ಸುಪ್ತ ಸಾಗರ
rkbhadti@gmail.com
ಮೊನ್ನೆಮೊನ್ನೆ ಮತ್ತೊಮ್ಮೆ ನನ್ನ ನೆಚ್ಚಿನ ಹಿಮಾಲಯದ ಸನ್ನಿಧಿಗೆ ಹೋಗಿ ಬಂದೆ. ಐದು ದಿನ ಸತತವಾಗಿ ಉತ್ತರಾಖಂಡದ ಕೆಳಭಾಗದಲ್ಲಿ ಹುಚ್ಚಿಗೆ ಬಿದ್ದಂತೆ ಓಡಾಡಿದೆ. ಹಾಗೆ ನೋಡಿದರೆ, ಉತ್ತರಾಖಂಡಕ್ಕೆ ಇದು ನನ್ನ ಐದೋ ಆರನೆಯದ್ದೋ ಭೇಟಿ. ಅತ್ತ ಚೀನಾ, ಇತ್ತ ನೇಪಾಳ ಹೀಗೆ ಎರಡೂ ಅಂತಾರಾಷ್ಟ್ರೀಯ ಗಡಿ ರೇಖೆಗಳ ಹತ್ತಿರ ಹತ್ತಿರದವರೆಗೂ ಹತ್ತಿ ಬಂದಿದ್ದೇನೆ. ಚಮೋಲಿ, ಫಿತೋರಗಢ ಜಿಲ್ಲೆಗಳ ತುತ್ತ ತುದಿಯನ್ನು ತಲುಪಿ ಬಂದಿದ್ದೇನೆ. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಗೂ ಮುಂದೆ ಗ್ಲೇಸಿಯರ್‌ಗಳನ್ನು ತಲುಪಲು ತಿಣುಕಾಡಿದ್ದೂ ಇದೆ.
ಆಗೆಲ್ಲ ‘ಆಹಾ, ಇಲ್ಲಿ ಪ್ರಕೃತಿ ಎಷ್ಟು ನೆಮ್ಮದಿಯಾಗಿ ನಿರಾತಂಕವಾಗಿ ಇದೆ’ ಎಂದುಕೊಂಡು ಬಂದಿದ್ದಿದೆ. ಆದರೆ ಈ ಬಾರಿ ಸುಮಾರು ಹತ್ತು ವರ್ಷಗಳ ಬಳಿಕ ಓಡಾಡಿದ್ದು, ಆ ರಾಜ್ಯದ ಇನ್ನೆರಡು ಗಡಿಯನ್ನು ಹಂಚಿಕೊಳ್ಳುವ ನಮ್ಮದೇ ಉತ್ತರ ಪ್ರದೇಶ ಹಾಗೂ ಇನ್ನೊಂದೆಡೆ ಹಿಮಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂಭಾಗಗಳಲ್ಲಿ. ಹತ್ತು ವರ್ಷಗಳ ಬಳಿಕ ಗುರುತೇ ಸಿಗದಷ್ಟು ಬದಲಾಗಿದೆ ದೇವಭೂಮಿ; ಸಹಜ. ದೇಶಾದ್ಯಂತ ಬೀಸುತ್ತಿರುವ ಆಧುನಿಕತೆಯ ಬದಲಾವಣೆಯ ಗಾಳಿ ಹಿಮಾಲಯದ ತಪ್ಪಲಿನ ರಾಜ್ಯದತ್ತಲೂ ಬೀಸಿರುವುದು ಸ್ಪಷ್ಟ.
ರಸ್ತೆಗಳು ಅಗಲ ಮಾತ್ರವೇ ಅಲ್ಲ, ಉದ್ದವೂ ಆಗಿವೆ. ಸುಲಭದಲ್ಲಿ ತಲುಪಲು ಸಾಧ್ಯವಿಲ್ಲ ಎಂಬಂತಿದ್ದ ಶಿಖರಾಗ್ರದ ಹಳ್ಳಿಗಳಿತ್ತಲೂ ಹಾವಿನಂತೆ ಹರಿದುಹೋಗಿ ರಸ್ತೆಗಳು ತಲುಪುತ್ತಿವೆ. ಕರೆಂಟ್ ಕಂಬಗಳು ತಮ್ಮ ಬಾಹುಳ್ಯವನ್ನು ಹೆಚ್ಚಿಸಿಕೊಂಡು, ಎತ್ತರೆತ್ತರದ ಪ್ರದೇಶಗಳಿಗೆ ಹತ್ತಿ ಹೋಗಿ ತಲೆ ಎತ್ತಿ ಬೆಳಗುತ್ತಿವೆ. ಸಹಜವಾಗಿ ಕಣಿವೆಯಲ್ಲಿ ಜಾರಿ ಬರುತ್ತಿದ್ದ ನೀರಿಗೇ ಒಡ್ಡು ಕಟ್ಟಿಕೊಂಡು ಬಳಸುತ್ತಿದ್ದ ಇಳಿಜಾರಿನಲ್ಲಿರುವ ಹಳ್ಳಿಗಳಿಗೆ ಕೊಳಾಯಿ ಸಂಪರ್ಕ ಬಂದಿವೆ. ಚಿಕ್ಕ ಚಿಕ್ಕ ಬಸ್‌ಗಳಂಥವು ಟಾಪ್‌ನಲ್ಲೂ ಜನರನ್ನು ಹತ್ತಿಸಿಕೊಂಡು ವಿಚಿತ್ರ ಹಾನ್ ಗಳನ್ನು ಬಜಾಯಿಸುತ್ತ ಓಡಾಡುತ್ತಿವೆ.
