ಸುಪ್ತ ಸಾಗರ
rkbhadti@gmail.com
ಕಡು ಕಂದು ಬಣ್ಣದ, ಮಿರಮಿರನೆ ಮಿಂಚುವ ತೊಗಲಿನ, ಉದ್ದ ಕಿವಿಯ, ಎದ್ದು ಕಾಣುವ ಭುಜದ ತುಂಬಿದ ಮೈಯ ಆ ಹಸು ನಡೆದು ಬರುತ್ತಿದ್ದರೆ ಅದೇನೋ ಎಂತೋ ತನ್ನಿಂದ ತಾನೇ ಭಕ್ತಿಭಾವ ಉಕ್ಕುತ್ತಿತ್ತು. ಆಕೆ ಗೋಮಾತೆ. ಆಕೆಯ ಮುಗ್ಧಮುಖ ಕಂಡರೆ ಸಾಕು ಎಂಥವರೂ ಒಮ್ಮೆ ಮೈದಡವಿ ಮುದ್ದಿಸುವಂತಿತ್ತು. ಅದಾದರೂ ಸಾಮಾನ್ಯದ್ದಲ್ಲ. ಲಾಪೋಡಿಯಾದ ರಾಜಮನೆತನದ ಗೋ ಮಾತೆ. ಒಂದು ಕಾಲದಲ್ಲಿ ಆ ‘ಗೋ ಮಾತೆ’ ಅಲ್ಲಿನ
ನೀರನ್ನು ಕುಡಿಯುತ್ತಿರಲಿಲ್ಲ.
ಕುಡಿಯುವುದು ಹಾಗಿರಲಿ ಮೂಸಿಯೂ ನೋಡುತ್ತಿರಲಿಲ್ಲ. ಉಳಿದೆಲ್ಲ ಜಾನುವಾರುಗಳೂ ಅ ಹೊಂಡಕ್ಕೆ ಬಂದು ಅಳಿದುಳಿದ ಕೆಸರು ನೀರನ್ನೇ
ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದವು. ಆದರೆ ಈಕೆ…. ಊಹುಂ…ಸರ್ವಥಾ ಇಲ್ಲ. ಜಹಗೀರರ ಮನೆಯದ್ದು ಎಂಬ ಕಾರಣಕ್ಕೆ ಅದು ಹೊಂಡದ ನೀರನ್ನು ಕುಡಿಯುತ್ತಿರಲಿಲ್ಲ ಎಂಬುದಕ್ಕಿಂತ ಅತ್ಯಂತ ಕುಶಾಗ್ರಮತಿಯಾದ ಆ ಹಸುವಿಗೆ ಲಾಪೋಡಿಯಾದ ಕಲುಷಿತ ನೀರನ್ನು ಕುಡಿಯುವ ಮನಸ್ಸಿರಲಿಲ್ಲ….
ರಾಜಸ್ಥಾನದ ಬರಪೀಡಿತ ಲಾಪೋಡಿಯಾವನ್ನು ಮರಳಿ ಹಸುರಿಗೆ ತಿರುಗಿಸಿದ, ಅಲ್ಲಿನ ತಾಲಾಬ್ ಅನ್ನು ಪುನಶ್ಚೇತನಗೊಳಿಸಿದ ಲಕ್ಷ್ಮಣ್ ಸಿಂಗ್ ಅವರಿಗೆ ಪದ್ಮಶ್ರೀ ಸಂದ ಹಿನ್ನೆಲೆಯಲ್ಲಿ ೯೦ರ ದಶಕದಲ್ಲಿ ಅವರು ಕೈಗೊಂಡಿದ್ದ ‘ಜಲಯಾತ್ರೆ’ ಚಿತ್ರಣವನ್ನು ಕಳೆದರಡು ವಾರಗಳ ಹಿಂದಿನ ಇದೇ ಅಂಕಣದಲ್ಲಿ ಕಟ್ಟಿಕೊಡಲಾಗಿತ್ತು.
ಸ್ವತಃ ಲಕ್ಷ್ಮಣ್‌ರ ತಾಲಾಬ್ ಕಾರ್ಯವನ್ನು ಸಂದರ್ಶಿಸಿ ಬಂದಿದ್ದರ ಮೆಲುಕನ್ನು ಇನ್ನಷ್ಟು ಮೊಗೆದುಕೊಡುವಂತೆ ಸಾಕಷ್ಟು ಓದುಗರು ಒತ್ತಾಯಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಲಾಪೋಡಿಯಾದಲ್ಲಿ ನಿಜಕ್ಕೂ ಏನು ನಡೆದಿತ್ತು ಎಂಬುದನ್ನು ಇನ್ನೊಂದು ಕಂತಿನಲ್ಲಿ ವಿವರಿಸಲು ಯತ್ನಿಸಿದ್ದು ಇಂದಿನ ಅಂಕಣ ವಾಗಿದೆ. ‘ಕೊನೆಗೂ ಅನ್ನ ಸಾಗರವೆಂಬೋ ಅನ್ನ ಸಾಗರವನ್ನು ಕಟ್ಟಿ ನಿಲ್ಲಿಸುವವರೆಗೆ ಅದು ಅಲ್ಲಿನ ನೀರನ್ನು ಮುಟ್ಟಲಿಲ್ಲ. ಮಾತ್ರವಲ್ಲ. ಆ ಗೋಮಾತಾ ತಾಲಾಬ್‌ನ ಹತ್ತಿರವೆಲ್ಲೂ ಸುಳಿಯುತ್ತಿರಲಿಲ್ಲ. ಇವತ್ತು ಗೋಮಾತೆಯನ್ನು ನೀವು ನೋಡಬೇಕು. ಆಕೆಯ ಹರ್ಷ, ಸಂತಸಕ್ಕೆ ಪಾರವೇ ಇಲ್ಲ.
