Tuesday, 3rd December 2024

ಈ ಸಲ ಕಪ್ ನಮ್ದು !

ವಿದೇಶವಾಸಿ

dhyapaa@gmail.com

ಮೊನ್ನೆ ನಡೆದ ಟಿ-ಟ್ವೆಂಟಿ ವಿಶ್ವಕಪ್ ಭಾರತ ಗೆದ್ದುಕೊಂಡಿತು. ಈ ಪಂದ್ಯ ಕೆಲವು ವಿಷಯಗಳಿಗಾಗಿ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮೊದಲನೆಯದಾಗಿ, ಕ್ರಿಕೆಟ್‌ನಲ್ಲಿ ಭಾರತಕ್ಕೆ ಇದು ನಾಲ್ಕನೆಯ ವಿಶ್ವಕಪ್. ವಿಶ್ವಕಪ್ ಗೆದ್ದ ದೇಶಗಳ ಪಟ್ಟಿಯಲ್ಲಿ ಒಟ್ಟೂ ಏಳು ವಿಶ್ವಕಪ್ ಗೆದ್ದು ಆಸ್ಟ್ರೇಲಿಯ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಈಗ ಎರಡನೆಯ ಸ್ಥಾನದಲ್ಲಿದೆ. ಇದು ಐವತ್ತು ಒವರ್‌ನ (ಆರಂಭಿಕ ವರ್ಷಗಳಲ್ಲಿ ಅರವತ್ತು ಒವರ್) ಏಕದಿನ ಮತ್ತು ಇಪ್ಪತ್ತು ಒವರ್‌ನ ಟಿ- ಟ್ವೆಂಟಿ ಎರಡೂ ಸೇರಿದ ಅಂಕಿ-ಅಂಶ.

ವಿಶ್ವಕಪ್ ಗೆಲ್ಲುವುದೆಂದರೆ ಮಕ್ಕಳಾಟಿಕೆಯಲ್ಲ. ಟಿ-ಟ್ವೆಂಟಿ ಆದರೆ ಎರಡು ವರ್ಷಕ್ಕೊಮ್ಮೆ, ಏಕದಿನ ಪಂದ್ಯವಾದರೆ ನಾಲ್ಕು ವರ್ಷಕ್ಕೊಮ್ಮೆ ಬರುವ
ವಿಶ್ವಕಪ್ ಪಂದ್ಯಾಟದಲ್ಲಿ ಸೆಣೆಸಲು ಹತ್ತಕ್ಕೂ ಹೆಚ್ಚು ಬಲಿಷ್ಠ ತಂಡಗಳು ಪೈಪೋಟಿ ನಡೆಸುತ್ತವೆ. ಆ ಹತ್ತು ತಂಡಗಳಲ್ಲಿ ಗೆಲ್ಲುವುದು ಒಂದೇ ತಂಡ. ಅಬ್ಬಬ್ಬ ಎಂದರೆ ಎರಡನೇ ಸ್ಥಾನ ಗಳಿಸಿದ ತಂಡದ ಹೆಸರು ನೆನಪು ಕೆಲವೊಮ್ಮೆ ಉಳಿಯುತ್ತದೆ, ಬಿಟ್ಟರೆ ಉಳಿದ ಎಂಟು ತಂಡಗಳ ಹೆಸರನ್ನು ಅಂಕೆ-ಸಂಖ್ಯೆ ದಾಖಲೆ ಗಳನ್ನು ಇಟ್ಟುಕೊಳ್ಳುವವರು ನೆನಪಿಟ್ಟುಕೊಳ್ಳಬೇಕೇ ವಿನಃ ಸಾಮಾನ್ಯ ಜನರಿಗೆ ನೆನಪಿರುವುದು ಕಷ್ಟ.

