Saturday, 23rd November 2024

ದಾಸಸಾಹಿತ್ಯದ ಅಂಬಾಬಾಯಿ: ಬೆಂಕಿಯಲ್ಲಿ ಅರಳಿದ ಹೂವು !

ತಿಳಿರು ತೋರಣ

srivathsajoshi@yahoo.com

ಅಪ್ಪನನ್ನೂ ಗಂಡನನ್ನೂ ಒಂದೇದಿನ ಪ್ಲೇಗ್ ಮಹಾಮಾರಿಗೆ ಕಳೆದುಕೊಂಡಾಗ ಅಂಬಾಬಾಯಿಯ ವಯಸ್ಸು ಕೇವಲ ೧೩ ವರ್ಷ. ಅದು ಆಕೆಯ ಬದುಕಿಗೆ ಬಂದೆರಗಿದ ಬರಸಿಡಿಲು. ಆಗಿನ ಪದ್ಧತಿಯಂತೆ ೧೦ರ ವಯಸ್ಸಿನಲ್ಲೇ ಮದುವೆ ಮಾಡಿಸಿದ್ದರು. ೧೨ರಲ್ಲಿ ಮೈನೆರೆತ ಮೇಲೆ ಗಂಡನ ಮನೆಗೆ ಕಳುಹಿಸಿದ್ದರು. ಅಂದರೆ ಸರಿಯಾಗಿ ಒಂದು ವರ್ಷವೂ ಸಂಸಾರ ನಡೆದಿರಲಿಲ್ಲ. ಕೆಟ್ಟ ಕಾಲ್ಗುಣದವಳು ಎಂದು ಗಂಡನ ಮನೆಯವರು ಜರಿದರು.

ಕೇಶಮುಂಡನ ಮಾಡಿಸಿ ಕೆಂಪುಸೀರೆ ಉಡಿಸಿದರು. ಅನಿಷ್ಟ ತಮ್ಮಲ್ಲಿರುವುದು ಬೇಡವೆಂದು ತವರೂರಿಗೆ ಅಟ್ಟಿದರು. ತವರುಮನೆಯಲ್ಲೋ ಒಪ್ಪೊತ್ತಿನ ತುತ್ತಿಗೂ ತತ್ವಾರ. ಅಜ್ಜಿ ವಿಧವೆ. ಅಮ್ಮ ವಿಧವೆ. ಅವರೊಡನೆ ತಾನು ಮೂರನೆಯ ಮಡಿಹೆಂಗಸು. ಹೇಳಿಕೊಳ್ಳುವಂಥದೇನೂ ಉದ್ಯೋಗ-ಆದಾಯ
ಇಲ್ಲದಿದ್ದ ಅಣ್ಣ, ಅವನ ಸಂಸಾರ, ಒಬ್ಬ ತಮ್ಮ, ಇನ್ನೊಬ್ಬಳು ತಂಗಿ. ಹೇಗಿದ್ದಿರಬಹುದು ಆ ಕುಟುಂಬದ ಪರಿಸ್ಥಿತಿ! ಮತ್ತೊಬ್ಬ ‘ಫಣಿಯಮ್ಮ’ ತಯಾ ರಾಗಲಿಕ್ಕೆ ವಿಧಿಸಕಲಸಿದ್ಧತೆ ನಡೆಸಿತ್ತು. ಕನಿಷ್ಠ ಸುತ್ತಮುತ್ತಲ ಸಮಾಜ ಹಾಗೆ ಎಣಿಸಿತ್ತು.

ಆದರೆ ಚಿಕ್ಕಂದಿನಲ್ಲಿ ಅಜ್ಜಿ ಹಾಡುತ್ತಿದ್ದ ದೇವರನಾಮಗಳನ್ನು ಕೇಳಿ ತಾನೂ ಕಲಿತು ಹಾಡಿ ಗಳಿಸಿದ್ದ ಪುಣ್ಯದಿಂದಲೋ, ಸಮಾಜದ ಕೆಂಗಣ್ಣಿಗೆ ಗುರಿಯಾಗಿಯೂ ಅಪ್ಪ ತನ್ನನ್ನು ನಾಲ್ಕನೆಯ ತರಗತಿವರೆಗೆ ಶಾಲೆಗೆ ಕಳುಹಿಸಿದ್ದರ ಫಲವಾಗಿ ದೊರೆತ ಅಕ್ಷರವಿದ್ಯೆಯಿಂದಲೋ, ಪ್ರತಿಭೆ, ಛಲ, ಚುರುಕುತನ, ಜನಪ್ರೀತಿ ಗಳಿಸುವ ಸಾಮರ್ಥ್ಯಗಳೆಲ್ಲವೂ ಜನ್ಮಜಾತವಾಗಿಯೇ ಮೇಳೈಸಿದ್ದರಿಂದಲೋ, ಅಂಬಾಬಾಯಿ ಪ್ರವಾಹದ ವಿರುದ್ಧ ಈಜುವುದು
ಸಾಧ್ಯವಾಯಿತು. ತನ್ನ ಹಣೆಯಲ್ಲಿ ವಿಧಿ ಬರೆದಿರುವುದು ಬೇರೆಯೇ ಇದೆ, ಅದಕ್ಕೆ ಪೂರಕವಾಗಿ ತಾನೇ ಬರೆದು ತನ್ನ ಬದುಕನ್ನು ನಿರ್ಧರಿಸಬಲ್ಲೆ ಎಂದು ಲೋಕಕ್ಕೆ ತೋರುವುದು ಸಾಧ್ಯವಾಯಿತು.

