Tuesday, 3rd December 2024

ಸದನಕ್ಕೆ ಬರೋದಕ್ಕಿರುವ ಸಮಸ್ಯೆಯೇನು ?

ಅಶ್ವತ್ಥಕಟ್ಟೆ

ranjith.hoskere@gmail.com

ಸುಮಾರು ಆರು ತಿಂಗಳ ಬಳಿಕ ಕರ್ನಾಟಕ ವಿಧಾನಸಭಾ ಕಲಾಪ ಆರಂಭಗೊಂಡಿದೆ. ಲೋಕಸಭಾ ಚುನಾವಣೆಯ ಕಾರಣಕ್ಕೆ ಬಜೆಟ್ ಅಧಿವೇಶನವನ್ನೂ ತರಾತುರಿಯಲ್ಲಿ ನಡೆಸಿದ್ದ ರಾಜಕೀಯ ಪಕ್ಷಗಳು, ಇದೀಗ ಮಳೆಗಾಲದ ಅಧಿವೇಶನಕ್ಕೆ ಸಜ್ಜಾಗಿವೆ. ಬಿಜೆಪಿಗರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು
‘ಅಸ’ಗಳಿವೆ ಎನ್ನುತ್ತಿದ್ದರೆ, ಇತ್ತ ಕಾಂಗ್ರೆಸಿಗರು ಪ್ರತಿಪಕ್ಷವನ್ನು ಎದುರಿಸಲು ನಮ್ಮ ಬಳಿಯೂ ಅಸ್ತ್ರಗಳಿವೆ ಎಂದು ಹೇಳುತ್ತಿದ್ದಾರೆ.

ಅಶೋಕ್ ನೇತೃತ್ವದ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದೋ ಅಥವಾ ತಾನೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿಕೊಳ್ಳುವುದೋ ಎನ್ನುವುದನ್ನು
ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ ಇದಕ್ಕಿಂತ ಮುಖ್ಯವಾಗಿ, ಸ್ಪೀಕರ್ ಯು.ಟಿ. ಖಾದರ್ ಅವರು ವಿಧಾನಸಭಾಧ್ಯಕ್ಷ ಹುದ್ದೆಯೊಂದಿಗೆ ‘ಹೆಡ್‌ಮಾಸ್ಟರ್’
ಆಗಿರುವುದು ಚರ್ಚೆಯ ವಿಷಯ. ಈ ಹಿಂದೆ ಸದನದಲ್ಲಿ ಶಾಸಕರಿಗೆ ಸರಿಯಾದ ಸಮಯಕ್ಕೆ ಬರುವಂತೆ ಪಾಠ ಮಾಡಿದ, ಸುಖಾಸುಮ್ಮನೆ ನಿಂತು ಮಾತನಾಡುವ ಶಾಸಕರಿಗೆ ಗದರಿದ್ದ ಸ್ಪೀಕರ್ ಇದೀಗ ಶಾಸಕರ ‘ಆಗಮನ-ನಿರ್ಗಮನ’ದ ಮೇಲೆ ನಿಗಾ ವಹಿಸಲು ಮುಂದಾಗಿದ್ದಾರೆ.

ಹೌದು, ಸುದೀರ್ಘ ಗ್ಯಾಪ್‌ನ ಬಳಿಕ ಕರೆದಿರುವ ಈ ಅಧಿವೇಶನದ ಆರಂಭಕ್ಕೂ ಮೊದಲು, ವಿಧಾನಸಭೆಯಲ್ಲಿ ಹತ್ತು ಹಲವು ಬದಲಾವಣೆಗಳಾವಿವೆ. ಪಶ್ಚಿಮ ದ್ವಾರದಲ್ಲಿದ್ದ ಕಬ್ಬಿಣದ ಸಲಾಕೆ ಬದಲು, ರೋಸ್‌ವುಡ್‌ನಲ್ಲಿ ನಿರ್ಮಿಸಿರುವ ಕಮಾನು ಶಾಸಕರನ್ನು ಸ್ವಾಗತಿಸುತ್ತಿದೆ. ವಿಧಾನಸಭೆಯೊಳಗೆ ಗಂಡಭೇರುಡದ ಗಡಿಯಾರ, ಶಾಸಕರು ಕೂರುವ ಕುರ್ಚಿಯ ಮುಂಭಾಗದಲ್ಲಿ ಚಿನ್ನದ ಬಣ್ಣದ ಲೇಪನ ಸೇರಿದಂತೆ ಹಲವು ಬದಲಾವಣೆ ತರಲಾಗಿದೆ. ಆದರೆ ಈ ಎಲ್ಲಕ್ಕಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು, ಕ್ಯಾಮೆರಾ ಕಣ್ಗಾವಲು.

