ತವೆ ಭಟ್ಟರ ಯಶೋಗಾಥೆಯಲ್ಲಿ. ಸಾಂಪ್ರದಾಯಿಕ ಕೃಷಿಗೆ ಜೋತು
ಬೀಳುವ ಬದಲು ಹೊಸತನ್ನು ಹುಡುಕುವುದು ಹಾಗೂ ಅದರಲ್ಲಿ ಗೆಲ್ಲುವುದು ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಹಾಗೆ ನೋಡಿದರೆ ಭಟ್ಟರದು ಏಳು ಸಹೋದರರ ಅವಿಭಕ್ತ ಕುಟುಂಬವಾಗಿತ್ತು. ಆಸ್ತಿ ಪಾಲಾದಾಗ ಇವರ ಪಾಲಿಗೆ ಬಂದದ್ದು ಹನ್ನೆರಡು ಎಕರೆಯಷ್ಟು ಭೂಮಿ. ಆದರೆ ಭಟ್ಟರಿಗೆ
ದಣಿವಿನ ಅರಿವಿಲ್ಲ.

ಕೃಷಿಯೊಂದಿಗೆ ಅಡಿಕೆ ವ್ಯಾಪಾರ, ಉಪ್ಪಿನಕಾಯಿ ಮಾರಾಟ, ಹೈನುಗಾರಿಕೆಯನ್ನೂ ಕೈಗೊಂಡಿದ್ದಾರೆ. ಮೊದಲೇ ಹೇಳಿದಂತೆ ಇವತ್ತಿನ ಯಶಸ್ಸಿಗೆ ಕಾರಣ
ವಾಗಿದ್ದು ಮಾಡಿದ ಸಾಲ. ದಿವಾಳಿಯಂಚಿನಲ್ಲಿ ನಿಂತು, ರಬ್ಬರ್ ತೋಟವೂ ಮಾರಾಟವಾಗದೇ ಆತ್ಮಹತ್ಯೆಯ ಯೋಚನೆಯಲ್ಲಿದ್ದಾಗ ಅಳಿಯ (ಅಣ್ಣನ ಮಗಳ ಗಂಡ) ರವಿಶಂಕರ್ ಬೇಷರತ್ತಾಗಿ ಹಣ ನೀಡಿ ಸಂಕಷ್ಟದಿಂದ ಪಾರು ಮಾಡಿದ್ದರು. ಅವರ ಋಣ ತೀರಿಸಬೇಕೆಂಬ ಛಲದೊಂದಿಗೆ ಮರಳಿ ಕೃಷಿಗೆ ಧುಮುಕಿದ ಅವರನ್ನು ಕೈಬಿಡಲಿಲ್ಲ ಭೂತಾಯಿ.

ವಾಣಿಜ್ಜಿಕವಾಗಿ ಪಪ್ಪಾಯಿ, ತರಕಾರಿಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಹಾಗೂ ತುಸು ಅನುಭವವಿದ್ದ ಭಟ್ಟರು, ಸ್ವಾವಲಂಬನೆಗಾಗಿ ಆಯ್ದು ಕೊಂಡದ್ದು ಅದನ್ನೇ. ಸೂಕ್ತ ಯೋಜನೆಯೊಂದಿಗೆ ಪಪ್ಪಾಯಿ ಕೂರಿಸಿದರು. ಭಟ್ಟರ ಪ್ರಕಾರ, ಮಾರುಕಟ್ಟೆಯಲ್ಲಿ ಎಲ್ಲ ಕಾಲಕ್ಕೂ ಹಣ್ಣಿಗೆ ಬೇಡಿಕೆ
ಇರುತ್ತದೆ. ಕೃಷಿಯೂ ಸುಲಭ. ಆದರೆ ಸಾಕಷ್ಟು ಎಚ್ಚರ ಬೇಕು. ಬೀಜದ ಆಯ್ಕೆ, ಮಾರುಕಟ್ಟೆಗಳಂಥ ವಿಚಾರದಲ್ಲಿ ತುಸು ತಂತ್ರಗಾರಿಕೆಯೂ ಬೇಕು.
ಮೊದಲು ತೈವಾನ್ ರೆಡ್ ಲೇಡಿ ತಳಿಯನ್ನು ಬೆಳೆಯಲು ನಿರ್ಧರಿಸಿ ಹಣ್ಣಿನಿಂದ ಗಿಡ ಮಾಡಿ ಸೋತರು. ಲಾಭದ ಉದ್ದೇಶದಿಂದ ಕೃಷಿಗಿಳಿಯುವಾಗ ಕಂಪೆನಿಯ ಬೀಜಗಳ ಅಗತ್ಯವನ್ನು ಮನಗಂಡು ಕೊನೆಗೂ ಅದನ್ನು ಖರೀದಿಸಿ, ಗೆದ್ದರು. ಈಗ ಲಾಭದಾಯಕ ಪಪ್ಪಾಯಿ ಕೃಷಿಯ ಗುಟ್ಟು ಗೊತ್ತಾಗಿ ಬಿಟ್ಟಿದೆ.