ಫಣಿಯಮ್ಮನಾಗಿ ಕೊಳೆಯದೆ, ಹರಿಭಕ್ತಿಯೆಂಬ ಅಮೃತವನ್ನು ಜನಸಾಗರದೆಡೆಗೆ ಹರಿಸಿದ ಮಹಿಳಾ ಹರಿದಾಸರಾಗಿ, ಹತ್ತಾರು ಅಮೂಲ್ಯ ಕೃತಿಗಳನ್ನು ರಚಿಸಿದ ಮಹಾಕವಿಯಾಗಿ, ನಲ್ವತ್ತನಾಲ್ಕು ವರ್ಷಗಳ ಬಾಳನ್ನು ನಕ್ಷತ್ರದಂತೆ ಹೊಳೆಯುತ್ತ ಸವೆಸಿ ಶ್ರೀಹರಿಯ ಪಾದವನ್ನು ಸೇರುವಂತಾಯ್ತು. ಇದು ಅಂಬಾ ಬಾಯಿಯ ಕಥೆ. ಬದುಕಿನ ಕುಲುಮೆಯಲ್ಲಿ ಪುಟವಿಟ್ಟುಕೊಂಡ, ಅಕ್ಷರ ತುಂಬಿದ ಪುಟಗಳನ್ನು ಬಿಟ್ಟುಹೋದ ಅಪರಂಜಿಯ ಕಥೆ. ಸೋಜಿಗ ವೆಂದರೆ ಕಳೆದ ಭಾನುವಾರ ಅದೊಂದು ಝೂಮ್ ಸೆಷನ್ ಎಟೆಂಡ್ ಮಾಡುವವರೆಗೂ ನನಗಿದೆಲ್ಲ ಗೊತ್ತೇ ಇರಲಿಲ್ಲ!

ಅಷ್ಟೇಅಲ್ಲ, ಆ ಝೂಮ್ ಸೆಷನ್‌ನಲ್ಲಿ ನಾನು ಭಾಗವಹಿಸುವಂತಾದದ್ದೂ ಆಕಸ್ಮಿಕವೇ. ಅದು ಆಗಿದ್ದು ಹೀಗೆ: ನಾಲ್ಕೈದು ವಾರಗಳ ಹಿಂದೆ ಒಂದು ದಿನ, ಇಲ್ಲಿ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ನಿವಾಸಿಯೇ ಆಗಿರುವ ಸನ್ಮಿತ್ರ ವಾಸು ಮೂರ್ತಿ ಒಂದು ಯುಟ್ಯೂಬ್ ಲಿಂಕ್‌ಅನ್ನು ವಾಟ್ಸ್ಯಾಪ್‌ನಲ್ಲಿ ಹಂಚಿ ಕೊಂಡರು. ಅದು, ಕಳೆದ ಡಿಸೆಂಬರ್‌ನಲ್ಲಿ ಮದ್ರಾಸ್ ಮ್ಯುಸಿಕ್ ಅಕಾಡೆಮಿಯ ೯೭ನೆಯ ವಾರ್ಷಿಕ ಸಂಗೀತೋತ್ಸವದಲ್ಲಿ ವಿದುಷಿ ಡಾ.ಟಿ.ಎಸ್.
ಸತ್ಯವತಿಯವರು ನಡೆಸಿಕೊಟ್ಟ ಕಾರ್ಯಕ್ರಮ. ಹರಿದಾಸ ಮಹಿಳೆ ಅಂಬಾಬಾಯಿಯವರ ಕೃತಿಗಳ ಗಾಯನ ಪ್ರಾತ್ಯಕ್ಷಿಕೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಇಷ್ಟವಿದೆಯಾದರೂ ಸಿಕ್ಕಿದೆಲ್ಲ ಸಂಗೀತ ಕಛೇರಿ ಗಳನ್ನು ವೀಕ್ಷಿಸುವಷ್ಟು ಹಸಿವು ನನ್ನದಲ್ಲ.

ತ್ಯಾಗರಾಜ ಆರಾಧನೆಯೋ ಪುರಂದರ ದಾಸರ ಆರಾಧನೆಯೋ ಆಗಿದ್ದರೆ ಕೆಲವಾದರೂ ಪರಿಚಿತ ಕೃತಿಗಳಿರುತ್ತವೆ ಆಲಿಸೋಣ ಎಂಬ ಉಮೇದು ಬರುತ್ತದೆ. ಇದು ಹಾಗಲ್ಲ. ಅಂಬಾಬಾಯಿಯ ಕೃತಿಗಳ ಪರಿಚಯ ಬಿಡಿ, ಆ ಹೆಸರಿನ ಮಹಿಳಾ ಹರಿದಾಸರೊಬ್ಬರಿದ್ದರು ಎಂದು ಕೇಳಿಯೂ ಗೊತ್ತಿರಲಿಲ್ಲ ನನಗೆ. ಆದರೆ ವಾಸುಮೂರ್ತಿ ಸುಮ್ಸುಮ್ನೆ ಏನೇನನ್ನೋ ಫಾರ್ವರ್ಡ್ ಮಾಡುವವರಲ್ಲ. ಸಾಹಿತ್ಯ-ಸಂಗೀತ ಸದಭಿರುಚಿಯುಳ್ಳ ಅವರು ಕಳಿಸಿ
ದ್ದೆಂದರೆ ಏನೋ ವಿಶೇಷವೇ ಇರಬೇಕು ಎಂದುಕೊಂಡೆ. ಒಂದೂ ಕಾಲು ಗಂಟೆ ಅವಧಿಯ ಯುಟ್ಯೂಬ್ ವಿಡಿಯೊ. ಶುರುವಿಂದ ಕಡೆತನಕ ನೋಡು ವಷ್ಟು ವ್ಯವಧಾನ ಇರಲಿಲ್ಲ. ಯುಟ್ಯೂಬ್ ಸ್ಕ್ರೀನ್‌ನ ಸ್ಲೈಡರ್‌ಅನ್ನು ಬೆರಳಿಂದ ಎಳೆದು ಫಾಸ್ಟ್ ಫಾರ್ವರ್ಡ್ ಮಾಡತೊಡಗಿದೆ.