ಅಂದರೆ, ಶಾಸಕರ ‘ಆಗಮನ’, ‘ನಿರ್ಗಮನ’ವನ್ನು ಸೆರೆಹಿಡಿದು, ದಿನಕ್ಕೆ ಎಷ್ಟು ತಾಸು ಶಾಸಕರು ಸದನದಲ್ಲಿದ್ದರು ಎಂದು ತಿಳಿಸುವ ಕೃತಕ ತಂತ್ರಜ್ಞಾನದ ಕ್ಯಾಮೆರಾಗಳ ಅಳವಡಿಸಲಾಗಿದೆ ಈಗ ಅನೇಕರ ಹುಬ್ಬೇರುವಂತೆ ಮಾಡಿದೆ. ಪ್ರತಿಪಕ್ಷ, ಆಡಳಿತ ಪಕ್ಷದ ಶಾಸಕರು ಆಗಮಿಸುವ ಹಾಗೂ ಸ್ಪೀಕರ್ ಎದುರಿಗೆ ಇರುವ ಬಾಗಿಲಿಗೆ ಈ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಷ್ಟು ದಿನ ಸದನಕ್ಕೆ ಬರುವ ಮೊದಲು ಶಾಸಕರು ಸಹಿ ಹಾಕಿ ಒಳ ಪ್ರವೇಶಿಸುತ್ತಿದ್ದರು. ಆದರೆ ಇನ್ನುಮುಂದೆ ಕ್ಯಾಮೆರಾ ಮುಂದೆ ‘ಪೋಸ್’ ಕೊಟ್ಟು ಪ್ರವೇಶಿಸಬೇಕಿದೆ. ಈ ರೀತಿ ಕ್ಯಾಮೆರಾದ ಮುಂದೆ ನಿಂತಾಗ ಶಾಸಕರ ಚೆಕ್‌ಇನ್ ಆಗಲಿದ್ದಾರೆ. ಒಂದು ವೇಳೆ ವಾಪಾಸು ಹೋದರೆ, ಅದೇ ಕ್ಯಾಮೆರಾದಲ್ಲಿ ಶಾಸಕರ ಮುಖ ಸೆರೆಹಿಡಿದು, ಸೈನ್‌ಔಟ್ ಆಗಿರುವ ಬಗ್ಗೆ ಮಾಹಿತಿಯನ್ನು ದಾಖಲಿಸಿಕೊಳ್ಳಲಿದೆ. ಇದಿಷ್ಟೇ ಅಲ್ಲದೇ, ಶಾಸಕರೊಬ್ಬರು ದಿನಕ್ಕೆ ಎಷ್ಟು ಗಂಟೆ ಸದನದಲ್ಲಿ ಕಳೆದಿದ್ದಾರೆ ಎನ್ನುವ ಮಾಹಿತಿಯನ್ನು ದಿನದ ಅಂತ್ಯಕ್ಕೆ ವಿಧಾನಸಭಾ ಕಾರ್ಯದರ್ಶಿಗಳಿಗೆ ರಿಪೋರ್ಟ್ ನೀಡಲಿದೆ ಅಂತೆ!

