Tuesday, 3rd December 2024

ವೈದ್ಯೋ ನಾರಾಯಣ ಹರಿಃ ಅಂದರೆ ವೈದ್ಯರು ದೇವರಲ್ಲ

ಚರ್ಚಾ ವೇದಿಕೆ

ವೈದ್ಯ ದೇವರಿಗೆ ಸಮಾನ ಎಂಬರ್ಥದಲ್ಲಿ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಪ್ರಸಿದ್ಧ ಮಾತೊಂದು ಚಾಲ್ತಿಯಲ್ಲಿದೆ. ಬಹುಕಾಲದಿಂದಲೂ ಜನರಲ್ಲಿ ಇದು ಹೆಪ್ಪುಗಟ್ಟಿ ಒಪ್ಪಿತವಾಗಿದೆ. ಮೇಲ್ನೋಟಕ್ಕೆ ಹಾಗೆ ಅರ್ಥಮಾಡುವಷ್ಟು ಈ ಮಾತಿದೆ. ಆದರೆ ಮಜಾ ಏನೆಂದರೆ, ಈ ಮಾತು ಈಗೀಗ ವೈದ್ಯರನ್ನು ಹೊಗಳುವುದರ ಬದಲು, ಅವರನ್ನು ಅಣಕಿಸುವುದಕ್ಕೆ ಬಳಕೆಯಾಗುತ್ತಿದೆ.

‘ವೈದ್ಯ ಎಂದರೆ ಸಾಕ್ಷಾತ್ ದೇವರು, ಅವರು ಇಂಥ ಕೆಲಸ ಮಾಡುವುದೇ? ಎಂಥಾ ಕಾಲ ಬಂತು ನೋಡಿ! ಕಾಲ ಕೆಟ್ಟಿತಪ್ಪ, ವೈದ್ಯೋ ನಾರಾಯಣೋ ಹರಿಃ ಎಂದಿದ್ದರು ನಮ್ಮ ಹಿರಿಯರು. ಆದರೆ, ಈಗ ನೋಡಿ!’ ಎಂಬಿತ್ಯಾದಿ ಕುಹಕದ ಮಾತುಗಳಲ್ಲಿ ವೈದ್ಯರ ಕುರಿತಾದ ವ್ಯಂಗ್ಯಭರಿತ, ಅಸಡ್ಡೆಯ ದನಿ ಕಾಣುತ್ತದೆ. ಆದರೆ, ನಮ್ಮ ಹಿರಿಯರು ವೈದ್ಯರನ್ನು ದೇವರ ಸ್ಥಾನದಲ್ಲಿಟ್ಟು ನೋಡಿದ್ದು ಸತ್ಯವೇ? ಎಷ್ಟೋ ಸಲ ಸುಶಿಕ್ಷಿತರು ಹೀಗೆ ಹೇಳುವುದುಂಟು.

ಆದರೆ, ಅರ್ಥ ಬೇರೆಯೇ ಇದೆ. ವೈದ್ಯೋ ನಾರಾಯಣೋ ಹರಿಃ ಎಂಬ ವಾಕ್ಯದ ಪೂರ್ಣಪಾಠ ಹೀಗಿದೆ: ‘ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ, ಔಷಧಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ’. ಇದನ್ನು ಎರಡು ಬಗೆಯಲ್ಲಿ ಅರ್ಥೈಸಬಹುದು.

ಅರ್ಥ ೧: ದೇಹವು ಕ್ಷೀಣಗೊಂಡಾಗ ಮತ್ತು ರೋಗದಿಂದ ಬಳಲುತ್ತಿರುವಾಗ, (ವೈದ್ಯ ನೀಡುವ) ಔಷಧವು ಗಂಗಾ (ನದಿ) ನೀರಿನಂತೆ ಪರಿಹಾರ ಹಾಗೂ
ಪವಿತ್ರವಾಗಿದೆ ಮತ್ತು ವೈದ್ಯ (ಸಮಾನ) ಭಗವಾನ್ ಹರಿ ನಾರಾಯಣ. ಹರಿ ಎಂದರೆ ಕಿತ್ತುಕೊಳ್ಳುವವನು ಅಥವಾ ನಾಶಮಾಡುವವನು (ಈ ಸಂದರ್ಭ ದಲ್ಲಿ ರೋಗಗಳನ್ನು).