ಅಲ್ಲೊಂದು ಆಶ್ಚರ್ಯ ಕಾದಿತ್ತು! ಸಂಗೀತ ಕಛೇರಿಯ ವೇದಿಕೆಯ ಹಿಂದಿನ ಪರದೆಯಲ್ಲಿ ಸ್ಲೈಡ್ ಶೋ. ಅದರಲ್ಲಿ ಕನ್ನಡ ಲೇಖಕಿ, ಆಪ್ತ ಸಲಹೆ ಅಂಕಣಕಾರ್ತಿ ಶಾಂತಾ ನಾಗರಾಜ್ ಅವರ ಫೋಟೊ! ಅರೆರೆ ಎಲ್ಲಿಯ ಅಂಬಾಬಾಯಿ, ಎಲ್ಲಿಯ ಶಾಂತಾ ನಾಗರಾಜ್! ಯುಟ್ಯೂಬ್ ಸ್ಲೈಡರ್ ಮೇಲಿಂದ ಬೆರಳು ತೆಗೆದು ನಾರ್ಮಲ್ ಸ್ಪೀಡ್‌ನಲ್ಲಿ ಪ್ಲೇ ಮಾಡಿದೆ. ‘ಅಂಬಾಬಾಯಿಯವರ ತಂಗಿಯ ಮಗಳಾದ ಡಾ.ಶಾಂತಾ ನಾಗರಾಜ್ ಅಂಬಾಬಾಯಿ ಜೀವನ ಮತ್ತು ಕೃತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಪ್ರೌಢ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದಿದ್ದಾರೆ…’ ಎಂದು ಡಾ.ಸತ್ಯವತಿ ವಿವರಿಸುತ್ತಿದ್ದರು.

ಯುಟ್ಯೂಬ್ ಕ್ಲೋಸ್ ಮಾಡಿ ತತ್‌ಕ್ಷಣವೇ ವಾಸು ಮೂರ್ತಿಯವರಿಗೆ ಮೆಸೇಜು ಕಳುಹಿಸಿದೆ. ಶಾಂತಾ ನಾಗರಾಜ್ ನನಗೆ ಪರಿಚಿತರು, ನನ್ನೊಬ್ಬ ಹಿರಿಯ ಹಿತೈಷಿ ಕೂಡ. ೧೦-೧೨ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅವರ ಮನೆಗೂ ನಾನೊಮ್ಮೆ ಭೇಟಿಯಿತ್ತಿದ್ದೇನೆ. ಅವರ ಪತಿ ನಾಗರಾಜ್ ಸಹ ಸ್ನೇಹ ಜೀವಿಯಾಗಿದ್ದವರು… ಅಂತೆಲ್ಲ ತಿಳಿಸಿದೆ. ಶಾಂತಾ ನಾಗರಾಜ್ ನನಗೆ ಆತ್ಮೀಯರು ಎಂದು ತಿಳಿದು ವಾಸು ಮೂರ್ತಿಗೂ ಆಶ್ಚರ್ಯ. ಇನ್ನು ಕೆಲ ದಿನಗಳಲ್ಲೇ ಅಂಬಾಬಾಯಿ ಬದುಕು ಮತ್ತು ಬರೆಹ ಅಂತೊಂದು ಆನ್‌ಲೈನ್ ಉಪನ್ಯಾಸ ಶಾಂತಾ ನಾಗರಾಜ್‌ರಿಂದ ಏರ್ಪಡಿಸಬೇಕೆಂದಿದೆ. ನಿಗದಿ ಯಾದಾಗ ತಿಳಿಸುತ್ತೇನೆ ಬನ್ನಿ ಎಂದರು. ಮೊನ್ನೆ ಫೆಬ್ರವರಿ ೨೫ರಂದು ಭಾನುವಾರ ಕಾರ್ಯಕ್ರಮ ನಡೆಯಿತು. ನಾನೂ ಭಾಗವಹಿಸಿದ್ದೆ. ಇದು ಅಂಬಾ ಬಾಯಿಯ ಕಥೆ ನನ್ನ ಅರಿವಿನ ಪರಿಧಿಯೊಳಕ್ಕೆ ಹೇಗೆ ಸೇರಿತೆಂಬ ಕಥೆ.

ಹರಿಕಥೆಯಲ್ಲಿ (ಹರಿದಾಸೀ ಜ್ಞಾನನಿಧಿಯ ಕಥೆಯಲ್ಲಿ) ವಾಟ್ಸ್ಯಾಪ್-ಝೂಮ್ ಲೋಕದ ಒಂದು ಉಪಕಥೆ. ಅಂಬಾಬಾಯಿಯ ಜನನ ೧೯೦೨ರಲ್ಲಿ ಚಿತ್ರದುರ್ಗದ ಮಾಧ್ವ ಬ್ರಾಹ್ಮಣ ಕುಟುಂಬವೊಂದರಲ್ಲಿ. ತಾಯಿ ಭಾರತೀಬಾಯಿ. ತಂದೆ ಭೀಮಸೇನ ರಾವ್. ಆರ್ಥಿಕವಾಗಿ ಕಡುಬಡತನ ಇದ್ದರೂ
ಸಂಸ್ಕಾರದಲ್ಲಿ ಶ್ರೀಮಂತಿಕೆ. ಅಂಬಾಬಾಯಿಯ ಅಜ್ಜಿ ರುಕ್ಮಿಣಿ ಬಾಯಿ ಮಡಿಹೆಂಗಸು. ಅಗಾಧ ಸ್ಮರಣಶಕ್ತಿ ಇದ್ದವರು. ಹಾಡಿನ ರುಕ್ಮಿಣಿ ಎಂದು ಚಿತ್ರದುರ್ಗದಲ್ಲಿ ಹೆಸರಾಗಿದ್ದವರು. ಅನಕ್ಷರಸ್ಥೆಯಾಗಿದ್ದರೂ ಮೂರು ಸಾವಿರಕ್ಕೂ ಹೆಚ್ಚು ಹಾಡುಗಳು ಅವರಿಗೆ ಕಂಠಪಾಠ ಬರುತ್ತಿದ್ದವಂತೆ. ಅಜ್ಜಿ ಹಾಡುತ್ತಿದ್ದ ದೇವರನಾಮ ಕೇಳುತ್ತ, ತಾನೂ ಹಾಡುತ್ತ ಬೆಳೆದವಳು ಅಂಬಾಬಾಯಿ.