ಮೇಳ್ನೋಟಕ್ಕೆ ಎಲ್ಲ ಕುರುಚಲು ಅರಣ್ಯ, ಸೂಚಿಪರ್ಣ ಕಾಡುಗಳು, ನಿತ್ಯ ಹರಿದ್ವರ್ಣ ಅರಣ್ಯದ ಭಾಗಗಳು ಹಾಗೆಯೇ ಹಸಿರಾಗಿರುವಂತೆ ಕಂಡರೂ, ಅವಗಳ ಒಡಲೊಳಗೇ ಹತ್ತಾರು ಸುರಂಗಗಳು ನುಗ್ಗಿ ಸಾಗಿ, ರೈಲ್ವೆ ಹಳಿಗಳು, ರಸ್ತೆಗಳಿಗೆ ತಾವು ಮಾಡಿಕೊಟ್ಟಿವೆ. ಹಾಗೆಂದು ಅಲ್ಲಿನ ನವೆಂಬರ್-ಡಿಸೆಂಬರ್‌ನ ಚಳಿಯಾಗಲೀ, ಪರ್ವತದ ತುದಿಗೆ ವರ್ಷಕ್ಕೊಮ್ಮೆ ಜನವರಿ-ಫೆಬ್ರವರಿಯಲ್ಲಿ ಟೋಪಿ ತೊಡಿಸುವ ಹಿಮಸಿಂಚನವಾಗಲೀ ಕಡಿಮೆ ಆಗಿಲ್ಲ. ಆದರೆ, ಅವು ಇನ್ನಷ್ಟು ತೇವಾಂಶ ಕಳಕೊಂಡು ಶುಷ್ಕವಾದಂತೆನಿಸಿದ್ದು ಸುಳ್ಳಲ್ಲ. ವಿಶೇಷವೆಂದರೆ ಯಾವತ್ತಿಗೂ ನೀರಿನ ಕೊರತೆ ಎಂಬುದನ್ನೇ ಕಾಣದ, ಮುಟ್ಟಿದರೆ ಕೊರೆವಷ್ಟು ತಣ್ಣಗಿನ ಜಲಧಾರೆಯನ್ನು ವರ್ಷದ ಮುನ್ನೂರರವತ್ತೈದು ದಿನವೂ ಪೂರೈಸುತ್ತಿದ್ದ ಅವೆಷ್ಟೋ ಸಣ್ಣಪುಟ್ಟ ತೊರೆಗಳು ಜನವರಿಯ ಹೊತ್ತಿಗೆಲ್ಲ ಮೈ ತೆಗೆದು ಒಣಗಿ ಅಸ್ಥಿಪಂಜರದಂತೆ ನಿಲ್ಲುತ್ತಿವೆ. ಬಹುಶಃ ಹಳ್ಳಿ ಹಳ್ಳಿಗಳಿಗೂನಲ್ಲಿ ಸಂಪರ್ಕ ಬಂದ ಮೇಲೆ ತಮಗಿನ್ನೇನು ಕೆಲಸ ಎಂದು ವಿಶ್ರಾಂತಿಗೆ ತೆರಳಿದ್ದವೋ, ಏನೋ!? ಹೀಗಾಗಿ ಹಿಂದೂಕುಶ್ ಹಿಮಾಲಯನ್ (ಎಚ್‌ಕೆಎಚ್) ಪ್ರದೇಶದಲ್ಲಿ ಬರುವ ಮುಸ್ಸೂರಿ, ದೇವಪ್ರಯಾಗದಂಥ ಪಟ್ಟಣಗಳಲ್ಲೂ ಆಗಲೇ ಕುಡಿಯುವ ನೀರಿನ ಕೊರತೆ ಕಾಡುತ್ತಿತ್ತು.