ಅರ್ಥ ೨: ದೇಹವು ಮಾರಣಾಂತಿಕವಾಗಿ ಕ್ಷೀಣಿಸುತ್ತಿರುವಾಗ ಮತ್ತು ಅನೇಕ ರೋಗಗಳಿಂದ ಬಳಲುತ್ತಿರುವಾಗ, (ಆರೋಗ್ಯ ಮತ್ತು ಮುಕ್ತಿಯನ್ನು ನೀಡುವ) ಪವಿತ್ರ ಗಂಗಾ ಜಲವೇ ಔಷಧವಾಗಿದೆ ಮತ್ತು ವೈದ್ಯನು ಭಗವಾನ್ ಹರಿ (ಮರಣವನ್ನು ನಾಶಮಾಡುವವನು) ಹೊರತು ಬೇರೆ ಯಾರೂ ಅಲ್ಲ.
ದೇಹವನ್ನು ಶರೀರ ಎನ್ನಲಾಗಿದೆ. ಶಿರ್ಯತೇ ಇತಿ ಶರೀರಃ- ಅಂದರೆ ಅದು ಸವೆದು ಹೋಗುವುದು. ದೇಹವೆಂದರೆ ದೇಹ. ದಿಹ್ಯತೇ ಇತಿ ದೇಹಃ- ಅದು
ಆರೋಗ್ಯಕರ ಕಾಂತಿಯಿಂದ ಬೆಳಗುತ್ತದೆ. ೪೦ ವರ್ಷ ಆಗುವವರೆಗೂ ದೇಹವೆಂದೂ, ನಂತರ ದೇಹವನ್ನು ಶರೀರ ಎಂದೂ ಕರೆಯಲಾಗುತ್ತದೆ. ಆದ್ದರಿಂದ, ಈ ಶ್ಲೋಕವು ೪೦ರ ನಂತರ ದೇಹವು ನಿಧಾನವಾಗಿ ಕ್ಷೀಣಿಸಲು ಪ್ರಾರಂಭಿಸಿದಾಗ, ಆರಂಭದ ಭರವಸೆ ಭಗವಾನ್ ಹರಿ- ನಾರಾಯಣ- ವಿಷ್ಣು ಎಂದು ಅರ್ಥೈಸಬಹುದು.

ಅರ್ಥಾತ್, ಶರೀರವು ವ್ಯಾಧಿ (ರೋಗ)ಯಿಂದ ಜರ್ಜರಿತವಾಗಿ ಕಳೇಬರದಂತಾಗಿರುವ ವ್ಯಕ್ತಿಗೆ ಬೇರೇನೂ ಔಷಧಿ ನೀಡಲಾರದೆ ಗಂಗೆಯ ನೀರನ್ನು ಬಾಯಿಗೆ (ಗಂಗೆಯೇ ಔಷಧಿ) ಹಾಕಿ, ಇನ್ನೇನಿದ್ದರೂ ಆ ನಾರಾಯಣನೇ ನೋಡಿಕೊಳ್ಳಬೇಕೆಂದು ಕೈಚೆಲ್ಲುವಾಗ ಹುಟ್ಟಿದ ಸುಭಾಷಿತವಿದು. ಈ ಶ್ಲೋಕವು ವೈದ್ಯನನ್ನು ಹೊಗಳದೆ ವೈದ್ಯಕೀಯದ ಇತಿಮಿತಿಯನ್ನು ಹೇಳುತ್ತದೆ. ಕಾಯಿಲೆಯಿಂದ ಶರೀರ ಜರ್ಜರಿತವಾಗಿ ರೋಗ ಉಲ್ಬಣಿಸಿದಾಗ ಮಾನವ ಪ್ರಯತ್ನದಿಂದ ರೋಗಿ ಗುಣಮುಖನಾಗಲು ಸಾಧ್ಯವಿಲ್ಲ, ಅದಕ್ಕೆ ದೈವಬಲವೂ ಬೇಕು.

