Saturday, 23rd November 2024

24 ಮಾರ್ಚ್ 2024ರ ಈ ಲೇಖನದಲ್ಲಿ 24ರ 24 ವೈಶಿಷ್ಠ್ಯಗಳು

ತಿಳಿರು ತೋರಣ

srivathsajoshi@yahoo.com

ಸ್ವಾರಸ್ಯಕರ ಸಂಗತಿಯೆಂದರೆ, ೨೪ರ ವೈಶಿಷ್ಟ್ಯ ಕಾಲಮಾಪನಕ್ಕಷ್ಟೇ ಸೀಮಿತವಲ್ಲ. ವಿವಿಧ ವಿಷಯಗಳನ್ನು ಅಗೆದು ನೋಡಿದರೆ, ವಿವಿಧ ಸಂಪ್ರದಾಯ ನೀತಿನಿಯಮಗಳನ್ನೆಲ್ಲ ಬಗೆದು ನೋಡಿದರೆ ಪುರಾತನ ಕಾಲದಿಂದಲೂ ೨೪ಕ್ಕಿರುವ ಸ್ಪೆಷಾಲಿಟಿ ತಿಳಿಯುತ್ತದೆ.

ಅಶೋಕಚಕ್ರದಲ್ಲಿ- ಅದೇ, ಭಾರತ ದೇಶದ ರಾಷ್ಟ್ರ ಲಾಂಛನದಲ್ಲಿ ಮತ್ತು ರಾಷ್ಟ್ರಧ್ವಜದಲ್ಲಿಯೂ ಅಳವಡಿಸಿಕೊಂಡಿರುವ ಚಕ್ರದಲ್ಲಿ- ಒಟ್ಟು ಎಷ್ಟು ಅರಗಳಿವೆ? ಅರಅಂದರೆ ಗೆರೆ ಅಥವಾ ಕಡ್ಡಿ. ಇಂಗ್ಲಿಷ್‌ನಲ್ಲಾದರೆ spokes. ೨೪ ಎಂದು ಬಹುತೇಕ ಎಲ್ಲರೂ ಥಟ್ಟಂತ ಉತ್ತರಿಸಿಯಾರು; ಮತ್ತು ಅದು ಸರಿಯುತ್ತರವೂ ಹೌದು. ಆದರೆ ಆ ೨೪ ಕಡ್ಡಿಗಳು ಏನನ್ನು ಸೂಚಿಸುತ್ತವೆ ಎಂದು ಕೇಳಿದರೆ ಕರಾರುವಾಕ್ಕಾದ ಒಂದೇ ಉತ್ತರ ಸಿಗಲಿಕ್ಕಿಲ್ಲ.

ಅವರವರ ಭಾವಕ್ಕೆ ತಕ್ಕಂತೆ- ಕೆಲವರು ಅದನ್ನು ಸಮಯದ ಚಕ್ರ ಎಂದು ಪರಿಗಣಿಸಿ ದಿನದ ೨೪ ಗಂಟೆಗಳನ್ನು ಸೂಚಿಸುತ್ತವೆ ಎಂದಾರು. ಕಾಲಚಕ್ರ ಹೌದು ಆದರೆ ದಿನದ ೨೪ ಗಂಟೆಗಳು ಎನ್ನುವುದಕ್ಕಿಂತಲೂ ಒಂದು ಸಂವತ್ಸರದ ಒಟ್ಟು ೨೪ ಪಕ್ಷಗಳನ್ನು ಸೂಚಿಸುತ್ತವೆ ಎಂದು ಇನ್ನು ಕೆಲವರು ಹೇಳಿ ಯಾರು. ಹಾಗಲ್ಲ, ಅದು ಧರ್ಮಚಕ್ರ, ಅಶೋಕ ಚಕ್ರವರ್ತಿಯು ಆ ೨೪ ಅರಗಳಲ್ಲಿ ಬೌದ್ಧಧರ್ಮದ ೨೪ ಗುಣತತ್ತ್ವಗಳನ್ನು ಕಂಡಿದ್ದನು ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಬಹುದು. ಕಳಿಂಗ ಯುದ್ಧದಲ್ಲಿ ಅಪಾರ ಸಾವುನೋವುಗಳನ್ನು ಕಂಡು ಮರುಗಿದ ಅಶೋಕನು ಐಹಿಕ ಭೋಗಗಳ ನ್ನೆಲ್ಲ ತೊರೆದು ಬೌದ್ಧಧರ್ಮ ಪ್ರಚಾರಕಾರ್ಯದಲ್ಲಿ ತೊಡಗಿ ಮಾನವಹಕ್ಕುಗಳ ವಿಷಯದಲ್ಲಿ ೨೪ ಅನುಶಾಸನಗಳನ್ನು ಹೊರಡಿಸಿದ್ದನು; ಜೀವನದ ನಿರಂತರತೆಯನ್ನೂ, ಜ್ಞಾನಿಯಾದವನು ಸದಾಕಾಲ ಎಚ್ಚರವಾಗಿರಬೇಕೆಂದೂ ಆ ಅನುಶಾಸನಗಳು ಜ್ಞಾಪಿಸುತ್ತಿರುತ್ತವೆ; ಅವೇ ಧರ್ಮಚಕ್ರದ ೨೪ ಕಡ್ಡಿಗಳು ಎಂಬ ವ್ಯಾಖ್ಯಾನವನ್ನೂ ಸೇರಿಸಬಹುದು.