ಜೋಶಿಮಠ ಸುತ್ತಮುತ್ತಲಿನ ಬಿರುಕುಗಳು, ಸುರಂಗಗಳ ದುರಂತ, ದಿಢೀರ್ ಅಕಾಲಿಕ ಪ್ರವಾಹ ಸೇರಿದಂತೆ ಉತ್ತರಾಖಂಡದ ಇತ್ತೀಚಿನ ಘಟನೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ, ಪ್ರದೇಶದ ದುರ್ಬಲತೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯವನ್ನು ಎತ್ತಿ ಸಾರುತ್ತಿವೆಯಾದರೂ ಗಣನೆಗೆ ತೆಗೆದುಕೊಳ್ಳುವ ಮನಃಸ್ಥಿತಿಯಲ್ಲಿ ಇಲ್ಲ ‘ಹಿಮಾಲಯದ ಅಭಿವೃದ್ಧಿ ಕಾರ್ಯತಂತ್ರ’ಕ್ಕೆ ಇಳಿದ ಮಂದಿ. ಅನುಮಾನವೇ ಇಲ್ಲ, ಈ ಪ್ರದೇಶಕ್ಕೆ ಆರ್ಥಿಕ ಬೆಳವಣಿಗೆಯ ಅಗತ್ಯವಿದೆ. ಆದರೆ ಈ ಅಭಿವೃದ್ಧಿಯು ಪರಿಸರವನ್ನು ಬಲಿಕೊಟ್ಟು ಬರಲು ಸಾಧ್ಯವಿಲ್ಲ. ಅಥವಾ ಅದಕ್ಕೆ ಸಮನಾಗಲು ಸಾಧ್ಯವೇ ಇಲ್ಲ. ಏಕೆಂದರೆ ಅತ್ಯಂತ ಸೂಕ್ಷ್ಮ, ವಿಶಿಷ್ಟ ಹಾಗೂ ಅತಿ ದುರ್ಬಲ ಪರಿಸರ ವ್ಯವಸ್ಥೆಯನ್ನು ಹಿಮಾಲಯ ಶ್ರೇಣಿ ಹೊಂದಿದೆ.
ಹೀಗಾಗಿ ದೇಶದ ಬೇರೆ ಪ್ರದೇಶಗಳ ಸೂತ್ರವನ್ನು ಇಲ್ಲಿಗೆ ಅನ್ವಯಿಸಲಾಗದು. ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ನೀರು,
ಜೀವವೈ ವಿಧ್ಯ, ಸಾವಯವ ಮತ್ತು ವಿಶೇಷ ಆಹಾರಗಳು, ಪ್ರಕೃತಿ ಪ್ರವಾಸೋದ್ಯಮವನ್ನು ಆಧರಿಸಿಯೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳ ಬೇಕಿತ್ತು. ವೈಲ್ಡ್‌ಲೈ- ಎಲಿವೇಟೆಡ್ ಕಾರಿಡಾರ್, ಚಾರ್‌ದಾಮ್‌ಗಳನ್ನು ಬೆಸೆಯುವ ರಸ್ತೆ ಯೋಜನೆ, ಹೃಷಿಕೇಶದಿಂದ ಮುಂದಿನ ರೈಲ್ವೇ ಮಾರ್ಗಗಳನ್ನು ಇದೇ ಸೂತ್ರದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆಯಾದರೂ ಇವುಗಳಿಂದಾಗುವ ನಗರಗಳ ಬೆಳವಣಿಗೆ, ಆ ನಂತರದ ಸಂಚಾರ-ಜನಸಂಖ್ಯಾ ದಟ್ಟಣೆಯ ಪರಿಣಾಮಗಳ ಬಗೆಗೆ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ.
ಹಿಮಾಲಯದ ರಾಜ್ಯಗಳು ಕಾರ್ಯಸಾಧ್ಯ ಮತ್ತು ಸುಸ್ಥಿರ ಅರಣ್ಯ ಆಧಾರಿತ ಅಭಿವೃದ್ಧಿ ಹಾಗೂ ಅದರಿಂದಾಗಿ ಆರ್ಥಿಕ ಬೆಳವಣಿಗೆಯನ್ನು ರೂಪಿಸಬೇಕಾದುದು ಅತ್ಯಗತ್ಯ. ಅದಿಲ್ಲದಿದ್ದರೆ ಹಿಂದಾದ ತಪ್ಪೇ ಮತ್ತೆ ಮರುಕಳಿಸುವ ಅಪಾಯಗಳಿವೆ. ಹಿಮಾಲಯವು ತನ್ನ ಶ್ರೀಮಂತ ಅರಣ್ಯ ಸಂಪತ್ತನ್ನು ಇತ್ತೀಚಿನ ದಿನಗಳಲ್ಲಿ ಎರಡು ಕಾರಣಕ್ಕೆ ಕಳೆದುಕೊಳ್ಳುತ್ತಿದೆ. ಮೊದಲ ಹಂತವು ಅಭಿವೃದ್ಧಿ ಗಾಗಿ ಅರಣ್ಯ ಭಾಗದ ನಾಶ. ಸಂಪರ್ಕಾಭಿ ವೃದ್ಧಿ ದೃಷ್ಟಿಯಿಂದ ರಸ್ತೆ- ರೈಲು; ಆಧುನಿಕತೆ, ಸೌಲಭ್ಯದ ದೃಷ್ಟಿಯಿಂದ ನೀರಾವರಿ-ವಿದ್ಯುತ್ ಯೋಜನೆಗಳು ಅನಿವಾರ್ಯ ಎಂಬಂತಾಗಿ ಅರಣ್ಯನಾಶ ಮೇಲಿಂದ ಮೇಲೆ ನಡೆಯುತ್ತಲೇ ಇದೆ.