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಜಾರಿಗೊಳಿಸಿರುವ ಈ ಎಐ ಆಧಾರಿತ ಹಾಜರಾತಿಗೆ ಬಹುತೇಕ ಶಾಸಕರು ಒಪ್ಪಿಕೊಂಡಿದ್ದರೂ, ಒಳಗೊಳಗೆ
ಇದ್ಯಾಕೇ ಬೇಕಿತ್ತು ಎಂದು ಮೂಗು ಮುರಿಯುತ್ತಿದ್ದಾರಂತೆ. ಹಾಗೇ ನೋಡಿದರೆ, ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಆಯ್ಕೆಯಾದ ದಿನದಿಂದ, ಶಾಸಕರ ಹಾಜರಾತಿ, ಸದನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ಕ್ರೀಡೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಶಾಸಕರನ್ನು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸರಿಯಾದ ಸಮಯಕ್ಕೆ ಸದನದೊಳಗೆ ಬರುವ ಶಾಸಕರಿಗೆ ‘ಟೀ ಕಪ್’ ಬಹುಮಾನವನ್ನು ಘೋಷಿಸಿ, ಪ್ರತಿ ಅಽವೇಶನದ ಅಂತಿಮ ದಿನ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆದರೆ ಶಾಸಕರು ಸರಿಯಾದ ಸಮಯಕ್ಕೆ ಬಂದರೆ ಬಹುಮಾನ ನೀಡುವ ಪದ್ಧತಿಯನ್ನು ಜಾರಿಗೊಳಿಸಿದ್ದು ಏಕೆ ಎಂದರೆ ಅಚ್ಚರಿಯಾದರೆ ತಪ್ಪಾಗುವುದಿಲ್ಲ.
ಸರಿಯಾದ ಸಮಯಕ್ಕೆ ಕಚೇರಿಗೆ ಬರಬೇಕು, ಸರಿಯಾದ ಸಮಯಕ್ಕೆ ಮಕ್ಕಳು ಶಾಲೆಗೆ ಬರಬೇಕು ಎನ್ನುವುದು ಸರಿ. ಆದರೆ ಸರಿಯಾದ ಸಮಯಕ್ಕೆ ಬಂದರೆ ‘ಬಹುಮಾನ’ ಕೊಡುತ್ತೇವೆ ಎಂದರೆ ಹೇಗಿರುತ್ತದೆ! ಅದೇ ರೀತಿ, ವಿಧಾನಸಭಾ ಕ್ಷೇತ್ರದ ಪ್ರತಿನಿಽಯಾಗಿ, ಲಕ್ಷಾಂತರ ಮತದಾರರ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವ ಶಾಸಕರಿಗೆ ಮಾತ್ರ ‘ಬಹುಮಾನ’ವೇಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಶಾಸಕರಾಗಿ ಆಯ್ಕೆಯಾಗಿರುವ ಶಾಸಕರಿಗೆ ಬಹುದೊಡ್ಡ ಕೆಲಸವೆಂದರೆ, ತನ್ನ ಕ್ಷೇತ್ರದ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದು ಹಾಗೂ ಶಾಸನ ರಚನೆಯಲ್ಲಿ ಭಾಗಿಯಾಗುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಶಾಸಕರು, ಈ ಎರಡು ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ಕಾರಣಕ್ಕಾಗಿಯೇ ಇದೀಗ ಈ ಎಐ ತಂತ್ರಜ್ಞಾನ, ಬಹುಮಾನದ ಆಸೆ ತೋರಿಸಲಾಗುತ್ತಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆ ಬಳಿಕ ಮೊದಲ
ಬಾರಿಗೆ ಅಽವೇಶನ ಕರೆದಾಗ ಪ್ರಮಾಣ ವಚನ ಸ್ವೀಕರಿಸುವ ವೇಳೆ ಹೊರತುಪಡಿಸಿ, ಇನ್ನುಳಿದ ಬಹುತೇಕ ಸಮಯದಲ್ಲಿ ಆಡಳಿತ-ಪ್ರತಿಪಕ್ಷ ಸ್ಥಾನಗಳು ಖಾಲಿ ಖಾಲಿಯಾಗಿರುತ್ತಿತ್ತು. ಮೊದಲ ಕಲಾಪದಲ್ಲಿಯೇ, ‘ಕೋರಂ’ ಇಲ್ಲದೇ ತಾಸುಗಟ್ಟಲೇ ಬೆಲ್ ಹೊಡೆಯಬೇಕಾದ ಅನಿವಾರ್ಯತೆಯಿತ್ತು. ಕೋರಂಗೆ ಬರಲು ಬಹುತೇಕ ಶಾಸಕರು ಆಸಕ್ತಿ ತೋರುತ್ತಿಲ್ಲ ಎನ್ನುವ ಕಾರಣಕ್ಕೆ, ಯು.ಟಿ. ಖಾದರ್ ಅವರು ಸರಿಯಾದ ಸಮಯಕ್ಕೆ ಸದನಕ್ಕೆ ಬರುವ (ಕೋರಂ ಆಗುವ ತನಕ) ಶಾಸಕರಿಗೆ ಟೀ ಕಪ್ ಬಹುಮಾನವಾಗಿ ನೀಡುವುದು ಹಾಗೂ ಸರಿಯಾದ ಸಮಯಕ್ಕೆ ಬಂದ ಶಾಸಕರ ಹೆಸರನ್ನು ಪ್ರಕಟಿಸುವ ನಿಯಮವನ್ನು ಜಾರಿಗೊಳಿಸಿದರು.

