ನಾವು ಕ್ಷೇಮವಾಗಿರಲು ಕಾಡು, ಬೆಟ್ಟಗಳು ಸುರಕ್ಷಿತವಾಗಿರಬೇಕು. ಆ ಉದ್ದೇಶ ಹೊಂದಿರುವ ಗಾಡ್ಗಿಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೆ ತರಲು ಅಧಿಕಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದು ಒಂದು ರೀತಿಯ ಆತ್ಮಹತ್ಯೆ. ಜನಹಿತ ರಕ್ಷಿಸಲು ಅಧಿಕಾರಸ್ಥರು ಏಕೆ ಹಿಂದೇಟು ಹಾಕುತ್ತಿದ್ದಾರೆ? ಒಂದು ಪುಟ್ಟ ವಿಶ್ಲೇಷಣೆ.
ಅಖಿಲೇಶ್ ಚಿಪ್ಪಳಿ
ಜಗತ್ತಿನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ನಿಯೋಜಿಸಿದ್ದ ಪ್ರೊ.ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಇಡೀ ಪಶ್ಚಿಮಘಟ್ಟಗಳಲ್ಲಿ ಸುತ್ತಾಡಿ, ಅಧ್ಯಯನ ನಡೆಸಿ ಒಂದು ವಿಸ್ತೃತ ವರದಿಯನ್ನು 2011 ರಲ್ಲೇ ಸಲ್ಲಿಸಿತ್ತು.
522 ಪುಟಗಳ ಸುಧೀರ್ಘ ವರದಿಯ ಕೊನೆಯ ಭಾಗದಲ್ಲಿ ‘ಈ ವರದಿಯನ್ನು ಆರು ರಾಜ್ಯಗಳ ಪ್ರತಿ ಹಳ್ಳಿಯ ಜನರಿಗೆ ಅವರದೇ ಆದ ಭಾಷೆಯಲ್ಲಿ ತರ್ಜುಮೆ ಮಾಡಿ; ಪಶ್ಚಿಮಘಟ್ಟಗಳ ನಿವಾಸಿಗಳಿಗೆ ಅರ್ಥ ಮಾಡಿಸಿದ ನಂತರದಲ್ಲಿ ಜಾರಿ ಮಾಡಿ’ ಎಂಬ ಸಲಹೆಯನ್ನು ನೀಡಲಾಗಿತ್ತು. ಪಶ್ಚಿಮಘಟ್ಟಗಳ ಮುಕ್ಕಾಲು ಪ್ರದೇಶವನ್ನು ‘ಸಂರಕ್ಷಣೆಗಾಗಿ’ ಹಾಗೂ ಕಾಲು ಭಾಗವನ್ನು ‘ಅಭಿವೃದ್ಧಿ’ ಗಾಗಿ ಮೀಸಲಿಡಬೇಕು ಎಂಬುದು ಆ ವರದಿಯ ಮುಖ್ಯ ಅಂಶ.
ಆದರೆ, ವಿವಿಧ ಮಾಫಿಯಾಗಳ ಒತ್ತಡಗಳಿಗೆ ಮಣಿದ ಆಗಿನ ಸರ್ಕಾರ ಗಾಡ್ಗಿಳ್ ವರದಿಯನ್ನು ಮುಚ್ಚಿಟ್ಟು, ಡಾ.ಕಸ್ತೂರಿರಂಗನ್ ಎಂಬ ಬಾಹ್ಯಾಕಾಶ ವಿಜ್ಞಾನಿಯನ್ನು ಮತ್ತೊಂದು ವರದಿ ತಯಾರಿಸಲು ಕೇಳಿಕೊಂಡಿತು. ಅದರ ಭಾಗವಾಗಿ 2013ರಲ್ಲಿ ಕಸ್ತೂರಿ ರಂಗನ್ ಸಮಿತಿಯು ತನ್ನ 175 ಪುಟಗಳ ವಿಸೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತು. ಗಾಡ್ಗೀಳ್ ವರದಿಗೆ ತದ್ವಿರುದ್ಧವಾದ ಈ ವರದಿಯಲ್ಲಿ ಮುಕ್ಕಾಲು ಪ್ರದೇಶವನ್ನು ಅಭಿವೃದ್ಧಿಗಾಗಿ ಮತ್ತು ಕಾಲು ಭಾಗ ಪ್ರದೇಶವನ್ನು ಸಂರಕ್ಷಣೆಗೆ ಮೀಸಲಿಡಬೇಕು ಎಂದು ಷರಾ ಬರೆಯಿತು! ಇದೆಲ್ಲಾ ಆಗಿ ಈಗ ಏಳು ವರ್ಷಗಳು ಕಳೆದಿವೆ.