ಇದರ ಪರಿಣಾಮ ದುರ್ಬಲ ಹಿಮಾಲಯ ಕಣಿವೆಯಲ್ಲಿ ಭೂಕುಸಿತ ಹೆಚ್ಚಿದೆ. ಇದು ಎರಡನೇ ಹಂತದ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ೧೯೮೦ರ ದಶಕದಲ್ಲಿ ಜಲವಿದ್ಯುತ್ ಯೋಜನೆಗಳ ದಟ್ಟಣೆಯೂ ಇಂಥದ್ದೇ ಅಪಾಯವನ್ನು ತಂದಿತ್ತಿದ್ದನ್ನು ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಎದ್ದ ಜನಾಂದೋಲನದ ಪರಿಣಾಮ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೊಂಡಿತಲ್ಲದೇ ದೇಶದ ಈಶಾನ್ಯದಲ್ಲಿ ಅರಣ್ಯ ಆಧಾರಿತ ಉದ್ಯಮಗಳನ್ನು ಹದ್ದುಬಸ್ತಿನಲ್ಲಿಡಲು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಉತ್ತರಕಾಶಿ-ಡೆಹ್ರಾಡೂನ್ ಭಾಗದ ಕೆಲ ಸಮಾನ ಮನಸ್ಕ, ವಿವೇಚನಾಶೀಲ ಹೋರಾಟಗಾರರು, ಪತ್ರಕರ್ತರನ್ನು ಮಾತಾಡಿಸಿದಾಗ ಗಮನಕ್ಕೆ ಬಂದ ಸಂಗತಿಯೆಂದರೆ ವರ್ಷ ದಿಂದ ವರ್ಷಕ್ಕೆ ಅರಣ್ಯದಿಂದ ರಾಜ್ಯದ ಆದಾಯ ಕುಸಿದಿದೆ. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ. ಜನ ಕಾಡಿನ ಸಂಪನ್ಮೂಲ ಬಳಕೆಯ ವಿಚಾರದಲ್ಲಿ ಕಾನುನು-ಕಟ್ಟಳೆಗಳನ್ನು ಸ್ಪಷ್ಟವಾಗಿ ವಿರೋಧಿಸುತ್ತಿದ್ದಾರೆ.
ತಮಗೆ ಇತರೆಡೆಗಳಂತೆಯೇ ಆಧುನಿಕ ಸೌಲಭ್ಯಗಳನ್ನೊಳಗೊಂಡ ಅಭಿವೃದ್ಧಿ ಯೋಜನೆಗಳು ಬೇಕೆನ್ನುತ್ತಿದ್ದಾರೆ. ಹೀಗಾಗಿ ೮೦ರ ದಶಕದ ಕಾನೂನು ಗಳೂ ಈಗ ವ್ಯರ್ಥ ಮತ್ತು ರಸ್ತೆ ಸಂಪರ್ಕದಂಥ ಅಭಿವೃದ್ಧಿ ಚಟುವಟಿಕೆಗಳ ಹೆಚ್ಚಳವೂ ಅಗತ್ಯ. ಇಂಥ ಸನ್ನಿವೇಶದಲ್ಲಿ ಪರಿಸರದ ಉಳಿವಿಗೆ ವಿಭಿನ್ನ ಕಾರ್ಯತಂತ್ರದ ಅಗತ್ಯವಿದೆ. ಇದು ಅಭಿವೃದ್ಧಿ ಮತ್ತು ಸ್ಥಳೀಯ ಜೀವನೋಪಾಯಕ್ಕಾಗಿನ ಸಂಪನ್ಮೂಲದ ಬಳಕೆ ಎರಡನ್ನೂ ಪರಿಗಣಿಸ ಬೇಕಿದೆ ಎನಿಸಿತು ನನಗೆ.
ಸ್ಥಳೀಯ ಸಮುದಾಯಗಳು ಕೃಷಿ ಮತ್ತು ಮೂಲಭೂತ ಅಗತ್ಯಗಳಿಗಾಗಿ ಇಂದಿಗೂ ಅರಣ್ಯಗಳ ಮೇಲೆ ಅವಲಂಬಿತವಾಗಿವೆ. ಅದೇ ವೇಳೆ, ಹಿಮಾಲಯದ ಎತ್ತರದ ಹಳ್ಳಿಗಳಲ್ಲಿನ ಸಮುದಾಯ ಸಹಜವಾಗಿ ಇಂಟರ್‌ನೆಟ್, ವಿದ್ಯುತ್‌ನಂಥ ಸೌಲಭ್ಯಗಳನ್ನು ಬಯಸುತ್ತಿವೆ. ಇನ್ನೊಂದೆಡೆ ಈ ಪ್ರದೇಶದಲ್ಲಿನ ಜೀವವೈವಿಧ್ಯದ ಆಗರವಾದ ಅಪರೂಪದ ಕಾಡುಗಳು ಹಾಗೂ ಅವುಗಳಿಂದ ಬಸಿದು ಬರುವ ಮಹತ್ವದ ಜಲಸ್ರೋತವನ್ನು ಮುಂದಿನ ತಲೆಮಾರಿಗೆ ಕಾಪಿಟ್ಟುಕೊಳ್ಳಬೇಕಿರುವ ಅಗತ್ಯವೂ ಇದೆ. ಇಲ್ಲದಿದ್ದರೆ ಇದು ಇಡೀ ದೇಶದ ಹವಾಮಾನದ ವೈಪರಿತ್ಯಕ್ಕೆ ಕಾರಣವಾಗುವ ಅಪಾಯ ಇಲ್ಲದಿಲ್ಲ.