ವಿಧಾನಸಭಾಧ್ಯಕ್ಷರ ಈ ‘ಬಹುಮಾನ’ದ ಕಾರಣಕ್ಕಾಗಿ ಕೆಲ ಶಾಸಕರು ಸರಿಯಾದ ಸಮಯಕ್ಕೆ ಬರಲು ಆಗಮಿಸಿದರು. ಕೆಲ ದಿನಗಳ ಬಳಿಕ ಈ ಬಹುಮಾನಕ್ಕೂ ಕ್ಯಾರೇ ಎನ್ನದ ಸ್ಥಿತಿಗೆ ಬಹುತೇಕ ಶಾಸಕರು ತಲುಪಿದ್ದಾರೆ. ಇನ್ನು ಕೆಲವರು ಸರಿಯಾದಕ್ಕೆ ಸಮಯಕ್ಕೆ ಬಂದು, ಮುಖ ತೋರಿಸಿ ಹೊರನಡೆದರೆ ವಾಪಸು ಮತ್ತೆ
ಸದನಕ್ಕೆ ‘ಸರಿಯಾದ’ ಸಮಯಕ್ಕೆ ಬರುವುದು ಮರುದಿನವೇ! ಈ ರೀತಿಯ ಶಾಸಕರ ನಿರಾಸಕ್ತಿಯನ್ನು ಗಮನಿಸಿ, ಬರುವುದಷ್ಟೇ ಅಲ್ಲದೇ ಸದನದಲ್ಲಿ ಸಕ್ರಿಯ ವಾಗಿ ಭಾಗವಹಿಸಬೇಕು ಎನ್ನುವ ಕಾರಣಕ್ಕೆ ನಿರ್ಗಮನದ ಮಾಹಿತಿ ಯನ್ನು ಕಲೆಹಾಕಲು ಇದೀಗ ವಿಧಾನಸಭಾ ಕಾರ್ಯಾಲಯ ಮುಂದಾಗಿದೆ. ಇದಕ್ಕಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿ, ಕಲಾಪಕ್ಕೆ ಹಾಜರಾಗಬೇಕಿರುವ ಶಾಸಕರಿಗೆ ಇಷ್ಟೆಲ್ಲ ಕಟ್ಟಲೇ ಹಾಕಬೇಕೇ? ಸದನದಲ್ಲಿ ಭಾಗವಹಿಸುವುದೇ ಶಾಸಕರೊಬ್ಬರ ಬಹುದೊಡ್ಡ ಕೆಲಸವಾಗಿದ್ದರೂ, ಅದನ್ನು ಮೀರಿದ ‘ಪ್ರಮುಖ’ ಕೆಲಸಗಳೇನು ಎನ್ನುವುದಕ್ಕೆ
ಉತ್ತರವಿಲ್ಲ.