ಆಗಸ್ಟ್ – ಮಾರ್ಚ್ ಈ ತಳಿಯ ಪಪ್ಪಾಯಿ ಕೃಷಿಗೆ ಸೂಕ್ತ. ಆ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಹೈಬ್ರಿಡ್ ಪಪ್ಪಾಯಿ ಮಾರುಕಟ್ಟೆಗೆ ಬರುವುದಿಲ್ಲ. ಅದನ್ನರಿತ ಭಟ್ಟರು ತರಕಾರಿ ಬೆಳೆ ಮುಗಿದ ಬಳಿಕ ಪ್ರತಿ ವರ್ಷ ಹೊಸ ಗಿಡಗಳ ಮೂಲಕ ಪಪ್ಪಾಯಿ ಇಳುವರಿ ಪಡೆದು ಮಾರುಕಟ್ಟೆಗೆ ಸಾಗಿಸುತ್ತಾರೆ.
ಮೊದ ಮೊದಲು ಸುಲಭದಲ್ಲಿ ಒಪ್ಪದ ವ್ಯಾಪಾರಿಗಳು, ಗುಣಮಟ್ಟದ ನಂಬಿಕೆ ವೃದ್ಧಿಸಿದ ಬಳಿಕ ಇದೀಗ ತಾವೇ ಆರ್ಡರ್ ಕೊಟ್ಟು ಖರೀದಿಸುತ್ತಾರೆ.
ರಾಸಾಯನಿಕ ಮುಕ್ತ, ಸಾವಯವ ಹಣ್ಣುಗಳಿಂದಾಗಿ ಗ್ರಾಹಕರನ್ನು ಸೆಳೆದಿದೆ ನಮ್ಮ ಹಣ್ಣು. ಬೇರೆ ಹಣ್ಣುಗಳಂತೆ ಸಿಪ್ಪೆಯಲ್ಲಿ ಉಪ್ಪಿನ ಅಂಶವಿಲ್ಲ. ಮೊದಮೊದಲು ನಾನೇ ಹೋಗಿ ಕ್ವಿಂಟಲ್ ಹಣ್ಣುಗಳನ್ನು ಅಂಗಡಿಗೆ ಕೊಟ್ಟು ಬಂದು ಬಿಡುತ್ತಿz. ಮಾರಾಟವಾಗದೇ ಕೊಳೆತ ಹಣ್ಣುಗಳ ನಷ್ಟವನ್ನು
ನಮ್ಮ ತಲೆಯ ಮೇಲೇ ಹಾಕಲಾಗುತ್ತಿತ್ತು.