ಸಾಮಾನ್ಯ ಜನರಿಗೆ ಅದು ಬೇಕಾಗಿಯೂ ಇಲ್ಲ. ಜಯಿಸಿದ ತಂಡ ಯಾವುದು ಎಂದು ನೆನಪಿದ್ದರೆ ಸಾಕು. ಕೆಲವರಿಗೆ ಜಯಸಿದ್ದು ನಮ್ಮ ದೇಶ ಅಲ್ಲ
ವೆಂದರೆ ಅದೂ ಬೇಡ. ಮೊನ್ನೆ ನಡೆದ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಂತೂ ಇಪ್ಪತ್ತು ತಂಡಗಳು ಭಾಗ ವಹಿಸಿದ್ದವು. ಇನ್ನೊಂದು ನಾಲ್ಕು ವಿಶ್ವಕಪ್
ಪಂದ್ಯ ಆಗುವಾಗ, ಈ ವಿಶ್ವಕಪ್‌ನಲ್ಲಿ ಭಾಗವಹಿಸಿದ ಕೆಲವು ತಂಡಗಳ ಹೆಸರು ಮರೆತು ಹೋಗಿರುತ್ತದೆ. ಮೊನ್ನೆ ಭಾರತ ಟಿ-ಟ್ವೆಂಟಿ ವಿಶ್ವಕಪ್ ಜಯಿಸಿದ
ನಂತರದ ವಿಜಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.

ಕಪಿಲ್ ದೇವ್ ನೇತೃತ್ವದಲ್ಲಿ, ೧೯೮೩ ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಮೊದಲ ಬಾರಿ ವಿಜಯಯಾತ್ರೆಯನ್ನು ಕೈಗೊಳ್ಳಲಾಗಿತ್ತು. ೨೦೦೭ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊತ್ತ ಮೊದಲ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯವನ್ನು ಜಯಿಸಿದ ಧೋನಿ ನೇತೃತ್ವದ ಭಾರತ ತಂಡವನ್ನು ಭವ್ಯವಾಗಿ
ಸ್ವಾಗತಿಸಲಾಗಿತ್ತು. ೨೦೧೧ರಲ್ಲಿ ಭಾರತದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯಸಿತ್ತಾದರೂ, ದೇಶದ ಜಯ
ಗಳಿಸಿದ್ದರಿಂದ ವಿಮಾನ ನಿಲ್ದಾಣದಿಂದ ಮೆರವಣಿಗೆಯ ಮೂಲಕ ಕರೆತರುವ ಅವಶ್ಯಕತೆ ಇರಲಿಲ್ಲ.

ಆದರೆ ಮೊನ್ನೆ ನಡೆದ ಮೆರವಣಿಗೆ ಇದೆಯಲ್ಲ, ಅದು ನ ಭೂತೊ… ಹಿಂದೆಂದೂ ಈ ರೀತಿಯ ಮೆರವಣಿಗೆ ಭಾರತದಲ್ಲಿ ನಡೆದಿಲ್ಲ. ಮುಂಬೈನ ಕ್ವೀ ನೆಕ್ಲೆಸ್ ಅವತ್ತು ಕ್ರಿಕೆಟ್  – ನೆಕ್ಲೆಸ್ ಆಗಿತ್ತು. ಸುಮಾರು ಎರಡುವರೆ ಕಿಲೋ ಮೀಟರ್ ರಸ್ತೆಯ ಉದ್ದಕ್ಕೂ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ತುಳುಕು ತ್ತಿತ್ತು. ಯಾವುದೇ ರಥ ಯಾತ್ರೆಗೆ, ಧಾರ್ಮಿಕ ಉತ್ಸವಕ್ಕೆ ಕೂಡ ಈ ರೀತಿಯ ಜನಜಂಗುಳಿ ಸೇರಿದ್ದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಷ್ಟೊಂದು ಜನ ಸೇರಿದ್ದರೂ, ವಿಜಯ ಯಾತ್ರೆಯ ವಾಹನಕ್ಕೆ ಅಡೆತಡೆಯಾಗಲಿ ಅಥವಾ ಜನರ, ಗುಂಪುಗಳ ನಡುವೆ ಘರ್ಷಣೆ ಯಾಗಲಿ ನಡೆಯಲಿಲ್ಲ. ಕಲ್ಲು, ಬಾಟಲ್ ಎಸೆಯು ದಾಗಲಿ ಅಥವಾ ಇನ್ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಂದರೆ ಕ್ರಿಕೆಟ್ ಭಾರತೀಯರ ದೇಹವ ನ್ನಷ್ಟೇ ಅಲ್ಲ, ಆತ್ಮವನ್ನೂ ಬಂಧಿಸಿದೆ ಎನ್ನುವಂತಾಯಿತು.