ಈ ರೀತಿ ಕಲಾಪಕ್ಕೆ ‘ಚಕ್ಕರ್’ ಹೊಡೆಯುವ ಶಾಸಕರು, ‘ನಾವು ಕ್ಷೇತ್ರದಲ್ಲಿ ಇರುತ್ತೇವೆ’ ಎನ್ನುವ ಸಮರ್ಥನೆಯನ್ನು ನೀಡುತ್ತಾರೆ. ಆದರೆ ಕಲಾಪದ ಸಮಯದಲ್ಲಿ ರಿಯಾಲಿಟಿ ಚೆಕ್ ಮಾಡಿದರೆ, ಬಹುತೇಕ ಶಾಸಕರು ವಿಧಾನಸಭಾ ಕಲಾಪದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗುತ್ತೇವೆ ಎಂದು ಹೇಳಿಕೊಂಡೇ
ಬೆಂಗಳೂರಿನತ್ತ ಬಂದಿರುತ್ತಾರೆ. ಅಂದರೆ ಕ್ಷೇತ್ರದಲ್ಲಿಯೂ ಇರದೇ, ಬೆಂಗಳೂರಿನಲ್ಲಿ ವಿಧಾನಸಭೆಯಲ್ಲಿ ಭಾಗವಹಿಸದೇ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಯಕ್ಷಪ್ರಶ್ನೆ.

ಕ್ಷೇತ್ರದಿಂದ ವಿಧಾನಸಭೆಗೆ ಆಗಮಿಸುವ ಶಾಸಕರೇನು ಸುಮ್ಮನೆ ಬರುವುದಿಲ್ಲ. ದಿನ ಕಲಾಪದಲ್ಲಿ ಭಾಗಿಯಾದರೆ, ಇಂತಿಷ್ಟು ಸಾವಿರ ರುಪಾಯಿ ದಿನಭತ್ಯೆ ನೀಡಲಾಗುತ್ತದೆ. ಇನ್ನು ಯಾವುದೇ ಶಾಸಕ ರಜೆ ಹಾಕಬೇಕು ಎಂದರೂ ನಿರ್ದಿಷ್ಟ ನಿಯಮಗಳಿವೆ. ಒಂದು ವೇಳೆ ಸ್ಪೀಕರ್ ಗಮನಕ್ಕೆ ತಾರದೇ ಚಕ್ಕರ್ ಹೊಡೆದರೆ, ದಿನಭತ್ಯೆಯನ್ನು ಕಟ್ ಮಾಡಲು ಅವಕಾಶವಿದೆ. ಆದರೆ ಈ ರೀತಿ ವೇತನವನ್ನು ಕಡಿತಗೊಳಿಸಿರುವ ಉದಾಹರಣೆ ಈವರೆಗೆ ಇಲ್ಲ ಎನ್ನುವುದು
ಬೇರೆ ಮಾತು. ವರ್ಷದಲ್ಲಿ ಕಲಾಪ ನಡೆಯುವುದೇ ೪೫ರಿಂದ ೫೦ ದಿನ. ಇದರಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎನ್ನುವಷ್ಟು ‘ಬ್ಯೂಸಿ’ಯಾಗಿದ್ದರೆ, ಶಾಸಕರಾಗ ಬೇಕು ಎಂದು ಬಯಸುವುದಾದರೂ ಏಕೆ? ಇದೆಲ್ಲ ಬಿಡಿ, ಶಾಸಕಾಂಗ ವ್ಯವಸ್ಥೆ ಇರುವುದೇ ಚರ್ಚೆ ನಡೆಸುವ ಉದ್ದೇಶದಿಂದ.