೨೪ ಎಂದೊಡನೆ ಸಾಮಾನ್ಯವಾಗಿ ನಮಗೆಲ್ಲರಿಗೂ ತತ್‌ಕ್ಷಣಕ್ಕೆ ಹೊಳೆಯುವ ವಿಚಾರವೆಂದರೆ ದಿನದ ೨೪ ಗಂಟೆಗಳೇ. ಅದೂ ಈಗಿನ ಆಧುನಿಕ ಯುಗದ ೨೪/೭ ಗ್ರಾಹಕ ಸೇವೆ, ೨೪/೭ ಎಟಿಎಂ ಸೌಕರ್ಯ, ೨೪ ಗಂಟೆಯೂ ಪ್ರಸಾರವಿರುವ ಸುದ್ದಿವಾಹಿನಿಗಳು (ಅವುಗಳ ನಿರಂತರ ಅರಚಾಟಕ್ಕೆ ‘ಅರ’ ಅಥವಾ ‘ಅರೆ’ ಪದ ಹೆಚ್ಚು ಹೊಂದುತ್ತದೆ) ಇವೆಲ್ಲ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವುದರಿಂದ ೨೪ ಎಂಬ ಸಂಖ್ಯೆಗೆ ಅನವರತ, ಹಗಲಿರುಳೂ, ರೌಂಡ್ ದ
ಕ್ಲಾಕ್… ಎಂಬ ಭಾವನೆ ಮೂಡಿಸುವ ಶಕ್ತಿಯಿರುವುದು ಆಶ್ಚರ್ಯದ ಮಾತಲ್ಲ.

ಭೂಮಿಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಅವಧಿಯನ್ನು ಸರಿಸುಮಾರು ೨೪ ಗಂಟೆ ಎಂದು ಪರಿಗಣಿಸಿ (೨೩ ಗಂಟೆ ೫೬ ನಿಮಿಷ ೪ ಸೆಕೆಂಡು ನಿಖರವಾದ ಅವಧಿ) ನಾವು ಗಡಿಯಾರಗಳನ್ನು ಮಾಡಿಕೊಂಡಿರುವುದು, ಭೂ ಗೋಳವನ್ನು ತಲಾ ೧೫ ಡಿಗ್ರಿ ರೇಖಾಂಶಕ್ಕೊಂದರಂತೆ ೨೪ ಟೈಮ್ ಜೋನ್‌ಗಳಾಗಿ ವಿಂಗಡಿಸಿರುವುದು… ಈ ರೀತಿಯ ಭೌಗೋಳಿಕ ಮಾಹಿತಿಗಳೂ ೨೪ನ್ನು ನಾವು ಸಮಯದೊಡನೆ ತಳುಕು ಹಾಕುವುದಕ್ಕೆ ಕಾರಣ. ‘ಇಷ್ಟೆಲ್ಲ ಕೆಲಸಗಳನ್ನು ಮಾಡುವ ಅವರಿಗೆ ನಮ್ಮೆಲ್ಲ ರಂತೆ ದಿನಕ್ಕೆ ೨೪ ಗಂಟೆಗಳಷ್ಟೇ ಇರುವುದೇ ಅಥವಾ ದೇವರು ಇನ್ನೊಂದಿಷ್ಟು ಗಂಟೆ ಸಮಯ ಕೊಟ್ಟಿರುತ್ತಾನೆಯೇ?’ ಎಂಬ ಆಶ್ಚರ್ಯ ಮತ್ತೊಂದಿಷ್ಟು ಅಸೂಯೆಭರಿತ ಉದ್ಗಾರಗಳಲ್ಲೂ, ಸಮಯಕ್ಕೂ ೨೪ಕ್ಕೂ ಅವಿನಾಭಾವ ತಳುಕು.

ಆದರೆ ೨೪ರ ವೈಶಿಷ್ಟ್ಯ ಕಾಲಮಾಪನಕ್ಕಷ್ಟೇ ಸೀಮಿತವಲ್ಲ. ವಿವಿಧ ವಿಷಯಗಳನ್ನು ಅಗೆದು ನೋಡಿದರೆ, ವಿವಿಧ ಸಂಪ್ರದಾಯ ನೀತಿನಿಯಮಗಳನ್ನೆಲ್ಲ ಬಗೆದು ನೋಡಿದರೆ ಪುರಾತನ ಕಾಲ ದಿಂದಲೂ ೨೪ಕ್ಕಿರುವ ಸ್ಪೆಷಾಲಿಟಿ ತಿಳಿಯುತ್ತದೆ. ಮೊದಲನೆಯದಾಗಿ, ಸನಾತನ ಹಿಂದೂ ಸಂಸ್ಕೃತಿಯ ಪರಮೋಚ್ಚ ಮಂತ್ರವೆನಿಸಿದ ಗಾಯತ್ರೀ ಮಂತ್ರದಲ್ಲಿ ೨೪ ಅಕ್ಷರಗಳಿರುವುದು. ಅವು ಯಾವುವು? ಅನುಕ್ರಮವಾಗಿ- ತತ್, ಸ, ವಿ, ತುರ್, ವ, ರೇ, ಣಿ,
ಯಂ, ಭರ್, ಗೋ, ದೇ, ವ, ಸ್ಯ, ಧಿ, ಮ, ಹಿ, ಧಿ, ಯೋ, ಯೋ, ನಃ, ಪ್ರ, ಚೋ, ದ, ಯಾತ್. ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು.