ಪ್ರತಿ ದಿನ ೧.೫ ಕಿಮೀ ಉದ್ದದ ತಾಲಾಬ್‌ನ ಸುತ್ತ ೧೫ ಅಡಿ ಎತ್ತರಕ್ಕೆ ನಿರ್ಮಿಸಿದ ದಂಡೆಯ ಮೇಲೆ ಒಂದು ಸುತ್ತು ಬಂದೇ ಬರುತ್ತದೆ. ಅಲ್ಲಿಯೇ ಮೇಯುತ್ತಿರುತ್ತದೆ. ಅಲ್ಲಿನ ಸುಂದರ ಪರಿಸರಕ್ಕೆ ಸಾಕ್ಷಿಯಾಗುತ್ತದೆ. ಸುತ್ತಲಿನ ಹಕ್ಕಿಗಳ ಕಲರವಕ್ಕೆ ಕೊರಳಾಗುತ್ತದೆ. ಬಿಸಿಲಿಗೆ ಬೆವರುತ್ತದೆ. ಹಸಿರಿಗೆ ಮೈಯೊಡ್ಡಿ ಬೆರೆಯುತ್ತದೆ. ನೆರಳಿಗೆ ನಿಂತು ತಣಿಯುತ್ತದೆ. ಮಂದೆಯೊಳಗೊಂದಾಗಿ ಇದ್ದೂ ಮುಂದಾಗಿ ಕಾಣುತ್ತದೆ….ಒಟ್ಟಾರೆ ತಾಲಾಬ್ ತುಂಬಿನಿಂತ ಮೇಲೆ ಆಕೆಯ ಸಂಭ್ರಮ ಇಮ್ಮಡಿಸಿದೆ….’ ಲಕ್ಷ್ಮಣ್ ವಿವರಿಸುತ್ತಿದ್ದರೆ ರೋಮಾಂಚನವಾಗುತ್ತದೆ.
ಅತ್ಯಂತ ಸೂಕ್ಷ್ಮ, ಸಂವೇದನಾಶೀಲ ಸ್ವಭಾವದ ಆ ಗೀರ್ ತಳಿಯ ಸರಿ ಸುಮಾರು ಮೂರು ತಲೆಮಾರಿನ ಜಾನುವಾರುಗಳು ಶುದ್ಧ ನೀರಿನಿಂದ ವಂಚಿತವಾ ಗಿದ್ದವು. ಲಾಪೋಡಿಯಾದ ಪುರಾತನ ಆ ತಾಲಾಬ್ ಒಡ್ಡು ಕಳಚಿಕೊಂಡು ಗೊಡ್ಡು ಬಿದ್ದ ಮೇಲೆ ಮೂವತ್ತು ವರ್ಷಗಳ ಕಾಲ ಊರಿಗೆ ಊರೇ ನೀರಿನ ಕೊರತೆಯನ್ನು ಎದುರಿಸಿತ್ತು. ಬರಗಾಲ ಬಗಲಲ್ಲಿಟ್ಟುಕೊಂಡೇ ಅವರು ಬದುಕುತ್ತ ಬಂದಿದ್ದರು ಜನ. ಆವತ್ತು ಲಕ್ಷ್ಮಣ್‌ಸಿಂಗ್‌ಗೆ ಆ ಗೋ ಮಾತೆಯ
ಗೋಳು ನೋಡಲಾಗಲಿಲ್ಲ. ಅದು ಸಂಕೇತವಾಗಿತ್ತು.
ಬಹುತೇಕ ಊರಿನ ಶೇ. ೭೫ರಷ್ಟು ಜೀವ ಸಂಕುಲ ಅದಾಗಲೇ ಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗಿದ್ದವು. ಮುಂಜಾವಿನ ಆ ಎಳೆ ಬಿಸಿಲು ಹಿತವಾಗಿ ಮೈದಡವ ಬೇಕಿತ್ತು. ಆದರೆ ಅದು ರಾಜಸ್ಥಾನ. ಹಾಗೆನ್ನುವುದಕ್ಕಿಂತ ಬರ ಪೀಡಿತ ರಾಜ್ಯವೊಂದರ ಬರಪೀಡಿತ ಜಿಲ್ಲೆಯ ಅತ್ಯಂತ ಹೀನಾಯ ಸನ್ನಿವೇಶ ವನ್ನು ನೀರಿನ ವಿಚಾರದಲ್ಲಿ ಎದುರಿಸುತ್ತಿರುವ ಲಾಪೋಡಿಯಾದ ಮುಂಜಾವು ಅದಾಗಿತ್ತು. ಹಾಗಾಗಿ ಎಳೆಯ ಕಿರಣಗಳೂ ಚರ್ಮವನ್ನು ಚುರುಗುಡಿಸು ತ್ತಿದ್ದವು.