ಆಮೇಲೆ ಪಾಠ ಕಲಿತು. ಇದೀಗ ಆಟೋದಲ್ಲಿ ಒಯ್ದು, ಬೇಡಿಕೆ ಇದ್ದಷ್ಟೇ ಕೊಟ್ಟು ಬರುತ್ತೇನೆ. ಹೀಗಾಗಿ ನಷ್ಟದ ಭಯವಿಲ್ಲ. ಈಗ ಪಪ್ಪಾಯಿ ಬೆಳೆ ಕೈಗೆ ಬಂದರೆ ಸಿಂಗಲ್ ನಂಬರ್ ಲಾಟ್ರಿ ಗೆದ್ದಂತೆ’ ಎಂದು ನಗೆ ಬೀರುತ್ತಾರೆ ಭಟ್ಟರು. ಗೋಪಾಲ ಭಟ್ಟರೇನು ಮಾರುಕಟ್ಟೆ ತಜ್ಞರಲ್ಲ. ಆ ಬಗ್ಗೆ ಅಧ್ಯಯನವನ್ನೂ ಮಾಡಿದವರಲ್ಲ. ಆದರೆ ಅನುಭವಗಳ ಮೂಲಕ, ಬದುಕಿನ ಸೋಲುಗಳ ಸರಮಾಲೆಯಲ್ಲಿ ಎಲ್ಲವನ್ನೂ ಕಲಿತು, ಇದೀಗ ಸ್ವತಃ ‘ಕೃಷಿ-ಮಾರುಕಟ್ಟೆಯಲ್ಲಿ
ವಿeನಿ’ ಎನಿಸಿಬಿಟ್ಟಿzರೆ. ನಾವೇ ತೆಗೆದುಕೊಂಡು ಹೋಗಿ ಸುರಿಯುವ ಬದಲು, ಗುಣಮಟ್ಟದ ಉತ್ಪನ್ನ ಕೊಟ್ಟು ಗ್ರಾಹಕರ ನಂಬಿಕೆಯೊಂದಿಗೆ ಬ್ರಾಂಡ್ ಆಗಬೇಕು.

ವ್ಯಾಪಾರಿಗಳು ಬೇಡಿಕೆಯಿಟ್ಟಾಕ್ಷಣ ಕೊಡದೇ ತಾತ್ಕಾಲಿಕ ಅಭಾವ ಸೃಷ್ಟಿಸಿ, ವ್ಯಾಪಾರಿಗಳ ಲಾಭಿಯನ್ನು ಗೆಲ್ಲಲು ಕಲಿಯಬೇಕು. ಅವರೇ ಕೇಳುವಂತಾ ದರೆ ನಮ್ಮ ಉತ್ಪನ್ನಕ್ಕೆ ನಾವೇ ಬೆಲೆ ನಿಗದಿ ಮಾಡಬಹುದು ಎಂದು ಮಾರುಕಟ್ಟೆಯ ಬೇಡಿಕೆ-ಪೂರೈಕೆ ಸಮತೋಲನದ ಒಳಮರ್ಮ ಬಿಚ್ಚಿಡುತ್ತಾರೆ. ಮಳೆಗಾಲದಲ್ಲಿ ಪಪ್ಪಾಯಿ ಆವಕ ಕಡಿಮೆ. ಏಕೆಂದರೆ ಆಗ ರೋಗ-ಕೀಟಬಾಧೆ ಹೆಚ್ಚು. ಆದರೆ, ಆಗ ಎಡೆ ಡೆಂಗೆಯಂಥ ಜ್ವರದ ಹಾವಳಿ ಇರುತ್ತದೆ. ಪಪ್ಪಾಯಿ ಇಂಥವಕ್ಕೆ ದಿವ್ಯೌಷಧ. ಆಗ ನಮ್ಮ ಹಣ್ಣು ಮಾರುಕಟ್ಟೆಗೆ ಹೋಗುವಂತಾದರೆ ಕೇಳಿದಷ್ಟು ದರ ಸಿಗುತ್ತದೆ ಎಂದು ಗುಟ್ಟು ಬಿಟ್ಟುಕೊಡುತ್ತಾರೆ ಭಟ್ಟರು.