ಈ ರೀತಿಯ ಮೆರವಣಿಗೆಗಳಲ್ಲಿ ಎಷ್ಟು ಜನ ಸೇರುತ್ತಾರೆ ಯಾವ ರೀತಿಯ ಜನ ಸೇರು ತ್ತಾರೆ ಅವರನ್ನು ನಿಭಾಯಿಸುವುದು ಹೇಗೆ ಎಂಬ ಸವಾಲು ಪೊಲೀಸ್
ಇಲಾಖೆಗೆಗೆ ಇರುವಂತದ್ದೇ. ಅವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಕೂಡ. ಈ ನಿಟ್ಟಿನಲ್ಲಿ ಕ್ರಿಕೆಟ್ ಆಟಗಾರರೊಂದಿಗೆ ಅಭಿಮಾನಿಗಳು ಕೂಡ ಅಭಿನಂದನೀಯರು. ನಿಮಗೆ ನೆನಪಿರಬಹುದು, ಈಗ ಎಂಟು ತಿಂಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಪಂದ್ಯದ ಅಂತಿಮ ಪಂದ್ಯ ಆರಂಭವಾಗುವುದಕ್ಕೂ ಮೊದಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಕ್ರೀಡಾಂಗಣದಲ್ಲಿ ‘ವಂದೇ ಮಾತರಂ’
ಹಾಡುತ್ತಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಸೋತ ಭಾರತದ ತಂಡದ ಆಟಗಾರರಿಗೆ ‘ವಂದೇ ಮಾತರಂ’ ಹಾಡುವ ಅವಕಾಶ ಸಿಗಲಿಲ್ಲ.

ಸೋಲು ಆಟಗಾರರ ತಲೆತಗ್ಗಿಸುವಂತೆ ಮಾಡಿತ್ತು. ಎಂಟು ತಿಂಗಳ ನಂತರ, ಮೊನ್ನೆ ಮುಂಬೈನ ಕ್ರೀಡಾಂಗಣದಲ್ಲಿ ಎಲ್ಲಕ್ಕಿಂತ ಎಲ್ಲರಿಗಿಂತ ಜೋರಾಗಿ ವಂದೇ ಮಾತರಂ ಹಾಡಿದ ವರು ಭಾರತೀಯ ಕ್ರಿಕೆಟ್ ತಂಡದ ಆಟಗಾರರು. ಅಂದು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರತಿಯೊಬ್ಬರಲ್ಲೂ ಗೆಲುವಿನ ವಿದ್ಯುತ್ ಸಂಚಾರ, ವಿಜಯದ ಪುಳಕೋತ್ಸವ. ಮರೀನ್ ಡ್ರೈವ್‌ನಲ್ಲಿ ನಡೆದ ವಿಜಯ ಯಾತ್ರೆಯಂತೂ ಕೇಳುವುದೇ ಬೇಡ. ಬಹುಶಃ ಕಳೆದ ವರ್ಷ ನಡೆದ
ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟಿನ ತಂಡವನ್ನು ಸ್ವಾಗತಿಸಲು ನಡೆದ ಮೆರವಣಿಗೆಯ ನಂತರ ಅತಿ ಹೆಚ್ಚು ಜನ ಸೇರಿದ್ದು ಮುಂಬೈನ ಮರಿನ್ ಡ್ರೈವ್‌ನಲ್ಲಿ. ಲಿಯೋನಿಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನ ತಂಡವನ್ನು ಸ್ವಾಗತಿಸಲು ಅಂದು ಐವತ್ತು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರಂತೆ.