ಯಾವುದೇ ವಿಧೇಯಕಗಳು ಪಾಸಾಗಬೇಕೆಂದರೂ, ಆ ವಿಧೇಯಕಗಳ ಬಗ್ಗೆ ಪರವಿರೋಧ ಚರ್ಚೆಗಳು ನಡೆದು, ಸಾಧಕ-ಬಾಧಕದ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಬಿಲ್‌ಗಳ ಮೇಲಿನ ಚರ್ಚೆಗಳಿಗೆ ಅತಿಹೆಚ್ಚು ಸಮಯ ನೀಡಬೇಕು ಎನ್ನುವುದು ಕಲಾಪದಲ್ಲಿರುವ ಅಲಿಖಿತ ನಿಯಮ. ಆದರೆ
ಇತ್ತೀಚಿನ ದಿನಗಳಲ್ಲಿ ಬಿಲ್ ಮೇಲಿನ ಚರ್ಚೆಗೆ ಅವಕಾಶ ನೀಡುವುದಕ್ಕೆ ಸ್ಪೀಕರ್ ತಯಾರಿದ್ದರೂ, ಶಾಸಕರು ತಯಾರಿರುವುದಿಲ್ಲ. ಅನೇಕ ಬಿಲ್‌ಗಳು ಪಾಸಾಗು ವಾಗ ಕನಿಷ್ಠ ‘ಕೋರಂ’ ಇಲ್ಲದೇ ಪಾಸಾಗುತ್ತಿವೆ. ಆಡಳಿತ ಪಕ್ಷದಲ್ಲಿ ‘ಹೌದೂ’ ಎನ್ನುವುದಕ್ಕೂ ಜನರಿಲ್ಲದ ಸ್ಥಿತಿಯನ್ನು ಕೆಳದ ಕೆಲ ವರ್ಷಗಳಲ್ಲಿ ನೋಡಿದ್ದೇವೆ.

ಶಾಸಕರ ಕೊರತೆಯೇನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶುರುವಾಗಿರುವುದಿಲ್ಲ. ಕಳೆದೊಂದು ದಶಕದಿಂದ ನಡೆದಿರುವ ಕಲಾಪವನ್ನು ಗಮನಿಸಿ ದರೆ, ಈ ಸಮಸ್ಯೆ ಯಾವ ಮಟ್ಟಿಗೆ ತಳವೂರಿದೆ ಎನ್ನುವುದು ತಿಳಿಯುತ್ತದೆ. ಅನೇಕ ಶಾಸಕರು ಎರಡು ವಾರ ನಡೆಯುವ ಅಧಿವೇಶನದಲ್ಲಿ ಒಂದು ದಿನ ತಲೆಹಾಕಿ ಹೊರನಡೆದರೆ,ಬರುವುದು ಮುಂದಿನ ಅಧಿವೇಶನಕ್ಕೆ. ಕೇವಲ ಶಾಸಕರಷ್ಟೇ ಅಲ್ಲ, ಕೆಲವೊಂದಷ್ಟು ಸಚಿವರಿಗೂ ಈ ಛಾಳಿಯಿದೆ. ಈ ತತಿ ಸದನಕ್ಕೆ ಚಕ್ಕರ್ ಹಾಕುವ ಶಾಸಕರಿಗೆ ಪಕ್ಷದ ಭೇದವಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷದಲ್ಲಿಯೂ ಈ ವಿಷಯದಲ್ಲಿ ಸಮಾನಮನಸ್ಕರಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಅಷ್ಟಕ್ಕೂ ಶಾಸಕರು ಈ ರೀತಿ ಉದಾಸೀನತೆ ತೋರುತ್ತಿರುವುದು ಕಾರಣವೇನೆಂದು ತಿಳಿದುಕೊಳ್ಳುವ ಪ್ರಯತ್ನವನ್ನು ಯಾವ ಪಕ್ಷದ ನಾಯಕರೂ ಮಾಡುತ್ತಿಲ್ಲ.
ಅಧಿವೇಶನಗಳು ಆರಂಭವಾಗುತ್ತಿದ್ದಂತೆ, ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ನಾಯಕರು, ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕು ಎನ್ನುತ್ತಾರೆ ಹೊರತು, ಬಾರದಿದ್ದರೆ ಏನು ಎನ್ನುವ ಬಗ್ಗೆ ಮಾತಾಡುವುದಿಲ್ಲ. ಇನ್ನು ಜನಬಲಕ್ಕಿಂತ ಹೆಚ್ಚಾಗಿ ಹಣ ಬಲದ ಮೇಲೆ ಅಧಿಕಾರಕ್ಕೆ ಬರುವವರಿಗೆ, ಈ ಶಾಸಕ ಸ್ಥಾನ ಎನ್ನುವುದು ‘ಶೀಲ್ಡ್’ ರೀತಿ ಇರುತ್ತದೆ ಹೊರತು, ಜನ ಸೇವೆಯ ತುಡಿತವಿರುವುದಿಲ್ಲ.