ಗ್ರಾಹಕರ ವಿಶ್ವಾಸಗಳಿಸುವುದೂ ಒಂದು ಕಲೆ. ಮೊದಲು ಉಪ್ಪಳ ಹಣ್ಣಿನ ಬೃಹತ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತಿರಸ್ಕರಿಸುತ್ತಿದ್ದರು. ಅವರಿಗೆ ಬುದ್ಧಿ ಕಲಿಸಲು ನಿರ್ಧರಿಸಿ ಅಂಗಡಿಯವರ ಮುಂದೆಯೇ, ಹೆzರಿಯ ಪಕ್ಕದ ಕಾರಿನ ಡಿಕ್ಕಿ ತೆರೆದಿಟ್ಟು ತಾವೇ ಸ್ವತಃ ವ್ಯಾಪಾರ ಆರಂಭಿಸಿದರು. ಹೋಗಿ ಬರುವವರಿಗೆಲ್ಲ ಹಣ್ಣನ್ನು ಕತ್ತರಿಸಿ ರುಚಿ ನೋಡಲು ಕೊಟ್ಟರು. ವ್ಯಾಪಾರ ಕುದುರಿತು. ಗ್ರಾಹಕರು ನೇರವಾಗಿ ಖರೀದಿಸಲು ತೊಡಗಿದಾಗ, ನಷ್ಟಕ್ಕೆ ಹೆದರಿದ ವ್ಯಾಪಾರಿಗಳು ತಾವೇ ಖರೀದಿಗೆ ಮುಂದಾದರು.

ಪ್ರಯೋಗಗಳಿಗೆ, ಹೊಸದನ್ನು ಕಲಿಯಲು ಕೃಷಿಕ ಹಿಂಜರಿಯಬಾರದು. ಆದರೆ, ಅಂಧಾನುಕರಣೆಗೆ ಮುಂದಾಗದೇ ವಿವೇಚನೆಯಿಂದ ಮುನ್ನಡಿ ಇಡಬೇಕು. ನಷ್ಟದ ವಾಸನೆ ಸಿಗುತ್ತಿದ್ದಂತೆ ಅದರಿಂದ ಹೊರಬರಬೇಕು ಎನ್ನುವ ಭಟ್ಟರು, ಈ ನಡುವೆ ಕಾಯಿ ಪಪ್ಪಾಯಿಯನ್ನು ಗೀರಿ ಪಡೆಯುವ
‘ಪಪೇನ್’ ಉತ್ಪಾದನೆಗೂ ಮುಂದಾಗಿದ್ದರು. ಅದಕ್ಕೆ ಔಷಧ ರಂಗದಲ್ಲಿ ಉತ್ತಮ ದರವಿದೆ. ಕೇರಳದ ರಾಣಿಪುರಂಗೆ ತೆರಳಿ ಪಪೇನ್ ತೆಗೆವ ವಿಧಾನವನ್ನೂ ಕಲಿತು ತಮ್ಮ ತೋಟದಲಿ ಪಪೇನ್ ತೆಗೆಯ ಹೊರಟರು. ಆದರೆ, ಮಾರುಕಟ್ಟೆಯುಲ್ಲಿ ಕಂಪನಿಗಳ ಏಕ ಸ್ವಾಮ್ಯ, ಗೀರಿದ ಹಣ್ಣುಗಳ ದರ ಕುಸಿತ,
ಇವನ್ನು ಪರಿ ಗಣಿಸಿದರೇ ಹಣ್ಣಿನ ವ್ಯಾಪಾರವೇ ಉತ್ತಮವೆಂದು ಭಾವಿಸಿ ಅದನ್ನು ನಿಲ್ಲಿಸಿದರು.