ಶಾಲಾ ದಿನಗಳಲ್ಲಿ ನಾವು ಓದಿದ ಪಾಠ ಬೇರೆಯ ಇತ್ತು. ಅರ್ಜೆಂಟಿನ ಎಂದರೆ ಗೋಧಿ, ಸೋಯಾಬಿನ್ ಬೆಳೆಯುವ ದೇಶ. ಗೋಧಿಯನ್ನು ಹೆಚ್ಚು ರಫ್ತು ಮಾಡುವ ದೇಶ ಎಂದು ಭೂಗೋಳ ಪಾಠ ಓದಿದ ನೆನಪು. ಈಗ ಗೂಗಲ್‌ನಲ್ಲಿ ಮಾಂಸ ಮತ್ತು ವೈನ್‌ಗೆ ಅರ್ಜೆಂಟಿನ ಪ್ರಸಿದ್ಧಿ ಎಂಬ ಮಾಹಿತಿ ದೊರೆಯು ತ್ತದೆ. ಆದರೆ ಇಂದಿನ ಯುವಕರನ್ನು ಕೇಳಿ ನೋಡಿ, ಅರ್ಜೆಂಟಿನ ಎಂದಾಕ್ಷಣ ಮೊದಲು ಹೇಳುವುದು ‘ಫುಟ್‌ಬಾಲ್’. ಟೆನ್ನಿಸ್ ಬ್ಯಾಡ್ಮಿಂಟನ್ ಚೆಸ್‌ ನಂತಹ ವೈಯಕ್ತಿಕ ಆಟಗಳಲ್ಲಿ ಆರಂಭದಿಂದ ಕೊನೆಯವರೆಗೂ ಒಬ್ಬನೇ ಸೆಣಸಾಡಬೇಕು, ಅವನ ಆಟವನ್ನು ಅವನೇ ಆಡಬೇಕು. ಅದು ಒಂದು ಪ್ರಕ್ರಿಯೆ.

ಆರಂಭವಾದಾಗಿನಿಂದ ಮುಗಿಸುವವರೆಗೂ ಅವ ನೊಬ್ಬನದೇ ಹೆಣಗಾಟ. ಅಲ್ಲಿ ‘ಟರ್ನಿಂಗ್ ಪಾಯಿಂಟ್’ ಇರುವು ದಿಲ್ಲ, ಇದ್ದರೂ ತೀರಾ ಕಡಿಮೆ. ಅದೇ ಒಂದು ತಂಡವಾಗಿ ಆಡುವಾಗ ಟರ್ನಿಂಗ್ ಪಾಯಿಂಟ್ ಬಹಳ ಮಹತ್ವದಾಗುತ್ತದೆ. ಅದರಲ್ಲೂ ಅಂತಿಮ ಪಂದ್ಯದಲ್ಲಿ ಈ ರೀತಿಯ ತಿರುವು ನೀಡಿದ ಕ್ಷಣಗಳು ಸದಾ ನೆನಪಲ್ಲಿ ಇರುತ್ತದೆ. ೧೯೮೩ ರ ವಿಶ್ವಕಪ್ ಅಂತಿಮ ಪಂದ್ಯವನ್ನೇ ನೆನಪಿಸಿಕೊಳ್ಳಿ, ಮೋಹಿಂದರ್ ಅಮರನಾಥ್ ಮೂರು ವಿಕೆಟ್ ಪಡೆದು ಪಂದ್ಯ ಪುರುಷನಾದರೂ, ನೆನಪಿ ನಲ್ಲಿ ಉಳಿದದ್ದು ಅಥವಾ ತಟ್ಟನೆ ನೆನಪಾಗುವುದು ಕಪಿಲ್ ದೇವ್ ಹಿಡಿದ ವಿವಿಯನ್ ರಿಚರ್ಡ್ ಅವರ ಕ್ಯಾಚ್.