ಮಗಳು ತುಂಬ ಜಾಣೆ, ನಿಶಿತಮತಿ ಎಂದರಿತ ತಂದೆ ಅವಳನ್ನು ಶಾಲೆಗೆ ಸೇರಿಸಿದರು. ೪ನೆಯ ತರಗತಿವರೆಗೆ ಓದಿಸಿದರು. ಹೆಣ್ಣುಮಗುವಿಗೆ ಶಿಕ್ಷಣ ಕೊಡಿಸುವ ವಿಚಾರದಲ್ಲಿ ಸಮಾಜವನ್ನು ಸಮರ್ಥವಾಗಿ ಎದುರಿಸಿದರು; ಬಾಲ್ಯವಿವಾಹದ ವಿಚಾರದಲ್ಲಿ ಮಾತ್ರ ಸಾಧ್ಯವಾಗಲಿಲ್ಲ. ೧೦ನೆಯ ವಯಸ್ಸಿಗೆ ಅಂಬಾಬಾಯಿಯ ಲಗ್ನ ವಾಯ್ತು, ಚಿತ್ರದುರ್ಗಕ್ಕೆ ಸಮೀಪದ ಗೋಪಾಲಪುರದ ಹನುಮಂತ ರಾವ್ ಎಂಬ ವರನೊಂದಿಗೆ. ಸಾಕಷ್ಟು ಸ್ಥಿತಿವಂತ ರಾಗಿಯೇ ಇದ್ದ ಕುಟುಂಬವದು. ೧೨ ವರ್ಷ ಪ್ರಾಯದಲ್ಲಿ ಗಂಡನಮನೆ ಸೇರಿದ ಅಂಬಾಬಾಯಿ ಮುಂದಿನವರ್ಷ ತವರಿಗೆ ಮರಳಿದ್ದು ಕೇಶಮುಂಡನ ಮಾಡಿ ಕೆಂಪುಸೀರೆಯುಟ್ಟ ಮಡಿ ಹೆಂಗಸಾಗಿ. ಮುಂದೆ ಸುಮಾರು ೧೫ ವರ್ಷಗಳ ಕಾಲ ಆಕೆಯ ಬದುಕಿನ ಬಂಡಿ ಒಪ್ಪೊತ್ತಿನ ಊಟದ ಗಳಿಕೆಗೆಂದು ಅವರಿವರ ಮನೆಗಳಲ್ಲಿ ಕೆಲಸದವಳಾಗಿ, ಬಾಣಂತನ ಮಾಡಿಸುವ ಸೂಲಗಿತ್ತಿಯಾಗಿ, ಮದುವೆ-ಮುಂಜಿಗಳಲ್ಲಿ ಅಡುಗೆಯವಳಾಗಿ… ಸಾಗಿತು.

ಅವೆಲ್ಲದರಿಂದ ಅಂಬಾಬಾಯಿ ಗಳಿಸಿದ ದೊಡ್ಡ ಆಸ್ತಿಯೆಂದರೆ ಜನಾನುರಾಗ. ಹಾಗೆಯೇ, ಮನೆಯಲ್ಲಿದ್ದಾಗ ಅಜ್ಜಿಗೆ ಪುರಾಣ ಕಾವ್ಯಗಳನ್ನು ಓದಿ ಹೇಳುವುದರ ಮೂಲಕ ಪದಸಂಪತ್ತು. ಬಾಲ್ಯದಿಂದಲೂ ದೇವರನಾಮಗಳಲ್ಲಿ ಮಿಂದೆದ್ದ ಅಂಬಾ ಬಾಯಿ ತಾನೂ ಕೀರ್ತನೆಗಳನ್ನು ರಚಿಸಿ ಹಾಡು ತ್ತಿದ್ದಳು. ಭಕ್ತಿ ಪರವಶಳಾಗಿ ಆಕೆ ಹಾಡುವುದನ್ನು ಆಲಿಸಿದವರು ತಮಗೂ ಕಲಿಸುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ ಗುರುವಿನಿಂದ ಅಂಕಿತ ಸಿಗದೆ ರಚಿಸಿದ್ದನ್ನು ಜನರೆಲ್ಲ ಹಾಡಬಾರದು ಎಂದು ಕ್ರಮ. ಹಾಗಾಗಿ ಅಂಬಾಬಾಯಿಯ ಹಾಡುಗಳು ಅವಳ ಕಂಠಕ್ಕಷ್ಟೇ ಸೀಮಿತ.