ಹಾಗೆಯೇ ಪಪ್ಪಾಯಿ ಜ್ಯೂಸ್ ಪ್ರಯೋಗವನ್ನೂ ಮಾಡಿದ್ದರು. ಹೆಚ್ಚುವರಿ ಜ್ಯೂಸ್ ತಾಳಿಕೆ ಬರುವುದಿಲ್ಲ ಎಂದರಿತು, ಕೆಮಿಕಲ್ ಹಾಕಿದ ಉತ್ಪನ್ನದಿಂದ ಬರುವ ಹಣ ಬೇಡ ಎಂದು ನಿರ್ಧರಿಸಿ ಅದನ್ನೂ ನಿಲ್ಲಿಸಿದರು. ಪಪ್ಪಾಯಿ ಕೊಯ್ಲಿನಲ್ಲಿ ಕೆಲವು ಸೂಕ್ಷ್ಮತೆಗಳಿವೆ. ಕಾಯಿಯ ಕೆಳಭಾಗ ಹಳದಿಗೆಂಪು ಬಣ್ಣಕ್ಕೆ ತಿರುಗಿದಾಗ ಕೊಯ್ಯಬೇಕು. ಕೊಯ್ಲಿನ ಸಂದರ್ಭದಲ್ಲಿ ಜಿನುಗುವ ಮೇಣ ಕಾಯಿಯ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ, ಹಣ್ಣು ಆ ಭಾಗದಲ್ಲಿ ಕಪ್ಪಾಗಿ ಅ ಕೊಳೆಯುತ್ತದೆ. ಒಂದೊಮ್ಮೆ ಮೇಣ ಸೋಂಕಿದರೆ, ತಕ್ಷಣ ತೊಳೆಯಬೇಕು.

ಸಂಜೆ ಹೊತ್ತಿಗೇ ಪಪ್ಪಾಯಿ ಕೊಯ್ದರೆ ಮೇಣ ಬೀಳುವ ಪ್ರಮಾಣ ಕಡಿಮೆ. ಕಾಯಿ ಕೊಯ್ದ ನಂತರ ಒಂದು ದಿನ ನೆರಳಲ್ಲಿಡಬೇಕು. ನಂತರ ಒಂದೊಂದ ನ್ನೇ ಪೇಪರಿನಲ್ಲಿ ಸುತ್ತಿ ರವಾನಿಸಿದರೆ ವಾರದವರೆಗೂ ತಾಳಿಕೆ ಇರುತ್ತದೆ. ಒಂದು ಗಿಡ ಪ್ರತಿ ಸೀಸನ್ ನಲ್ಲಿ ಸುಮಾರು ಐವತ್ತು ಕಾಯಿ ಕೊಡುತ್ತದೆ. ತೂಕದ ಲೆಕ್ಕದಲ್ಲಿ ಕ್ವಿಂಟಾಲ್ ವರೆಗೂ ಬೆಳೆ ಕೊಟ್ಟದ್ದಿದೆ. ಕಿಲೋಗೆ ಸರಾಸರಿ ೨೨ – ೩೦ ರೂಪಾಯಿ ದರ ಇದೆ -ವಿವರಿಸುತ್ತಾರೆ ಭಟ್ಟರು. ಪಪ್ಪಾಯಿ ಜತೆ ಜತೆಗೇ ಬಸಳೆ, ವೀಳ್ಯದೆಲೆ ಕೃಷಿಯನ್ನೂ ಮಾಡುತ್ತಾರೆ.

ಸಾಲಿನ ಇಕ್ಕಡೆಗಳಲ್ಲಿ ಗೂಟ ನೆಟ್ಟು ಹಬ್ಬಿಸಿ, ಹೊರಗಿನಿಂದ ರಾಸಾಯನಿಕ ಗೊಬ್ಬರ ಹಾಕದೇ ಒಂದು ಸಾವಿರ ಬಸಳೆ ಬುಡ ಬೆಳೆಸಿದ್ದರು. ‘ತಿಂಗಳಿಗೆ ಪ್ರತಿ ಬುಡದಲ್ಲಿ ಐದು ಕಿಲೋ ಎಳೆಬಸಳೆ ಸಿಕ್ಕಿತ್ತು. ಕಿಲೋಗೆ ೨೫ – ೩೦ ರೂ. ದರದಲ್ಲಿ ಪ್ರತಿ ದಿನ ಒಂದು ಕ್ವಿಂಟಾಲ್ ಮಾರಿದ್ದಿದೆ’ ನೆನಪಿಸಿಕೊಂಡರು. ಇದೇ ರೀತಿ ಹಾಗಲಕಾಯಿ ಬಿತ್ತಿ. ರಸ್ತೆಯಂಚಿನ ಬೇಲಿಗೆ ಹಬ್ಬಿಸಿದ್ದರು. ದಾರಿಹೋಕರು ಕೊಯ್ದು ಉಳಿದದ್ದನ್ನು ಮಾರಿಯೂ ಲಾಭ ಮಾಡಿದ್ದರು. ಮತ್ತೊಮ್ಮೆ ಅಂಗಳದಲ್ಲಿ ಎರಡು ಸಾವಿರದಷ್ಟು ವೀಳ್ಯದೆಲೆ ನಾಟಿ ಮಾಡಿ, ಲಾಭ ಮಾಡಿzರೆ. ವೀಳ್ಯದೆಲೆ ನಿರಂತರ ಆದಾಯ ತರುವ ಏಟಿಎಂ ಇದ್ದ ಹಾಗೆ. ವಾರದ ಉತ್ಪತ್ತಿಗೆ ಹೇಳಿ ಮಾಡಿಸಿದ್ದು. ಒಂದೂವರೆ ಎಕ್ರೆಯಲ್ಲಿ ಕುಂಬಳ ಕೃಷಿಯನ್ನೂ ಮಾಡಿ ಮದುವೆ ಸೀಸನ್‌ನಲ್ಲಿ ಕಿಲೋಗೆ ಮೂವತ್ತು ರೂಪಾಯಿಯಂತೆ ಮಾರಿದ್ದರು.

