Saturday, 28th September 2024

ಇಸ್ರೋ ಸಾಧನೆಗೆ ಮತ್ತೊಂದು ಗರಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಮ್ಮೆ ನಮ್ಮೆಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ‘ಪುಷ್ಪಕ್’ ಹೆಸರಿನ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ  (RLV LEX-03) ಮೂರನೇ ಹಾಗೂ ಅಂತಿಮ ಪ್ರಯೋಗ ಯಶಸ್ವಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜೂನ್ ೨೩ರಂದು ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ವಿಶ್ವ ಬಾಹ್ಯಾಕಾಶ ಭೂಪಟದಲ್ಲಿ ಭಾರತದ ಹೆಸರು ಮತ್ತೊಮ್ಮೆ ರಾರಾಜಿಸುವಂತಾಗಿದೆ.

೨೦೨೩ರಲ್ಲಿ ಮೊದಲ ಪ್ರಯೋಗ ಮತ್ತು ಕಳೆದ ಮಾರ್ಚ್ ತಿಂಗಳಲ್ಲಿ ೨ನೇ ಪ್ರಯೋಗ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತ್ತು. ಸ್ವದೇಶಿ ಗಗನ ನೌಕೆ ಪುಷ್ಪಕ್ ಸೇರ್ಪಡೆಯಿಂದಾಗಿ ಇಸ್ರೋದ ಉಡಾವಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಪುಷ್ಪಕ್ ಲಾಂಚಿಂಗ್ ವಾಹನವನ್ನು ಮರುಬಳಕೆ ಮಾಡಬಹುದಾಗಿದ್ದು, ಭವಿಷ್ಯದಲ್ಲಿ ಈ ವಾಹನ ಮತ್ತೆ ಹೊಸ ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಇಸ್ರೋದ ಬಾಹ್ಯಾಕಾಶ ಯೋಜನೆಗಳಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ಗುರುತಿಸಲಾಗಿದೆ.

ಇದುವರೆಗೆ ಇಸ್ರೋ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಒಯುತ್ತಿದ್ದ ರಾಕೆಟ್‌ಗಳು ನಿಗದಿತ ಕಕ್ಷೆ ತಲುಪಿದ ಬಳಿಕ ಉರಿದು ಬೂದಿಯಾಗುತ್ತಿದ್ದವು. ಕೋಟ್ಯಂತರ ವೆಚ್ಚದ ಅದರ ಬಿಡಿಭಾಗಗಳು ಕಳಚಿ ಸಾಗರಕ್ಕೆ ಬೀಳುತ್ತಿದ್ದವು. ಇನ್ನು ಮುಂದೆ ಪುಷ್ಪಕ್, ಉಪಗ್ರಹ ಗಳನ್ನು ಅಂತರಿಕ್ಷಕ್ಕೆ ತಲುಪಿಸಿ ಮರಳಿ ಭೂಮಿಯಲ್ಲಿನ ತನ್ನ ನಿಗದಿತ ಗಮ್ಯ ಸೇರಲಿದೆ. ಇದರಿಂದ ಇಸ್ರೋದ ಉಪಗ್ರಹ ಉಡ್ಡಯನ ವೆಚ್ಚ ಶೇ.೮೦ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾ ಗಿದೆ.

ಸಾಮಾನ್ಯ ರಾಕೆಟ್‌ನಲ್ಲಿ ೧ ಕೆಜಿ ಸ್ಯಾಟಲೈಟ್ ಪೇಲೋಡನ್ನು ಕಕ್ಷೆಗೆ ಕೂರಿಸಲು ತಗುಲುತ್ತಿರುವ ವೆಚ್ಚ ಕನಿಷ್ಠ ೪.೧೭ ಲಕ್ಷ ರೂಪಾಯಿ. ಮರು ಬಳಸ ಲ್ಪಡುವ ರಾಕೆಟ್‌ನಲ್ಲಿ ೧ ಕೆಜಿ ಸ್ಯಾಟಲೈಟ್ ಪೇಲೋಡ್‌ಗೆ ತಗುಲುವ ವೆಚ್ಚ ಕೇವಲ ೪೧,೭೧೭ ರೂಪಾಯಿ. ಸಾವಿರಾರು ಕಿಲೋ ತೂಕದ ಉಪಗ್ರಹಗಳ ಉಡ್ಡಯನದಲ್ಲಿ ಆಗುವ ಉಳಿತಾಯವನ್ನು ನಾವು ಈ ಮೂಲಕ ಅಂದಾಜಿಸಬಹುದು.ಅಮೆರಿಕದ ಕೊಲಂಬಿಯಾ, ಚಾಲೆಂಜರ್, ಡಿಸ್ಕವರಿ ಹೆಸರಿನ ಉಡ್ಡಯನ ನೌಕೆಗಳ ಬಗ್ಗೆ, ರಷ್ಯಾದ ಸೂಯೆಜ್ ನೌಕೆಯ ಬಗ್ಗೆ ನಾವು ಬಹಳಷ್ಟು ಕೇಳಿದ್ದೇವೆ. ಆದರೆ ಅಮೆರಿಕ ಈಗ ಎಲಾನ್ ಮಸ್ಕ್ ಒಡೆತನದ ’ಸ್ಪೇಸ್ ಎಕ್ಸ್’ನ ಮರುಬಳಕೆಯ ರಾಕೆಟ್‌ಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದು, ಇದರ ನಡುವೆ, ಇಸ್ರೋ ಹೊಸ ತಂತ್ರಜ್ಞಾನದ ಗಗನ ನೌಕೆಯನ್ನು ನಿರ್ಮಿಸಿ, ಸ್ವಾವಲಂಬನೆಯತ್ತ ಹೆಜ್ಜೆ ಹಾಕಿರುವುದು ದಿಟ್ಟ ನಡೆಯಾಗಿದೆ. ಇಸ್ರೋಗೆ ಈ ಹಿಂದಿನ ಯೋಜನೆಗಳಲ್ಲಿ ಸಿಕ್ಕ ಗೆಲುವು ಇಲ್ಲೂ ಲಭ್ಯವಾಗಲಿ ಎಂದು ಹಾರೈಸೋಣ.