ಈ ಮಧ್ಯೆ, ವರದಿಯ ಜಾರಿಯನ್ನು ವಿರೋಧಿಸಿದ ಎಲ್ಲಾ ರಾಜಕೀಯ ಪಕ್ಷಗಳಾಗಲೀ ಅಥವಾ ಜನಪ್ರತಿನಿಧಿಗಳಾಗಲೀ, ಈ ಎರಡು ವರದಿಯಲ್ಲಿ ಏನು ಇದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಮಹತ್ತರ ಕೆಲಸವನ್ನು ಮಾಡುವಲ್ಲಿ ಸೋತರು. ‘ಸಂರಕ್ಷಣೆ’ ಮತ್ತು ‘ಅಭಿವೃದ್ಧಿ’ ಎಂಬುದು ಪರಸ್ಪರ ವಿರುದ್ಧ ಪದಗಳು; ಅಭಿವೃದ್ಧಿಯಲ್ಲಿ ಇರುವ ಸುಖ, ಪರಿಸರ ಸಂರಕ್ಷಣೆಯಲ್ಲಿ ಇಲ್ಲ ವೆಂಬುದು ನಮ್ಮನ್ನಾಳುವವರ ಖಚಿತ ನಂಬಿಕೆ.
ಅಭಿವೃದ್ಧಿಯ ಸುಖದ ಪಾಲುದಾರರಾದ ವಿವಿಧ ಮಾಫಿಯಾ ಕ್ಷೇತ್ರದ ಗುತ್ತಿಗೆದಾರರು ಊದಿದ ಸುಳ್ಳನ್ನೇ ನಂಬಿಕೊಂಡ ರಾಜ ಕಾರಣಿಗಳು, ಆ ಸುಳ್ಳುಗಳನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾದರು. ವರದಿಯ ಜಾರಿಯನ್ನು ಅನಿರ್ದಿಷ್ಟ ಕಾಲ ಮುಂದೂಡುವಲ್ಲಿಸಫಲರಾದರು. ಇದೀಗ ಹಸುರು ನ್ಯಾಯಪೀಠ 31 ಡಿಸೆಂಬರ್, 2020ರ ಒಳಗಾಗಿ ಅಂತಿಮ ಅಧಿಸೂಚನೆ ಯನ್ನು ಹೊರಡಿಸಿ ಎಂಬ ಕೊನೆಯ ಗಡುವನ್ನು ನೀಡಿದ್ದರ ಪರಿಣಾಮವಾಗಿ, ಮತ್ತೆ ಕಸ್ತೂರಿ ರಂಗನ್ ವರದಿಯು ಚರ್ಚೆಯ ಮುನ್ನೆಲೆಯಲ್ಲಿದೆ. ಈ ಪ್ರಮುಖ ವರದಿಗಳಲ್ಲಿ ಇರುವ ವಾಸ್ತವಾಂಶವೇನು ಮತ್ತು ಜನಸಾಮಾನ್ಯರ ದಾರಿ ತಪ್ಪಿಸಿದ ಸುಳ್ಳುಗಳು ಏನು? ಕೊಂಚ ನೋಡೋಣ.
ಸ್ಥಳೀಯರ ಸಹಭಾಗಿತ್ವ
ಪರಿಸರ ಸೂಕ್ಷ್ಮ ವಲಯವಾದ ಪಶ್ಚಿಮಘಟ್ಟಗಳ ಸಂರಕ್ಷಣೆಯನ್ನು ಅಲ್ಲಿನ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಬೇಕು. ಯಾವುದೇ ಯೋಜನೆಗಳಿರಲಿ ಜನರ ಸಹಭಾಗಿತ್ವ, ಗ್ರಾಮಸಭೆಗಳ ನಿರ್ಣಯ ಬಹುಮುಖ್ಯ ಎಂದು ಎರಡೂ ವರದಿಯಲ್ಲೂ ಖಚಿತವಾಗಿ ಹೇಳಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷ ಸೌಲತ್ತುಗಳನ್ನು ನೀಡ ಬೇಕು. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಸಾವಯವ ರೀತಿಯಲ್ಲಿ ಬೆಳೆಯಲು ಪ್ರೋತ್ಸಾಹಿಸಬೇಕು; ಮತ್ತು ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಅನುದಾನ ನೀಡಬೇಕು, ಬೆಳೆದ ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ‘ಬ್ರಾಂಡ್’ ರೂಪುಗೊಳ್ಳುವಂತೆ ಸರ್ಕಾರಗಳು ಕ್ರಮಕೈಗೊಳ್ಳಬೇಕು.