ಅಂಥ ಸುಡು ಬಿಸಿಲು ನೆತ್ತಿಯ ಮೇಲೆ ಬರುವವರೆಗೂ ಅಂದು ಕೆಲಸ ಸಾಗಿತ್ತು. ಅಷ್ಟೇ ದುಡಿದ ದೇಹದಲ್ಲಿ ಮೂಡಿದ ಬೆವರ ಹನಿಗಳು ತಾಲಾಬ್‌ನಲ್ಲಿ ಇಳಿದು ಮುತ್ತಾಗಿ ಕಟ್ಟಿನಿಲ್ಲಲು ಪ್ರೇರಣೆಯಾಯಿತು. ಊರಿನ ಮಂದಿಗೆ ಎರಡು ಪ್ರಮುಖ ಸಂಗತಿಗಳು ಅಲ್ಲಿ ಮನದಟ್ಟಾಗಿತ್ತು. ಉದ್ಯೋಗವಿಲ್ಲದೇ ಬಹುಕಾಲದಿಂದ ಜಡ್ಡುಗಟ್ಟಿಹೋಗಿದ್ದ ಮೈ ಮನಗಳು ಅಂದಿನ ಶ್ರಮದಾನದಿಂದ ಎಂಥದ್ದೋ ಉತ್ಸಾಹದಿಂದ ಪುಟಿಯುತ್ತಿದ್ದವು. ಇದು ಮುಂದು ವರಿದರೆ ಇಷ್ಟರಲ್ಲೇ ತಮ್ಮ ಬದುಕು ದಡ ಹತ್ತುವಲ್ಲಿ ಅನುಮಾನ ಉಳಿದಿರಲಿಲ್ಲ. ಕೃಷಿಯೇ ಜೀವಾಳವಾಗಿದ್ದ ಸರಿ ಸುಮಾರು ೨೦೦ ಕುಟುಂಬಗಳ ಆ ಊರಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ನೀರಾಗಿತ್ತು. ಅದು ತಾಲಾಬ್ ಅನ್ನು ಕಟ್ಟಿ ನಿಲ್ಲಿಸುವುದರೊಂದಿಗೆ ಕೊನೆಗೊಳ್ಳುತ್ತದೆ.
ಯಾರು ಜತೆಗಿದ್ದಾರೋ ಇಲ್ಲವೋ ಎಂಬುದನ್ನು ನೋಡಲಿಲ್ಲ; ಅಂದು ಬೆಳಗ್ಗೆದ್ದವರೇ ಗುದ್ದಲಿ ಕೈಯಲ್ಲಿ ಹಿಡಿದು ತಾಲಾಬ್‌ನತ್ತ ನಡೆದೇ ಬಿಟ್ಟರು ಲಕ್ಷ್ಮಣ್‌ಸಿಂಗ್. ಲಕ್ಷ್ಮಣ್ ಮತ್ತೆ ಕೆಲಸಕ್ಕೆ ತೊಡಗುವ ಮುನ್ನ ಹೇಳಿದ್ದಿಷ್ಟೇ- ‘ಇದು ನಮ್ಮೂರಿನ ಕೆಲಸ. ಇದನ್ನು ನಾವು ಮಾಡದೇ ಇನ್ನಾರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀರೊಡೆಯುವವರೆಗೆ ಊರಿನ ಜಮೀನುಗಳಲ್ಲಿ ಬೆಳೆಯ ಹೊಡೆಯೊಡೆಯುವುದು ಸಾಧ್ಯ ಇಲ್ಲ. ಅಂಥ ಹಸಿರು ಒಡಮೂಡದ ಹೊರತೂ ನಮ್ಮ ಉಸಿರು ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯಾದರೂ ಇಲ್ಲಿ ಮತ್ತೆ ತಾಲಾಬ್ ಅನ್ನು ಕಟ್ಟಿ ನಿಲ್ಲಿಸಬೇಕು.’
ತಮ್ಮ ರಾಜ(ವಂಶಸ್ಥ) ಲಕ್ಷ್ಮಣ್ ಸಿಂಗ್ ಸ್ವತಃ ತಾಲಾಬ್‌ನ ಪುನಶ್ಚೇತನಕ್ಕೆ ಟೊಂಕ ಕಟ್ಟಿ ಅಂಗಳಕ್ಕೆ ಇಳಿದಿದ್ದಾರೆ. ಅವರೊಂದಿಗೆ ಕೈ ಜೋಡಿಸುವುದು ಕರ್ತವ್ಯ ಎಂಬುದಕ್ಕಿಂತ ಅದು ಧರ್ಮ. ಎಷ್ಟೋ ವರ್ಷಗಳ ನಂತರ ಮೊದಲ ಬಾರಿಗೆ ಪ್ರಭುತ್ವ ಊರಿನ ಸಮಸ್ಯೆಯ ಬೇರು ಹುಡುಕಿ ಹೊರಟಿದೆ. ಅದು ಪರಿಹಾರ ಕಾಣುವ ಆಶಾ ಕಿರಣವೂ ಮೂಡಿದೆ. ಈ ಸಂದರ್ಭದಲ್ಲಿ ನಾವು ಜತೆಗೂಡದಿದ್ದರೆ ಇನ್ನೆಂದಿಗೂ ಊರು ಉದ್ಧಾರವಾಗಲು ಸಾಧ್ಯವೇ ಇಲ್ಲ ಎಂಬ ಸಂಗತಿ ಮನವರಿಕೆಯಾಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ಸೇರಿಕೊಳ್ಳತೊಡಗಿದರು.