ಇಂತಿರಲು ಒಮ್ಮೆ ಅಂಬಾಬಾಯಿ ಬೆಂಗಳೂರಿನಲ್ಲಿ ತಮ್ಮನ ಮನೆಯ ಔಟ್‌ಹೌಸ್‌ನಲ್ಲಿ ನೆಲೆಸಿದ್ದಾಗ ಅಲ್ಲಿ ಎದುರುಮನೆಗೆ ದೇವರಾಯನದುರ್ಗದಿಂದ
ಪರಮಪ್ರಿಯ ಸುಬ್ಬರಾಯ ದಾಸರು ಭೇಟಿಯಿತ್ತರು. ಅವರು ಪ್ರಕಾಂಡ ಪಂಡಿತರು. ವೇದೋಪನಿಷತ್ತುಗಳನ್ನು ಅರೆದುಕುಡಿದವರು. ಸಾವಿರಾರು
ಹರಿಭಕ್ತರಿಗೆ ಅಂಕಿತ ದಯಪಾಲಿಸಿದ ವರು. ಬೆಂಗಳೂರಿನಲ್ಲಿ ಅವರ ಪ್ರವಚನ ಧಾರೆಯಿಂದ ಪ್ರಭಾವಿತರಾಗಿ ಹರಿಭಕ್ತಿ ಪಂಥಕ್ಕೆ ಸೇರಿದವರು ಅವರಿಂದ ಅಂಕಿತ ಪಡೆದರು. ಅಂಬಾಬಾಯಿಯ ಮನೆ ಮಂದಿಯೆಲ್ಲ ಅಂಕಿತ ಪಡೆದರಾದರೂ ಆಕೆ ಮಾತ್ರ ಹಿಂಜರಿದಳು. ತಾನೊಬ್ಬ ವಿಧವೆ, ಹಾಗೆಲ್ಲ ಅಂಕಿತ ಪಡೆಯಲು ಅರ್ಹಳೇ ಎಂದು ಅಳುಕಿದಳು. ಮಾರನೆ ದಿನ ಸುಬ್ಬರಾಯದಾಸರೇ ಅಂಬಾಬಾಯಿ ಯನ್ನು ಕರೆಸಿ, ಆಕೆಯಲ್ಲೊಂದು ಅನರ್ಘ್ಯ ಜ್ಞಾನನಿಧಿ ಇದೆ ಯೆಂದು ಕಂಡು ಕೊಂಡು ‘ಗೋಪಾಲಕೃಷ್ಣ ವಿಠಲ’ ಎಂಬ ಅಂಕಿತ ವನ್ನು ಆಕೆಗೆ ನೀಡಿದರು.

ಇದು ನಡೆದದ್ದು ೧೯೩೧ರಲ್ಲಿ. ಅಂಬಾ ಬಾಯಿಯ ವಯಸ್ಸು ೨೯. ಅಂದಿನಿಂದ ಆ ಗುರುಗಳೇ ಅಂಬಾ ಬಾಯಿಗೆ ಕೇವಲ ಗುರುವಷ್ಟೇ ಅಲ್ಲದೇ ತಂದೆಯ ಸಮಾನರಾದರು ತಾಯಿಯ ಅಂತಃಕರಣ ತೋರಿದವರಾದರು. ಅಂಬಾಬಾಯಿಯ ಬದುಕಿಗೊಂದು ಅರ್ಥಪೂರ್ಣ ತಿರುವು ಸಿಕ್ಕಿತು. ಪರಮಾರ್ಥ ಚಂದ್ರೋದಯ ಎಂಬ ಪತ್ರಿಕೆಯಲ್ಲಿ ಅಂಬಾ ಬಾಯಿ ರಚಿಸಿದ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಸಾಹಿತ್ಯ ಧುರೀಣರೂ ಮೆಚ್ಚುವಂತಹ ಸುಂದರ ಕಾವ್ಯಪ್ರತಿಮೆಗಳು ಆ ರಚನೆಗಳಲ್ಲಿರುತ್ತಿದ್ದುವು. ಕೆಲವೇ ಪದಗಳನ್ನು ಬಳಸಿ ಚಂದದ ಚಿತ್ರಣ. ಉದಾಹರಣೆಗೆ ಒಂದು ಉಗಾಭೋಗದಲ್ಲಿ ಪ್ರಪಂಚ ಎಂಬ ಒಂದು ಪದ, ಅದಕ್ಕೆ ಇದ್ದು-ಮೆದ್ದು-ಒದ್ದು-ಗೆದ್ದು ಕೃದಂತಾವ್ಯಯಗಳನ್ನು ಸೇರಿಸಿ ದಶಾವತಾರಗಳನ್ನು ಕೆತ್ತಿದ ಸುಂದರ ಕಲಾಕೃತಿ: ಪ್ರಪಂಚ ದೊಳಗಿದ್ದು (ಮತ್ಸ್ಯ, ಕೂರ್ಮ) ಪ್ರಪಂಚವನೆ ಮೆದ್ದು(ವರಾಹ), ಪ್ರಪಂಚವನೆ ಒದ್ದು (ವಾಮನ), ಪ್ರಪಂಚವನೆ ಗೆದ್ದು (ಪರಶುರಾಮ) ಪ್ರಪಂಚಾತೀತ ನಮ್ಮ ಗೋಪಾಲಕೃಷ್ಣ ವಿಠಲನ ಪ್ರಪಂಚದೊಳು ಸುಖವ ಪೊಂದು ವವನೇ ಧನ್ಯ… ೧೯೩೫ರಲ್ಲಿ ಅಂಬಾಬಾಯಿ ಶ್ರೀರಾಮಕಥಾಮೃತ ಕಾವ್ಯ ಬರೆದರು.