ಎರಡೂ ವರದಿಯಲ್ಲಿ ಇನ್ನೂ ಮಹತ್ತರವಾದ ಮತ್ತು ಮುಖ್ಯವಾದ ಅಂಶವೆಂದರೆ, ನೈಸರ್ಗಿಕ ಸೇವೆಗಳಿಗೆ ಬೆಲೆ ಕಟ್ಟುವುದು ಮತ್ತು ಬಂದ ಆದಾಯವನ್ನು ಸ್ಥಳೀಯವಾಗಿ ಹಂಚಿಕೆ ಮಾಡುವುದು. ಬದಲಾದ ಪರಿಸ್ಥಿತಿಯಲ್ಲಿ ಮಲೆನಾಡಿನ ರೈತ ಸಮೂಹ ತೀರಾ ಸಂಕಷ್ಟದಲ್ಲಿದೆ. ಹವಾಮಾನ ಬದಲಾವಣೆಯ ಬಿಸಿ ರೈತರ ಮೇಲೆ ನೇರವಾಗಿ ತಟ್ಟುತ್ತಿದೆ. ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿಯಾದರೆ, ಮಳೆಗಾಲದಲ್ಲಿ ನೆರೆಯಿಂದ ಸಂತ್ರಸ್ತರಾಗುವ ಅನಿವಾರ್ಯತೆ. ಇಂತಹ ಹೊತ್ತಿನಲ್ಲಿ ನಿಸರ್ಗ ನೀಡುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಸೇವೆಗಳಿಗೆ ಪಾವತಿ ಮಾಡುವ ಮತ್ತು ಅದನ್ನು ಜನಸಮುದಾಯಕ್ಕೆ ಹಂಚುವ ಸಲಹೆ ಯು ನಿಜವಾಗಲೂ ಇಲ್ಲಿನ ರೈತ ಸಮುದಾಯವನ್ನು ನೆಮ್ಮದಿಯಲ್ಲಿಡಬಹುದಾದ ಉತ್ತಮ ಕ್ರಮವಾಗಿದೆ.
ಪಶ್ಚಿಮಘಟ್ಟಗಳ ಪಾರಿಸರಿಕ ಆರೋಗ್ಯ ಸುಸ್ಥಿತಿಯಲ್ಲಿದ್ದರೆ, ಇಡೀ ರಾಜ್ಯದ ಆರ್ಥಿಕ, ಸಾಮಾಜಿಕ, ಮಾಸಿಕ ಆರೋಗ್ಯ ಉತ್ತಮ ವಾಗಿರುತ್ತದೆ. ಜನರಿಗೆ ಉಸಿರಾಡಲು ಶುದ್ಧಗಾಳಿ ಮತ್ತು ನೀರು ದೊರಕಿದಲ್ಲಿ, ಬಹಳಷ್ಟು ರೋಗ ರುಜಿನಗಳು ಹತೋಟಿಯಲ್ಲಿರು ತ್ತವೆ. ಜೊತೆಗೆ ಸಾವಯವ ಆಹಾರವೂ ದೊರೆತಲ್ಲಿ ಸದೃಢ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಗೊಳ್ಳುತ್ತದೆ. ಇಂತಹ ಹಲವು ಶಿಪಾರಸ್ಸುಗಳು ಈ ಎರಡೂ ವರದಿಯಲ್ಲೂ ಉಲ್ಲೇಖವಾಗಿವೆ.
ಜನರನ್ನು ತಪ್ಪುದಾರಿಗೆಳೆಯುವ ಯತ್ನ
ಇಂತಹ ಜನಸ್ನೇಹಿ ವರದಿಯ ಶಿಪಾರಸ್ಸುಗಳನ್ನು ಒಪ್ಪಿಕೊಳ್ಳದ ಆಡಳಿತಶಾಹಿ, ಅರ್ಧ ಸತ್ಯಗಳನ್ನು ಹೇಳಿ ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಕಳೆದ ಏಳೂ ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ. ಅದರಲ್ಲಿ ಮುಖ್ಯವಾದ ಸುಳ್ಳುಗಳೆಂದರೆ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ, ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸುವಂತಿಲ್ಲ, ರೈತರು ರಾಸಾಯನಿಕಗಳನ್ನು ಬಳಸುವಂತಿಲ್ಲ, ಹಳೆ ಮನೆ ಬಿದ್ದು ಹೋದಲ್ಲಿ ಮನೆಯನ್ನು ರಿಪೇರಿ ಮಾಡುವಂತಿಲ್ಲ, ಹೀಗೆ ಪುಂಖಾನು ಪುಂಖವಾಗಿ ಸುಳ್ಳನ್ನು ಬಿತ್ತರಿಸಲಾಯಿತು.