ಆದರೆ ವೈದ್ಯನೇ ದೇವರಾಗಲೂ ಸಾಧ್ಯವಿಲ್ಲ ಮತ್ತು ಆ ಬಗೆಯ ಅರ್ಥವೂ ಈ ಶ್ಲೋಕದಲ್ಲಿಲ್ಲ. ಆದರೆ ಯಾರೋ ಕಿಡಿಗೇಡಿಗಳು ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಮಾತ್ರ ಉದ್ಧರಿಸಿ ಇದರಲ್ಲಿ ವೈದ್ಯನೇ ದೇವರು ಎಂಬ ಅರ್ಥ ಮಾಡಿದ್ದರಿಂದ ವೈದ್ಯಲೋಕಕ್ಕೆ ಅನ್ಯಾಯವೇ ಆಗಿದೆ ಎಂದು ನಾನು ಪರಿಭಾವಿಸಲು ಕಾರಣಗಳಿವೆ. ಯಾಕೆಂದರೆ, ವೈದ್ಯನೂ ಮನುಷ್ಯಮಾತ್ರನೇ; ಮನುಷ್ಯ ಪ್ರಯತ್ನಕ್ಕೂ ಒಂದು ಮಿತಿಯಿದೆ. ರೋಗವು ಆರಂಭದ ಹಂತವನ್ನು ಮೀರಿ ಉಲ್ಬಣಿಸಿದಾಗ ದೇವರೇ ಕಾಪಾಡಬೇಕೆಂಬುದು ವಾಸ್ತವ ಪ್ರಜ್ಞೆ ಮತ್ತು ಮನುಷ್ಯನನ್ನೂ ಮೀರಿದ ಸತ್ಯ! ವೈದ್ಯನೇ ದೇವರು ಎಂಬರ್ಥದಿಂದ ಆಗುವ ಅನಾಹುತವೇನೆಂದರೆ, ವೈದ್ಯನೇ ದೇವರಾಗಿರುವುದರಿಂದ ಅವನು ವಿಫಲನಾಗುವುದು ಸಾಧ್ಯವಿಲ್ಲ.

ಒಂದು ಪಕ್ಷ ರೋಗಿಯು ಗುಣಮುಖನಾಗದಿದ್ದರೆ ಅದು ವೈದ್ಯನ ನಿರ್ಲಕ್ಷ್ಯದಿಂದಲೇ ಹೊರತು ಅವನ ಶಕ್ತಿಯ ಇತಿಮಿತಿಗಳಿಂದಲ್ಲ ಎಂಬ ಭಾವನೆ
ಜನರಲ್ಲಿ ಮೂಡುವುದಿಲ್ಲವೇ? ಆಗ ಸಂಬಂಽಸಿದ ವೈದ್ಯನ ಬಗ್ಗೆ ಮಾತ್ರವಲ್ಲದೇ ವೈದ್ಯ ಸಮೂಹದ ಬಗ್ಗೆಯೇ ದೂಷಣೆ ಮತ್ತು ಅಪಪ್ರಚಾರ ಹುಟ್ಟಿ ಕೊಳ್ಳುತ್ತದೆ. ವೈದ್ಯ ಸಮೂಹವನ್ನೇ ಹೀಗಳೆಯುವುದು ಸಮಾಜದ ದೊಡ್ಡ ದೌರ್ಬಲ್ಯ! ಒಬ್ಬನ ತಪ್ಪಿಗೆ ಇಡಿಯ ಸಮೂಹವನ್ನೇ ಅಥವಾ ಜಾತಿಯನ್ನೇ ಆಡಿಕೊಳ್ಳುವುದು ಸಮಾಜದ ವೈಚಾರಿಕ ಕಾಯಿಲೆಯೇ ಆಗಿದೆ.