ಅಂದು ಸಂಜೆ ಊರ ಮುಂದಿನ ಕಟ್ಟೆಯಲ್ಲಿ ಲಕ್ಷ್ಮಣ್ ಪುಟ್ಟ ಭಾಷಣವನ್ನು ಮಾಡಿದರು- ‘ನಾವು ಕೃಷಿಯನ್ನೇ ಬದುಕಾಗಿ ಸ್ವೀಕರಿಸಿದವರು. ಅದಿಲ್ಲದೇ
ನಮಗೆ ಬೇರೆ ದಿಕ್ಕಿಲ್ಲ. ಪೇಟೆಗೆ ಹೋಗಿ ಉದ್ಯೋಗ ಮಾಡಲು ಶಿಕ್ಷಣ ಬೇಕೇಬೇಕು. ಊರಲ್ಲಿದ್ದು ಉತ್ತಿಬಿತ್ತಲು ನೀರು ಬೇಕು. ಶಿಕ್ಷಣ ನಮಗೆ ಮರೀಚಿಕೆ ಯಾಗಿರುವುದು ಗೊತ್ತೇ ಇದೆ. ಅಂಥ ಆರ್ಥಿಕ ಶಕ್ತಿಯೂ ನಮ್ಮಲ್ಲಿ ಉಳಿದಿಲ್ಲ. ಅದನ್ನು ಗಳಿಸಿಕೊಳ್ಳಬೇಕಾದರೆ ನಾವು ಮೊದಲು ಕೃಷಿಯಲ್ಲಿ ತೊಡಗಿ ಕೊಳ್ಳುವುದು ಅನಿವಾರ್ಯ. ಅದಕ್ಕೆ ಅಗತ್ಯ ನೀರನ್ನು ಸೃಷ್ಟಿಸಿಕೊಳ್ಳುವುದು ನಮಗೆ ಗೊತ್ತಿದೆ. ಅದು ನಮ್ಮಿಂದ ಸಾಧ್ಯವೂ ಇದೆ. ಅದಿಲ್ಲದಿದ್ದರೆ ನಮ್ಮ ಬಡತನವನ್ನು ಲೇವಾದೇವಿಗಾರರು ಮತ್ತಿತರ ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಮಾತ್ರವಲ್ಲ ಈಗಾಗಲೇ ಒತ್ತೆ ಇಟ್ಟ ನಮ್ಮ ಜಮೀನುಗಳು ಮುಂದೊಂದು ದಿನ ಹಣವಂತರ ಪಾಲಾಗುತ್ತದೆ. ಅವತ್ತು ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿ ಜೀತ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಯೋಚಿಸಿ ನೋಡಿ, ಉತ್ತಮ ಬದುಕು ಬೇಕಿದ್ದರೆ ನಮ್ಮೊಂದಿಗೆ ಕೈಜೋಡಿಸಿ. ನಾವು ಕಟ್ಟುತ್ತಿರುವುದು ಕೇವಲ ಅನ್ನ ಸಾಗರವನ್ನಲ್ಲ. ಅದು ಜೀವ ಸಾಗರ. ಅದುಳಿದರೆ ಊರು ಉಳಿದೀತು. ಊರುಳಿದರೆ ಎಲ್ಲವೂ ಉಳಿದುಕೊಂಡೀತು. ಯ್ಕೆ ನಿಮಗೆ ಬಿಟ್ಟದ್ದು.’ ಅಷ್ಟು ಹೇಳಿ ಮನೆಗೆ ಹೊರಟ ಲಕ್ಷ್ಮಣ್‌ರನ್ನು ಮೂವತ್ತು ಮಂದಿಯ ಸಣ್ಣದೊಂದು ಪಡೆಯೇ ಹಿಂಬಾಲಿಸಿತ್ತು.
ಅವತ್ತು ರಾತ್ರಿ ಯಾರೊಬ್ಬರೂ ಸರಿಯಾಗಿ ನಿದ್ರೆ ಮಾಡಲಿಲ್ಲ. ಅವತ್ತು ಅಂತಲೇ ಅಲ್ಲ. ಮುಂದಿನ ಒಂದು ತಿಂಗಳ ಕಾಲ ನಿದ್ದೆ ಮಾಡಲಿಲ್ಲ. ಪ್ರತಿ ದಿನ ಮುಂಜಾವು ಹತ್ಯಾರಗಳೊಂದಿಗೆ ಲಕ್ಷ್ಮಣ್ ಕೆರೆಯಂಗಳಕ್ಕೆ ಬಂದು ನಿಲ್ಲುವುದರೊಳಗೆ ಸ್ವಯಂಸೇವಕರ ದಂಡು ಅಲ್ಲಿ ನೆರೆದಿರುತ್ತಿತ್ತು. ಮಧ್ಯಾಹ್ನದವರೆಗೆ ದುಡಿತ. ತಾಲಾಬ್‌ನಲ್ಲಿ ತುಂಬಿದ್ದ ಹೂಳು ಹೊರಬಿದ್ದು ಸುತ್ತಲೂ ಏರಿಯಾಗಿ ಪೇರಿಸತೊಡಗಿತ್ತು.