೨೦೧೧ರ ವಿಶ್ವಕಪ್ ಅಂತಿಮ ಪಂದ್ಯ ಎಂದರೆ ನೆನಪಾಗುವುದು ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್. ೨೦೦೭ ರ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಮಹತ್ವದ ಘಟ್ಟ ಅಥವಾ ನೆನಪಿನಲ್ಲಿರುವುದು, ಶ್ರೀಶಾಂತ್ ಹಿಡಿದ ಮಿಸ್ಬಾ ಉಲ್ ಹಕ್‌ನ ಕ್ಯಾಚ್. ಅದೇ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಆರ್.ಪಿ. ಸಿಂಗ್ ಆಗಲಿ ಅಥವಾ ಮೂರು ವಿಕೆಟ್ ಪಡೆದು ಪಂದ್ಯಪುರುಷನಾಗಿದ್ದ ಇ-ನ್ ಪಠಾಣ್ ನೆನಪಾಗುವುದು ನಂತರವೇ. ಆ ಪಂದ್ಯದಲ್ಲಿ ಗೌತಮ್ ಗಂಭೀರ್ ೫೪ ಚೆಂಡಿಗೆ ೭೫ ರನ್ ಗಳಿಸಿದ್ದರು, ರೋಹಿತ್ ಶರ್ಮಾ ಆರನೆಯ ಕ್ರಮಾಂಕದಲ್ಲಿ ಆಡಲು ಬಂದು ೧೬ ಚೆಂಡಿನಲ್ಲಿ ೩೦ ರನ್ ಹೊಡೆದಿದ್ದರು ಎನ್ನುವುದು ಎಷ್ಟು ಜನರಿಗೆ ನೆನಪಿದೆ? ಮೊನ್ನೆಯ ಪಂದ್ಯವನ್ನೇ ತೆಗೆದುಕೊಳ್ಳಿ, ವಿರಾಟ್ ಕೊಹ್ಲಿಯ ಬ್ಯಾಟಿಂಗ್, ಜಸ್ಪ್ರೀತ್ ಬೂಮ್ರಾ ಬೌಲಿಂಗ್‌ಗಿಂತಲೂ ಹೆಚ್ಚಾಗಿ ನೆನಪಿನಲ್ಲಿರುವುದು ಸೂರ್ಯ ಕುಮಾರ್ ಯಾದವ್ ತೆಗೆದುಕೊಂಡ ಕ್ಯಾಚ್. ಅನೇಕರಿಗೆ ಇದು ಆಕಸ್ಮಿಕ ಎನಿಸಬಹುದು.

ಏಕೆಂದರೆ ಈ ರೀತಿಯ ಕ್ಯಾಚ್ ಎ ೧೦೦ ಪಂದ್ಯದಲ್ಲಿ ಒಂದು ಅಥವಾ ಎರಡು ನೋಡಲಿಕ್ಕೆ ಸಿಗುವಂಥದ್ದು. ಆದರೆ ಇಂತಹ ಕ್ಯಾಚ್ ಬಂದರೆ ಹಿಡಿಯಲು ಎಂದೇ ಸೂರ್ಯಕುಮಾರ್ ಯಾದವ್ ನೆಟ್ಸ್‌ನಲ್ಲಿ ೧೫೦ಕ್ಕೂ ಹೆಚ್ಚು ಬಾರಿ ಅಭ್ಯಾಸ ಮಾಡಿದ್ದರಂತೆ. ಅವರೇ ಹೇಳುವಂತೆ, ‘ನಾನು ಬ್ಯಾಟಿಂಗ್ ನಲ್ಲಿ ಕೊಡುಗೆಯನ್ನು ಕೊಡುತ್ತೇನೆ ನಿಜ, ಇದಕ್ಕಿಂತ ಹೆಚ್ಚಾಗಿ ತಂಡಕ್ಕೆ ನಾನು ಏನನ್ನು ಕೊಡಬಹುದು ಎಂದು ಯೋಚಿಸುತ್ತಿದ್ದೆ. ಬೋಲಿಂಗ್‌ನಲ್ಲಿ ನನ್ನ
ಪಾಲು ಏನೂ ಇರುವುದಿಲ್ಲ. ಅದಕ್ಕಾಗಿ ಕ್ಷೇತ್ರರಕ್ಷಣೆ ಯಲ್ಲಿ ಉತ್ತಮವಾಗಿ ಕೆಲಸ ಮಾಡಿ ಒಂದಷ್ಟು ರನ್ ಉಳಿಸುವುದು, ಜತೆಗೆ ನನ್ನ ಬಳಿ ಬರುವ ಕ್ಯಾಚ್
ಹಿಡಿಯುವ ಮೂಲಕ ತಂಡಕ್ಕೆ ನೆರವಾಗಬಹುದು ಎಂದು ಶ್ರಮಿಸಿದೆ. ಅಂತಿಮ ಪಂದ್ಯದಲ್ಲಿ ನನ್ನ ಶ್ರಮ ಫಲ ನೀಡಿತು’.