ಅರ್ಧಾಕ್ಷರಗಳನ್ನು (ಸ್ವರವಿಲ್ಲದೆ ವ್ಯಂಜನ ಮಾತ್ರ ಇರುವಂಥವನ್ನು) ಲೆಕ್ಕಕ್ಕೆ ತೆಗೆದುಕೊಳ್ಳಲಿಕ್ಕಿಲ್ಲ. ಹಾಗೆಯೇ, ‘… ವರೇಣಿಯಂ…’ ಎಂಬುದು ಶುದ್ಧ ವೈದಿಕ ಸಂಸ್ಕೃತದಲ್ಲಿರುವ ರೂಪ. ಲೌಕಿಕ ಸಂಸ್ಕೃತದಲ್ಲಿ ಈಗ ಅದು ‘ವರೇಣ್ಯಂ’ ಎಂದಾಗಿರುವುದು. ಗಾಯತ್ರೀ ಮಂತ್ರವನ್ನು ತಲಾ ಎಂಟು ಅಕ್ಷರ ಗಳಂತೆ ಮೂರು ಸಾಲುಗಳಲ್ಲಿ ಬರೆದರೆ ಅದೇ ಗಾಯತ್ರೀ ಛಂದಸ್ಸು. ಮಂತ್ರದ ಒಂದೊಂದು ಅಕ್ಷರಕ್ಕೂ ಒಬ್ಬೊಬ್ಬರಂತೆ ೨೪ ಅಧಿದೇವತೆಗಳು: ಅಗ್ನಿ, ವಾಯು, ಸೂರ್ಯ, ಆಕಾಶ, ಯಮ, ವರುಣ, ಬೃಹಸ್ಪತಿ, ಪರ್ಜನ್ಯ, ಇಂದ್ರ, ಗಂಧರ್ವ, ಪೂಷಾ, ಮಿತ್ರ, ತ್ವಷ್ಟಾ, ವಸು, ಮರುದ್ಗಣ, ಸೋಮ, ಅಂಗಿ ರಸ್ಸು, ವಿಶ್ವೇದೇವ, ಅಶ್ವಿನೀಕುಮಾರ, ಪ್ರಜಾಪತಿ, ಸಂಪೂರ್ಣದೇವತಾ, ರುದ್ರ, ಬ್ರಹ್ಮ, ಮತ್ತು ವಿಷ್ಣು.

ಗಾಯತ್ರೀ ಮಂತ್ರದ ಈ ಬೀಜಾಕ್ಷರಗಳೇ ವಾಲ್ಮೀಕಿ ಮಹರ್ಷಿ ಬರೆದ ಆದಿಕಾವ್ಯ ರಾಮಾಯಣಕ್ಕೆ ಮೂಲಾಧಾರ. ಗಾಯತ್ರೀ ಮಂತ್ರದ ಒಂದೊಂದು ಅಕ್ಷರಕ್ಕೆ ತಲಾ ಒಂದು ಸಾವಿರದಂತೆ ಒಟ್ಟು ೨೪,೦೦೦ ಶ್ಲೋಕಗಳು ರಾಮಾಯಣದಲ್ಲಿರುವುದು. ಮೊತ್ತಮೊದಲ ಶ್ಲೋಕ ‘ತ’ ಅಕ್ಷರದಿಂದ ಆರಂಭ ವಾಗುವುದು ಹೀಗಿದೆ: ‘ತಪಃ ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್| ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್||’. ಆಮೇಲೆ ಪ್ರತಿ
ಸಾವಿರದ ಒಂದನೆಯ ಶ್ಲೋಕವು ಅನುಕ್ರಮವಾಗಿ ಸ, ವಿ, ತು, ವ… ಅಕ್ಷರಗಳಿಂದ ಆರಂಭವಾಗುವುದು ಎನ್ನುತ್ತಾರೆ. ಇಲ್ಲಿ ಸ್ವಲ್ಪ ವ್ಯತ್ಯಾಸವಿದೆ.

ನಿರ್ದಿಷ್ಟವಾಗಿ ೧೦೦೧, ೨೦೦೧, ೩೦೦೧… ಕ್ರಮ ಸಂಖ್ಯೆಯ ಶ್ಲೋಕವೇನಲ್ಲ, ಆಸುಪಾಸಿನಲ್ಲಿ ಯಾವುದಾದರೂ ಕಾಂಡದ/ಸರ್ಗದ ಆರಂಭವಾಗಿದ್ದರೆ ಆ ಶ್ಲೋಕ ಇರಬಹುದು. ಅಲ್ಲದೇ ರೇ, ಣಿ, ಗೋ, ಧಿ, ಯೋ ಮುಂತಾದ ಅಕ್ಷರಗಳ ಸಂದರ್ಭದಲ್ಲಿ ಆಯಾ ಅಕ್ಷರಗಳಿಂದಲೇ ಶ್ಲೋಕ ಆರಂಭವಾಗಿಲ್ಲ.
ಆ ವ್ಯಂಜನದ ಕಾಗುಣಿತದಿಂದಾದ ಯಾವುದಾದರೂ ಅಕ್ಷರದಿಂದ, ಉದಾಹರಣೆಗೆ ರೇ ಇರಬೇಕಾದಲ್ಲಿ ರಾ, ಗೋ ಇರಬೇಕಾದಲ್ಲಿ ಗ, ಧಿ ಇರಬೇಕಾದಲ್ಲಿ ಧ, ಣಿ ಇರಬೇಕಾದಲ್ಲಿ ನಿಧಿ ಹೀಗೆ ನಾವು ಚಿತ್ರಗೀತೆಗಳ ಅಂತಾಕ್ಷರಿ ಆಡುವಾಗ ಸ್ವಲ್ಪ ‘ಅಡ್ಜಸ್ಟ್‌ಮೆಂಟ್’ ಮಾಡುತ್ತೇವಲ್ಲ ಆ ರೀತಿ ಇದೆ. ಹಾಗಾಗಿ ವಾಲ್ಮೀಕಿ ಮಹರ್ಷಿಗಳು ಪ್ರಜ್ಞಾಪೂರ್ವಕವಾಗಿ ಗಾಯತ್ರೀ ಮಂತ್ರದ ಅಕ್ಷರಗಳನ್ನು ಜ್ಞಾಪಿಸಿಕೊಂಡು ಶ್ಲೋಕಗಳನ್ನು ಬರೆದರೋ ಅಥವಾ ಆ ಮೇಲಿನವರಾರೋ
ನಿರ್ದಿಷ್ಟ ಶ್ಲೋಕಗಳಲ್ಲಿ ಇಂಥದೊಂದು ಸೋಜಿಗವನ್ನು ಕಂಡು ಹಿಡಿದರೋ ತಿಳಿಯದು.