ಮಧ್ಯಾಹ್ನದ ನಂತರ ಮತ್ತೆ ಚರ್ಚೆ, ಜಾಗೃತಿ….ನಡೆದವು. ಮರು ದಿನ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಿದ್ದರು. ಹೀಗೆಯೇ ಸಾಗಿತ್ತು. ಅಲ್ಲಿ ಕೆಲಸ ನಡೆದಿರುವಾಗ ಇತ್ತ ಜನ ಮಾತನಾಡಿಕೊಳ್ಳತೊಡಗಿದರು. ಸುದ್ದಿ ಸುತ್ತಲೂ ಜನರಿಂದ ಜನರ ಕಿವಿಗೆ ಹಬ್ಬತೊಡಗಿತ್ತು. ಯೋಜನೆಯಂತೆ ಪ್ರತಿ ದಿನ
ಕನಿಷ್ಠ ೬೦ ಸ್ವಯಂ ಸೇವಕರು ನಿರಂತರ ದುಡಿದರೆ ಮಾತ್ರ ಅಂದುಕೊಂಡಂತೆ ತಾಲಾಬ್ ನೀರಿನಿಂದ ತುಂಬಿಕೊಳ್ಳುವುದು ಸಾಧ್ಯವಿತ್ತು. ಅದಕ್ಕೆ ಹೆಚ್ಚು ದಿನ ಹಿಡಿಯಲಿಲ್ಲ.
ತಾಲಾಬ್‌ನ ನೆಪದಲ್ಲಿ ನೀರೆಚ್ಚರ ಮೂಡಿಸುವಲ್ಲಿ ಲಕ್ಷ್ಮಣ್ ಯಶಸ್ವಿಯಾಗಿದ್ದರು. ಅದು ಅಲ್ಲಿಗೇ ನಿಲ್ಲಲಿಲ್ಲ. ಅನ್ನಸಾಗರದ ಬಳಿಕ ದೇವಸಾಗರ. ಅದರ ನಂತರ -ಲ್ ಸಾಗರ… ಹೀಗೆ ಮೂರು ಬೃಹತ್ ತಾಲಾಬ್‌ಗಳು ಲಾಪೋಡಿಯಾದ ಮೂರು ದಿಕ್ಕಿನಲ್ಲಿ ನಳನಳಿಸತೊಡಗಿದ್ದವು. ಕೃಷಿಗೊಂದು, ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ವಿವಿ ಧಾನಗಳಿಗೊಂದು, ನಿಸರ್ಗದ ಪ್ರಾಣಿ-ಪಕ್ಷಿಗಳಂಥ ಇತರ ಜೀವರಾಶಿಗಳಿಗೊಂದು ಹೀಗೆ ಮೂರು ತಾಲಾಬ್‌ಗಳೂ
ಅನ್ವರ್ಥಕಗೊಂಡವು. ೩೦೦ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹಸಿರು ಚಿಗುರಲಾರಂಭಿಸಿದ್ದೇ ತಡ ಗುಳೇ ಹೋಗಿದ್ದ ಕುಟುಂಬಗಳು ಒಂದೊಂದಾಗಿ ಮರಳಲಾರಂಭಿಸಿದವು; ಜತೆಗೆ ವಲಸೆ ಹೋಗಿದ್ದ ಜೀವರಾಶಿಗಳೂ ಸಹ.
ಮತ್ತಲ್ಲಿ ಮೂಡಿತ್ತು ಹಿಂದಿನ ಕಲರವ. ಮರಳಿತ್ತು ಲಾಪೋಡಿಯಾದ ವೈಭವ. ಆ ಗೋ ಮಾತೆ ಮನದಲ್ಲಿ ಯಾವ ಕಳಂಕವಿಲ್ಲದೇ ನೆಮ್ಮದಿಯಿಂದ ದೇವ ಸಾಗರವನ್ನೊಮ್ಮೆ ಪ್ರದಕ್ಷಿಣೆ ಮಾಡಿ, ಅನ್ನ ಸಾಗರವನ್ನೊಮ್ಮೆ ಅವಲೋಕಿಸಿ -ಲ್(ಹೂವು) ಸಾಗರಕ್ಕೆ ಬಂದು ಪ್ರತಿ ದಿನ ದಾಹ ತೀರಿಸಿಕೊಳ್ಳುತ್ತಿದ್ದಾಳೆ.
ಅದರ ಫಲವಾಗಿ ಇಂದು ಲಾಪೋಡಿಯಾದಲ್ಲಿ ನೀರಿನದಷ್ಟೇ ಅಲ್ಲ, ಹಾಲಿನ ಹೊಳೆಯೂ ಹರಿಯುತ್ತಿದೆ.