ಇದು ಒಬ್ಬ ಆಟಗಾರನ ಕ್ರಿಯಾಶೀಲತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಇಂತಹ ಮನಃಸ್ಥಿತಿ ಇದ್ದರೆ ಮಾತ್ರ ಆಟಗಾರ ತನ್ನ ನೂರು ಪ್ರತಿಶತವನ್ನು ನೀಡಲು ಸಾಧ್ಯ. ಇದರೊಂದಿಗೆ ಮೊನ್ನೆ ನಡೆದ ಅಂತಿಮ ಪಂದ್ಯ ನೆನಪಿರಲು ಇನ್ನೊಂದು ಕಾರಣ ಭಾರತ ಕ್ರಿಕೆಟ್ ತಂಡದ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ತರಬೇತುದಾರ ರಾಹುಲ್ ದ್ರಾವಿಡ್ ಅವರ ನಿವೃತ್ತಿ. ಒಂದು ತಂಡದ ನಾಯಕನಿಗೆ ವಿಶ್ವಕಪ್ ಗೆದ್ದು ನಿವೃತ್ತಿ ಘೋಷಿಸುವುದಕ್ಕಿಂತ ಸುಸಮಯ ಇನ್ನೊಂದು ಇರಲಿಕ್ಕಿಲ್ಲ.

ರೋಹಿತ್ ಶರ್ಮಾ ಮಾಡಿದ್ದು ಕೂಡ ಅದನ್ನೇ. ರೋಹಿತ್ ಶರ್ಮಾ ಕೇವಲ ತಂಡದ ನಾಯಕನಷ್ಟೇ ಅಲ್ಲ, ಟಿ-ಟ್ವೆಂಟಿ ಪಂದ್ಯಗಳಲ್ಲಿ ಸಾಕಷ್ಟು ದಾಖಲೆ ಸೃಷ್ಟಿಸಿದ ಆಟಗಾರ. ಟಿ-ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು, ಐದು ಶತಕದ ಜತೆಗೆ, ಅತಿ ಹೆಚ್ಚು ೪,೨೩೧ ರನ್ ಗಳಿಸಿದ ಕೀರ್ತಿ ರೋಹಿತ್ ಹೆಸರಿನಲ್ಲಿದೆ. ಅದರೊಂದಿಗೆ ಟಿ-ಟ್ವೆಂಟಿ ವಿಶ್ವಕಪ್ ಆರಂಭವಾದಾಗಿನಿಂದ ಹಿಡಿದು ಮೊನ್ನೆ ನಡೆದ ವಿಶ್ವಕಪ್‌ವರೆಗೆ ಎಲ್ಲ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯಗಳಲ್ಲೂ ಭಾಗವಹಿಸಿದ ಏಕ ಮಾತ್ರ ಭಾರತೀಯ ಆಟಗಾರ, ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ಆರಂಭಿಕ ಆಟಗಾರನಾಗಿ ಅತಿಹೆಚ್ಚು ೯೫೨ ರನ್ ಸೇರಿಸಿದ ಆಟಗಾರ, ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ೧೨೨೦ ರನ್ ಗಳಿಸಿ ಎರಡನೆಯ ಸ್ಥಾನದಲ್ಲಿರು ಆಟಗಾರ ಎಂಬ ದಾಖಲೆಯೂ ಇದೆ.

