Wednesday, 23rd October 2024

NEET UG 2024 ಅಕ್ರಮ: ಜುಲೈ 18ಕ್ಕೆ ವಿಚಾರಣೆ

ವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(NEET UG 2024)ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಜು18ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ನೀಟ್‌ ಅಕ್ರಮದ ಕುರಿತಂತೆ ಕೇಂದ್ರ ಸರ್ಕಾರ (Central Government) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ವರದಿಗಳನ್ನು ಪಡೆದಿರುವ ಸುಪ್ರೀಂ ಕೋರ್ಟ್‌, ಜು.18ರಂದು ವಿಚಾರಣೆ ನಡೆಸಲು ತೀರ್ಮಾನಿಸಿತು.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತಂತೆ ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ನೀಡಿದ ಮಾಹಿತಿಯನ್ನು ಪಡೆದ ನ್ಯಾಯಾಲಯವು ಮೊದಲಿಗೆ ಜು.15ರಂದು ವಿಚಾರಣೆ ನಡೆಸಲು ಬಯಸಿತ್ತು. ಆದರೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಜು.15 ಹಾಗೂ 16ರಂದು ವೈಯಕ್ತಿಕ ಕಾರಣ ಗಳಿಂದಾಗಿ ಕೋರ್ಟ್‌ಗೆ ಹಾಜರಾಗುವುದಿಲ್ಲ ಎಂದು ತಿಳಿಸಿದರು. ಜು.17ರಂದು ಮೊಹರಂ ಇರುವ ಕಾರಣ ನ್ಯಾಯಾಲಯವು ಜು.18ಕ್ಕೆ ವಿಚಾರಣೆ ಮುಂದೂಡಿತು.

ಕೇಂದ್ರ ಸರ್ಕಾರ ಹೇಳಿದ್ದೇನು?

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, “ನೀಟ್‌ ಪರೀಕ್ಷೆಯ ವೇಳೆ ಸಾಮೂಹಿಕ ನಡೆದಿಲ್ಲ. ಹಾಗಾಗಿ, ಮರು ಪರೀಕ್ಷೆಯ ಅವಶ್ಯಕತೆಯಿಲ್ಲ” ಎಂದು ಸ್ಪಷ್ಟಪಡಿಸಿದೆ. “ನೀಟ್‌ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ನಡೆದಿಲ್ಲ. ನೀಟ್‌ ಪರೀಕ್ಷೆಯ ಕುರಿತು ಐಐಟಿಯು ವಿಶೇಷ ಡೇಟಾ ಬಿಡುಗಡೆ ಮಾಡಿದೆ. ನೀಟ್‌ ಪರೀಕ್ಷೆ ವೇಳೆ ಸಾಮೂಹಿಕವಾಗಿ ನಕಲು ನಡೆದಿಲ್ಲ ಎಂಬುದಾಗಿ ವರದಿ ತಿಳಿಸಿದೆ. ಹಾಗಾಗಿ, ನೀಟ್‌ ಪರೀಕ್ಷೆಯನ್ನು ಮತ್ತೆ ನಡೆಸುವ ಅವಶ್ಯಕತೆ ಇಲ್ಲ. ಸುಮಾರು 23 ಲಕ್ಷ ಮಕ್ಕಳಿಗೆ ಮತ್ತೆ ಪರೀಕ್ಷೆಯ ಹೊರೆಯನ್ನು ಹೊರೆಸುವುದು ಬೇಕಾಗಿಲ್ಲ” ಎಂಬುದಾಗಿ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿದೆ.

ನೀಟ್‌ ರದ್ದತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಜುಲೈ 8ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಹಾಗೂ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಸಿಜೆಐ ಚಂದ್ರಚೂಡ್‌ ಅವರಿದ್ದ ನ್ಯಾಯಪೀಠವು ತಿಳಿಸಿತ್ತು. ಹಾಗೆಯೇ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮದ ಕುರಿತಂತೆ ಮಹತ್ವದ ಮಾಹಿತಿ ನೀಡಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೀಟ್‌ ಮೂರು ನಿರ್ದೇಶನಗಳನ್ನು ನೀಡಿತ್ತು. ತನಿಖೆಯ ವರದಿ ನೀಡಬೇಕು ಎಂಬುದಾಗಿ ಸಿಬಿಐಗೂ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈಗ ಜು.11ರಂದು ಅಂತಿಮ ವಿಚಾರಣೆ ನಡೆಸಿ, ತೀರ್ಪು ನೀಡಲಿದೆ.