ಸ್ವಾರಸ್ಯವೆಂದರೆ ಈ ೨೪ ಶ್ಲೋಕಗಳನ್ನು ಜೋಡಿಸಿದರೆ ರಾಮಾಯಣದ ಕಥೆ ಕಾಲಾನುಕ್ರಮ ರೀತಿಯಲ್ಲೇ ಜೋಡಣೆಯಾಗುವುದು ಹೌದು. ಅದೇ ಒಂದು ಸಂಕ್ಷಿಪ್ತ ‘ಗಾಯತ್ರೀ ರಾಮಾಯಣ’ ಎಂದು ಪ್ರಸಿದ್ಧವಾಗಿರುವುದೂ ಹೌದು. ಒಟ್ಟಿನಲ್ಲಿ ರಾಮಾಯಣಕ್ಕೂ, ಗಾಯತ್ರೀ ಮಂತ್ರಕ್ಕೂ, ೨೪ ಎಂಬ ಸಂಖ್ಯೆಗೂ ತ್ರಿವೇಣಿ ಜಡೆ ಹೆಣೆಯಲಾಗಿರುವುದಂತೂ ಸತ್ಯ. ಗಾಯತ್ರೀ ಮಂತ್ರದಲ್ಲಿ ೨೪ ಅಕ್ಷರಗಳಾದರೆ ಆ ಮಂತ್ರವೇ ಮೂಲತಿರುಳಾಗಿರುವ ಸಂಧ್ಯಾವಂದನೆ ಆರಂಭವಾಗುವುದು ವಿಷ್ಣುವಿನ ೨೪ ಹೆಸರುಗಳ ಸ್ಮರಣೆಯೊಂದಿಗೆ. ಇದನ್ನೇ ಆಚಮನ ವಿಧಿ ಎನ್ನುವುದು.

ಕೇಶವಾಯ ನಮಃ, ನಾರಾಯಣಾಯ ನಮಃ, ಮಾಧವಾಯ ನಮಃ, ಗೋವಿಂದಾಯ ನಮಃ ಎಂದು ಆರಂಭವಾಗಿ ಶ್ರೀಕೃಷ್ಣಾಯ ನಮಃ ಎಂಬಲ್ಲಿಗೆ ಒಟ್ಟು ೨೪ ಹೆಸರುಗಳು. ಮುಂದೆ ಸಂಧ್ಯಾವಂದನೆಯಲ್ಲೇ ಗಾಯತ್ರೀ ಮಂತ್ರವನ್ನು ೨೪ ಹಸ್ತಮುದ್ರೆಗಳಿಂದ ತೋರಿಸುವ ಭಾಗವೂ ಬರುತ್ತದೆ. ಆ ೨೪
ಮುದ್ರೆಗಳು ಯಾವುವೆಂದರೆ: ಸುಮುಖ, ಸಂಪುಟ, ವಿತತ, ವಿಸ್ತೃತ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಣ್ಮುಖ, ಅಧೋಮುಖ, ವ್ಯಾಪಿ ಕಾಂಜಲಿಕ, ಶಕಟ, ಯಮಪಾಶ, ಗ್ರಥಿತ, ಉನ್ಮುಖ, ಪ್ರಲಂಬ, ಮುಷ್ಟಿಕ, ಮತ್ಸ್ಯ, ಕೂರ್ಮ, ವರಾಹ, ಸಿಂಹಾಕ್ರಾಂತ, ಮಹಾಕ್ರಾಂತ, ಮುದ್ಗರ, ಮತ್ತು ಪಲ್ಲವ. ಅಂದಹಾಗೆ ಕೇಶವಾಯ ನಮಃ ನಾರಾಯಣಾಯ ನಮಃ… ಎಂದಾಗ ಇದೊಂದು ಜೋಕ್ ನೆನಪಾಗಿಯೇ ಆಗುತ್ತದೆ.

ಒಂದೂರಿನ ಗೋವಿಂದ ಭಟ್ಟರೆಂಬ ಪುರೋಹಿತರೊಬ್ಬರು ‘ಕೇಶವಾಯ ನಮಃ ನಾರಾಯಣಾಯ ನಮಃ ಮಾಧವಾಯ ನಮಃ …’ ಚತುರ್ವಿಂಶತಿ ನಾಮಾವಳಿಯನ್ನು ಅವಸರದಲ್ಲಿ ಉಸುರುವಾಗ ಅದು, ಅದೇ ಊರಿನ ಇನ್ನುಳಿದ ಪುರೋಹಿತರಾದ ಕೇಶವಭಟ್ಟ, ನಾರಾಯಣಭಟ್ಟ, ಮಾಧವಭಟ್ಟರ ಮೇಲಿನ ವೃತ್ತಿಮಾತ್ಸರ್ಯದಿಂದ ‘ಕೇಶವ ಏನು ಮಹಾ?’, ‘ನಾರಾಯಣ ಏನು ಮಹಾ?’, ‘ಮಾಧವ ಏನು ಮಹಾ?’ ಎಂದು ಹೇಳುತ್ತಿದ್ದಾರೇನೋ, ‘ಗೋವಿಂದನೇ ಮಹಾ!’ ಎಂದು ತನ್ನ ಶ್ರೇಷ್ಠತನ ದಿಂದ ಬೀಗುತ್ತಿದಾರೇನೊ ಎನ್ನುವಂತೆ ಕೇಳಿಸುತ್ತದಂತೆ!