ಈಗಾಗಲೇ ಹೆಚ್ಚಿದ ನಿರ್ಮಾಣ ಚಟುವಟಿಕೆಗಳಿಂದಾಗಿ ಮಣ್ಣಿನ ಸವೆತ ಅವ್ಯಾಹತವಾಗಿದೆ. ಹೀಗೆ ಸವಕಳಿಗೊಳಗಾದ ಮಣ್ಣು, ಕೆಳಗಿನ ಭಾಗದ
ನದಿಗಳಲ್ಲಿ ಪ್ರವಾಹವನ್ನು ಹೆಚ್ಚಿಸುತ್ತಿದೆ. ಇದೇ ಕಾರಣಕ್ಕೆ ೧೨ನೇ ಮತ್ತು ೧೩ನೇ ಹಣಕಾಸು ಆಯೋಗಗಳು ತನ್ನ ವರದಿಯಲ್ಲಿ ಹಿಮಾಲಯ ಭಾಗದ
ರಾಜ್ಯಗಳಿಗೆ ಪರಿಹಾರ ನೀಡುವ ಪರಿಕಲ್ಪನೆಯನ್ನು ನೀಡಿದ್ದವು. ದುರದೃಷ್ಟವಶಾತ್ ಸರಕಾರಗಳು ಇದಕ್ಕಾಗಿ ಒದಗಿಸಲಾದ ಹಣದ ಮೊತ್ತ ಅತ್ಯಲ್ಪ. ಅದಕ್ಕಿಂತ ಮುಖ್ಯವಾಗಿ ರಾಜ್ಯಗಳಿಗೆ ಇನ್ನೂ ಹಣವೇ ಬಿಡುಗಡೆ ಆಗಿಲ್ಲ. ಇಂಥ ಸಮಸ್ಯೆಗಳ ಬಗೆಗೆ ಉನ್ನತ ಹಾಗೂ ಬೃಹತ್ ಮಟ್ಟದ ಚರ್ಚೆ
ಆಗಬೇಕಿದೆ.
ಜಲವಿದ್ಯುತ್ ಯೋಜನೆಗಳ ವಿಚಾರದಲ್ಲೂ ಇದೇ ದ್ವಂದ್ವ ಕಾಡುತ್ತಿದೆ. ನದಿ ಯೋಜನೆಗಳು ಮತ್ತು ಅಣೆಕಟ್ಟುಗಳನ್ನು ನಿರ್ಮಿಸುವ ಹುಚ್ಚು ವಿಪರೀತವಾಗಿದೆ. ಹಿಮಾಲ ಯದ ಎಲ್ಲ ರಾಜ್ಯಗಳು ಖಾಸಗಿ ಕಂಪನಿಗಳಿಗೆ ಜಲವಿದ್ಯುತ್ ಯೋಜನೆಗಳ ಗುತ್ತಿಗೆ ಕೊಟ್ಟು ಅಬ್ಬರಕ್ಕೆ ಬಿದ್ದಿವೆ. ಉತ್ತರಾ ಖಂಡವು ಗಂಗಾ ಜಲಾನಯನ ಪ್ರದೇಶವೊಂದರ ಸುಮಾರು ೧೦ ಸಾವಿರ ಮೆಘಾವ್ಯಾಟ್ ಸಾಮರ್ಥ್ಯದ ನಾನಾ ಯೋಜನೆಗಳನ್ನು ಗುರುತಿಸಿದೆ.
