Sunday, 5th January 2025

ಮಳೆಗಾಲಕ್ಕೆ ಸಿದ್ದರಾಗೋಣ

ಕರ್ನಾಟಕದಲ್ಲಿ ಮುಂಗಾರು ಮಳೆಯ ಆಗಮನವಾಗಿದೆ. ಬಿರು ಬೇಸಿಗೆಯಿಂದ ತತ್ತರಿಸಿದ ಜನತೆಗೆ ಮೇ ಮೊದಲ ವಾರದಲ್ಲಿ ಆರಂಭವಾದ ಮುಂಗಾರು ಪೂರ್ವ ಮಳೆ ತಂಪಿನ ಸಿಂಚನ ನೀಡಿತ್ತು. ಇದೀಗ ಮುಂಗಾರು ಮಳೆಯ ಅಧಿಕೃತ ಪ್ರವೇಶದೊಂದಿಗೆ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ.

ಆದರೆ ಅಬ್ಬರದ ಮಳೆಯ ಆರಂಭದಲ್ಲಿಯೇ ಅನಾಹುತದ ವರದಿಗಳು ಬರಲಾರಂಭಿಸಿವೆ. ಈ ಬಾರಿ ರಾಜ್ಯದ ಬಹುಭಾಗ ೪೦ ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿನ ತಾಪಮಾನ ಕಂಡು ದಾಖಲೆ ಬರೆದಿತ್ತು. ಇದೀಗ ಕಲವಡ ಸುರಿಯುತ್ತಿರುವ ಧಾರಾಕಾರ ಮಳೆಯೂ ಹಳೆಯ ದಾಖಲೆಗಳನ್ನು ಮುಳುಗಿಸಿದೆ. ಜೂನ್ ೨ರಂದು ಬೆಂಗಳೂರಿನಲ್ಲಿ ೧೧೧.೧ ಮಿಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ ಬೆಂಗಳೂರು ನಗರದ ಸಾಮಾನ್ಯ ಮಳೆ ಪ್ರಮಾಣ ೧೧೦.೩ ಮಿಲಿ ಮೀಟರ್. ಜೂನ್ ತಿಂಗಳ ಒಟ್ಟು ಮಳೆ ಭಾನುವಾರ ಒಂದೇ ದಿನದಲ್ಲಿ ಸುರಿದಿದ್ದು, ೧೩೩ ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.

೧೮೯೧ರ ಜೂನ್ ೧೮ರಂದು ಬೆಂಗಳೂರಿನಲ್ಲಿ ೨೪ ಗಂಟೆಗಳಲ್ಲಿ ೧೦೧.೬ ಮಿ.ಮೀ ಮಳೆಯಾಗಿತ್ತು. ಈ ದಾಖಲೆ ಮುರಿದ ಮಳೆ ನಮ್ಮ ಸಂತಸ ಹೆಚ್ಚಿಸ ಬೇಕಿತ್ತು. ಆದರೆ ರಾಜಧಾನಿ ಯಲ್ಲಿರುವ ಮಂದಿ ಪ್ರತೀ ಮಳೆಗೂ ಪರಿತಪಿಸುವಂತಾಗಿದೆ. ಇದು ನಾವೇ ಮಾಡಿಕೊಂಡ ಎಡವಟ್ಟುಗಳು. ಕೆರೆಗಳನ್ನು, ರಾಜಕಾಲುವೆಗಳನ್ನು ಮುಚ್ಚಿ, ಎಂದರಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು, ರಸ್ತೆಗಳನ್ನು ನಿರ್ಮಿಸಿರುವ ನಾವು, ನೀರಿನ ಸಹಜ ಹರಿವನ್ನು ತಡೆದು ಸಮಸ್ಯೆ ತಂದುಕೊಂಡಿದ್ದೇವೆ. ರಸ್ತೆಗಳ ಬದಿಗಳಲ್ಲಿ ಆಳವಾಗಿ ಬೇರೂರುವ ಮರಗಳನ್ನು ನೆಡದೇ, ಮೇ-ವರ್‌ನಂತಹ ಮೇಲ್ಮಟ್ಟದಲ್ಲಿ ಬೇರು ಬಿಡುವ ಮೃದು ಗಿಡಗಳನ್ನು ಬೆಳೆಸಿ ಅಪಾಯವನ್ನು ಆಹ್ವಾನಿಸಿಕೊಂಡಿದ್ದೇವೆ.

ಮಳೆಯಾಗಲಿ, ಬಿಸಿಲಾಗಲಿ ಪ್ರಾಕೃತಿಕ ವಿದ್ಯಮಾನ ಗಳು. ಇದನ್ನು ಅರ್ಥೈಸಿಕೊಂಡು ನಾವು ನಮ್ಮ ಪರಿಸರವನ್ನು ಕಟ್ಟಿಕೊಳ್ಳಬೇಕು. ಪ್ರಕೃತಿ ನಿಯಮ ಮೀರಿದರೆ ಪರಿಣಾಮವನ್ನು ಎದುರಿಸಲೇಬೇಕು. ಮಳೆಗಾಲದ ಅನುಹುತಗಳನ್ನು ಎದುರಿಸಲು ಪ್ರತೀ ವರ್ಷ ಕ್ರಿಯಾ ಯೋಜನೆ ರೂಪಿಸುವ ಸರಕಾರ ನಮ್ಮ ಪರಿಸರ ಪ್ರಕೃತಿಗೆ ಪೂರಕವಾಗಿರುವಂತೆ ಕಟ್ಟಲೂ ಯೋಜನೆ ರೂಪಿಸಬೇಕು. ಪ್ರತೀ ವರ್ಷ ಸಮಸ್ಯೆ ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪ್ರತೀ ಮಳೆಯಲ್ಲೂ ನಮ್ಮ ರೋದನೆ, ವೇದನೆಗಳು ಮರುಕಳಿಸಲಿ.

Leave a Reply

Your email address will not be published. Required fields are marked *