ಸಾಗರ ತಾಲ್ಲೂಕಿನಲ್ಲಂತೂ ಶರಾವತಿ ಹಿನ್ನೀರಿನ ಪ್ರದೇಶದಿಂದ ಸಾಗರ ಪಟ್ಟಣದವರೆಗೆ ಮುಗ್ಧಜನರನ್ನು ಎತ್ತಿ ಕಟ್ಟಿ, ಪಾದ
ಯಾತ್ರೆಯನ್ನು ಸಹ ಮಾಡಿಸಲಾಯಿತು. ಎರಡೂ ವರದಿಯ ಯಾವುದೇ ಪುಟದಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಚಾರಗಳಿಲ್ಲ
ಎಂಬುದು ವರದಿಯನ್ನು ಓದಿದವರಿಗೆ ತಿಳಿಯುತ್ತದೆ.
ಪ್ರೊ.ಮಾಧವ ಗಾಡ್ಗಿಳ್ ವರದಿಯಲ್ಲಿ, ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ದಿನಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಬೇಕು ಎಂದು ಹೇಳಲಾಗಿತ್ತು. 2011ರಿಂದ ಈಚೆಗೆ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲೂ ಟನ್‌ಗಟ್ಟಲೇ ಪ್ಲಾಸ್ಟಿಕ್ ಚೀಲ ಗಳು, ಬಾಟಲಿಗಳು, ಟೆಟ್ರಾಪ್ಯಾಕ್‌ಗಳು, ಲೋಟಗಳು ಸಂಗ್ರಹವಾಗಿವೆ. ಒಂದೊಮ್ಮೆ ಸರ್ಕಾರ ಪಶ್ಚಿಮ ಘಟ್ಟದಲ್ಲಿ ಸಂಗ್ರಹ ವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಹೊರಟರೆ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚ ವಾದೀತು. ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳು ವನ್ಯಜೀವಿಗಳಿಗೆ ಮರಣಸದೃಶ್ಯವಾಗಿ ಪರಿಣಮಿಸಿವೆ. ಪ್ಲಾಸ್ಟಿಕ್ ಚೀಲದಲ್ಲಿ ಉಳಿಕೆಯಾದ ಆಹಾರವನ್ನು ತಿನ್ನುವ ಅದೆಷ್ಟೋ ಜಾನುವಾರುಗಳು ಅಸು ನೀಗಿವೆ.
ಖಾಸಗಿಯವರಿಗೆ ಸರಕಾರಿ ಕಾಡು?
ಮಾಧವ ಗಾಡ್ಗಿಳ್ ವರದಿಗೆ ಹೋಲಿಸಿದರೆ, ಕಸ್ತೂರಿ ರಂಗನ್ ವರದಿ ತೀರಾ ದುರ್ಭಲವಾದ ವರದಿ. ಅಷ್ಟೇನು ಕಟ್ಟುಪಾಡು ಗಳಿಲ್ಲದ ಈ ವರದಿಯನ್ನು ಈಗಿನ ಸರ್ಕಾರಗಳು ಜಾರಿ ಮಾಡಲು ಹಿಂದೇಟು ಹಾಕುತ್ತಿವೆ. ಏಕೆ ಹೀಗೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಇದರ ಹಿಂದೆ ಇರುವುದು ಮತ್ತದೇ ಮಾಫಿಯಾಗಳು. ಎಂಪಿಎಂ ಕಾರ್ಖಾನೆಗಾಗಿ ಈಗ ನಲವತ್ತು ವರ್ಷಗಳ ಹಿಂದೆ 82 ಸಾವಿರ ಎಕರೆ ಸರಕಾರಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಕಳೆದ ಆಗಸ್ಟ್ 12ನೇ ತಾರೀಖಿಗೆ ಗುತ್ತಿಗೆ ಅವಧಿ ಮುಗಿದಿದೆ. ಎಂಪಿಎಂ ಕಾರ್ಖಾನೆಯನ್ನು ನಷ್ಟದಿಂದ ಮುಚ್ಚಲಾಗಿದೆ. ಈಗ 82 ಸಾವಿರ ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಇದನ್ನು ಖಾಸಗಿಯವರಿಗೆ ನೀಡಲು ಸರ್ಕಾರ ಟೆಂಡರ್ ಕರೆದಿದೆ!