ಇಂಥ ಯೋಜನೆಗಳು ದೇಶಕ್ಕೆ ನವೀಕರಿಸಬಹುದಾದ ಇಂಧನ ಮೂಲವನ್ನು ಒದಗಿಸುತ್ತದೆ, ಮಾತ್ರವಲ್ಲ ರಾಜ್ಯಕ್ಕೆ ಆದಾಯದ ಮೂಲವಾಗಿದೆ. ಆದರೆ ಉತ್ತರಕಾಂಡ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕೈಗೊಂಡಿರುವ ಜಲ ವಿದ್ಯುತ್ ಯೋಜನೆಗಳು ಸೂಕ್ಷ್ಮ ಅರಣ್ಯಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಲೇ ಇವೆ. ೨೦೧೩ರಲ್ಲಿ ಉಂಟಾಗಿದ್ದ ಜಲಪ್ರಳಯಕ್ಕೆ ಇಂಥ ಜಲವಿದ್ಯುತ್ ಯೋಜನೆಗಳ ದುಷ್ಟಪರಿಣಾಮವೇ ಕಾರಣ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಈ ಪ್ರದೇಶದ ಪರಿಸರ ಮತ್ತು ಜಲವಿಜ್ಞಾನದ ಬೆಳವಣಿಗೆಯ ಪ್ರಭಾವವನ್ನು ನಾವು ಅರ್ಥಮಾಡಿಕೊಂಡಲ್ಲಿ ನಮ್ಮನ್ನಾವರಿಸಿದ ಅಭಿವೃದ್ಧಿಯ ಭ್ರಮೆ ಕಳಚುವುದರಲ್ಲಿ ಅನುಮಾನವಿಲ್ಲ. ಆದರೆ ಅಂಥ ಮನಃಸ್ಥಿತಿಯಿಂದ ನಾವು ಅದೆಷ್ಟೋ ದೂರ ಬಂದುಬಿಟ್ಟಿದ್ದೇವೆ.
ಇಂಥ ಸನ್ನಿವೇಶದಲ್ಲಿ ಕನಿಷ್ಠ ನಿಬಂಧನೆಗಳನ್ನು ಹಾಕಿಕೊಳ್ಳಲಾದರೂ ಮುಂದಾಗಬೇಕಿದೆ. ಪ್ರತಿ ಯೋಜನೆಗಳ ಅಂತರವನ್ನು ನಿಗದಿಮಾಡಿ, ಈ ಭಾಗದಲ್ಲಿನ ನದಿಗಳಿಗೆ ಕೊನೆಪಕ್ಷ ಪ್ರತಿ ೫ ಕಿಮೀ ನಿರಂತರ ಹರಿವಿಗಾದರೂ ಅವಕಾಶ ನೀಡಬೇಕಿದೆ. ಪರ್ವತದ ಸ್ಥಿರತೆ ಅಥವಾ ಸ್ಥಳೀಯ ನೀರಿನ
ವ್ಯವಸ್ಥೆಗಳಿಗೆ ಹಾನಿಯಾಗದಂತೆ ಖಾತ್ರಿಪಡಿಸಿಕೊಳ್ಳಲು ಇಂಥ ಮಾನದಂಡಗಳು ಅನಿವಾರ್ಯ. ಇಂಥ ಯೋಚನೆಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಮರು-ಎಂಜಿನಿಯರಿಂಗ್ ಮಾಡಬಹುದೇ ಎಂಬುದನ್ನು ಗಮನಿಸಬೇಕು.
ದೆಹಲಿ-ಡೆಹ್ರಾಡೂನ್ ನಡುವಿನ ಎಲಿವೇಟೆಡ್ ಕಾರಿಡಾರ್ ಗೆ ವ್ಯಕ್ತವಾದ ತೀವ್ರ ವಿರೋಧದ ಬಳಿಕ ಇದೀಗ ಕಾಡನ್ನು ಕಡಿಯದೇ ನದಿಯ ಒಡಲಲ್ಲೇ ಬಹುಪಾಲು ಹೆದ್ದಾರಿ ಹಾದು ಹೋಗುವಂತೆ ಮರು-ಎಂಜಿನಿಯರಿಂಗ್ ಮಾಡಿರುವುದು ನಮ್ಮ ಕಣ್ಣಮುಂದಿನ ಸ್ಪಷ್ಟ ಉದಾಹರಣೆ. ನಿಮಗೆ ಆಶ್ಚರ್ಯ ಆಗಬಹುದು, ಭಾರತದ ರೋಗಗ್ರಸ್ತ ಉದ್ದಿಮೆಗಳಲ್ಲಿ ಮೊದಲ ಸ್ಥಾನ ನೀರಾವರಿ ಯೋಜನೆಗಳಿಗೆ ಸಲ್ಲುತ್ತದೆ. ನೀರಾವರಿ ಯೋಜನೆಗಳಿಗಾಗಿ ರವತ್ತು
ವರ್ಷಗಳಲ್ಲಿ ನಾವು ಸುರಿದ ಹಣ, ನಮ್ಮ ಅಣೆಕಟ್ಟೆಗಳಲ್ಲಿ ತುಂಬಿದ ಹೂಳಿಗಿಂತಲೂ ಹೆಚ್ಚು. ನೀರಾವರಿಯೆಂದರೆ ಆದಾಯವಿಲ್ಲದ ಇಲಾಖೆಯೆಂಬಂತಾಗಿದೆ. ಕನಿಷ್ಠ ಅಲ್ಲಿನ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಸಂಬಳ ಸಾರಿಗೆಗೆ ಆಘುವಷ್ಟೂ ಹಣ ಹುಟ್ಟುತ್ತಿಲ್ಲ. ಇದು ಇಂದು ನಿನ್ನೆಯ ಮಾತಲ್ಲ. ಸ್ವಾತಂತ್ರ್ಯ ಬಂದಂದಿನಿಂದಲೂ ಇದೇ ಪರಿಸ್ಥಿತಿ.