ಕೇಶವಾದಿ ಹೆಸರುಗಳ ಇನ್ನೊಂದು ಕೌತುಕವೇನೆಂದರೆ, ಮಹಾ ವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳು- ೨೪ ಹೆಸರುಗಳಿಗೆ ಸರಿಯಾಗಿ ೨೪ ರೀತಿಯ ಕ್ರಮಯೋಜನೆ (permutation)ಗಳಲ್ಲಿ ಇರುವಂತೆ ಕೆತ್ತಬೇಕೆಂದು ಶಿಲ್ಪಶಾಸ್ತ್ರ ದಲ್ಲಿರುವುದು. ವೈಷ್ಣವರಿಗೆ ಪರಮ ಪವಿತ್ರವಾದ ಸಾಲಿಗ್ರಾಮ ಶಿಲೆಯು ೨೪ ಪ್ರಕಾರಗಳದ್ದಿರುತ್ತದೆಂದೂ ಅವುಗಳಿಗೂ ಕೇಶವಾದಿ ೨೪ ಹೆಸರುಗಳು ಅನ್ವಯವಾಗುತ್ತದೆಂದೂ ಪ್ರತೀತಿ ಇದೆ. ಕೇಶವ ನಿಂದ ಕೃಷ್ಣನವರೆಗಿನ ೨೪ ಹೆಸರುಗಳಿಗೆ ಒಂದೊಂದು ಚರಣದಂತೆ ಇರುವ ಭಜನೆಪದ್ಯಗಳು ಕೂಡ ನನಗೆ ತುಂಬ ಇಷ್ಟ. ಕನಕದಾಸರ ರಚನೆ, ‘ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೆನು ದೋಷರಾಶಿ ನಾಶ ಮಾಡು ಶ್ರೀಶ ಕೇಶವ…’ ವಿದ್ಯಾಭೂಷಣರ ಮಧುರಧ್ವನಿಯಲ್ಲಿ ದಿನಾ ಎಂಬಂತೆ ಕೇಳುತ್ತೇನೆ. ಅಂತೆಯೇ ವಿದ್ಯಾಭೂಷಣರ ಮಗಳು ಮೇಧಾ ಹಿರಣ್ಮಯಿ ಹಾಡಿ ಜನಪ್ರಿಯವಾಗಿರುವ ವಾದಿರಾಜರ ರಚನೆ ‘ಗುಬ್ಬಿಯಾಳೊ ಗುಬ್ಬಿಯಾಳೊ ಗೋವಿಂದ…’ ಇದರಲ್ಲಿ ‘ಕೇಶವನ ನೆನೆದರೆ ದೋಷಪರಿಹಾರವು ಗುಬ್ಬಿಯಾಳೊ ಗುಬ್ಬಿಯಾಳೊ… ನಾರಾಯಣನ ಧ್ಯಾನದಿಂದ ನರಕ ಭಯವಿಲ್ಲವೊ ಗುಬ್ಬಿಯಾಳೊ…’ ಎಂದು ಒಂದೊಂದೇ ಚರಣಗಳು ಬರುತ್ತವೆ.

ವಾದಿರಾಜರು ಆಂಧ್ರಪ್ರದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿ ತೆಲುಗು ಸಂಸ್ಕೃತಿಯವರು ಸಂಕ್ರಾಂತಿ ಹಬ್ಬಕ್ಕೆ ಗುಬ್ಬೆಳ್ಳು ಪದದ ಕೋಲಾಟ ಆಡುವು ದನ್ನು ಕಂಡು ಅದರಂತೆಯೇ ಈ ಗುಬ್ಬಿಯಾಳೊ ಗುಬ್ಬಿಯಾಳೊ ಪದ ರಚಿಸಿದರೆಂದು ಐತಿಹ್ಯ. ಈ ಹಾಡಿಗೆ ಅಮೆರಿಕದಲ್ಲಿ ಅಟ್ಲಾಂಟಾ, ನ್ಯೂಜೆರ್ಸಿ ಮುಂತಾದೆಡೆ ಅಮೆರಿಕನ್ನಡಿಗ ಮಾಧ್ವ ಮಹಿಳೆಯರು ಕಚ್ಚೆಸೀರೆಯುಟ್ಟು ಕೋಲಾಟವಾಡಿದ ದೃಶ್ಯ ನಯನಮನೋಹರ! ಕೇಶವಾದಿ ೨೪ ಹೆಸರು ಗಳು ಬರುವ ಇನ್ನೂ ಒಂದು ಭಜನೆ, ವಾದಿರಾಜರದೇ ರಚನೆ, ‘ಸೀತಾರಾಮ ಸೀತಾರಾಮ ಸೀತಾರಾಮ ಶ್ರೀರಘು ರಾಮ…’ ಎಂದು ಶುರುವಾಗುತ್ತದೆ.

ಅದರಲ್ಲಿ ‘ಕೇಶವ ರೂಪನೆ ಕರುಣಾತ್ಮಕನೆ ಕಾರುಣ್ಯರೂಪನೆ ಕಮಲನಯನ ಹರಿ… ನಾರಾಯಣನೆ ನಾಮಸಹಸ್ರನೆ ನಾರದವಂದಿತ ನರನ ಸಾರಥಿ ಹರಿ…’ ಎಂದು ಒಂದೊಂದೇ ಹೆಸರಿನ ಒಟ್ಟು ೨೪ ಚರಣಗಳು. ನಮ್ಮ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಭಜನೆಯಲ್ಲಿ ಈ ಪದ್ಯವೂ ಇರುತ್ತಿತ್ತು. ಪ್ರತಿ ಚರಣದ ಕೊನೆಯಲ್ಲಿ ‘ಹರಿ’ ಎನ್ನುವಾಗ ಮಾತ್ರ ಎಲ್ಲರದೂ ತಾರಕಧ್ವನಿ- ಶಾಲೆಯ ಸೂರು ಕಿತ್ತುಹೋಯ್ತೇನೋ ಎನ್ನುವಷ್ಟು.