ಈ ವರದಿ ಜಾರಿಯಾದರೆ ಖಾಸಗಿಯವರಿಗೆ ಈ ಭೂಮಿ ನೀಡುವುದು ಸಾಧ್ಯವಿಲ್ಲ. ಮತ್ತೊಂದು ಪ್ರಕರಣದಲ್ಲಿ ರಾಜ್ಯದ 9.5 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದ 6.5 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶವನ್ನು ವಿವಿಧ ಹಂತದಲ್ಲಿ ರೈತರ ಹೆಸರಿನಲ್ಲಿ ಖಾಸಗಿಯವರಿಗೆ ನೀಡುವ ಹುನ್ನಾರ ನಡೆದಿದೆ. ಈ ವರದಿ ಜಾರಿಯಿಂದ ಈ ಕೆಲಸ ಸುಗಮವಾಗಿ ಆಗುವುದಿಲ್ಲ. ಹಾಗೂ ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ, ಕೊಲ್ಲೂರು-ಕೊಡಚಾದ್ರಿ ರೋಪ್‌ವೇ, ಮಂಕಿಪಾರ್ಕ್ ಯೋಜನೆ, ಜೋಗದ ಅಭಿವೃದ್ಧಿ, ಕಾಡಿನ ನಡುವೆ ವಿವಿಧ ಕಡೆ ಹೆದ್ದಾರಿ ವಿಸ್ತರಣೆ ಇಂತಹ, ದೊಡ್ಡ ಮೊತ್ತದ ಕಾಂಟ್ರಾಕ್ಟ್ ವೆಚ್ಚದ ಅನೇಕ ಯೋಜನೆಗಳಿಗೆ ಹಿನ್ನೆಡೆಯಾಗುತ್ತದೆ. ಆದ್ದರಿಂದಲೇ, ಗುತ್ತಿಗೆದಾರರು, ರಾಜಕೀಯಸ್ಥರು, ಪಕ್ಷಾತೀತವಾಗಿ ಒಟ್ಟಾಗಿ, ಮುಗ್ಧ ಜನರನ್ನು, ರೈತರನ್ನು ಎತ್ತಿಕಟ್ಟಿ ವರದಿ ಅನುಷ್ಠಾನಗೊಳಿಸುವುದನ್ನು ಮುಂದೆ ಹಾಕುತ್ತಲೇ ಇದ್ದಾರೆ.
ಕೊಡಗಿನ ಗುಡ್ಡ ಕುಸಿದರೇನು?
ದಕ್ಷಿಣ ಕನ್ನಡ ಭಾಗದ ಬೆಟ್ಟಗಳು ತೇಲಿದರೇನು? ಭಾರೀ ವೆಚ್ಚದ ಗುತ್ತಿಗೆ ಕಾಮಗಾರಿಯೇ ಮುಖ್ಯ ಎನಿಸಿದೆ. ಗುಡ್ಡ ಕುಸಿತ ತಪ್ಪಿಸ ಬಹುದಿತ್ತು ಪ್ರೊ.ಮಾಧವ ಗಾಡ್ಗಿಳರು ಪಶ್ಚಿಮಘಟ್ಟಗಳಲ್ಲಿ ಅನಿಯಂತ್ರಿತ ಅಭಿವೃದ್ಧಿಯು ಭಾರೀ ಅನಾಹುತಗಳಿಗೆ ಕಾರಣವಾಗ ಬಹುದು ಎಂಬ ಮುನ್ನೆಚ್ಚರಿಕೆಯನ್ನು ಹತ್ತು ವರ್ಷಗಳ ಹಿಂದೆಯೇ ನೀಡಿದ್ದರು. ಅದರ ಭಾಗವಾಗಿ, 2018ರಿಂದ ಕೊಡಗಿನಲ್ಲಿ ಪ್ರಾರಂಭವಾದ ಗುಡ್ಡ ಕುಸಿತ, ನೆರೆ 2020ರಲ್ಲೂ ಮುಂದುವರೆದಿದೆ. ಗಾಡ್ಗಿಳ್ ವರದಿಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ದ್ದರೆ, ಈ ತರಹದ ಸಾವು-ನೋವು, ಅನಾಹುತಗಳು ಸಂಭವಿಸುತ್ತಿರಲಿಲ್ಲವೆಂಬುದು ಖಚಿತ ಸತ್ಯ.