ಹಾಗೆಯೇ ಒಬ್ಬ ಬ್ಯಾಟರ್ ಆಗಿ ಅಂತಿಮ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿ, ತಂಡವನ್ನು ಗೆಲ್ಲಿಸಿದ ಹೆಮ್ಮೆಯೊಂದಿಗೆ ನಿವೃತ್ತಿ ಹೊಂದಿದರೆ,
ಅದಕ್ಕಿಂತ ಹೆಚ್ಚಿನದು ಬೇರೇನೂ ಬೇಕಿಲ್ಲ. ಟಿ-ಟ್ವೆಂಟಿ ವಿಶ್ವಕಪ್‌ನಲ್ಲಿ ೧೨೯೨ ರನ್ ಗಳಿಸಿ ಮೊದಲನೆಯ ಸ್ಥಾನದಲ್ಲಿರುವುದಲ್ಲದೇ, ಮೂರನೆಯ ಕ್ರಮಾಂಕ ದಲ್ಲಿ ಆಡಿ, ಅತಿಹೆಚ್ಚು ೧೧೩೨ ರನ್ ಗಳಿಸಿದ ಆಟಗಾರ. ಒಟ್ಟೂ ಟಿ-ಟ್ವೆಂಟಿ ಪಂದ್ಯಗಳಲ್ಲಿ ೪೧೮೮ ರನ್ ಗಳಿಸಿ, ವಿಶ್ವದ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಕೀರ್ತಿ ಕೊಹ್ಲಿಯದ್ದು. ರವೀಂದ್ರ ಜಡೆಜಾ ಕೂಡ ವಿಶ್ವದ ಉತ್ತಮ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನ್ನುವುದ ರಲ್ಲಿ ಎರಡು ಮಾತಿಲ್ಲ. ಉbಜ್ಞಿಜ ಠಿeಛಿ Zಛಿಛ್ಟಿ ಡಿಜಿಠಿe Z qಜ್ಚಿಠಿಟ್ಟqs ಟಠಿಛಿ, ಹೆಚ್ಚು ಇನ್ನೇನು ಬೇಕು?

ಇನ್ನು ರಾಹುಲ್ ದ್ರಾವಿಡ್ ಅವರೇ ಹೇಳುವಂತೆ, ‘ನಾನು ನಾಯಕನಾಗಿದ್ದಾಗ ಭಾರತಕ್ಕೆ ವಿಶ್ವಕಪ್ ತರಲು ಆಗಲಿಲ್ಲ. ಆದರೆ ತರಬೇತುದಾರನಾಗಿ, ತರಬೇತಿ ನೀಡಿದ ತಂಡ ಇಂದು ವಿಶ್ವಕಪ್ ಅನ್ನು ದೇಶಕ್ಕೆ ತಂದುಕೊಟ್ಟಿದೆ’. ಒಂದು ಕಾಲದಲ್ಲಿ ‘ಗೋಡೆ’ ಎಂದು ಕರೆಸಿಕೊಂಡಂತಹ ರಾಹುಲ್
ದ್ರಾವಿಡ್ ಅವರ ಮನದಾಳದ ಮಾತುಗಳು. ಹೇಗೆ ಆಟಗಾರರಿಗೆ ನಿವೃತ್ತಿ ಹೊಂದಲು ಇದು ಯೋಗ್ಯ ಸಮಯವೋ ಹಾಗೆಯೇ ತರಬೇತುದಾರನಿಗೂ
ಇದು ಅಷ್ಟೇ ಯೋಗ್ಯವಾದ ಸಮಯ. ಈ ನಾಲ್ಕೂ ಜನ ದಿಗ್ಗಜರ ನಿವೃತ್ತಿ ಕೂಡ ಈ ವಿಶ್ವಕಪ್ ನೆನಪಿನಲ್ಲಿರುವಂತೆ ಮಾಡುತ್ತದೆ.

