ದುಬೈ: ಐಪಿಎಲ್ ನಲ್ಲಿ 25ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಡಿ’ವಿಲಿಯರ್ಸ್ ಮೊದಲ ಸ್ಥಾನಕ್ಕೇರಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಎಂಟು ಸಲ 25 ಎಸೆತಗಳಿಗಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಕಿರನ್ ಪೊಲಾರ್ಡ್ 7, ವೀರೇಂದ್ರ ಸೆಹ್ವಾಗ್ 6, ಕ್ರಿಸ್ ಗೇಲ್ ಮತ್ತು ಎಂ.ಎಸ್.ಧೋನಿ 5 ಸಲ 25 ಕ್ಕಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಗಳಿಸಿದ್ದಾರೆ.
22 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆಯುವ ಮೂಲಕ ಐಪಿಎಲ್ ನಲ್ಲಿ ಎಬಿ ಡಿ’ವಿಲಿಯರ್ಸ್ ದಾಖಲೆ ಬರೆದಿದ್ದು, ಈ ಪಂದ್ಯ ದೊಂದಿಗೆ 23 ಸಲ ಪಂದ್ಯ ಶ್ರೇಷ್ಠರಾಗಿದ್ದಾರೆ. ಕ್ರಿಸ್ ಗೇಲ್ 21 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕೃತರಾಗಿದ್ದಾರೆ.
ಕಳೆದ ಶನಿವಾರ ಮಿ.360 ಡಿಗ್ರಿ ಖ್ಯಾತಿಯ ಎಬಿ ಡಿ’ವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ ರಾಯಲ್ಸ್ ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದ್ದು, ಗೆಲುವಿನ ಗುರಿ ಬೆನ್ನತ್ತಿದ ಆರ್.ಸಿ.ಬಿ. 19.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಆರ್.ಸಿ.ಬಿ. ಪರವಾಗಿ ಎಬಿ ಡಿ ವಿಲಿಯರ್ಸ್ ಅಜೇಯ 55 ರನ್ ಗಳಿಸಿದರು. ಕೇವಲ 22 ಎಸೆತಗಳಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿ ದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಡಿವಿಲಿಯರ್ಸ್ ಆರ್.ಸಿ.ಬಿ. ಪರವಾಗಿ ಆಡಿ 4000 ರನ್ ಪೂರೈಸಿದ್ದಾರೆ.