ಅದು ೨೫೦೧ ಕುಸುಮ ಷಟ್ಪದಿಗಳಿಂದಾದ ಕೃತಿ. ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಬರೆದು ಮುಗಿಸಿದರು. ಅಂದರೆ, ಕುವೆಂಪು ‘ರಾಮಾಯಣ ದರ್ಶನಂ’ ರಚಿಸುವುದಕ್ಕಿಂತ ೧೫ ವರ್ಷ ಮೊದಲೇ ಅಪ್ಪಟ ಕನ್ನಡ ಮಹಾಕಾವ್ಯವನ್ನು ಅಂಬಾ ಬಾಯಿ ರಚಿಸಿದ್ದರು! ವಾಲ್ಮೀಕಿ ರಾಮಾಯಣ ದಲ್ಲಿದ್ದಂತೆ ಅದರಲ್ಲೂ ಆರು ಕಾಂಡಗಳು. ಲವ-ಕುಶರು ಶ್ರೀರಾಮಚಂದ್ರನೆದುರು ಹಾಡಿದರೆಂಬ ಕಲ್ಪನೆಯಲ್ಲಿ ಬರೆದದ್ದು, ಪ್ರತಿ ಷಟ್ಪದಿಯೂ
‘ರಾಮಚಂದ್ರ’ ಎಂದು ಕೊನೆಯಾಗುವುದು. ಅದನ್ನು ಅಂಬಾ ಬಾಯಿ ರಾಗಬದ್ಧವಾಗಿ ಹಾಡುತ್ತಿದ್ದರು. ಸುಂದರಕಾಂಡವನ್ನಂತೂ ಜನರು ತುಂಬ ಇಷ್ಟಪಟ್ಟಿದ್ದರು. ಅದರ ಶ್ರವಣದಿಂದ ಒಳ್ಳೆಯ ದಾಗುತ್ತದೆ ಎಂಬ ಪ್ರತೀತಿ ಬೆಳೆದು, ಗೃಹಪ್ರವೇಶ, ಮದುವೆ ಸಮಾರಂಭಗಳಿಗೆಲ್ಲ ಅಂಬಾಬಾಯಿಯನ್ನು ಕರೆಸಿ ಹಾಡಿಸುತ್ತಿದ್ದರು.

ಯಾವ ಹುಡುಗಿಯದು ಕೆಟ್ಟ ಕಾಲ್ಗುಣ ಎಂದು ಜನರು ಹೀಗಳೆದಿದ್ದರೋ ಅಂಥವಳು ‘ಸುಂದರಕಾಂಡದ ಅಂಬಾಬಾಯಿ’ ಎಂದು ಪ್ರಖ್ಯಾತಳಾದಳು! ಕೀರ್ತನೆ ರಚನೆ ಅಂಬಾಬಾಯಿಗೆ ಅದೆಷ್ಟು ಕರತಲಾಮಲಕ ಆಗಿತ್ತೆಂಬುದಕ್ಕೆ ಸಾಕ್ಷಿಯಾಗಿ ಒಂದು ಘಟನೆ: ಅಂಬಾಬಾಯಿಯ ತಂಗಿ ಕುಣಿಗಲ್‌ನಲ್ಲಿ ವಾಸವಾಗಿದ್ದರು. ಅಲ್ಲಿ ಪಕ್ಕದ್ಮನೆಯ ಮಹಿಳೆ ಕೃಷ್ಣನ ಜೋಗುಳ ಹಾಡ್ತಿದ್ರು. ಅದನ್ನು ಕಲಿಯಬೇಕೆಂದು ತಂಗಿಗೆ ಆಸೆ. ಬರೆದುಕೊಂಡು ತಾನೂ ಹಾಡಬಹುದೇ ಎಂದು ಆ ಮಹಿಳೆಯನ್ನು ಕೇಳಿದರು. ಆಕೆ ಸತಾಯಿಸಿದಳು. ಕೊನೆಗೂ ಕೊಡಲೇ ಇಲ್ಲ.

ಅದೇದಿನ ಅಂಬಕ್ಕ ತಂಗಿಯ ಮನೆಗೆ ಭೇಟಿಯಿತ್ತರು. ತಂಗಿ ತನ್ನ ಬೇಸರ ತೋಡಿ ಕೊಂಡಳು. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಬೆಳಗಿನ ಜಾವ ೩ಕ್ಕೆ ಎದ್ದ ಅಂಬಕ್ಕ ದೇವರಕೋಣೆಯಲ್ಲಿ ಕುಳಿತು ೩೫೦ ತ್ರಿಪದಿಗಳಿದ್ದ ಕೃಷ್ಣಲೀಲೆ ಜೋಗುಳ ಬರೆದು, ಇದನ್ನು ಎಷ್ಟು ಬೇಕಿದ್ರೂ ಹಾಡಿಕೋ ಎಂದು ತಂಗಿಗೆ ಕೊಟ್ಟರಂತೆ! ಮುಂದಿನ ೧೫ ವರ್ಷಗಳಲ್ಲಿ ಅಂಬಾಬಾಯಿ ಮುನ್ನೂರಕ್ಕೂ ಹೆಚ್ಚು ದೇವರನಾಮಗಳನ್ನು ಬರೆದರು. ಕೆಲವು ದೀರ್ಘಕೃತಿ
ಗಳನ್ನೂ ರಚಿಸಿದರು. ಪ್ರಹ್ಲಾದ-ನರಸಿಂಹ ಕಥೆಯನ್ನು ಕಚಗುಳಿ ಯಿಡುವ ಹಾಸ್ಯ ಬೆರೆಸಿ ನಾಟಕವಾಗಿ ಬರೆದರು. ಭಾಗವತ ಸಾರೋದ್ಧಾರ ಎನ್ನುವ ಸಂಸ್ಕೃತದ ಜಟಿಲ ಕೃತಿಯೊಂದನ್ನು ಸರಳಗನ್ನಡಕ್ಕೆ ಭಾವಾನುವಾದ ಮಾಡಿದರು.