ಮೊನ್ನೆ ಟ್ವಿಟರ್ ಮತ್ತು ಫೇಸ್ಬುಕ್ ತುಂಬಾ ಮೆರಿನ್ ಡ್ರೈವ್‌ನ ಜನಜಂಗುಳಿಯ ಚಿತ್ರ, ಅದಕ್ಕೆ ಬಂದ ಕೆಲವು ಕಮೆಂಟ್ಸ್‌ಗಳನ್ನು ನೋಡುತ್ತಿದ್ದೆ. ಅದರಲ್ಲಿ ಕೆಲವರು ‘ಭಾರತದಲ್ಲಿ ಇಷ್ಟೊಂದು ನಿರುದ್ಯೋಗಿಗಳಿದ್ದಾರೆ’, ‘ಇವರಿಗೆ ಮಾಡಲು ಬೇರೆ ಕೆಲಸ ಇಲ್ಲವೇ’ ಇತ್ಯಾದಿ ‘ಟೀಕೆ’ಗಳನ್ನೂ ನೋಡಿದೆ. ಅಲ್ಲ, ಎರಡು ವರ್ಷಕ್ಕೋ, ನಾಲ್ಕು ವರ್ಷಕ್ಕೋ ಒಮ್ಮೆ ನಡೆಯುವ ಪಂದ್ಯ, ನಾಲ್ಕೋ, ಐದೋ ಪಂದ್ಯಗಳಲ್ಲಿ ಒಮ್ಮೆ ಕಪ್ ಗೆಲ್ಲುವುದು. ಆ ಸಂದರ್ಭ ವನ್ನೂ ಆಚರಿಸದೇ ಇದ್ದರೆ ಹೇಗೆ? ಅಥವಾ ಆಚರಿಸಿದವರೆಲ್ಲ ನಿರುದ್ಯೋಗಿಗಳು ಎಂದರೆ ಹೇಗೆ? ನನಗೆ ಅರ್ಥವಾಗದೆ ಇದ್ದದ್ದು, ಈ ಸಂಭ್ರಮಾಚರಣೆಯನ್ನು ಟಿವಿಯಲ್ಲಿಯೋ, ಸಾಮಾಜಿಕ ಜಾಲತಾಣದಲ್ಲಿಯೋ ಸಂಪೂರ್ಣವಾಗಿ ನೋಡಿ, ಅದಕ್ಕೆ ಪ್ರತಿಕ್ರಿಯೆ ಬರೆಯುವ ಜನ, ಅಲ್ಲಿದ್ದವರು ನಿರು ದ್ಯೋಗಿಗಳು, ತಾವು ಮಾತ್ರ ಉದ್ಯೋಗ ಇರುವ ಸೊಬಗರು ಎಂದು ತಿಳಿದರೆ, ಅವರ ಬುದ್ಧಿಗೆ ಒಂದು ಸಾಷ್ಟಾಂಗ ನಮಸ್ಕಾರ!

ಪ್ರತಿ ಸಲವೂ ನಾವೇ ಗೆಲ್ಲಬೇಕು ಎಂದರೆ ಸಾಧ್ಯವಿಲ್ಲ. ಉಳಿದ ತಂಡಗಳು ತೆಂಗಿನ ಕಾಯಿ ತುರಿಯುತ್ತ ಕುಳಿತಿರುವುದಿಲ್ಲ. ಅವರೂ ನಿರಂತರ ಅಭ್ಯಾಸ ಮಾಡುತ್ತಿರುತ್ತಾರೆ. ಅವರವರು ನಡೆಸಿದ ಅಭ್ಯಾಸ ಮತ್ತು ಆ ದಿನದ ಅದೃಷ್ಟದ ಮೇಲೆ ಯಾರು ಉತ್ತಮರು ಎಂದು ನಿರ್ಣಯವಾಗುತ್ತದೆ. ತಂಡ ಗೆಲ್ಲುವ ವಿಷಯದಲ್ಲಿ ಈ ಎರಡು ಅಂಶ ಗಳನ್ನು ಬಿಟ್ಟರೆ ಮೂರನೆಯ ಅಂಶ ನನಗಂತೂ ಕಾಣುವುದಿಲ್ಲ. ನಾವು ಗೆಲ್ಲಲಿಲ್ಲ ಎಂಬ ಬೇಸರವಿದ್ದರೂ, ಅಭ್ಯಾಸ, ಅದೃಷ್ಟ ಒಂದಾಗಿ ಗೆದ್ದ ತಂಡವನ್ನು ನಾವು ಯಾವತ್ತೂ ಗೌರವಿಸಬೇಕು. ಈ ಸಲ ಭಾರತ ತಂಡವನ್ನು ಅಭಿನಂದಿಸಿ, ಗೌರವಿಸೋಣ. ಏಕೆಂದರೆ ಈ ಸಲ ಕಪ್ ನಮ್ದು!