***
‘ಗೋಚಾರ್’(ಗೋಮಾಳಕ್ಕೆ ರಾಜಸ್ಥಾನಿ ಭಾಷೆಯ ಪದ) ಗಳ ಹಸಿರಿನ ಗೊಡವೆಗೆ ನಾವು ಹೋಗದೇ ಉಳಿದರಷ್ಟೇ ಸಾಕು. ಮಾನವ ಹಸ್ತಕ್ಷೇಪದಿಂದ ಅವನ್ನು ದೂರವಿಟ್ಟರೆ ಅದೇ ದೊಡ್ಡದು. ಬದುಕು-ನಿಸರ್ಗ-ಜೀವ ಸಂಕುಲ, ಭುವನದ ಮೇಲಿನ ಈ ಮೂರು ಸಂಗತಿಗಳ ನಡುವಿನ ಬಾಂಧವ್ಯ ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ. ಸಂಪತ್ತಿನ ಹೆಚ್ಚಳಕ್ಕೆ ನಾವೇನೂ ಮಾಡುವುದೇ ಬೇಕಿಲ್ಲ- ಇದು ಲಕ್ಷ್ಮಣ್ ಸಿಂಗ್ ಬಲವಾದ ನಂಬಿಕೆ. ಇದನ್ನೇ ಆಧಾರವಾಗಿಟ್ಟು ಕೊಂಡು ನಿರೂಪಿಸಿದ ನೀತಿ ಲಾಪೋಡಿಯಾದಲ್ಲಿ ಹಾಲಿನ ಹೊಳೆಯನ್ನು ಹರಿಸಿತು. ನೀರ ನೆಮ್ಮದಿಯನ್ನು ನಿಲ್ಲಿಸಿತು. ಕೃಷಿ ಸಮೃದ್ಧಿಯನ್ನು ಕಟ್ಟಿಕೊಟ್ಟಿತು. ಬದುಕು ಬಂಗಾರವಾಗಿಸಿತು.
ರಾಜಸ್ಥಾನದಲ್ಲಿ ೯೦ರ ದಶಕದ ಆರಂಭದ ಅವಧಿಯಲ್ಲಿ ಅತ್ಯಪೂರ್ವ ಜೀವ ಸಂಸ್ಕೃತಿಯೊಂದಕ್ಕೆ ಭದ್ರ ಬುನಾದಿಯನ್ನು ಹಾಕಿದವರು ಲಕ್ಷ್ಮಣ್. ಅದನ್ನವರು ‘ಜೀವ ಸಂಸ್ಕೃತಿಯೆಡೆಗಿನ ಪಯಣ’ ಎಂದೇ ಕರೆದುಕೊಂಡರು. ಇದು ಪರಿಣಾಮಕಾರಿ ಸಮುದಾಯ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ತಂತ್ರಕ್ಕೆ ನಾಂದಿಯಾಯಿತು. ಹಿಂದಿನ ದಿನಗಳಲ್ಲಿ ಇಂಥದ್ದೊಂದು ತಂತ್ರ ರೂಪಿಸುವ ಅಗತ್ಯವೇ ಇರಲಿಲ್ಲ. ಆಗ ಜನಸಂಖ್ಯೆ ಕಡಿಮೆ ಇತ್ತು.
ಜಾನುವಾರುಗಳ ಬಾಹುಳ್ಯ ಹೆಚ್ಚಿತ್ತು. ಹೀಗಾಗಿ ಒಂದು ಜಲ ಮೂಲ (ಅದು ಕೆರೆ, ಕಟ್ಟೆ ಯಾವುದೇ ಇರಬಹುದು) ಎಲ್ಲರ ಅಗತ್ಯವನ್ನು ಪೂರೈಸಲು ಸಮರ್ಥವಾಗಿತ್ತು. ಮಾತ್ರವಲ್ಲ ಅವುಗಳ ನಿರ್ವಹಣೆಯೂ ಅಷ್ಟೇ ನಿಯಮಿತವಾಗಿ ಸಾಗಿತ್ತು. ತೇವಾಂಶಯುಕ್ತ ನೆಲವನ್ನು ಗೋ ತ್ಯಾಜ್ಯ ಹೂದಲಾ ಗಿಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜನ ನಿಸರ್ಗದ ಸಾಮೀಪ್ಯದಲ್ಲಿ ನಿಸರ್ಗದೊಂದಿಗೇ ಬದುಕುತ್ತಿದ್ದರು. ಆದರೆ ಯಾವತ್ತೂ ನಿಸರ್ಗವನ್ನು ಕಬಳಿಸಿ ಬದುಕುತ್ತಿರಲಿಲ್ಲ. ಈಗದು ಎಲ್ಲ ರೀತಿಯಿಂದಲೂ ತಿರುವುಮುರುವಾಗಿದೆ.