ವೈದ್ಯರನ್ನು ದೇವರಾಗಿಸಿದರೆ ವೈದ್ಯನೆಂಬ ದೇವರಿಗೆ ಹಸಿವು, ಬಾಯಾರಿಕೆ, ಸುಸ್ತು, ಕೋಪ, ಮುನಿಸು, ವೈರಾಗ್ಯ, ಖಿನ್ನತೆ ಇತ್ಯಾದಿ ಆಗುವಂತಿಲ್ಲ. ಕೆಲಸದಲ್ಲಿ ವಿಫಲನಾಗುವುದಕ್ಕೆ ಅವಕಾಶವಿಲ್ಲ. ದೇವರಾದ ಮೇಲೆ ಮುಗೀತು, ಮನುಷ್ಯ ಸಹಜ ಯಾವ ದೌರ್ಬಲ್ಯಗಳೂ ಇರಬಾರದು ಅಥವಾ ಇರುವಂತಿಲ್ಲ ಎಂದೇ ಸಮಾಜ ಭಾವಿಸುತ್ತದೆ. ವೈದ್ಯಕೀಯ ಎಂಬುದು ಬಹುಪಾಲು ವೈದ್ಯರ ಮಟ್ಟಿಗೆ ಎಲ್ಲರಂತೆ ಒಂದು ವೃತ್ತಿಯಷ್ಟೆ. ಶಿಕ್ಷಕ ಪಾಠ ಮಾಡುವಂತೆ ವೈದ್ಯ ಚಿಕಿತ್ಸೆ ಕೊಡುತ್ತಾನೆ. ತನ್ನ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪಾಸಾಗುತ್ತಾನೆಂಬ ಭರವಸೆಯನ್ನು ಶಿಕ್ಷಕ ಕೊಡಲಾರ. ಅದೇ ರೀತಿ ತನ್ನಿಂದ ಚಿಕಿತ್ಸೆ ಪಡೆದ ರೋಗಿ ಗುಣಮುಖನಾಗುತ್ತಾನೆಂಬ ಭರವಸೆಯನ್ನು ವೈದ್ಯ ಕೊಡಲಾರ.

ಫೇಲಾದ ವಿದ್ಯಾರ್ಥಿಗೆ ಇನ್ನೊಂದು ಅವಕಾಶವಿರುತ್ತದೆ. ಚಿಕಿತ್ಸೆ ಫೇಲಾದರೆ ಅವಕಾಶವಿರುವುದಿಲ್ಲ. ಇದೆಲ್ಲ ವೈದ್ಯನಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದ್ದರಿಂದ ವೈದ್ಯನಾದವನು ರೋಗಿಯ ಹಿತವನ್ನೇ ಬಯಸಿ ಚಿಕಿತ್ಸೆ ಮಾಡುವುದು. ಇದರಲ್ಲಿ ವೈದ್ಯನ ಸ್ವಹಿತವೂ ಇದೆ. ವೈದ್ಯರಿಗೊಂದು ಮಾನಸಿಕ
ಒತ್ತಡ ಇದ್ದೇ ಇರುತ್ತದೆ. ತಾನು ಮಾಡುವ ಚಿಕಿತ್ಸೆಯಲ್ಲಿ ಫೇಲಾದರೆ ಆ ವೈದ್ಯನ ಜೀವನೋಪಾಯ ಬಹುಕಷ್ಟ. ಆದರೆ, ವೈದ್ಯ ದೇವರೆಂದು ಭಾವಿಸಿದರೆ ಇದಕ್ಕೆಲ್ಲ ಆಸ್ಪದವೇ ಇರುವುದಿಲ್ಲ!

ಯಾರು ಏನೇ ಹೇಳಿದರೂ ತಾನು ದೇವರಲ್ಲ ಎಂಬುದು ವೈದ್ಯನಿಗೆ ಗೊತ್ತಿದೆ. ವೃತ್ತಿಬದ್ಧತೆಯಿಂದ, ಸೇವಾ ಮನೋಭಾವದಿಂದ ದುಡಿಯಬೇಕೆಂಬ ಹಂಬಲವೂ, ಬದುಕಿನ ಬಂಡಿಯ ಸಾಗುವಿಕೆಯ ಜತೆಗೆ ಪ್ರಸಿದ್ಧಿ, ಕೀರ್ತಿ, ಗೌರವ, ಸ್ಥಾನಮಾನ, ಪ್ರತಿಷ್ಠೆಗಾಗಿ ವೈದ್ಯವೃತ್ತಿ ನಡೆಸುವ ವೈದ್ಯರಿಗೆ ಜೀವನೋ ಪಾಯವೂ ಅಹುದು. ತನ್ನನ್ನು ದೈವತ್ವಕ್ಕೆ ಏರಿಸಿ ಹೊಗಳುವುದು ಯಾವ ವೈದ್ಯನಿಗೂ ಬೇಕಾಗಿಲ್ಲ. ತನ್ನ ಕಾರ್ಯಗಳನ್ನು ಗ್ರಹಿಸಿ ಸಮಾಜ ತನ್ನನ್ನು ಗುರುತಿಸಿದರೆ ವೈದ್ಯನಾದವನಿಗೆ ಅದಕ್ಕಿಂತ ದೊಡ್ಡ ಸಂತೋಷ, ಸಂಭ್ರಮ ಬೇರೆಯಿರಲಾರದು. ಒಬ್ಬ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಿಧಿಯಲ್ಲಿ ಸರ್ವಕಾಲದಲ್ಲೂ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರವನ್ನು ಪೋಷಿಸುತ್ತಾನೆ. ವೈದ್ಯನು ಮಾನಸಿಕ, ಶಾರೀರಿಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ತಾಯಿ, ತಂದೆ, ಗುರುವಿನ ಪಾತ್ರಗಳಲ್ಲಿ ಜೀವಿಸಬೇಕಾಗುತ್ತದೆ.