ಭಜನೆಗೂ ಏಕಾದಶಿಗೂ ನಂಟು. ಸಂವತ್ಸರವೊಂದರಲ್ಲಿ ಒಟ್ಟು ೨೪ ಏಕಾದಶಿಗಳು. ಅವುಗಳಿಗೆ ಚಂದಚಂದದ ಹೆಸರು: ಚೈತ್ರ ಮಾಸದಲ್ಲಿ ಕಾಮದಾ, ವರೂಥಿನೀ; ವೈಶಾಖದಲ್ಲಿ ಮೋಹಿನೀ, ಅಪರಾಜಿತಾ; ಜ್ಯೇಷ್ಠದಲ್ಲಿ ನಿರ್ಜಲಾ, ಯೋಗಿನೀ; ಆಷಾಢದಲ್ಲಿ ಶಯನೀ, ಕಾಮಿಕಾ; ಶ್ರಾವಣದಲ್ಲಿ ಪುತ್ರದಾ, ಅಜಾ; ಭಾದ್ರಪದ ದಲ್ಲಿ ಪರಿವರ್ತಿನೀ, ಇಂದಿರಾ; ಅಶ್ವಿಜದಲ್ಲಿ ಪಾಶಾಂಕುಶ, ರಮಾ; ಕಾರ್ತಿಕಮಾಸದಲ್ಲಿ ಪ್ರಬೋಧಿನೀ, ಉತ್ಪತ್ತಿ; ಮಾರ್ಗಶಿರದಲ್ಲಿ
ಮೋಕ್ಷದಾ, ಸಫಲಾ; ಪುಷ್ಯಮಾಸದಲ್ಲಿ ಪುತ್ರದಾ, ಷಟ್ತಿಲಾ; ಮಾಘಮಾಸದಲ್ಲಿ ಜಯಾ, ವಿಜಯಾ; ಫಾಲ್ಗುಣದಲ್ಲಿ ಆಮಲಕೀ ಮತ್ತು ಪಾಪಮೋಚನೀ. ಯಾವುದಾದರೂ ಅಧಿಕಮಾಸ ಬಂದರೆ ಅದರಲ್ಲಿ ಎರಡೂ ಏಕಾದಶಿಗಳಿಗೆ ಕಮಲಾ ಎಂದು ಹೆಸರು. ಇದೇರೀತಿ ದಕ್ಷಪುತ್ರಿಯರ ಹೆಸರುಗಳೂ ತುಂಬ ಚಂದ.

ದಕ್ಷನು ಸ್ವಯಂಭುಮನು ವಿನ ಮಗಳಾದ ಪ್ರಸೂತಿ ಯನ್ನು ಮದುವೆಯಾಗಿ ಆಕೆಯಲ್ಲಿ ೨೪ ಪುತ್ರಿ ಯರನ್ನು ಪಡೆದನಂತೆ. ಅವರ ಹೆಸರು ಗಳು: ಶ್ರದ್ಧಾ, ಲಕ್ಷ್ಮೀ, ಧೃತಿ, ತುಷ್ಟಿ, ಪುಷ್ಟಿ, ಮೇಧಾ, ಕ್ರಿಯಾ, ಬುದ್ಧಿ, ಲಜ್ಜಾ, ವಪುಸ್, ಶಾಂತಿ, ಸಿದ್ಧಿ, ಕೀರ್ತಿ (ಈ ಹದಿಮೂರು ಮಂದಿ ಧರ್ಮಋಷಿಯ ಪತ್ನಿಯರು);
ಖ್ಯಾತಿ, ಸತಿ, ಸಂಭೂತಿ, ಸ್ಮೃತಿ, ಪ್ರೀತಿ, ಕ್ಷಮಾ, ಸನ್ನತಿ, ಅನಸೂಯಾ, ಊರ್ಜಾ, ಸ್ವಾಹಾ, ಸ್ವಧಾ (ಈ ಹನ್ನೊಂದು ಮಂದಿ ಕ್ರಮವಾಗಿ ಭೃಗು, ಶಿವ, ಮರೀಚಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಕ್ರತು, ಅತ್ರಿ, ವಸಿಷ್ಠ, ಅಗ್ನಿ, ಪಿತೃದೇವತೆ- ಇವರ ಪತ್ನಿಯರು). ಹೆಣ್ಣುಮಗುವಿಗೆ ಹೆಸರು ಹುಡುಕಲಿಕ್ಕೆ ಯೋಗ್ಯ
ಪಟ್ಟಿಯಿದು. ಹೀಗೆಯೇ ೨೪ ಗುಣಗಳದು ಒಂದು ಪಟ್ಟಿ ಇದೆ ನೋಡಿ: ರೂಪ, ರಸ, ಗಂಧ, ಸ್ಪರ್ಶ, ಸಂಖ್ಯಾ, ಪರಿಮಾಣ, ಪೃಥಕ್ತ್ವ, ಸಂಯೋಗ, ವಿಭಾಗ, ಪರತ್ವ, ಅಪರತ್ವ, ಗುರುತ್ವ, ದ್ರವತ್ವ, ಸ್ನೇಹ, ಶಬ್ದ, ಬುದ್ಧಿ, ಸುಖ, ದುಃಖ, ಇಚ್ಛಾ, ದ್ವೇಷ, ಪ್ರಯತ್ನ, ಧರ್ಮ, ಅಧರ್ಮ, ಮತ್ತು ಸಂಸ್ಕಾರ. ಅಂತೆಯೇ ೨೪ ಚಿಹ್ನೆಗಳದು: ಸ್ವಸ್ತಿಕ, ಚಂದ್ರ, ಅಬ್ಜ, ಕ್ರೌಂಚ, ಗಜ, ಅಶ್ವ, ವೃಕ್ಷ, ಪ್ಲವಂಗ, ಮಹಿಷ, ಸೂಕರ, ಮಕರ, ಶ್ಯೇನ, ಮೃಗ, ಭಾಗ, ಘಟ, ಖಡ್ಗ, ವಜ್ರ, ಶ್ರೀವತ್ಸ, ನಂದ್ಯಾವರ್ತ, ಕೂರ್ಮ, ನೀಲೋತ್ಪಲ, ಶಂಖ, ನಾಗ, ಮತ್ತು ಸಿಂಹ. ಇವೆಲ್ಲ ನಮಗೆ ಬಾಯಿಪಾಠ ಗೊತ್ತಿರಬೇಕು ಅಂತಲ್ಲ.