ಎಲ್ಲದಕ್ಕೂ ಮುಕುಟ ಪ್ರಾಯವಾಗಿ ಶ್ರೀರಾಮಕಥಾಮೃತ. ಅದರಲ್ಲಿ ರಾಮಭಕ್ತಿಯಷ್ಟೇ ಪ್ರಧಾನವಾಗಿ ಮಧ್ವಸಿದ್ಧಾಂತದ ಪ್ರತಿಪಾದನೆ. ಇದೆಲ್ಲ ಅಂಬಾ
ಬಾಯಿಗೆ ಚಿತ್ರದುರ್ಗದ ಸುತ್ತಮುತ್ತಲೂ ಸಾಕಷ್ಟು ಜನಪ್ರಿಯತೆ ಯನ್ನೂ ಪ್ರಸಿದ್ಧಿಯನ್ನೂ ತಂದುಕೊಟ್ಟಿತು. ಆದರೆ ಬರೆಯುತ್ತ ಕೂರುವುದಕ್ಕಾಗಿ ತಾನು ಜನ್ಮವೆತ್ತಿದ್ದಲ್ಲ, ಹರಿಭಕ್ತಿಯನ್ನು ಜನ ಸಾಮಾನ್ಯರಿಗೆ ತಲುಪಿಸಬೇಕು ಎಂಬ ತುಡಿತದಿಂದ ಅಂಬಾ ಬಾಯಿ ಏಕಾಂಗಿಯಾಗಿ ಊರೂರು ಅಲೆದು ಗುರುಭಕ್ತಿ- ಹರಿಭಕ್ತಿ ಯನ್ನು ಸಾರಿದರು. ಗುರುಗಳಿಂದ ಅಶೀರ್ವಾದವಾಗಿ ಪಡೆದ ತಾಳ-ತಂಬುರಿ, ಭವನಾಶಿ ಎಂಬ ಭಿಕ್ಷಾಪಾತ್ರೆ, ಕೋಲು, ಗೆಜ್ಜೆ,
ಕೃಷ್ಣಾಜಿನದಲ್ಲಿ ಸುತ್ತಿಟ್ಟ ಒಂದು ಸೀರೆ-ಇಷ್ಟೇ ಸರಂಜಾಮು.

ಕೆಲವೊಮ್ಮೆ ಬಸ್ಸು, ಕೆಲವೊಮ್ಮೆ ರೈಲು, ಕೆಲವೊಮ್ಮೆ ಮೈಲುಗಟ್ಟಲೆ ಕಾಲ್ನಡಿಗೆ. ಜಾತಿಮತಭೇದವಿಲ್ಲದೆ ಆಶ್ರಯ ಸಿಕ್ಕಿದಲ್ಲಿ ಅಲ್ಪವಿಶ್ರಾಂತಿ. ಮತ್ತೆ ಮುಂದಿನ ಊರಿಗೆ ಪಯಣ. ಕಷ್ಟ ಬಂದಾಗ, ಶ್ರೀಮಂತಿಕೆ ಹೆಚ್ಚಾದಾಗ, ದುಃಖ ಆವರಿಸಿಕೊಂಡಾಗ ಮನೆಬಿಟ್ಟು ಹೋಗುವುದು ವೈರಾಗ್ಯ ಅಲ್ಲ, ಲೋಕ ಮೋಹಿತನಾದಾಗ ಜಗತ್ಪ್ರ ಸಿದ್ಧನಾದಾಗ ಹೊಗಳಿಕೆಯಿಂದ ದೂರ ಸರಿಯುವುದಕ್ಕಾಗಿ ಸಂನ್ಯಾಸ ತಗೊಳ್ಳೊದೇ ನಿಜವಾದ ವೈರಾಗ್ಯ ಎಂದು ಅಂಬಾ ಬಾಯಿಯ ನಿಲುವು. ವಿಜಯದಾಸರ ಪುಣ್ಯತಿಥಿಯಂದು ಆರಂಭ ವಾದ ಆ ಯಾತ್ರೆಯನ್ನು ‘ವಿಜಯಪ್ರಯಾಣ’ ಎಂದೇ ಕರೆದರಂತೆ.

ಚಿತ್ರದುರ್ಗದಿಂದ ಪಂಢರಾಪುರಕ್ಕೆ ಪಯಣಿಸಿದಾಗಿನ ೮೮ ದಿನಗಳ ವಿವರವನ್ನು ಗುರುಗಳಿಗೆ ಒಪ್ಪಿಸುವುದಕ್ಕೋಸ್ಕರ ದಿನಚರಿ(ಡೈರಿ)ಯಾಗಿ ಬರೆದಿಟ್ಟರು. ಪ್ರತಿ ದಿನದ ಕೆಳಗೆ ಇಂಗ್ಲಿಷ್ ದಿನಾಂಕ ಮತ್ತು ಭಾರತೀಯ ಪಂಚಾಂಗ ರೀತ್ಯಾ ತಿಥಿ ದಾಖಲಾತಿ. ದಾರಿಯುದ್ದಕ್ಕೂ ಸಿಕ್ಕ ಊರುಗಳಲ್ಲಿ ಜನರ ನಂಬಿಕೆಯನ್ನು ಹರಿಭಕ್ತಿ ಪ್ರಚಾರಕ್ಕೆ ಬಳಸಿದರು. ಆನುಗೋಡಿನಲ್ಲಿ ಬೇವಿನಮರವೊಂದರ ಕೆಳಗೆ ಪುರಂದರದಾಸರು ಕುಳಿತುಕೊಂಡಿದ್ದರಂತೆ ಎಂದು ಕೇಳಿಸಿ ಕೊಂಡ ಅಂಬಾಬಾಯಿ ಅಲ್ಲಿಯ ಜನರನ್ನು ಸಂಘಟಿಸಿ ಅಮಲ್ದಾರ ರಿಂದ ಅನುಮತಿ ಪಡೆದು ಪುರಂದರಕಟ್ಟೆ ನಿರ್ಮಿಸಿದರು.