ಆ ಅರ್ಥದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬರ್ಥವನ್ನು ಗ್ರಹಿಸಬಹುದು. ಆರಂಭದಲ್ಲಿ ವೈದ್ಯನು ವಾತ್ಸಲ್ಯದ ತಾಯಿಯಾಗಿ, ನಂತರ ಜವಾಬ್ದಾರಿಯ ತಂದೆಯಾಗಿ, ಆಮೇಲೆ ಆಧ್ಯಾತ್ಮಿಕ ಗುರುವಾಗಲು ಆತ್ಮಜ್ಞಾನ ಬೇಕು. ಆತ್ಮಜ್ಞಾನಕ್ಕಾಗಿ ನಾರಾಯಣನಾಗಬೇಕು. ಅಂದರೆ, ಯೋಗೀಶ್ವರ ನಾಗಬೇಕು. ಧ್ಯಾನವಿದ್ಯೆಯನ್ನು ಅಭ್ಯಸಿಸಿ ಆತ್ಮಾನುಭವವನ್ನು ಹೊಂದಿರುವ ವೈದ್ಯನೇ ನಿಜವಾದ ವೈದ್ಯನಾಗುತ್ತಾನೆ. Iqs bಟ್ಚಠಿಟ್ಟ ಜZqಛಿ ಞಛಿ oಜ್ಡಿ ಞಟ್ಞಠಿeo ಠಿಟ ಜಿqಛಿ, ಚ್ಠಿಠಿ ಡಿeಛ್ಞಿ ಐ ಟ್ಠ್ಝbೞಠಿ mZqs ಠಿeಛಿ ಚಿಜ್ಝ್ಝಿ eಛಿ ಜZqಛಿ ಞಛಿ oಜ್ಡಿ ಞಟ್ಞಠಿeo ಞಟ್ಟಛಿ- ಪ್ರಸಿದ್ಧ ಅಮೆರಿಕನ್ ಚಿತ್ರನಟ ವಾಲ್ಟರ್ ಮಾಥ್ಯೂ ಅವರ ಈ ತಮಾಷೆಯ ನುಡಿ, ವೈದ್ಯವೃತ್ತಿಯ ಕ್ರೌರ್ಯವನ್ನು ಮೃದುವಾಗಿ ಬಿಂಬಿಸುತ್ತದೆ.

