ಕೊಪ್ಪಳ: ರಾಜ್ಯ ಸರಕಾರದ ವರ್ಗಾವಣೆ ಆದೇಶದ ಹಿನ್ನೆಲೆ ಅಧಿಕಾರ ವಹಿಸಿಕೊಳ್ಳಲು ಬಂದಿದ್ದ ನೂತನ ಎಸ್ಪಿ ಡಾ ರಾಮ್ ಅರಸಿದ್ದಿ ಅವರಿಗೆ ಮೇಲಧಿಕಾರಿಗಳು ಶಾಕ್ ನೀಡಿದ್ದಾರೆ.
ಇದರಿಂದ ಗುರುವಾರ ಸಂಜೆ ಅಧಿಕಾರ ವಹಿಸುವ ಪ್ರಕ್ರಿಯೆ ದಿಡೀರ್ ರದ್ದಾಗಿದೆ.
ಕೊಪ್ಪಳ ಎಸ್ಪಿ ಯಶೋಧ ವಂಟಗೋಡಿ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿರುವ ಸರಕಾರ, ಅವರ ಜಾಗಕ್ಕೆ ಡಾ.ರಾಮ್ ಅರಸಿದ್ದಿ ಅವರನ್ನು ವರ್ಗಾವಣೆ ಮಾಡಿದೆ. ನೂತನ ಎಸ್ಪಿ ಆದೇಶದ ಪ್ರತಿ ಹಿಡಿದು ಗುರುವಾರ ಸಂಜೆಯೇ ಕೊಪ್ಪಳಕ್ಕೆ ಬಂದಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಮೇಲಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆ ಎಸ್ಪಿ ಕಚೇರಿಯಿಂದ ಹಾಗೆಯೇ ಹೊರ ಹೋಗಿದ್ದಾರೆ ಎನ್ನಲಾಗಿದೆ.
ಹಾಲಿ ಎಸ್ಪಿ ಯಶೋಧಾ ವಂಟಗೋಡಿ ಅವರ ಪರ ಜಿಲ್ಲೆಯ ಹಿರಿಯ ಶಾಸಕರೊಬ್ಬರು ಲಾಭಿ ಮಾಡಿದ್ದಾರೆ. ಯಶೋಧಾ ವಂಟಗೋಡಿ ಅವರನ್ನು ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಜಾತಿ ದಾಳ ಉರುಳಿಸಿ, ವರ್ಗಾವಣೆ ತಡೆಗೆ ಮುಂದಾದ ಹಿರಿಯ ಶಾಸಕರಿಗೆ ಸರಕಾರದ ಮಟ್ಟದಲ್ಲಿ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.