ಇಂಥದ್ದೆಲ್ಲ ಇದೆ ನಮ್ಮ ಸಂಸ್ಕೃತಿಯಲ್ಲಿ ಎಂಬ ಅರಿವು ಅಭಿಮಾನ ಬೇಕು; ನಮ್ಮ ಹೊಸ ಉದ್ಯಮಗಳಿಗೆ, ಯೋಜನೆಗಳಿಗೆ, ಉತ್ಪನ್ನಗಳಿಗೆ, ನಿವೇಶನ ಗಳಿಗೆ, ಸ್ವಂತ ಮನೆ ಕಟ್ಟಿಸಿದಾಗ ಅದಕ್ಕೂ ಇವೆಲ್ಲ ಆಕರ್ಷಕ ಹೆಸರುಗಳ ಆಕರ ಆಗಬಲ್ಲವು ಎಂದು ಗೊತ್ತಿರಬೇಕು- ಎಂದಷ್ಟೇ ನನ್ನ ನಿಲುವು. ಕೆಲ ವಾರಗಳ ಹಿಂದೆ ಒಂದು ಅಂಕಣಬರಹದಲ್ಲಿ ವಿಷವನ್ನೇ ವಿಷಯವಾಗಿಸಿ ಬರೆದಿದ್ದೆನಷ್ಟೆ? ವಿಷಹಾರಿ ಉಪಕ್ರಮಗಳು ಒಟ್ಟು ೨೪ ಇವೆಯೆಂದು ನನಗಾಗ ಗೊತ್ತಿರಲಿಲ್ಲ. ಚರಕಸಂಹಿತೆಯಲ್ಲಿ ಹೀಗೊಂದು ಪಟ್ಟಿ ಇದೆಯಂತೆ: ಮಂತ್ರ, ಅರಿಷ್ಟ, ಉತ್ಕರ್ತನ, ನಿಷ್ಪೀಡನ, ಚೂಷಣ, ಅಗ್ನಿ, ಪರಿಷೇಕ, ಅವಗಾಹನ, ರಕ್ತಮೋಕ್ಷಣ, ವಮನ, ವಿರೇಚನ, ಉಪಧಾನ, ಹೃದಯಾವರಣ, ಅಂಜನ, ನಸ್ಯ, ಧೂಪ, ಲೇಹ, ಔಷಧ, ಪ್ರಧಮನ, ಪ್ರತಿಸಾರಣ, ಪ್ರತಿವಿಷ, ಸಂಜ್ಞಾ ಸಂಸ್ಥಾಪನ, ಲೇಪ, ಮತ್ತು ಮೃತಸಂಜೀವನ. ೨೪ ಥರದ ವ್ರಣ ದೋಷಗಳ ಪಟ್ಟಿಯೂ ಚರಕಸಂಹಿತೆಯಲ್ಲೇ ಬರುತ್ತದೆ.