ತೆಲುಗಿನಲ್ಲಿ ಒಂದು ಗಾದೆಮಾತಿದೆ- ಮೃದುಮೈನ ಅತ್ತಿಪಂಡು ದಾನಿ ಪೊಟ್ಟವಿಪ್ಪಿ ಚೂಸಿತೆ ಒಳ್ಳಂತಾ ಪುಲುಗುಲು (ಮೃದುವಾದ ಅಂಜೂರದ ಹಣ್ಣಿನ ಹೊಟ್ಟೆ ಬಗೆದು ನೋಡಿದರೆ ಮೈಯೆಲ್ಲಾ ಹುಳುಗಳೇ). ಹಾಗೆ, ನೋಡಿದರೆ ಪಂಚತಾರಾ ಹೋಟೆಲುಗಳಂತೆ ಹೊಳೆಯುವ ಇಂದಿನ ಸಾಕಷ್ಟು ಆಸ್ಪತ್ರೆಗಳು, ಒಳಗೆ ಬರೀ ವ್ಯಾಪಾರ, ಹಣದ ಲಾಲಸೆ, ವಂಚನೆ ಎಂಬ ಹುಳುಕನ್ನೇ ತುಂಬಿಕೊಂಡಿವೆ. ವೈದ್ಯೋ ನಾರಾಯಣೋ ಹರಿಃ ಎಂದರೆ ವೈದ್ಯನು
ದೇವರಿಗೆ ಸಮಾನ ಎಂದು ಅರ್ಥೈಸಿದ ಈ ಅಪಾರ್ಥವನ್ನು ಜನಸಾಮಾನ್ಯರು ನಂಬಿದರೆ ಆಗಬಹುದಾದ ಅನಾಹುತವನ್ನು ತಪ್ಪಿಸಲೋಸುಗವೋ ಏನೋ ವಿವೇಕಿಗಳು ಯಥಾರ್ಥತೆಯನ್ನು ಮನಮುಟ್ಟುವಂತೆ ಸ್ಪಷ್ಟೀಕರಿಸುವ ಇನ್ನೊಂದು ಸುಭಾಷಿತವನ್ನು ಹುಟ್ಟುಹಾಕಿ ಬಲು ದೊಡ್ಡ ಉಪಕಾರ ಮಾಡಿದ್ದಾರೆ: ‘ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಸ್ತು ಹರತಿ ಪ್ರಾಣಾನ್ ವೈದ್ಯಯೋ ಪ್ರಾಣಾನ್ ಧನಾತಿ ಚ’. ಇದರ ಭಾವಾರ್ಥ:
ಯಮರಾಜ ಸಹೋದರನಾದ ಓ ವೈದ್ಯರಾಜನೇ ನಿನಗೆ ನಮಸ್ಕಾರ. ಯಮ ಪ್ರಾಣವನ್ನು ಮಾತ್ರ ಕಿತ್ತುಕೊಳ್ಳುತ್ತಾನೆ.

ವೈದ್ಯ ಪ್ರಾಣದೊಂದಿಗೆ ಹಣವನ್ನೂ ಕಿತ್ತುಕೊಳ್ಳುತ್ತಾನೆ. ಎಲ್ಲ ವೃತ್ತಿ ಕ್ಷೇತ್ರಗಳಲ್ಲಿರುವಂತೆ ವೈದ್ಯ ವೃತ್ತಿಯಲ್ಲೂ ಲೋಪದೋಷಗಳಿವೆ. ಇಲ್ಲೂ ಅಪ್ರಾಮಾಣಿಕರಿದ್ದಾರೆ, ವಂಚಕರಿದ್ದಾರೆ, ಧನಪಿಶಾಚಿಗಳಿದ್ದಾರೆ. ಆದರೆ ಇಡಿಯ ವೈದ್ಯಸಂಕುಲವೇ ಹಾಗಿಲ್ಲ. ಯಾರದ್ದೋ ಒಬ್ಬ ವೈದ್ಯನ ತಪ್ಪಿಗೆ ಇಡಿಯ ವೈದ್ಯಸಮೂಹವನ್ನೇ ಹಳಿಯುವುದರಿಂದ ಅಪಾರಸಂಖ್ಯೆಯ ಪ್ರಾಮಾಣಿಕ ವೈದ್ಯರ ಆತ್ಮಬಲವೇ ಅಡಗುತ್ತದೆ. ಆತ್ಮಸ್ಥೈರ್ಯವೇ ಕುಂದುತ್ತದೆ. ಪ್ರತಿಭಾವಂತರು ವೈದ್ಯಕೀಯಕ್ಕೆ ಬರಲು ಮೀನ-ಮೇಷ ಎಣಿ ಸುವ ವರ್ತಮಾನದ ಪರಿಸ್ಥಿತಿಯಲ್ಲಿ ವೈದ್ಯನನ್ನು ದೇವರೆಂ ದು ವೈಭವೀಕರಿಸುವುದರಿಂದ ಭವಿಷ್ಯದಲ್ಲಿ ಉತ್ತಮವೆನ್ನಬಹುದಾದದ್ದು ಈ ಸಮಾಜಕ್ಕೆ ಸಿಗದೇ ಹೋದೀತು!

(ಲೇಖಕರು ಹಿರಿಯ ಪತ್ರಕರ್ತರು)