Saturday, 23rd November 2024

ಪತಿಯ ಸಾವು: ಏರ್​ ಇಂಡಿಯಾ ವಿರುದ್ಧ ಕ್ರಮಕ್ಕೆ ಸಜ್ಜಾದ ವಿಧವೆ

ತಿರುವನಂತಪುರ: ಪತಿಯನ್ನು ಕೊನೆ ಕ್ಷಣದಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಏರ್​ ಇಂಡಿಯಾ ವಿರುದ್ಧ ವಿಧವೆಯ ಮಹಿಳೆ ಕುಟುಂಬಸ್ಥರು ದಾವೆ ಹೂಡಲು ಸಜ್ಜಾದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ತಿರುವನಂತಪುರದ ಅಮೃತ ಎಂಬುವರ ಪತಿ ಒಮನ್​ನಲ್ಲಿ ಐಸಿಯುಗೆ ದಾಖಲಾಗಿದ್ದರು. ವಿಷಯ ತಿಳಿದಾಕ್ಷಣ ಅಮೃತ ಮೇ 8ರಂದು ಏರ್​ ಇಂಡಿಯಾ ಮೂಲಕ ಮಸ್ಕತ್​​ಗೆ ಟಿಕೆಟ್​ ಬುಕ್​ ಮಾಡಿ ವಿಮಾನ ನಿಲ್ದಾಣ ತಲುಪಿದರು. ಆದರೆ, ಅಲ್ಲಿ ವಿಮಾನ ಹಾರಾಟ ರದ್ದಾಗಿತ್ತು. ದಿಕ್ಕು ತೋಚದೆ ಮುಂದಿನ ದಿನದ ಟಿಕೆಟ್​ ಅನ್ನು ಪಡೆದರು. ಆದರೆ, ದುರದೃಷ್ಟವಶಾತ್​ ಆ ದಿನದ ವಿಮಾನ ಹಾರಾಟ ಕೂಡ ರದ್ದಾಯಿತು. ಈ ನಡುವೆ ಅವರ ಪತಿ ಕೂಡ ಸೋಮವಾರ ಒಮನ್​ನಲ್ಲಿ ಮೃತಪಟ್ಟ ಸುದ್ದಿ ತಲುಪಿತು.

ಚೆನ್ನಾಗಿಯೇ ಇದ್ದ ಗಂಡ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ, ಅಂತಿಮ ಕ್ಷಣದಲ್ಲಿ ನನ್ನ ಮತ್ತು ಮಕ್ಕಳನ್ನು ನೋಡಬೇಕು ಎಂದು ಬಯಸಿದರು. ಈ ಹಿನ್ನೆಲೆ ಟಿಕೆಟ್​ ಬುಕ್​​ ಮಾಡಿದ್ದೆವು. ಆದರೆ, ಬುಕ್​ ಮಾಡಿದ ವಿಮಾನಗಳು ರದ್ದಾದವು. ಏರ್​ಲೈನ್ಸ್​ ಕೂಡ ಏನು ಮಾಡಲು ಸಾಧ್ಯ ವಿಲ್ಲ ಎಂದು ಹೇಳಿ ಸುಮ್ಮನಾದರು. ಮುಂದಿನ 4 ದಿನ ವಿಮಾನ ಭರ್ತಿಯಾಗಿದ್ದು, ನಮ್ಮಿಂದ ಯಾವುದೇ ಸಹಾಯ ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಏರ್​ ಇಂಡಿಯಾ ಎಕ್ಸ್​ಪ್ರೆಸ್​​​ ಕ್ಯಾಬಿನ್​ ಸಿಬ್ಬಂದಿಗಳು ಏಕಾಏಕಿ ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಪರಿಣಾಮ ಮೇ 8 ರಿಂದ ಮೇ 10ರ ವರೆಗೆ 260 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.