ಹಾಗೆಯೇ, ಹಿಂದಿನ ಲೇಖನವೊಂದರಲ್ಲಿ ಸಮುದ್ರಮಥನದಲ್ಲಿ ಉದ್ಭವಿಸಿದ ೧೪ ರತ್ನಗಳ ಹೆಸರು ಬರೆದಿದ್ದೆ. ಅವುಗಳಿಗೆ ಇನ್ನೂ ಹತ್ತು ಬೇರೆಯವು ಗಳನ್ನೂ ಸೇರಿಸಿ ೨೪ರ ಪಟ್ಟಿಯೊಂದಿದೆ. ಇದರಲ್ಲಿರುವ ಕೆಲವು ಎಂಟ್ರಿಗಳು ಆಶ್ಚರ್ಯಕರವಾಗಿವೆ. ಬಹುಶಃ ಶ್ರೀವತ್ಸನೇ ಕಿಸೆಯಿಂದ ಸೇರಿಸಿದ್ದಿರಬಹುದು ಅಂದ್ಕೊಳ್ಳಬೇಡಿ. ಡಾ. ಟಿ.ವಿ ವೆಂಕಟಾಚಲ ಶಾಸ್ತ್ರೀಯವರ ಶ್ರೀವತ್ಸ ನಿಘಂಟುವಿನಲ್ಲಿ ಇದೆಲ್ಲ ನನಗೆ ಸಿಕ್ಕಿದ್ದು. ಆ ೨೪ ರತ್ನಗಳಾವುವೆಂದು ಒಮ್ಮೆ ನೋಡಿ: ಹಾಲಾಹಲ, ಚಂದ್ರ, ಸುರಭಿ, ಕಲ್ಪವೃಕ್ಷ, ಪಾರಿಜಾತ, ಆಮ್ರ, ಸಂತಾನಕ, ಕೌಸ್ತುಭ, ಉಚ್ಚೈಃಶ್ರವಸ್ಸು, ಐರಾವತ, ಮದಿರೆ, ವಿಜಯಾ, ಭಂಗಿ, ಬೆಳ್ಳುಳ್ಳಿ, ಗೃಂಜನ, ದತ್ತೂರಿ, ಪುಷ್ಕರ, ಬ್ರಹ್ಮವಿದ್ಯೆ, ಸಿದ್ಧಿ, ಋದ್ಧಿ, ಮಾಯೆ, ಲಕ್ಷ್ಮಿ, ಧನ್ವಂತರಿ, ಮತ್ತು ಅಮೃತ. ಇದರಲ್ಲಿ ಮಾವಿನಹಣ್ಣು(ಆಮ್ರ) ಒಂದು ರತ್ನ ಅಂತ ಒಪ್ಪಿಕೊಳ್ಳಬಹುದು; ರತ್ನಾ ಗಿರಿಯ ಆಪೂಸು ೨೪ ಕ್ಯಾರಟ್ ಚಿನ್ನದಂಥ ಮಹಾರತ್ನ ಎಂದು ಬೇಕಿದ್ದರೂ ಹೇಳ ಬಹುದು. ಆದರೆ
ಭಂಗಿ-ಬೆಳ್ಳುಳ್ಳಿಗಳೂ ರತ್ನ? ಅಷ್ಟಪ್ರಕೃತಿಗಳು, ಪಂಚeನೇಂದ್ರಿಯ ಗಳು, ಪಂಚ ಕರ್ಮೇಂದ್ರಿಯಗಳು, ಮನಸ್ಸು, ಮತ್ತು ಪಂಚ ವಿಷಯಗಳು- ಇವಿಷ್ಟು ಸೇರಿ ೨೪ ತತ್ತ್ವಗಳು ಎಂದು ಭಗವದ್ಗೀತೆಯಲ್ಲೂ ಒಂದು ಪಟ್ಟಿ. ಪೃಥ್ವಿ, ವಾಯು, ಆಕಾಶ, ಉದಕ, ಅಗ್ನಿ, ಚಂದ್ರ, ಸೂರ್ಯ, ಕಪೋತ, ಅಜಗರ, ಸಮುದ್ರ, ಪತಂಗ, ಮಧುಕರ, ಹಸ್ತಿ, ಮಧು, ಮಕ್ಷಿಕಾ, ಹರಿಣ, ಮೀನ, ಪಿಂಗಲಾ, ಕುರರ, ಬಾಲ, ಕುಮಾರಿ, ಶರಕೃತ್, ಸರ್ಪ, ಊರ್ಣನಾಭ, ಸುಪೇಶಕೃತ-
ಇದು ಅವಧೂತರ ೨೪ ಗುರುಗಳ ಪಟ್ಟಿ.

ದೀಪಂಕರನಿಂದ ಕಸ್ಸಪ(ಕಾಶ್ಯಪ)ವರೆಗಿನ ೨೪ ಬುದ್ಧರು, ವೃಷಭ ನಾಥನಿಂದ ವರ್ಧಮಾನ ಮಹಾವೀರನವರೆಗಿನ ೨೪ ಜೈನ ತೀರ್ಥಂಕರರು… ಮುಂತಾದ ಪಟ್ಟಿಗಳೂ ಇವೆ. ನನಗೆ ತುಂಬ ಸೋಜಿಗವೆನಿಸಿದ್ದೆಂದರೆ ವೀಣಾ ವಾದನದ ವೇಳೆ ಎಡ ಮತ್ತು ಬಲಕೈಗಳು ಯಾವ ರೀತಿ ಸಂಚರಿಸುತ್ತವೆ (ಹಸ್ಯವ್ಯಾಪಾರ) ಎನ್ನುವುದು ಕೂಡ ಒಟ್ಟು ೨೪ ವಿಧ ಅಂತೆ! ಘಾತ, ಪಾತ, ಸಂಲೇಖ, ಉಲ್ಲೇಖ, ಅವಲೇಖ, ಭ್ರಮರ, ಸಂಧಿತ, ಭಿನ್ನ, ನಖಕರ್ತರೀ- ಇವಿಷ್ಟು ಬಲಗೈಯವು; ಸುರಿತ ಮತ್ತು ಶ್ವಸಿತ ಇವೆರಡು ಎಡಗೈಯವು. ಘೋಷ, ರೇಫ, ಬಿಂದು, ಕರ್ತರೀ, ಅರ್ಧಕರ್ತರೀ, ನಿಷ್ಕೋಟಿತ, ಸ್ಖಲಿತ,
ಶುಕವಕ್ತ್ರಕ, ಮೂರ್ಛನಾ, ತಲಹಸ್ತ, ಅರ್ಧಚಂದ್ರ, ಪ್ರಸಾರಕ, ಮತ್ತು ಕುಹರ- ಇವಿಷ್ಟು ಉಭಯಹಸ್ತವ್ಯಾಪಾರಗಳು. ಅಬ್ಬಾ!

ಏನೇನೆಲ್ಲ ಸೂಕ್ಷ್ಮಗಳು, ಏನೇನೆಲ್ಲ ಸುವಿಚಾರಗಳು! ಅಂದಹಾಗೆ, ಭಾರಿ ಮಹತ್ತ್ವದ್ದೇನಲ್ಲ, ಆದರೂ ಸಂದರ್ಭೋಚಿತವಾಗಿ ತಿಳಿಸುವುದಾದರೆ ಇಂದಿನದು ನಾಲ್ಕುನೂರರ ಮೇಲೆ ೨೪ನೆಯ ತಿಳಿರು ತೋರಣ.