ಅಂದರೆ ಸ್ಪಷ್ಟಗೊಳ್ಳುವ ಅಂಶವೆಂದರೆ, ನಮಗೆ ನೀರಿನ, ನೀರಾವರಿ ಯೋಜನೆಯ ನಿರ್ವಹಣೆ ಗೊತ್ತಿಲ್ಲ ಎಂಬುದು. ಹೀಗಾಗಿಯೇ ನಾವು ತುಸುವೇ ಮಳೆಯ ಅಭಾವಕ್ಕೂ ಮುರುಟಿ ಹೋಗುತ್ತಿದ್ದೇವೆ. ಬರಗಾಲವೆಂದರೆ ಬೆಚ್ಚಿ ಬೀಳುತ್ತಿದ್ದೇವೆ. ಕ್ಷಾಮವೆಂದರೆ ಕಂಗೆಟ್ಟು ಬಿಡುತ್ತಿದ್ದೇವೆ. ಒಂದೆಡೆ ಅಗತ್ಯಕ್ಕಿಂತಲೂ ಹೆಚ್ಚಿನ ನೀರನ್ನು ಬಳಸಿ, ಕೃಷಿಯ ಹೆಸರಿನಲ್ಲಿ ಯಥೇಚ್ಛ ನೀರನ್ನು ಪೋಲು ಮಾಡುತ್ತಿದ್ದೇವೆ. ಎಲ್ಲೆಂದರಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿ, ಹೊಲಕ್ಕೇ ಕಾಲುವೆ ತೋಡಿ ಬಿಡುತ್ತಿದ್ದೇವೆ.
ರೈತರಿಗೆ ಸರಕಾರಿ ಯೋಜನೆಗಳ ಹೆಸರಿನಲ್ಲಿ ಪುಕ್ಕಟೆ ವಿದ್ಯುತ್ ನೀಡಿ, ಅವರು ಮನಬಂದಂತೆ ನೀರನ್ನು ಎತ್ತಿ ಹೊಲಕ್ಕೆ ಹಾಯಿಸುವಂತೆ ಮಾಡುತ್ತಿದ್ದೇವೆ. ಅಽಕ ನೀರಿನಿಂದ ಅಧಿಕ ಇಳುವರಿ ಎಂಬ ಭ್ರಮೆ ನಮ್ಮನ್ನು ಸುತ್ತಿಕೊಂಡಿದೆ. ನಿಜವಾಗಿ ಹೆಚ್ಚಿನ ನೀರುಣಿಸಿದಷ್ಟೂ ಇಳುವರಿ
ಕುಸಿಯುತ್ತದೆ. ಮಾತ್ರವಲ್ಲ ಭೂಮಿ ಬಂಜರಾಗುತ್ತದೆ. ಇನ್ನೂ ವಿಚಿತ್ರವೆಂದರೆ ರೈತರು ಬೆಳೆಯುವ ಬೆಳೆಯ ಮೇಲೆ ಸರಕಾರಕ್ಕೆ ಹತೋಟಿಯೇ ಇಲ್ಲ. ಯಾವ ಪ್ರದೇಶದಲ್ಲಿ ಯಾರು, ಯಾವ ಬೆಳೆಯನ್ನಾದರೂ ಬೆಳೆಯಬಹುದು ಎಂಬಂತಾಗಿದೆ.
ಹೀಗಾಗಿ ಭತ್ತ ಬೆಳೆಯುವ ಹೊಲಗಳು ಅಡಕೆ, ತೆಂಗಿನ ತೋಟವಾಗಿ ರೂಪಾಂತರಗೊಳ್ಳುತ್ತಿವೆ. ಅದನ್ನಾದರೂ ಸಹಿಸಿಕೊಳ್ಳಬಹುದೇನೋ,
ಫಲವತ್ತಾದ ನೀರಾವರಿ ಜಮೀನುಗಳನ್ನು ಶುಂಠಿ ಸಾಲುಗಳು ಆಕ್ರಮಿಸಿಕೊಳ್ಳುತ್ತಿವೆ. ಇವು ಕ್ರಮೇಣ ಭೂಮಿಯ ಸಾರವನ್ನೆಲ್ಲ ಹೀರಿ, ನಿಸ್ಸಾರ ಮಾಡುತ್ತಿವೆ. ಒಣ ಭೂಮಿಯಲ್ಲೂ ನೀರಾವರಿ ಸೌಲಭ್ಯ ವಿದೆ ಎಂಬ ಕಾರಣಕ್ಕೆ ಭತ್ತ, ಕಬ್ಬುಗಳನ್ನು ಬೆಳೆಯಲಾಗುತ್ತಿದೆ. ಬರದಲ್ಲೂ ನಮ್ಮ ಬೆಳೆ ಪದ್ಧತಿ ಬದಲಾಗುತ್ತಿಲ್ಲ. ಪರ್ಯಾಯ ಬೆಳೆ ಪದ್ಧತಿಯನ್ನು ಮರೆತು ಕುಳಿತುಬಿಟ್ಟಿದ್ದೇವೆ. ಅಣೆಕಟ್ಟು ಒಣಗಿ ನಿಂತ ಸಂದ ರ್ಭದಲ್ಲೂ ರೈತಾಪಿ ವರ್ಗ ಮೂರನೇ ಬೆಳೆಯ ಬಗ್ಗೆ ಯೋಚಿಸುತ್ತಾನೆ.