ಕುಕನೂರಿನಲ್ಲಿ ಗುರುಗಳು ಕೂತಿದ್ದ ಕಲ್ಲುಬಂಡೆಯನ್ನು ಪೂಜಾರ್ಹ ಸ್ಮಾರಕವಾಗಿಸಿದರು. ತಾವೇ ಬರೆದ ಕೀರ್ತನೆಗಳನ್ನು ‘ಇದು ಯಾರೋ ಗೋಪಾಲ ಕೃಷ್ಣ ವಿಠಲ ದಾಸರದು, ರಾಗ ಮತ್ತು ಪದಗಳು ಸರಳವಾಗಿವೆ, ನಾನು ಹೇಳಿಕೊಡುತ್ತೇನೆ, ನೀವು ಕಲಿತುಕೊಂಡು ಹಾಡಿ’ ಎಂದು ಮಹಿಳೆಯರಿಗೆಲ್ಲ ಕಲಿಸಿಕೊಟ್ಟರು. ತಮ್ಮದೇ ರಚನೆಗಳನ್ನು ಬೇರೆಯವರದೆಂದು ಹೇಳಿ ಪ್ರಚಾರ ಮಾಡಿದರು. ಅರ್ಹರಿಗೆ ಅಂಕಿತ ಅನುಗ್ರಹಿಸಿದರು. ದೇವರನಾಮ ಕೇಳುವುದರಿಂದ, ಹಾಡುವುದರಿಂದ ಸಿಗುವ ಮನಃಶಾಂತಿ ನೆಮ್ಮದಿ ಗಳನ್ನು ಜನಸಾಮಾನ್ಯರಿಗೆ ಹಂಚಿದರು. ೧೯೪೬ರಲ್ಲಿ ಒಂದು ದಿನ ಅಂಬಾಬಾಯಿ ಯಾವುದೋ ಊರಿನಲ್ಲಿ ನದಿ ದಾಟುತ್ತ ಕಾಲು ಜಾರಿ ಬಿದ್ದು ಸತ್ತುಹೋದರೆಂದು ಸುದ್ದಿ ಬಂತು. ಪಾರ್ಥಿವ ಶರೀರ ಸಿಗಲಿಲ್ಲ.

ಗಾನಗಂಗೆಯಲ್ಲಿ ಹರಿದು ಹರಿಯ ಹಾಲುಗಡಲನ್ನು ಸೇರಿ ಅಂತರ್ಧಾನರಾದರು ಎಂದೇ ನಂಬಿದ್ದಾರೆ ಅವರ ಕುಟುಂಬಸ್ಥರು ಮತ್ತು ಅನುಚರರು.
ದೊಡ್ಡಮ್ಮನ ಬಗ್ಗೆ ಪ್ರೀತ್ಯಭಿಮಾನಗಳಿಂದ ಮಾತನಾಡುತ್ತ ನಡು ನಡುವೆ ಗದ್ಗದಿತರಾಗುತ್ತಿದ್ದರು ಶಾಂತಾ ನಾಗರಾಜ್. ಪಿಎಚ್‌ಡಿ ಮಾರ್ಗದರ್ಶಕರಾದ ಮತ್ತು ಮುಖ್ಯವಾಗಿ ಶಾಂತಾ ಅವರ ಮನೆಯ ಅಟ್ಟದ ಮೂಲೆಯ ಗಂಟಿನಲ್ಲಿ ಸೇರಿಕೊಂಡಿದ್ದ ಅಂಬಾ ಬಾಯಿ-ಸಾಹಿತ್ಯದ ಹಸ್ತಪ್ರತಿಗಳನ್ನು ತೆಗೆದು ಕೊಂಡು ಹೋಗಿ ಪ್ರಕಟಿಸಿದ ಡಾ.ಅನಂತಪದ್ಮನಾಭ ರಾವ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಂದೆರಡು ಮಾತನಾಡಿದರು. ಗಾಯಕಿ ದಿವ್ಯಾ
ಗಿರಿಧರ್ ಅಂಬಾಬಾಯಿಯವರದೇ ಮೂರು ರಚನೆಗಳನ್ನು- ಏರಿ ಬಂದನು ಸೂರ್ಯ ಎಂಬ ರಥಸಪ್ತಮಿ ವಿಶೇಷ ಹಾಡು, ಉದ್ಭವಿಸಿದ ಕಂಬದಿ ನರಸಿಂಹ…, ಮತ್ತೊಂದು ಜಯಮಂಗಳಂ ಹಾಡನ್ನು ಹಾಡಿ ಅಂಬಾಬಾಯಿ ಸ್ಮರಣೆಯನ್ನು ಮತ್ತಷ್ಟು ಅರ್ಥ ಪೂರ್ಣಗೊಳಿಸಿದರು.

ಇಡೀ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ಯುಟ್ಯೂಬ್‌ನಲ್ಲಿರುವುದರಿಂದ ನೀವೂ ನೋಡಬಹುದು. ಹೇಗೂ ನಾಡಿದ್ದು ಮಾರ್ಚ್ ೮ಕ್ಕೆ ಮಹಿಳೆ ಯರ ದಿನಾಚರಣೆ. ಅಂಬಾಬಾಯಿ ಎಂಬ ಈ ಧೀಮಂತ ಮಹಿಳೆಯ ಜೀವನಗಾಥೆ ತಿಳಿದುಕೊಳ್ಳಲು, ಪ್ರೇರಣೆ ಪಡೆಯಲು ಇದೊಂದು ಸುಸಂದರ್ಭ ವಾಗಬಾರದೇಕೆ?

ಲಿಂಕ್ ಇಲ್ಲಿದೆ: : youtu.be/Xk_KVlCzEa4