ಇಂಥ ಆತಂಕವನ್ನು ಗ್ರಹಿಸಿದ್ದರು ಲಕ್ಷ್ಮಣ್. ಲಾಪೋಡಿಯಾದ ಜಲಯೋಧರ ಪಡೆ, ೧೯೯೧ರಲ್ಲಿ ಮಳೆ ನೀರು ಸಂಗ್ರಹಕ್ಕೆ ಅಡಿಯಿಟ್ಟಿತು. ಇದರ ಫಲವಾಗಿ ಮೂರು ಬೃಹತ್ ನೈಸರ್ಗಿಕ ಕೆರೆಗಳ(ತಾಲಾಬ್) ನಿರ್ಮಾಣ ಮಾಡಿದ್ದಲ್ಲದೇ ಊರಿನ ಸುತ್ತಮುತ್ತಲು ೫೦ ಹೊಸ ತೆರೆದ ಬಾವಿಗಳು ಅಸ್ತಿತ್ವ ಪಡೆದವು. ‘೯೧ರಲ್ಲಿ ನಮ್ಮ ಹಳ್ಳಿ ಹಾಗೂ ಸುತ್ತಮುತ್ತಲು ಪುನರುಜ್ಜೀವನ ಪಡೆದ ಬಾವಿಗಳು ಮತ್ತು ಕೆರೆಗಳ ಒಟ್ಟು ಮೊತ್ತ ೨.೫ ದಶಲಕ್ಷ ರೂ.ಗಳನ್ನು ದಾಟಿತ್ತು. ಇದಕ್ಕಿಂತ ಪರಿಣಾಮಕಾರಿಯಾದ ಫಲವನ್ನು ದೊರಕಿಸಿಕೊಟ್ಟದ್ದು ಗೋಮಾಳಗಳಲ್ಲಿ ನೀರಿನ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು. ಅವೇ ನಮ್ಮ ಎಲ್ಲ ಕೆಲಸಗಳಿಗೆ ಸಮಗ್ರ ಅರ್ಥವನ್ನು ತಂದುಕೊಟ್ಟಿತು’ ಎನ್ನುತ್ತಾರೆ ಲಕ್ಷ್ಮಣ್.
ಪ್ರತಿ ಹಂತದಲ್ಲೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅವರು ಮರೆಯಲಿಲ್ಲ. ಗೋಮಾಳಗಳ ಅಭಿವೃದ್ಧಿಯಲ್ಲಿ ಮೊದಲು ಮಾಡಿದ ಕೆಲಸವೇ ಒತ್ತುವರಿ ತೆರವು. ಜತೆಗೆ ಸ್ಥಳೀಯ, ಪಾರಂಪರಿಕ ತಂತ್ರಜ್ಞಾನಗಳು ಸಮುದಾಯದೊಳಗೆ ಹುದುಗಿದ್ದವು. ಸ್ಥಳೀಯ ತಂತ್ರಜ್ಞಾನವನ್ನು ಹೆಕ್ಕಿ ತೆಗೆಯಲಾಯಿತು. ಇದಕ್ಕಾಗಿ ಸ್ಥಳೀಯ ಭೂಮಿ, ಜಲ, ಕೃಷಿಯ ಬಗ್ಗೆ ಅವುಗಳ ಗುಣ ಲಕ್ಷಣದ ಬಗ್ಗೆ ಖಚಿತ ಮಾಹಿತಿಯನ್ನು ಹೊಂದಿರುವ ವಂಶಪಾ ರಂಪರ್ಯವಾಗಿ ಬಂದಿರುವ ‘ಗಾಜಿದಾರರ’ನ್ನು ಸಂಘಟನೆಯಲ್ಲಿ ಒಳಗೊಳಿಸಿಕೊಳ್ಳಲಾಯಿತು. ಅವರ ಜ್ಞಾನದ ನೆರವಿನ ಮೇಲೆ ಗೋಮಾಳಗಳ ಅಭಿವೃದ್ಧಿಯ ಕಾರ್ಯಕ್ಕೆ ಅಡಿಯಿಡಲಾಯಿತು. ಭೂಮಿಯ ಸ್ವರೂಪ, ಅದರ ನೀರಿಂಗುವ ಸಾಮರ್ಥ್ಯ, ಮಳೆ ಸರಾಸರಿ, ಭೂಮಿ ಯಲ್ಲಿನ ತೇವಾಂಶದ ಪ್ರಮಾಣ, ಇಳಿಜಾರಿನ ಮಟ್ಟ ಇತ್ಯಾದಿಗಳ ಬಗ್ಗೆ ಅವರಲ್ಲಿ ನಿಖರವಾದ ಅಂಕಿ ಅಂಶಗಳ ಸಮೇತ ಮಾಹಿತಿಗಳಿದ್ದವು. ಇದನ್ನು ಆಧರಿಸಿಯೇ ಊರಿನ
ತ್ಯಾಜ್ಯ ನೀರು ಹಾಗೂ ಮಳೆನೀರಿನ ಮರು ಬಳಕೆಯ ಬಗ್ಗೆ ಯೋಜನೆ ರೂಪಿಸಲಾಯಿತು.