ಕೆರೆ ಒಣಗಿದಾಗಲೂ ಭತ್ತದ ಗದ್ದೆಗಳಿಗೆ ನೀರು ನಿಲ್ಲಿಸುತ್ತಾನೆ. ನೆಲದ ನೀರನ್ನು ಹೀರಿ ತೆಗೆದಾದರೂ ಹಾಕಿದ ಬೆಳೆಯನ್ನು ಉಳಿಸಿಕೊಳ್ಳಲು ಹವಣಿಸುತ್ತಾನೆ. ಇದಕ್ಕಾಗಿ ಮತ್ತೆ ಮತ್ತೆ ಬೋರ್‌ವೆಲ್‌ಗಳನ್ನು ಕೊರೆಸಲು ಯೋಚಿಸುತ್ತಾನೆಯೇ ಹೊರತು, ನೆಲದ ನೀರನ್ನು ಉಳಿಸಿ ಭೂಮಿಯನ್ನು ತೇವವಾಗಿಡುವ ಬಗ್ಗೆ ಯೋಚಿಸುವುದೇ ಇಲ್ಲ. ಎಲ್ಲ ಅಣೆಕಟ್ಟೆಗಿಂತಲೂ ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುವ ಬಹುದೊಡ್ಡ
ಅಣೆಕಟ್ಟೆಯೆಂದರೆ ಭೂಮಿಯ ಒಡಲು. ಭೂಮಿಯ ಒಳಗೆ ನೀರನ್ನು ಹಿಡಿದಿಡುವ ಬಗ್ಗೆ ಯೋಚಿಸಿದೇ ಭೂಮಿಯ ಮೇಲ್ಭಾಗದಲ್ಲಿ ಮತ್ತೆ ಮತ್ತೆ ಅಣೆಕಟ್ಟುಗಳನ್ನು ಕಟ್ಟಿ ಅಲ್ಲಿ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿ ವರ್ಷವೂ ಬಿದ್ದ ಮಳೆ ನೀರಿನ ಶೇ. ಹತ್ತರಷ್ಟು ನೀರು ಭೂಮಿಯೊಳಗೆ ಜಿನುಗಿ ಸಂಗ್ರಹವಾಗುತ್ತದೆ. ಆದರೆ ನಾವೀಗ ಆಧುನಿಕರಣ, ನಗರಿಕರಣದ ಹೆಸರಿನಲ್ಲಿ ನೀರು ಭೂಮಿಯೊಳಗೆ ಇಂಗಲೇ ತಾವಿಲ್ಲದಂತೆ ಮಾಡುತ್ತಿದ್ದೇವೆ. ನೀರು ಇಂಗಲು ಪೂರಕ ಪ್ರದೇಶಗಳು(ರೀಚಾರ್ಜ್ ಏರಿಯಾ) ಅರಣ್ಯ ದಟ್ಟಣೆಯನ್ನು ಕಳೆದುಕೊಂಡು ಬಯಲಾಗುತ್ತಿದೆ. ಹೀಗಾಗಿ ಅಲ್ಲಿ ಬಿದ್ದ ನೀರು ಬಲುಬೇಗ ಆವಿಯಾಗುತ್ತಿದೆ.
ಅಷ್ಟರ ನಡುವೆಯೇ ಎಗ್ಗಿಲ್ಲದೇ ಭೂಮಿಗೆ ರಂಧ್ರ ಕೊರೆದು ಇದ್ದ ನೀರನ್ನೂ ಬರಿದು ಮಾಡುತ್ತಿದ್ದೇವೆ. ಇಂಥ ಸನ್ನಿವೇಶದಲ್ಲಿ ಭೂ ಒಡಲೊಳಗಿನ ಅಣೆಕಟ್ಟೆ ತುಂಬಿತಾದರೂ ಹೇಗೆ? ಬಂದ ಬರವನ್ನು ಅದು ತಣಿಸಿತಾದರೂ ಹೇಗೆ? ನೀರಿಲ್ಲದ ಸ್ಥಿತಿಯ ಸ್ವಯಂಕೃತ ಅಪರಾಧಕ್ಕೆ ಕಣ್ಣೀರೇ ಗತಿಯಾದೀತು.