‘ವಿಧಾನಸಭೆಗೆ ಬಂದರೆ ಎಲ್ಲ ಸಚಿವರು ಒಟ್ಟಿಗೆ ಸಿಗುತ್ತಾರೆ. ಯಾವೆಲ್ಲ ಕೆಲಸಗಳಿಗೆ ಸಹಿ ಹಾಕಿಸಿಕೊಳ್ಳುವುದು ಬಾಕಿಯಿದೆಯೋ ಆ ಎಲ್ಲ ಕೆಲಸಗಳನ್ನು ಮಾಡಿಕೊಂಡು ಹೋದರಾಯಿತು’ ಎನ್ನುವ ಮನಸ್ಥಿತಿಯಲ್ಲಿ ಅನೇಕರಿದ್ದಾರೆ. ಶಾಸನಗಳನ್ನು ರಚಿಸುವುದೇ ಶಾಸಕಾಂಗ ಪ್ರಮುಖ ಆಶಯವಾಗಿದ್ದರೂ ಬಹುತೇಕ ಶಾಸಕರು ಈ ಕೆಲಸವನ್ನು ಹೊರತುಪಡಿಸಿ, ಇನ್ನುಳಿದ ಕಾರ್ಯದಲ್ಲಿಯೇ ತಲೆಕೆಡಿಸಿಕೊಂಡಿರುತ್ತಾರೆ. ವಿಧಾನಸಭಾ ಕಲಾಪಗಳು ನಡೆಯುವಾಗ ಶಾಸಕರು ಸಕ್ರಿಯವಾಗಿ ಭಾಗವಹಿಸಲಿ ಎನ್ನುವ ಕಾರಣಕ್ಕೆ ವಿಧಾನಸಭಾಧ್ಯಕ್ಷರು ಹೊಸ ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದ್ದು, ಇನ್ನಾದರೂ ಶಾಸಕರು ಸರಿಯಾದ ರೀತಿಯಲ್ಲಿ ಸದನದಲ್ಲಿ ಭಾಗವಹಿಸಲಿ.

ವಿಧೇಯಕಗಳ ಚರ್ಚೆಯಲ್ಲಿ ಭಾಗವಹಿಸಲಿ. ಈ ಎಲ್ಲ ಕ್ರಮದ ಹೊರತಾಗಿಯೂ ಶಾಸಕರು ಭಾಗವಹಿಸುವುದಿಲ್ಲ ಎನ್ನುವ ಹಠಕ್ಕೆ ಬಿದ್ದಂತೆ ಓಡಾಡಿಕೊಂಡಿದ್ದರೂ, ಮುಂದಿನ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಜನರೇ ಏನು ಮಾಡಬೇಕೆಂಬ ತೀರ್ಮಾನ ಮಾಡುವುದು ಅನಿವಾರ್ಯ.