ಜಲನಕ್ಷೆ ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ. ಬಿದ್ದ ಮಳೆ ನೀರು ಹಾಗೂ ತ್ಯಾಜ್ಯ ಎತ್ತಲಿಂದ ಎತ್ತ ಹರಿಯುತ್ತದೆ? ಅದು ಕೊನೆಯಲ್ಲಿ ಹೋಗಿ
ಸೇರುವುದೆಲ್ಲಿಗೆ? ನಿಜವಾಗಿ ಕಾಲದ ಗತಿಯಲ್ಲಿ ಅವು ಹಾದಿ ತಪ್ಪಿದ್ದೆಲ್ಲಿ ಎಂಬಿತ್ಯಾದಿಗಳ ಕುರಿತು ಕೂಲಂಕಷ ಮಾಹಿತಿ ಯನ್ನು ಸಂಗ್ರಹಿಸಲಾಯಿತು. ಇದನ್ನು ಒಳಗೊಂಡ ಸಮಗ್ರ ಜಲ ನಕ್ಷೆಯನ್ನು ರೂಪಿಸಲಾಯಿತು. ಇದಕ್ಕನುಗುಣವಾಗಿ ಊರಿನ ಗೋಮಾಳಗಳು ಸೇರಿದಂತೆ ಸುತ್ತಲಿನ ಜಲಸೂರಿ
(ಜಲಾನಯನ)ನತ್ತ ನೀರನ್ನು ಹರಿಸಿಕೊಂಡು ಹೋಗಿ ಅಲ್ಲಿ ಎಲ್ಲವೂ ಇಂಗುವಂತೆ ಮಾಡಲಾಯಿತು. ಹಾಗೆ ಹರಿದು ಹೋಗುವ ನೀರಿಗೆ ಕೃಷಿ ಜಮೀನುಗಳಲ್ಲಿ ಹಾದಿ ಮಾಡಿಕೊಟ್ಟದ್ದು ವಿಶೇಷ ಫಲಿತಾಂಶವನ್ನು ನೀಡಿತು.
ಇಲ್ಲಿ ಅತ್ಯಂತ ಒತ್ತು ಕೊಟ್ಟ ಅಂಶವೆಂದರೆ ಹಳ್ಳಿಯ ಎಲ್ಲ ಭೂಮಿಯನ್ನೂ ಬಳಕೆಗೆ ತಂದುಕೊಂಡದ್ದು. ಇಷ್ಟು ಮಾಡುವ ಹೊತ್ತಿಗೆ ಗ್ರಾಮವಾಸಿ ಗಳೆಲ್ಲರಿಗೂ ತಮ್ಮ ಸುತ್ತಲಿನ ನೀರು, ಭೂಮಿ ಸೇರಿದಂತೆ ಒಟ್ಟಾರೆ ನಿಸರ್ಗದ ಬಗ್ಗೆ ಸಮಗ್ರ ಮಾಹಿತಿ ದಕ್ಕಿತ್ತು. ಏನು ಮಾಡಿದರೆ ಏನಾದೀತು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ದೊರೆಯಿತು. ಇದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಯಿತು ಎಂದು ನಿಟ್ಟುಸಿರು ಬಿಡುತ್ತಾರೆ ಲಕ್ಷ್ಮಣ್.
‘ಜೀವ ಸಂಸ್ಕೃತಿಯೆಡೆಗಿನ ಪಯಣ’ದಲ್ಲಿ ಪ್ರಾಣಿ-ಪಕ್ಷಿಗಳ ಸಹಜ ಬದುಕು, ಪರಿಸರ ವ್ಯವಸ್ಥೆ, ಜಲ ಸಂರಕ್ಷಣೆ ಹಾಗೂ ಕೃಷಿಯನ್ನು ಪ್ರಧಾನವಾಗಿ ಗಮನ ದಲ್ಲಿಟ್ಟುಕೊಳ್ಳಲಾಗಿತ್ತು. ಭೂಮಿಯನ್ನೂ ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿತ್ತು. ಮೊದಲನೆಯದ್ದು ನೀರಾವರಿಗೆ ಮೀಸಲಾ ದರೆ ಇನ್ನೊಂದನ್ನು ಕಡ್ಡಾಯವಾಗಿ ಗೋಮಾಳವನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮದ ಇನ್ನೊಂದು ಪಾರ್ಶ್ವದಲ್ಲಿ ಸಹಜ ನಿಸರ್ಗದ ಅಭಿವೃದ್ಧಿಯನ್ನೇ ಗುರಿ ಯಾಗಿಸಿಕೊಳ್ಳಲಾಗಿತ್ತು. ಅಲ್ಲಿ ಮಾನವ ಪ್ರವೇಶವನ್ನೇ ನಿರ್ಬಂಧಿಸಿದ್ದು ಗಮನಾರ್ಹ.
ವಿಕೃತಿಗಳೆಲ್ಲ ಮಾಯವಾಗಿ ನಿಜವಾದ ಸಂಸ್ಕೃತಿ ಎಂಬುದು ಮೊಳೆಯಲಾರಂಭಿಸಿದ್ದೇ ಆವಾಗ. ಅದೇ ಇಂದಿನ ಲಾಪೋಡಿಯಾದ ಸತ್ವಯುತ
ಬದುಕನ್ನು ಅರಳಿಸಿದ್ದು ಎನ್ನುವಾಗ ಲಕ್ಷ್ಮಣ್ ಮುಖದಲ್ಲಿ ಆಯಾಸವಿರಲಿಲ್ಲ. ಬದಲಿಗೆ ಹೆಮ್ಮೆಯ ಮುಖ ಭಾವದೊಂದಿಗೆ ಅವರು ಕಿರು ನಗೆ ಹೊಮ್ಮಿ ಸುತ್ತಿದ್ದರು.