ಇದೀಗ ಧೂಪದ ಮರಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿ, ಬೆಳೆಯ ಪ್ರಯೋಗಕ್ಕೆ ಇಳಿದಿದ್ದಾರೆ. ಒಂದೂವರೆ ಎಕರೆಯಲ್ಲಿ ಸಾವಿರ ಮಣಸಿನ ಗಿಡಗಳು ಮೂರು ವರ್ಷಗಳಿಂದ ಮೇಲೇಳುತ್ತಿವೆ. ಜತೆಗೆ ರಬ್ಬರ್ ಸಹ ಮುಂದುವರಿದಿದೆ. ಕೃಷಿಯ ಜತೆಜತೆಗೆ ಕೈಗೊಂಡ ಹೈನುಗಾರಿಕೆಯದ್ದು ಭಟ್ಟರ ಇನ್ನೊಂದು ಯಶಸ್ಸಿನ ಅಧ್ಯಾಯ. ಹಾಲು ಮಾರಿ ಮಿಕ್ಕಿದ್ದನ್ನು ಮಜ್ಜಿಗೆ ಮಾಡಿ ಸನಿಹದ ಅಂಗಡಿಗೆ ಕೊಡುತ್ತಿದ್ದರು. ಒಂದು ದಿನ ಅಂಗಡಿಯವ ವ್ಯಾಪಾರವಾಗಲಿಲ್ಲ ಎಂಬ ಕಾರಣಕ್ಕೆ ಮಜ್ಜಿಗೆ ಕೊಳ್ಳಲೇ ಇಲ್ಲ. ಆತ ಮಸಾಲ ಮಜ್ಜಿಗೆ ಮಾಡಿ ಮಾರುತ್ತಿದ್ದುದು ಭಟ್ಟರ ಗಮನಕ್ಕೆ ಬಂದಿತ್ತು.

ಅದನ್ನು ತಾವೇ ಮಾಡಲು ನಿರ್ಧರಿಸಿ, ಮೆಣಸು, ಶುಂಠಿ, ಬೇವಿನೆಲೆ, ಉಪ್ಪು, ಮಸಾಲ ಸೇರಿಸಿ, ತಾವೇ ಪ್ಯಾಕೇಟ್ ಮಾಡಿ ಮೌಲ್ಯವರ್ಧನೆಯೊಂದಿಗೆ ಮಾರುಕಟ್ಟೆಗೆ ಇಳಿದರು. ರುಚಿಗೆ ಮನಸೋತ ಗ್ರಾಹಕರಿಂದ ಬೇಡಿಕೆ ಹೆಚ್ಚಿತು. ಈಗ ಭಟ್ಸ ಮಸಾಲಾ ಮಜ್ಜಿಗೆ ಕರಾವಳಿಯ ಜನಪ್ರಿಯ ಬ್ರಾಂಡ್.
ಹಿಂದೊಮ್ಮೆ ಜಿ೯ ಬಾಲೆ ಬೆಳೆದು ಕಲಿತ ಪಾಠ ಹೇಳಲು ಮರೆಯುವುದಿಲ್ಲ. ಅಡಕೆಯ ಮಧ್ಯೆ ೨೫೦೦ಕ್ಕೂ ಹೆಚ್ಚು ಬಾಳೆಹಾಕಿ, ಪ್ರತಿ ಕೊನೆಯಲ್ಲಿ ನಲವತ್ತರಿಂದ ಅರುವತ್ತು ಕಿಲೋ ಇಳುವರಿ ಪಡೆದಿದದ್ದರು. ಆದರೆ, ಅಂಗಡಿಯವರು ದೊಡ್ಡ ಗೊನೆ ಮಾರಾಟವಾಗದು, ಬೇಡ ಅಂದುಬಿಟ್ಟಿದ್ದರಂತೆ.
ಕೊನೆಗೆ ಗೊನೆಯನ್ನು ಅರ್ಧಕ್ಕೆ ಕತ್ತರಿಸಿ ಮಾರಿ ನಷ್ಟ ತಪ್ಪಿಸಿಕೊಂಡರು.

ಹೀಗೆ ಸಕಾಲಿಕ ವಿವೇಚನೆ ಯನ್ನುಬೇಸಾಯಗಾರ ಬಳಸಬೇಕು ಎನ್ನುತ್ತಾರೆ. ಕೃಷಿಕ ಪೇಟೆಗೆ ಹೋಗುವಾಗ ಯಾವತ್ತೂ ಬರಿಗೈಲಿ ಹೋಗಬಾರದು. ಜತೆಗೆ ಏನಾದರೂ ಒಂದು ಉತ್ಪನ್ನ ಒಯ್ಯಲೇಬೇಕು. ಹಾಗಾಗಬೇಕಾದರೆ, ಒಂದೇ ಬೆಳೆಗೆ ಜೋತು ಬೀಳದೇ ಕಾಲಕ್ಕೆ ತಕ್ಕಂತೆ ಎಲ್ಲ ಬೆಳೆ ಪ್ರಯೋಗಗಳಿಗೆ ಹಿಂಜರಿಯಬಾರದು. ಯಾವುದೇ ಕೃಷಿ ಉತ್ಪನ್ನಗಳಲ್ಲಿ ಗುಣಮಟ್ಟ, ತಾಜಾತನ ಮುಖ್ಯ. ಅದರಲ್ಲೂ ಹಣ್ಣು-ತರಕಾರಿಯಲ್ಲಿ ಈ ಅಂಶ ಮುಖ್ಯ. ಒಂದೆರಡು ಕಿಲೋಗಳ ಬದಲು ಒಟ್ಟಿಗೇ ಕನಿಷ್ಠ ಇಪ್ಪತ್ತೈದು- ಐವತ್ತು ಕಿಲೋ ಒಯ್ಯಬೇಕು. ಇದರಿಂದ ಕೊಳ್ಳುಗರ ಮನ ಸೆಳೆಯಲು ಸಾಧ್ಯ. ಜಾಣ್ಮೆಯ ಕೃಷಿಯಲ್ಲಿ ಸೋಲಿಲ್ಲ.ಪ್ರಾಮಾಣಿಕ ದುಡಿಮೆಗೆ ಮಣ್ಣಿನಲ್ಲಿ ಬೆಲೆ ಇದೆ. ಆದರೆ, ಕೃಷಿಕನಿಗೆ ವಾತಾವರಣ ಮತ್ತು ಮಾರುಕಟ್ಟೆಯಂಥ ಎಲ್ಲದರ ಅರಿವು, ತುಸು ಜಾಣ್ಮೆ ಬೇಕು.

ದೀರ್ಘಾವಧಿ ಬೆಳೆಗಿಂತ ಅಲ್ಪಾವಧಿ ಬೆಳೆ ಉತ್ತಮ. ಬದುಕಿನ ಎಲ್ಲ ಅಗತ್ಯಕ್ಕೆ ನಗರಗಳು ಹಳ್ಳಿಯ ಕೃಷಿಯನ್ನೇ ನೆಚ್ಚಿಕೊಂಡಿವೆ. ಆದರೆ ಲಾಭದ ಭ್ರಮೆಗೆ ಬಿದ್ದು ನಗರಕ್ಕೆ ಒಯ್ಯುವ ಸಾಹಸಕ್ಕೆ ಹೋಗಿ ಮಧ್ಯವರ್ತಿಗಳಿಂದ ನಷ್ಟಕ್ಕೆ ಒಳಗಾಗುವ ಬದಲು, ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿ ಕೊಳ್ಳುವುದನ್ನು ಕಲಿಯಬೇಕು. ಇದೆಲ್ಲವನ್ನೂ ಅನುಭವದಿಂದಲೇ ನಾನು ಕಲಿತದ್ದು. ನಷ್ಟಕ್ಕೆ ಬೆದರಿ ಪ್ರಯೋಗಕ್ಕೆ ಹಿಂಜರಿಯದೇ, ಮೋಜಿನ ಬದುಕಿಗೆ ಆಸೆ ಪಡದೇ, ನಗರದ ಥಳುಕಿನ ಸೆಳೆತಕ್ಕೆ ಒಳಗಾಗದೇ ಉಳಿದರೆ ಕೃಷಿಯಲ್ಲಿ ಸಿಗುವ ನೆಮ್ಮದಿಯ ಲಾಭ ಜಗತ್ತಿನಲ್ಲಿ ಇನ್ನಾವುದರಲ್ಲೂ ಇಲ್ಲ ಎಂಬುದು ಭಟ್ಟರ ಖಚಿತ ಅಭಿಪ್ರಾಯ.

ಅಂದು, ಅಳಿಯ ರವಿ ಇಲ್ಲದಿದ್ದರೆ ಖಂಡಿತಾ ಬದುಕುತ್ತಿರಲಿಲ್ಲ. ಹಾಗೆಯ ಅವರ ಹಣ ಹಿಂತಿರುಗಿಸಬೇಕೆಂಬ ಒಂದೇ ಕಾರಣ ಮತ್ತೆ ನನ್ನನ್ನು ಕೃಷಿಗೆ, ಆ ಮೂಲಕ ಪ್ರಾಮಾಣಿಕ ಬದುಕಿಗೆ ನನ್ನನ್ನು ಕರೆತಂದಿತು. ಕೃಷಿ ಎಂದರೆ ಸಾಲ ನಷ್ಟ ಎನ್ನುವವರಿಗೆ ನನ್ನ ಬದುಕೇ ಪಾಠ. ಕೃಷಿ ತಪಸ್ಸಿನಲ್ಲಿ ಇವತ್ತು ನಾವೆಲ್ಲವೂ ನೆಮ್ಮದಿ ಕಂಡಿದ್ದೇವೆ’ ಎನ್ನುವಾಗ ಭಟ್ಟರ ಧ್ವನಿ ಗದ್ಗದಿತವಾಗಿದ್ದು ಅರಿವಾಯಿತು. ಪತ್ನಿ ಅರುಣಾ, ಮಗ ತಿರುಮಲ ಮುರಳಿ, ಸೊಸೆ ಮೇಘ,
ಮಗಳು ವಿದ್ಯಾಶಂಕರಿ, ಅಳಿಯ ಶ್ಯಾಮಸುಂದರ್ ಎಲ್ಲರಿಗೂ ಈಗ ಭಟ್ಟರ ಬಗ್ಗೆ ಹೆಮ್ಮೆ. ಅದು ಕೇವಲ ಅವರಿಗಷ್ಟೇ ಅಲ್ಲ. ಇಡೀ ಜಗತ್ತಿಗೇ ಇದೆ. ಈ ಯಶೋಗಾಥೆ ಓದಿದ ಬಳಿಕ ನಿಮ್ಮ ಅನುಭವವೂ ಇದೇ ಆಗಿರಬಹುದು. ಅಲ್ಲವೇ? ಅವರ ಸಂಪರ್ಕಕ್ಕೆ: ೯೪೦೦೭೪೫೩೩೦